ಧಾರಾವಾಹಿ ಸಂಗಾತಿ-17 ಅರ್ಜುನ ಉವಾಚ ವಿಶ್ವನಾಥ್ ಎನ್ ನೇರಳೆಕಟ್ಟೆ ಕುದುರೆ ಸಂಚಾರಕ್ಕೆ ಸಂಚಕಾರವಾಯಿತು ಆ ಶಿಲೆ! ಈಗ ನಮ್ಮ ಜೊತೆ ನೀಲಧ್ವಜನೂ ಸೇರಿಕೊಂಡಿದ್ದ. ತೆಂಕುದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿತ್ತು ಹಯ. ಮುಂದೆ ಕಾಣುತ್ತಿದ್ದದ್ದು ವಿಂಧ್ಯಾ ಪರ್ವತ. ನಮ್ಮ ಅವಿರತ ಚಲನೆಯನ್ನು ಕಂಡೂ ಚಲನೆಗೆ ಮನಸ್ಸು ಮಾಡದೆ ದೃಢತೆಯೇ ಮೈವೆತ್ತ ಬಗೆಯಲ್ಲಿತ್ತು ಅದರ ನಿಲುವು. ಶೃಂಗವಿತ್ತು. ಕಂದರವಿತ್ತು. ಮಂಜು ಮುಸುಕಿತ್ತು. ಕಾಡು ಬೆಳೆದಿತ್ತು. ಅರಣ್ಯವನ್ನೇ ಆಶ್ರಯಿಸಿಕೊಂಡಿದ್ದ ಜನರನ್ನು ಕಂಡೆವು. ಬಗೆಬಗೆಯ ಪಕ್ಷಿಗಳು ಅಲ್ಲಿದ್ದವು. ವಿಧವಿಧದ ಪ್ರಾಣಿಸಮೂಹಗಳಿದ್ದವು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ ಋಷಿಗಳ ಆಶ್ರಮಗಳು ಕಣ್ಣಿಗೆ ಕಂಡವು.ವಿಂಧ್ಯಾ ಪರ್ವತದೊಳಗನ್ನು ಪ್ರವೇಶಿಸಿದೆವು. ಕುದುರೆಯನ್ನು ಕೂಡಿಕೊಂಡ ನಾವು, ಕೃಷ್ಣ ಕಿಂಕರರು, ಕಾಲಿಟ್ಟ ಒಡನೆಯೇ ಅಚ್ಚರಿ ಹುಟ್ಟಿಸುವ ಪರಿವರ್ತನೆಗೀಡಾಯಿತು ಆ ಪರ್ವತ ಪ್ರದೇಶ. ದುರ್ಗಮವಾಗಿದ್ದ ದಾರಿಯದು ಸುಗಮವಾಗಿ ತೋರಿತು. ಅದುವರೆಗೂ ನೆಲೆಸಿದ್ದ ಕತ್ತಲು ತೊಲಗಿ ಬೆಳ್ಳನೆಯ ಬೆಳಕು ಮೂಡಿಬಂತು. ನಾವೆಲ್ಲರೂ ಕುದುರೆಯ ಜೊತೆಜೊತೆಗೇ ಇದ್ದೆವು. ತನ್ನ ಇಚ್ಛೆಯನುಸಾರ ಸಾಗುತ್ತಿತ್ತು ಆ ಕುದುರೆ. ಮುಂದೆ ಮುಂದೆ ಹೋದಾಗ ಎದುರಾದದ್ದು ಅತೀವ ವಿಸ್ತಾರದ ಒಂದು ಶಿಲೆ. ಒಂದು ಯೋಜನದಷ್ಟು ಅಗಲವಿದ್ದಿರಬಹುದು ಅದು. ಅದರ ಮೇಲೆಯೂ ನಡೆಯುವೆ ತಾನು ಎಂಬAತೆ ಕಾಲುಗಳನ್ನಿಟ್ಟಿತು ಕುದುರೆ.ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಅಶ್ವದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾದದ್ದು ಆಗಲೇ. ಕಾಲುಗಳನ್ನು ಮೇಲಕ್ಕೆ ಎತ್ತಲಾಗದ, ಎತ್ತಿ ಮುಂದಿಡಲಾಗದ ಸ್ಥಿತಿಯಲ್ಲಿ ಕುದುರೆ ಅಲ್ಲಿಯೇ ನಿಂತುಬಿಟ್ಟಿತು. ಆ ಶಿಲೆಗೆ ಅದರ ಕಾಲುಗಳು ಅಂಟಿಕೊAಡಿವೆಯೋ ಏನೋ ಎಂಬAತೆ ತೋರುತ್ತಿತ್ತು. ನಡೆಯುವುದನ್ನೇ ಮರೆತಂತೆ ಅದು ಅಲ್ಲಿಯೇ ನಿಂತಿತು. ಪೌರ್ಣಮಿಯಂದು ಚಂದ್ರಾಕೃತಿಯ ಒಳಗೆ ಮೊಲವೊಂದು ತಟಸ್ಥವಾಗಿ ತೋರುವಂತೆ ಅಗಲಗಲವಾಗಿದ್ದ ಶಿಲೆಯ ಮೇಲೆ ಈ ಕುದುರೆ ಅಚಲವಾಗಿ ನಿಂತಿತ್ತು. ಗಾಳಿಯ ವೇಗವನ್ನೂ ಮೀರಿ ನಡೆಯುವ ಕುದುರೆ ಈ ಬಗೆಯಲ್ಲಿ ನಿಂತುದನ್ನು ಕಂಡಾಗ ಆಶ್ಚರ್ಯವಲ್ಲದೆ ಇನ್ನೇನು ತಾನೇ ಆಗಲು ಸಾಧ್ಯ!ಕುದುರೆ ಚಲಿಸಲೇಬೇಕಿತ್ತು. ಅದು ಚಲಿಸದೆಯೇ ನಾವು ಚಲಿಸುವಂತಿರಲಿಲ್ಲ. ಚಲಿಸಿದರೂ ಅದಕ್ಕೇನೇನೂ ಸಾರ್ಥಕತೆಯಿರಲಿಲ್ಲ. ಬದುಕು ಎಂದರೆ ಕೆಲವೊಮ್ಮೆ ಹೀಗೆಯೇ. ಇನ್ನೊಬ್ಬರ ಚಲನೆಯಿದ್ದರೆ ಮಾತ್ರ ನಮ್ಮ ಚಲನೆಗೆ ಅರ್ಥವಿರುತ್ತದೆ.ಜೊತೆಗಿದ್ದ ಸೇವಕರನ್ನು ಕುದುರೆಯ ಬಳಿಗೆ ಅಟ್ಟಿದೆ. ಕುದುರೆಯ ಕಾಲುಗಳನ್ನು ಬಿಡಿಸಲು ಹೇಳಿದೆ. ಅಳವು ತೋರಿದ ಆಳುಗಳು ಸೋತು ಅಳುಮೋರೆ ಮಾಡಿದರು.ಏನಾಯಿತಿದು! ಕುದುರೆಗೇಕೆ ಇಂತಹ ದುರವಸ್ಥೆ! ಅದು ಚಲಿಸದಿದ್ದರೆ ಮುಂದಿನ ತಾಣವನ್ನು ಸೇರುವ ಬಗೆ ಹೇಗೆ! ಅಶ್ವಮೇಧ ಯಾಗದ ಗತಿಯೇನಾಯಿತು! ಎಂದೆಲ್ಲಾ ಚಿಂತೆ ಮಾಡಿದ ನನಗೆ ಹೊಳೆದ ಯೋಚನೆ ಮುನಿಶಾಪದ್ದು. ಯಾರೋ ಮುನಿಗಳ ಶಾಪದ ಫಲವೇ ಇದಾಗಿರಬೇಕು ಎನಿಸಿತು. ತಿಳಿದ ಹಿರಿಯರಲ್ಲಿ ಕೇಳಿದರೆ ಒಳಿತು ಎನಿಸಿತು.“ಈ ಸ್ಥಳದಲ್ಲಿ ಸುತ್ತಮುತ್ತ ಋಷಿಗಳ ಆಶ್ರಮವಿದೆಯೇ ಎಂದು ನೋಡಿಬನ್ನಿ” ಎಂದು ಸೇವಕರನ್ನು ಕಳುಹಿಸಿಕೊಟ್ಟೆ. ತಾಣವನ್ನು ಸುತ್ತಾಡಿದ ಅವರು ಸ್ವಲ್ಪ ಸಮಯದಲ್ಲಿಯೇ ನನ್ನ ಬಳಿಬಂದು ಹತ್ತಿರದಲ್ಲಿಯೇ ಒಂದು ಆಶ್ರಮ ಇರುವುದಾಗಿ ಹೇಳಿದರು. ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಇವರೆಲ್ಲರನ್ನೂ ಜೊತೆ ಸೇರಿಸಿಕೊಂಡು ಆ ಆಶ್ರಮವಿದ್ದೆಡೆಗೆ ಹೊರಟೆ. ಹೋಗಿ ತಲುಪಿದೆ.ಶ್ರೇಷ್ಠ ಋಷಿಗಳು ಇರುವ ಪ್ರದೇಶವದು ಎನ್ನುವುದು ಆ ಪರಿಸರವನ್ನು ಈಕ್ಷಿಸಿದಾಗಲೇ ಗೊತ್ತಾಗುವಂತಿತ್ತು. ಬಗೆಬಗೆಯ ಮೃಗಗಳು ಪಕ್ಷಿಗಳು ತಮ್ಮ ವೈರತ್ವವನ್ನು ಮರೆತು ಅನುರಾಗ ಭಾವದಲ್ಲಿ ಸೊಗ ಕಂಡುಕೊಂಡಿದ್ದವು. ಅಗ್ನಿ, ವಾಯು, ಚಂದ್ರ, ವರುಣ ಮೊದಲಾದ ದೇವಾನುದೇವತೆಗಳು ಅಲ್ಲಿ ನೆಮ್ಮದಿಯಿಂದ ನೆಲೆಸಿದ್ದರು. ಅಲ್ಲಿದ್ದ ಎಲ್ಲಾ ಗಿಡ ಮರಗಳಲ್ಲಿಯೂ ಕಾಯಿ ಹಣ್ಣುಗಳ ಸಮೃದ್ಧಿ. ಬಂದವರು ಬಯಸಿದ್ದನ್ನು ಯಾವಾಗಲೂ ನೀಡಲು ಸಿದ್ಧವಾಗಿ ನಿಂತಂತೆ ತೋರುತ್ತಿತ್ತು ವೃಕ್ಷ ತರುಗಳು ನಿಂತ ಭಂಗಿ. ಸದಾಕಾಲವೂ ಸುಗ್ಗಿಯ ಕಾಲ ಎಂಬAತೆ ಪ್ರಕೃತಿ ಕಾಣಿಸುತ್ತಿತ್ತು. ಸುಖದ ಕೊರತೆಯಿದ್ದರೆ ತಾನೇ ದುಃಖ ಹುಟ್ಟುವುದು! ದುಃಖ ಉದ್ಭವಿಸಲು ಅಲ್ಲಿ ಅವಕಾಶವೇ ಇರಲಿಲ್ಲ. ಸುಖವೇ ಎಲ್ಲಾ.ಆಶ್ರಮದ ಒಂದೆಡೆಯಲ್ಲಿ ಒಂದಷ್ಟು ಮುನಿಗಳು ವೇದ ಆಗಮ ಶಾಸ್ತç ಪುರಾಣಗಳ ಪ್ರವಚನ, ಅಧ್ಯಯನದಲ್ಲಿ ನಿರತರಾಗಿದ್ದರು. ಇನ್ನೊಂದಷ್ಟು ಋಷಿಗಳು ಜಪ ತಪಸ್ಸನ್ನು ಗೈಯ್ಯುತ್ತಾ, ಪರಮಾತ್ಮ ಸ್ಮರಣೆಯಲ್ಲಿ ಪವಿತ್ರಾನುಭವ ಪಡೆಯುತ್ತಿದ್ದರು. ಸೂರ್ಯ ನಮಸ್ಕಾರ, ಹರಿಹರ ಸಮಾರಾಧನೆ, ಯೋಗ ಸಾಧನೆ ಮೊದಲಾದವು ನಡೆಯುತ್ತಿದ್ದವು. ಅತಿಥಿಗಳನ್ನು ಆದರದಿಂದ ಸತ್ಕರಿಸುವುದರಲ್ಲಿ ತಲ್ಲೀನರಾಗಿದ್ದರು ಕೆಲವರು.ಆಗಲೇ ನನ್ನ ಕಣ್ಣನ್ನು ಕಾಡಿದ್ದು ತೇಜೋಮಯವಾದ ಒಂದು ದಿವ್ಯಕಾಯ. ಶಾಂತಭಾವವೇ ಮೂರ್ತರೂಪ ಪಡೆದಂತೆ ಕುಳಿತಿದ್ದರು ಮುನಿಶ್ರೇಷ್ಠರೆನಿಸಿಕೊಂಡ ಸೌಭರಿ ಮುನಿಗಳು. ಅಗ್ನಿಯಂತಹ ಪ್ರವರ್ಧಮಾನವಾದ ಬೆಳಕಿನಿಂದ ಕಂಗೊಳಿಸುತ್ತಿದ್ದರು. ಆದರೆ ಸುಡುವವರಲ್ಲ. ಸೂರ್ಯನಂತೆ ಕಾಂತಿಮಯವಾಗಿದ್ದರು. ಆದರೆ ಮೈಸುಡುವ ಬಿಸಿ ಅವರದ್ದಲ್ಲ. ಜಟೆಯನ್ನು ಹೊತ್ತಿದ್ದವರು ಶಿವನಂತೆ ತೋರುತ್ತಿದ್ದರು. ಆದರೆ ನಂಜಿನ ಕಂಠ ಅವರದ್ದಲ್ಲ.ಸಾಷ್ಟಾಂಗ ನಮಸ್ಕರಿಸಿದೆ ಅವರಿಗೆ. ಅಶ್ವಮೇಧ ಯಾಗದ ವಿಚಾರ ಅರುಹಿದೆ. ಈಗ ಕುದುರೆ ಶಿಲೆಯ ಮೇಲೆ ಕಾಲಿಟ್ಟು ತಟಸ್ಥವಾದ ವಿಷಯ ತಿಳಿಸಿದೆ. “ನಿಮ್ಮ ಮಾರ್ಗದರ್ಶನ ಬೇಕು” ಎಂದೆ.ನನ್ನನ್ನು ಲೇವಡಿ ಮಾಡುವ ನಗು ಅವರ ಮೊಗದಲ್ಲಿ ಮೂಡಿತು. ಈ ಪರಿಯ ನಗುವದೇತಕೆ! ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡಿದೆ. ಡಾ. ವಿಶ್ವನಾಥ ಎನ್ ನೇರಳಕಟ್ಟೆ
“ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್” ಕವಿತೆ ಗೊರೂರು ಅನಂತರಾಜು
ಕಾವ್ಯ ಸಂಗಾತಿ ಗೊರೂರು ಅನಂತರಾಜು “ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್” ನನ್ನವಳಿಗೆ ಗಡದ್ದು ನಿದ್ದೆನನಗೆ ದುಗುಡ ಸುದ್ದಿಇರಾನ್ ಇಸ್ರೇಲ್ ಅಮೇರಿಕಾ ದೇಶಗಳ ಕದನಬಾಂಬ್ ಸುರಿಮಳೆಯ ಸದ್ದುದಿನನಿತ್ಯದ ವಾರ್ ಗಿತ್ತಿಯರ ಧಾರಾವಾಹಿ ನೋಡಿ ಮಡದಿ ಕಣ್ತುಂಬಿ ಮಲಗಿದ್ದಾಳೆನನಗೆ ತಡೆಯಲಾಗದೆ ತಿವಿದೆಬ್ಬಿಸಿ ಕೇಳಿದೆಮಧ್ಯಪ್ರಾಚ್ಯದ ಯುದ್ದದ ಪರಿಣಾಮ ಗೊತ್ತೇನೇಥೂ ಮಧ್ಯದ ವಾಸನೆ ಆ ಕಡೆ ತಿರುಗಿ ಮಲಗಿಗಬ್ಬುನಾಥ ಹೇ ವಿಶ್ವನಾಥಮಂಪರು ನಿದ್ರೆಯಲ್ಲೂ ದೇವರ ನೆನೆದಳುನನ್ನಾಕೆ ಪತ್ರಿಕೆ ಓದುವವಳಲ್ಲಅವಳದೇ ಗೋಳಿನ ನಡುವೆಟಿವಿ ಧಾರಾವಾಹಿ ನೋಡುತ್ತಾಳೆನೋಡ್ರೀ ಅದೆಂತಹ ಕೆಟ್ಟ ಸೊಸೆಅತ್ತೇನೇ ಮನೆಯಿಂದ ಆಚೆಗೆ ಹಾಕಿದ್ದಾಳೆ ತಾಟಗಿತ್ತಿಈಗೇನು ನಾನು ಆಚೆಗೆ ಹೋಗಲೇರೀ, ಬೆಳಿಗ್ಗೆ ದೋಸೆ ಉಯ್ಯಲು ಒಳ್ಳೆಣ್ಣಿ ಇಲ್ಲಒಳ್ಳೆ ಸಮಯ ನೋಡಿ ಬೇಡಿಕೆ ಇಡುತ್ತಾಳೆನನಗೆ ನಾಳೆಗೆ ಗಾಡಿಗೆ ಪೆಟ್ರೋಲ್ ಚಿಂತೆಅಲ್ಲಿ ಯುದ್ದ ನೆಡೆದರೆ ಇಲ್ಲಿ ಬೆಲೆ ಏರಿಕೆಚಿನ್ನದ ಬೆಲೆ ಗಗನಕ್ಕೆ ಏರಿದೆಅವಳ ಸರ ಸವೆದಿದೆಯಂತೆಅದನ್ನು ಮುರಿಸಿ ಗಟ್ಟಿದು ಮಾಡಿಸಿಕೊಡಿ ಎಂದು ನಿತ್ಯ ಪೀಡಿಸುತ್ತಿದ್ದಾಳೆಯುದ್ದ ಮುಗಿಯಲಿ ತಡಿ ಚಿನ್ನ ಎನ್ನುತ್ತಿದ್ದೇನೆಅಡಿಗೆ ಗ್ಯಾಸ್ ಬೆಲೆ ಏರಿದೆಕೊಟ್ಟುಬಿಡಿ ನೋಬಲ್ ಪ್ರೈಜ್ ಟ್ರಂಪಿಗೆ ಗೊರೂರು ಅನಂತರಾಜು
“ಅವಳಿಗೆ ಚಿನ್ನದ ಚಿಂತೆ ನನಗೆ ಪೆಟ್ರೋಲ್” ಕವಿತೆ ಗೊರೂರು ಅನಂತರಾಜು Read Post »
“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?” ಜಯಶ್ರೀ.ಜೆ. ಅಬ್ಬಿಗೇರಿ
ಬದುಕಿನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಜಗತ್ತು ನಿಮ್ಮನ್ನು ನಂಬುವ ಮೊದಲು. . . .?” ಅಮೆರಿಕದ ಪ್ರಸಿದ್ಧ ಅಧ್ಯಕ್ಷರಲ್ಲಿ ಒಬ್ಬರಾದ ಅಬ್ರಹಾಂ ಲಿಂಕನ್ ಅವರ ಜೀವನ ಸೋಲುಗಳ ಸರಮಾಲೆಯಿಂದ ಕೂಡಿತ್ತು ವ್ಯಾಪಾರದಲ್ಲಿ ನಷ್ಟ, ಪ್ರಿಯತಮೆಯ ಸಾವು, ಹನ್ನೆರಡಕ್ಕೂ ಹೆಚ್ಚು ಬಾರಿ ಚುನಾವಣೆಯಲ್ಲಿ ಸೋಲು ಕಂಡರು. ಆದರೂ,’ನನ್ನ ಆತ್ಮವಿಶ್ವಾಸ ನನ್ನನ್ನು ಕೈಬಿಡುವುದಿಲ್ಲ.’ ಎಂದು ನಂಬಿದ್ದರು. ಅವರು ಅಂತಿಮವಾಗಿ ತಮ್ಮ ೫೨ನೇ ವಯಸ್ಸಿನಲ್ಲಿ ಅಮೆರಿಕದ ಅಧ್ಯಕ್ಷರಾದರು. ಸ್ವ ನಂಬಿಕೆ , , ,?ಜೀವನದ ಅತೀ ದೊಡ್ಡ ಶಕ್ತಿ ಯಾವುದು ಎಂದು ಯೋಚಿಸಿದಾಗ ಸ್ವ ನಂಬಿಕೆ ಎನ್ನುವುದು ಉತ್ತರವಾಗಿ ಸಿಗುತ್ತದೆ. ಸ್ವ ನಂಬಿಕೆ ಎಂದರೆ ತನ್ನನ್ನು ತಾನು ನಂಬುವುದು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುತ್ತಿರುವ ನಾವು ಲಿಂಕನ್‌ರoತಹ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕಿದೆ. ಸ್ವ ನಂಬಿಕೆ ಇಲ್ಲವೆಂದರೆ ಯಾವ ಸ್ಥಾನವೂ ಇಲ್ಲ. ಯಾರಲ್ಲಿ ಆತ್ಮವಿಶ್ವಾಸ ಇಲ್ಲವೋ ಅವರಲ್ಲಿ ಭಯ ಇರುತ್ತದೆ. ಮತ್ತು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇರುವುದಿಲ್ಲ. ಇಲ್ಲದಿದ್ದರೆ . . .? ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಪ್ರತಿಭಾವಂತನಾಗಿದ್ದರೂ ಅವನಲ್ಲಿ ಸ್ವ ನಂಬಿಕೆ ಇಲ್ಲವೆಂದರೆ ಅವನು ಸಾಧನೆ ಮಾಡುವುದು ಅಸಾಧ್ಯ. ಸಾಧನೆಗೆ ಬೇಕಾದುದು ಎಲ್ಲವೂ ಇದ್ದು ಸ್ವ ನಂಬಿಕೆ ಇಲ್ಲದಿದ್ದರೆ ಸರಿಯಾದ ಇಂಜಿನ್ ಸ್ಟೇರಿಂಗ್ ಗಾಲಿಗಳು ಡ್ರೈವರ್ಎಲ್ಲವೂ ಇದ್ದು ಇಂಧನವಿಲ್ಲದ ಕಾರ್ ಇದ್ದಂತೆ. ಅದು ಮುಂದಕ್ಕೆ ಚಲಿಸಲಾರದು.‘ಜಗತ್ತಿನ ಇತಿಹಾಸವು ತನ್ನ ಮೇಲೆ ನಂಬಿಕೆ ಇಟ್ಟಿದ್ದ ಕೆಲವೇ ಕೆಲವು ವ್ಯಕ್ತಿಗಳ ಇತಿಹಾಸವಾಗಿದೆ. ಆ ನಂಬಿಕೆಯು ಒಳಗಿರುವ ದೈವತ್ವವನ್ನು ಜಾಗೃತಗೊಳಿಸುತ್ತದೆ. ನೀವು ಯಾವುದನ್ನಾದರೂ ಸಾಧಿಸಬಹುದು.’ ಎಂದಿದ್ದಾರೆ ಸ್ವಾಮಿ ವಿವೇಕಾನಂದರು. ಆತ್ಮವಿಶ್ವಾಸವೆಂದರೆ , , ,? ಆತ್ಮವಿಶ್ವಾಸವೆಂದರೆ ನಮ್ಮ ಮೇಲೆ ನಮಗಿರುವ ವಿಶ್ವಾಸ. ನಮ್ಮ ಸಾಮರ್ಥ್ಯ ಗುಣಗಳು ಮತ್ತು ನಿರ್ಧಾರಗಳ ಮೇಲೆ ನಮಗಿರುವ ಅಚಲವಾದ ನಂಬಿಕೆ. ಯಾವುದೇ ಕ್ಷೇತ್ರದಲ್ಲಿ ಜಯಗಳಿಸಲು ಇದೇ ಅತಿ ಮುಖ್ಯವಾದ ಅಸ್ತ್ರವಾಗಿದೆ. ಅದು ನಮ್ಮ ಆಂತರಿಕ ಶಕ್ತಿ. ಜೀವನದ ಪ್ರತಿಯೊಂದು ಹಂತದಲ್ಲೂ ನಾವು ಯಶಸ್ವಿಯಾಗಲು ಅತಿ ಮುಖ್ಯ. ಒಬ್ಬ ವ್ಯಕ್ತಿಯು ಎಷ್ಟೇ ಬುದ್ಧಿವಂತನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿದ್ದರೆ ಗುರಿ ತಲುಪುವುದು ಕಷ್ಟವಾಗುತ್ತದೆ. ಕಾರಣ ಅರಿಯಿರಿ ಆತ್ಮವಿಶ್ವಾಸ ಕಡಿಮೆ ಆಗಲು ಕಾರಣ ಹಲವಾರು ಅದರಲ್ಲಿ ಮುಖ್ಯವೆಂದರೆ; ಮನೆಯಲ್ಲಿ ಹಿರಿಯರು ಶಾಲೆಯಲ್ಲಿ ಶಿಕ್ಷಕರು ನಿನಗೇನೂ ಬರುವುದಿಲ್ಲ. ನಿನ್ನ ಕೈಯಲ್ಲಿ ಏನೂ ಆಗುವುದಿಲ್ಲ. ನೀನು ಮೂರ್ಖ. ನೀನು ದಡ್ಡ ಎಂದು ಹೇಳಿದ್ದನ್ನು ಸಬ್ ಕಾನ್ಶಿಯಸ್ ಮೈಂಡ್ ಅಚ್ಚೊತ್ತಿಕೊಂಡಿರುತ್ತದೆ. ಅದೇ ಸರಿಯೆಂದು ನಂಬಿ ಅದೇ ನಂಬಿಕೆಯಿoದ ದೊಡ್ಡವರಾಗಿರುವುದು. ಮದ್ದು ಅರೆಯಿರಿ ‘ನಿಮ್ಮಲ್ಲಿ ಅದನ್ನು ಮಾಡುವ ಸಾಮರ್ಥ್ಯವಿದೆ ಎಂಬ ನಂಬಿಕೆ ನಿಮಗಿದ್ದರೆ, ಆರಂಭದಲ್ಲಿ ಆ ಸಾಮರ್ಥ್ಯ ಇಲ್ಲದಿದ್ದರೂ ಸಹ, ಕೆಲಸದ ಕೊನೆಯಲ್ಲಿ ಅದನ್ನು ಮಡುವ ಶಕ್ತಿಯನ್ನು ನೀವು ಖಂಡಿತವಾಗಿಯೂ ಪಡೆದುಕೊಳ್ಳುತ್ತೀರಿ.’ ಎಂದು ಹೇಳಿದ್ದಾರೆ ಗಾಂಧೀಜಿ. ಅವರ ನುಡಿಮುತ್ತಿನಂತೆ ಆತ್ಮವಿಶ್ವಾಸದ ಕೊರತೆಗೆ ಮದ್ದು ಅರೆಯಬೇಕು. ಇದುವರೆಗೂ ನಾನು ತಿಳಿದಿದ್ದು ತಪ್ಪು. ಇತರರ ತರಹ ನನ್ನಲ್ಲಿ ಅರ್ಹತೆಯಿದೆ. ನಾನು ಏನು ಬೇಕಾದರೂ ಮಾಡಬಹುದು ನನಗನಿಸಿದ್ದನ್ನು ಸಾಧಿಸಬಹುದು ಅನ್ನೋ ಮೈಂಡ್ ಸೆಟ್ ಬೆಳೆಸಿಕೊಳ್ಳಬೇಕು. ಚಿಕ್ಕ ಗುರಿ ‘ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಎಂಬುದು ‘ಅಪಜಯ’ ಎಂಬ ಕಾಯಿಲೆಯನ್ನು ಕೊಲ್ಲಲು ಇರುವ ಅತ್ಯತ್ತಮ ಔಷಧಿಯಾಗಿದೆ. ಇದು ನಿಮ್ಮನ್ನು ಒಬ್ಬ ಯಶಸ್ವಿ ವ್ಯಕ್ತಿಯನ್ನಾಗಿ ಮಾಡುತ್ತದೆ.’ ಎಂಬ ಅಬ್ದುಲ್ ಕಲಾಂಜಿ ಅವರ ಮಾತು ಶ್ರಮದ ಕುರಿತಾಗಿಯೂ ಹೇಳುತ್ತದೆ. ಆದ್ದರಿಂದ ದಿನನಿತ್ಯ ಚಿಕ್ಕ ಚಿಕ್ಕ ಗುರಿಗಳಿರುವ ಒಂದು ಪಟ್ಟಿ ಮಾಡಿ. ಅದರಲ್ಲಿ ಐದಾರು ಗುರಿಗಳಿದ್ದರೂ ಸಾಕು. ಹೆಚ್ಚೆಚ್ಚು ಗುರಿಗಳನ್ನು ಬರೆದು ಅದನ್ನು ಪೂರ್ಣಗೊಳಿಸಲು ಆಗದಿದ್ದರೆ ನಿಮಗೆ ಬೇಜಾರು ಆಗುತ್ತದೆ. ಮತ್ತು ಆತ್ಮವಿಶ್ವಾಸವು ಮತ್ತಷ್ಟು ಕೆಳಕ್ಕೆ ಜಾರುತ್ತದೆ. ಆದ್ದರಿಂದ ಚಿಕ್ಕ ಗುರಿಗಳನ್ನು ದಿನವೂ ಸಾಧಿಸಲು ಯತ್ನಿಸಿ. ತಯಾರಿ ‘ನೀವು ಅದನ್ನು ಮಾಡಬಲ್ಲಿರಿ ಎಂದು ನಂಬಿದರೂ ಅಥವಾ ಮಾಡಲು ಸಾಧ್ಯವಿಲ್ಲ ಎಂದು ನಂಬಿದರೂ ಎರಡೂ ಸಂದರ್ಭದಲ್ಲೂ ನೀವು ಸರಿಯಾಗಿಯೇ ಇರುತ್ತೀರಿ.’ ಎಂದಿದ್ದಾರೆ ಹೆನ್ರಿ ಫೋರ್ಡ್ ಯಾವುದೇ ಕೆಲಸ ನಿನ್ನ ಯೋಚನೆ ಮತ್ತು ನಿನ್ನ ನಂಬಿಕೆಯ ಮೇಲೆ ಅವಲಂಬಿತ ಎನ್ನುವುದು ಅವರ ಮಾತಿನ ಅರ್ಥ. ಗುರಿಗೆ ಗುರಿ ಇಡುವ ಮೊದಲು ಅದರ ಬಗ್ಗೆ ಸರಿಯಾದ ತಯಾರಿ ನಡೆಸಿ. ಸಂಕಷ್ಟದ ಸಮಯದಲ್ಲಿ ಎದೆಗುಂದದೆ ಮುನ್ನಡೆಯಲು ಇದು ಸಹಕಾರಿ. ಸ್ವ ನಂಬಿಕೆ ಇದ್ದಾಗ ಮಾತ್ರ ನಾವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯ.ಸೋತಾಗ ಕುಗ್ಗದೆ, ಮಗದೊಮ್ಮೆ ಪ್ರಯತ್ನಿಸುವ ಧೈರ್ಯವನ್ನು ಇದು ತುಂಬುತ್ತದೆ. ನಕಾರಾತ್ಮಕತೆ ಬಿಡಿ ‘ಲೈಫ್ ಹ್ಯಾಸ್ ಮೆನಿ ಪ್ರಾಬ್ಲಮ್ಸ್ ಬಟ್ ನೋ ಪ್ರಾಬ್ಲಮ್ ಲಾಸ್ಟ್ ಫಾರೆವರ್ ಸೋ ಫೇಸ್ ಚಾಲೆಂಜಿಸ್ ವಿಥ್ ಕಾನ್ಫಿಡೆನ್ಸ್. ’ನನ್ನಿಂದ ಸಾಧ್ಯವಿಲ್ಲ ಎಂಬ ಯೋಚನೆಯನ್ನು ಮೊದಲು ಕೈಬಿಡಿ. ಅದರ ಬದಲು ನಾನು ಪ್ರಯತ್ನಿಸುತ್ತೇನೆ ಎಂದು ಆಲೋಚಿಸಿ. ಸೋಲನ್ನು ಅನುಭವವಾಗಿ ಸ್ವೀಕರಿಸಿ. ಮುನ್ನಡೆಯಬೇಕು. ಸೋಲನ್ನು ವೈಫಲ್ಯವೆಂದು ಭಾವಿಸದೆ, ಕಲಿಕೆಯ ಒಂದು ಭಾಗವೆಂದು ಸ್ವೀಕರಿಸಿ ಆಗ ಸೋಲಿನ ಭಯ ಹೋಗಲಾಡುತ್ತದೆ. ಸೋಲಿನ ಭಯ ದೂರವಾಗಿ ಹೊಸ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ. ನಿಮ್ಮನ್ನು ನೀವು ಪ್ರೀತಿಸಿ. ಇತರರೊಂದಿಗೆ ಹೋಲಿಕೆ ಮಾಡಕೊಳ್ಳುವುದನ್ನು ನಿಲ್ಲಿಸಿ ನಿಮ್ಮ ವ್ಯಕ್ತಿತ್ವವನ್ನು ಗೌರವಿಸಿ. ಗುರುತಿಸಿ ನಿಮ್ಮ ಸಣ್ಣ ಪುಟ್ಟ ಯಶಸ್ಸನ್ನು ಗುರುತಿಸಿ. ಅವುಗಳನ್ನು ಸಂಭ್ರಮಿಸಿ. ಅದು ದೊಡ್ಡ ಸಾಧನೆಗೆ ಸ್ಪೂರ್ತಿಯಾಗುತ್ತದೆ. ನಿರಂತರ ಕಲಿಕೆಯಿರಲಿ ಅದು ಜ್ಞಾನ ಹೆಚ್ಚಿಸುತ್ತದೆ. ಜ್ಞಾನ ಹೆಚ್ಚಾದಂತೆ ಸಹಜವಾಗಿಯೇ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಗುರಿ ಒಂದೇ ಆಗಿರಲಿ ಪ್ರಯತ್ನ ವಿಭಿನ್ನವಾಗಿರಲಿ. ನಿಮ್ಮ ಮೇಲೆ ನಿವiಗೆ ನಂಬಿಕೆಯಿರಲಿ ಇಡೀ ಜಗತ್ತೇ ನಿಮ್ಮ ಕಾಲಡಿಯಲ್ಲಿರುತ್ತದೆ. ಪ್ರಶಂಸೆ ಮತ್ತು ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಒಂದು ಹೂವಿನ ಗಿಡ ಸರಿಯಾಗಿ ಬೆಳೆಯಲು ಮಳೆ ಮತ್ತು ಬಿಸಿಲು ಎರಡೂ ಬೇಕು. ಅಷ್ಟಕ್ಕೂ ಪ್ರಶಂಸೆ ಮತ್ತು ಟೀಕೆಗಳು ವಾಸ್ತವವಲ್ಲ. ಅವು ಜನರ ಅಭಿಪ್ರಾಯಗಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಿಳಿದುಕೊಳ್ಳಿ ಈ ಜಗತ್ತಿನಲ್ಲಿ ಗೌರವದಿಂದ ಬದುಕಲು ಶ್ರೇಷ್ಠವಾದುದನ್ನು ಸಾಧಿಸಲು ನಿಮ್ಮನ್ನು ನೀವು ನಂಬಬೇಕು. ಇತರರು ನಿಮ್ಮನ್ನು ನಿರೀಕ್ಷಿಸುವ ರೀತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡುವುದಲ್ಲ. ನಿಮ್ಮ ಆತ್ಮವಿಶ್ವಾಸದ ಮಾತುಗಳು ಆತ್ಮವಿಶ್ವಾಸಭರಿತ ನಿಮ್ಮ ಕ್ರಿಯೆಗಳು. ಸಾಕ್ರೆಟಿಸ್ ಆಗಾಗ್ಗೆ ಜನರಿಗೆ ‘ಪರೀಕ್ಷಿಸದ ಜೀವನವು ಬದುಕಲು ಯೋಗ್ಯವಲ್ಲ.’ ಎಂದು ನೆನಪಿಸುತ್ತಿದ್ದರು. ಸ್ವ ನಂಬಿಕೆಗೆ ಮೊದಲು ನಿಮ್ಮನ್ನು ನೀವು ತಿಳಿದುಕೊಳ್ಳಬೇಕು. ನಿಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಇದು ಒಂದು ಸಲದ ಕೆಲಸವಲ್ಲ; ಇದು ಪ್ರಶ್ನಿಸುವ ಕಲಿಯುವ ಮತ್ತು ಸರಿಪಡಿಸುವ ದೈನಂದಿನ ಅಭ್ಯಾಸವಾಗಿದೆ. ಬದಲಾವಣೆಗೆ ದಾರಿ ಆಲೋಚನೆ ಮತ್ತು ಕ್ರಿಯೆ ಸ್ಥಿರವಾದಾಗ ಮಾತ್ರ ನಂಬಿಕೆ ಹೆಚ್ಚುತ್ತದೆ. ನೋವು ಮತ್ತು ಅನಿಶ್ಚಿತತೆಯನ್ನು ತಪ್ಪಿಸುವ ಮೂಲಕ ವಿಶ್ವಾಸದಿಂದ ವರ್ತಿಸುವಂತೆ ಒತ್ತಾಯಿಸುತ್ತದೆ. ಸತತ ಪ್ರಯತ್ನ ಜ್ಞಾನಾರ್ಜನೆ ಮತ್ತು ಧೈರ್ಯದಿಂದ ಇದನ್ನು ಬೆಳೆಸಿಕೊಳ್ಳಬಹುದು. ಅಂಜಿಕೆಯನ್ನು ಬಿಟ್ಟು ಹೊಸ ಸವಾಲುಗಳನ್ನು ಎದುರಿಸಿದಾಗ ಮಾತ್ರ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ‘ನಿಮ್ಮನ್ನು ನೀವು ಗೆಲ್ಲುವುದು ಸಾವಿರ ಯುದ್ಧಗಳನ್ನು ಗೆಲ್ಲುವುದಕ್ಕಿಂತ ದೊಡ್ಡದು.’ ಜಗತ್ತು ನಿಮ್ಮನ್ನು ನಂಬುವ ಮೊದಲು ನೀವು ನಿಮ್ಮನ್ನು ನಂಬಬೇಕು.ನೆನಪಿರಲಿ: ‘ನನ್ನಿಂದ ಸಾಧ್ಯ’ ಎಂಬ ಸಣ್ಣ ನಂಬಿಕೆ ದೊಡ್ಡ ಬದಲಾವಣೆಗೆ ದಾರಿಯಾಗುತ್ತದೆ.
“ಜಗತ್ತು ನಿಮ್ಮನ್ನು ನಂಬುವ ಮೊದಲು. . . .?” ಜಯಶ್ರೀ.ಜೆ. ಅಬ್ಬಿಗೇರಿ Read Post »
ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!”
ಕಾವ್ಯ ಸಂಗಾತಿ ಡಾ.ಕಾಡಜ್ಜಿ ಮಂಜುನಾಥ “ಯಜಮಾನಿಕೆಯ ಅಟ್ಟಹಾಸ….!!!!” pic:chat gpt ವಸಾಹತುಷಾಹಿ ಮನಕೆಹೆಣ್ಣು ಹೊನ್ನು ಮಣ್ಣನುಬೆದರಿಕೆಯ ಕಪಿಮುಷ್ಠಿಯಲಿಪಡೆಯುವಬಯಕೆ…!!!! ಯಜಮಾನಿಕೆಯ ಎದೆಗೆಬಂದೂಕಿನಲಿಗುಲಾಮಗಿರಿಯಮೊಳಗಿಸಿಸರ್ವಾಧಿಕಾರಿ ಮೃಗಗಳದಹಿಸುವಕನವರಿಕೆ…!!!! ಮುಗ್ದರ ಉಸಿರು ನಿಲ್ಲಿಸುವರಾಕ್ಷಸರಿಗೆತೈಲದ ಏಕಸ್ವಾಮ್ಯದಸಾಮ್ರಾಜ್ಯವಸ್ಥಾಪಿಸಿಜಗತ್ತನ್ನಾಳುವಹೆಬ್ಬಯಕೆ….!!!! ಮನುಷ್ಯತ್ವವಮಣ್ಣು ಮಾಡಿಮಾನವೀಯತೆಯರಕ್ತವನು ಹೀರಿಬಂಡವಾಳಶಾಹಿಯಕತ್ತಿಯಲಿಪರರ ಭೂಮಿಯನ್ನುಆಕ್ರಮಿಸುವಕನಲಿಕೆ….!!!! ಮುಗ್ದ ಜೀವಗಳಉಸಿರು ನಿಲ್ಲಿಸಿದಮೃಗವು ಕೂಡಕೊನೆಯಲ್ಲಿ ಉಸಿರುಚೆಲ್ಲಿಶವವಾಗಿ ಬಿಳುವೆನೆಂಬಸಹಜ ಜ್ಞಾನವುಆಸರ್ವಾಧಿಕಾರಿಮೃಗಕೆ ಇಲ್ಲದಿರುವುದುವಿಪರ್ಯಾಸ;ಕಾಲನ ಕರೆಗೆತಪ್ಪಿಸಿಕೊಳ್ಳಲಾಗಲ್ಲಆ ದೃಷ್ಟಅಧ್ಯಕ್ಷ …!! ಡಾ.ಕಾಡಜ್ಜಿ ಮಂಜುನಾಥ
ಡಾ.ಕಾಡಜ್ಜಿ ಮಂಜುನಾಥ ಕವಿತೆ “ಯಜಮಾನಿಕೆಯ ಅಟ್ಟಹಾಸ….!!!!” Read Post »
“ಕೆಲವೊಂದು ಸಲಹೆಗಳು:ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್
ಶಿಕ್ಷಣ ಸಂಗಾತಿ ವಾಣಿ ಶಿವಕುಮಾರ್ “ಕೆಲವೊಂದು ಸಲಹೆಗಳು: ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ” pic̲:chat gpt/gemini ಇನ್ನೇನು ಕೆಲವೇ ದಿನಗಳಲ್ಲಿ ೧೦ ನೇ ತರಗತಿಯ ಪರೀಕ್ಷೆ ಶುರುವಾಗಲಿದೆ. ನಿಮ್ಮ ನಿಮ್ಮ ಶಾಲೆಗಳಲ್ಲಿ ಉತ್ತಮವಾದ ಸಿದ್ಧತೆ ಮಾಡಿಸಿರುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಬಲಪಡಿಸಿರುತ್ತಾರೆ ಹಲವಾರು ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ನಿಮ್ಮ ತಯಾರಿಕೆಗೆ ಮತ್ತಷ್ಟು ಪುಷ್ಟಿ ನೀಡಿರುತ್ತಾರೆ. ಊಟ, ನಿದ್ದೆ ಬಿಟ್ಟು ಓದಿ ಅಂತ ಯಾರೂ ಸಹ ಎಲ್ಲೂ ಉಲ್ಲೇಖಿಸಿಲ್ಲ ಓದಿನ ಜೊತೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ. ಯಾರ ಅಂಕದ ಜೊತೆಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳದಿರಿ ಪರೀಕ್ಷೆಯಿಂದ ಹೊರಬಂದ ಬಳಿಕ ಅನಗತ್ಯ ಚರ್ಚೆ ಬೇಡ, ಇದರಿಂದ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು. ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಮೊದಲ ದಿನದಿಂದ ಅವರ ಓದು,ಬರಹ ಚಲನ ವಲನಗಳನ್ನು ಗಮನಿಸುತ್ತಾ ಬಂದಿರ್ತೀರ ಶೇಕಡಾ ೯೦ ೯೫ ಬರಲೇಬೇಕು ಅಂತ ತಾಕಿತು ಮಾಡಬೇಡಿ ಎಷ್ಟೇ ಅಂಕ ಬಂದರೂ ಅವರು ನಮಗೆ ಮಕ್ಕಳೇ. ಎಲ್ಲಾ ಮಕ್ಕಳಲ್ಲಿಯೂ ವಿಶೇಷವಾದ ಕಲೆ ಇದ್ದೇ ಇರುತ್ತದೆ ಅದನ್ನು ಗುರುತಿಸಿ,ಪ್ರೋತ್ಸಾಹಿಸಿ, ಉತ್ತೇಜಿಸಿ. ಒಂದು ಹುದ್ದೆಯನ್ನು ಅಲಂಕರಿಸುವುದಕ್ಕೋಸ್ಕರ ಅಂಕಗಳು ಬೇಕು ಅಂಕಗಳು ಹೆಚ್ಚು ಕಡಿಮೆಯಾದರೂ ನಮ್ಮ ನಡವಳಿಕೆ, ಸಂಸ್ಕಾರ,ನಯ,ವಿನಯ ಅತಿ ಮುಖ್ಯವಾಗಿರುತ್ತದೆ ಒಂದು ವೇಳೆ ಅಂಕಗಳು ಕಡಿಮೆ ಬಂದರೆ ಅಥವಾ ನಪಾಸ್ ಆದರೆ ದಯವಿಟ್ಟು ಕೆಟ್ಟ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಠಿಣ ಸಾಹಸಕ್ಕೆ ಕೈ ಹಾಕಬೇಡಿ. ಅರಳ ಬೇಕಿರುವ ಪ್ರತಿಭೆಗಳು ನೀವು ಅರಳುವ ಮುನ್ನವೇ ಬಾಡಿ ಹೋಗದಿರಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮೂಲಕ ಆಲ್ ದ ಬೆಸ್ಟ್ ಹೇಳುವುದಕ್ಕೆ ಬಯಸುತ್ತೇನೆ. ಕಠಿಣ ಪರಿಶ್ರಮ,ಪೋಷಕರ ಆಶೀರ್ವಾದ,ದೇವರ ಅನುಗ್ರಹ ಸದಾ ಇರುತ್ತದೆ. ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ. ವಾಣಿ ಶಿವಕುಮಾರ್
“ಕೆಲವೊಂದು ಸಲಹೆಗಳು:ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್ Read Post »
ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…”
ಕಾವ್ಯ ಸಂಗಾತಿ ಅಶ್ಫಾಕ್ ಪೀರಜಾದೆ “ಮನದ ಕಣಿವೆಯಲಿ…” ರೆಪ್ಪೆ ಮುಚ್ಚಿದ ಕ್ಷಣಜಗತ್ತು ಕತ್ತಲಾಯಿತು ನಿಜ,ಅಂತರಂಗದ ಕಿಟಕಿಗಳೆಲ್ಲತೆರೆದುಕೊಂಡರೂ ಒಳಗೆಬಾರದ ಗಾಳಿ ಬೆಳಕು ಧ್ಯಾನದ ಆಳಕ್ಕೆ ಇಳಿದಷ್ಟುಮೌನದ ಪದರಗಳು ಕಳಚಿ ಬಿದ್ದವುಗುಲಾಬಿ ಹೂವಿನ ಎಸಳುಗಳಂತೆ ಕಣ್ಣೆದುರು ಈಗ ಶೂನ್ಯಮುಡುಗಟ್ಟಿದ ನೋವು ಹತಾಶೆಕೈಜಾರಿ ಹೋದ ಕಾಲದ ಹೆಜ್ಜೆ ಗುರುತುಗಳು ಒಂದೊಂದು ನೆನಪೂಒಂದೊಂದು ನಿಟ್ಟುಸಿರು,ಮನದ ಕಣಿವೆಯಲಿಈಗ ಗತಕಾಲದ ಆರ್ತನಾದ. ಅಶ್ಫಾಕ್ ಪೀರಜಾದೆ
ಅಶ್ಫಾಕ್ ಪೀರಜಾದೆ ಕವಿತೆ “ಮನದ ಕಣಿವೆಯಲಿ…” Read Post »
ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-32 ಫೆಬ್ರವರಿ ಕಡೆಯ ವಾರದಲ್ಲಿ ನಮಗೆ ವರ್ಗಾವಣೆಯ ಆದೇಶ ಬಂದದ್ದು ಮಾರ್ಚ್ ಆರನೆಯ ತಾರೀಕು ರಿಲೀವ್ ಆಗಬೇಕಿತ್ತು. ಯಾವಾಗಲೂ ಶನಿವಾರ ಮಧ್ಯಾಹ್ನ ರಿಲೀಫ್ ಆಗುವಂತೆ ಬರುತ್ತಿದ್ದ ಆದೇಶ ಈ ಬಾರಿ ಸೋಮವಾರ ಸಂಜೆ ರಿಲೀವ್ ಆಗುವ ಹಾಗೆ ಬಂದಿತ್ತು. ಐದನೆಯ ತಾರೀಕು ಶಿವರಾತ್ರಿ ಬಂದಿದ್ದರಿಂದ ನಾವು ಮೈಸೂರಿಗೆ ಹೋಗಲೇಬೇಕಿತ್ತು. ಹಾಗಾಗಿ ಅಂದೇ ಬಂದು ಅಂದೆ ವಾಪಸ್ ಆಗುವ ಸರ್ಕಸ್ ಸಹ ಮಾಡಿ ಬಿಟ್ಟೆವು. ಆರನೆಯ ತಾರೀಕು ಬೆಳಿಗ್ಗೆ 5:30 ಬಸ್ಸಿಗೆ ಹೊರಟು ಸಕಲೇಶಪುರಕ್ಕೆ ಬಂದೆವು. ಅಂದೇ ನಾವು ಶಾಖಾ ಸಿಬ್ಬಂದಿಗೆ ಊಟ ಕೊಡಿಸುವ ಕಾರ್ಯಕ್ರಮ ಸಹ ಇತ್ತು .ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿಂದು ಮಧ್ಯಾಹ್ನ ನಮ್ಮದೇ ಆತಿಥ್ಯದ ಊಟ ಮಾಡಿ ಶಾಖಾಧಿಕಾರಿಗಳನ್ನು ವಿನಂತಿಸಿಕೊಂಡು ನಾಲ್ಕು ವರೆಗೆ ವಿದಾಯ ಸಮಾರಂಭವನ್ನು ಆಯೋಜಿಸಿಕೊಂಡು ಅಂತೂ ಇಂತೂ ಆರು ಗಂಟೆ ಬಸ್ಸಿಗೆ ಮೈಸೂರಿಗೆ ಹತ್ತಿದೆವು ಬಂದು ತಲುಪಿದಾಗ ರಾತ್ರಿ 11:00 ಗಂಟೆ. ಸುಲೋಚನ ಅವರ ಅಕ್ಕನ ಮನೆಯಲ್ಲಿ ಉಳಿದುಕೊಂಡು ಬೆಳಿಗ್ಗೆ ಎದ್ದು ನಂಜನಗೂಡಿಗೆ ಹೋಗಿ ಅಲ್ಲಿಂದ ಚಾಮರಾಜನಗರಕ್ಕೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು . ನಾನು ಸೋಮವಾರ ಬೆಳಿಗ್ಗೆ ಅಂದರೆ ಏಳನೆಯ ತಾರೀಕು ಮಾರ್ಚ್ 2000 ರಂದು ನಂಜನಗೂಡಿಗೆ ಡ್ಯೂಟಿ ರಿಪೋರ್ಟ್ ಮಾಡಿಕೊಂಡೆ. ಮಾಮೂಲಿನಂತೆ ಒಂದು ಕೈಯಲ್ಲಿ ಬ್ಯೂಟಿ ರಿಪೋರ್ಟ್ ಮತ್ತೊಂದು ಕೈಯಲ್ಲಿ ಮೈಸೂರಿಗೆ ವರ್ಗಾವಣೆಗೆ ಅರ್ಜಿ. ಅಶೋಕಪುರಂ ರೈಲ್ವೆ ಸ್ಟೇಷನ್ ಗೆ ಹೋಗಿ ಮೂರು ತಿಂಗಳ ಪಾಸ್ ರೆಡಿ ಮಾಡಿಸಿಕೊಂಡು ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಅಲ್ಲಿಯೇ ಸಹಿ ಮಾಡಿ ಮಹಿಳಾ ಭೋಗಿಗೆ ಹತ್ತಿದೆ. ಅಲ್ಲಿಯೇ ನಮ್ಮ ಶಾಖೆಯ ಜಯಲಕ್ಷ್ಮಿ ಅವರ ಭೇಟಿಯು ಆಯಿತು. ಈಗ ಶಾಖೆ ಮೊದಲಿನಂತೆ ದೇವಸ್ಥಾನದ ಬಳಿಯ ಬಜಾರ್ ರಸ್ತೆಯಲ್ಲಿ ಇರದೆ ತನ ಸ್ವಂತ ಕಟ್ಟಡಕ್ಕೆ ಶಿಫ್ಟ್ ಆಗಿತ್ತು .ನಂತರ ಸಂತೆಗೆ ಹೋಗುವ ದಾರಿಯಲ್ಲಿ ಮಧ್ಯೆ ಬಲಗಡೆ ನಮ್ಮ ಶಾಖಾ ಕಚೇರಿ ಇತ್ತು. ಮುಖ್ಯ ರೈಲ್ವೆ ಸ್ಟೇಷನ್ ನಿಂದ ಶಾಖೆಗೆ ಬರಲು ತಡವಾಗುತ್ತಿದ್ದ ಕಾರಣ ಎಲ್ಲರೂ ಸುಜಾತಪುರಂ ರೈಲ್ವೆ ಸ್ಟೇಷನ್ ನಲ್ಲಿಯೇ ಇಳಿದು ಅಲ್ಲಿ ಓಡಾಡುತ್ತಿದ್ದ ಖಾಸಗಿ ಟೆಂಪೋಗಳಲ್ಲಿ ಹುಲ್ಲಹಳ್ಳಿ ಸರ್ಕಲ್ಗೆ ಬಂದು ಇಳಿಯುತ್ತಿದ್ದೆವು. ಆಗ ಆ ಟೆಂಪೋಗಳಲ್ಲಿ ಚಾರ್ಜ್ ಒಂದು ರೂಪಾಯಿ ಮಾತ್ರ ಇತ್ತು .ಹುಲ್ಲಹಳ್ಳಿ ಸರ್ಕಲ್ ನಿಂದ 3-4 ನಿಮಿಷದ ನಡಿಗೆ ನಮ್ಮ ಶಾಖೆಗೆ. ಸಂಜೆ ಮಾತ್ರ ಮುಖ್ಯ ಸ್ಟೇಶನ್ಗೆ ನಡೆದು ಹೋಗಲು ಸಮಯ ಇತ್ತು. ಕೆಲವೊಮ್ಮೆ ಸುಸ್ತಾಗಿದ್ದಾಗ ಹೊರಡಲು ತಡವಾದರೆ ಅಥವಾ ಸಂತೆಯಲ್ಲಿ ಕೊಂಡ ತರಕಾರಿಗಳಿದ್ದರೆ ಆಗ ಮೂರು ನಾಲ್ಕು ಜನ ಸೇರಿ ಆಟೋದಲ್ಲಿ ಸ್ಟೇಷನ್ನಿಗೆ ಬರುತ್ತಿದ್ದೆವು. ಮೊದಲಿನಿಂದ ಪರಿಚಯವಿದ್ದ ಜಯಲಕ್ಷ್ಮಿ ಮತ್ತು ನಾಗಮಣಿ ಜೊತೆಗೆ ಹೊಸ ಪರಿಚಯವಾದ ಕವಿತಾ ನಿಕ್ಕಮ್ ವಿದ್ಯಾ ಚಂದ್ರಶೇಖರ್ ಮೊದಲಾದವರು. ಆಂಧ್ರಪ್ರದೇಶದ ರಜನಿ ಸಹ ಇಲ್ಲಿಯೇ ಇದ್ದಳು .ಮುಂದೆ ಅವಳು ಪದೋನ್ನತಿ ತೆಗೆದುಕೊಂಡು ಈಗ ಹೈದರಾಬಾದ್ ನಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾಳೆ. ಅಲ್ಲಿಯೇ ಪರಿಚಯವಾದದ್ದು ನಮ್ಮದೇ ಯೂನಿಯನ್ ನಲ್ಲಿ ಇದ್ದ ಇಂದುಮತಿ. ಮೊದಲು ಬಸ್ ನಲ್ಲಿ ಓಡಾಡುತ್ತಿದ್ದಳು ನಂತರ ಅವರ ಸ್ವಂತ ಮನೆ ನಮ್ಮ ಮನೆಯ ಬಳಿಗೆ ಇದುದರಿಂದ ಅಲ್ಲಿಗೆ ಶಿಫ್ಟ್ ಆದ ಮೇಲೆ ನನ್ನ ಜೊತೆಗೆ ರೈಲಿನಲ್ಲಿ ಓಡಾಡಲು ಆರಂಭಿಸಿದಳು. ನನಗೆ ತುಂಬಾ ಆಪ್ತ ಗೆಳತಿ. ಈಗಲೂ ನಮ್ಮ ಸ್ನೇಹ ಅಷ್ಟೇ ಸದೃಢವಾಗಿದೆ ನಂಜನಗೂಡು ನನಗೆ ಕೊಟ್ಟ ಅನರ್ಘ್ಯ ಸ್ನೇಹ ರತ್ನಗಳಲ್ಲಿ ಅವಳು ಒಬ್ಬಳು. ಈ ಹಿಂದೆ ಮಂಡ್ಯದಲ್ಲಿ ನನ್ನೊಂದಿಗೆ ಕೆಲಸ ಮಾಡಿದ್ದ ಮಂಜುಳಾ ಮತ್ತು ಮೊದಲೇ ಪರಿಚಿತರಾಗಿದ್ದ ಶಶಿಕಲಾ ಗಿರಿಜಾ ಇವರೆಲ್ಲ ಇದೇ ಶಾಖೆಯಲ್ಲಿ ಇದ್ದರು ತುಂಬಾ ಸ್ನೇಹ ಮಯ ವಾತಾವರಣ ತುಂಬಾ ಖುಷಿಯಾಗಿತ್ತು.ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇಳಿದ ತಕ್ಷಣ ಅಲ್ಲಿ ಒಬ್ಬ ಕಾಯಂ ಆಗಿ ಸೈಕಲ್ಲಿನಲ್ಲಿ ಹೂವ ಮಾರುತಿದ್ದ .ಅವನ ಬಳಿ ಹೂವು ಕೊಂಡು ಮುಂದೆ ನಮ್ಮ ಪ್ರಯಾಣ .ಅಲ್ಲೇ ಮಧ್ಯದಲ್ಲಿ ಇದ್ದದ್ದು ಸುಬ್ಬಣ್ಣನ ಹೋಟೆಲ್ ಇಡ್ಲಿ ಚಟ್ನಿ .ಜೊತೆಗೆ ಟೊಮ್ಯಾಟೋ ಗೊಜ್ಜು ಕೊಡುತ್ತಿದ್ದರು ತುಂಬಾ ರುಚಿಯಾಗಿರುತ್ತಿತ್ತು. ಕೆಲವೊಮ್ಮೆ ತಿಂಡಿ ಸರಿಯಾಗಿ ತಿನ್ನದೆ ಬರುತ್ತಿದ್ದಾಗ ಅಥವಾ ತಿಂಡಿ ತಿನ್ನದೇ ಬಂದಾಗ ಅಲ್ಲಿ ಇಡ್ಲಿ ತಿಂದು ಮುಂದುವರೆಯುವುದು. ಇಲ್ಲದಿದ್ದರೆ ವೈಟು ಕಾಫಿ ಕುಡಿದು ಹೋಗುತ್ತಿದ್ದೆವು. ಮಧ್ಯಾಹ್ನ 12 ಗಂಟೆ ಹಾಗೂ ಅಪರಾಹ್ನ ನಾಲ್ಕು ಗಂಟೆಯ ಕಾಫಿ ಅಲ್ಲಿಯೇ ಪಕ್ಕದಲ್ಲಿ ಇದ್ದ ಒಂದು ಮಲಯಾಳಿ ಬೇಕರಿಯಲ್ಲಿ ಬೇಸಿಗೆ ಕಾಲವಾದರೆ ವಿವಿಧ ಹಣ್ಣುಗಳ ಜ್ಯೂಸ್ ಸಹ ಸಿಗುತ್ತಿತ್ತು. ಅಲ್ಲದೆ ಶಾಖೆಯ ಮುಂದೆಯೇ ಒಬ್ಬ ಎಳನೀರು ಮಾರುತ್ತಾ ನಿಂತಿರುತ್ತಿದ್ದ. ಒಟ್ಟಿನಲ್ಲಿ ನಮ್ಮ ಹೊಟ್ಟೆ ಪೂಜೆಗೆ ಮೋಸ ಬಂತು ಇರಲಿಲ್ಲ. ಸ್ವಲ್ಪ ದಿನಗಳಾದ ನಂತರ ಟೆಂಡರ್ ಕರೆದು ನಮ್ಮ ಶಾಖೆಯಲ್ಲಿಯೇ ವಾಹನ ನಿಲುಗಡೆ ಜಾಗದಲ್ಲಿ ಒಂದು ಕ್ಯಾಂಟೀನ್ ಓಪನ್ ಆಯಿತು. ಸತೀಶ್ ಎನ್ನುವವರು ಅದನ್ನು ಆರಂಭಿಸಿದ್ದರು ಬೆಳಗಿನ ಹೊತ್ತು ಏನಾದರೂ ಒಂದು ತಿಂಡಿ ಮಧ್ಯಾಹ್ನ ಅಣ್ಣ ಸಾಂಬಾರ್ ಮಜ್ಜಿಗೆ ಹಾಗೂ ಸಂಜೆಯ ಹೊತ್ತು ಏನಾದರೂ ಕರಿದ ತಿಂಡಿ ಸಿಗುತ್ತಿತ್ತು ಕಾಫಿ ಟೀ ಮಜ್ಜಿಗೆ ಯಾವಾಗಲೂ ಸಿಗುತ್ತಿತ್ತು.ಯಾರಾದರೂ ಒಬ್ಬರು ಊಟ ತರದಿದ್ದರೆ ಕ್ಯಾಂಟೀನ್ ನಲ್ಲಿಯೇ ತರಿಸಿಕೊಳ್ಳುತ್ತಿದ್ದೆವು. ಇಬ್ಬರು ಮೂವರು ತಂದಿಲ್ಲದಿದ್ದಾಗ ಹುಲ್ಲಹಳ್ಳಿ ಸರ್ಕಲ್ ನಲ್ಲಿ ಇದ್ದ ರಾಮಪ್ರಸಾದ್ ಹೋಟೆಲಿಗೆ ಹೋಗುತ್ತಿದ್ದೆವು. ಶನಿವಾರ ಮಧ್ಯಾಹ್ನದ ಹೊತ್ತು ಮೂರು ಗಂಟೆಗೆ ರೈಲು ಇದ್ದುದರಿಂದ ಪ್ರತಿ ಶನಿವಾರ ಯಾವುದಾದರೂ ಹೋಟೆಲ್ ಗೆ ಅಥವಾ ಕ್ಯಾಂಟೀನ್ ನವರು ಚೆನ್ನಾಗಿರುವ ತಿಂಡಿ ಮಾಡಿದರೆ ಅದನ್ನೇ ತಿಳಿದುಕೊಳ್ಳುತ್ತಿದ್ದೆವು ಅಂದು ಡಬ್ಬಿ ತರುವುದು ನಮಗೆಲ್ಲಾ ನಿಷಿದ್ಧ. ಹೊಸ ವ್ಯವಹಾರಗಳ ವಿಭಾಗದಲ್ಲಿ ಇದ್ದ ಉನ್ನತ ದರ್ಜೆ ಸಹಾಯಕರು ವರ್ಗಾವಣೆಯಾಗಿ ಹೋಗಿದ್ದರಿಂದ ಮಾರ್ಚ್ ವರ್ಷಾಂತ್ಯದ ಬಿಜಿ ಸಮಯವೂ ಆಗಿದ್ದರಿಂದ ನನ್ನನ್ನು ಹೊಸ ವ್ಯವಹಾರ ವಿಭಾಗಕ್ಕೆ ನಿಯುಕ್ತಿಗೊಳಿಸಿದರು. ಅಲ್ಲಿ ಶ್ರೀವತ್ಸ ಮತ್ತು ಮಹಾದೇವನ್ ಅವರು ಸಹಾಯಕರು. ನಾಗರಾಜ್ ಅವರು ಸಹಾಯಕ ಆಡಳಿತ ಅಧಿಕಾರಿಗಳು ಆಗ ತುಂಬಾ ಪ್ರಪೋಸಲ್ಗಳು ಬರುತ್ತಿತ್ತು ಕೆಲಸವು ಹೆಚ್ಚು ಇರುತ್ತಿತ್ತು ವರ್ಷಾಂತ್ಯವಾದ್ದರಿಂದ ಕೆಲವೊಂದು ರಜೆಯ ದಿನ ಭಾನುವಾರಗಳಲ್ಲೂ ಬರಬೇಕಿತ್ತು. ಶನಿವಾರವಂತೂ ಸಂಜೆಯ ರೃಲಿಗೇ ವಾಪಸ್ ಆಗುತ್ತಿದ್ದುದು. ಆದರೂ ಸಹ ತುಂಬಾ ಖುಷಿಯ ವಾತಾವರಣ. ಎಲ್ಲರೂ ಹೊಂದಿ ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಹೊರೆ ಎನಿಸುತ್ತಿರಲಿಲ್ಲ. ನಾಲ್ಕೈದು ತಿಂಗಳ ಬಳಿಕ ಶಾಖಾಧಿಕಾರಿಗಳು ಅವರ ಕೊಠಡಿಗೆ ಕರೆಸಿ ನನ್ನನ್ನು ವಿಕ್ರಯ ವಿಭಾಗದಲ್ಲಿ ಕೆಲಸ ಮಾಡಲು ಸೂಚಿಸಿದರು. ಆಗ ಆ ವಿಭಾಗದಲ್ಲಿ ಒಬ್ಬರೇ ಉನ್ನತ ಶ್ರೇಣಿ ಸಹಾಯಕರು ಪ್ರಸಾದ್ ಎಂಬುವವರು ಇದ್ದು ಸಹಾಯಕರು ಯಾರು ಇರಲಿಲ್ಲ. ಹಾಗಾಗಿ ನನ್ನನ್ನು ಅಲ್ಲಿಯೇ ಕೆಲಸ ಮಾಡಲು ವಿನಂತಿಸಿರು. ನನಗೆ ಹೊಸ ವ್ಯವಹಾರ ಹಾಗೂ ವಿಕ್ರಯ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಇದ್ದುದು .ಸಕಲೇಶಪುರದಲ್ಲಿ ಸ್ವಲ್ಪ ದಿನಗಳ ಕಾಲ ಕಚೇರಿ ಸೇವಾ ವಿಭಾಗದಲ್ಲಿ ಮಾಡಿದ್ದೆ. ಆದರೆ ಪಾಲಿಸಿ ಸೇವಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶವೇ ದೊರೆತಿರಲಿಲ್ಲ .ಹಾಗಾಗಿ ಶಾಖಾಧಿಕಾರಿಗಳಿಗೆ ಮುಂದಿನ ಬದಲಾವಣೆಯ ಸಮಯದಲ್ಲಿ ನನಗೆ ಪಾಲಿಸಿ ಸೇವಾ ವಿಭಾಗವನ್ನೇ ಕೊಡಬೇಕು ಎಂದು ಕೋರಿಕೊಂಡೆ ಅವರು ಸಹ ಒಪ್ಪಿಕೊಂಡರು.ವಿಕ್ರಯ ವಿಭಾಗದಲ್ಲಿ ಪ್ರಸಾದ್ ಮತ್ತು ನಾನು ಒಳ್ಳೆಯ ಸೇವೆ ಸಲ್ಲಿಸಿದ್ದೆವು. ಇಬ್ಬರೂ ಒಳ್ಳೆಯ ಕೆಲಸಗಾರರಾದ್ದರಿಂದ ಹಂಚಿಕೊಂಡು ಮಾಡುತ್ತಿದ್ದೆವು. ೨೦೦೦ ನನಗೆ ಅಷ್ಟೇನೂ ಖುಷಿಯದ್ದಾಗಿರಲಿಲ್ಲ. ಅಮ್ಮನ ಆರೋಗ್ಯ ಆಗಾಗ್ಗೆ ಹದಗೆಟ್ಟು ಆಸ್ಪತ್ರೆಗೆ ಸೇರಿಸುವುದು ಕರೆದುಕೊಂಡು ಬರುವುದು ನಡೆದೇ ಇತ್ತು. ಆದರೂ ಛಾಯ ಮತ್ತು ಪ್ರಸನ್ನ ಅವರು ಪಿರಿಯಾಪಟ್ಟಣದಲ್ಲಿ ಮಾಡಿದ್ದ ಮನೆಗೆ ಹೋಗಿ ಸ್ವಲ್ಪ ದಿನ ಇದ್ದು ಬಂದಿದ್ದರು. ನಾವೂ ಒಂದೆರಡು ಬಾರಿ ಹೋಗಿ ಬಂದಿದ್ದೆವು. ಕೊನೆಗೆ ಯಾವ ಪ್ರಯತ್ನವೂ ಫಲ ಕೊಡದೆ ಜನವರಿ ೬ ೨೦೦೦ ದಂದು ನಮ್ಮನ್ನೆಲ್ಲಾ ಬಿಟ್ಟು ಅಮ್ಮ ಹೊರಟೇ ಬಿಟ್ಟಳು. ಅಂದು ಸೋಮವಾರ . ಹಿಂದಿನವಾರ ರಜೆ ಹಾಕಿ ಅಮ್ಮನ ಜೊತೆಯಲ್ಲೇ ಇದ್ದೆ. ಅಂದು ರೈಲಿನಲ್ಲಿ ಹೊರಟು ಕಛೇರಿ ತಲುಪುವಷ್ಟರಲ್ಲಿ ಫೋನ್ ಬಂದಿದೆ. ನಾನು ತಲುಪಿದ ಕೂಡಲೇ ತುಂಬಾ ಸೀರಿಯಸ್ ವಾಪಸ್ ಹೋಗಿ ಎಂದು ಸ್ಕೂಟರ್ ನಲ್ಲಿ ಕರೆದುಕೊಂಡು ಬಂದು ಬಸ್ ಹತ್ತಿಸಿದರು. ಮೈಸೂರಲ್ಲಿ ರವೀಶ್ ಬಂದು ಮನೆಗೆ ಕರೆದುಕೊಂಡು ಬಂದರು.ಊರುಗಳಿಂದ ಎಲ್ಲಾ ಬಂದು ಸೇರಿ ಅಮ್ಮನನ್ನು ಅಂತಿಮ ಬಾರಿಗೆ ಕರೆದುಕೊಂಡು ಹೊರಟಾಗ ಸಂಜೆ. ನಾನು ದಿನಾ ವಾಪಸಾಗುವ ರೈಲು ಕೂ ಅಂತ ಕೂಗ್ತಿತ್ತು. ಶಾಖಾಧಿಕಾರಿಗಳು ಕೆಲವರು ಸ್ನೇಹಿತರು ಸುಲೋಚನಾ ಎಲ್ಲ ಬಂದಿದ್ದರು. ಈಗಲೂ ಸಂಜೆ ರೈಲಿನ ಕೂಗು ಕಿವಿಗೆ ಬಿದ್ದಾಗಲೆಲ್ಲಾ ಅಂದಿನ ಆ ಸಂಜೆಯ ಮಡುಗಟ್ಟಿದ ದುಃಖ ಮರುಕಳಿಸುತ್ತದೆ.ಈಗಲೂ ಇದನ್ನು ಬರೆಯುವಾಗ ಕಣ್ಣು ತುಂಬಿ ನೀರು ಹರಿದು ಮಂಜಾಗುತ್ತಿದೆ. ಸಧ್ಯಕ್ಕೆ ನಿಲ್ಲಿಸುವೆ.(ಮುಂದಿನ ವಾರಕ್ಕೆ ಮುಂದುವರೆಯುವುದು) ಸುಜಾತಾ ರವೀಶ್
“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ
ಪ್ರವಾಸ ಸಂಗಾತಿ ಡಾ.ಸುಮತಿ ಪಿ “ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಪ್ರವಾಸವೆಂದರೆ ತಮ್ಮ ವಾಸಸ್ಥಾನದಿಂದ ಅಥವಾ ದೈನಂದಿನ ಚಟುವಟಿಕೆಯ ಸ್ಥಾನದಿಂದ ಬೇರೆ ಊರಿಗೆ ಅಥವಾ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು. ದೈನಂದಿನ ಚಟುವಟಿಕೆಗಳ ಏಕತಾನತೆಯಿಂದ ಮನಸ್ಸನ್ನು ಪುನರ್ಚೇತನಗೊಳಿಸಲು ಪ್ರವಾಸದ ಯೋಜನೆಯನ್ನು ಹಾಕಿಕೊಂಡು ಪ್ರವಾಸ ಹೋಗುತ್ತಾರೆ. ಜೊತೆಗೆ ಅಧ್ಯಯನ ಪ್ರವಾಸ ಕೂಡ ಮಾಡುತ್ತಾರೆ. ಪ್ರವಾಸದಿಂದ ಹೊಸ ಅನುಭವ ಆಗುವುದರ ಜೊತೆಗೆ ಮನರಂಜನೆ ಕೂಡ ಸಿಗುತ್ತದೆ. ಪ್ರವಾಸದ ಸಮಯದಲ್ಲಿ ಉಂಟಾದ ಹೊಸ ಅನುಭವದಿಂದ ವ್ಯಕ್ತಿಯ ದೈನಂದಿನ ಬದುಕಿನಲ್ಲಿ ಕೆಲವೊಂದು ಬದಲಾವಣೆಗಳು ಆಗಲು ಸಾಧ್ಯವಿದೆ. “ದೇಶ ಸುತ್ತು ಕೋಶ ಓದು”ಎಂಬ ಗಾದೆ ಮಾತಿದೆ. ಅದರಲ್ಲೂ ಪುಸ್ತಕದ ಜ್ಞಾನಕ್ಕಿಂತಲೂ ಪ್ರತ್ಯಕ್ಷ ಅನುಭವದ ಜ್ಞಾನ ಮನುಷ್ಯನ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು.ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಗಳು, ಜನಜೀವನ,ಕಲೆ, ವಾಸ್ತುಶಿಲ್ಪ, ಜನರ ಸಂಸ್ಕೃತಿ ಇವೆಲ್ಲವನ್ನು ಗಮನಿಸುವಾಗ ನಮ್ಮ ದೇಶದ ಸಂಸ್ಕೃತಿಯ ಅರಿವಾಗುವುದರ ಜೊತೆಗೆ ಅಲ್ಲಿ ಏನು ಹೊಸತಿದೆ ಎಂಬುದು ಮನಸ್ಸಿಗೆ ಮುಟ್ಟುತ್ತದೆ.ಪ್ರವಾಸದ ಸಮಯದಲ್ಲಿ ಅದ್ಭುತವಾದಂತಹ ಕಟ್ಟಡಗಳು,ಪ್ರಕೃತಿ ಸೌಂದರ್ಯ, ಉದ್ಯಾನವನಗಳು,ಎತ್ತರದಿಂದ ಧುಮುಕುವ ಜಲಪಾತಗಳು ಇವುಗಳನ್ನೆಲ್ಲ ನೋಡುವಾಗ ಮನಸ್ಸಿಗೆ ಖುಷಿಯಾಗಿ ಎಲ್ಲವನ್ನು ಮರೆತು, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಅದು ಮಾನಸಿಕ ನೆಮ್ಮದಿಯನ್ನು ನೀಡುತ್ತಾ ನಮ್ಮ ಆರೋಗ್ಯದ ಮೇಲು ಪ್ರಭಾವ ಬೀರುತ್ತದೆ ಈ ಕಾರಣದಿಂದಲೇ ಇರಬಹುದು ವರ್ಷವಿಡಿ ದುಡಿಯುವ ನೌಕರರು ಕೆಲವೊಂದು ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗುತ್ತಾರೆ. ಪ್ರವಾಸ ಹೇಗಿರಬೇಕು ಪ್ರವಾಸಕ್ಕೆ ನಿರ್ದಿಷ್ಟವಾದ ಉದ್ದೇಶವಿರಬೇಕು.ಅದು ಮನರಂಜನೆಗೆ ಅಥವಾ ವಿಹಾರಕ್ಕಾಗಿ ಮಾಡುವ ಪ್ರವಾಸ ವಿರಬಹುದು, ಅಥವಾ ಶಿಕ್ಷಣದ ಉದ್ದೇಶದಿಂದ ಮಾಡುವ ಪ್ರವಾಸವಿರಬಹುದು ಅಥವಾ ಸಾಂಸ್ಕೃತಿಕ ಸ್ಥಿತಿಗತಿ ಅಧ್ಯಯನದ ಬಗ್ಗೆ ಪ್ರವಾಸ ಇರಬಹುದು. ಹೀಗೆ ಒಂದು ಉದ್ದೇಶವಿಟ್ಟುಕ್ಕೊಂಡು ಮಾಡುವುದೇ ಪ್ರವಾಸ. ಪ್ರವಾಸ ಮಾಡುವ ಮೊದಲು ಅದರ ಉದ್ದೇಶಕ್ಕೆ ಅನುಗುಣವಾಗಿ ಯೋಚನೆ ಮಾಡಿ,ಯೋಜನೆ ಹಾಕಿಕೊಂಡು ಮುನ್ನಡೆದರೆ ಎಲ್ಲವೂ ಹಾಕಿಕೊಂಡ ಯೋಚನೆಯಂತೆ ನಡೆದರೆ ಅಂತಹ ಪ್ರವಾಸ ಒಳ್ಳೆಯ ಪ್ರತಿಫಲವನ್ನು ನೀಡಬಲ್ಲದು. ಪ್ರವಾಸ ಯಾವುದೇ ಇರಲಿ ಅದರ ಉದ್ದೇಶ ಈಡೇರಬೇಕು. ಪ್ರವಾಸದಿಂದ ಉಂಟಾಗುವ ಹೊಸ ಅನುಭವ ಪ್ರವಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಹೊಸ ಸಂಸ್ಕೃತಿಗಳು, ಭಾಷೆಗಳು ಮತ್ತು ಸ್ಥಳಗಳನ್ನು ಪರಿಚಯಿಸುವುದರಿಂದ ಸೃಜನಶೀಲತೆ ಹಾಗೂ ಜ್ಞಾನ ವೃದ್ಧಿಸುತ್ತದೆ. ಜೊತೆಗೆ, ಆತ್ಮವಿಶ್ವಾಸ ಹೆಚ್ಚಿಸಿ, ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ಒದಗಿಸುತ್ತದೆ.ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ದಿನವು ಹೊಸ ದಿನವೆಂಬಂತೆ ಕೈಗೊಳ್ಳುವ ಯಾವುದೇ ರೀತಿಯ ಪ್ರವಾಸದಿಂದ ಹೊಸತಾದ ಅನುಭವ ಆಗಿಯೇ ಆಗುತ್ತದೆ ಅಂತಹ ಹೊಸ ಅನುಭವ ಬದುಕಿನಲ್ಲಿ ರೋಚಕತೆಯನ್ನು ಉಳಿಸಿಕೊಂಡು ಹೊಸ ಬದಲಾವಣೆಯನ್ನು ತರಲು ಸಾಧ್ಯವಿದೆ ಉದಾಹರಣೆಗೆ ಯಾವುದೋ ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನರ ಜೀವನ ಕ್ರಮ ನಮಗೆ ಇಷ್ಟವಾಗಬಹುದು ಆಗ ಆ ಜೀವನ ಕ್ರಮವನ್ನು ನಮ್ಮ ಊರಲ್ಲಿ ಬಂದು ನಾವು ಅನುಸರಿಸಿದರೆ ನಮ್ಮಲ್ಲಿ ಬದಲಾವಣೆಯಾಗಲು ಸಾಧ್ಯ. ಇದೇ ರೀತಿಯಲ್ಲಿ ನಾವು ಪ್ರವಾಸಕ್ಕೆ ಹೋದಾಗ ಕಂಡುಕೊಂಡಂತಹ ವಿಶೇಷತೆಗಳು ಅಲ್ಲಿನ ಜನರ ಸಭ್ಯತೆ ಇರಬಹುದು ಅಥವಾ ಆಹಾರ,ಆಚಾರ ವಿಚಾರ ಇರಬಹುದು ವ್ಯವಹಾರ ಇರಬಹುದು ಜೀವನ ಕ್ರಮ ಇರಬಹುದು ಇವುಗಳೆಲ್ಲ ಪ್ರವಾಸಿಗರ ಮನಸಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವೊಂದು ಅಂಶಗಳು ಪ್ರವಾಸಕ್ಕೆ ಹೋದಾಗ ಅಲ್ಲಿಯ ಜನರ ಜೀವನ ಕ್ರಮ ಪದ್ಧತಿಗಳನ್ನು ನೋಡುವಾಗ ನಮ್ಮ ಜೀವನ ಪ್ರಕ್ರಮ ಪದ್ಧತಿಯ ನೆನಪು ನಮಗಾಗುತ್ತದೆ ಮನಸ್ಸು ತನ್ನಂತಾನೆ ಸಾಮ್ಯತೆಯನ್ನು ಚಿಂತನೆ ಮಾಡುತ್ತದೆ ಯಾವುದು ಒಳ್ಳೇದು ಎಂಬುದನ್ನು ಆಲೋಚಿಸುತ್ತದೆ ಮನಸ್ಸಿಗೆ ಖುಷಿಯಾದರೆ ಅದನ್ನು ಅಳವಡಿಸುವ ಕೆಲಸವು ನಡೆಯುತ್ತದೆಒಟ್ಟಿನಲ್ಲಿ ಪ್ರವಾಸದಿಂದ ಹೊಸ ಅನುಭವ ಮಾತ್ರ ಸಿಗುತ್ತದೆ ಎನ್ನಲಾಗದು. ಪ್ರವಾಸದಿಂದ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮಲ್ಲಿ ನಾವು ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗುತ್ತದೆ. ಕೂಪ ಮಂಡೂಕದಂತಿರುವ ಮನುಷ್ಯರು ಪ್ರವಾಸಕ್ಕೆ ಹೋಗಿ ಬಂದ ನಂತರ ಮನಸ್ಸು ವಿಶಾಲವಾಗುತ್ತದೆ ಬದಲಾವಣೆಯನ್ನು ಅವರು ಸ್ವೀಕರಿಸುತ್ತಾರೆ. ಹೊಸ ಪರಿಸರ ಮತ್ತು ಸಂಸ್ಕೃತಿಯು ಮೆದುಳನ್ನು ಸಕ್ರಿಯಗೊಳಿಸುತ್ತದೆ.ದೈನಂದಿನ ಜಂಜಾಟದಿಂದ ವಿರಾಮ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ ಹೊಸ ಚೈತನ್ಯ ನೀಡುತ್ತದೆ.ವಿಭಿನ್ನ ಆಹಾರ ಪದ್ಧತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ.ಒಟ್ಟಾರೆಯಾಗಿ, ಪ್ರವಾಸವು ಬದುಕಿನ ಬದಲಾವಣೆಗೆ,ವ್ಯಕ್ತಿತ್ವ ವಿಕಸನಕ್ಕೆ ಮತ್ತು ಬದುಕಿನ ದೃಷ್ಟಿಕೋನವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಡಾ.ಸುಮತಿ ಪಿ
“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ Read Post »
ಎಮ್.ಎಚ್.ಹಾಲ್ಯಾಳ ಅವರ ಗಜಲ್
ಕಾವ್ಯ ಸಂಗಾತಿ ಎಮ್.ಎಚ್.ಹಾಲ್ಯಾಳ ಗಜಲ್ ಅವರಿವರ ಮಾತಿಗೆ ನೊಂದು ದು:ಖಿಸದೆ ಮುಂದೆ ಸಾಗುಬರುವ ಕಷ್ಟಗಳನೆದುರಿಸಿ ಗುರಿ ಸಾಧನೆಗೆ ಮುಂದೆ ಸಾಗು.. ಸರಿ ದಾರಿ ಕಾಣದೆಂದು ಧೃತಿಗೆಟ್ಟು ಸೋತು ಮರಳಿ ಬಾರದೆಹೊಸ ದಾರಿ ಶೋಧಿಸಿ ಸಾಧನೆಗಾಗಿ ಮುಂದೆ ಸಾಗು.. ಬಾಳಿನಲಿ ಬರುವ ಗೋಳಿನುರಿಗೆ ಬಲಿಯಾಗದೆ ನಡೆದುಭವದ ಬಂಧನ ಕಳಚಿ ಅಂತಿಮ ಸತ್ಯ ಹುಡುಕುತ ಮುಂದೆ ಸಾಗು.. ಸೋಲುವೆನೆಂಬ ಭಯ ಬಿಟ್ಟು ಗೆಲುವಿನ ಹಾದಿ ಹಿಡಿದುಛಲದಂಕ ಮಲ್ಲನಂತೆ ಬಾಳ ಗೆಲುವು ಸಾಧಿಸುತಾ ಮುಂದೆ ಸಾಗು.. ಮುಳುಗಿದ ಸೂರ್ಯ ಮತ್ತೆ ಉದಿಸಿ ಬರುವ ಸತ್ಯವನರಿತುಈ ಶಾಂತಿದೂತನ ನಂಬುತಾ ಹೆದರದೆ ಮುಂದೆ ಸಾಗು.. ಎಮ್.ಎಚ್.ಹಾಲ್ಯಾಳ
ಎಮ್.ಎಚ್.ಹಾಲ್ಯಾಳ ಅವರ ಗಜಲ್ Read Post »
ಪ್ರಭಾವತಿ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ ಪ್ರಭಾವತಿ ದೇಸಾಯಿ ಗಜಲ್ ಬದುಕಿನ ಕಳವಳ ಎದೆಯ ಒಳಗೆ ಕಡೆಗೋಲು ಮಥಿಸಿತು ಇರುಳುಕಟ್ಟಿದ ಕರಿ ಮೋಡವು ತುಂತುರ ಹನಿಗಳ ಉದುರಿಸಿತು ಇರುಳು ನೆನಪಿನ ಹಳೆ ಗಂಟು ಬಿಚ್ಚಿ ಕಂಗಳ ನಿದಿರೆ ಕದಿಯಿತು ಚುಕ್ಕಿಹುಣ್ಣಿಮೆಯ ಚಂದಿರ ಕಿರಣ ಕೊಳದ ಮೊಗ್ಗು ಅರಳಿಸಿತು ಇರುಳು ಗತಕಾಲದ ವೈಭವ ನೆನೆಯುತ ಮೌನದಲಿ ಜಂತಿ ಎಣಿಸಿದೆ.ಮುತ್ತಿದ ಕತ್ತಲು ವಿರಹ ಅಗ್ನಿಯಲಿ ದೇಹ ದಹಿಸಿತು ಇರುಳು ಕುಸುಮದಲ್ಲಿ ಕಂಡ ಕನಸುಗಳು ಉದುರಿ ಮಣ್ಣಲಿ ಸೇರಿದವುಹೃದಯದ ಬಯಕೆಯು ಭೂತವಾಗಿ ಕಾಡಿಸಿ ನರಳಿಸಿತು ಇರುಳು ಅರ್ಧರಾತ್ರಿಯಲಿ ಗೊಂಬೆಗಳು ಎದ್ದು ಕುಣಿದಾಡ ತೊಡಗಿದವುಮೂಡಣದಲಿ ಮೂಡಿದ ಹೊನ್ನಕಿರಣ ಪ್ರಭೆ ಸರಿಸಿತು ಇರುಳು ಪ್ರಭಾವತಿ ಎಸ್ ದೇಸಾಯಿ
ಪ್ರಭಾವತಿ ದೇಸಾಯಿ ಅವರ ಗಜಲ್ Read Post »









