ಲೇಖನ
ನಿತ್ಯ ಸಾವುಗಳ ಸಂತೆಯಲಿ ನಿಂತು
ಬದುಕ ಪ್ರೀತಿ ಧೇನಿಸುತ್ತಾ...
ಮಲ್ಲಿಕಾರ್ಜುನ ಕಡಕೋಳ
ಕೊರೊನಾ ಎಂಬ ಸಾವುಗಳ ಶಕೆ ಆರಂಭವಾಗಿ ಆರೇಳು ತಿಂಗಳುಗಳೇ ಕಳೆಯುತ್ತಿವೆ. ತೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದರೆ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ಜತೆಯಲಿ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರ ಸಾಲು ಸಾಲು ಸಾವುಗಳು. ಸಾಹಿತಿ, ಕಲಾವಿದರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ.
ನಾಳೆ ಯಾರ ಸರದಿಯೋ..? ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ ನಡುಕ ಹುಟ್ಟಿಸುವ ದುಗುಡ, ದುಮ್ಮಾನ ಬಹುತೇಕ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಅರೇ! ಇದೇನಿದು ಸಂಸ್ಕೃತಿ ಚಿಂತಕರು ಈ ಪರಿಯಾಗಿ ಸಾವಿಗಂಜುವುದೇ!? ಅಂತ ಅನಿಸಬಹುದು. ಹಾಗೆ ಅಂಜಿ ಅಡಗಿ ಕುಳಿತರೇನು ಸಾವು ದೂರ ಸರಿಯುವುದುಂಟೇ ? ಇಲ್ಲವೇ ಇಲ್ಲ ಅದು ಯಾರನ್ನೂ ಬಿಡುವುದಿಲ್ಲ. ಸಾವು ಬಂದರೇನು ಸಿಟ್ಟಿಲ್ಲ. ಅದು ಮಹಾ ಮಹಾಂತರನೇ ಬಿಟ್ಟಿಲ್ಲ ಎಂಬ ತತ್ವಪದ ನೆರವಿಗಿದ್ದರೂ ಸಾವು ಬೇಕಾದರೆ ಬರಲಿ. ಆದರೆ ಕೊರೊನಾ ಬಾರದಿರಲಿ. ಸೋಜಿಗವೆಂದರೆ ದುಗುಡ ತುಂಬಿದ ಈ ದುರಿತ ಕಾಲದಲ್ಲೇ ಬಹಳಷ್ಟು ಬರಹಗಳು, ಚಿಂತನೆಗಳು, ಆನ್ ಲೈನ್ ಎಂಬ ಮಹಾಬಯಲು ಆಲಯದಲ್ಲಿ ಬೆಳಕು ಕಾಣುತ್ತಿವೆ.
ಒಂದು ಮಾತು ಮಾತ್ರ ಖರೇ, ಅದೇನೆಂದರೆ : ಸಾವಿಗಂಜದವರೂ ಪ್ರಾಣಹಂತಕ ಕೊರೊನಾ ವೈರಾಣುವಿಗೆ ಹೆದರಿದ್ದಾರೆ. ಹೀಗೆ ಕೊರೊನಾಕ್ಕೆ ಹೆದರಿ, ಹೆದರಿ ಖಿನ್ನತೆಯ ದರಪ್ರಮಾಣ ಯದ್ವಾತದ್ವಾ ಏರಿಕೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಶೇಕಡಾ ಎಪ್ಪತ್ತಕ್ಕೂ ಹೆಚ್ಚುಮಂದಿ ಮಧ್ಯಮ ವರ್ಗದವರು ಕೊರೊನಾ ಭೀತಿರೋಗದ ಖಿನ್ನತೆಯಿಂದ ನರಳುತ್ತಿದ್ದಾರೆ. ಮನುಷ್ಯರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ನೆನಪಿಗೆ ಬರುವುದೇ ಕೊವಿಡ್. ಅವರಿಗೆ ಬಂದುದು ಕೊವಿಡ್ಅಲ್ಲರಿ, ಅದು ಹಾರ್ಟ್ ಅಟ್ಯಾಕ್ ಅಂತ ಹೇಳಿದರೂ ನಂಬುಗೆಯೇ ಬರುವುದಿಲ್ಲ. ಕೊವಿಡ್ ಎಂಬ ಕಳಂಕದ ಅಪರಾಧಪ್ರಜ್ಞೆ ಭಲೇ ಭಲೇ ವಿದ್ಯಾವಂತರನ್ನೇ ಕಾಡುತ್ತಿದೆ.
ಪತ್ರಿಕೆ, ಮೊಬೈಲುಗಳ ತುಂಬೆಲ್ಲಾ ದಿನನಿತ್ಯವೂ ಸಾವಿನ ಸುದ್ದಿಗಳದೇ ಸುಗ್ಗಿ. ವಾಟ್ಸ್ಯಾಪ್, ಮುಖಹೊತ್ತಿಗೆಗಳನ್ನು ಓಪನ್ ಮಾಡಲು ಧೈರ್ಯಬಾರದು. ಅಬ್ಬಾ! ಇವತ್ತು ಯಾರು ನಮ್ಮನ್ನು ಅಗಲಿದ್ದಾರೆಂಬ ಭಯಾನಕ ಹೆದರಿಕೆ. ತೀರಿಹೋದ ಸಾಹಿತಿ, ಕಲಾವಿದರ ಕೃತಿಗಳು ಅವರ ಬದುಕಿನ ಸಾಂಸ್ಕೃತಿಕ ಒಡನಾಟಗಳು, ಅವರ ಸಕ್ರಿಯ ಚಟುವಟಿಕೆಗಳು ನನ್ನಂಥ ಅನೇಕರನ್ನು ಆರ್ದ್ರವಾಗಿ ಕಾಡುವುದು ಸಹಜ. ಅದೆಲ್ಲ ಭಾವನಾತ್ಮಕ ನಡವಳಿಕೆ, ಪುಕ್ಕಲು ಮನಸ್ಥಿತಿ ಎಂದು ಹಗುರವಾಗಿ ಪರಿಗಣಿಸಲು ಬಾರದು, ಅದು ತರವಲ್ಲ.
ಹೀಗೆ ಕಾಡುತ್ತಲೇ ಇರುವ ಕಾಡಾಟದ ಹಿಂದೆ ದೈಹಿಕ ಸಾವಿಗೆ ಕಾರಣವಾದ ಪೈಶಾಚಿಕ ಗಾತ್ರದ ಪ್ಯಾಂಡಮಿಕ್ ಹುಡುಕಾಟ. ಈ ಜಿಜ್ಞಾಸೆ ಅತಿರೇಕಗೊಂಡು ದುಃಸ್ವಪ್ನದಂತೆ ನಮಗೆ ನಾವೇ ಕಂಡುಕೊಳ್ಳುವ ಎಲ್ಲ ಸಾವುಗಳ ಹಿಂದಿನ ಕಾರಣ ಕೊರೊನಾ. ಅದೀಗ ಜಾಗತಿಕ ಮಟ್ಟದಲ್ಲಿ ಮೃತ್ಯುವಿನ ಪೆಡಂಭೂತವಾಗಿದೆ. ಹೌದು ಸಾವಿಗೆ ಪರ್ಯಾಯ ಪದವೇ ಮತ್ತೆ ಮತ್ತೆ ಕೊರೊನಾ.. ಕೊರೊನಾ.. ಮಾತ್ರ ಎನ್ನುವಂತಾಗಿದೆ.
ಹೀಗೆ ಎಲ್ಲ ಸಾವುಗಳ ಹಿಂದೆ ಕೊರೊನಾ ಡೊಕ್ಕು ಹೊಡೆದಿರುತ್ತದೆಂಬ ಅಚಲ ನಂಬಿಕೆಯು ಸಾರ್ವತ್ರಿಕವಾಗತೊಡಗಿದೆ. ಅಕ್ಷರಶಃ ಅಕ್ಷರಸ್ಥ ಮತ್ತು ವಿದ್ಯುನ್ಮಾನ ಲೋಕದ ಒಡನಾಟವಿರುವ ಎಲ್ಲರ ಗಾಢ ನಂಬುಗೆಯೆಂದರೆ ನಿಸ್ಸಂದೇಹವೆಂಬಂತೆ ಜಗತ್ ಪ್ರಸಿದ್ದ ಜಡ್ಡು ಎಂಬ ಖ್ಯಾತಿ ಗಳಿಸಿರುವ ಕೊರೊನವೇ ಸಾವಿನ ಮೂಲ. ಅದೀಗ ಹಳ್ಳಿ ಹಳ್ಳಿಗಳಲ್ಲಿಯೂ ರುದ್ರನರ್ತನ ಶುರುಮಾಡಿದೆ. ಕೊರೊನಾ ವೈರಾಣುಗಿಂತ ಅದರ ಸುತ್ತ ಹೆಣೆದು ಸ್ಥಾಯೀಗೊಳಿಸಿದ ಥರಾವರಿ ಹುನ್ನಾರದ ಕಥಾಕಥಿತ ಭಯಾನಕ ವಿದ್ಯಮಾನಗಳೇ ಮರಣವನ್ನು ತರುತ್ತಿವೆ. ಇಂತಹ ಸಾವುಗಳ ಶವಸಂಸ್ಕಾರ ಮತ್ತೊಂದು ಘನಘೋರ ಎಪಿಸೋಡ್. ಕ್ರೂರಿ ಕೊರೊನಾದ ಈ ಕಾಲಘಟ್ಟದಲ್ಲಿ ವಯೋಸಹಜ ಸಾವಿಗೂ ಸಿಗಬೇಕಾದ ಗೌರವ ಖಂಡಿತಾ ಸಿಗುತ್ತಿಲ್ಲ.
ಎಲ್ಲಾ ಸಾವುಗಳನ್ನು ಕೊರೊನಾ ಕನ್ನಡಕದ ಮೂಲಕ ನೋಡುವಂತಾಗಿದೆ. ಮುಂಬಯಿನಂತಹ ಮಹಾನಗರಗಳಲ್ಲಿ ಕೊರೊನಾ ಪೀಡಿತರ ಸಾವುಗಳ ಕುಟುಂಬದವರೇ ಶವವನ್ನು ಪಡೆಯದೇ ಅನಾಥ ಶವಗಳಂತೆ ಮಹಾನಗರ ಪಾಲಿಕೆಗೆ ಶವ ಒಪ್ಪಿಸಿಬಿಡುವ ಅಮಾನವೀಯ ಸ್ಥಿತಿ ನಿರ್ಮಾಣಗೊಂಡಿದೆ. ನಮ್ಮಲ್ಲಿಯೂ ಪರಿಸ್ಥಿತಿ ಅಷ್ಟೇನು ಭಿನ್ನವಾಗಿಲ್ಲ. ಮಹಾನಗರ ಪಾಲಿಕೆಗಳು ನೆರವೇರಿಸುವ ಕೊವಿಡ್ ಶವಸಂಸ್ಕಾರ ಹೇಗಿರುತ್ತದೆಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಸಲಿಗೆ ಅಲ್ಲಿ ಶವಸಂಸ್ಕಾರದ ತರಬೇತಿ ಪಡೆದ ಸಿಬ್ಬಂದಿ ಇರುವುದಿಲ್ಲ. ಮನುಷ್ಯರಿಗೆ ಬದುಕಿದ್ದಾಗಲೂ ಗೌರವ ಸಿಗದ ಸನ್ನಿವೇಶದ ಈ ಕಾಲದಲ್ಲಿ ಸತ್ತಾಗಲಾದರೂ ಕಿಂಚಿತ್ ಗೌರವ ಬೇಡವೇ.?
ಬಳ್ಳಾರಿ, ಚನ್ನಗಿರಿ, ಯಾದಗಿರಿ ಘಟನೆಗಳು ನಮ್ಮೆದುರಿಗಿವೆ . ಬಳ್ಳಾರಿಯಲ್ಲಂತೂ ಒಂಬತ್ತು ಹೆಣಗಳನ್ನು ಸತ್ತ ನಾಯಿ, ಹಂದಿಗಳನ್ನು ಎಳಕೊಂಡು ಬರುವಂತೆ ದರದರನೆ ಎಳಕೊಂಡು ಬಂದು ಎಲ್ಲಾ ಒಂಬತ್ತು ಹೆಣಗಳನ್ನು ಒಂದೇ ಗುಣಿಯಲ್ಲಿ ಎಸೆದು ಬಿಡುವ ದೃಶ್ಯಗಳನ್ನು ನೋಡುತ್ತಿದ್ದರೆ ಕೊರೊನಾ ಎಂತಹ ರಣಭೀಕರ ಭಯ ಹುಟ್ಟಿಸಿದೆಯೆಂಬುದು ತಿಳಿಯುತ್ತದೆ. ಖುದ್ದು ಮಗನೇ ತಂದೆ ತಾಯಿ ಹೆಣದ ಮುಖ ನೋಡಲು ಸಿದ್ದನಿಲ್ಲ. ಇನ್ನು ಒಡಹುಟ್ಟಿದವರು ತಮ್ಮ ತಮ್ಮ ಮನೆಯವರ ಕೊವಿಡ್ ಹೆಣಗಳನ್ನು ಖುದ್ದು ಶವಸಂಸ್ಕಾರಕ್ಕೆ ಸಿದ್ಧರಿಲ್ಲ. ಹೀಗೆ ಮನುಷ್ಯ ಸಂಬಂಧ, ಪ್ರೀತಿ, ಅಂತಃಕರಣಗಳು ನಿರ್ನಾಮಗೊಳ್ಳುತ್ತಿವೆ. ಒಟ್ಟು ಮಾನವ ಸಮಾಜ ಮಾನವೀಯತೆ ಕಳೆದುಕೊಳ್ಳುವ ಹೆದ್ದಾರಿಯಲ್ಲಿದೆ.
ಇದೆಲ್ಲ ಗಮನಿಸುತ್ತಿದ್ದರೆ ಕೊವಿಡ್ ಸಂವೇದನಾಶೀಲ ಜೀವಸಂಬಂಧಗಳನ್ನೇ ಛಿದ್ರ ವಿಛಿದ್ರಗೊಳಿಸಿದ್ದು ಖರೇ. ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳನ್ನೇ ಕೊಂದು ಹಾಕಿದೆ. ತಿಂಗಳುಗಟ್ಟಲೇ ವಿದ್ಯುನ್ಮಾನ ಮಾಧ್ಯಮಗಳು ಕೊರೊನಾ ಕುರಿತು ರಣಭಯಂಕರ ಭಯ ಹುಟ್ಟಿಸಿ ಇದೀಗ ತಾರಾಲೋಕದ ನಶಾ ಜಗತ್ತಿನತ್ತ ಚಿತ್ತ ಹರಿಸಿವೆ. ಕೊವಿಡ್ ಕುರಿತು ಅವು ಒಂದು ವರ್ಷಕ್ಕಾಗುವಷ್ಟು ಭಯೋತ್ಪಾದನೆಯ ಎಲ್ಲ ಬಗೆಯ ವೈರಾಣುವಿಗಿಂತ ಭೀಕರವಾದ ಸರಕು, ಶಸ್ತ್ರಾಸ್ತ್ರಗಳನ್ನು ಸಿದ್ಧಗೊಳಿಸಿಯಾಗಿದೆ.
ಕೊವಿಡ್ ಕೇಂದ್ರಗಳು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಬೇಕಿರುವುದು ಆಪ್ತಸಮಾಲೋಚನೆಯ ಘಟಕ. ಅಲ್ಲಿ ಪರಿಣಿತ ಸಿಬ್ಬಂದಿಗಳಿರಬೇಕು. ಎಷ್ಟೋಮಂದಿ ಭಯಭೀತರಾಗಿ ಕೊರೊನಾ ಶಂಕೆಯಿಂದಾಗಿ ಆತ್ಮಹತ್ಯೆಯ ಮೊರೆ ಹೋಗಿರುವುದುಂಟು. ಇಂಥವರಿಗೆ ಸಕಾಲದಲ್ಲಿ ಆಪ್ತಸಮಾಲೋಚಕರಿಂದ ಸೂಕ್ತ ಕೌನ್ಸೆಲಿಂಗ್ ದೊರಕಿದ್ದರೆ ಬದುಕುಳಿಯುವ ಸಾಧ್ಯತೆಗಳಿದ್ದವು. ಕೊರೊನಾಕ್ಕೆ ಚಿಕಿತ್ಸೆಯೇ ಇಲ್ಲವೆಂದಾದಲ್ಲಿ ಹೆಚ್ಚುಪಾಲು ಆಪ್ತ ಸಮಾಲೋಚನೆಯೇ ಸರಿಯಾದ ಮದ್ದು. ಬಹಳಷ್ಟು ಜನ ಕೊರೊನಾ ಕುರಿತು ಪ್ಯಾನಿಕ್ ಆಗಿಯೇ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾರೆ. ಅಂಥವರೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಆಪ್ತ ಸಮಾಲೋಚನೆಗೆ ಅಧಿಕ ಆದ್ಯತೆ ನೀಡಬೇಕಿದೆ.
ಮಾಸ್ಕ್ ಬಿಸಾಕಿ ನಿರ್ಭಯವಾಗಿ ಜನರ ನಡುವೆ ಓಡಾಡುವ, ಮೊದಲಿನಂತೆ ಸಮುದಾಯದಲ್ಲಿ ನಿರ್ಭೀತಿಯಿಂದ ಬೆರೆತು ಬಾಳುವ ಸಹಭಾಗಿತ್ವದ ವಾತಾವರಣ ಇನ್ನುಮುಂದೆ ಇಲ್ಲವೇ? ಕೊವಿಡ್ ಹತ್ತೊಂಬತ್ತರ ದುರಿತಕಾಲ ಕೊನೆಗೊಂಡು ಮತ್ತೆ ಮರಳಿ ಹಿಂದಿನ ಆ ದಿನಗಳನ್ನು ಕಾಣಬಲ್ಲೆವೇ ? ಕಾಣುವುದಾದರೆ ಯಾವಾಗ ಯಾವ ತಿಂಗಳ ಯಾವ ದಿನಗಳಿಂದ ? ಮಣಭಾರದ ಈ ಪ್ರಶ್ನೆಗಳಿಗೆ ಸರಕಾರದ ಬಳಿ, ವಿಜ್ಞಾನಿಗಳ ಬಳಿ, ವೈದ್ಯರ ಬಳಿ, ಹೋಗಲಿ ದೇವರಿದ್ದರೆ ದೇವರ ಬಳಿ ಹೀಗೆ ಯಾರ ಬಳಿಯಲ್ಲಾದರು ಉತ್ತರಗಳಿದ್ದರೆ ಸಾರ್ವಜನಿಕವಾಗಿ ತಿಳಿಸಿ ಪುಣ್ಯ ಕಟ್ಟಿಕೊಳ್ಳಲಿ.
*********************************************
ಕಣ್ತೆರೆಸುವಂಥ ವಾಸ್ತವಿಕ ಲೇಖನ