ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು….

ಗಾಂಧಿ ವಿಶೇಷ

 ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ 

ಗಾಂಧಿ  ಬಂದು ಹೋಗಿದ್ದರು….

ಗಾಂಧಿಜೀ ಉತ್ತರ ಕನ್ನಡ ಜಿಲ್ಲೆಯ ಪ್ರವಾದ ನನಗೆ  ಮುಖ್ಯವಾಗುವುದು ಮೂರು ಕಾರಣಗಳಿಗೆ.

ಒಂದನೇ ಕಾರಣ ಗಾಂಧಿಜೀ ಅಸ್ಪೃಶ್ಯತೆಯನ್ನು ಜನರ ಮನದಿಂದ ಕಿತ್ತೊಗೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದರು. ಎರಡನೇ ಕಾರಣ ದೇವಸ್ಥಾನದಲ್ಲಿನ ಪ್ರಾಣಿ ಬಲಿ ನಿಲ್ಲಿಸಲು ಯತ್ನಿಸಿದರು ಹಾಗೂ ಇದರಲ್ಲಿ ಯಶಸ್ವಿಯಾದರು. ಮೂರನೇ ಕಾರಣ  ಬಾಲವಿಧವೆಯರ ಕೇಶ ಮುಂಡನೆಯಂಥ ಸಂಪ್ರದಾಯವನ್ನು ನಿಲ್ಲಿಸಿದರು.

ವಿಶೇಷವೆಂದರೆ ಈ ಮೂರು ಘಟನೆಗಳು ನಡೆದದ್ದು ೧೯೩೪ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರವಾಸದಲ್ಲಿದ್ದಾಗ ಎಂಬುದು ಗಮನಾರ್ಹ.   ಇದಕ್ಕೆ ಭಾರತದಲ್ಲಿ ಆಗ ಪ್ರಕಟವಾಗುತ್ತಿದ್ದ ದಿನ ಪತ್ರಿಕೆ ವರದಿಗಳೇ ಸಾಕ್ಷಿ. ಅಲ್ಲದೇ  ಗಾಂಧಿಜೀಯೇ ಹೊರ ತರುತ್ತಿದ್ದ ಪತ್ರಿಕೆಯಲ್ಲಿ ಈ ಸಂಗತಿಗಳು ದಾಖಲಾಗಿವೆ.

 ಮುಂಬೈ ಪ್ರಾವಿಜೆನ್ಸಿಯಲ್ಲಿದ್ದ ಅಂದಿನ ಕೆನರಾ ಜಿಲ್ಲೆ, ಇಂದಿನ ಕಾರವಾರ ಜಿಲ್ಲೆಯನ್ನು ಸುಬ್ರಾಯ್  ರಾಮಚಂದ್ರ ಹಳದೀಪುರ  ಪ್ರಜಾಪ್ರತಿನಿಧಿಯಾಗಿ ಪ್ರತಿನಿಧಿಸುತ್ತಿದ್ದರು. ಅಲ್ಲದೇ ಗಾಂಧಿಜೀಯನ್ನು ಮುಂಬಯಿನಲ್ಲಿ ಭೇಟಿಯಾಗಿ ಕಾರವಾರಕ್ಕೆ ಬರುವಂತೆ ಆಹ್ವಾನಿಸಿದ್ದರು. ೧೯೩೪ರಲ್ಲಿ ಅಸ್ಪೃಶ್ಯತೆಯ ವಿರುದ್ಧ ಜಾಗೃತಿಗಾಗಿ ಗಾಂಧಿಜೀ ಭಾರತ ಪ್ರವಾಸ ಕೈಗೊಂಡಿದ್ದರು.

೨೩ ಫೆಬ್ರುವರಿ ೧೯೩೪ರಲ್ಲಿ ಮಂಗಳೂರು ಪ್ರವಾಸ ಮುಗಿಸಿ, ಫೆ.೨೮ ರಂದು ಕುಮಟಾ ತಲುಪಿದ ಗಾಂಧಿಜೀ, ಕುಮಟಾ ಹಾಗೂ  ಅಂಕೋಲಾದಲ್ಲಿ ಅಸ್ಪೃಶ್ಯತೆಯ ಅನಿಷ್ಠದ ವಿರುದ್ಧ ಮಾತನಾಡಿದ್ದರು.  ಗಾಂಧೀಜಿ ಸಂಜೆ ಕಾರವಾರಕ್ಕೆ ಬಂದರು. ಅವರನ್ನು ಸುಬ್ಬರಾವ್ ಆರ್. ಹಳದೀಪುರ ಸ್ವಾಗತಿಸಿದರು. ಕಾರವಾರ ನಗರಸಭೆಯಿಂದ ಆಗ ಗಾಂಧಿಜೀಯನ್ನು  ಸನ್ಮಾನಿಸಲಾಗಿತ್ತು.  ಗಾಂಧಿಜೀಗೆ ನೀಡಿದ ಸ್ಮರಣಿಕೆಯನ್ನು ಗಾಂಧೀ ಸಾರ್ವಜನಿಕ ಸಭೆಯಲ್ಲಿ ಹರಾಜು ಮಾಡಿದರು. ಅದನ್ನು ಶಾಸಕ ಸುಬ್ಬರಾಯ ಹಳದೀಪುರ ಅವರು ಹರಾಜಿನಲ್ಲಿ ಪಡೆದು ಸಾವಿರ ರೂ. ಮೊತ್ತವನ್ನು ನೀಡಿದರು. ಆ ಹಣವನ್ನು  ಅಸ್ಪೃಶ್ಯತಾ ನಿವಾರಣ ಕಾರ್ಯಕ್ರಮಕ್ಕೆ ಬಳಸುವುದಾಗಿ ಗಾಂಧೀಜಿ ಹೇಳಿದರು.

ಇಲ್ಲಿ ಪ್ರಮುಖವಾದುದು  ಅಸ್ಪೃಶ್ಯತೆ ವಿರುದ್ಧ ಜನ ಜಾಗೃತಿಗಾಗಿ ದೇಶದ ಹಲವು ರಾಜ್ಯ ಸುತ್ತಿದ ಗಾಂಧೀಜಿ ಅಸ್ಪೃಶ್ಯತಾ ನಿವಾರಣಾ  ನಿಧಿ ಸಂಗ್ರಹದ ಮೂಲಕ ದೇಶದ ಜನತೆಯಲ್ಲಿ ಮನುಷ್ಯ ಸಣ್ಣತನಗಳನ್ನು ಬಿಡಿಸಲು ಯತ್ನಿಸಿದರು. ಆಸ್ಪೃಶ್ಯತೆ ನಮಗೆ ಲಜ್ಜಾಸ್ಪದವಾದುದು. ಅದನ್ನು  ನಾವು ತೊಲಗಿಸಬೇಕು ಎಂದಿದ್ದರು.

ಕಾರವಾರದ ಸಭಾ ಕಾರ್ಯಕ್ರಮದಲ್ಲಿ  ಜನತೆಯನ್ನು ಉದ್ದೇಶಿಸಿ ಮಾತನಾಡಿದ  ಗಾಂಧೀಜಿ ಕರ್ನಾಟಕದ ಜನತೆ ಅಸ್ಪೃಶ್ಯತೆಯನ್ನು ಕಿತ್ತೊಗೆಯುವತ್ತ ಸಜ್ಜಾಗಿರುವುದನ್ನು ನಾನು ಕಾಣುವಂತಾದುದಕ್ಕಾಗಿ, ನನಗೆ ಬಹಳ ಸಂತೋಷವಾಗಿದೆ. ಅಸ್ಪೃಶ್ಯತೆ ನಿವಾರಣೆಗೆ ಅನುಕೂಲವಾಗಿ ಜನರಲ್ಲಿ ಪರಿವರ್ತನೆ  ದಿನಾಲು ಬೆಳೆಯುತ್ತಿರುವ ಸಂತೋಷ.

ಈ  ಭಾವನೆಯನ್ನು ಕ್ರಿಯೆಯ ರೂಪದಲ್ಲಿ ಮಾರ್ಪಡಿಸಿಕೊಳ್ಳುವ ಸತ್ಯನಿಷ್ಠ ಮತ್ತು ಉತ್ಸಾಹ ಶಾಲಿ ಕಾರ್ಯಕರ್ತರನ್ನು ಅಭಿನಂದಿಸುವೆ.

 ಅಸ್ಪೃಶ್ಯರ ಬಗ್ಗೆ ಎಲ್ಲೆಲ್ಲೂ ಸಹಾನುಭೂತಿ ಇದೆ. ಸರಿಯಾದ ವಾತಾವರಣ ಇದೆ. ಆದರೆ ಆ ನಂಬಿಕೆಯನ್ನು ಸಾರ್ಥಕಗೊಳಿಸುವ ಜ್ಞಾನಬೇಕು. “ ಎಲ್ಲಿ ಶ್ರದ್ಧೆ ಮಾಯಾವಾಗುತ್ತದೆಯೋ, ಅಲ್ಲಿ  ಆರಂಭಶೂರರಾಗಿ ಉಳಿಯುತ್ತೇವೆ” ಎಂದರು.

ಹಿಂದೂಗಳು ನಾವು ಅಸ್ಪೃಶ್ಯರನ್ನು ಕೀಳಾಗಿ ಕಾಣುತ್ತೇವೆ. ಅವರನ್ನು ಮುಟ್ಟಿದರೆ ಪಾಪ ಎಂದು ತಿಳಿದಿದ್ದೇವೆ. ಇದು ದೇವರೆದುರು ಮಾಡಿದ ಮಹಾಪಾಪ. ಭಗವಂತ ಮಾನವಕುಲದ ಒಂದು ಭಾಗವನ್ನು ಅಸ್ಪೃಶ್ಯ ಎಂದು ಬೇರೆ ಮಾಡಿದ ಎಂಬ ಮಾತು ದೈವದ್ರೋಹ. ಹಿಂದೂಗಳಿಗೆ ನಾನು ಎಚ್ಚರಿಕೆ ಕೊಡಬಯಸುತ್ತೇನೆ. ಅಸ್ಪೃಶ್ಯತಾ ನಿವಾರಣೆ ಒಂದು ಪ್ರಾಯಶ್ಚಿತ್ತ. ಸವರ್ಣ ಹಿಂದೂಗಳು ತಮಗೂ ಹಿಂದೂಧರ್ಮಕ್ಕೂ ಪ್ರಾಯಶ್ಚಿತ್ತ ಮೂಲಕ ಋಣಮುಕ್ತರಾಗಬೇಕು. `ಹೊಲಸು’ ರಾಷ್ಟ್ರಗಳಿಗೆ ಹೇಗೋ,  ಧರ್ಮಗಳಿಗೂ ಹಾಗೆಯೇ. ದೇವರ ಅನುಗ್ರಹ, ದೇವರ ಸಾಕ್ಷಾತ್ಕಾರವು ಯಾವ ಜಾತಿಗೂ ಯಾವ ರಾಷ್ಟçಕ್ಕೂ ಗುತ್ತಿಗೆಯಲ್ಲ. ಯಾವ ರಾಷ್ಟ,ಯಾವ ಮತ, ಅನ್ಯಾಯಕ್ಕೆ, ಅಸತ್ಯಕ್ಕೆ, ಹಿಂಸೆಗೆ ಮಡಿಲು ಕಟ್ಟುತ್ತದೆಯೋ ಅದು ಈ ಭೂಮಿಯಿಂದ ಮಾಯವಾಗುತ್ತದೆ. ಅಸ್ಪಶ್ಯತೆಯು ಹಿಂದೂ ಧರ್ಮಕ್ಕೆ ಒಂದು ಕಳಂಕ ಮತ್ತು ಮಾನವೀಯತೆಗೆ ಎಸಗಿದ ಅಪರಾಧ ಎಂದು ಗಾಂಧಿ ಸಮಾವೇಶದಲ್ಲಿ ನೆರೆದಿದ್ದ ಜನತೆಗೆ ವಿವರಿಸಿದರು.

೧೯೩೪ ಮಾರ್ಚ ೧ ರಂದು ಗಾಂಧಿ ಶಿರಸಿ ತಲುಪಿದರು. 

ಗಾಂಧೀಜಿ ಶಿರಸಿಯಲ್ಲಿ ಅವರು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದರು.   ಕುರಿ, ಕೋಣ, ಕೋಳಿಗಳನ್ನು ಬಲಿ ಕೊಡಬಾರದು ಎಂದು ಹೇಳಿದ್ದರು. ಆಗ ಶಾಸಕರೂ ಮತ್ತು ದೇವಾಲಯದ ಧರ್ಮದರ್ಶಿಗಳೂ ಆಗಿದ್ದ ಎಸ್.ಎಸ್.ಕೇಶವ್ವಾನ್ ಗಾಂಧೀಜಿ ಕರೆಯನ್ನು ಅನುಸರಿಸಿ, ಕೋಣ ಬಲಿ ನಿಲ್ಲಿಸಿದರು. ಅದು ಈಗಲೂ ಮುಂದುವರಿದಿದೆ.

೧೯೪೨ ಮಾರ್ಚ ೨೬  ಹರಿಜನ ಪತ್ರಿಕೆಯ ಸಂಚಿಕೆಯಲ್ಲಿ ಶಿರಸಿಯ ಮಾರಿಕಾಂಬ ಜಾತ್ರೆ ಕುರಿತಂತೆ ನೆನಪುಗಳನ್ನು ಗಾಂಧಿಜೀ ದಾಖಲಿಸಿದ್ದಾರೆ.

ಶಿರಸಿ ಭೇಟಿಯ ನಂತರ  ಗಾಂಧಿಜೀ ಸಿದ್ದಾಪುರಕ್ಕೆ ತೆರಳಿದರು.  ಮಹಾದೇವಿ ತಾಯಿ ರಾಮಕೃಷ್ಣ ಹೆಗಡೆ ಅವರ ಅಕ್ಕ. ಸಿದ್ದಾಪುರದ ದೊಡ್ಮನೆ ಹೆಗಡೆ ಅವರ ಮಗಳು. ಮಹಾದೇವಿ ಅವರಿಗೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಆಕೆಯ ಗಂಡ ತೀರಿಹೋಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಆಕೆಯ ತಲೆಯ ಕೇಶ ಮುಂಡನ ಮಾಡಿಸಲಾಗಿತ್ತು. ಇದನ್ನು ಸಿದ್ದಾಪುರಕ್ಕೆ ಗಾಂಧೀಜಿ ಬಂದಾಗ ಗಮನಿಸಿದರು. ಮಹಾದೇವಿ ಅವರ ತಂದೆಯ  ಜೊತೆ ಗಾಂಧೀಜಿ ಮಾತನಾಡಿದರು. ಕೇಶ ಮುಂಡನಕ್ಕೆ ವಿರೋಧ ವ್ಯಕ್ತಪಡಿಸಿದರು. ಇದು ಸಂಪ್ರದಾಯ ಎಂದು ಮಹಾದೇವಿ ತಂದೆ ಪ್ರತಿಕ್ರಿಯಿಸಿದಾಗ `ನಿಮ್ಮ ಮಗಳಿಂದಲೇ ಕೇಶ ಮುಂಡನಾ ಪದ್ಧತಿ ನಿಲ್ಲಲಿ.  ಹೊಸ ಪದ್ಧತಿ ಆರಂಭವಾಗಲಿ. ಏಕೆ ಆಗಬಾರದು? ಎಂದು ಗಾಂಧೀಜಿ ಮರು ಪ್ರಶ್ನಿಸಿದರು. `ವರ್ದಾ ಆಶ್ರಮಕ್ಕೆ ತೆರಳಲು ಆಕೆ ಇಚ್ಚೆಸುತ್ತಾಳೆ. ನಿಮ್ಮ ಅನುಮತಿ ಇದೆಯೇ’ ಎಂದು ಗಾಂಧೀಜಿ ಮತ್ತೆ ಪ್ರಶ್ನಿಸಿದರು. `ಅವಳು ಪ್ರಬುದ್ಧಳು. ಮನಸ್ಸಿಗೆ ಬಂದಲ್ಲಿ ಹೋಗಲು ಸ್ವತಂತ್ರಳು’ ಎಂದರು ದೊಡ್ಮನೆ ಹೆಗಡೆ. ಹೀಗೆ ಗಾಂಧಿಜೀ ಉತ್ತರ ಕನ್ನಡ ಪ್ರವಾಸ ಮೂರು ಮುಖ್ಯ ಸಂದೇಶಗಳನ್ನು ನೀಡಿತ್ತು. ಅವು ಈಗಲೂ ನಮಗೆ , ಸಮಾಜಕ್ಕೆ ದಾರಿ ದೀಪವಾಗಿವೆ ಎಂಬುದನ್ನು ಮರೆಯಲಾಗದು.

………..

ಮಹಾತ್ಮಾ ಗಾಂಧಿಜೀ ಅವರ ೧೫೧ ನೇ ಜನ್ಮದಿನ ವಾರ್ಷಾಚರಣೆಯ ಈ ಸಂದರ್ಭದಲ್ಲಿ ದೇಶ ಅವರನ್ನು ಈಗ ಸ್ಮರಿಸುತ್ತಿದೆ. ರಾಷ್ಟ್ರಪಿತನನ್ನು  ಪುನಃ ಪುನಃ ಸ್ಮರಿಸಿಕೊಳ್ಳುತ್ತಿದೆ. ಗ್ರಾಮೀಣ ಭಾರತದ ಪುನಶ್ಚೇತನಕ್ಕೆ ಗಾಂಧಿಜೀ ಕೆಲ ಸಿದ್ಧ ಸರಳ ಮಾದರಿಗಳನ್ನು ಬಿಟ್ಟುಹೋಗಿದ್ದರು. ಸರಳತೆ ಮತ್ತು ಕೃಷಿ ಆಧಾರಿತ ಬದುಕು ಗ್ರಾಮೀಣ ಭಾರತವನ್ನು ಪುನಃ ಕಟ್ಟಬಲ್ಲದು ಎಂಬುದು ಗಾಂಧಿಜೀ ಆಶಯವಾಗಿತ್ತು.

ಗ್ರಾಮೀಣ ಗುಡಿಕೈಗಾರಿಕೆಗಳನ್ನು ಉಳಿಸಿಕೊಳ್ಳುವುದು, ಯಂತ್ರಗಳ ನೆರವಿನಿಂದ ಸಾಧ್ಯವಾದಷ್ಟು ದೂರ ಇರುವುದು ಗಾಂಧಿಜೀ ತಿಳಿ ಹೇಳಿದ ಸರಳ ಸಂಗತಿಗಳು. ಸತ್ಯ, ಅಹಿಂಸೆ, ಸಹನೆ ಮಾರ್ಗ ಗಾಂಧಿಜೀ ನಡೆ ನುಡಿಯಲ್ಲೇ ಇತ್ತು. ಅದಕ್ಕಾಗಿ ಗಾಂಧಿ ಹೇಳಿದ್ದು ನನ್ನ ಜೀವನವೇ ನನ್ನ ಸಂದೇಶ ಎಂದು.

ತುಂಬಾ ಪ್ರಯೋಗಶೀಲರಾಗಿದ್ದ ಗಾಂಧಿಜೀ ಜೀವನದುದ್ದಕ್ಕೂ ಅಧಿಕಾರ ದಿಂದ ದೂರ ಉಳಿದರು. ಆದರೆ ಅಧಿಕಾರ ಕೇಂದ್ರವನ್ನು ನಿರ್ದೇಶಿಸಿದರು.ತ ಬ್ರಿಟಿಷರನ್ನು ಗಾಂಧಿ ಬದಲಿಸಿದರು, ಮನವೊಲಿಸಿದರು, ಅವರಿಂದ ಸ್ವಾತಂತ್ರ್ಯವನ್ನು ಪಡೆದರು ಎಂಬುದು ಸ್ಮರಣಿಯ.

..************************************

ನಾಗರಾಜ ಹರಪನಹಳ್ಳಿ.

2 thoughts on “ಉತ್ತರ ಕನ್ನಡ ಜಿಲ್ಲೆ ದಾರಿಯಲ್ಲಿ ಗಾಂಧಿ ಬಂದು ಹೋಗಿದ್ದರು….

  1. ತುಂಬಾ ಚೆನ್ನಾಗಿದೆ.ಲೇಖನ ನಿಜವಾಗಿಯೂ ಗಾಂಧೀಜಿ ಸನಿಹದಲ್ಲೇ ಕೊಂಡೊಯ್ದಂತಿದೆ. ಧನ್ಯವಾದಗಳು.

Leave a Reply

Back To Top