ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು
ವಿ.ನಿಶಾ ಗೋಪಿನಾಥ್
ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ.
ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ ಶ್ರೀ ವಸಂತ ಬನ್ನಾಡಿ. ಬನ್ನಾಡಿಯವರಿಗೆ ಗುಣ ಮತ್ತು ಶಬ್ದದ ಬಗೆಗೆ ಪೂರ್ಣ ಗಮನ. ನಾಟಕ ನಿರ್ದೇಶಕರೂ ರಂಗ ಕರ್ಮಿಯೂ ಆಗಿರುವ ಬನ್ನಾಡಿ ತಮ್ಮ ಕವಿತೆಗಳ ಮೂಲಕ ನಮಗೆ ಫೇಸ್ಬುಕ್ಕಿನ ಮೂಲಕ ಪರಿಚಿತರೂ ಹೌದು. ಈ ಇಂಥ ಕವಿ ಪ್ರಕಟಿಸಿರುವ ಸಂಕಲನಕ್ಕೆ ಖ್ಯಾತ ಕವಿ ಮತ್ತು ವಿಮರ್ಶಕ ಡಾ.ಎಸ್.ಜಿ.ಸಿದ್ಧರಾಮಯ್ಯ ಮುನ್ನುಡಿ ಒದಗಿಸಿರುವ “ನೀಲಿ ನಕ್ಷತ್ರ” ೨೦೧೬ರಲ್ಲಿ ಪ್ರಕಟವಾಯಿತು. ಅಲ್ಲಿ ಇಲ್ಲಿ ಒಂದಷ್ಟು ಚರ್ಚೆಗಳೂ ಆದವು.
ನೀಲಿ ಎಂದರೆ ನಿರಾಳ. ನೀಲಿ ಎನ್ನುವುದು ಆಕಾಶದ ಬಣ್ಣ. ನೀಲಿ ಎನ್ನುವುದು ಕೃಷ್ಣನ, ರಾಮನ ಚರ್ಮದ ಬಣ್ಣ. ಕಡು ನೀಲಿ ಎನ್ನುವುದನ್ನು ಕಪ್ಪು ಎಂದೂ ಬಳಕೆ ಮಾಡುವುದಿದೆ. ಜೊತೆಗೇ ಸಾಮಾಜಿಕ ಕಟ್ಟುಪಾಡಿನ ಶಿಷ್ಟಾಚಾರವನ್ನು ಮುರಿದ ಎಲ್ಲೆ ಮೀರಿದ ಲೈಂಗಿಕತೆಗೂ “ನೀಲಿ” ಎನ್ನುವುದುಂಟು. ಲಂಕೇಶರ “ನೀಲು” ಸಾಲು ನೆನಪಾದರೆ ಈ ಪದದ ಅರ್ಥ ಶ್ರೀಮಂತಿಕೆಗೆ ಸಾಕ್ಷಿ.
ಈ ಸಂಕಲನದ ನಂತರವೂ ಈ ಕವಿಯು ಇಂಥದೇ ರಚನೆಗಳಲ್ಲೇ ಇರುವಂತೆ ಕಾಣುತ್ತಾರಾದರೂ ಇದುವರೆಗೂ ಬಳಕೆಯಲ್ಲಿದ್ದ, ಪ್ರೀತಿಯನ್ನು ವರ್ಣಿಸುವ ಸಾಂಪ್ರದಾಯಿಕ ರೀತಿಯನ್ನು ಬಿಟ್ಟುಕೊಟ್ಟ ಇಲ್ಲಿನ ಪದ್ಯಗಳು ಲೈಂಗಿಕ ಪ್ರತಿಮೆಗಳಾಚೆಗಿನ ಸೌಂದರ್ಯ ಮತ್ತು ಅನುಭೂತಿಯನ್ನು ವಿಸ್ತರಿಸುವ ಧೈರ್ಯ ಮಾಡಿರುವುದರ ಕುರುಹಾಗಿದೆ. ಸಂದರ್ಭಗಳ ಮರುಸೃಷ್ಟಿಗೆ ಇಲ್ಲಿ ಪದಗಳನ್ನು ಹಿತಮಿತವಾಗಿ ಬಳಸುವ ಈ ಕವಿ, ಅರ್ಥಗಳ ಹೊಳಪು ಕೊಟ್ಟು ದಿಗ್ಮೂಡಗೊಳಿಸುತ್ತಾರೆ. ನೀಲಾಕಾಶದ ದಿಟ್ಟಿಗೆ ನಿಲುಕುವ ಸಂಗತಿಗಳಿಗಿಂತ ಗಮನಕ್ಕೆ ಸಿಗದೇ ಉಳಿವ ಸಂಗತಿಗಳನ್ನು ಈ ಪದ್ಯಗಳ ಆಳದ ಓದು ಮಾತ್ರ ಕೊಡಬಲ್ಲದು. ಮೇಲ್ನೋಟಕ್ಕೆ ಹೆಣ್ಣೊಬ್ಬಳ ಗಂಡಿನ ಮೇಲಣ ಆಕರ್ಷಣೆಯಂತೆ ಈ ಪದ್ಯಗಳ ನೇಯ್ಗೆ ಇದ್ದರೂ ಆಳದಾಳದಲ್ಲಿ ಇರುವುದು ವ್ಯಕ್ತದಾಚೆಗೂ ಉಳಿವ ಅವ್ಯಕ್ತ ಭಾವನೆಗಳ ಮಹಾಪೂರ.
ನಿಜಕ್ಕೂ ಚರ್ಚಿಸಲೇ ಬೇಕಾದ ಕಾವ್ಯ ಕೃಷಿ ವಿನಿಶಾ ಗೋಪಿನಾಥರ ಪದ್ಯಗಳಲ್ಲಿವೆ. ಮೊದ ಮೊದಲ ಓದಿಗೆ ಪ್ರೇಮದ ನೈರಾಶ್ಯವೇ ಬಹುತೇಕ ಕವಿತೆಗಳ ಮೂಲ ಎಂದು ಮೇಲ್ನೋಟಕ್ಕೆ ಅನ್ನಿಸುವುದಾದರೂ ಅದು ಸತ್ಯವಲ್ಲ. ವಿಷಾದ ಮತ್ತು ಬದುಕಿನ ಗಾಢ ಕ್ರೂರತೆ ಇಲ್ಲಿನ ಬಹುತೇಕ ಪದ್ಯಗಳ ಅಸ್ತಿವಾರ. ಆ ಕಾರಣಕ್ಕೇ ಇವರ ಮೊದಲ ಸಂಕಲನ “ನೀಲಿ ನಕ್ಷತ್ರ”ಕ್ಕೆ ಮುನ್ನುಡಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯನವರ ಮಾತನ್ನು ಮುಂದುವರೆಸಲೇಬೇಕು.
“ಒಂದು ದಿನ ತಿರಸ್ಕರಿಸುವ
ಮತ್ತೊಂದು ದಿನ ಪುರಸ್ಕರಿಸುವ
ಒಮ್ಮೆ ನನ್ನನ್ನು ಹಾಲಿನಲ್ಲಿ ಅದ್ದುವ
ಒಮ್ಮೆ ನನ್ನನ್ನು ನೀರಿನಲ್ಲಿ ಅದ್ದುವ
ಬಹುರೂಪತೆಯನ್ನು ಇನ್ನಾದರೂ ಬಿಡು ನಲ್ಲ
ಏನು ನಿನ್ನ ಒಳಗಿನ ನಿಗೂಢ?
ಎಲ್ಲವನ್ನೂ ಬಿಚ್ಚಿಡು”. – (ಬಾಳಿನ ಹೊಸ ಪುಟ)
ಈ ಪದ್ಯ ಸುರುವಾಗುವುದೇ “ನನ್ನ ಮನೆಯೆಂಬ ಚಿಕ್ಕ ಗೂಡು ಕಾಯುತ್ತಿದೆ ನಿನ್ನ ಬರವಿಗಾಗಿ ಎದೆ ಒಸಗೆ ತುಂಬಿ” ಎನ್ನುವ ಸಾಲಿನಿಂದ. “ಅವನ” ಬರವಿಗಾಗಿ ಕಾಯುವ “ಅವಳು” ಅವನ ನಿಗೂಢ ನಡೆಯನ್ನು ಪ್ರಶ್ನಿಸುತ್ತಲೇ ಅವನನ್ನು ಸ್ಪಷ್ಟ ಪಡಿಸಲು ಕೋರುವ ಕಡೆಯ ಸಾಲು ಬರಿಯ ಪ್ರೀತಿಯ ಮಾತನ್ನಲ್ಲದೆ ಸಂಗಾತಿ ಅನುರೂಪವಾಗಿಯೇ ಇರಬೇಕೆಂಬ ಬಯಕೆ.
“ನಾವಿಬ್ಬರು ದೇವ ದೇವಿಯರಾಗಿ
ಉಳಿಯುವೆವು
ಸೂರ್ಯ ಚಂದ್ರ ನಕ್ಷತ್ರ
ನದಿ ಹಳ್ಳ ಕೊಳ್ಳಗಳಿರುವ ತನಕ
ಪ್ರೇಮಿಗಳ ಧಮನಿಗಳಲಿ ಪ್ರೀತಿಯ ರಕುತ ಹರಿದಾಡುತ್ತಿರುವ ತನಕ” (ದೇವಿ ದೇವರ ಪ್ರೇಮ ಗಾಥೆ)
ಈ ಪದ್ಯದ ಸುರುವಿನ ಸಾಲು ಹೀಗಿದೆ;
ಯಾವ ಹೆಣ್ಣೂ ಪ್ರೇಮಿಸಿರಲು ಸಾಧ್ಯವಿಲ್ಲ
ನಿನ್ನನು
ನನ್ನಷ್ಟು ತೀವ್ರ ಈ ಭೂಮಂಡಲದಲಿ
ಅಕ್ಕ ಚೆನ್ನ
ರಾಧೆ ಕೃಷ್ಣರು
ಧಡ್ಡನೆ ತಮ್ಮ ಬಾಗಿಲುಗಳ ಮುಚ್ಚಿದರು
ಕ್ಷಣಹೊತ್ತು ತಮ್ಮ ಪ್ರೇಮಗಾಥೆಯ
ಚೌಕಾಶಿ ಮಾಡಿದರು.
ಈಗ ಪದ್ಯದ ಓದನ್ನು ಈಗ ಹೇಳಿದ ಎರಡನೇ ಕಂದದಿಂದ ಆರಂಭಿಸಿ ಮೊದಲ ಸಾಲನ್ನು ನಂತರ
ಓದಿದರೆ ಹುಟ್ಟುವ ಯಾಚ(ತ)ನೆಯ ಪರಿಗೆ ಸೋಲದೇ ಉಳಿಯುವುದಾದರೂ ಹೇಗೆ? ಇಷ್ಟೆಲ್ಲ ಹೇಳಿದರೂ ಮತ್ತೆ ಗೊಂದಲ ನಿರೂಪಕಿಗೆ, ಅವಳು ಹೇಳುತ್ತಾಳೆ;
ಎಲ್ಲ ಗಂಡಸರೂ ಒಂದೇ ಏನು?
ಅಕ್ಕನ ಮೊರೆಗೆ ಕಿವಿಗೊಟ್ಟನೇ ಚೆನ್ನ?
ಕೊಳಲಿನ ಜೊತೆಗೆ ರಾಧೆಯನೂ ಹಿಂದೆ ಬಿಟ್ಟು
ನಡೆದೇ ಬಿಟ್ಟನಲ್ಲ ಕೃಷ್ಣ?
ಮುಂದುವರೆದ ಅವಳು ಹೀಗೂ ಹೇಳುತ್ತಾಳೆ;
ನೀನು ರೂಹಿಲ್ಲದ ಚೆಲುವನಲ್ಲ
ನನ್ನ ಕಣ್ಣಿನ ಮುಂದಿನ ಸಾಕ್ಷಾತ್ಕಾರ
ಬಳಿ ಇದ್ದಿದ್ದರೆ ಈಗ ನೀನು
ನಿನ್ನ ಕೈತುಂಬಾ ಮೆತ್ತಿಕೊಳ್ಳುತ್ತಿದ್ದೆ
ನನ್ನ ಬೆತ್ತಲೆ ಚೆಲುವನು
………….
ನೋಡಲಿ ಜಗತ್ತು
ನಮ್ಮಿಬ್ಬರ ಪ್ರಣಯದ
ಕೊನೆಯಿರದ ಪಯಣವನ್ನು
ಈ ಟಿಪ್ಪಣಿಯಲ್ಲಿ ಮೊದಲು ಬಳಸಿದ “ನೀಲಿ” ಶಬ್ದದ ಅರ್ಥವನ್ನು ಈ ಪದ್ಯದ ಓದಿನಲ್ಲಿ ಗ್ರಹಿಸಲು ಯತ್ನಿಸಿ, ಆಗ ಮಾತ್ರ ಈಕೆ ಹೇಳ ಹೊರಟ ಆಳದಾಳದ ಕೊಳದ ನೀಲ ನಿಮಗ್ನ ನಗ್ನ ಸತ್ಯ ಅದ್ಭುತವಾಗಿ ಹೊಳೆಯುತ್ತದೆ.
ಇನ್ನು “ಸಂಶಯ” ಎನ್ನುವ ಕವಿತೆಯಲ್ಲಿ
ತೇಲಿಹೋಗುವೆ ನಾನು
ನಿನ್ನ ಅಗಾಧ ಪ್ರೀತಿಯ ಹೊಳೆಯಲ್ಲಿ
ಮರೆತುಬಿಡುತ್ತಾ
ನೀನು ಚುಚ್ಚಿದ ಕಂಠಿ ಮುಳ್ಳುಗಳನ್ನು
ತಯಾರಾಗಿಬಿಡುತ್ತೇನೆ
ನೀನು ತೋರಿಸಿದ ದಾರಿಯಲ್ಲಿ ನಡೆಯಲು
ನನಗೆ ಗೊತ್ತಿದೆ;
ಆಡಿದ್ದೇನೆ ನಾನೂ ನಿನಗೆ
ಘಾಸಿಮಾಡುವ ಮಾತುಗಳನ್ನು
ಎಲ್ಲ ಮರೆತು
ನೀನು ಕೇಳುವುದು ನನ್ನ ಮಾತುಗಳನ್ನೇ!”
-ಎಂದು ಕೊನೆಯಾದಂತೆ ಕಂಡರೂ, ಈ ಮೊದಲು ಅವಳು ಅಂದುಕೊಂಡಿದ್ದೇನು ಎಂದು ಗಮನಿಸಿದರೆ;
“ನಿನ್ನ ಎದೆಯಲ್ಲಿ
ಸಂಶಯದ ಬೆಕ್ಕೊಂದು
ಚಂಗೆಂದು ನಗೆಯುವುದು
ನನಗೆ ಕೇಳಿಸುತ್ತದೆ
ಆಗೆಲ್ಲಾ
ಎಲ್ಲರ ಹಾಗೆ ನೀನೂ ಒಬ್ಬ ಗಂಡಸು ಎಂಬುದನ್ನು
ತೋರಿಸಿ ಬಿಡುತ್ತೀಯ
ನಿನ್ನ ಸಿಡಿ ನುಡಿಗಳು ಕ್ಯಾಕ್ಟಸ್ ಮುಳ್ಳುಗಳಂತೆ
ನನ್ನ ಮನಸ್ಸನ್ನು ಇರಿಯತೊಡಗುತ್ತವೆ
ನನ್ನ ಅಸಹಾಯಕತೆ
ನಿನ್ನ ಕ್ರೂರ ಬಾಯಾರಿಕೆಯನ್ನು
ಇನ್ನಷ್ಟು ಹೆಚ್ಚಿಸುತ್ತದೆ
ಸುಮ್ಮನೆ ಕಾಯುತ್ತೇನೆ ನಾನು
ನೀನು ಎಂದಿನ ಮಧುರ ನುಡಿಗಳಲಿ
ಮಾತನಾಡುವ ಗಳಿಗೆಗೆ”
ಇವು ಬರಿಯ ವ್ಯಾಮೋಹದ, ಕಾಮನೆಯ ಅಥವ ಪ್ರಣಯದ ಆಹ್ವಾನದ ಅಂದಾದುಂದಿನ ಸವಕಳಿ ಸಾಲುಗಳಲ್ಲ, ಬದಲಿಗೆ ಸಂಗಾತಿಯ ನಿಷ್ಠೆ ಮತ್ತು ತನ್ನ ಹೊರತು ಅನ್ಯವನ್ನು ಕಾಣುವ ಸಂಗಾತಿಯ ಮೇಲಣ ಸಂಶಯಕ್ಕೆ ಸ್ವತಃ ಕೊಟ್ಟುಕೊಂಡ ಉತ್ತರವೂ ಆಗಿದೆ.
“ರೆಡ್ ವೈನ್ ವಿಷಾದ” ಕವಿತೆ ಬರಿಯ ಪದ್ಯವಲ್ಲದ ಒಂದು ಬಗೆಯ ಗಪದ್ಯವೂ ಹೌದು. ಸಣ್ಣಕತೆಯೂ ಹೌದು. ಒಂದು ರಾತ್ರಿ ಅವನ ಬರುವಿಗೆ ರೆಡ್ ವೈನಿನ ಜೊತೆ ಕಾಯ ತೊಡಗುವ ಅವಳು ಬೆಳಗ ಎಚ್ಚರದಲ್ಲಿ ಖಾಲಿ ಬಾಟಲನ್ನು ಕಾಣುತ್ತಾಳೆ. ಆದರೆ ರಾತ್ರಿ ನಡೆದುದೇನು ಎನ್ನುವ ಪ್ರಶ್ನೆಗೆ ಪದ್ಯದ ಓದು ಮಾತ್ರ ನಿಮಗೆ ಉತ್ತರಿಸಬಹುದು (ಎಲ್ಲ ಸ್ವಾರಸ್ಯವನ್ನೂ ಟಿಪ್ಪಣಿಕಾರನೇ ಹೇಳಿಬಿಟ್ಟರೆ ರಸಿಕನಿಗೆ ಬೇಸರ ಎನ್ನಿಸದೇನು?)
ಆದರೆ “ನಿರಾಳತೆ” ಎನ್ನುವ ಕವಿತೆ ಮಾತ್ರ ಈವರೆವಿಗೂ ಹೇಳಿದ ಕಾವ್ಯಕೃಷಿಗಿಂತ ಕೊಂಚ ಹೊರಳು ಹಾದಿಯಲ್ಲಿ ಹಾಯುತ್ತದೆ. ಮಧ್ಯಾಹ್ನದ ನಿರಾಳತೆಯ ಒಂದು ಮಳೆ ಕಾಲದಲ್ಲಿ ಅವಳನ್ನು ಕಾಣಬಂದ ಅವನನ್ನು ಬಲವಂತ ಮಾಡಿ ಹೊರ ಪ್ರಪಂಚದ ಸಂಗತಿಗಳಿಗೂ ಒಡ್ಡ ಬಯಸಿ ಕರೆದೊಯ್ಯುವ ಅವಳು, ಕಾಮನ ಬಿಲ್ಲ ಬಣ್ಣವನ್ನು ಕಾಣಿಸುತ್ತಾಳೆ. ಅವಳು ಮರದ ಕೊಂಬೆಯ ಮೇಲೆ ಕೂತಿದ್ದ ಹಕ್ಕಿಯೊಂದನ್ನು ಹಿಡಿಯ ಹೋಗಿ ಆ ಪಕ್ಷಿ ತಪ್ಪಿಸಿಕೊಂಡು ನೀರಿಗೆ ಬಿದ್ದೂ ಮತ್ತೆ ಛಕ್ಕನೆ ರೆಕ್ಕೆ ಫಡಫಡಿಸಿ ಹಾರಿದ್ದನ್ನು ಕಂಡಾಗ ಆ ಅವನ ಮನದ ಆಸೆಯನ್ನು ಅರಿಯುತ್ತಾಳೆ ಎನ್ನುವಾಗ ಯಾಕೋ ಮತ್ತೆ ಮೇಲ್ನೋಟದ ಪ್ರಣಯಕ್ಕೇ ಈ ಕವಿಯ ನಾಯಕಿಯೂ ಅರಸುತ್ತಾಳಾ ಅನ್ನಿಸುತ್ತದೆ.
ಆದರೆ “ಮೌನದ ನೆರಳು” ಪದ್ಯದಲ್ಲಿ ಪುನಃ
“ನಿನ್ನ ಮಾಂತ್ರಿಕ ಬೆರಳಿನ
ಸ್ಪರ್ಶಕ್ಕೆ ತಹತಹಿಸುತಿರುವೆನು
ಒಂದೇ ಮಾತಿನಲಿ ಉಲಿದು ಬಿಡು
ನನ್ನೀ ಆತ್ಮದಲಿ ಒಂದಾಗಿದ್ದೇನೆಂದು
ಆದಿ ಅಂತ್ಯಗಳಿಲ್ಲದ ಒಲುಮೆಯಾಗಿ
ನಿನ್ನೊಳಗೆ ಕರಗಿಬಿಡುವೆನು”
ಅನ್ನುವಾಗ ಮತ್ತೆ ಸ್ಪುರಿಸಿದ ಆ ಅದೇ ಗಂಧಕ್ಕೆ ಮೂಗು ಅರಳುವುದು ಸಹಜ ಮತ್ತು ಸ್ವಾಭಾವಿಕ ಕೂಡ.
“ಏಕಾಂತದಲ್ಲಿದ್ದಾಗಲೇ ನಿನ್ನ ಹಾಜರಿ
ಹೃದಯದೊಳಗೆ ಅಗ್ನಿಕುಂಡ ಹೊತ್ತಿಕೊಂಡಂತೆ
ನಿನ್ನೊಂದಿಗೆ ಕಳೆದ ದಿನಗಳು
ಯಾಕೆ ಕಾಡುತ್ತಿವೆ ಇಂದಿಗೂ…” ಎಂದು ಸುರುವಾಗುವ “ಅಮಾಯಕ” ಎನ್ನುವ ಕವಿತೆ,ಮುಗಿಯುವುದು ಹೀಗೆ;
“ಕಣ್ಣೆದುರೇ ಇದ್ದರೂ ಗುರುತು ಹಿಡಿಯಲಾರ ಅವನು
ಕೋಪ ತಾಪ ಸಿಟ್ಟು ಸೆಡ ಬದಿಗಿಟ್ಟ ಗಳಿಗೆ
ನಾನವನ ತೋಳಸೆರೆ ಎಂಬುದನ್ನು
ಅರಿಯದ ಅಮಾಯಕ”
ಇಲ್ಲಿ ಕವಿ ಬದುಕಿನಲ್ಲಿ ಅನಿವಾರ್ಯ ಬರುವ ಸಂಗತಿಗೆ ತಲೆಬಾಗುತ್ತಿದ್ದಾರೋ, ತಲೆ ಎತ್ತಿ ಪ್ರೀತಿ ಮತ್ತು ನಿಷ್ಠೆಗೆ ಬದ್ಧವಾಗದೇ ಬದುಕಿನ ಹಳವಂಡಗಳಲ್ಲಿ ಮರೆಯಾಗಿ ತನ್ನನ್ನು ಗುರುತಿಸದ ಇನಿಯನಿಗೆ ಬದುಕಿನಾಚೆಯ ಬದುಕ ಕಾಣಿಸುತ್ತಿದ್ದಾಳೋ ಅದು ಓದುಗನ ಗ್ರಹಿಕೆಗೆ ಬಿಟ್ಟ ಕಾಣ್ಕೆ.
“ರೂಹು ಅರಳಿದ ಕಾಲ” ಎಂಬ ವಿಶಿಷ್ಠ ರಚನೆಯಂತೂ ನನ್ನ ಓದಿನ ಪರಿಯನ್ನೇ ಕ್ಷಣಕಾಲ ಕಂಗೆಡಿಸಿತೆಂದರೆ ನೀವು ನಂಬಲೇ ಬೇಕು. ಏಕೆಂದರೆ ಇಂಥ ಪದ್ಯಗಳ ಅಸ್ತಿವಾರವೇ ಇದುವರೆಗೂ ಕನ್ನಡದ ಮಹಿಳಾ ಅಸ್ಮಿತೆಗೆ ತೆರೆದುಕೊಂಡ ಅಕ್ಕಮಹಾದೇವಿಯ ” ರೂಹು” ಎಂಬ ಶಬ್ದದ ಅಧ್ಬುತ ಮಾಂತ್ರಿಕತೆ ಮತ್ತು ಆ ಪದಕ್ಕಿರುವ ಅತಿ ವಿಶಿಷ್ಠ ಪ್ರಜ್ಞೆಯ ಪುರಾವೆ.
“ಮುಂಗಾರು ಮಳೆಯ ಕಾಲಕೆ
ಅವಳ ಮನದ ಅಂಗಳದಲಿ
ಅವನ ನೆನಪು ನುಗ್ಗಿ ಬರುತ್ತದೆ” ಎನ್ನುವ ಸಾಮಾನ್ಯ ಗ್ರಹಿಕೆಯಿಂದ ಮೊದಲಾಗುವ ಪದ್ಯ, ದಾರಿ ಸರಿದಂತೆ ದಾಟುತ್ತ ದಾಟುತ್ತ, ಕೊನೆಯಾಗುವುದು ಹೀಗೆ;
“ಈಗ ಮತ್ತೆ ಮುಂಗಾರಿನ ಒಂದು ದಿನ
ಗೊತ್ತು ಅವಳಿಗೆ ನಿರಾಸೆಗೊಳಿಸಿದ್ದಿಲ್ಲ
ಎಂದೂ ಅವನು ಬರಬಹುದು ಈಗವನು
ಯಾವ ಗಳಿಗೆಗೂ”
ಎನ್ನುವಾಗ ಪದ್ಯ ಮುಗಿದೇ ಹೋಯಿತಲ್ಲ ಎನ್ನುವ ಭಾವಕ್ಕಿಂತಲೂ ಬಹಳ ಕಾಲ ಉಳಿಯುವ ಕಡೆಯ ಸಾಲುಗಳು ಕಾಡುತ್ತಲೇ ಇರುತ್ತವೆ, ಥೇಟು ಅವಳ ಬಯಕೆಯ ಅವನಂತೆಯೇ! ಈ ಪದ್ಯಕ್ಕೆ ಫೇಸ್ಬಿಕ್ಕಿನ ಪುಟದಲ್ಲಿ ಖ್ಯಾತ ನಾಟಕಕಾರ ಡಿ ಎಸ್ ಚೌಗುಲೆ ಹೇಳಿದ ಮಾತನ್ನು ಇಲ್ಲಿ ನೆನೆಯದೇ ಇದ್ದರೆ ಅದು ಕೂಡ ತಪ್ಪಾಗುತ್ತದೆ. ಅವರು ಹೇಳುತ್ತಾರೆ:
“ಬಹು ಸಂಕೀರ್ಣವಾದ ಕವಿತೆ. ಇದರ ರಚನೆಯ ಸಂವಿಧಾನ ಸುಲಭ ಸಾಧ್ಯವಲ್ಲ.
ಹೆಣ್ಣು- ಗಂಡು ನೇಹಿಗರಾಗಿ ಅನುರಾಗಿಗಳಾಗಿ ಕಳೆವ
ಪ್ರಕೃತಿ ದತ್ತ ಸಂಗ,ನಿಸ್ಸಂಗದ ರೂಪಗಳು ರೂಹುಗಳಾಚೆ ಒಂದು ಗಾಢ ಅನುಭೂತಿ ಯನ್ನು ಕೊಡುತ್ತವೆ. ಪ್ರತಿಮೆ,ರೂಪಕಗಳು ಹೊಸರಚನೆ ಅನಿಸುತ್ತವೆ. ಆಧ್ಯಾತ್ಮಿಕ ಗುಂಗನ್ನು ಮಸ್ತಕದಲ್ಲಿ ಇರಿಸುತ್ತದೆ. ಕನ್ನಡದಲ್ಲಿ ಒಂದು ಅಪರೂಪದ ಕಾವ್ಯಾಭಿವ್ಯಕ್ತಿ
ಅಭಿನಂದನೆಗಳು”.
“ಬುದ್ಧನ ಪ್ರೀತಿ” ಎನ್ನುವ ಪದ್ಯ ಅಧ್ಯಾತ್ಮದ ನೆಲೆಯಲ್ಲಿ ಬುದ್ಧನನ್ನು ಧೇನಿಸಿದರೂ ಕೊನೆಯಲ್ಲಿ ಹೀಗೆ ಆಗುತ್ತೆ;
“ಉಳಿದ ಯಾರೂ ಮುಖ್ಯವಾಗದೆ
ನಾನು ಮತ್ತು ಅವನು ಮಾತ್ರ ಇರುವ ಲೋಕವದು”
ಎನ್ನುವಾಗ ಈಕೆಯ ಅಧ್ಯಾತ್ಮವೆಂದರೆ ಕೃಷ್ಣ ರಾಧೆಯರ, ಅಕ್ಕ ಚೆನ್ನನ, ಮೀರ ಮತ್ತು ಗಿರಿಧರನ ಪ್ರೀತಿಯಂತೆ ಕಾಮವಿಲ್ಲದ, ಪ್ರಣಯದ ಉನ್ಮಾದಕ್ಕಿಂತಲೂ ಮಿಗಿದಾದ ಧ್ಯಾನವಲ್ಲದೆ ಮತ್ತೇನು?
“ಇದೆಲ್ಲ ಯಾಕೋ ಅತಿಯಾಯಿತು” ಅನ್ನುತ್ತಾರೆ ರಾಮಾನುಜಮ್ ಒಂದು ಕಡೆ. ಇನ್ನು ಈ ಅಂಕಣದ ಓದುಗರು ಹಾಗೆ ಎನ್ನುವ ಮೊದಲು ಮತ್ತೊಂದು ಪದ್ಯದ ಕೆಲವು ಸಾಲುಗಳನ್ನು ಮತ್ತೆ ಹೇಳುತ್ತ ಈ ಟಿಪ್ಪಣಿ ಮುಗಿಸುತೇನೆ. ನಮಸ್ಕಾರ.
“ಮಧ್ಯಾಹ್ನದ
ಚುಮು ಚುಮು ಚಳಿಗೆ
ಬೆಚ್ಚಗಿನ ಹೊದಿಕೆ ಹುಡುಕುತ್ತಿದ್ದೇನೆ
ನಿನ್ನ ಸ್ಪರ್ಶ ತಬ್ಬಿ ಮಲಗಲು” (ಬೆಳಕಿನ ತುಣುಕು)
ವಿನಿಶಾ ಗೋಪಿನಾಥ್. ಮೂಲ ಕೋಲಾರ ಜಿಲ್ಲೆ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಬಿ.ಎ ಮತ್ತು ಪತ್ರಿಕೋದ್ಯಮ ಪದವಿ, ಕೆಲವು ಕಾಲ ಕೆಲವು ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿ ಸದ್ಯ ಗೃಹಿಣಿ.
ಪ್ರಕಟವಾಗಿರುವ ಮುಖ್ಯ ಪುಸ್ತಕಗಳು –
‘ನೀಲಿ ನಕ್ಷತ್ರ’ (ಕವನ ಸಂಕಲನ) ಹಾಗೂ ‘ಬೇಲಿ ಹೂ’ (ಕಥಾಸಂಕಲನ)ಈ ಕವಿಯ ಹಲವು ಕಥೆ ಮತ್ತು ಕವನಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ,
ಓಮನಸೇ, ಅಗ್ನಿ ಮುಂತಾದವಲ್ಲಿ ಪ್ರಕಟವಾಗಿವೆ.
ವಿ.ನಿಶಾ ಗೋಪಿನಾಥ್
ಅವರ ಕೆಲವು ಕವಿತೆಗಳು
೧. ಅಮಾಯಕ
ಏಕಾಂತದಲ್ಲಿದ್ದಾಗಲೇ ನಿನ್ನ ಹಾಜರಿ
ಹೃದಯದೊಳಗೆ ಅಗ್ನಿಕುಂಡ ಹೊತ್ತಿಕೊಂಡಂತೆ
ನಿನ್ನೊಂದಿಗೆ ಕಳೆದ ದಿನಗಳು
ಯಾಕೆ ಕಾಡುತ್ತಿವೆ ಇಂದಿಗೂ…
ಪ್ರೇಮಿಯಾದೆ, ಪ್ರೇಮಿಸುತ್ತಲೇ ಇರದಾದೆ
ದಾಸಿಯಾದೆ, ದಾಸಿಯಾಗಿಯೇ ಇರಲಾರೆ
ಎಂದೆ
ನಿನ್ನನ್ನು ಗೆಲ್ಲಬೇಕೆಂದು ಹೊರಟವಳಿಗೆ
ಆ ಭಾವವೇ ಭಾರವೆನಿಸತೊಡಗಿತು
ಮತ್ತೀಗ
ಏನಿದು ನನ್ನೊಳಗೆ ಮಗ್ಗುಲು ಬದಲಿಸುತ್ತಿರುವುದು
ಮೌನ ಮೀರಿದ ಮಾಯೆಯೇ
ಕೊಳ್ಳಿ ಇಡುವ ವಿರಹದುರಿಯೇ
ನಿನ್ನ ನಸುನಗೆ ಏಕೆ ಮರುಳು ಮಾಡುತ್ತಿತ್ತು ನನ್ನನು?
ಮಳೆಯ ಮುನ್ಸೂಚನೆ ಹೊತ್ತು ತರುತ್ತಿರುವ
ಈ ತಂಗಾಳಿಯಂತೆ?
ದಿನವೂ ನೀನು ಬಂದು ಹೋಗುತ್ತಿದ್ದುದಕ್ಕೆ
ಇಣುಕಿ ನೋಡುತ್ತಿದ್ದ ಆ ಚಂದಿರನೇ ಸಾಕ್ಷಿ
*
*
ನೋಡಿದ್ದಾನೆ ಅವನು –
ಬಣ್ಣದ ನಗೆಯಲಿ ನನ್ನನು ತೇಲಿ ಮುಳುಗಿಸಿದ್ದನ್ನು
ಕನಸುಗಳ ಗರಿಯನು ತುರುಬಿಗೆ ಸಿಕ್ಕಿಸಿದ್ದನ್ನು
ಮುತ್ತಿನ ಮಳೆಗೆ ಅಪ್ಸರೆಯಂತೆ ಬಳುಕಿದ್ದನ್ನು
ಮತ್ತೀಗ ನೋಡುತ್ತಿದ್ದಾನೆ-
ನಡು ಮನೆಯಲಿ ಉರಿಯುತ್ತಿರುವ
ಹಣತೆಯು ನಿಧಾನವಾಗಿ ಕರಗಿಹೋಗುತ್ತಿದೆ
ತಂಪು ಗಾಳಿಯು ಬಿಸಿಯಾಗಿ ಸುಡುತ್ತಿದೆ
ಕತ್ತಲಿಗೆ ಕಣ್ಣೀರು ಅಂಟಿಕೊಂಡಿದೆ
ಮೌನದಲಿ ಬೇಯುತಿರುವೆ
ಬಂದು ಕಂತುತ್ತಿರುವ ದೋಣಿಯನು
ಆಧರಿಸಿ ನಡೆಸು
ಪ್ರೀತಿಯ ನಿರಾಳತೆಯಲಿ ತೇಲಿಸು
*
*
ಅದೇನು ಅಟ್ಟಹಾಸ ನನ್ನವನಿಗೆ
ಸಾಗರದಲೆಗಳ ತಡೆದು ನಿಲ್ಲಿಸಿ
ನನ್ನ ವಿಳಾಸವ ಕೇಳುತ್ತಿದ್ದ
ಹುಣ್ಣಿಮೆಯ ರಾತ್ರಿಯಲ್ಲಿ ಚಂದಿರನ ತಡೆದು
ನನ್ನ ಹುಡುಕಿ ಕೊಡುವಂತೆ ತಾಕೀತು ಮಾಡುತ್ತಿದ್ದ
ನೆಲವ ಬಗೆಬಗೆದು
ನನ್ನ ಹೆಜ್ಜೆ ಗುರುತಿನ ಬೇರಿಗಿಳಿದು
ಅಳತೆ ಎಷ್ಟೆಂದು ಬೆದರಿಕೆಯೊಡ್ಡಿದ್ದ
ಎಲ್ಲಿಯೂ ಉತ್ತರ ಸಿಗದೆ
ಬಿರುಗಾಳಿಯಾಗಿ ಅಲೆಯುತ್ತಿದ್ದಾನೀಗ
ಒಮ್ಮೆ ಹರಿಯುತ್ತಿರುವ ಸಾಗರದಲಿ
ಇನ್ನೊಮ್ಮೆ ಚಂದಿರನ ಎದೆಯಲಿ
ಮಗದೊಮ್ಮೆ ಮಣ್ಣಿನ ಆಳದಲಿ
ಅಡಗಿ ತಪ್ಪಿಸಿಕೊಳ್ಳುತ್ತಿರುವೆ ನಾನು
ಕಣ್ಣೆದುರೇ ಇದ್ದರೂ ಗುರುತು ಹಿಡಿಯಲಾರ ಅವನು
ಕೋಪ ತಾಪ ಸಿಟ್ಟು ಸೆಡ ಬದಿಗಿಟ್ಟ ಗಳಿಗೆ
ನಾನವನ ತೋಳಸೆರೆ ಎಂಬುದನ್ನು
ಅರಿಯದ ಅಮಾಯಕ
೨.ರೂಹು_ಅರಳಿದ_ಕಾಲ
ಮುಂಗಾರು ಮಳೆಯ ಕಾಲಕೆ
ಅವಳ ಮನದ ಅಂಗಳದಲಿ
ಅವನ ನೆನಪು ನುಗ್ಗಿ ಬರುತ್ತದೆ
ಅಂದು ನಡುಹಗಲು ಬಿರುಮಳೆ ಜೋರು
ಮನೆ ಎದುರಿನ ಹೂದೋಟದಲಿ
ಹೂವುಗಳು ಮೈ ಬಿರಿದು ಸಂಭ್ರಮಿಸುತ್ತಿದ್ದವು
ಅದನ್ನು ನೋಡುತ್ತ
ಮಳೆಯಲ್ಲಿ ನೆನೆಯುತ್ತ
ಒದ್ದೆ ಮುದ್ದೆಯಾಗಿ
ಹರುಷ ಚಿಮ್ಮಿತು ಅವಳೊಳಗೆ
ಮನೆಯ ಒಳಗೋಡಿದ್ದಳು
ನಡುಹಗಲಲೂ ಕತ್ತಲು ಕವಿದಿತ್ತು
ಹಚ್ಚಿದಳು ಮೇಣದಬತ್ತಿ
ಒದ್ದೆಬಟ್ಟೆಯಲ್ಲಿ ತನ್ನ ಮೇಲೆ
ತಾನೇ ಮೋಹಗೊಂಡು ನಾಚಿನೀರಾದಳು
ಅವನು ಕಳ್ಳ ಹೆಜ್ಜೆಯಿಡುತ್ತ
ಒಳ ಬಂದುದು
ಅವಳರಿವಿಗೆ ಬಂದಿರಲೇ ಇಲ್ಲ
ಬಿರುಗಾಳಿಯಂತೆ ನುಗ್ಗಿ
ಹಿಂದಿನಿಂದ ಹಿಡಿದಪ್ಪಿ
ಸಿಹಿ ಕಂಗಳಲಿ ಎವೆಯಿಕ್ಕದೇ ನೋಡಿ
ಉಕ್ಕಿಸಿದ್ದ ಅವಳ ಮೊಗದಲ್ಲಿ
ಕೆಂಪು ನಾಚಿಕೆಯ ನದಿಯನ್ನು
ಮುಂದಿನದನು ನೆನೆನೆನೆದು
ನಿಂತಲ್ಲಿ ನಿಲಲಾಗದೇ
ಈಗಲೂ ಅದೇ ಮುಂಗಾರು ರಾಚುತಿರಲು
ಬಾಗಿಲ ಬಳಿ ನಿಂತು ನಿರೀಕ್ಷಿಸುವಳು ಅವನನ್ನು
ಇಲ್ಲೇ ಇದೇ ಮಂಚದಲಿ ಅವನು
ನವಿರಾಗಿ ಕೂರಿಸಿದ್ದು
ನೆಲದ ಮೇಲೆ ಕೂತವನೇ
ಪಾದಗಳಿಗೆ ಲೊಚಲೊಚನೆ ಮುತ್ತಿಕ್ಕಿದ್ದು
ತಪ್ಪಿಸಿಕೊಂಡು ಓಡಲು
ಹವಣಿಸಿದ ಅವಳು
ಅದೇಕೋ ತಟ್ಟನೇ ನಿಂತೇ ಬಿಟ್ಟಿದ್ದಳು
ಅವನು ಬಳಿ ಸಾರಲೆಂದೇ!
ಬಂದು ಸೊಂಟ ಬಳಸಲೆಂದೇ!
ನಡೆದದ್ದು ಅದೇ
ಎಲ್ಲವೂ ಅವಳೆಣಿಸಿದಂತೆಯೇ
ಕೋಣೆಯ ಆವರಣದಲ್ಲೆಲ್ಲೂ
ಅವನ ಬಿಸಿಯುಸಿರಿದೆ ಇಂದು
ಹಿಂಬಾಲಿಸಿ ಬಂದು
ಗೋಡೆಗೊರಗಿಸಿ ಅಪ್ಪಿಕೊಂಡನಲ್ಲ
ಅಲ್ಲಿ ಇನ್ನೂ ಆ ಕಲೆಯ ಗುರುತು ಇದೆ
ಎದೆಯೊಳಗೆ ಏನೋ ಕಲಕಿದಂತಾಗಿ
ಕಡಲೆದ್ದು ಮೊರೆತಂತಾಗಿ
ತಪ್ಪಿಸಿಕೊಳ್ಳಲೆತ್ನಿಸಿದವಳೇ
ಒಡ್ಡಿಕೊಂಡಿದ್ದಳು ಬೆತ್ತಲೆ ದೇಹವನ್ನು
ಅವನ ಬಿಸಿ ಮುತ್ತುಗಳ ಸುರಿಮಳೆಗೆ
ದೇಹದ ಅಂಗಾಂಗಗಳು
ಜ್ವಾಲಾಗ್ನಿಯಾಗಿ ಹೊತ್ತಿ ಉರಿದಿತ್ತು
ಹೊರಗೆ ಬಿರುಗಾಳಿಯ ರಭಸಕ್ಕೆ
ಬಿರುಮಳೆಯ ಹೊಡೆತಕ್ಕೆ
ಸರಭರನೆ ತೂಗಿದ್ದವು ಮರದ ಎಲೆಗಳು
ಮತ್ತದೇ ಅನುಭವಕೆ
ಮತ್ತದೇ ಲಜ್ಜೆಗೆ
ಹಾತೊರೆದಿದೆ ಅವಳ ಮನ
ಅದೆಂತಹ ಹಿತವಿತ್ತು
ಅವನ ಅಪ್ಪುಗೆಯಲಿ
ಬೆಚ್ಚಗಿನ ನೋವಿನಲ್ಲೂ
ನಲಿವಿನ ಉತ್ತುಂಗವಿತ್ತು
ಸೋಲನ್ನು ಅರಿಯದವರು
ಸೋತು ಗೆದ್ದಿದ್ದರು ಒಲವಿನಲ್ಲಿ
ದೀರ್ಘ ನಿಟ್ಟುಸಿರಿನ ಮಾದಕತೆಯಲ್ಲಿ
ತಬ್ಬಿ ಘಾಸಿಗೊಳಿಸಿದಷ್ಟೂ ಅವನು
ಅರಳಿದ್ದಳು ಅವಳು
ಪುಟಿವ ಚೆಂಡಿನಂತೆ
ಅವನ ತೋಳಗಳಲಿ ಕರಗುತ್ತ
ಪ್ರೀತಿಯಲಿ ಹೊಸ ಜೀವ ಪಡೆದಿದ್ದಳು
ಈಗ ಮತ್ತೆ ಮುಂಗಾರಿನ ಒಂದು ದಿನ
ಗೊತ್ತು ಅವಳಿಗೆ ನಿರಾಸೆಗೊಳಿಸಿದ್ದಿಲ್ಲ
ಎಂದೂ ಅವನು ಬರಬಹುದು ಈಗವನು
ಯಾವ ಗಳಿಗೆಗೂ.
೩. ಮನಸೆಂಬ_ಕುದುರೆ
ಈ ರಂಗು ರಂಗಿನ ಊರಲ್ಲಿ
ಕನಸುಗಳ ಹೊತ್ತ ಮನೆಗೆ ನಿಲ್ದಾಣವಿಲ್ಲ
ದಾರಿಗಳಲಿ ಕಡು ಇರುಳು ಸೀಳಲು
ಹೊತ್ತಿ ಧಗಧಗ ಉರಿವ ದೀವಟಿಗೆಗಳಿಲ್ಲ
ನಿನ್ನ ಕಣ್ಣು ಬೆಳಕೇ ಬೆಳ್ ಬೆಡಗು
ಮೌನ ನೂರು ನುಡಿಗಳಾಗಿ ಮೊಳಗಿತು
ನಿನ್ನ ನಗುವಿನ ಅಲೆಯ ದಡದುದ್ದ
ತಡವರಿಸಿ ನಡೆಯುವೆ ನಾನು
ಅಷ್ಟು ಸುಲಭವಲ್ಲ ಮನಸಿನ ಆಸೆಗಳಿಗೆ
ಏಣಿ ಜೋಡಿಸುವುದು
ಬಾನಿಗೆ ಚಿಮ್ಮಿ ಚಂದ್ರನ ಹಿಡಿವ
ಬಯಕೆ ಈಡೇರಿಸಿ ಕೊಳ್ಳುವುದು
ಕನಸಿನ ಕುಲುಮೆ ಇನ್ನೂ ಕುದಿಯುತ್ತಲೇ ಇದೆ
ಕೆರೆ ಕಟ್ಟೆ ಮೇಲೆ ನೆಗೆವೆ
ಗೆದ್ದ ಕೆಸರಲ್ಲಿ ಬಿದ್ದು ಮೈಕೈ ರಾಡಿ
ಬಿದ್ದು ಎದ್ದು ನಿಲ್ಲುವೆ
ಹದವಾದ ನಿನ್ನ ಎದೆ ಗದ್ದೆಯಲಿ
ಉತ್ತಿ ಬಿತ್ತಿ ಬೆಳೆಯುವ ಆಸೆ
ಮತ್ತೆ ಅದೇ ಪ್ರಶ್ನೆ ಕಿವಿಯಲಿ ಗುಂಯ್ ಗುಡುವುದು
ಮನಸಿನಾಳದ ಭಾವನೆಗಳಿಗೆ ನೆಲೆ ಎಲ್ಲಿ?
ಕನಸಿನ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ
ಮಿಣುಕು ಹುಳುಗಳು ಬೆಳಕು ನೀಡುತ್ತಿವೆ
ಹುಚ್ಚು ಮನಸಿನ ಕುದುರೆ ಹಿಡಿತಕ್ಕೆ ಸಿಗುವುದೆಲ್ಲಿ ?
ಕಟ್ಟಿ ಹಾಕುವುದು ಕಡು ಕಷ್ಟವೇ ಸರಿ
ಬಿಟ್ಟಲ್ಲೆಲ್ಲ ಹರಿದಾಡುವ ಅದನ್ನು ಹಿಡಿದು
ಜತನ ಜೋಪಾನವಾಗಿಡುವುದೋ ಹುಚ್ಚರಾಟ
ನಡೆಯುತ್ತಲೇ ಇದೆ ಹೋರಾಟ ನಮ್ಮಿಬ್ಬರ ನಡುವೆ
ನನ್ನೊಳಗಿನ ಮನವು ಅದೆಷ್ಟು ಸುಂದರ
ಎಂದು ಹಿಡಿದಿಟ್ಟು ಕೂರಿಸುವೆ ನೀನು
ಚಂದವಾಗಿ ಚಿತ್ರಿಸಲು ಪ್ರಯತ್ನಿಸುವೆ
ಭ್ರಮಿತಳಾಗದೆ ಹೊಗಳಿಕೆಗೆ
ವಾಸ್ತವತೆಗಿಳಿಯಲು ಕುದುರೆ ಎಂಬ
ಮನಸಿನ ಮೈಸುತ್ತ ಸಂಕೋಲೆಗಳ ಬಿಗಿದಿರುವೆ
.
ಬುದ್ಧನ_ಪ್ರೀತಿ
ನಾನು ಪ್ರೇಮಿ
ಅದೇ ನನ್ನ ಚೆಹರೆ
ನನ್ನ ಪ್ರಾಮಾಣಿಕ ನೆಲೆ
ನನ್ನ ಪ್ರೇಮ
ಸವಾಲುಗಳು ಧುತ್ತನೇ
ಎದುರು ನಿಲ್ಲುವವು
ಉತ್ತರ ನಿರೀಕ್ಷಿಸಿ
ಉಳಿದವರಿಗೆ
ಅಷ್ಟು ಹೃದಯಕೆ ಹಚ್ಚಿಕೊಂಡು ಯಾಕೆ
ಪ್ರೀತಿಸುತಾಳೆ ಜೀವದ ಹಂಗು ತೊರೆದು
ಅವರಿಗೆಲ್ಲ ಕುತೂಹಲ!
ಹೆಣ್ಣೆಂಬ ಕಾರಣ ಇರಬಹುದು ಅಥವಾ
ಪ್ರೇಮಿ ಎಂಬ ಕಾರಣಕ್ಕೂ ಇರಬಹುದು
ಅದೆಲ್ಲ ನನಗೆ ಮುಖ್ಯವಲ್ಲ
ಪ್ರೇಮದಲೂ ಬಲು ಹಠಮಾರಿ ಎಂದು
ತಿಳಿದಿರುವುದು ನನ್ನ ಇನಿಯನಿಗೆ ಮಾತ್ರ
ಕೊಂದು ಬಿಡುವಷ್ಟು ನೇರಾನೇರ
ದಿಟ್ಟ ಪುರುಷ ಎಚ್ಚೆತ್ತುಕೊಂಡಿರುತಾನೆ ಜಾಣ!
ತತ್ ಕ್ಷಣ ಬದಲಾಗಿರುವಂತೆ
ನಟಿಸುವನೆಂಬುದೂ ಗೊತ್ತು
ಉಳಿದಂತೆ ಸಭ್ಯ ಸುಸಂಸ್ಕೃತ
ಹೆಚ್ಚೇನು ಹೇಳುವುದಿಲ್ಲ ನಾನು
ಶಾಂತಳೂ ಮುಗ್ಧಳೂ ಎಂಬ
ನನ್ನ ಅಭಿಧಾನಗಳನ್ನು
ಅವನ ಹುಚ್ಚಾಟಗಳಿಗೆ ಕಡಿವಾಣ
ಬೀಳುವಾಗಲೇ ಅರಿತಿರುವನು
ಗೊತ್ತು ನನಗೆ ಗೊಂದಲವಾಗುವುದೂ ಇದೆ
ಒಮ್ಮೊಮ್ಮೆ ರಣಚಂಡಿಯಾಗಿ ಕೋಪದಲಿ ಬೆಂಕಿಯಂತೆ ಉರಿಯುವೆ
ಮತ್ತೊಮ್ಮೆ ಹಿಮ ಸುರಿದಂತೆ ತಣ್ಣಗಾಗುವೆ
ಆ ಕಳ್ಳ ಇನಿಯನಿಗೆ ತಿಳಿದಿವೆ
ನನ್ನೆಲ್ಲ ಒಳಗುಟ್ಟುಗಳು
ನನ್ನೊಳಗೆ ಉದ್ಭವಿಸಿ ದ್ರವಿಸುವ
ನೂರಾರು ಭಾವಗಳಿಗೆ ಸೋತು ಕರಗಿರುವೆ
ಹಲವು ಬಾರಿ
ಋತುವಿನಿಂದ ಋತುವಿಗೆ ಬದಲಾಗುವ
ಹೊಸಕಾಲದ ಗಂಡು ಅವನು
ಆತನ ಕೈಗೊಂಬೆಯಾಗಿ ಕುಣಿಯುವ
ನಾಣ್ಯವಾಗಿ ಕಾಣುವ ನನ್ನನು
ಬಿಟ್ಟು ಬಿಡು
ನಿನ್ನ ಹುರಿಗೊಂಡ ಪೌರುಷದ
ಯೌವನದ ಕ್ಷಣಗಳ ಸೊಕ್ಕನು
ನನ್ನ ಕುಗ್ಗಿಸುವ ಸುಡುವ ಕೋಪೋದ್ರಿಕ್ತ ನೋಟದ ದಾಳಿಯನು ನೆನಪಿಸುತ್ತಲೇ ಇರಬೇಕಾಗುತ್ತದೆ ನಾನು
ಬಾ ನಾವು ಕಳೆದ ಸವಿ ದಿನಗಳ
ಬುತ್ತಿ ಬಿಚ್ಚಿ ಉಣ್ಣೋಣ
ಸುಖದ ಸೊಗವಿನ ಉತ್ತುಂಗಕೆ ನೆಗೆದು
ರಾಗವ ನುಡಿಸೋಣ
ಹಕ್ಕಿ ರೆಕ್ಕೆ ಬಿಚ್ಚಿದ ಸ್ವಚ್ಛಂದ ಹಾರಾಟವ ಸ್ಮರಿಸೋಣ
ಬಯಲು ದಾರಿಯಲಿ ಕೈಗೆ ಸಿಕ್ಕ ಹೂಗಳ
ಹರಿದು ತಂದು ಪೋಣಿಸೋಣ
ಜೀವದುಂಬಿ ಅಸೂಯೆ ಮೀರಿ ಒಲವ
ಪರಿಮಳ ಹರಿಸೋಣ
ಅವನೊಳಗಿನ
ಬುದ್ಧನ ಪ್ರೀತಿಯ ಮರೆತಿಲ್ಲ ನಾನು
ಅಂದು ಅವನು ಮಹಾಮೌನಿ
ನೆಲದ ಹೆಣ್ಣಾದ ನನ್ನಂತರಂಗದಲಿ ಹಬ್ಬಿದ
ಪರಿಮಳದ ಮೇಲಷ್ಟೆ ಅವನ ಕಣ್ಣು
ಅದು ನಾನು ಸಂಭ್ರಮ ಪಡುವ ಘಳಿಗೆಗಳು
ಪ್ರೇಮಿಯಾಗಿ ಅವನೊಳಗೆ ಒಂದಾಗುವ ಬಾವಿಯೊಳಗೆ ಪ್ರೇಮ ನೀರು ಸೇದುವ ದಿನಗಳು
ನನ್ನ ಬದುಕಿನಲಿ ಘಟಿಸಿದ ಗುಟ್ಟುಗಳನ್ನೆಲ್ಲ
ಒಂದೂ ಬಿಡದೇ ಅವನ ಮಡಿಲಿಗೆ ಸುರಿದು ಬಿಡುವೆ
ತಪ್ಪಿಸಿಕೊಂಡು ಹೋಗದಂತೆ ಅವನ
ಕಳ್ಳ ಮನಸನೂ ಕಟ್ಟಿ ಹಾಕುವೆ
ಉಳಿದ ಯಾರೂ ಮುಖ್ಯವಾಗದೆ
ನಾನು ಮತ್ತು ಅವನು ಮಾತ್ರ ಇರುವ ಲೋಕವದು.
*************************************
ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.
ತುಂಬಾ ಅದ್ಭುತವಾದ ಕವನಗಳು ತುಂಬಾ ಇಷ್ಟ ಆಯಿತು ನಿಮ್ಮ ಕವನಗಳನ್ನು ಓದಿ . ಹೂ ಅರಳುವ ಕಾಲ ಇದು ಕೂಡ ನಿಜ ಜೀವನದ ಸ್ವರೂಪ
ನವಿರಾದ ಭಾವಗಳ ಹೂಗವಿತೆಗಳ ಚಂದದ ವಿಶ್ಲೇಷಣೆ.
ಡಿ.ಎಸ್ ರಾಮಸ್ವಾಮಿ ಅಪ್ಪಟ ಕಾವ್ಯ ಪ್ರೇಮಿ. ಹೊಸತನ್ನು, ಪ್ರತಿಭೆಯನ್ನು ಹುಡುಕುವುದು ಅವರ ಹಲವು ಹವ್ಯಾಸಗಳಲ್ಲೊಂದು. ನಿಶಾ ವಿ ಗೋಪಿನಾಥ್ಇ ಅವರ ಕವಿತೆಗಳ ಕುರಿತಾಗಿ ಇಲ್ಲಿ ಅವರು ಮಾಡಿರುವುದು ಅದನ್ನೇ.
ಇಲ್ಲಿರುವ ಕವಿತೆಗಳನ್ನು ಓದಿದೆ; ಸಂಜೆಯ ಮೌನವನ್ನು ಹೊದ್ದು ಇರುಳಿಗಾಗಿ ಕಾಯುತ್ತಿರುವ ಕವಿತೆಗಳಿವು…
ಇವುಗಳನ್ನೂ ಮೀರಿ ನಿಲ್ಲುವ ಕವಿತೆಗಳನ್ನು ಕವಯತ್ರಿ ಬರೆಯಲಿ…
ನಿಶಾರ ಕವನಗಳು out of box ಚಿಂತನೆಗಳನ್ನು ಒಳಗೊಂಡಿವೆ(ಗಂಡು- ಹೆಣ್ಣು, ಪ್ರಿಯಕರ- ಪ್ರಿಯತಮೆ ಇತ್ಯಾದಿ ಸಂಬಂಧಗಳನ್ನು ಕುರಿತಂತೆ). ಅನೇಕ ಪ್ರಗತಿಪರರೆನಿಸಿಕೊಂಡವರೂ ಗಂಡು-ಹೆಣ್ಣಿನ ಸಂಬಂಧಗಳ ಬಗೆಗೆ ಮುಟ್ಟಿದರೆ ಮುನಿಯಂತಾಗುತ್ತಾರೆ..!!ಗಾಣದ ಎತ್ತುಗಳಾಗುತ್ತಾರೆ !! ಗಂಡು-ಹೆಣ್ಣಿನ ವಿವಿಧ ತೆರನಾದ ಸಂಬಂಧಗಳು ಸುಂದರವೂ ಹೌದು; ಸಂಕೀರ್ಣವೂ ಸಹ. ರಾಮಸ್ವಾಮಿಯವರು ಕವಯಿತ್ರಿಯ ಪ್ರತಿಭೆಯನ್ನು ಗುರುತಿಸಿದ್ದಾರೆ; ಕಿವಿಮಾತುಗಳನ್ನು ಹೇಳಿದ್ದಾರೆ..ಒಳಿತಾಗಲಿ….
– ಮ ಶ್ರೀ ಮುರಳಿ ಕೃಷ್ಣ, ಬೆಂಗಳೂರು.
Wonderful lines. Great poetry. And many of the poems create a sense of ease and also a sense of intimacy and pain all at a single moment. For a new comer on the horizon Mias vinisha Gopinath usa very promising bright star who certainly will go a long way to be in the minds and hearts of Kannadigas. Congrats Vinisha. Keep doing this. You have a wonderful future ahead.
ವಿನಿಶಾ ಗೋಪಿನಾಥ್ ಎಂಬ ಈ ಕವಿಯತ್ರಿ/ಬರಹಗಾತಿ೯ ರವರು ಪ್ರೇಮಮಯಿ ಶೃಂಗಾರ ರಸಮಯ ಕಾವ್ಯವನ್ನು ಬರೆಯುವುದು ಇವರಿಗೆ ಕರಗತಮಾಡಿಕೊಂಡಿದ್ದಾರೆ ಮತ್ತು ಲೀಲಾಜಾಲವಾಗಿ ಕವಿತೆಯ ಸಾಲುಗಳನ್ನು ಬರೆಯಬಲ್ಲವರು
ಮುಖಪುಟದಲ್ಲಿ ನಿತ್ಯನಿರಂತರವಾಗಿ ಕಾವ್ಯಲಹರಿಯನು ಅರಳಿಸಿ ಓದುಗರನ್ನು/ ಸ್ನೇಹಿತರನ್ನು ತಮ್ಮ ಕಾವ್ಯ ಕಟ್ಟುವ ಶಕ್ತಿಯಿಂದಲೆ ಸೆಳೆದುಕೊಂಡಿದ್ದಾರೆ.
ವಿನಿಶಾ ಮೇಡಮ್ ನವರ ಪದ್ಯವು ಕಂಡರೆ ಸಾಕು ಕೊನೆಯವರೆಗೂ ಕೂಡ ಕುತೂಹಲಕಾರಿ ಓದಿಸಿಕೊಂಡು ಮನಸ್ಸಿಗೆ ಮುದ ನೀಡುವುದು ಅವರ ಕಾವ್ಯಲಹರಿಯ ಭಾವ.
ಮುಖಪುಟದಲ್ಲಿ ಪರಿಚಯವಾದ ಈ ಕವಿಗಳ ಬಗ್ಗೆ ಬಹಳಷ್ಟು ತಿಳಿಯದಿದ್ದರು ಅವರ ಪ್ರಕಟಿತ ಕೃತಿಗಳನ್ನು ಓದದಿದ್ದರು ಕೂಡ ಅವರ ಕಾವ್ಯ ಗಟ್ಟಿತನ ಪಡೆದುಕೊಂಡಿರುವುದರಿಂದ
ಅವರ ಕವಿತೆಗಳನ್ನು ಮುಖಪುಟದಲ್ಲಿ ಚಾಚು ತಪ್ಪದೆ ಓದುತ್ತಿರುವೆ
ಸಂಗಾತಿ ಪತ್ರಿಕೆಯಲ್ಲಿ ರಾಮಸ್ವಾಮಿ ರಂತಹ ಹಿರಿಯ ಬರಹಗಾರರು ಕವಿಗಳು ಬರೆದಿರುವ ಅವರ ಕವನ ಬಗೆಗೆಗಿನ ಲೇಖನವಂತೂ ವಿಭಿನ್ನ ರೀತಿಯಲ್ಲಿ ಪ್ರತಿಯೊಬ್ಬ ಓದುಗನನ್ನು ಆಕ೯ಷಿಸುತ್ತದೆ
ವಿನಿಶಾ ಗೋಪಿನಾಥ್ ರವರು ನನ್ನ ಕೋಲಾರ ಜಿಲ್ಲೆಯರೆಂಬ ಖುಷಿಯಿದೆ ಮುಂದೆ ನಾಡಿನ ಹೆಮ್ಮೆಯ ಕವಿಯತ್ರಿಯಾಗಿ ಬೆಳೆಯಲಿ ಎಂದು ಅವರ ಕವನಗಳ ಓದುಗನಾಗಿ ಆಶಿಸುವೆ.