ಕಾವ್ಯಯಾನ

ಪ್ರಶ್ನೋತ್ತರ

ರತ್ನನಂದಿನಿ

(ಲತಾ ಆಚಾರ್ಯ)

ಪ್ರೀತಿ ಅಂದರೇನು ಕೇಳಿದಳು ಅವಳು

ಉತ್ತರಿಸದೆ ನಾನು ಸೊಸೆಯ ಕಡೆಗೊಮ್ಮೆ

ಕೈಯ ತೋರಿಸುತ ಮುಗುಳ್ನಗೆಯ ಬೀರಿದೆ

ಅರ್ಥವಾಗಿರಬೇಕು ಈಗ  ಆಕೆಗೆ 

ಅಮ್ಮ ಮಗುವಿಗೆ ತುತ್ತು ಉಣ್ಣಿಸುತ್ತಿದ್ದಳು.

ಸ್ನೇಹವೆಂದರೇನು ಮತ್ತೊಂದು ಪ್ರಶ್ನೆ

ಈಗಲೂ ನಾನು ಮೌನ ದಿಟ್ಟಿಸಿದಳು ನನ್ನ 

ಗೆಳೆಯನೋರ್ವನು ಬಂದು ಹೇಗಿರುವೆ ಎಂದನು

ಮತ್ತದೇ ಅಸೌಖ್ಯ ತೋರಿದರೆ ಹೆದರದಿರು

ನಾನಿರುವೆ ಜೊತೆಯಲ್ಲಿ ಎಂದಾಗ ಆಕೆ ಮೌನವಾಗಿದ್ದಳು.

ಬೆಸುಗೆ ಎಂದರೇನು ಕೇಳಿದಳು ಈ ಬಾರಿ

ಏನು ಹೇಳಲಿ ನಾನು ಮಾತು ಬಾರದು ನನಗೆ

ಅವಳ ಗಲ್ಲವನು ಹಿಡಿದೆತ್ತಿ ಚುಂಬಿಸುತ

ಬಾಹು ಬಂಧನದಲ್ಲಿ ಆಲಿಂಗಿಸಿದೆ 

ಏನು ಅರ್ಥವಾಯಿತೋ ಅವಳು ತುಸು ನಕ್ಕಳು.

ಕರುಣೆ ಎಂದರೇನು ಮಗದೊಂದು ಪ್ರಶ್ನೆ

ಉತ್ತರಿಸಲಾರೆ ಎಂದವಳು ತಿಳಿದಿದ್ದಳು

ಕಾಲು ಮುರಿದಿಹ ನಾಯಿಮರಿಯೊಂದನ್ನು

ಮಗರಾಯ ಎತ್ತಿ ತರುತ್ತಿರುವುದನ್ನು

ಕಿಟಿಕಿಯಿಂದಲೆ ತೋರಿಸಿದೆ ಓಹೋ ಎಂದು ತಲೆಯಾಡಿಸಿದಳು.

ಇನ್ನೇನೋ ಪ್ರಶ್ನೆ ಕೇಳುವವಳಿದ್ದಳು

ಹೊಟ್ಟೆಯೊಳಗೇನೋ ನೋವು ಯಾರೋ ತಿವಿದಂತೆ

ನರಳಿದೆನು ಹೊರಳಾಡಿ ಮುಖವ ಕಿವುಚಿದೆನು

ಅಮ್ಮ ಮಗನಲ್ಲಿ ಪಿಸುಗುಟ್ಟಿದಳು ಆಗ

ಗೆಳೆಯನಿಗೂ ಕರೆ ಹೋಗಿ ಆತ ಬಂದಿದ್ದನು.

ಅವಳೇಕೋ ಈಗ ಮೌನ ತಾಳಿದ್ದಳು

ದವಾಖಾನೆಯಲಿ ಮಲಗಿದ್ದ ನನ್ನನ್ನು

ದಿಟ್ಟಿಸುತ ಕೇಳಿದಳು ಮುತ್ತೈದೆ ಭಾಗ್ಯವನು ಕೊಡುವಿರೇನು

ಪ್ರಶ್ನೆಗುತ್ತರಿಸದೆಯೇ ಮೊದಲ ಬಾರಿಗೆ ನಾನು 

ಸೋತು ಹೋಗಿರುವಾಗ ಯಮರಾಯ ಸನಿಹದಲೆ ನಿಂತಿದ್ದನು

*******************************

One thought on “ಕಾವ್ಯಯಾನ

Leave a Reply

Back To Top