ಗಾಂಧಿ ವಿಶೇಷ ‘ಹಿಂದ್ ಸ್ವರಾಜ್’ನಲ್ಲಿ ಗಾಂಧಿ ಚಿಂತನೆ : ತಮ್ಮ ‘ಹಿಂದ್ ಸ್ವರಾಜ್’ ಎಂಬ ಮಹತ್ವದ ಕೃತಿಯಲ್ಲಿ ಗಾಂಧೀಜಿಯವರು ಹೇಳುವ ಮಾತುಗಳನ್ನು ಓದಿದರೆ ಭಾರತಕ್ಕಾಗಿ ಎಂಥ ಒಂದು ಸರಳ ಬದುಕಿನ ಕನಸನ್ನು ಅವರು ಕಂಡಿದ್ದರು ಎಂಬುದರ ಅರಿವಾಗುತ್ತದೆ. ಈ ಕೃತಿಯಲ್ಲಿ ಅವರ ಆಲೋಚನೆಗಳು ಹೀಗೆ ಸಾಗುತ್ತವೆ : ‘ಆಧುನಿಕತೆ ಎಂದರೇನು ? ಸಾಮಾನ್ಯರು ಹೇಳುವಂತೆ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಹಾಕಿಕೊಳ್ಳುವುದೆ? ಹೊಸ ಹೊಸ ಯಂತ್ರಗಳನ್ನು ಆವಿಷ್ಕರಿಸಿ ನಮ್ಮ ಶಾರೀರಿಕ ಶ್ರಮವನ್ನು ಹಗುರಗೊಳಿಸಿಕೊಳ್ಳುವುದೆ? ಪಾಶ್ಚಾತ್ಯ ನಾಗರಿಕತೆ ಇಂದು ಎತ್ತ ಸಾಗಿದೆ, ನಮ್ಮ ದೇಶಕ್ಕೆ ಅವರು ತಂದ ನಾಗರಿಕತೆ ನಮ್ಮ ಬದುಕನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಒಮ್ಮೆ ಆಲೋಚಿಸಿ ನೋಡಿ. ಎತ್ತಿನ ಗಾಡಿಯಲ್ಲೋ ಕಾಲು ನಡಿಗೆಯಲ್ಲೋ ಊರಿಂದೂರಿಗೆ ಸಂಪರ್ಕವಿಟ್ಟುಕೊಂಡು ನಮ್ಮ ಜನರು ಸುಂದರ ಬದುಕನ್ನು ಸಾಗಿಸುತ್ತಿದ್ದ ಕಾಲವೊಂದಿತ್ತು. ಪಾಶ್ಚಾತ್ಯರಿಂದ ಬಂದ ಆಧುನಿಕತೆಯು ರೈಲುಗಳ ಮೂಲಕ ಭಾರತದ ಉತ್ತರ-ದಕ್ಷಿಣ ತುದಿಗಳನ್ನು ಜೋಡಿಸ ಒಂದಾಗಿಸಿತೆಂಬ ಭಾವನೆ ನಮ್ಮದು. ಆದರೆ ಉತ್ತರದಲ್ಲಿ ಹುಟ್ಟಿಕೊಂಡ ಅನೇಕ ಸಮಸ್ಯೆಗಳು ಕೂಡಾ ರೈಲುಗಳ ಮೂಲಕ ಶರವೇಗದಲ್ಲಿ ದಕ್ಷಿಣಕ್ಕೆ ರವಾನೆಯಾಗಲು ಸಾಧ್ಯ ಎಂಬ ಅದರ ಇನ್ನೊಂದು ಮುಖದ ಬಗ್ಗೆ ನಾವು ಯಾಕೆ ಆಲೋಚಿಸಲಿಲ್ಲ? ಆಧುನಿಕತೆಯ ಹೆಸರಿನಲ್ಲಿ ಇಂದು ಜಗತ್ತು ಭೋಗಮಯವಾಗುತ್ತಿದೆ. ಮೋಸ-ವಂಚನೆ-ಸುಲಿಗೆಗಳ ಮೂಲಕ ಹಣ ಗಳಿಸುವುದೊಂದೇ ಜನರ ಗುರಿಯಾಗಿ ಬಿಟ್ಟಿದೆ. ಊರಿನ ಹಿರಿಯರ ಮೂಲಕ ಜಗಳಗಳು ಇತ್ಯರ್ಥವಾಗಿ ನ್ಯಾಯ ಸಿಗುತ್ತಿದ್ದ ಕಾಲವೊಂದಿತ್ತು. ಜಗಳ ಯಾರ ಮಧ್ಯೆ ತಾನೇ ಬರುವುದಿಲ್ಲ? ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ-ತಮ್ಮಂದಿರು ಜಗಳವಾಡುವುದಿಲ್ಲವೆ? ಸಿಟ್ಟು ತಣಿದಾಗ ಎಲ್ಲವೂ ಸಹಜವಾಗಿ ಸರಿಯಾಗುತ್ತದೆ. ಆದರೆ ಆಂಗ್ಲರು ನಮಗೆ ಕಾನೂನು, ನ್ಯಾಯವಾದಿಗಳು ಮತ್ತು ಕೋರ್ಟು-ಕಛೇರಿಗಳನ್ನು ಕೊಡುಗೆಯಾಗಿತ್ತರು. ನಾವು ಜಗಳ ಮಾಡಿದರೆ ನಮ್ಮಲ್ಲಿರುವ ಹಣದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ ಮೂರನೆಯವರಾದ ವಕೀಲರು-ನ್ಯಾಯಾಧೀಶರುಗಳು ಇಷ್ಟ ಬಂದಷ್ಟು ಕಾಲ ನಮ್ಮನ್ನು ಸತಾಯಿಸಿ ಕೊನೆಗೆ ತೀರ್ಪಿನ ಹೆಸರಿನಲ್ಲಿ ಏನೋ ಒಂದು ನಿರ್ಧಾರವನ್ನು ಘೋಷಿಸುತ್ತಾರೆ. ಹಾಗೆಯೇ ಸಹಜವಾದ ಔಷಧಿ ಮತ್ತು ಚಿಕಿತ್ಸೆಗಳು ನಮ್ಮ ಒಂದು ಜೀವನ ಕ್ರಮವಾಗಿತ್ತು. ಎಷ್ಟೋ ರೋಗಗಳು ಕಾಲ ಬಂದಾಗ ತಮ್ಮಷ್ಟಕ್ಕೆ ತಾವೇ ಗುಣವಾಗುತ್ತಿದ್ದವು. ನಮ್ಮ ದೇಹದ ಆರೋಗ್ಯವನ್ನು ನೋಡಿಕೊಳ್ಳುವ ಹೊಣೆ ನಮ್ಮದಲ್ವೆ? ನಾವು ನಮ್ಮ ಆಹಾರ-ವ್ಯಾಯಾಮಗಳ ಬಗ್ಗೆ ಅಸಡ್ಡೆ ತೋರಿಸಿದರೆ ಅದರಿಂದುಂಟಾಗುವ ತೊಂದರೆಗಳನ್ನು ಸಹಿಸಿಕೊಳ್ಳಲು ನಮ್ಮ ದೇಹ-ಮನಸ್ಸುಗಳು ಸಿದ್ಧವಾಗಿರಬೇಕು. ಆದರೆ ಆಧುನಿಕತೆಯು ನಮಗೆ ವಿವಿಧ ವೈದ್ಯರುಗಳನ್ನೂ ವೈವಿಧ್ಯಮಯ ಔಷಧಿಗಳನ್ನೂ ಕೊಟ್ಟಿದೆ. ಪರಿಣಾಮವಾಗಿ ನಾವು ನಮ್ಮ ದೇಹಬಲ ಮತ್ತು ಮನೋಬಲಗಳನ್ನು ಕಳೆದುಕೊಂಡು ಗುಲಾಮರಾದೆವು. ಆಧುನಿಕತೆಯ ಇನ್ನೊಂದು ಕೊಡುಗೆಯಾದ ಮಾಧ್ಯಮಗಳು ಶ್ರೀಸಾಮಾನ್ಯನನ್ನು ಮಾಹಿತಿಗಳ ಜಾಲದಲ್ಲಿ ಸಿಲುಕಿಸಿ ನಿಜವನ್ನು ಮರೆಮಾಚಿ ಆತನನ್ನು ಭ್ರಮಾಲೋಕಕ್ಕೆ ಒಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ. ಸತ್ಯಾಗ್ರಹದ ಮೂಲಕ ನಾವು ಬಯಸಿದ್ದನ್ನು ಸಾಧಿಸಲು ಹೇಗೆ ಸಾಧ್ಯ ಎಂದು ಆಧುನಿಕ ಮನಸ್ಸು ಕೇಳಬಹುದುೆ. ಯಾಕೆಂದರೆ ಅದಕ್ಕೆ ಗೊತ್ತಿರುವುದು ಆಯುಧಗಳ ಪ್ರಯೋಗ ಮಾತ್ರ. ಪಾಶ್ಚಾತ್ಯರು ನಮಗೆ ಇತಿಹಾಸದ ಘಟನೆಗಳನ್ನು ದಾಖಲಿಸುವ ವಿದ್ಯೆಯನ್ನು ಹೇಳಿ ಕೊಟ್ಟರು. ಏನು ಮಹಾ ಇತಿಹಾಸವೆಂದರೆ ? ಕೇವಲ ರಾಜ ಮಹಾರಾಜರುಗಳು ಅಧಿಕಾರ ದಾಹದಿಂದ ಕುರುಡರಾಗಿ ನಡೆಸಿದ ಯುದ್ಧಗಳ ಮತ್ತು ಹರಿಸಿದ ನೆತ್ತರ ಹೊಳೆಗಳ ಕಥೆ ತಾನೆ ? ನಿಜವಾದ ಇತಿಹಾಸವನ್ನು ಸೃಷ್ಟಿಸಿದವರು ಕೋಟಿ ಕೋಟಿ ಸಂಖ್ಯೆಯಲಿರುವ ನಮ್ಮ ರೈತರು, ಕೆಲಸಗಾರರು, ಕಲಾವಿದರು, ಕವಿಗಳು ಮತ್ತು ಚಿತ್ರಕಾರರು ಅಲ್ಲವೆ? ಅವರು ಬೆಳೆಸಿಕೊಂಡ ಆತ್ಮಬಲಗಳ ಮುಂದೆ ತಮ್ಮ ಮನಸ್ಸನ್ನೇ ಗೆಲ್ಲಲಾಗದ ದುರ್ಬಲ ವ್ಯಕ್ತಿತ್ವದ ರಾಜರುಗಳೆಲ್ಲಿ? ಆತ್ಮ ಬಲವಿಲ್ಲದವರು ಹಿಂಸೆಯ ಮೂಲಕ ಕಟ್ಟುವ ರಾಜ್ಯ ಎಷ್ಟು ಕಾಲ ಉಳಿಯಬಲ್ಲುದು? ಸತ್ಯಾಗ್ರಹಕ್ಕೆ ಇರುವ ಬೆಂಬಲ ಆತ್ಮಬಲದ್ದು. ಇದರ ಮೂಲಕ ಗೆಲುವು ಸಾಧಿಸಲು ಸಾಧ್ಯವಿಲ್ಲವೆಂಬುದು ಮೂರ್ಖತನ. ಇಂಥ ನೂರಾರು ಮೌಲ್ಯಗಳಿಂದ ತುಂಬಿರುವ ಗಾಂಧೀಜಿಯ‘ಹಿಂದ್ ಸ್ವರಾಜ್’ ಎಲ್ಲರೂ ಓದಲೇ ಬೇಕಾದ ಒಂದು ಅಮೂಲ್ಯ ಕೃತಿ. ಸಮಾಜದಲ್ಲಿ ಒಳ್ಳೆಯದನ್ನು ಅಹಿಂಸಾತ್ಮಕವಾಗಿ ಸಾಧಿಸಲು ಆಧುನಿಕ ಮನುಷ್ಯನಿಗೆ ಗಾಂಧೀಜಿಯವರು ನೀಡಿದ ಸಂದೇಶಗಳ ಸಾರಸತ್ವವನ್ನು ಹೀಗೆ ಸಂಗ್ರಹಿಸಿ ಹೇಳಬಹುದು ೧. ಒಳ್ಳೆಯದು ಎನ್ನುವುದು ಬಸವನ ಹುಳದಂತೆ ಪಯಣಿಸುತ್ತದೆ. ಕಾಯುವ ತಾಳ್ಮೆ ಇರಲಿ. ೨. ಅಹಿಂಸೆಯೆಂಬುದು ನಿಧಾನವಾಗಿ ಬೆಳೆಯುವ ಮರ. ಅದರ ಬೆಳವಣಿಗೆ ಕಣ್ಣಿಗೆ ಕಾಣಿಸದು. ಆದರೆ ಅದು ಖಚಿತ. ೩. ಬರೇ ಒಳ್ಳೆಯತನದಿಂದ ಅಷ್ಟೇನೂ ಉಪಯೋಗವಿಲ್ಲ. ಅದರ ಜತೆಗೆ ವಿವೇಕ, ಧೈರ್ಯ ಮತ್ತು ಸಂಕಲ್ಪಶಕ್ತಿಗಳಿರಬೇಕು. ಆತ್ಮನಿಷ್ಠೆಯ ಜತೆಗೆ ವಿವೇಚನೆಯನ್ನೂ ಬೆಳೆಸಿಕೊಳ್ಳ ಬೇಕು. ೪. ತತ್ವವಿಲ್ಲದ ರಾಜಕೀಯ, ಶ್ರಮವಿಲ್ಲದ ಸಂಪತ್ತು, ನೈತಿಕತೆಯಿಲ್ಲದ ವಾಣಿಜ್ಯ, ಗುಣವಿಲ್ಲದ ವಿದ್ಯೆ, ವಿವೇಕವಿಲ್ಲದ ಸಂತೋಷ, ಮಾನವೀಯತೆಯಿಲ್ಲದ ವಿಜ್ಞಾನ, ಮತ್ತು ತ್ಯಾಗವಿಲ್ಲದ ಆರಾಧನೆ- ಇವು ನಾವು ಸದಾ ದೂರವಿರಬೇಕಾದ ಏಳು ಮಹಾ ಪಾಪಗಳು. ೫. ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲಾರರು. ೬. ಸೇಡು ಅನ್ನುವುದು ಯಾವಾಗಲೂ ಇಡೀ ಜಗತ್ತನ್ನು ಕುರುಡಾಗಿಸಿಯೇ ಕೊನೆಯಾಗುತ್ತದೆ. ೭. ದುರ್ಬಲರು ಯಾವತ್ತೂ ಕ್ಷಮಿಸಲಾರರು. ಕ್ಷಮಿಸುವ ಶಕ್ತಿಯಿರುವುದು ಸಬಲರಿಗೆ ಮಾತ್ರ. ೮. ನೀವು ನಾಳೆಯೇ ಸಾಯುವಿರಿ ಎಂಬ ಆಲೋಚನೆಯೊಂದಿಗೆ ಕೆಲಸ ಮಾಡಿ. ನಿಮ್ಮ ಜೀವನ ಶಾಶ್ವತವೇನೋ ಎಂಬಂತೆ ಜ್ಞಾನ ಸಂಪಾದಿಸಿ. ೯. ನಿಮ್ಮನ್ನು ಹುಡುಕಿಕೊಳ್ಳುವ ಅತ್ಯುತ್ತಮ ಉಪಾಯವೆಂದರೆ ಬೇರೆಯವರ ಸೇವೆಯಲ್ಲಿ ನಿಮ್ಮನ್ನು ನೀವೇ ಮರೆಯುವುದು. ೧೦. ಅವರು ನಿಮ್ಮನ್ನು ಮೊದಲು ಕಡೆಗಣಿಸಬಹುದು. ನಂತರ ನಗಬಹುದು, ನಂತರ ಹೋರಾಡಬಹುದು, ನಂತರ ನೀವೇ ಗೆಲ್ಲುವಿರಿ. ೧೧. ನೀವು ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬಾರದು; ಮಾನವತೆ ಒಂದು ಸಾಗರ. ಸಾಗರದ ಕೆಲವು ಬಿಂದುಗಳು ಕೊಳಕಾಗಿ ಬಿಟ್ಟರೆ ಸಾಗರ ಕೊಳಕಾಗುವುದಲ್ಲ. ಆರೋಗ್ಯವೇ ಮನುಷ್ಯನ ನಿಜವಾದ ಐಶ್ವರ್ಯ. ಬೆಳ್ಳಿ ಬಂಗಾರಗಳ ಗಟ್ಟಿಗಳಲ್ಲ. ೧೨. ಸಂತೋಷ ಸಿಗುವುದು ನೀವು ಆಲೋಚಿಸುವ, ಹೇಳುವ ಮತ್ತು ಮಾಡುವ ವಿಷಯಗಳಲ್ಲಿ ಸಾಮರಸ್ಯವಿದ್ದಾಗ. ೧೩. ಕ್ರಿಯೆಯ ವಿನಃ ನೀವು ಎಲ್ಲೂ ತಲುಪಲಾರಿರಿ. ೧೪. ಭವಿಷ್ಯವು ನೀವು ವರ್ತಮಾನದಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅವಲಂಬಿಸಿದೆ. ೧೫. ಭೂಮಿಯು ಪ್ರತಿಯೊಬ್ಬರ ಅಗತ್ಯಗಳನ್ನು ಪೂರೈಸುತ್ತದೆ. ಪ್ರತಿಯೊಬ್ಬನ ದುರಾಸೆಯನ್ನಲ್ಲ. ೧೬. ಶಕ್ತಿಯು ದೈಹಿಕ ಸಾಮರ್ಥ್ಯದಿಂದ ಬರುವುದಲ್ಲ. ಅಸೀಮ ಮನೋಬಲದಿಂದ ಮಾತ್ರ. ೧೭. ನಿಮ್ಮ ಕ್ರಿಯೆಗಳ ಪರಿಣಾಮವೇನೆಂದು ನಿಮಗೆ ಗೊತ್ತಿರಲಾರದು. ಆದರೆ ನೀವು ಏನೂ ಮಾಡದಿದ್ದರೆ ಪರಿನಾಮವೇ ಇರಲಾರದು. ೧೮. ಸ್ವಾತಂತ್ರ್ಯಕ್ಕೆ ನಿಜವಾದ ಬೆಲೆ ಬರುವುದು ತಪ್ಪು ಮಾಡಲಿಕ್ಕೂ ಸ್ವಾತಂತ್ರ್ಯವಿದ್ದರೆ ಮಾತ್ರ. ೧೯. ನೀವು ಮುಷ್ಟಿಯನ್ನು ಬಿಗಿ ಹಿಡಿದು ಕೈ ಕುಲುಕಲಾರಿರಿ. *********************************** ಡಾ.ಪಾರ್ವತಿ ಜಿ.ಐತಾಳ್
ಗಾಂಧಿ ವಿಶೇಷ ‘ನಮ್ಮ ಮಹಾತ್ಮ’ ಎಸ್. ವಿಜಯಗುರುರಾಜ ಗುಜರಾತಿನ ಸುಪುತ್ರಕಸ್ತೂರ್ ಬಾ ರ ಬಾಳಮಿತ್ರಆಫ್ರಿಕನ್ ಹಕ್ಕುಗಳಿಗಾಗಿ ಹೋರಾಡಿಅಜೇಯನಾದ ಬ್ಯಾರಿಸ್ಟರ್ ಮೇಲು ಕೀಳಿನ ಕತ್ತಲೆಯ ಕಳೆದುಐಕಮತ್ಯ ಸಾಧಿಸಿದ ಸಾಧಕಸಾಬರ್‌ಮತಿ ಆಶ್ರಮದಿ ನೆಲೆಸಿಚರಕದಿ ನೂಲು ನೇಯ್ದ ಗುರಿಕಾರಮಹೋನ್ನತ ಧ್ಯೇಯಗಳ ಹರಿಕಾರ ಉಪ್ಪಿನ ಸತ್ಯಾಗ್ರಹದಿ ದಂಡೀಯಾತ್ರೆಯಪಾದ ಸವೆಸಿದ ದಂಡನಾಯಕಉಪವಾಸ ಸತ್ಯಾಗ್ರಹಗಳ ಕೈಗೊಂಡುಹರಿಜನ ಅಸ್ಪೃಷ್ಯತೆಗಳ ನಿವಾರಿಸಿಮದ್ಯಪಾನ ವಿರೋಧಿ ಚಳುವಳಿಗಳ ಮುನ್ನಡೆಸಿದ ಮಹಾತ್ಮ ಕಸ್ತೂರ್ ಬಾ ಆಶ್ರಮದ ಆಶ್ರಯಧಾತೆಅನಾಥೆ ಲಕ್ಷಿö್ಮಯ ಲಾಲಿಸಿದ ಮಹಾಮಾತೆಸೇವಾಗ್ರಾಮದ ಕರ್ಮಭೂಮಿಯಲಿಕುಷ್ಠ ರೋಗಿಗಳ ಪಾಲಿಸಿದ ಶುಶ್ರೂಷಕಿಖಾದಿಯ ಒರಟಿನಿಲಿ ಮೃದು ಮನಸ ಸಾಧ್ವಿಧರ್ಮ ತ್ಯಾಗಗಳ ಸೇವಾ ಸಂಘರ್ಷಗಳಲಿಬಾಪುವಿನ ಬಲಗೈ ಆದ ಬಾ ಭಾರತಾಂಬೆಯ ಸೆರೆಯ ಬಿಡಿಸಲುಬ್ರಿಟಿಷರ ಕಪಿಮುಷ್ಟಿ ಸಡಿಸಲುಸೆರೆಮನೆಯೇ ಮನೆಯಾಗಿಸಿದಬಾಪೂ ಬಾ ರ ಜೀವನ ಯಾನಸ್ವಾತಂತ್ರö್ಯ ತಂದಿತ್ತು ಸ್ವಾತಂತ್ರö್ಯ ಗೀತೆ ಹಾಡಿಹೇ ರಾಮ್ ಹೇ ರಾಮ್ಎನ್ನುತ ಅಮರನಾದನಮ್ಮ ಮಹಾತ್ಮ ******************************
ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು….
ಗಾಂಧಿ ವಿಶೇಷ ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು…. ಗಾಂಧಿಜೀ ಉತ್ತರ ಕನ್ನಡ ಜಿಲ್ಲೆಯ ಪ್ರವಾದ ನನಗೆ ಮುಖ್ಯವಾಗುವುದು ಮೂರು ಕಾರಣಗಳಿಗೆ. ಒಂದನೇ ಕಾರಣ ಗಾಂಧಿಜೀ ಅಸ್ಪೃಶ್ಯತೆಯನ್ನು ಜನರ ಮನದಿಂದ ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಎರಡನೇ ಕಾರಣ ದೇವಸ್ಥಾನದಲ್ಲಿನ ಪ್ರಾಣಿ ಬಲಿ ನಿಲ್ಲಿಸಲು ಯತ್ನಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಮೂರನೇ ಕಾರಣ ಬಾಲವಿಧವೆಯರ ಕೇಶ ಮುಂಡನೆಯಂಥ ಸಂಪ್ರದಾಯವನ್ನು ನಿಲ್ಲಿಸಿದರು. ವಿಶೇಷವೆಂದರೆ ಈ ಮೂರು ಘಟನೆಗಳು ನಡೆದದ್ದು ೧೯೩೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಎಂಬುದು ಗಮನಾರ್ಹ. ಇದಕ್ಕೆ ಭಾರತದಲ್ಲಿ ಆಗ ಪ್ರಕಟವಾಗುತ್ತಿದ್ದ ದಿನ ಪತ್ರಿಕೆ ವರದಿಗಳೇ ಸಾಕ್ಷಿ. ಅಲ್ಲದೇ ಗಾಂಧಿಜೀಯೇ ಹೊರ ತರುತ್ತಿದ್ದ ಪತ್ರಿಕೆಯಲ್ಲಿ ಈ ಸಂಗತಿಗಳು ದಾಖಲಾಗಿವೆ. ಮುಂಬೈ ಪ್ರಾವಿಜೆನ್ಸಿಯಲ್ಲಿದ್ದ ಅಂದಿನ ಕೆನರಾ ಜಿಲ್ಲೆ, ಇಂದಿನ ಕಾರವಾರ ಜಿಲ್ಲೆಯನ್ನು ಸುಬ್ರಾಯ್ ರಾಮಚಂದ್ರ ಹಳದೀಪುರ ಪ್ರಜಾಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿದ್ದರು. ಅಲ್ಲದೇ ಗಾಂಧಿಜೀಯನ್ನು ಮುಂಬಯಿನಲ್ಲಿ ಭೇಟಿಯಾಗಿ ಕಾರವಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ೧೯೩೪ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಜಾಗೃತಿಗಾಗಿ ಗಾಂಧಿಜೀ ಭಾರತ ಪ್ರವಾಸ ಕೈಗೊಂಡಿದ್ದರು. ೨೩ ಫೆಬ್ರುವರಿ ೧೯೩೪ರಲ್ಲಿ ಮಂಗಳೂರು ಪ್ರವಾಸ ಮುಗಿಸಿ, ಫೆ.೨೮ ರಂದು ಕುಮಟಾ ತಲುಪಿದ ಗಾಂಧಿಜೀ, ಕುಮಟಾ ಹಾಗೂ ಅಂಕೋಲಾದಲ್ಲಿ ಅಸ್ಪೃಶ್ಯತೆಯ ಅನಿಷ್ಠದ ವಿರುದ್ಧ ಮಾತನಾಡಿದ್ದರು. ಗಾಂಧೀಜಿ ಸಂಜೆ ಕಾರವಾರಕ್ಕೆ ಬಂದರು. ಅವರನ್ನು ಸುಬ್ಬರಾವ್ ಆರ್. ಹಳದೀಪುರ ಸ್ವಾಗತಿಸಿದರು. ಕಾರವಾರ ನಗರಸಭೆಯಿಂದ ಆಗ ಗಾಂಧಿಜೀಯನ್ನು ಸನ್ಮಾನಿಸಲಾಗಿತ್ತು. ಗಾಂಧಿಜೀಗೆ ನೀಡಿದ ಸ್ಮರಣಿಕೆಯನ್ನು ಗಾಂಧೀ ಸಾರ್ವಜನಿಕ ಸಭೆಯಲ್ಲಿ ಹರಾಜು ಮಾಡಿದರು. ಅದನ್ನು ಶಾಸಕ ಸುಬ್ಬರಾಯ ಹಳದೀಪುರ ಅವರು ಹರಾಜಿನಲ್ಲಿ ಪಡೆದು ಸಾವಿರ ರೂ. ಮೊತ್ತವನ್ನು ನೀಡಿದರು. ಆ ಹಣವನ್ನು ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಕ್ಕೆ ಬಳಸುವುದಾಗಿ ಗಾಂಧೀಜಿ ಹೇಳಿದರು. ಇಲ್ಲಿ ಪ್ರಮುಖವಾದುದು ಅಸ್ಪೃಶ್ಯತೆ ವಿರುದ್ಧ ಜನ ಜಾಗೃತಿಗಾಗಿ ದೇಶದ ಹಲವು ರಾಜ್ಯ ಸುತ್ತಿದ ಗಾಂಧೀಜಿ ಅಸ್ಪೃಶ್ಯತಾ ನಿವಾರಣಾ ನಿಧಿ ಸಂಗ್ರಹದ ಮೂಲಕ ದೇಶದ ಜನತೆಯಲ್ಲಿ ಮನುಷ್ಯ ಸಣ್ಣತನಗಳನ್ನು ಬಿಡಿಸಲು ಯತ್ನಿಸಿದರು. ಆಸ್ಪೃಶ್ಯತೆ ನಮಗೆ ಲಜ್ಜಾಸ್ಪದವಾದುದು. ಅದನ್ನು ನಾವು ತೊಲಗಿಸಬೇಕು ಎಂದಿದ್ದರು. ಕಾರವಾರದ ಸಭಾ ಕಾರ್ಯಕ್ರಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಗಾಂಧೀಜಿ ಕರ್ನಾಟಕದ ಜನತೆ ಅಸ್ಪೃಶ್ಯತೆಯನ್ನು ಕಿತ್ತೊಗೆಯುವತ್ತ ಸಜ್ಜಾಗಿರುವುದನ್ನು ನಾನು ಕಾಣುವಂತಾದುದಕ್ಕಾಗಿ, ನನಗೆ ಬಹಳ ಸಂತೋಷವಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಅನುಕೂಲವಾಗಿ ಜನರಲ್ಲಿ ಪರಿವರ್ತನೆ ದಿನಾಲು ಬೆಳೆಯುತ್ತಿರುವ ಸಂತೋಷ. ಈ ಭಾವನೆಯನ್ನು ಕ್ರಿಯೆಯ ರೂಪದಲ್ಲಿ ಮಾರ್ಪಡಿಸಿಕೊಳ್ಳುವ ಸತ್ಯನಿಷ್ಠ ಮತ್ತು ಉತ್ಸಾಹ ಶಾಲಿ ಕಾರ್ಯಕರ್ತರನ್ನು ಅಭಿನಂದಿಸುವೆ. ಅಸ್ಪೃಶ್ಯರ ಬಗ್ಗೆ ಎಲ್ಲೆಲ್ಲೂ ಸಹಾನುಭೂತಿ ಇದೆ. ಸರಿಯಾದ ವಾತಾವರಣ ಇದೆ. ಆದರೆ ಆ ನಂಬಿಕೆಯನ್ನು ಸಾರ್ಥಕಗೊಳಿಸುವ ಜ್ಞಾನಬೇಕು. “ ಎಲ್ಲಿ ಶ್ರದ್ಧೆ ಮಾಯಾವಾಗುತ್ತದೆಯೋ, ಅಲ್ಲಿ ಆರಂಭಶೂರರಾಗಿ ಉಳಿಯುತ್ತೇವೆ” ಎಂದರು. ಹಿಂದೂಗಳು ನಾವು ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತೇವೆ. ಅವರನ್ನು ಮುಟ್ಟಿದರೆ ಪಾಪ ಎಂದು ತಿಳಿದಿದ್ದೇವೆ. ಇದು ದೇವರೆದುರು ಮಾಡಿದ ಮಹಾಪಾಪ. ಭಗವಂತ ಮಾನವಕುಲದ ಒಂದು ಭಾಗವನ್ನು ಅಸ್ಪೃಶ್ಯ ಎಂದು ಬೇರೆ ಮಾಡಿದ ಎಂಬ ಮಾತು ದೈವದ್ರೋಹ. ಹಿಂದೂಗಳಿಗೆ ನಾನು ಎಚ್ಚರಿಕೆ ಕೊಡಬಯಸುತ್ತೇನೆ. ಅಸ್ಪೃಶ್ಯತಾ ನಿವಾರಣೆ ಒಂದು ಪ್ರಾಯಶ್ಚಿತ್ತ. ಸವರ್ಣ ಹಿಂದೂಗಳು ತಮಗೂ ಹಿಂದೂಧರ್ಮಕ್ಕೂ ಪ್ರಾಯಶ್ಚಿತ್ತ ಮೂಲಕ ಋಣಮುಕ್ತರಾಗಬೇಕು. `ಹೊಲಸು’ ರಾಷ್ಟ್ರಗಳಿಗೆ ಹೇಗೋ, ಧರ್ಮಗಳಿಗೂ ಹಾಗೆಯೇ. ದೇವರ ಅನುಗ್ರಹ, ದೇವರ ಸಾಕ್ಷಾತ್ಕಾರವು ಯಾವ ಜಾತಿಗೂ ಯಾವ ರಾಷ್ಟçಕ್ಕೂ ಗುತ್ತಿಗೆಯಲ್ಲ. ಯಾವ ರಾಷ್ಟ,ಯಾವ ಮತ, ಅನ್ಯಾಯಕ್ಕೆ, ಅಸತ್ಯಕ್ಕೆ, ಹಿಂಸೆಗೆ ಮಡಿಲು ಕಟ್ಟುತ್ತದೆಯೋ ಅದು ಈ ಭೂಮಿಯಿಂದ ಮಾಯವಾಗುತ್ತದೆ. ಅಸ್ಪಶ್ಯತೆಯು ಹಿಂದೂ ಧರ್ಮಕ್ಕೆ ಒಂದು ಕಳಂಕ ಮತ್ತು ಮಾನವೀಯತೆಗೆ ಎಸಗಿದ ಅಪರಾಧ ಎಂದು ಗಾಂಧಿ ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ವಿವರಿಸಿದರು. ೧೯೩೪ ಮಾರ್ಚ ೧ ರಂದು ಗಾಂಧಿ ಶಿರಸಿ ತಲುಪಿದರು. ಗಾಂಧೀಜಿ ಶಿರಸಿಯಲ್ಲಿ ಅವರು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದರು. ಕುರಿ, ಕೋಣ, ಕೋಳಿಗಳನ್ನು ಬಲಿ ಕೊಡಬಾರದು ಎಂದು ಹೇಳಿದ್ದರು. ಆಗ ಶಾಸಕರೂ ಮತ್ತು ದೇವಾಲಯದ ಧರ್ಮದರ್ಶಿಗಳೂ ಆಗಿದ್ದ ಎಸ್.ಎಸ್.ಕೇಶವ್ವಾನ್ ಗಾಂಧೀಜಿ ಕರೆಯನ್ನು ಅನುಸರಿಸಿ, ಕೋಣ ಬಲಿ ನಿಲ್ಲಿಸಿದರು. ಅದು ಈಗಲೂ ಮುಂದುವರಿದಿದೆ. ೧೯೪೨ ಮಾರ್ಚ ೨೬ ಹರಿಜನ ಪತ್ರಿಕೆಯ ಸಂಚಿಕೆಯಲ್ಲಿ ಶಿರಸಿಯ ಮಾರಿಕಾಂಬ ಜಾತ್ರೆ ಕುರಿತಂತೆ ನೆನಪುಗಳನ್ನು ಗಾಂಧಿಜೀ ದಾಖಲಿಸಿದ್ದಾರೆ. ಶಿರಸಿ ಭೇಟಿಯ ನಂತರ ಗಾಂಧಿಜೀ ಸಿದ್ದಾಪುರಕ್ಕೆ ತೆರಳಿದರು. ಮಹಾದೇವಿ ತಾಯಿ ರಾಮಕೃಷ್ಣ ಹೆಗಡೆ ಅವರ ಅಕ್ಕ. ಸಿದ್ದಾಪುರದ ದೊಡ್ಮನೆ ಹೆಗಡೆ ಅವರ ಮಗಳು. ಮಹಾದೇವಿ ಅವರಿಗೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಆಕೆಯ ಗಂಡ ತೀರಿಹೋಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಆಕೆಯ ತಲೆಯ ಕೇಶ ಮುಂಡನ ಮಾಡಿಸಲಾಗಿತ್ತು. ಇದನ್ನು ಸಿದ್ದಾಪುರಕ್ಕೆ ಗಾಂಧೀಜಿ ಬಂದಾಗ ಗಮನಿಸಿದರು. ಮಹಾದೇವಿ ಅವರ ತಂದೆಯ ಜೊತೆ ಗಾಂಧೀಜಿ ಮಾತನಾಡಿದರು. ಕೇಶ ಮುಂಡನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದು ಸಂಪ್ರದಾಯ ಎಂದು ಮಹಾದೇವಿ ತಂದೆ ಪ್ರತಿಕ್ರಿಯಿಸಿದಾಗ `ನಿಮ್ಮ ಮಗಳಿಂದಲೇ ಕೇಶ ಮುಂಡನಾ ಪದ್ಧತಿ ನಿಲ್ಲಲಿ. ಹೊಸ ಪದ್ಧತಿ ಆರಂಭವಾಗಲಿ. ಏಕೆ ಆಗಬಾರದು? ಎಂದು ಗಾಂಧೀಜಿ ಮರು ಪ್ರಶ್ನಿಸಿದರು. `ವರ್ದಾ ಆಶ್ರಮಕ್ಕೆ ತೆರಳಲು ಆಕೆ ಇಚ್ಚೆಸುತ್ತಾಳೆ. ನಿಮ್ಮ ಅನುಮತಿ ಇದೆಯೇ’ ಎಂದು ಗಾಂಧೀಜಿ ಮತ್ತೆ ಪ್ರಶ್ನಿಸಿದರು. `ಅವಳು ಪ್ರಬುದ್ಧಳು. ಮನಸ್ಸಿಗೆ ಬಂದಲ್ಲಿ ಹೋಗಲು ಸ್ವತಂತ್ರಳು’ ಎಂದರು ದೊಡ್ಮನೆ ಹೆಗಡೆ. ಹೀಗೆ ಗಾಂಧಿಜೀ ಉತ್ತರ ಕನ್ನಡ ಪ್ರವಾಸ ಮೂರು ಮುಖ್ಯ ಸಂದೇಶಗಳನ್ನು ನೀಡಿತ್ತು. ಅವು ಈಗಲೂ ನಮಗೆ , ಸಮಾಜಕ್ಕೆ ದಾರಿ ದೀಪವಾಗಿವೆ ಎಂಬುದನ್ನು ಮರೆಯಲಾಗದು. ……….. ಮಹಾತ್ಮಾ ಗಾಂಧಿಜೀ ಅವರ ೧೫೧ ನೇ ಜನ್ಮದಿನ ವಾರ್ಷಾಚರಣೆಯ ಈ ಸಂದರ್ಭದಲ್ಲಿ ದೇಶ ಅವರನ್ನು ಈಗ ಸ್ಮರಿಸುತ್ತಿದೆ. ರಾಷ್ಟ್ರಪಿತನನ್ನು ಪುನಃ ಪುನಃ ಸ್ಮರಿಸಿಕೊಳ್ಳುತ್ತಿದೆ. ಗ್ರಾಮೀಣ ಭಾರತದ ಪುನಶ್ಚೇತನಕ್ಕೆ ಗಾಂಧಿಜೀ ಕೆಲ ಸಿದ್ಧ ಸರಳ ಮಾದರಿಗಳನ್ನು ಬಿಟ್ಟುಹೋಗಿದ್ದರು. ಸರಳತೆ ಮತ್ತು ಕೃಷಿ ಆಧಾರಿತ ಬದುಕು ಗ್ರಾಮೀಣ ಭಾರತವನ್ನು ಪುನಃ ಕಟ್ಟಬಲ್ಲದು ಎಂಬುದು ಗಾಂಧಿಜೀ ಆಶಯವಾಗಿತ್ತು. ಗ್ರಾಮೀಣ ಗುಡಿಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು, ಯಂತ್ರಗಳ ನೆರವಿನಿಂದ ಸಾಧ್ಯವಾದಷ್ಟು ದೂರ ಇರುವುದು ಗಾಂಧಿಜೀ ತಿಳಿ ಹೇಳಿದ ಸರಳ ಸಂಗತಿಗಳು. ಸತ್ಯ, ಅಹಿಂಸೆ, ಸಹನೆ ಮಾರ್ಗ ಗಾಂಧಿಜೀ ನಡೆ ನುಡಿಯಲ್ಲೇ ಇತ್ತು. ಅದಕ್ಕಾಗಿ ಗಾಂಧಿ ಹೇಳಿದ್ದು ನನ್ನ ಜೀವನವೇ ನನ್ನ ಸಂದೇಶ ಎಂದು. ತುಂಬಾ ಪ್ರಯೋಗಶೀಲರಾಗಿದ್ದ ಗಾಂಧಿಜೀ ಜೀವನದುದ್ದಕ್ಕೂ ಅಧಿಕಾರ ದಿಂದ ದೂರ ಉಳಿದರು. ಆದರೆ ಅಧಿಕಾರ ಕೇಂದ್ರವನ್ನು ನಿರ್ದೇಶಿಸಿದರು.ತ ಬ್ರಿಟಿಷರನ್ನು ಗಾಂಧಿ ಬದಲಿಸಿದರು, ಮನವೊಲಿಸಿದರು, ಅವರಿಂದ ಸ್ವಾತಂತ್ರ್ಯವನ್ನು ಪಡೆದರು ಎಂಬುದು ಸ್ಮರಣಿಯ. ..************************************ ನಾಗರಾಜ ಹರಪನಹಳ್ಳಿ.
ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು…. Read Post »

