ಕವಿತೆ
ಹಳೆಯ ಮನೆ
ಮೇಗರವಳ್ಳಿ ರಮೇಶ್
ಅದೊ೦ದು ವೈಭವದ ಹಳೆಯಕಾಲದ
ಹೆ೦ಚಿನ ಮಹಡಿ ಮನೆ.
ನಿತ್ಯ ದೇವರ ಪೂಜೆ, ಹಬ್ಬ ಹರಿದಿನ
ಗ೦ಟೆ ಜಾಗಟೆ ಶ೦ಖ.
ಮದುವೆ ಮು೦ಜಿ ನಾಮಕರಣ ಹುಟ್ಟಿದ ಹಬ್ಬ
ಕಿವಿ ತು೦ಬುವ ನಾದಸ್ವರ.
ನೀರೆಯರ ಸ೦ಭ್ರಮದ ಸೀರೆಯ ಸರಬರ
ಬಳೆಗಳ ಘಲ ಘಲ.
ತೂಗುವ ತೊಟಿಲುಗಳ
ಕ೦ದಮ್ಮಗಳ ಕಿಲ ಕಿಲ
ಮನೆ ಮನಗಳ ತು೦ಬಿ ಹರಿವ
ಜೋಗುಳದ ಮಾಧುರ್ಯ.
ಗ೦ಡಸರ ಗತ್ತು, ಗೈರತ್ತು
ಜಗಲಿಯ ಮೇಲೆ ಊರ ಪ್ರಮುಖರೊಡನೆ
ಹಿರಿಯರ ಒಡ್ಡೋಲಗ.
ಮಹಡಿಯ ಹಜಾರದಲ್ಲಿ ಇಸ್ಪೀಟು , ಸಿಗರೇಟು ಬೀಡಿ
ಅಡಿಕೆ ಚಪ್ಪರ
ಕೊಟ್ಟಿಗೆಯ ತು೦ಬ ದನ ಕರ.
ಹಜಾರದಲ್ಲಿ ಪೇರಿಸಿಟ್ಟ ಅಡಿಕೆ ಮೂಟೆ
ಪಣತ ತು೦ಬಿದ ಭತ್ತ
ಉಪ್ಪಿನ ಕಾಯಿ ಜಾಡಿ, ಜೋನಿ ಬೆಲ್ಲದ ಮಡಕೆ.
ಅದೊ೦ದು ವೈಭವದ ಹಳೆಯ ಕಾಲದ
ಹೆ೦ಚಿನ ಮಹಡಿ ಮನೆ.
*
ಮುಚ್ಚಿದ ಬಾಗಿಲಿಗೆ ಬಿದ್ದ ಬೀಗಕ್ಕೀಗ ತುಕ್ಕು
ಅ೦ಗಳದ ತು೦ಬ ಗಿಡ ಗ೦ಟೆ ಲ೦ಟಾನ ಪಾರ್ಥೇನಿಯ೦
ಜಗಲಿಯಲ್ಲಿ ಬಿಡಾಡಿ ದನ ಕರು ಎಮ್ಮೆ ಗಳ
ಸಗಣಿ ಗ೦ಜಲಗಳ ದುರ್ನಾತ
ಶ್ವಾನಗಳ ರೆಸ್ಟ್ ಹೌಸು.
ಹೆ೦ಚಿನ ಮೇಲೆ ಬೆಳೆದ ಪಾಚಿ, ಹುಲ್ಲು
ಕಳಚಿ ಬೀಳುತ್ತಿರುವ ಜ೦ತಿ.
ಬಣ್ಣ ಮಾಸಿ ಹಕ್ಕಳಿಕೆ ಎದ್ದ
ಗೋಡೆಗಳ ತು೦ಬ ಗಾಯ
ಸುಳಿವ ಗಾಳಿಯಲ್ಲಿ ನಿಟ್ಟುಸಿರಿನ ಸುಯ್ಲು.
ಮುಚ್ಚಿದ ಬಾಗಿಲೊಳಗಿನ ಗವ್ವುಗತ್ತಲಲ್ಲಿ
ಚೆಲ್ಲಾ ಪಿಲ್ಲಿ ಬಿದ್ದಿರುವ
ಆ ಹಳೆಯ ಮನೆಯ ಹಳೆಯ ಮ೦ದಿ
ಉಳಿಸಿ ಹೋಗಿರುವ ಕನಸುಗಳು.
************************