ಪ್ರಬಂದ
ನಾನು ಈಜು ಕಲಿತ ಪ್ರಸಂಗ:
ಲಕ್ಷ್ಮಿನಾರಾಯಣ್ ಭಟ್ ಪಿ.
ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು ಭಾಷೆಯಲ್ಲಿ ‘ಪದ್ರಾಡ್’ ಅಂದರೆ ‘ಸದ್ದಿಲ್ಲದೆ ತಪ್ಪಿಸಿಕೊಂಡು ಓಡಿಹೋಗುವುದು’ ಎಂದು ಅರ್ಥ; ಅಲ್ಲದೇ ಅದು ಅಂಕೆ 12 ರ ಸಂಖ್ಯಾವಾಚಕ ಶಬ್ದವೂ ಹೌದು). ಹಿರಿಯರಿಗೆ ತಿಳಿಸಲೂ ಭಯ. ಆ ವಯಸ್ಸೇ ಅಂತಹ ಹುಚ್ಚಾಟದ್ದು. ಹೀಗಾಗಿ ನನಗೆ ಈಜು ಕಲಿಯಲು ಹಸಿರು ನಿಶಾನೆ ಸಿಗುವ ಸಂಭವವೇ ಇರಲಿಲ್ಲ.
ನಮ್ಮ ಊರಿನ ಕೋಟಿಕೆರೆ ಬಹು ದೊಡ್ಡದು. ಮನೆಯಿಂದ ಒಂದು ಕಿ.ಮಿ. ದೂರದಲ್ಲಿ ಹಸಿರು ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿತ್ತು. ಆ ಕೆರೆ ವಿಶ್ವವಿಖ್ಯಾತ — ಆ ಕಾಲಕ್ಕೆ ‘ನಮ್ಮ ಊರೇ ನಮ್ಮ ವಿಶ್ವ, ಸರ್ವಸ್ವ’ — ಆಗಿದ್ದರೂ ಮೊತ್ತಮೊದಲ ಬಾರಿಗೆ ನಮ್ಮ ಊರಿನವರೇ ಆದ ಪರಮೇಶ್ವರ ಹೊಳ್ಳರನ್ನು ನ್ಯಾಶನಲ್ ಚಾಂಪಿಯನ್ ಮಟ್ಟದವರೆಗೆ ತರಬೇತುಗೊಳಿಸಿದ ಮಹಾನ್ ಕೆರೆ ಎಂಬಭಿದಾನದಿಂದ ಕಂಗೊಳಿಸುತ್ತಿರ್ಪ ಒಂದು ಶುಭಮುಹೂರ್ತದಲ್ಲಿ ನನ್ನ ಪಾಲಿಗೂ ಅದು ಅನುಕೂಲವಾಗಿಯೇ ಒದಗಿ ಬಂತು. ಅದೇ ಪರಮೇಶ್ವರ ಹೊಳ್ಳರನ್ನು ತಯಾರು ಮಾಡಿದ ನಮ್ಮ ಹೈಸ್ಕೂಲಿನ ವ್ಯಾಯಾಮ ಶಿಕ್ಷಕರಾಗಿದ್ದ ಶ್ರೀ ಸುಬ್ರಾಯ ಶೆಟ್ಟಿಗಾರ್ ನನಗೂ ಈಜು-ಗುರುಗಳು. ಆದರೆ ಮನೆಯಲ್ಲಿ ಗೊತ್ತಾಗದಂತೆ ಈಜು ಕಲಿಯುವುದು ಹೇಗೆ? ಮನೆಯಿಂದ ಹೆಚ್ಚುವರಿ ಬಟ್ಟೆ ತರುವಂತೆಯೂ ಇಲ್ಲ. ಅದಕ್ಕಿದ್ದದ್ದೊಂದೇ ಪರಿಹಾರ. ಹಾಕಿದ್ದ ಅಂಗಿ ಚಡ್ದಿಯನ್ನೇ ಪುನರ್ಬಳಕೆ ಮಾಡುವುದು – ಮೈ, ತಲೆ ಒಣಗಿದ ಬಳಿಕ!
ಆ ಕೋಟಿಕೆರೆ ಎಂದರೆ ಸಾಮಾನ್ಯವೇನಲ್ಲ. ಅದರ ಸುತ್ತಲೂ ಹಲವು ಮನೆಗಳೂ ಇದ್ದುವು. ಹಳ್ಳಿಮನೆ ಎಂದ ಮೇಲೆ ಜನರಿಗಿಂತ ಹೆಚ್ಚು ಜಾನುವಾರುಗಳೂ – ಹಸು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವೆಲ್ಲ ಸೇರಿ ಒಂದು ಪ್ರಪಂಚ – ಇದ್ದುವು. ಅವುಗಳಿಗೂ ಜಳಕವಾಗಬೇಕಲ್ಲ. ಕೋಟಿಕೆರೆಯ ಒಂದು ತುದಿಯಲ್ಲಿ ದನಗಳೂ, ಹೆಚ್ಚಾಗಿ ಎಮ್ಮೆಗಳೂ ಅಲ್ಲಿ ಜಲವಿಹಾರದಲ್ಲೋ ಜಲಕೇಳಿಯಲ್ಲೋ – ಹಾಲುಕರೆಯುವ ಸಮಯವೊಂದನ್ನು ಬಿಟ್ಟು – ಸದಾ ತೊಡಗಿರುತ್ತಿದ್ದವು. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳ ಬಟ್ಟೆಬರೆ ತೊಳೆಯುವ ಕೆಲಸ, ಮೈ…(!) ತೊಳೆಯುವ ಕೆಲಸ – ಮರೆಯಲ್ಲಿ ‘ಸ್ನಾನ’ ಎಂಬುದು ಎಲ್ಲೋ ಕೆಲವರಿಗಷ್ಟೇ ಲಭ್ಯವಿದ್ದ ಘನಕಾರ್ಯ; ಹಾಗೆಯೇ ಮುಸುರೆಪಾತ್ರೆಗೆ ಬೂದಿ ಬಳಿದು ಶುದ್ಧೀಕರಿಸುವ ಕೆಲಸ, ಸ್ವಲ್ಪ ಮಟ್ಟಿಗೆ ಕೃಷಿಗಾರಿಕೆಗೂ – ಹೀಗೆ ಹಲವು ಹನ್ನೊಂದು ಕೆಲಸಗಳಿಗೆ ಈ ಕೋಟಿಕೆರೆಯೇ ಆಧಾರ. ಇವೆಲ್ಲದರ ಜೊತೆಗೆ ಕೋಟಿಕೆರೆಯ ಇನ್ನೊಂದು ತುದಿ ಈಜುವುದಕ್ಕೆ ಮೀಸಲು. ಹೀಗೆ ಕ್ಷೇತ್ರ ವಿಂಗಡಣೆಯ ವಿಷಯ ಸರ್ವರಿಗೂ ತಿಳಿದಿದ್ದ ಕಾರಣದಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರವರ ಕೆಲಸ-ಕಾರ್ಯಗಳು ಅದರದರ ಪಾಡಿಗೆ ಸ್ವಯಂಚಾಲಿತ ಕ್ರಿಯೆಯಂತೆ ನಡೆದುಕೊಂಡು ಹೋಗುತ್ತಿತ್ತು. ಯಾರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಮೀರುವಂತಿಲ್ಲದ ಒಂದು ಅಲಿಖಿತ ನಿಯಮ ಜಾರಿಯಲ್ಲಿತ್ತು ಮತ್ತು ಇದು ಎಲ್ಲರಿಗೂ ತಿಳಿದಿದ್ದ ಗುಟ್ಟು.
ಈಜು ಕಲಿಯುವ ಪ್ರಾಥಮಿಕ ಪಾಠ ಕೆರೆದಂಡೆಯ ಕಲ್ಲುಗಳನ್ನು ಆಧಾರಕ್ಕೆ ಹಿಡಿದುಕೊಂಡು ಕೈ ಕಾಲು ಬಡಿಯುವುದು. ಆಗ ಈಜಿನಲ್ಲಿ ಪರಿಣತಿ ಹೊಂದಿದ್ದ ಇತರ ಗೆಳೆಯರು ಸುಬ್ರಾಯ ಶೆಟ್ಟಿಗಾರ್ ಅವರ ಸುಪರ್ದಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ಶೆಟ್ಟಿಗಾರ್ ಮಾಸ್ತರ್ ತಮ್ಮ ಸ್ಟಾಪ್-ವಾಚ್ ಹಿಡಿದು ಟೈಮ್ ನೋಡುತ್ತಿದ್ದರು. ನನಗೋ ಇದನ್ನು ನೋಡಿ ಒಂಥರಾ ಹೊಟ್ಟೆಯುರಿ. ನಾನು ಅವರಂತೆ ಈಜುವುದು ಯಾವಾಗ? ಶೆಟ್ಟಿಗಾರ್ ಮಾಸ್ಟರ್ ಅವರ ಹೆಚ್ಚಿನ ಗಮನ ಆ ವಿದ್ಯಾರ್ಥಿಗಳ ಮೇಲೆ. ನನಗೆ ನನ್ನ ಮೇಲೂ, ನನ್ನಂತೆ ಕೈ ಕಾಲು ಬಡಿಯುತ್ತಿದ್ದ ಇನ್ನಿತರ ಬಾಲಪಾಠದ ವಿದ್ಯಾರ್ಥಿಗಳ ಮೇಲೂ ಒಂದು ಥರಾ ಅಸಹನೆ ಮೂಡುತ್ತಿತ್ತು. ಆದರೆ ವಿಧಿಯಿಲ್ಲ. ಬಹುಶಃ ಮಾಸ್ತರಿಗೆ ಇದು ಗೊತ್ತಾಯಿತೇನೋ ‘ಇರಿ ಮಾಡುತ್ತೇನೆ’ ಎಂದು ಎರಡನೆ ಬಾಲಪಾಠ –- ಲೆಸನ್ ನಂಬರ್ ೨ – ಶುರು ಮಾಡಿದರು: ಹಾಗೆಯೇ ಕೈಕಾಲು ಬಡಿಯುತ್ತಾ ಅರ್ಧತಲೆಯನ್ನು ನೀರಿಗೆ ಮುಳುಗಿಸಿ ಉಸಿರು ತೆಗೆದುಕೊಳ್ಳಲು ಮಾತ್ರ ಮುಖ ಒಂದು ಬದಿಗೆ ವಾಲಿಸಿ ಉಸಿರೆಳೆದುಕೊಂಡು ತಕ್ಷಣ ಮತ್ತೆ ಅರ್ಧತಲೆ ಮುಳುಗಿಸಿ ಇನ್ನೊಂದು ದಿಕ್ಕಿಗೆ ತಲೆ ವಾಲಿಸಿ ಉಸಿರೆಳೆದುಕೊಳ್ಳುವುದು. ಆಗ ಕೈಕಾಲು ಬಡಿಯುವುದನ್ನು ನಿಲ್ಲಿಸುವಂತಿಲ್ಲ! ಇದನ್ನು ಒಂದೆರಡು ಬಾರಿ ಮಾಡುವಷ್ಟರಲ್ಲಿ ನಾನು ಸಾಕಷ್ಟು ನೀರು ಕುಡಿದದ್ದಾಯಿತು, ಅಲ್ಲದೆ ತಲೆ ಮುಳುಗಿಸುವಾಗ ಕೈಕಾಲು ಬಡಿಯುವುದು ನಿಲ್ಲುತ್ತಿತ್ತು; ಕೈಕಾಲು ಬಡಿಯುತ್ತಿದ್ದರೆ ತಲೆ ಮುಳುಗುತ್ತಿರಲಿಲ್ಲ.ಒಳ್ಳೇ ಪೇಚಾಟಕ್ಕೆ ಬಂತು. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ. ಇದನ್ನು ಆದಷ್ಟು ಬೇಗನೆ ಕಲಿಯದಿದ್ದರೆ ಈಜಲು ಸಾಧ್ಯವಿಲ್ಲ ಎಂಬ ಜ್ಞಾನೋದಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಮಾಡಿದ ಮೇಲೆ ಮಾಸ್ತರಿಗೆ ದುಂಬಾಲು ಬಿದ್ದು ಮುಂದಿನ ಪಾಠ ಹೇಳಿ ಕೊಡಿ ಅಂತ ಅವರನ್ನು ಪೀಡಿಸಿದೆ. ಮೊದಲಿನಿಂದಲೂ ನನಗೆ ತಾಳ್ಮೆ ಸ್ವಲ್ಪ ಕಡಿಮೆಯೇ. ಎಲ್ಲವೂ ಬೇಗ ಬೇಗ ಆಗಬೇಕು. ಆಗೆಲ್ಲಾ ‘ಏನು ಆರು ತಿಂಗಳಿಗೆ ಹುಟ್ಟಿದ ಹಾಗೆ ಮಾಡುತ್ತಿ?’ ಎನ್ನುವ ವಾಡಿಕೆಯ ಚುಚ್ಚುಮಾತು ನನ್ನೆದೆಗೆ ಚುಚ್ಚಿದರೂ ನಾನದನ್ನು ‘ಡೋಂಟ್ ಕೇರ್’ ಮಾಡುತ್ತಿದ್ದೆ! ಸರಿ ಮುಂದಿನ ಪಾಠ: ಎರಡು ಪೊಟ್ಟು ತೆಂಗಿನಕಾಯಿಗಳನ್ನು ಒಟ್ಟಿಗೆ ಚಿಕ್ಕ ಹಗ್ಗದ ಸಹಾಯದಿಂದ ಜೋಡಿಸಿ ಹೊಟ್ಟೆಗೆ ಆಧಾರವಾಗಿಟ್ಟುಕೊಂಡು (ಇವು ನಮ್ಮನ್ನು ನೀರಲ್ಲಿ ಮುಳುಗದಂತೆ ತಡೆಯುತ್ತವೆ ಮತ್ತು ಇದು ಈಜು ಕಲಿಯಲು ಎಲ್ಲರೂ ಬಳಸುತ್ತಿದ್ದ ಅತೀ ಸಾಮಾನ್ಯ ಸಾಧನ, ಅದಿಲ್ಲದಿದ್ದರೆ ಉದ್ದದ ಬಾಳೆದಿಂಡೂ ಇದೆ ರೀತಿ ಆಸರೆಯಾಗುತ್ತಿತ್ತು.) ಕಡಿಮೆ ಆಳದ ನೀರಿನಲ್ಲಿ ಈಜುವ ಅಭ್ಯಾಸ ಮಾಡುವುದು. ಆಗ ಚೆನ್ನಾಗಿ ಈಜು ಗೊತ್ತಿದ್ದ ಇತರ ಮಕ್ಕಳು ನಮ್ಮ ಸುತ್ತ ಈಜುತ್ತಾ ಹುರಿದುಂಬಿಸುತ್ತಿದ್ದರು. ಕೆಲವೊಮ್ಮೆ ನಮಗೆ ಅರಿವೇ ಆಗದಂತೆ ಈ ಪೊಟ್ಟು ತೆಂಗಿನಕಾಯಿಗಳನ್ನು ತಪ್ಪಿಸಿ ನಾವು ಈಜುವಂತೆ ಮಾಡುತ್ತಿದ್ದರು. ಆದರೆ ಈ ಆಸರೆ ತಪ್ಪಿದೆ ಎಂದು ತಿಳಿದ ತಕ್ಷಣ ಕೈಕಾಲು ಬಡಿಯುವುದು ನಿಂತು ಮುಳುಗುವ ಭಯದಲ್ಲಿ ಇನ್ನಷ್ಟು ನೀರು ಕುಡಿದು ದಡದ ಕಡೆಗೆ ಈಜುವುದಲ್ಲ, ಹಾರುವುದು ಎಂದರೂ ಸರಿಯೇ – ಆಗುತ್ತಿತ್ತು. ಹೀಗೆ ನಿಧಾನವಾಗಿ ಈಜುವುದು ಅಭ್ಯಾಸವಾಯಿತು. ಆಮೇಲೆ ಕೇಳಲುಂಟೇ! ‘ಭಳಿರೇ ಪರಾಕ್ರಮ ಕಂಥೀರವ’ ಎಂದು ‘ಡೈವ್’ ಮಾಡುವುದರಿಂದ ಹಿಡಿದು ಫ್ರೀ-ಸ್ಟೈಲ್, ಬ್ಯಾಕ್ ಸ್ಟ್ರೋಕ್ ಇತ್ಯಾದಿಗಳಲ್ಲಿ ಪಳಗಿದ್ದುಂಟು. ಆದರೆ ಇದನ್ನು ಸ್ಪರ್ಧೆಯ ಮಟ್ಟಕ್ಕೆ ಮುಂದುವರಿಸುವುದಕ್ಕಾಗಲಿಲ್ಲ. ಇದರಿಂದ ಊರೇನೂ ಮುಳುಗಿಹೋಗಿಲ್ಲ ಅಥವಾ ದೊಡ್ಡ ನಷ್ಟ ಯಾರಿಗೂ ಏನೂ ಇಲ್ಲ. ಇರಲಿ ಬಿಡಿ.
ನನ್ನ ಜೊತೆ ಈಜಿಗೆ ಸಾಥ್ ಕೊಡುತ್ತಿದ್ದ ಒಬ್ಬ ಸಹಪಾಠಿ ಶೇಕ್ ಹಸನ್ ಸಾಹೇಬ್. ಹೀಗೆ ಹೇಳಿದರೆ ಹೆಚ್ಚಿನವರಿಗೆ ತಿಳಿಯಲಾರದು. ‘ವಿಟ್ಲ ಹಸನ್’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ನಾನು ಅವನ ಮನೆಗೆ, ಅವನು ನಮ್ಮ ಮನೆಗೆ ಬಂದು ಹೋಗುವುದು ಮಾಮೂಲಾಗಿತ್ತು. ಅವನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆ ಕಾಲದಲ್ಲಿ ನಮ್ಮಿಬ್ಬರಿಗೂ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ಪರಸ್ಪರ ಪ್ರೀತಿ, ವಿಶ್ವಾಸಗಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತದ್ದು ಒಂದು ಸುಖಾನುಭವ. ಜೊತೆಗೆ ಹಸನ್ ಕೂಡಾ ನನ್ನೊಂದಿಗೆ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ. ನಾವು ರಿಹರ್ಸಲ್-ಗೂ ಜೊತೆಯಲ್ಲೇ ಹೋಗುತ್ತಿದ್ದೆವು. ನಾವು ಹತ್ತನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ (ಆಗೆಲ್ಲಾ ರಾತ್ರಿಪೂರ್ತಿ ಬೆಳಗಾಗುವ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾತ್ರಿ ಎರಡರ ಬಳಿಕ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹೀಗೆ ನಡೆಯುತ್ತಿತ್ತು. ಹಳ್ಳಿಯ ಜನರು ಇದಕ್ಕೆ ತಯಾರಾಗಿಯೇ ಬರುತ್ತಿದ್ದರು.) ನಮ್ಮ ಮಾಸ್ತರ್ ಮಹಾಬಲ ರೈ ಅವರು ಬರೆದು ನಿರ್ದೇಶಿಸಿದ ತುಳು ನಾಟಕ ‘ಲಾಟ್ರಿ ಲಕ್ಕಪ್ಪೆ ದಿವಾಳಿ ದೂಮಪ್ಪೆ’ ದಲ್ಲಿ ನನ್ನದು ಲಕ್ಕಪ್ಪನ ಪಾತ್ರ. ದೂಮಪ್ಪನ ಪಾತ್ರ ಬಹುಶಃ ಹಸನ್ ಮಾಡಿದ್ದ ಅಂತ ನೆನಪು. ಇರಲಿ, ತಿರುಗಿ ಮತ್ತೆ ನನ್ನ ಈಜು ಪುರಾಣಕ್ಕೆ ಬರೋಣ.
ನಾನು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಸನ್ ಮನೆಗೆ ಬಂದು (ನಮ್ಮ ಮನೆಯಲ್ಲಿ ಏನೋ ಒಂದು ಸುಳ್ಳು ಹೇಳಿ; ಏನದು ಸುಳ್ಳು ಸಬೂಬು ಈಗ ನೆನಪಾಗುತ್ತಿಲ್ಲ) ಇನ್ನೂ ಮಲಗಿಯೇ ಇರುತ್ತಿದ್ದವನನ್ನು ಎಬ್ಬಿಸಿ, ಬಳಿಕ ಕಾರಿನ ಹಳೆ ಟ್ಯೂಬ್ (ಅದು ಅವನ ಮಾವನ ಕಾರಿನದ್ದು) ಹಿಡ್ಕೊಂಡು ನಿದ್ದೆಗಣ್ಣಿನಲ್ಲಿ ಒಂದು ಕಿಲೋ ಮೀಟರ್ ನಡ್ಕೊಂಡು ಹೋಗಿ ಈಜು ಕ್ಲಾಸಿಗೆ ಮೊದಲು ಹಾಜರು ಹಾಕುತ್ತಿದ್ದೆವು. ಪೊಟ್ಟು ತೆಂಗಿನ ಕಾಯಿ, ಬಾಳೆದಿಂಡುಗಳಿಂದ ಮೇಲ್-ಬಡ್ತಿ ಕಾರಿನ ಹಳೆ ಟ್ಯೂಬ್. ಇದರ ಮಧ್ಯದಲ್ಲಿ ಕೂತರೆ ಯಾವ ಭಯ, ಸುಸ್ತು ಇಲ್ಲದೆ ಬೇಕಾದಷ್ಟು ಹೊತ್ತು ನೀರಿನಲ್ಲಿ ಖುಷಿ ಬಂದಂತೆ ವಿಹರಿಸಬಹುದಾಗಿತ್ತು. ಆದರೆ ನಮ್ಮ ಶೆಟ್ಟಿಗಾರ್ ಮಾಸ್ತರಿಗೆ ಇದನ್ನು ಕಂಡರೆ ಅಷ್ಟಕ್ಕಷ್ಟೇ. ಮಕ್ಕಳು ಈಜು ಕಲಿಯುವುದು ಬಿಟ್ಟು ಜಲವಿಹಾರ ಮಾಡುತ್ತಾ ಕಾಲಕಳೆಯುತ್ತಾರೆ ಎಂದು ಅವರಿಗೆ ಅನಿಸುತ್ತಿತ್ತು. ಮತ್ತು ಅದು ಸತ್ಯವೂ ಆಗಿತ್ತು.
ಅಜಿತ್ ಕುಮಾರ್ ರೈ ಕೂಡಾ ಈ ಈಜು ಕ್ಲಾಸಿನ ಸದಸ್ಯನೇ. ಇವರಿಬ್ಬರು ಮತ್ತು ಗಣಪತಿ ಭಟ್ (ಉಳಿದವರ ಹೆಸರು ನೆನಪಾಗುತ್ತಿಲ್ಲ) ಮೈಸೂರು ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಟ್ರೋಫಿ ಹಿಡಿದು ಮೆರೆದ ಘಟನೆ ಒಂದು ರೋಚಕ ಕಥೆ.
ಈ ಕೋಟಿಕೆರೆಗೆ ಬರಬೇಕಾದರೆ ನನಗೆ ಎರಡು ದಾರಿಗಳಿದ್ದವು. ಒಂದು ಜಟಾಧಾರಿ ಕೆರೆದಂಡೆ ಮೇಲೆ ಸಾಗಿ ಸದಾ ನೀರು ಹರಿಯುವ ಒಂದು ಸಣ್ಣ ತೋಡಿನಲ್ಲಿ ಸ್ವಲ್ಪ ದೂರ ನಡೆದು ದಾಟಿ ಬರುವುದು – ಇದು ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು – ಮಳೆ ಬರುತ್ತಿದ್ದ ದಿನಗಳಲ್ಲೂ ಎಷ್ಟೋ ಬಾರಿ ನಾನು ಈಜು ಹೊಡೆಯುತ್ತಿದ್ದೆ. ಆಗೆಲ್ಲಾ ಸಾಮಾನ್ಯವಾಗಿ ನಾನು ಒಂಟಿಯೇ. ಇನ್ನೊಂದು ದಾರಿ ನಮ್ಮ ಹೈಸ್ಕೂಲ್ ಬದಿಯಿಂದ ಗದ್ದೆಗಳನ್ನು ಹಾದು ನನ್ನ ಸಹಪಾಠಿ ಸುಬ್ರಹ್ಮಣ್ಯ ಹೊಳ್ಳನ (ಪರಮೇಶ್ವರ ಹೊಳ್ಳರ ಖಾಸಾ ತಮ್ಮ – ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ದುರದೃಷ್ಟವಶಾತ್ ಬೈಕ್ ಆಕ್ಸಿಡೆಂಟ್-ನಲ್ಲಿ ತೀರಿಹೋದ) ಮನೆಗೆ ಬಂದು ಅವನೊಂದಿಗೆ ಕೋಟಿಕೆರೆಗೆ ಬರುವ ಬಳಸು ದಾರಿ. ಅವನು ನನ್ನೊಂದಿಗೆ ಬರುತ್ತಾನೆ ಎನ್ನುವ ಕಾರಣಕ್ಕೆ ನಾನು ಈ ಬಳಸು ದಾರಿಯನ್ನೇ ಹೆಚ್ಚು ನೆಚ್ಚಿದ್ದೆ. ಈಜುವಿಕೆಯಲ್ಲಿ ಸಾಧನೆ ಮಾಡಿದ ನನ್ನ ಇನ್ನೊಬ್ಬ ಸಹಪಾಠಿ ಕಾಶೀಮಟದ ಗಣಪತಿ ಭಟ್. ಇವನೊಂದಿಗೆ ತಳುಕುಹಾಕಿಕೊಂಡ ನೆನಪು ನಾನು ಏಳನೆಯ ತರಗತಿಯಲ್ಲಿ ಇದ್ದಾಗ ಜೀವಂಧರ ಮಾಷ್ಟ್ರ ನಿರ್ದೇಶನದ ‘ಕುರುಕ್ಷೇತ್ರ’ ನಾಟಕ. ಅದರಲ್ಲಿ ಗಣಪತಿಯದ್ದು ಕೌರವನ ಪಾತ್ರ, ನನ್ನದು ಬಲರಾಮನ ಪಾತ್ರ. ನಾಟಕದ ತರಬೇತಿ ಸಮಯದಲ್ಲಿ ಮಾತು ಮರೆತರೆ ಜೀವಂಧರ ಮಾಸ್ತರಿಗೆ (ನಮ್ಮ ಊರಿನ ಎರಡೋ ಮೂರೋ ಜೈನ ಮನೆಗಳಲ್ಲಿ ಇವರದೂ ಒಂದು; ಇನ್ನೊಂದು ಜೈನ ಬಸದಿಯ ಇಂದ್ರ ಅವರದು.) ಅಸಾಧ್ಯ ಸಿಟ್ಟು. ಕೌರವನ ಗದೆ, ಬಲರಾಮನ ಹಲಾಯುಧಗಳನ್ನು ನಾವು ನಮ್ಮ ನಮ್ಮ ಕೈಯಲ್ಲಿ ಇದೆ ಎಂದೇ ಭಾವಿಸಿಕೊಂಡು ರಿಹರ್ಸಲ್ ನಡೆಸುತ್ತಿದ್ದೆವು. ನಾಟಕದ ದಿನ ನನಗೆ ಸಣ್ಣಗೆ ಜ್ವರ. ಇದು ಮಾಸ್ತರಿಗೆ ಗೊತ್ತಾದರೆ ಫಜೀತಿ ಎಂದು ಸಾಧ್ಯವಾದಷ್ಟು ಉಮೇದು ತೋರಿಸುತ್ತಿದ್ದೆ. ಮೇಕಪ್ ಎಲ್ಲಾ ಮುಗಿದು ನಾಟಕ ನಡೆಯುತ್ತಿದೆ. ಆದರೆ ನನ್ನ ಹಲಾಯುಧ ಮಾತ್ರ ಕಾಣೆಯಾಗಿದೆ; ಅದನ್ನು ತಂದೇ ಇಲ್ಲವೋ ಅಥವಾ ಉಳಿದ ಪರಿಕರಗಳೆಡೆಯಲ್ಲಿ ಎಲ್ಲಿ ಮರೆಯಾಗಿತ್ತೋ ಈಗ ನೆನಪಿಗೆ ಬರುತ್ತಿಲ್ಲ. ಆಗ ಜೀವಂಧರ ಮಾಸ್ಟರ್ ಅಲ್ಲೇ ಇದ್ದ ಒಂದು ಮರದ ರೀಪು ತೆಗೆದು ನನ್ನ ಕೈಯಲ್ಲಿ ಕೊಟ್ಟು ‘ಇದೇ ಹಲಾಯುಧ, ಬೇಗ ಹೋಗು’ ಎಂದದ್ದು, ನಾನು ಅದನ್ನೇ ಹಿಡಿದುಕೊಂಡು ಹೋಗಿ “ಇದೋ ನನ್ನ ಈ ಹಲಾಯುಧದಿಂದ ನಿನ್ನ ಶತ್ರುಗಳನ್ನೆಲ್ಲಾ ಕ್ಷಣಮಾತ್ರದಲ್ಲಿ ನಾಶಮಾಡುತ್ತೇನೆ” ಎಂದು ಕೌರವನಲ್ಲಿ ಹೇಳಿದಾಗ ಸಭೆ ಗೊಳ್ಳೆಂದು ನಕ್ಕದ್ದು, ನನ್ನ ಉತ್ಸಾಹವೆಲ್ಲಾ ಝರ್ರೆಂದು ಇಳಿದದ್ದು, ನಾನು ಹಾಗೋ ಹೀಗೋ ನನ್ನ ಸಂಭಾಷಣೆಯನ್ನು ಒಪ್ಪಿಸಿ ಸಿಟ್ಟು, ಅವಮಾನ, ಬೇಸರದಿಂದ ಗ್ರೀನ್ ರೂಮಿಗೆ ಓಡಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಇಂದು ಜೀವಂಧರ ಮಾಸ್ತರು ಬದುಕಿ ಉಳಿದಿಲ್ಲ. ಆ ನಾಟಕದ ಸ್ಟೇಜೂ ಇಲ್ಲ! ಆ ಜಾಗದಲ್ಲಿ ನನ್ನ ಇನ್ನೊಬ್ಬ ಸಹಪಾಠಿ — ಇಂದು ದೊಡ್ಡ ಉದ್ಯಮಿಯಾಗಿ ಎತ್ತರಕ್ಕೆ ಬೆಳೆದು ನಿಂತಿರುವ ಅಜಿತ್ ಕುಮಾರ್ ರೈ — ಅವನ ತಂದೆ-ತಾಯಿಯರ ನೆನಪಿಗೆ ಕಟ್ಟಿಸಿದ ಎರಡು ಮಹಡಿಗಳ ಹತ್ತು ಕ್ಲಾಸ್ ರೂಮ್-ಗಳ ಭವ್ಯ ಸೌಧ ತಲೆ ಎತ್ತಿ ನಿಂತಿದೆ. ಇದೂ ನನಗೆ ಒಂದು ಅತೀ ಹೆಮ್ಮೆಯ ವಿಷಯ. ಜೀವಂಧರ ಮಾಷ್ಟ್ರ ಆತ್ಮಕ್ಕೆ ಜಿನನಾಥ ಸದ್ಗತಿ ಕೊಟ್ಟೇ ಕೊಟ್ಟಿರುತ್ತಾನೆ ಎಂಬ ನಂಬಿಕೆ ನನ್ನದು.
ಇನ್ನೂ ಒಂದು ಕುತೂಹಲದ ವಿಷಯವೆಂದರೆ ನಾನು ಈಗಾಗಲೇ ಹೇಳಿದ ಆ ಜಟಾಧಾರಿ ಕೆರೆಯದ್ದು! ಇದು ಒಂದು ಮರಗಳ ತೋಪಿನ ನಡುವೆ ಇದ್ದು ಸುತ್ತಮುತ್ತಲಿನ ನಿಶಬ್ದದಿಂದಲೂ (ಅಲ್ಲೇ ಸಮೀಪದಲ್ಲಿ ಒಂದೆರಡು ಮನೆಗಳು ಇದ್ದರೂ), ಆ ಕೆರೆಯಲ್ಲಿ ದೊಡ್ಡ ಜಟೆ(ಡೆ)ಯ ಭೂತ ಇದೆ ಎಂಬ ಭಯದಿಂದಲೂ ಸ್ವಲ್ಪ ಮಟ್ಟಿಗೆ ನನಗೆ ಅಗಮ್ಯವೇ ಆಗಿತ್ತು. ಆದರೂ ಕೆಲವೊಮ್ಮೆ ಕುತೂಹಲ ತಡೆಯದೆ ಮಧ್ಯಾಹ್ನದ ವೇಳೆ (ಭೂತ ಏನಿದ್ದರೂ ಬೆಳಕು ಇರುವಾಗ ಕಾಣಿಸದು ಎಂಬ ನಂಬಿಕೆಯಿಂದಲೂ, ಕಂಡರೂ ಕಾಣಿಸಬಹುದೇನೋ ಎಂಬ ಸಣ್ಣ ನಿರೀಕ್ಷೆಯಿಂದಲೂ, ಹಗಲಾದದ್ದರಿಂದ ಅಷ್ಟೇನೂ ಹೆದರಬೇಕಿಲ್ಲ ಎಂಬ ಭಂಡ ಧೈರ್ಯದಿಂದಲೂ) ಆ ದಾರಿಯಾಗಿ ಹೋಗುತ್ತಿದ್ದೆ. ಆದರೆ ಒಂದು ದಿನವೂ ಈ ಜಟಾಧಾರಿ ಭೂತ ನನಗೆ ಮುಖಾಮುಖಿಯಾಗಿದ್ದು ಇಲ್ಲವೇ ಇಲ್ಲ. ಆದರೆ ಅದು ನನ್ನ ಮನೋಭೂಮಿಯಲ್ಲಿ ಇಂದಿಗೂ ಅದೇ ನನ್ನ ಕಲ್ಪನೆಯ ರೌದ್ರಭೀಕರ ರೂಪದಲ್ಲಿ ಸುಳಿದಾಡುತ್ತಿದೆ ಬಾಲ್ಯದ ನೆನಪಿನ ಭದ್ರಕೋಟೆಯಲ್ಲಿ.
ಈ ಜಟಾಧಾರಿ ಕೆರೆ ಇನ್ನೊಂದು ವಿಶೇಷಕ್ಕೂ ಸಾಕ್ಷಿ. ಅದು ನಮ್ಮ ಊರಿನ, ಅಂದರೆ, ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ‘ಮೃಗಬೇಟೆ – ವನಭೋಜನ’ ಸವಾರಿ/ಪೂಜೆ ಇದೇ ಜಟಾಧಾರಿ ಕೆರೆಕಟ್ಟೆಯ ಪೀಠದಲ್ಲಿ ನಡೆಯುತ್ತಿತ್ತು. ದೇವರ ಮೂರ್ತಿಯನ್ನು ಕೊಂಬು, ವಾದ್ಯಗಳೊಂದಿಗೆ ಪಲ್ಲಕ್ಕಿಯಲ್ಲೋ, ತಲೆಮೇಲೆ ಹೊತ್ತೋ ಜಟಾಧಾರಿ ಕೆರೆಕಟ್ಟೆಗೆ ಒಯ್ಯುವುದಿತ್ತು. ದೇವರ ಸವಾರಿಯೊಂದಿಗೆ ನಾನೂ ಹೋಗುತ್ತಿದ್ದೆ ಎಂದು ಬೇರೆ ಹೇಳಬೇಕಿಲ್ಲ ತಾನೇ. ಅಲ್ಲಿ ಪೂಜೆ ನಡೆದ ಬಳಿಕ ‘ವನಭೋಜನ’ವೂ ಇರುತ್ತಿತ್ತು. ನನಗೋ ಇದರ ಮೇಲೆ ಅಪಾರ ಆಸಕ್ತಿ. ದೇವರು–ಪ್ರಸಾದ — ಅನ್ಯೋನ್ಯ, ಅವಿನಾಭಾವ ಅಲ್ಲವೇ! ಊಟ ಆಗುವಾಗ ಯಾವಾಗಲೂ ಸುಮಾರು ಮೂರು ಗಂಟೆ ಇಳಿಹಗಲು. ಆದರೂ ಅಲ್ಲಿ ಬಟಾ ಬಯಲಿನ, ಮರಗಳ ನಡುವಿನ ಕಟ್ಟೆ ಸಮೀಪದ ವನಭೋಜನಕ್ಕೆಂದೇ ಸಗಣಿ ಸಾರಿಸಿದ ನೆಲದಲ್ಲಿ ಕೂತು ಉಣ್ಣುವುದೇ ಒಂದು ವಿಶೇಷ ಅನುಭವ!!
ಈಗ ನೋಡಿ, ನಾನು ಕದ್ದು ಮುಚ್ಚಿ ಕಲಿತ ವಿದ್ಯೆ ಈಜು – ಇದರ ಬಗ್ಗೆ ಬರೆಯುತ್ತಾ ಹೋದಾಗ ಜೊತೆಗೆ ಬಾಲಂಗೋಚಿಯಾಗಿ ಇನ್ನಷ್ಟು ನೆನಪುಗಳು ಹೀಗೆಲ್ಲಾ ಬಾಲಬಿಚ್ಚಿದವು. ನಿಮಗೆ ಬೇಸರವಾಗಿಲ್ಲ ತಾನೇ? ಇಷ್ಟೂ ಹೊತ್ತು ತಾಳ್ಮೆಯಿಂದ ಓದಿದ್ದಕ್ಕೆ ನಿಮಗೆ ನನ್ನ ಪ್ರೀತಿಯ ನಮಸ್ಕಾರಗಳು.
ವಿಶೇಷ ಸೂಚನೆ: ಈ ಲೇಖನ ಬರೆಯಲು ಮೂಲ ಪ್ರೇರಣೆ ಆತ್ಮೀಯ ಗೆಳೆಯ ಶ್ರೀ ಅಶೋಕವರ್ಧನರ “ಜಾತಿ ಮತಗಳ ಚಕ್ರಸುಳಿ ಮೀರಿ” ಲೇಖನ ಮಾಲೆಯಲ್ಲಿ ಅವರು ಬಳ್ಳಾರಿಯಲ್ಲಿ ಸೈಕಲ್ ಸವಾರಿ ಕಲಿತ ಪ್ರಸಂಗ. ಆ ಲೇಖನಕ್ಕೆ ನಾನು ನನ್ನ ಈಜಿನ ಕುರಿತು ಚಿಕ್ಕ ಪ್ರತಿಕ್ರಿಯೆ ಕೊಟ್ಟಿದ್ದೆ. ಅದನ್ನೇ ಇಲ್ಲಿ ವಿಸ್ತರಿಸಿದ್ದೇನೆ. ಅಶೋಕವರ್ಧನರಿಗೆ ‘ವಂದನಾರ್ಪಣೆ’ ಇಷ್ಟವಿಲ್ಲ ಎಂದು ಗೊತ್ತಿದ್ದರೂ, ಆ ಸ್ಫೂರ್ತಿಯ ಮೂಲವನ್ನು ಮರೆಯಲುಂಟೆ! ಶಿವ ಶಿವಾ!!
*****************
ಬಹಳ ಚೆಂದದ ಬಾಲ್ಯದ ನೆನಪುಗಳು. ಅಷ್ಟೇ ನಾಜೂಕಾಗಿ ಬರಹರೂಪದಲ್ಲಿ ಕಟ್ಟಿದ್ದೀರಿ. ನಿಮ್ಮ ಬರವಣಿಗೆಯಲ್ಲಿ ಒಂದು ವಿಶೇಷವಾದ ಸೊಬಗಿದೆ. ಬರೆಯುತ್ತಿರಿ.