ಭಾಷೆ

ಮರಳಿ ಮರಳಿ ಬರಲಿದೆ  ರಾಜ್ಯೋತ್ಸವ……

ಗಣೇಶ  ಭಟ್ಟ ಶಿರಸಿ

ಪ್ರತಿ ವರ್ಷವೂ ನವೆಂಬರ್  ಮೊದಲನೇ ತಾರೀಕಿಗೆ  ಕನ್ನಡಿಗರಿಗೆ  ಸಂಭ್ರಮ. ಕನ್ನಡ ಭಾಷಿಕ  ಪ್ರದೇಶಗಳೆಲ್ಲವೂ ಸೇರಿ ಒಂದೇ ರಾಜ್ಯವಾದ  ದಿನ- ಕನ್ನಡದ ಹಬ್ಬವನ್ನು  ಅದ್ಧೂರಿಯಾಗಿ  ಆಚರಿಸುವ  ಹೊಸ ಹೊಸ  ವಿಧಾನಗಳನ್ನು  ಕನ್ನಡ  ಪ್ರೇಮಿಗಳು ಆವಿಷ್ಕರಿಸುತ್ತಿದ್ದಾರೆ.  ಕಿಲೋ ಮೀಟರ್‌ಗಳಷ್ಟು  ಉದ್ದದ ಕನ್ನಡ ಧ್ವಜದ ಮೆರವಣಿಗೆ , ಕನ್ನಡ ಪರ ಹಾಡುಗಳ  ಹಿನ್ನೆಲೆಯಲ್ಲಿ  ಕುಣಿತ, ಸ್ತಬ್ಧ ಚಿತ್ರಗಳ ಮೆರವಣಿಗೆ  ಇತ್ಯಾದಿ ಇತ್ಯಾದಿ…  ಆದರೆ  ಕನ್ನಡಿಗರ ಪಾಡು ಅಮಾಯಕತೆ, ಬಡತನ, ಶೋಷಣೆ,   ನಿರುದ್ಯೋಗಗಳ ಅದೇ ಹಳೇ ಹಾಡು. ಕನ್ನಡವನ್ನು ಉಳಿಸಿ, ಬೆಳೆಸುವ  ಕುರಿತು  ಚಿಂತನಾ ಗೋಷ್ಠಿಗಳು,  ಚರ್ಚೆಗಳು ನಡೆದು ಅಬ್ಬರದ ಹೇಳಿಕೆಗಳು ಬಿಡುಗಡೆಯಾಗುತ್ತವೆ.  ತಾವು  ಕನ್ನಡ ಭಾಷೆಗೆ ಉಪಕಾರ ಮಾಡುತ್ತಿದ್ದೇವೆಂಬ ಮನೋಭಾವ ಹೊಂದಿದವರು ತಮ್ಮಿಂದಲೇ ಕನ್ನಡದ ಉಳಿವು, ಉದ್ದಾರವೆಂದು  ತೋರಿಸಿಕೊಳ್ಳುತ್ತಾರೆ.
   ಆದರೆ ನಮ್ಮಿಂದ  ಕನ್ನಡವಲ್ಲ, ಕನ್ನಡದಿಂದ  ನಮ್ಮ  ಅಸ್ಮಿತೆ,  ಅಸ್ತಿತ್ವ, ಉಳಿವು ಎಂಬ ಸತ್ಯದ  ಅರಿವು ಹಲವರಿಗೆ  ಇಲ್ಲವಾಗಿದೆ.  ನಾವು ಫಲಕಗಳಲ್ಲಿ  ಕನ್ನಡವನ್ನು  ಬಳಸಲಿ ಅಥವಾ ಬಳಸದೇ ಇರಲಿ, ಸರ್ಕಾರಿ ಕಛೇರಿಗಳಲ್ಲಿ  ಕನ್ನಡದ ಬಳಕೆ ಆಗಲಿ ಅಥವಾ ಆಗದೇ ಇರಲಿ ; ಕನ್ನಡ   ಮಾಧ್ಯಮದ  ಶಿಕ್ಷಣ  ಇರಲಿ ಅಥವಾ ಇಲ್ಲದಿರಲಿ; ಏನೇ ಆದರೂ  ಕನ್ನಡ ಉಳಿದೇ  ಉಳಿಯುತ್ತದೆ. ಬಳಕೆಯ ಭಾಷೆಯಾಗಿರುವ  ಬದಲಿಗೆ  ಗ್ರಂಥಸ್ಥ ಭಾಷೆಯಾಗಿ  ಉಳಿದೇ ಉಳಿಯುತ್ತದೆ. ಕನ್ನಡದ  ಬಳಕೆ ನಿಂತು ಹೋದರೆ  ಇಡೀ ಕನ್ನಡ  ಸಮುದಾಯ ತನ್ನ ಅಸ್ತಿತ್ವ ಕಳೆದುಕೊಂಡು ಗುಲಾಮಗಿರಿಗೆ  ತಳ್ಳಲ್ಪಡುತ್ತದೆ ಮತ್ತು ನಿರಂತರ ಶೋಷಣೆಗೆ  ತುತ್ತಾಗುತ್ತದೆ ಎಂಬ  ವಾಸ್ತವದ  ಅರಿವಾದಾಗ ಮಾತ್ರ ಕನ್ನಡ  ರಾಜ್ಯೋತ್ಸವಕ್ಕೆ  ಅರ್ಥ ಬರುತ್ತದೆ.
   ಭೌಗೋಳಿಕ  ವೈಶಿಷ್ಟ್ಯಗಳು, ಪರಿಸರ-ಪ್ರಾಕೃತಿಕ ವೈವಿದ್ಯತೆಗಳಿಂದಾಗಿ ಮಾನವರ ರೂಪ,ಆಕಾರÀಗಳು ಭಿನ್ನವಾಗಿ ರೂಪುಗೊಂಡಿತು. ಅದೇ ವಿಧದಲ್ಲಿ  ಭಾಷೆಗಳೂ ಭೌಗೋಳಿಕವಾಗಿ ವಿಕಾಸಗೊಂಡವು.  ಇದರಿಂದಾಗಿ ಜಗತ್ತಿನಲ್ಲಿ  ವಿವಿಧ ಭಾಷೆಗಳು ಅಸ್ತಿತ್ವಕ್ಕೆ ಬಂದವು. ಇವುಗಳಲ್ಲಿ  ಯಾವುದೂ ಮೇಲಲ್ಲ ಅಥವಾ ಕೀಳಲ್ಲ.  ಆದರೆ ಆ ಭಾಷಿಕ  ಸಮುದಾಯದ  ಆಂತರಿಕ ಭಾವನೆಗಳ ಅಭಿವ್ಯಕ್ತಿಗೆ  ಅಲ್ಲಿಯದೇ ಭಾಷೆಯ ಬಳಕೆಯಾಗಿ, ಅವರಲ್ಲಿ  ಆತ್ಮವಿಶ್ವಾಸ ಮೂಡಿಸಿ,   ಒಂದು ಸಮುದಾಯವಾಗಿ ಬಾಳಲು ಸಹಾಯಕವಾಯಿತು.  ಕನ್ನಡಿಗರ   ವೈಶಿಷ್ಟ್ಯಪೂರ್ಣ ಅಸ್ತಿತ್ವಕ್ಕೆ  ಕನ್ನಡವೇ ಕಾರಣ. ಭಾಷಾ ಶಾಸ್ತ್ರಜ್ಞರು ಹೇಳುವಂತೆ  ತೆಲಗು ಮತ್ತು ಕನ್ನಡ  ಅತಿ ಹತ್ತಿರದ ಭಾಷೆಗಳು.  ಆದರೆ  ಕನ್ನಡಿಗರು  ಮತ್ತು ತೆಲುಗು  ಭಾಷಿಕರ  ಚಿಂತನಾ ಕ್ರಮ, ಜೀವನ ವಿಧಾನ , ನಂಬಿಕೆಗಳು, ಸಾಮಾಜಿಕ  ವ್ಯವಸ್ಥೆಗಳಲ್ಲಿ ಸಾಕಷ್ಟು  ಭಿನ್ನತೆಯನ್ನು ಗುರ್ತಿಸಬಹುದು.
   ಯಾವುದೇ ಪ್ರದೇಶದ  ಜನರನ್ನು  ಒಂದುಗೂಡಿಸಲು ಅಲ್ಲಿಯ  ಭಾಷೆ ಸಹಕಾರಿ.  ಕನ್ನಡ ಭಾಷಿಕರ  ಸಮುದಾಯವನ್ನು  ಒಂದುಗೂಡಿಸಲು ಕನ್ನಡವೇ ಬೇಕು.  ಆದರೆ  ನಮ್ಮ  ಭಾಷಾ ಬಾಂಧವ್ಯಕ್ಕಿಂತ  ಹೆಚ್ಚಾಗಿ ಜಾತಿ, ಮತ,  ಪಂಥಗಳ  ಸಂಬಂಧಗಳೇ ಮೇಲುಗೈ ಸಾಧಿಸುತ್ತಿವೆ. ಈ ಅನಿಷ್ಟಕಾರಿ  ಪ್ರವೃತ್ತಿ ಕೇವಲ ಕರ್ನಾಟಕಕ್ಕೆ   ಮಾತ್ರ ಸೀಮಿತವಲ್ಲ.  ಇಡೀ ಭಾರತಕ್ಕೆ  ತಗಲಿರುವ  ಘೋರ ವ್ಯಾಧಿ. ಜಾತಿ, ಮತ, ಪಂಥಗಳ ಸಂಕುಚಿತತೆ, ಅತಾರ್ಕಿಕತೆಗಳಿಂದ  ಬಿಡುಗಡೆ ಹೊಂದಿ ಒಂದು ಸಮುದಾಯವಾಗಿ ಕನ್ನಡಿಗರು ತಮ್ಮನ್ನು ಗುರ್ತಿಸಿಕೊಳ್ಳಲು   ನಮ್ಮ ಭಾಷೆಯೇ ಅನಿವಾರ್ಯ.  ನಮ್ಮ ನಡುವಿನ  ಬೇಧ, ಭಾವಗಳನ್ನು ಮರೆತು ನಾವೆಲ್ಲರೂ ಕನ್ನಡಿಗರು  ಎಂಬ ಒಗ್ಗಟ್ಟಿನ ಮನೋಭಾವ ಮೂಡಿಸಲು ಸಾಧ್ಯವಾಗದಿದ್ದರೆ ರಾಜ್ಯೋತ್ಸವ ಆಚರಣೆ ಅರ್ಥಹೀನ.
    ರಾಜ್ಯೋತ್ಸವದ   ಆಚರಣೆಗಾಗಿ  ರಾಜ್ಯ  ಸರ್ಕಾರ  ಸಾಕಷ್ಟು  ಹಣ ವ್ಯಯಿಸುತ್ತದೆ.  ಅದು ಬರೀ ಬಾಹ್ಯ ಆಡಂಬರಕ್ಕೇ ಖರ್ಚಾಗುತ್ತದೆಯೇ ಹೊರತು  ಕನ್ನಡ  ಸಮುದಾಯದಲ್ಲಿ  ಒಗ್ಗಟ್ಟು ಸಾಧಿಸಲು ಅಲ್ಲ.  ಕನ್ನಡ  ಬಳಸಿ,  ಉಳಿಸಿ,  ಬೆಳಸಿ ಎನ್ನುವ  ಭಾಷಣ ವೀರ ರಾಜಕಾರಣಿಗಳು, ಸಾಹಿತಿಗಳು, ಅಧಿಕಾರಿಗಳು ಮುಂತಾದವರೆಲ್ಲರೂ ತಮ್ಮ ತಮ್ಮ ಸಂಕುಚಿತತೆ , ಸ್ವಾರ್ಥದ  ಚಿಪ್ಪಿನೊಳಗೇ ಇರ ಬಯಸುತ್ತಾರೆ.  ಬಲಿಷ್ಠ ಕನ್ನಡ ಸಮುದಾಯವನ್ನು   ರೂಪಿಸುವತ್ತ  ಇಂಥವರು  ಪ್ರಯತ್ನಿಸುವುದೇ ಇಲ್ಲ. ಇಂತಹ  ಗೋಸುಂಬೆಗಳನ್ನೇ ಆದರ್ಶವೆಂದು ಭಾವಿಸಿರುವ  ಜನಸಮಾನ್ಯರು   ಕೂಡಾ ಅದೇ ವಿಭಜಕ ಚಿಂತನೆಗಳ  ದಾಸರಾಗಿದ್ದಾರೆ.
     ಕನ್ನಡ- ಕನ್ನಡ ಎಂದು ಘರ್ಜಿಸುವ  ಹೋರಾಟಗಾರರ ಬಾಯಿಯಿಂದಲೂ ಕನ್ನಡಿಗರನ್ನು ವಿಭಜಿಸಿರುವ  ಸಂಕುಚಿತತೆಯ ಸರಪಳಿಯನ್ನು ತುಂಡರಿಸುವ  ಘೋಷವಾಕ್ಯ   ಕೇಳಿ ಬರುವುದಿಲ್ಲ.  ಹಲವು ಸಂಘಟನೆಗಳು  ಪ್ರಾಮಾಣಿಕವಾಗಿ ಕನ್ನಡದ   ಕೆಲಸ ಮಾಡುತ್ತಿದ್ದಾರೆ.   ಆದರೆ ಕೆಲವು ರೋಲ್‌ಕಾಲ್  ಸಂಘಟನೆಗಳಿಂದಾಗಿ ಎಲ್ಲ ಕನ್ನಡ ಪರ ಸಂಘಟನೆಗಳನ್ನು  ಅನುಮಾನ,  ತಾತ್ಸಾರಗಳಿಂದ  ನೋಡುವ ಸನ್ನಿವೇಶ ನಿರ್ಮಾಣವಾಗಿದೆ.  ಕನ್ನಡ ಎನ್ನುವುದರ  ಜೊತೆಗೆ ಕನ್ನಡಿಗ ಎನ್ನುವ ಘೋಷಣೆಯೂ ಸ್ಥಾನ ಪಡೆದಾಗ ಈ ಹೋರಾಟಗಳ  ವಿಧಿ- ವಿಧಾನಗಳಲ್ಲಿ  ಮಹತ್ತರ  ಬದಲಾವಣೆಯಾಗಲಿದೆ.
   ಕನ್ನಡ ಅನ್ನ  ಕೊಡುವ ಭಾಷೆಯಲ್ಲವೆಂದು  ಕೆಲವರ  ಹೇಳಿಕೆ-ಅತಾರ್ಕಿಕ, ಮೂರ್ಖತನದ್ದಾಗಿದ್ದರೂ ಕೂಡ  ಹೆಚ್ಚಿನ  ಜನ  ಇದನ್ನು   ನಂಬುವಂತೆ ಮಾಡಿದೆ.  ಶೇಕಡಾ ೯೦ ರಷ್ಟು ಕರ್ನಾಟಕದ   ನಿವಾಸಿಗಳು  ಕನ್ನಡದಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.  ವೃತ್ತಿಪರ  ಕೋರ್ಸ್ಗಳನ್ನು ಅಧ್ಯಯನ  ಮಾಡಿ  ಮಾಸಿಕ ಲಕ್ಷಾಂತರ  ರೂಪಾಯಿ ಸಂಬಳ ಪಡೆಯುವ     ಕೆಲವರನ್ನು  ನೋಡಿ, ಇಂಗ್ಲೀಷ್‌ನಲ್ಲಿ  ಕಲಿತರೆ ಮಾತ್ರ ಇಷ್ಟೊಂದು ಗಳಿಕೆ ಸಾಧ್ಯವೆಂಬ ತಪ್ಪು  ಗ್ರಹಿಕೆಯೇ ಕನ್ನಡದ  ಅವಹೇಳನಕ್ಕೆ  ಕಾರಣ.
   ಕನ್ನಡ   ಭಾಷಿಕರು ಒಂದೇ ರಾಜ್ಯದಲ್ಲಿ ಬಾಳಬೇಕೆಂದು ಬಯಸಿದ  ಹಿರಿಯರು,  ಕನ್ನಡಿಗರ  ಬದುಕು  ಉತ್ತಮವಾಗಿರಬೇಕೆಂದೂ ಬಯಸಿದ್ದರು. ಆದರೆ, ನಮ್ಮ ಕನ್ನಡ ನಾಡಿನಲ್ಲಿ ಇಂದು ಕನ್ನಡಿಗರೇ ಅನಾಥರಾಗಿರುವ  ಪರಿಸ್ಥಿತಿ ಉಂಟಾಗಿದೆ.  ಎಲ್ಲವೂ ಇದ್ದೂ,  ನಾವು ಏನೂ ಇಲ್ಲದಿರುವಂತವರಿದ್ದೇವೆ.    ಪ್ರತಿಯೋರ್ವ  ಕನ್ನಡಿಗನಿಗೂ ಕರ್ನಾಟಕದಲ್ಲೇ ದುಡಿಯುವ ಅವಕಾಶ  ಲಭ್ಯವಾಗಬೇಕು. ಬರ, ನೆರೆ,  ಪ್ರಾಕೃತಿಕ ವಿಕೋಪಗಳಿಂದಾಗಿ ಕನ್ನಡಿಗರು ತಮ್ಮ  ಮನೆ, ಊರು ತೊರೆದು ಪಕ್ಕದ ರಾಜ್ಯಗಳಿಗೆ  ಜೀವನೋಪಾಯಕ್ಕಾಗಿ ವಲಸೆ   ಹೋಗುವ   ಸ್ಥಿತಿ  ತಪ್ಪಬೇಕು.  ಇಂತಹ  ಕನ್ನಡ ನಾಡಿನ ನಿರ್ಮಾಣದ  ದೃಢಸಂಕಲ್ಪವನ್ನು ಮಾಡಿದರೆ ಮಾತ್ರ ರಾಜ್ಯೋತ್ಸವಕ್ಕೆ  ಬೆಲೆ ಬರುತ್ತದೆ.
   ಪ್ರತಿಯೋರ್ವ ಕನ್ನಡಿಗನಿಗೂ ಕರ್ನಾಟಕದಲ್ಲೇ  ದುಡಿಯುವ ಅವಕಾಶ, ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ತನ್ನ ಅವಲಂಬಿತರ  ಜೀವನದ  ಕನಿಷ್ಠ ಅಗತ್ಯತೆಗಳನ್ನು ಅಂದರೆ ಆಹಾರ, ಬಟ್ಟೆ, ವಸತಿ, ಶಿಕ್ಷಣ ಮತ್ತು ಔಷಧೋಪಚಾರ ಪೂರೈಸಿಕೊಳ್ಳುವ ಸಾಮರ್ಥ್ಯವಿರಬೇಕು. ಬಿಪಿಎಲ್  ಕಾರ್ಡ್ಗಾಗಿ  ಅರ್ಜಿ ಸಲ್ಲಿಸಿ ಕೈ ಜೋಡಿಸಿ ನಿಲ್ಲುವ  ದೈನ್ಯ ಸ್ಥಿತಿ  ಯಾವ ಕನ್ನಡಿಗನಿಗೂ  ಬರದಂತಹ  ಸ್ಥಿತಿಯನ್ನೂ ನಿರ್ಮಾಣ ಮಾಡುವ  ಪ್ರತಿಜ್ಞೆ ಮಾಡಿದಾಗ ಮಾತ್ರ ಕನ್ನಡ   ರಾಜ್ಯೋತ್ಸವ ಅರ್ಥಪೂರ್ಣ.
   ಈ ಕನಸನ್ನು  ನನಸಾಗಿಸುವುದು ಸಾಧ್ಯವೇ ? ಎಂಬ ಪ್ರಶ್ನೆ ಮಾಡಿದರೆ ಆಶ್ಚರ್ಯ ಪಡಬೇಕಿಲ್ಲ.  ಯಾಕೆಂದರೆ ಇಂದು ನಾವು ಅನುಸರಿಸುತ್ತಿರುವ   ಆರ್ಥಿಕ ನೀತಿ, ಶಾಲಾ- ಕಾಲೇಜುಗಳಲ್ಲಿ  ಕಲಿಯುವ  ಇಕೊನೊಮಿಕ್ಸ್ ಕಲಿಸುತ್ತಿರುವುದೇ  ಬಂಡವಾಳವಾದಿ ತತ್ವಗಳನ್ನು  ಅಂದರೆ ಬುದ್ದಿ ಮತ್ತು ಹಣ ಬಲದಿಂದ ಎಲ್ಲರಿಗೂ ಸಲ್ಲಬೇಕಾದ ನ್ಯಾಯಯುತ  ಪಾಲನ್ನು ಕೆಲವರಷ್ಟೇ ತಮ್ಮ  ಹತೋಟಿಯಲ್ಲಿ  ಇಟ್ಟುಕೊಂಡು ಇತರರನ್ನು  ಇಲ್ಲದವರನ್ನಾಗಿಸುವ  ಅಮಾನವೀಯ ವ್ಯವಸ್ಥೆ.   ಎಲ್ಲರ  ಸುಖಕ್ಕಾಗಿ, ಎಲ್ಲರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗದ ಕುರಿತಾಗಿ ಚಿಂತನೆ,  ಆವಿಷ್ಕಾರಗಳನ್ನು ಮಾಡುವ  ಕುರಿತು ತಥಾಕತಿಥ  ಆರ್ಥಿಕ ತಜ್ಞರು ಯೋಜಿಸುವುದೇ ಇಲ್ಲ.
    ಲಾಭದಾಸೆಗಾಗಿ ಬರುವ ಹೊರಗಿನವರು ಬಂಡವಾಳ ಹೂಡುವುದರಿಂದ ಸ್ಥಳೀಯರ  ಅಭಿವೃದ್ಧಿಯಾಗುತ್ತದೆಂಬ ಭ್ರಮೆಯಲ್ಲೇ ಬದುಕುತ್ತಿದ್ದೇವೆ. ಕರ್ನಾಟಕದ  ಸಂಪನ್ಮೂಲಗಳನ್ನು ಆಧರಿಸಿ,  ಸಮಸ್ತ ಕನ್ನಡಿಗರ ಹಿತರಕ್ಷಣೆಯ ಗುರಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯ.  ಸರ್ಕಾರಕ್ಕೆ  ಹೆಚ್ಚಿನ ತೆರಿಗೆ  ಹರಿದು ಬರುವುದೇ ಸಮೃಧ್ಧತೆಯ  ಲಕ್ಷಣವಲ್ಲ.  ಪ್ರತಿಯೋರ್ವ ಕನ್ನಡಿಗನಿಗೂ ಫಲಪ್ರದ ಉದ್ಯೋಗಾವಕಾಶ ಸೃಷ್ಟಿಯಾದಾಗ  ಮಾತ್ರ ಸಮೃದ್ಧ ಕರ್ನಾಟಕ  ಅರ್ಥಪೂರ್ಣ.
   ಇಂದಿನ  ರಾಜಕೀಯ  ಪಕ್ಷಗಳಿಂದ  ಸಮೃದ್ಧ  ಕರ್ನಾಟಕದ ನಿರೀಕ್ಷೆ ಇಟ್ಟುಕೊಳ್ಳುವುದು ಅವಾಸ್ತವ. ರಾಷ್ಟ್ರೀಯ  ಪಕ್ಷಗಳಿಗೆ  ಇಡೀ ದೇಶದಲ್ಲಿ  ಅಧಿಕಾರ  ಪಡೆಯುವುದೇ ಗುರಿ. ಪರಸ್ಪರ  ದೂಷಣೆ,  ಅವಹೇಳನಗಳಲ್ಲಿ ತೊಡಗಿರುವ  ಇವರೆಲ್ಲರೂ ನಂಬಿರುವ  ಆರ್ಥಿಕ ಸಿದ್ಧಾಂತವೇ  ಬಂಡವಾಳವಾದ. ಆರ್ಥಿಕ  ಅಸಮಾನತೆಯನ್ನು  ಸಹಜವೆಂದು  ಒಪ್ಪುವ  ಬಂಡವಾಳವಾದವನ್ನು  ಅನಸರಿಸಿ ಆರ್ಥಿಕ ನ್ಯಾಯ ಒದಗಿಸುವುದು ಬರೀ ಕನಸು.  ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಸ್ವಾವಲಂಬನೆಯನ್ನು ಇಷ್ಟ ಪಡುವುದಿಲ್ಲ.  ರಾಜ್ಯಗಳ  ನೇತಾರರನ್ನು  ತಮ್ಮ ಅಡಿಯಾಳಿನಂತೆ ನಡೆಸಿಕೊಳ್ಳುವುದು  ಅವರ  ಜಾಯಮಾನ.  ತಮ್ಮ ಪಕ್ಷ ಅಧಿಕಾರದಲ್ಲಿದೆ,  ಹೈಕಮಾಂಡ್‌ಗೆ ನಿಯಮಿತವಾಗಿ ಕಪ್ಪ-  ಕಾಣಿಕೆ   ಸಲ್ಲುತ್ತಿದೆ ಎನ್ನುವುದರಲ್ಲೇ ಅವರ ಆಸಕ್ತಿ ಸೀಮಿತವಾಗಿದೆ.
    ಪ್ರಾದೇಶಿಕ ಪಕ್ಷವೆಂದು ಕರೆಸಿಕೊಳ್ಳುವ  ಜೆಡಿಎಸ್‌ನ ಚಿಂತನೆಗಳು ಬಿಜೆಪಿ ಅಥವಾ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ.  ಇತರ  ರಾಜ್ಯಗಳಲ್ಲಿ ಅದರ ಅಸ್ತಿತ್ವ ಇಲ್ಲ ಎನ್ನುವ  ಕಾರಣದಿಂದಾಗಿಯೇ ಅದು  ಪ್ರಾದೇಶಿಕ  ಪಕ್ಷ.   ಕರ್ನಾಟಕವನ್ನು ಸ್ವಾವಲಂಬಿ ಸಮೃದ್ಧ ನಾಡನ್ನಾಗಿ ಪರಿವರ್ತಿಸುವ  ಯಾವುದೇ ಕನಸು ಅಥವಾ ಕಾರ್ಯಕ್ರಮ ಅವರಿಗಿಲ್ಲ.
    ಇಂತಹ ಪರಿಸ್ಥಿತಿಯಲ್ಲಿ ಜನಾಂದೋಲನದಿಂದ ಮಾತ್ರ ಪರಿವರ್ತನೆ  ಸಾಧ್ಯ.  ಕರ್ನಾಟಕದ  ದುಡಿಮೆಯ  ಅವಕಾಶಗಳು ಕನ್ನಡಿಗರಿಗೇ ಮೀಸಲಿರಬೇಕೆಂಬ ಚಿಂತನೆ  ಕಳೆದ ಕೆಲವು ತಿಂಗಳುಗಳಿಂದ   ಪ್ರಚಾರದಲ್ಲಿದೆ.  ಈ ವಿಚಾರವನ್ನು  ಹರಿಬಿಟ್ಟ ಸಂಘಟನೆಗಳ ಹುರುಪು ಕಡಿಮೆಯಾದಂತೆ  ಕಾಣುತ್ತಿದೆ.  ಪ್ರಚಾರ ಪ್ರಿಯ  ನೇತಾರರು  ಬಹುಬೇಗ ನಿರಾಸೆ  ಅನುಭವಿಸುತ್ತಾರೆ.   ಯಾಕೆಂದರೆ ಇಂತಹ  ಚಳುವಳಿ ಜನಸಾಮಾನ್ಯರನ್ನು   ಒಳಗೊಳ್ಳುವಂತಾಗಲು ಸಮಯಬೇಕು.   ಪ್ರವಾಹದ ವಿರುದ್ಧ  ಸೆಣೆಸಾಡಬೇಕಾದ  ಕ್ಷೇತ್ರವಿದು.  ಪರ್ಯಾಯ ವ್ಯವಸ್ಥೆಯ ಕಲ್ಪನೆ ಇಲ್ಲದವರಿಂದ  ಇಂತಹ  ಹೋರಾಟವನ್ನು  ದೀರ್ಘಕಾಲದವರೆಗೆ  ಜೀವಂತವಾಗಿಡುವುದು  ಸಾಧ್ಯವಾಗಲಾರದು.  ಆದರೆ ಈ  ಚಿಂತನೆ , ಹೋರಾಟ ನಡೆದೇ ನಡೆಯುತ್ತದೆ.
   ಸಾಮಾಜಿಕ- ಆರ್ಥಿಕ ಪರಿವರ್ತನೆಯಾಗುವಾಗ ಸೈದ್ಧಾಂತಿಕ ನೆಲೆಗಟ್ಟು ಅತಿ ಅಗತ್ಯ.  ನೇತಾರರಲ್ಲಿ ನೈತಿಕ   ಮೌಲ್ಯಗಳು ಮತ್ತು  ಸೈದ್ಧಾಂತಿಕ ಬದ್ಧತೆ ಇದ್ದಾಗ ಮಾತ್ರ ಬದಲಾವಣೆಯ ವೇಗ ತೀವ್ರವಾಗುತ್ತದೆ.  ಸಾಮೂಹಿಕ   ಮಾನಸಿಕತೆ  ಬದಲಾದಾಗ   ಮಾತ್ರ ಹೊಸ ವ್ಯವಸ್ಥೆ ಜಾರಿಗೆ ಬರುತ್ತದೆ.  ಇದಕ್ಕಾಗಿ ಶ್ರಮಿಸುವ      ನೇತಾರರಿಗಾಗಿ  ಕನ್ನಡನಾಡು ಕಾಯುತ್ತ್ತಿದೆ.  ತಮ್ಮನ್ನೇ ವೈಭವೀಕರಿಸಿಕೊಳ್ಳುವವರು ಅಲ್ಪಕಾಲದವರೆಗೆ  ಮಿಂಚುತ್ತಾರೆ ಹಾಗೂ ಅಷ್ಟೇ ಬೇಗ ಮರೆಯಾಗುತ್ತಾರೆ.    
   ರಾಜ್ಯೋತ್ಸವದ ನೆಪದಲ್ಲಿ,  ಕನ್ನಡದ  ಹೆಸರಿನಲ್ಲಿ  ಕುಣಿದು  ಕುಪ್ಪಳಿಸುವವರು ಇಂದು ಗಂಭೀರವಾಗಿ  ಯೋಚಿಸಲೇಬೇಕಾಗಿದೆ.   ಕನ್ನಡ ನಾಡಿನ  ಸಂಪತ್ತನ್ನು  ಹೊರಗಿನವರು ಲೂಟಿ ಹೊಡೆಯುತ್ತಿದ್ದರೆ ಕನ್ನಡ  ನಾಡಿನ  ಉದ್ಯೋಗಾವಕಾಶಗಳು ಹೊರಗಿನವರ ಪಾಲಾಗುತ್ತಿವೆ.  ಕನ್ನಡಿಗರು  ನಿರುದ್ಯೋಗಿಗಳಾಗುತ್ತಿದ್ದಾರೆ.  ತಮ್ಮದೇ ನಾಡಿನಲ್ಲಿ  ನಿರಾಧಾರಿಗಳಾಗುತ್ತಿದ್ದಾರೆ. ಇಂತಹ ಅನ್ಯಾಯವನ್ನು  ಸರಿಪಡಿಸುವ  ಕುರಿತು ಕಾರ್ಯಪ್ರವೃತ್ತರಾಗಬೇಕಿದೆ. ರಾಜಕೀಯದ  ಥಳಕು, ಬಳುಕಿಗೆ  ಮರುಳಾಗಿ  ಕೇಂದ್ರ ನಾಯಕರ  ಗುಲಾಮಗಿರಿ ಮಾಡುತ್ತಾ,  ಕನ್ನಡಿಗರಿಗಾಗುತ್ತಿರುವ  ಅನ್ಯಾಯದ  ವಿರುದ್ಧ ಸೊಲ್ಲೆತ್ತದಿರುವ  ಜನಪ್ರತಿನಿಧಿಗಳಿಗೆ  ಬಿಸಿ ಮುಟ್ಟಿಸುವ ಕೆಲಸಮಾಡಬೇಕಿದೆ.
   ಸಮೃದ್ಧ, ಸ್ವಾವಲಂಬಿ , ಸ್ವಾಭಿಮಾನಿ ಕರ್ನಾಟಕದ  ಕನಸನ್ನು ಕಾಣಬಲ್ಲವರು ಮಾತ್ರ ಇದನ್ನು  ನನಸಾಗಿಸಬಲ್ಲರು.   ವಿಕೇಂದ್ರೀಕೃತ  ಆರ್ಥಿಕ ವ್ಯವಸ್ಥೆಯ  ಜಾರಿಯಿಂದ  ಇದು ಸಾಧ್ಯ.  ನಮ್ಮ ನಡುವಿನ  ಹಲವು ಭೇದ  ಭಾವಗಳನ್ನು  ದೂರೀಕರಿಸಿ, ನಮ್ಮನ್ನು ನಾವು ಕನ್ನಡಿಗರೆಂದು  ಗುರ್ತಿಸಿಕೊಳ್ಳುವ  ಮನೋಭಾವದೊಂದಿಗೆ  ಈ ವರ್ಷದ ರಾಜ್ಯೋತ್ಸವ ಆಚರಿಸೋಣ.  ಡಿಜೆ ಸೌಂಡ್‌ನ  ಗೀತೆಗಳಿಗೆ  ಹೆಜ್ಜೆ ಹಾಕಿ ಕುಣಿಯುವಾಗ  ಅಸಹಾಯಕ ಕನ್ನಡಿಗರ  ಸ್ಥಿತಿಯನ್ನು  ಮರೆಯದಿರೋಣ.    ಶೋಷಣಾ  ರಹಿತ  ಕನ್ನಡನಾಡು  ಕಟ್ಟುವ  ದೃಢನಿರ್ಧಾರ  ತಳೆದು ರಾಜ್ಯೋತ್ಸವದ ಶುಭಾಶಯ ವಿನಿಮಯ  ಮಾಡಿಕೊಳ್ಳೋಣ.
   ***********************************************************************         

Leave a Reply

Back To Top