ಧಾರಾವಾಹಿ ಸಂಗಾತಿ-132 ರುಕ್ಮಿಣಿ ನಾಯರ್ ಒಬ್ಬ ಅಮ್ಮನ ಕಥೆ ಹಾಸನ ಜಿಲಾಸ್ಪತ್ರೆಗೆ ಸುಮತಿ ಬೆಂಗಳೂರಿನಿಂದ ಹೊರಟ ಸುಮತಿ ಮತ್ತು ಮಗಳು ಹಾಗೂ ಹಿರಿಯ ಅಳಿಯ ಸಕಲೇಶಪುರವನ್ನು ತಲುಪಿದರು. ಮೂವರೂ ಆಶ್ರಮ ತಲುಪಿದರು. ತನ್ನ ಕೋಣೆಯೊಳಗೆ ಆಯಾಸಗೊಂಡಿದ್ದ ಅಮ್ಮನನ್ನು ಮಲಗಿಸಿ, ಬಾವನಿಗೆ ಧನ್ಯವಾದ ಹಾಗೂ ಕೃತಜ್ಞತೆಗಳನ್ನು ತಿಳಿಸಿ….. “ನೀವು ಮನೆಗೆ ಹೋಗಿ ಬಾವ…. ಅಕ್ಕ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆಯಲ್ಲಿದ್ದಾರೆ…. ಮಕ್ಕಳು ನಿಮ್ಮನ್ನು ಬಿಟ್ಟು ಇರುವುದಿಲ್ಲ….. ಅಮ್ಮನನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಾನು ದಾಖಲು ಮಾಡುತ್ತೇನೆ”…. ಎಂದಳು. ನಾದಿನಿಯ ಜವಾಬ್ದಾರಿಯುತ ನಡೆಯ ಸಾಮರ್ಥ್ಯವನ್ನು ಅರಿತಿದ್ದ ಬಾವ…. ಹಾಗೆಯೇ ಆಗಲಿ…. ಆದರೆ ಇನ್ನೇನಾದರೂ ಸಹಾಯ ಬೇಕಿದ್ದರೆ ತಡ ಮಾಡದೇ ತಪ್ಪದೇ ನನಗೆ ತಿಳಿಸು…. ನಾನು ಖಂಡಿತ ಬರುತ್ತೇನೆ”…. ಎಂದು ನಾದಿನಿಗೆ ಹೇಳಿ, ಆಯಾಸದಿಂದ ಮಲಗಿದ್ದ ಅತ್ತೆಯ ಬಳಿಗೆ ಹೋಗಿ…. “ಅತ್ತೇ…. ನಿಮ್ಮ ಮಗಳು ಒಬ್ಬಳೇ ಇಬ್ಬರು ಪುಟ್ಟ ಮಕ್ಕಳನ್ನು ಸಂಭಾಳಿಸುತ್ತಾ ಮನೆಯಲ್ಲಿದ್ದಾಳೆ…. ಅದೂ ಅಲ್ಲದೇ ನಾನು ಕೆಲಸಕ್ಕೆ ಕೂಡ ಹೋಗಬೇಕಾಗಿದೆ…. ನಾದಿನಿ ನಿಮ್ಮನ್ನು ಆಸ್ಪತ್ರೆಗೆ ದಾಖಲು ಮಾಡಿಸುತ್ತೇನೆ ಎಂದು ಹೇಳಿದ್ದಾಳೆ…. ನಾನು ಮತ್ತು ನಿಮ್ಮ ಮಗಳು ಆಗಾಗ ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ….. ಆರೋಗ್ಯದ ಬಗ್ಗೆ ಹೆಚ್ಚು ಚಿಂತಿಸಿ ಕೊರಗಬೇಡಿ…. ಆದಷ್ಟು ಬೇಗ ಗುಣಮುಖರಾಗಿ ನಿಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವಿರಂತೆ…. ನಾನಿನ್ನು ಹೊರಡಲೇ?”…ಎಂದು ಹೇಳುತ್ತಾ ಅತ್ತೆಯ ಅನುಮತಿಗಾಗಿ ಅಲ್ಲಿಯೇ ನಿಂತನು. ಅಳಿಯನ ಮಾತುಗಳನ್ನು ಆಲಿಸಿದ ಸುಮತಿ….”ಹೌದು ಅಳಿಯಂದಿರೇ…. ನೀವೀಗ ಮನೆಗೆ ಹೋಗಲೇಬೇಕು…. ನನ್ನ ಮುದ್ದು ಮೊಮ್ಮಕ್ಕಳು ನಿಮಗಾಗಿ ಕಾಯುತ್ತಿರುತ್ತಾರೆ…. ನೀವು ಕೆಲಸಕ್ಕೂ ಹೋಗಬೇಕಿದೆ….. ಇಲ್ಲಿ ಮಗಳು ಇದ್ದಾಳಲ್ಲವೇ ಅವಳು ಎಲ್ಲವನ್ನೂ ನೋಡಿಕೊಳ್ಳುತ್ತಾಳೆ….. ನೀವು ನಿಶ್ಚಿಂತರಾಗಿರಿ…. ನನ್ನ ಮೊಮ್ಮಕ್ಕಳನ್ನು ನೋಡುವ ಬಯಕೆಯಾಗಿದೆ ನೀವು ಬರುವಾಗ ಅವರನ್ನು ಕರೆದುಕೊಂಡು ಬನ್ನಿ”…. ಎಂದು ಹೇಳಿ ಸುಮತಿ ಅಳಿಯನನ್ನು ಬೀಳ್ಕೊಟ್ಟಳು. ಅನಾರೋಗ್ಯದ ತೀವ್ರತೆಯ ಕಾರಣ ಸುಮತಿಗೆ ಕಣ್ಣುಗಳು ಸರಿಯಾಗಿ ಕಾಣಿಸುತ್ತಿರಲಿಲ್ಲ. ಯಾರ ಮುಖವೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಬರಿಯ ಆಕೃತಿ ಮಾತ್ರ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಧ್ವನಿಯಿಂದ ಎಲ್ಲರನ್ನೂ ಗುರುತು ಹಿಡಿಯುತ್ತಿದ್ದಳು. ಸುಮತಿಯ ಎರಡನೇ ಮಗಳಿಗೆ ಆಶ್ರಮದಲ್ಲಿದ್ದ ಗೆಳತಿಯ ಸಹಾಯ ಬಹುದೊಡ್ಡ ಆಧಾರವಾಗಿತ್ತು. ತಡ ಮಾಡದೇ ತಾಯಿಯನ್ನು ಹಾಸನದ ಆಸ್ಪತ್ರೆಗೆ ಕರೆದುಕೊಂಡು ಹೊರಟಳು. ಆಶ್ರಮದ ಮಕ್ಕಳಿಗೆ ರಜೆ ಇದ್ದ ಕಾರಣ ಎಲ್ಲರೂ ಅವರವರ ಮನೆಗಳಿಗೆ ತರಳಿದ್ದರು. ಹಾಗಾಗಿ ಆಶ್ರಮದಲ್ಲಿದ್ದ ಗೆಳತಿಯು ಸ್ವಲ್ಪ ದಿನದ ಮಟ್ಟಿಗೆ ತಾನು ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟಳು….”ಆಶ್ರಮದ ಬೀಗದ ಕೀಲಿಯನ್ನು ಸೆಕ್ರೆಟರಿ ಅವರಿಗೆ ಕೊಟ್ಟಿರುತ್ತೇನೆ…. ನೀನು ಆಸ್ಪತ್ರೆಯಿಂದ ಬರುವಾಗ ಅವರಿಂದ ಕೀಲಿಯನ್ನು ಪಡೆದುಕೋ…. ನಿನಗೆ ಪರೀಕ್ಷೆ ಇದೆಯಲ್ಲವೇ?…. ನಿನಗೆ ಏನಾದರೂ ಅಗತ್ಯಗಳು ಇರುತ್ತವೆ”… ಎಂದು ಹೇಳಿ ತನ್ನ ಊರಿನ ಕಡೆಗೆ ಹೊರಟಳು. ಸುಮತಿಯ ಎರಡನೇ ಮಗಳು ತನ್ನ ತಾಯಿಯೊಂದಿಗೆ ಹಾಸನಕ್ಕೆ ಹೊರಡುವ ಮುನ್ನ ಆಶ್ರಮದ ಬಳಿ ಇದ್ದ ಮೆಡಿಕಲ್ ಸ್ಟೋರ್ ಒಂದರ ಟೆಲಿಫೋನ್ ಬೂತಿಗೆ ಹೋಗಿ, ತೋಟದ ಆಫೀಸಿನಲ್ಲಿರುವ ಫೋನ್ ನಂಬರಿಗೆ ಕರೆ ಮಾಡಿದಳು. ಕರೆಗೆ ಪ್ರತ್ಯುತ್ತರ ನೀಡಿದ್ದು ತೋಟದ ಮ್ಯಾನೇಜರ್ ಆದುದರಿಂದ ಅವರಿಗೆ ಎಲ್ಲ ವಿಷಯವನ್ನು ತಿಳಿಸಿದಳು. ತೋಟದ ಸಾಹುಕಾರಮ್ಮನವರು ವಿದೇಶಕ್ಕೆ ಹೋಗಿರುವುದಾಗಿ ಮ್ಯಾನೇಜರ್ ತಿಳಿಸಿದರು. ಹಾಗಾಗಿ ವಿಷಯವನ್ನೆಲ್ಲ ತನ್ನ ತಂಗಿಗೆ ತಿಳಿಸಲು ವಿನಂತಿಸಿಕೊಂಡಳು. ತಾಯಿಗೆ ಆಯಾಸವಿದ್ದ ಕಾರಣ ನಡೆಯಲು ಆಗುತ್ತಿರಲಿಲ್ಲ. ಹಾಗಾಗಿ ಆಟೋದಲ್ಲಿ ಬಸ್ಟ್ಯಾಂಡಿಗೆ ಕರೆದುಕೊಂಡು ಬಂದಳು. ಅಲ್ಲಿ ಹಾಸನಕ್ಕೆ ಹೋಗುವ ಬಸ್ ನಿಂತಿತ್ತು. ಮೊದಲು ತಾಯಿಯನ್ನು ಬಸ್ಸಿನಲ್ಲಿ ನಿಧಾನವಾಗಿ ಜಾಗರೂಕತೆಯಿಂದ ಹತ್ತಿಸಿ ಕಿಟಕಿಯ ಬಳಿಯ ಸೀಟಿನಲ್ಲಿ ಕುಳ್ಳಿರಿಸಿ, ತಾನು ಕೆಳಗಿಳಿದು ಬಟ್ಟೆಬರೆ ಇರುವ ಬ್ಯಾಗನ್ನು ಎತ್ತಿಕೊಂಡು ಬಂದು ಮೇಲಿನ ಸ್ಟ್ಯಾಂಡ್ ನಲ್ಲಿ ಇರಿಸಿ ಸುಮತಿಯ ಬಳಿ ಕುಳಿತುಕೊಂಡಳು. ಬಸ್ ಹಾಸನದ ಕಡೆಗೆ ಹೊರಟಿತು. ಹಾಸನ ಬಸ್ ಸ್ಟ್ಯಾಂಡ್ ತಲುಪಿದ ನಂತರ ಅಲ್ಲಿಂದ ಮತ್ತೊಂದು ಆಟೋದಲ್ಲಿ ತಾಯಿಯನ್ನು ಕರೆದುಕೊಂಡು ಜಿಲ್ಲಾಸ್ಪತ್ರೆಯ ಕಡೆಗೆ ಹೊರಟಳು. ಜಿಲ್ಲಾ ಆಸ್ಪತ್ರೆ ತಲುಪಿದಾಗ ಡಾಕ್ಟರ್ ಬರುವ ಸಮಯವಾಗಿತ್ತು. ನಿಧಾನವಾಗಿ ತಾಯಿಯನ್ನು ಆಟೋದಿಂದ ಇಳಿಸಿ, ಮೆಲ್ಲನೆ ನಡೆಸಿಕೊಂಡು ಹೋಗಿ ಹೊರರೋಗಿಗಳ ವಿಭಾಗದ ಹತ್ತಿರ ಇದ್ದ ಬೆಂಚಿನಲ್ಲಿ ಕುಳ್ಳಿಸಿದಳು. ಸರತಿಯ ಸಾಲಿನಲ್ಲಿ ಹೆಚ್ಚು ಜನರಿರದ ಕಾರಣ ಸ್ವಲ್ಪ ಹೊತ್ತಿನಲ್ಲಿ ಡಾಕ್ಟರನ್ನು ನೋಡುವ ಅವಕಾಶ ದೊರೆಯಿತು. ತಾಯಿಗೆ ಅಲ್ಲೇ ಕುಳಿತುಕೊಳ್ಳಲು ಹೇಳಿ ಮಗಳು ಮೊದಲು ತಾನು ಒಬ್ಬಳೇ ಡಾಕ್ಟರ್ ಕೊಠಡಿಯನ್ನು ಪ್ರವೇಶಿಸಿದಳು. ಅಲ್ಲಿನ ಡಾಕ್ಟರ್ (ಫಿಜ಼ಷಿಯನ್) ಮೊದಲು ಸಕಲೇಶಪುರದಲ್ಲಿದ್ದವರಾಗಿದ್ದರು. ಅವರು ಆಸ್ಪತ್ರೆಯ ಮೇಲಾಧಿಕಾರಿಯಾಗಿ ಭಡ್ತಿ ಹೊಂದಿ ಇಲ್ಲಿಗೆ ವರ್ಗಾವಣೆಗೊಂಡಿದ್ದರು. ಸುಮತಿಗೆ ಹಲವು ವರ್ಷಗಳಿಂದ ಈ ವೈದ್ಯರೇ ಚಿಕಿತ್ಸೆ ಕೊಡುತ್ತಿದ್ದ ಕಾರಣ ಮಗಳ ಪರಿಚಯವು ಅವರಿಗಿತ್ತು…. “ಏನಮ್ಮಾ ಹುಡುಗಿ…. ನಿನ್ನ ತಾಯಿ ಹೇಗಿದ್ದಾರೆ”… ಎಂದು ಕೇಳಿದರು. ಅದಕ್ಕುತ್ತರವಾಗಿ ವೈದ್ಯರಿಗೆ ವಂದಿಸಿದ ಅವಳು… “ಸರ್ ನಿಮ್ಮ ಬಳಿ ಒಂದು ಮುಖ್ಯವಾದ ವಿಷಯವನ್ನು ನಾನು ಪ್ರಸ್ತಾಪಿಸಬೇಕಿದೆ…. ದಯವಿಟ್ಟು ನನಗೆ ನೀವು ಸಹಾಯ ಮಾಡಬೇಕು”…. ಎಂದಳು….. “ಅದೇನು ಹೇಳಮ್ಮಾ”…. ಎಂದು ವೈದ್ಯರು ಕೇಳಿದಾಗ ಬೆಂಗಳೂರಿನಲ್ಲಿ ನಡೆದ ಅಷ್ಟೂ ಘಟನೆಯನ್ನು ವಿವರಿಸಿದಳು. ವೈದ್ಯರಿಗೆ ಸುಮತಿಯ ಬಗ್ಗೆ ತಿಳಿದು ಬಹಳ ಬೇಸರ ಮತ್ತು ಸಂಕಟವಾಯಿತು. ಆಕೆಯ ಪರಿಸ್ಥಿತಿಯನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು…. “ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಯಿತು…. ನನ್ನಿಂದ ನಿಮಗೇನು ಸಹಾಯವಾಗಬೇಕು ತಿಳಿಸು ಮಗು”…. ಎಂದರು…. “ಸರ್…. ಬೆಂಗಳೂರಿನಲ್ಲಿ ದೊರಕುವ ಚಿಕಿತ್ಸೆ ಈ ಆಸ್ಪತ್ರೆಯಲ್ಲಿ ದೊರೆಯುತ್ತದೆ ಎಂದು ಅಮ್ಮನಿಗೆ ಸುಳ್ಳು ಹೇಳಿ ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ…. ಅವರಿಗೆ ಸತ್ಯ ಸಂಗತಿಯನ್ನು ನಾನು ತಿಳಿಸಿಲ್ಲ….. ತಿಳಿಸುವ ಮನಶಕ್ತಿಯೂ ನನ್ನಲಿಲ್ಲ…. ದಯವಿಟ್ಟು ತಾವು ಈ ಆಸ್ಪತ್ರೆಯಲ್ಲಿ ನನ್ನ ತಾಯಿಯನ್ನು ದಾಖಲು ಮಾಡಿ ಸ್ವಲ್ಪ ದಿನ ಚಿಕಿತ್ಸೆ ಕೊಡುವಿರಾ?” ….. ಎಂದು ಅಂಗಲಾಚುವಂತೆ ಬೇಡಿಕೊಂಡಳು.
ಅಂಕಣ ಸಂಗಾತಿ ಜ್ಯೋತಿ ಡಿ ಬೊಮ್ಮಾ ಮನದ ಮಾತುಗಳು ಧರೆ ಹತ್ತಿ ಉರಿದೊಡೆ… ಪ್ರಕೃತಿ ಗೆ ದಿನೆ ದಿನೆ ನಮ್ಮ ಮ್ಯಾಲ ಸಿಟ್ಟು ಹೆಚ್ಚಾಗ್ತಾನೆ ಅದ. ಪ್ರಕೃತಿ ವಿಕೋಪಗಳು ಎಷ್ಟೊಂದು ರೀತಿಯೊಳಗ ಮನುಕುಲಕ್ಕ ಕಾಡತಿದ್ದಾವ.ಅದಕ್ಕ ನಾವೂ ಕಾರಣ ಅನ್ನೊದು ಮರಿಬಾರದು.ಅನಿರೀಕ್ಷಿತ ವಾಗಿ ನೇಪಾಳದಾಗ ಆದ ಪ್ರವಾಹಗಳಂತವನ್ನು ಅದೆಂಗ ತಡಕೊಳ್ಳಬೇಕು ಮನುಷ್ಯ ರು.. ಮಳಿ ಗಾಳಿ ಒಂದು ಇರಲಾರದೆ ಒಮ್ಮೆಲೆ ನೀರು ಮನಿ ಊರು ಎಲ್ಲಾ ಮುಳಗಿಸಿ ಬಿಡತದ ಅಂದರ ಇದು ಅದೇಷ್ಟು ಅನಿರೀಕ್ಷಿತ. ವಿಜ್ಞಾನ ಎಷ್ಟೇ ಮುಂದ ವರೆದ್ರು ಇಂತ ಅವಘಡಗಳು ತಪ್ಪಿಸಲಿಕ್ಕ ಆಗಲ್ಲ.ಕೈಲಾಶ್ ಪರ್ವತ ಯಾತ್ರೆ ಇಷ್ಟು ದಿನ ಬಂದ್ ಆಗಿದ್ದು ಈಗ ಒಂದೆರಡು ವರ್ಷ ಗಳಿಂದ ಶುರು ಆಗ್ಯಾದ.ಪ್ರವಾಸ ಅಂದ್ರ ಬಾಯಿ ಬಿಡುವ ನಾನಗ ಮಾನಸ ಸರೋವರ ಯಾತ್ರ ಮಾಡುವ ಕನಸು ಅದ. ಕೈಲಾಶ್ ಪರ್ವತ ನೋಡಬೇಕು ಅವನ್ನು ಇಚ್ಚೆಗಿಂತ ಪರ್ವತದ ವರೆಗೆ ಹೋಗುವ ದಾರಿಯ ರೋಚಕ ಅನುಭವಕ್ಕ ನನ್ನ ಮನ ಇಷ್ಟಪಡತದ.ನೇಪಾಳ ಪ್ರವಾಸಕ್ಕೆ ಹೋದಾಗ ನನಗ ಅದೇನು ಅಷ್ಟು ಇಷ್ಟ ಆಗಿಲ್ಲ.ಹಿಮಾಲಯ ಪರ್ವತಗಳ ಸಮೀಪ ಹೋಗಬಹುದು , ಸಮೀಪದಿಂದ ಹಿಮಾಲಯ ಪರ್ವತ ನೋಡಬಹುದು ಅನ್ನೊ ಆಸೆಯಿಂದ ಹೋಗಿದ್ಧೆ. ಹಿಮಾಲಯ ಪರ್ವತ ಇರಲಿ , ಪರ್ವತದ ತುದಿನೂ ಕಾಣಲಿಲ್ಲ.ಬೇರೆ ಬೇರೆ ಪರ್ವತಗಳ ತುದಿ ಕಡೆ ಬೆರಳು ಮಾಡಿ ತೊರಿಸುತ್ತ ನಮ್ಮ ಗೈಡ ಅವುಗಳ ಹೆಸರು ಹೆಳತಿದ್ರೆ ಹಿಮಾಲಯ ಪರ್ವತ ಎಲ್ಲಿದೆ ಅಂತ ಕೆಳತಿದ್ಧ.ಅದನ್ನು ನೋಡಬೇಕಾದ್ರೆ ಚೀನಾ ಅಥವಾ ಟಿಬೆಟ್ ಬಾರ್ಡರ್ ಕಡಿ ಹೋಗಬೇಕು , ಇಲ್ಲ ಹೆಲಿಕ್ಯಾಪ್ಟರ್ ನಲ್ಲಿ ಹಿಮಾಲಯ ಮತ್ತು ಇತರ ಪರ್ವತಗಳನ್ನು ಸಮೀಪದಿಂದ ನೋಡಬಹುದು ಅಂತ ಹೆಳ್ದ. ಒಂದು ವೇಳೆ ದುಬಾರಿ ಟಿಕೆಟ್ ಕೊಟ್ಟು ಹೆಲಿಕಾಪ್ಟರನಲ್ಲಿ ಹೋದ್ರೂ ವಾತಾವರಣ ಚನ್ನಾಗಿ ಇರಲಿಲ್ಲಂದ್ರ ವಾಪಸ ಬರಬೇಕಾಗತದ ಅಂತ ಎಚ್ಚರಿಕೆ ಕೊಟ್ಟ.ಯಾರೂ ಆಸಕ್ತಿ ತೋರಿಸಲಿಲ್ಲ . ನನಗೂ ಒಬ್ಬಕಿಗೆ ಹೋಗಲಿಕ್ಕ ದೈರ್ಯ ಸಾಲಲಿಲ್ಲ . ಇಡೀ ನೇಪಾಳ ಪ್ರವಾಸದಾಗ ದೂರದಿಂದ ಕಾಣುವ ಪರ್ವತ ತುದಿ ನೋಡಿ ಬಂದಿದ್ದೆವು. ನೇಪಾಳ ಈಗೀಗ ಅಭಿವೃದ್ಧಿ ಆಗತಿರೋ ದೇಶ.ಸದಾ ಚೀನಾದವರ ಅತಿಕ್ರಮಣದ ದಬ್ಬಾಳಿಕೆ ಸಹಿಸ್ತಾ ಅವರ ನೆರವಿನಲ್ಲಿ ಇರಬೇಕಾದ ಅವಶ್ಯಕತೆ . ಮತ್ತು ಟಿಬೇಟ್ , ಭಾರತ ದಂತ ನೆರೆ ರಾಜ್ಯಗಳು , ಯಾರ ಜೊತೆಗೆ ಗೆಳೆತನ ಇಟ್ಟಕೋಬೇಕು ಅನ್ನೊ ಸಂದಿಗ್ಧ ಪರಿಸ್ಥಿತಿ. ಪುರುಷರು ದುಡಿಯಲು ವಲಸೆ ಹೋದ್ರೆ ಮಹಿಳೆಯರೇ ಮನೆ ಮಕ್ಕಳು ನೋಡಕೊಂಡು ಇರತಾರೆ. ಎಲ್ಲಾ ಅಂಗಡಿಯೊಳಗ ಹೆಚ್ಚಾಗಿ ಮಹಿಳೆಯರೆ ಕಾಣತಾರ. ಚೀನಾದವರ ನೆರವಿನ ರಸ್ತೆಗಳು ,ಮತ್ತಿತರ ಕಟ್ಟಡಗಳು ಮಾಡಿ ಪ್ರವಾಸ ಅಭಿವೃದ್ಧಿ ಮಾಡತಿದ್ದಾರ. ಇತ್ತೀಚೆಗಷ್ಟೆ ನೇಪಾಳದ ರಾಜಕೀಯ ಯುವಕರ ದೆಸೆಯಿಂದ ಬದಲಾಗಿ ಹೊಸ ರೂಪ ಪಡಿತಿತ್ತು.ಅಂತದ್ದರಾಗ ಈ ಪ್ರವಾಹದ ಅವಘಡ. ಹಾಳಾಗಿದ್ದದ್ದು ಮೊದಲಿನ ರೂಪಕ್ಕ ಬರಬೇಕಂದ್ರ ಮತ್ತ ಕಾಲ ಒಂದು ಶತಮಾನ ಹಿಂದೆ ಹೋದಂಗ. ಪ್ರವಾಸೋದ್ಯಮ ಅಭಿವೃದ್ಧಿ ಯಿಂದ ವಿಶ್ವ ಕ್ಕ ಯಾವರೀತಿ ಪ್ರಯೋಜನ ಅನ್ನುವ ಪ್ರಶ್ನೆ ಕಾಡತದ.ಬರೀ ದೇಶಗಳು ಅಭಿವೃದ್ಧಿ ಮಾತ್ರ ಆಗತಾವ ಅಂತ ಹೆಳಲಿಕ್ಕಾಗಲ್ಲ.ಅದರೊಂದಿಗೆ ಪ್ರಕೃತಿಗೆ ನಾನಾ ರೀತಿಯ ಅನಾನುಕೂಲಗಳನ್ನು ಮಾಡತದ.ಪ್ರವಾಸಿಗರ ಅನುಕೂಲಕ್ಕ ಅವರ ವಸತಿ ಸೌಕರ್ಯ ಕ್ಕೆ ಅನುಕೂಲ ಮಾಡಿಕೊಡಬೇಕಂದ್ರ ಪ್ರಕೃಗೆ ಹಾನಿ ಮಾಡ್ಲೇಬೇಕು.ಗುಡ್ಡ , ಮರ , ಕಡಿದರೆ ಭೂಮಿ ಸವಕಳಿ ಆಗಿ ಕುಸಿದು ಬಿಳತದ. ರಸ್ತೆ , ಸುರಂಗಗಳು , ಹೊಟೆಲ್ ಗಳು ಇವೆಲ್ಲವೂ ಪ್ರವಾಸೋದ್ಯಮ ಕ್ಕೆ ಬಹಳ ಜರೂರಿ ಇರತವ.ಇದಕ್ಕಾಗಿ ಪರಿಸರಕ್ಕ ಕೆಣಕಿದ್ರೆ ಈ ಅವಘಡಗಳು ಸಂಭವಿಸ್ತಾವ. ಉತ್ತರಾಖಂಡ , ಹಿಮಾಚಲ , ಲಡಾಖ್ ನಂತಹ ಪ್ರದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚಾಗಿ ಪ್ರವಾಸಿ ತಾಣ ಆಗತಿದ್ದಾವ.ಬೆಟ್ಟಗಳ ಮ್ಯಾಲ್ ಮನುಷ್ಯರಿಗಾಗಿ ನಿರ್ಮಾಣ ಆಗತಿರೋ ರಸ್ತೆಗಳು ಮತ್ತು ಕಟ್ಟಡಗಳ ನಿರ್ಮಾಣ ದ ಒತ್ತಡ ಆ ಪ್ರಕೃತಿ ತಾಳಕೊಳ್ಳೊದು ಕಷ್ಟ. ವರ್ಷ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗತನೆ ಇಧೆ. ಒಂದು ವೇಳೆ ಪ್ರವಾಸೋದ್ಯಮ ಕ್ಕ ಕಡಿವಾಣ ಹಾಕಿದ್ರ ಆ ರಾಜ್ಯಗಳ ಅಭಿವೃದ್ಧಿ ಕುಂಠಿತ ಆಗತದ.ನಮ್ಮ ದೇಶದ ಎಷ್ಟೋ ರಾಜ್ಯಗಳು ಪ್ರವಾಸೊದ್ಯಮದ ಮ್ಯಾಲ ಅವಲಂಬಿತ ಆಗ್ಯಾವ. ಎಲ್ಲಕ್ಕಿಂತ ಹೆಚ್ಚಾಗಿ ವಾತಾವರಣದಲ್ಲಿನ ಬಿಸಿ ಪ್ರಕೃತಿಗೆ ಬಾಳ ಹಾನಿ ಮಾಡಲತದ.ಕಾಶ್ಮೀರ ಕಣಿವೆಯ ಅಮರನಾಥ ಗುಹೆಯ ಮಂಜಿನಿಂದ ಉಂಟಾಗುವ ಶಿವಲಿಂಗ ಕೆಲವೆ ದಿನಗಳಲ್ಲಿ ಕರಗಿ ಹೋಗಲತದ.ಮೊದಲೆಲ್ಲ ನಾಲ್ಕು ತಿಂಗಳು ಲಿಂಗದ ಆಕಾರದಲ್ಲೆ ಇರುವ ಶಿವಲಿಂಗ ಈಗ ತಿಂಗಳಲ್ಲಿ ಕರಗಿ ಬಿಡಲತದಂತ.ಎರಡು ವರ್ಷ ಕೆಳಗೆ ಸೆಪ್ಟೆಂಬರ್ ನಲ್ಲಿ ಅಮರನಾಥ ಪ್ರವಾಸ ಹೋಗಿದ್ಧ. ಅಷ್ಟರಲ್ಲಿ ಮಂಜಿನಿಂದ ಆದ ಶಿವಲಿಂಗ ಕರಗಿ ನೆಲದ ಮ್ಯಾಲೆಲ್ಲ ಹರಡಿತ್ತು.ದಿನಾ ಲಕ್ಷ ಲಕ್ಷ ಜನ ಗುಹೆಯೊಳಗ ಹೋದ್ರ ಅವರ ಉಸಿರಿನ ಬಿಸಿಗಿ ಗುಹೆಯಲ್ಲಿ ತಂಪು ವಾತಾರಣ ಬಿಸಿ ಆಗತದ. ಬಿಸಿ ಹವಾಕ್ಕ ನಾಲ್ಕು ತಿಂಗಳ ಇರೋ ಲಿಂಗ ಒಂದೇ ತಿಂಗಳಲ್ಲಿ ಕರಗಲತದ. ಉತ್ತರಾಖಂಡ ಕೇದಾರ ಬದರಿನಾಥ ಧಾಮಗಳಲ್ಲೂ ಇತ್ತಿಚಿನ ವರ್ಷ ಗಳಲ್ಲಿ ಅತೀ ಜನದಟ್ಟಣೆ ಆಗಲತದ.ಹೋದ ವರ್ಷ ಮೇ ನಲ್ಲಿ ಹೋದಾಗ ಸಾವಿರಾರು ಜನರ ಲೈನ್. ಬೆಟ್ಟಗಳು ಇಷ್ಟು ಜನರ ಒತ್ತಡ ಹ್ಯಾಂಗ್ ತಡಕೋತಾವ.ಯಾವಾಗ ಯಾವ ಬೆಟ್ಟ ಕುಸಿದು ಬಿಳತದೋ ಅಂತ ಆತಂಕದಲ್ಲೆ ಪ್ರವಾಸ ಮುಗಿಸ್ದೆವು. ಭೂಲೋಕದ ಸ್ವರ್ಗ ಎಂದು ಹೆಸರಾಗಿದ್ದ ಕಾಶ್ಮೀರ ಕ್ಕ ಹೋದಾಗ ಅಲ್ಲಿ ನ ಬಿಸಿಲು ನೋಡಿ ಗಾಬರಿ ಆಗಿತ್ತು.ಅಷ್ಟು ತಾಪಮಾನದಲ್ಲಿ ಎರಿಕೆ ಆಗಿತ್ತು ,ಅಲ್ಲಿನ ಸ್ಥಳಿಯರು ಬಿಸಿಲು ತಡಿಲಾರದೆ ಒದ್ದಾಡ್ತಿದ್ರು.ಕಾಶ್ಮೀರ ಅಂದ್ರೆ ಎನೋ ಅಂತ ತಿಳಕೊಂಡ ಹೋದ ನಮಗೆ ಅಲ್ಲಿನ ಬಿಸಿಲು ನಿರಾಶೆ ಮಾಡಿತ್ತು. ಹಿಮಾಚಲ ಪ್ರದೇಶದ ಕುಲು ಮನಾಲಿಗಳು ಜನದಟ್ಟಣೆ ಪ್ರದೇಶ ಆಗಿಬಿಟ್ಟಾವ.ನಾವು ಡಿಸೆಂಬರ್ ನಲ್ಲಿ ಹೋಗಿದ್ದಕ್ಕ ಹಿಮಪಾತ ಆಗ್ತಿತ್ತು.ಪ್ರಕೃತಿ ಸುಂದರ ಅನಿಸಿತ್ತು.ಪ್ರವಾಸಿಗರಿಗಾಗಿ ಗುಡ್ಡ ಕಡಿದು ಸುರಂಗ ಮಾಡುವಾಗ ಆದ ಅವಘಡದಿಂದ ಎಷ್ಟೋ ಜನ ಒಳಗೆ ಸಿಕ್ಕಿಹಾಕಿಕೊಂಡಿದ್ರು. ಲಡಾಖ್ ಗೆ ಈಗೀಗ ಪ್ರವಾಸಿಗರ ಸಂಖ್ಯೆ ಹೆಚ್ಚು ಆಗಲತದ.ಜನದಟ್ಟಣೆ ಹೆಚ್ಚಾದಂಗ ಪರಿಸರ ಮುನಿಯುವದಕ್ಕ ಶುರು ಆಗತದ.ನನಗ ಲಡಾಖ್ ಸುಂದರ ಮತ್ತ ಶಾಂತ ಅನಿಸ್ತು. ಬೆಟ್ಟಗಳ ನಡು ಶಾಂತವಾಗಿದ್ದ ಸ್ಥಳ ನಮ್ಮಂತ ಪ್ರವಾಸಿ ಗರಿಂದ ಅಶಾಂತಗೊಳ್ಳತದ. ಜನದಟ್ಟಣೆ ಯಾವಾಗಲೂ ಎನಾದ್ರು ಒಂದು ಕೆಟ್ಟ ಘಟನೆಗೆ ಕಾರಣ ಆಗ್ತಾನೆ ಇರತದ.ಕಾಲ್ತುಳಿತದಂತ ಪ್ರಸಂಗಗಳು ಮತ್ತ ಮತ್ತ ಆಗ್ತಾನೆ ಇರತಾವ.ಕಾಲ್ತುಳಿತ ಆಗತದ ಅಂತ ಗೊತ್ತಿದ್ರೂ ಮತ್ತು ದಟ್ಟಣೆಯೊಳಗ ಹೋಗಿ ತೂರಿಕೊಳ್ಳತೀವಿ. ಪ್ರಕೃತಿ ವಿಕೋಪಗಳು , ಯುದ್ದಗಳು ಎಷ್ಟು ಕರಾಳ ನೆನಪುಗಳು ಉಳಿಸಿಬಿಡತಾವ , ಬದುಕುಳಿದವರವರ ಬದುಕು ಮೂರಾಬಟ್ಟೆ. ಜೀವನವೀಡಿ ಚಂದದ ಬದುಕಿಗಿ ಹವಣಿಸಿ ಹೆಣಗಿ ಪರಿಶ್ರಮದಿಂದ ಕಟ್ಟಿಕೊಂಡ ಬದುಕು ಕ್ಷಣದಲ್ಲಿ ನಿರ್ನಾಮ ಆದ್ರ ಅದನ್ನು ತಾಳಕೊಳ್ಳೊ ಕಷ್ಟ ವರ್ಣಿಸಲಕ್ಕ ಆಗದ ಮಾತು. ಆದ್ರೂ ಬದುಕಲೇಬೇಕಲ್ಲ.ಸಮಯದ ಆಧಾರದ ಮ್ಯಾಲ. ಮನುಕುಲ ಈಗಲಾದ್ರು ಪ್ರಕೃತಿ ಬಗ್ಗೆ ವಿಚಾರ ಮಾಡಲೇಬೇಕು.ಅಭಿವೃದ್ದಿ ಹೆಸರಲ್ಲಿ ಗುಡ್ಡ , ನೆಲ ಅಗೀತಾ ಹೋದ್ರ ಮುಂದೆ ಇನ್ನೂ ಘೋರ ಪರಿಣಾಮ ಎದುರಿಸಬೇಕಾಗತದ.ನಾವು ಪ್ರವಾಸ ಮಾಡೋರು ಕೂಡ ಎಲ್ಲಾ ಸೌಕರ್ಯ ಐಶಾರಾಮಿ ಆಗಿ ಇರಬೇಕಂತ ಬಯಸ್ತಿವಿ.ನಮ್ಮ ಸೌಕರ್ಯ ಕ್ಕಾಗಿ ಪ್ರಕೃತಿ ಮ್ಯಾಲ ದಬ್ಬಾಳಿಕೆ ಮಾಡೋದು ಮುಂದುವರಿತಾನೆ ಅದ.ಪ್ರಕೃತಿ ಆದ್ರು ಎಷ್ಟಂತ ಸಹಿಸಿಕೊಳ್ಳತದ ಮನುಷ್ಯರ ಹುಂಬತನ. ಜ್ಯೋತಿ ಡಿ ಬೊಮ್ಮಾ
“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ
ವಿಶೇಷ ಸಂಗಾತಿ ಡಾ.ಪಿ.ಸುಮತಿ “ಬದಲಾವಣೆ ನಮ್ಮಿಂದಲೇ” “ನೀನು ಜಗತ್ತಿನಲ್ಲಿ ಯಾವ ಬದಲಾವಣೆಯನ್ನು ನೋಡಬಯಸುವೆಯೋ, ಮೊದಲು ಆ ಬದಲಾವಣೆ ನಿನ್ನಲ್ಲೇ ಆಗಲಿ.”ಎಂಬ ಮಹಾತ್ಮ ಗಾಂಧೀಜಿಯವರ ಮಾತು ಬದಲಾವಣೆ ನಮ್ಮಿಂದಲೇ ಎಂಬ ಮಾತನ್ನು ಪುಷ್ಠಿಕರಿಸುತ್ತದೆ . ಬದಲಾವಣೆ’ ಎಂಬುದು ಜಗತ್ತಿನ ಶಾಶ್ವತ ನಿಯಮ. ಆದರೆ, ಬಾಹ್ಯ ಜಗತ್ತಿನ ಬದಲಾವಣೆಯ ಮುನ್ನ ವ್ಯಕ್ತಿಯ ಅಂತರಂಗದ ಬದಲಾವಣೆ ಅತ್ಯಂತ ಮುಖ್ಯವಾದುದು. “ಬದಲಾವಣೆ ನಮ್ಮಿಂದಲೇ” ಎಂಬ ಪರಿಕಲ್ಪನೆಯು ಆಳವಾದ ತಾತ್ವಿಕ ತಳಹದಿಯನ್ನು ಹೊಂದಿರುವ ಜೀವನ ದರ್ಶನವಾಗಿದೆ. ಸಮಾಜವೆಂಬುವುದು ನಿಂತ ನೀರಲ್ಲ. ಪ್ರತಿ ದಿನ ದಿನವೂ, ಕ್ಷಣ ಕ್ಷಣವೂ ಹೊಸ ಹೊಸ ಬದಲಾವಣೆಗಳು ಆಗುತ್ತಲೇ ಇರಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ,ಮನುಷ್ಯನ ವಿಚಾರ ಶಕ್ತಿಯೂ ಬೆಳೆದು, ಇಂದು ಜಗತ್ತು ಕ್ಷಣ ಕ್ಷಣವೂ ಬದಲಾಗುತ್ತಿದೆ, ಬದಲಾವಣೆಯ ಜಗತ್ತಿನೊಂದಿಗೆ ನಾವು ಕೂಡ ವೇಗವಾಗಿ ಹೆಜ್ಜೆ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಬದಲಾವಣೆಯನ್ನು ಮಾಡಬೇಕಾಗಿದೆ, ಬದಲಾವಣೆಗೆ ನಾವು ಹೊಂದಿಕೊಂಡು ಬದುಕಬೇಕಾಗಿದೆ. ಅಂದರೆ ಬದಲಾಗುತ್ತಿರುವ ಸಮಾಜದ ಜೊತೆ ಜೊತೆಯಲಿ ಹೆಜ್ಜೆ ಹಾಕಿಕೊಂಡು ಮುನ್ನಡೆಯುವಂತಹ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಇದು ಒಂದು ರೀತಿಯ ಬದಲಾವಣೆಯಾದರೆ,ಇನ್ನೊಂದು ರೀತಿಯ ಬದಲಾವಣೆಯಿದೆ ಅದು ನಮ್ಮ ಮಾನಸಿಕವಾದ ಬದಲಾವಣೆ ಅರ್ಥಾತ್ ತ್ಯಾಗ ಮಾಡಬೇಕಾದ ನಮ್ಮತನ. ಮನುಷ್ಯ ಸಂಗ ಜೀವಿ, ಸಮಾಜ ಜೀವಿ. ಸಮಾಜದಲ್ಲಿ ಕೂಡು ಜೀವನ ನಡೆಸುತ್ತಿರುವಾಗ ಭಿನ್ನಾಭಿಪ್ರಾಯಗಳು ಬಂದೇ ಬರುತ್ತವೆ. ಅಂತಹ ಸಂದರ್ಭದಲ್ಲಿ ಸಮಷ್ಟಿಯ ಸುಖಕ್ಕಾಗಿ ನಾವು ನಮ್ಮತನವನ್ನು ತ್ಯಾಗ ಮಾಡಬೇಕಾಗುತ್ತದೆ. ಅಂದರೆ ನಾವು ಬದಲಾಗಬೇಕಾಗುತ್ತದೆ. ಬದಲಾವಣೆ ನಮ್ಮಿಂದಲೇ ಆಗಬೇಕಾಗಿದೆ. ಬುದ್ಧಿವಂತನಾದ ಮನುಜ ಇನ್ನೊಬ್ಬರಲ್ಲಿ ಹುಳುಕು ಹುಡುಕುವುದರಲ್ಲಿ ಕಾಲ ಕಳೆಯುತ್ತಾನೆ.ಆದರೆ ತನ್ನಲ್ಲಿರುವ ತಪ್ಪುಗಳನ್ನು ಅರಿತುಕೊಂಡು ತಿದ್ದಿಕೊಳ್ಳುವಲ್ಲಿ ಮನಸ್ಸು ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಬದಲಾವಣೆ ನನ್ನಿಂದಲೇ ಎಂಬ ಮಾತು ಅರ್ಥವನ್ನು ಪಡೆದುಕೊಳ್ಳುತ್ತದೆ.ಪ್ರತಿಯೊಬ್ಬರೂ ಪರಿಸ್ಥಿತಿ ಬದಲಾವಣೆ ಆಗಬೇಕೆಂದೂ, ಇನ್ನೊಬ್ಬರು ಬದಲಾಗಲಿ ಎಂದು ಕಾದು ಕುಳಿತರೆ, ಪರಿಸ್ಥಿತಿ ಬದಲಾಗದು. ಅದರ ಬದಲಾಗಿ ಬದಲಾವಣೆ ನನ್ನಿಂದಲೇ ಆಗಲಿ ಎಂದು ಎಲ್ಲರೂ ತಾವು ಬದಲಾದರೆ, ಪರಿಸ್ಥಿತಿ ಖಂಡಿತ ಬದಲಾಗುತ್ತದೆ.ನಾವು ಯೋಚಿಸುವ ರೀತಿ, ಮಾಡುವ ಕೆಲಸ ಮತ್ತು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತಂದುಕೊಂಡಾಗ ಮಾತ್ರ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ. ಒಂದು ಸಣ್ಣ ಬದಲಾವಣೆಯೂ ಸಹ ನಮ್ಮಿಂದಲೇ ಆರಂಭವಾಗಬೇಕು. ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ನಡೆದರೆ, ಸುಂದರ ಮತ್ತು ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ.”ಯದ್ಭಾವಂ ತದ್ಭವತಿ” ಅಂದರೆ ನಾವು ಹೇಗೋ, ಜಗತ್ತು ನಮಗೆ ಹಾಗೆಯೇ ಕಾಣುತ್ತದೆ. ನಾವು ಸಮಾಜದಲ್ಲಿ ಶಾಂತಿ, ಪ್ರಾಮಾಣಿಕತೆ ಮತ್ತು ಪ್ರೀತಿಯನ್ನು ನೋಡಬಯಸಿದರೆ, ಮೊದಲು ಆ ಗುಣಗಳು ನಮ್ಮ ಆತ್ಮದಲ್ಲಿ ಜಾಗೃತಗೊಳ್ಳಬೇಕು. ವ್ಯಕ್ತಿಯೊಬ್ಬನ ಮನಸ್ಸಿನ ಪರಿವರ್ತನೆಯೇ ಸಮಾಜದ ಪರಿವರ್ತನೆಗೆ ಮೊದಲ ಹೆಜ್ಜೆಯಾಗಬೇಕು. ವ್ಯವಸ್ಥೆಯನ್ನು ಅಥವಾ ಇತರರನ್ನು ದೂಷಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ತಾತ್ವಿಕ ದೃಷ್ಟಿಕೋನದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವ್ಯಕ್ತಿತ್ವಕ್ಕೆ ತಾನೇ ಜವಾಬ್ದಾರನಾಗಿರುತ್ತಾನೆ. ನಾವು ಮಾಡುವ ಪ್ರತಿಯೊಂದು ಸಣ್ಣ ಸತ್ಕಾರ್ಯವೂ ಜಗತ್ತಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. “ನಾನೊಬ್ಬ ಬದಲಾದರೆ ಏನು ಪ್ರಯೋಜನ?” ಎಂಬ ನಕಾರಾತ್ಮಕ ಚಿಂತನೆಯನ್ನು ಬಿಟ್ಟು, ಬದಲಾವಣೆಯ ನನ್ನ ಕರ್ತವ್ಯವನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ನಿಜವಾದ ಧರ್ಮ. “ಬದಲಾವಣೆ ಜಗತ್ತಿನ ನಿಯಮ” ಎಂಬುದು ಎಷ್ಟು ಸತ್ಯವೋ, “ಆ ಬದಲಾವಣೆಯ ಜವಾಬ್ದಾರಿ ನಮ್ಮದು” ಎಂಬುದು ಅಷ್ಟೇ ಸತ್ಯ. ಸಮಾಜದಲ್ಲಿ ಬದುಕುವ ಮನುಷ್ಯ ವ್ಯವಸ್ಥೆಯ ಲೋಪದೋಷಗಳನ್ನು, ಸಮಾಜದ ನೈತಿಕ ಅಧಃಪತನವನ್ನು ಕಂಡು ನಿರಂತರವಾಗಿ ದೂರುತ್ತಿರುತ್ತಾನೆ. ಆದರೆ, ಇಡೀ ವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಮತ್ತು ನೈತಿಕ ಹಕ್ಕು ಪ್ರತಿಯೊಬ್ಬ ವ್ಯಕ್ತಿಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಪ್ರತಿಯೊಬ್ಬರೂ ತನ್ನ ಸ್ವಂತ ಜೀವನದಲ್ಲಿ ಬದಲಾವಣೆಯನ್ನು ತಂದುಕೊಂಡಾಗ ಮಾತ್ರ ಸಮಾಜಿಕ ಜೀವನದಲ್ಲಿ ಬದಲಾವಣೆ ತರಲು ಸಾಧ್ಯ. ಶರಣರು ಹೇಳುವಂತೆ “ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿ” ಒಟ್ಟಿಗೆ ಸಾಗಿದಾಗ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ. ನಮ್ಮ ಅಹಂಕಾರ, ಜಾತಿವಾದ ಮತ್ತು ಮೂಢನಂಬಿಕೆಗಳನ್ನು ನಾವೇ ತೊರೆದು ನಡೆದಾಗ, ಸಮಾಜ ತಾನಾಗಿಯೇ ಪರಿವರ್ತನೆ ಹೊಂದುತ್ತದೆ. ಯಾವುದೇ ವ್ಯವಸ್ಥೆಯನ್ನು ನಿಂದಿಸುವುದರಿಂದ ಕಹಿತನ ಹೆಚ್ಚುತ್ತದೆಯೇ ಹೊರತು, ಪರಿಹಾರ ಸಿಗದು. ನಮ್ಮ ಆಲೋಚನೆಗಳು, ಮಾತುಗಳು ಮತ್ತು ಕರ್ಮಗಳನ್ನು ನಾವೇ ಜಾಗೃತವಾಗಿ ಗಮನಿಸಿ, ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದೇ ಜಗತ್ತನ್ನು ತಿದ್ದುವ ಮೊದಲ ಹೆಜ್ಜೆಯಾಗಿದೆ. ಸಮಾಜ ಎಂಬುದು ವ್ಯಕ್ತಿಗಳ ಸಮೂಹ.ಬಿಂದುಗಳೇ ಸೇರಿ ಸಿಂಧುವಾಗುವಂತೆ, ವೈಯಕ್ತಿಕ ನೈತಿಕತೆಯೇ ಸಾಮಾಜಿಕ ವ್ಯವಸ್ಥೆಯಾಗಿ ಮಾರ್ಪಡುತ್ತದೆ. ಪ್ರಪಂಚದಲ್ಲಿ ಕ್ರಾಂತಿಗಳು ಕೇವಲ ಯುದ್ಧಭೂಮಿಯಲ್ಲಿ ಆಗಲಿಲ್ಲ. ಅವು ಮೊದಲು ಮನುಷ್ಯನ ಆಲೋಚನಾ ಲಹರಿಯಲ್ಲಿ ಮೊಳಕೆಯೊಡೆಯುತ್ತವೆ. ಆದ್ದರಿಂದ, ಸಮಾಜದ ಉದ್ಧಾರಕ್ಕೆ ಕಾಯುವ ಬದಲು, ನಮ್ಮ ಅಂತರಂಗದ ದೀಪವನ್ನು ಮೊದಲು ಬೆಳಗಿಸೋಣ. ಬದಲಾವಣೆ ನಮ್ಮಿಂದಲೇ ಆರಂಭವಾಗಲಿ. ಡಾ.ಸುಮತಿ ಪಿ
“ಬದಲಾವಣೆ ನಮ್ಮಿಂದಲೇ”ವಿಶೇಷ ಲೇಖನ ಡಾ.ಪಿ.ಸುಮತಿ Read Post »
ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ”
ಕಾವ್ಯ ಸಂಗಾತಿ ರೇಷ್ಮಾ ಕಂದಕೂರ “ಲೆಕ್ಕವೇ ಇಲ್ಲ” ಎದೆ ಗೂಡಲಿ ಬಚ್ಚಿಟ್ಟ ಕನಸುಗಳಿಗೆ ಲೆಕ್ಕವೇ ಇಲ್ಲಬಿರಿದ ಭಾವನೆಗಳ ನೋಟಗಳಿಗೆ ಲೆಕ್ಕವೇ ಇಲ್ಲ ಸುಳಿ ಗಾಳಿಯಲಿ ಒಮ್ಮೆಯೂ ಪಿಸುಗೂಡಬಾರದೆಹಿಡಿದಿಟ್ಟ ಬಯಕೆಗಳು ನೀಲ ನೀಲಿಯಲಿ ಸೇರುವ ಸಾಲಿಗೆ ಲೆಕ್ಕವೇ ಇಲ್ಲ ಮೋಹ ಮಧುವಿಗೆ ವಾಸ್ತವವೇ ಮರೆತು ಬಿಟ್ಟಿರುವೆತೀರದ ಬಯಕೆಗಳ ಹರಿವ ನೀರಿಗೆ ತೇಲುವ ದಾರಿಗೆ ಲೆಕ್ಕವೇ ಇಲ್ಲ ಮಾಮರ ಕೋಗಿಲೆ ಮೂಕ ಮರ್ಮರ ತಾಳಿದೆಕಟ್ಟಿದ ಗೋಪುರಕೆ ಕಳಸ ಬಿದ್ದು ಶೋಕಗೀತೆಗೆ ಲೆಕ್ಕವೇ ಇಲ್ಲ ಒಲವ ಭಾವದ ವೀಣೆ ತಂತಿ ನುಡಿಸುವುದೇ ಮರೆತು ಬಿಟ್ಟಿದೆಕಹಿ ಬೇವು ಜಗಿಯುತ ರೇಶಿಮೆ ದೂಡುವ ದಿನಗಳಿಗೆ ಲೆಕ್ಕವೇ ಇಲ್ಲ. ರೇಷ್ಮಾ ಕಂದಕೂರ
ರೇಷ್ಮಾ ಕಂದಕೂರ ಅವರ ಕವಿತೆ “ಲೆಕ್ಕವೇ ಇಲ್ಲ” Read Post »
ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್
ಪುಸ್ತಕ ಸಂಗಾತಿ ಪ್ರಭುರಾಜ ಅರಣಕಲ್ ರಾಜಶೇಖರ ಕುಕ್ಕುಂದಾ “ಬಿಸಿ ಬಿಸಿ ಬಾತು” ಒಂದು ಅವಲೋಕನ, ತಮ್ಮಪ್ರತಿ ಪದ್ಯಕ್ಕೆ ನವೀಕರಿಸುವ ಕವಿ ನೃಪತುಂಗನನೆಲದ , ಕಲಬುರಗಿ ಜಿಲ್ಲೆಯ ಸೇಡಂತಾಲ್ಲೂಕಿನ ಕುಕ್ಕುಂದಾ ಗ್ರಾಮದರಾಜಶೇಖರಕುಕ್ಕುಂದಾ ಅವರು ಕುರಿತೋದುತ್ತ ‘ಮಕ್ಕಳಕವಿತೆಗೆ’ ಅಪ್ಪಿಕೊಂಡು, ಒಪ್ಪಿಕೊಂಡವರು.- ಚೆಲುವ ಚಂದಿರ, ಗೋಲಗುಮ್ಮಟ, ಪುಟಾಣಿ ಪ್ರಾಸಗಳು, ಸೋನಪಾಪಡಿ, ಶೀರ್ಷಿಕೆಗಳ ನಾಲ್ಕು ಮಕ್ಕಳ ಕವಿತಾ ಸಂಕಲನಗಳನ್ನು ಪ್ರಕಟಿಸಿ, ಕನ್ನಾಡಿನ ಕಾವ್ಯಾಸಕ್ತರ ಗಮನ ಸೆಳೆದಿದ್ದಾರೆ. ‘ಬಿಸಿಬಿಸಿ ಬಾತು’ ಅವರ ಐದನೆಯ ಕೃತಿ. ಇದನ್ನು ಪ್ರಕಟಿಸಿದ್ದು ಬೆಂಗಳೂರಿನ ‘ಅವ್ಯಕ್ತ ಪ್ರಕಾಶಾನದ’ ವಸುವತ್ಸಲೆಯವರು. ಕ್ರೌನ್ 1/4 ಆಕಾರದ, ಕೃತಿಯ ಸುಂದರ ಮುಖಪುಟದವಿನ್ಯಾಸದಲ್ಲಿ – ಕಣ್ಸೆಳೆಯುವ ‘ಕಾಮನಬಿಲ್ಲು’ ಕುಂಚಿಸಿದವರು’ ಸೌಮ್ಯ ಕಲ್ಯಾಣಕರ್ ಅವರು. ‘ಹೋದೆಯಾ ದೂರ ಓ ಜೊತೆಗಾರ ಸೇರಲು ಬಂದಾಗ, ನೀ ಅರಿಯದೆ ಹೋದೆ ಪ್ರೇಮದನಾ ಸಂದೇಶವ ತಂದಾಗ’ ಅನುಭವ ಸಿನೆಮಾದ, ವಾಣಿಜಯರಾಮ್ ಹಾಡಿದ, ಗೀತೆ ರಚಿಸಿದ ಖ್ಯಾತ ಸಂಗೀತ ನಿರ್ದೇಶಕ, ನಟ, ವಿ. ಮನೋಹರ್ ಅವರು ಇಲ್ಲಿನ -26 ಪದ್ಯಗಳಿಗೆ, 7 ಪುಟಾಣಿ ಪ್ರಾಸಗಳಿಗೆ – ಒಟ್ಟು 33 – ಪದ್ಯಗಳ ಭಾವಕ್ಕೆ ಹೋಲುವ ಸುಂದರ ಚಿತ್ರ ಗಳನ್ನು ರಚಿಸಿದ್ದು, ‘ಉತ್ತಮರೇಖಾ ಚಿತ್ರ ಕಲಾವಿದರಾಗಿ’ ಹೊರಹೊಮ್ಮಿದ್ದಾರೆ. ಒಳ ಪುಟದ ವಿನ್ಯಾಸ ಕಲ್ಲೂರ ನಾಗೇಶ ಅವರದು. ‘ ಕವಿಯಾಗಿದ್ದುಕೊಂಡೇ ಮಕ್ಕಳ ಜಾಗದಲ್ಲೂ ನಿಲ್ಲುವುದು ಸಾಧ್ಯವಾದಾಗಷ್ಟೇ “ಬಿಸಿಬಿಸಿ ಬಾತು”ಸಂಕಲನದಲ್ಲಿ ಇರುವವಂಥ ರಚನೆಗಳು ಮೈದಳೆಯುವುದು ಸಾಧ್ಯ’ ವೆಂದು ಬೆನ್ನುಡಿಯಲ್ಲಿ ಲೇಖಕ ಪತ್ರಕರ್ತ ರಘುನಾಥ ಚ. ಹ. ಅವರು ಉಲ್ಲೇಖಸಿದ್ದಾರೆ. “ಮಕ್ಕಳಕಾವ್ಯ ನನಗೆ ಇಷ್ಟವಾದ ಪ್ರಕಾರ. ಇದಕ್ಕೂ ನನಗೂ ಬಾಲ್ಯದಿಂದಲೇ ಬಿಟ್ಟೂಬಿಡದ ನಂಟು. ನನ್ನ ರಚನೆಗಳೆಲ್ಲ ಹೆಚ್ಚಾಗಿ ನಾನು ಕಾಪಿಟ್ಟು ಕೊಂಡುಬಂದ ನನ್ನಹಳ್ಳಿ ಮತ್ತು ಶಹರ ಜೀವನದ ಬಾಲ್ಯದ ಅನುಭವಗಳಿಂದ ಪ್ರೇರಣೆ ಪಡೆದವುಗಳೇ. ಅದೇಕೋ ನಾನು ಮಾತ್ರ ಮಕ್ಕಳ ಕಾವ್ಯ ರಚನೆಗಷ್ಟೇಸೀಮಿತನಾದೆ.”ಎಂದು, ‘ಸವಿಯುವಮುನ್ನ’ ಎಂಬ – ತಲೆಬರಹದ ಲೇಖಕನಮಾತುಗಳಲ್ಲಿ, ಕುಕ್ಕುಂದಾ ಅವರು ಹೇಳಿಕೊಂಡಿದ್ದಾರೆ. ಕವಿಯ ಈ ಹೇಳಿಕೆಯಲ್ಲಿ – ಒಂದು ಹಗುರ ತಳಮಳಿಕೆ ಇಣುಕಿದೆ. ಈ ತಳಮಳಿಕೆಗೆ ತಳ್ಳಿಹಾಕುವ ಒಂದು ಅತ್ಯಾಶ್ಚರ್ಯಕರವಾದ ಖಾಸಾ ಹೊಳಪನ್ನು ಇವರ ಮಕ್ಕಳಕಾವ್ಯ ದಕ್ಕಿಸಿಕೊಂಡಿದೆ ಎಂಬುದನ್ನು ಕನ್ನಡ ಮಕ್ಕಳ ಸಾಹಿತ್ಯವಲಯ, ಹಾಗೂ ಕರ್ನಾಟಕಸಾಹಿತ್ಯಅಕಾಡೆಮಿಕೂಡ ಗುರುತಿಸಿದೆ. ಕನ್ನಡ ಹಾಗೂ ಮರಾಠಿ ಪಠ್ಯ ಪುಸ್ತಕಗಳಲ್ಲಿ, ಮತ್ತು ಶಿಶುಗೀತೆಯ ಆಲ್ಬಮ್ ಗಳಲ್ಲಿ ಇವರ ಕವಿತೆಗಳು ಸೇರಿವೆ.ಪ್ರಜಾವಾಣಿ ಪತ್ರಿಕೆಯ ದೀಪಾವಳಿ ಶಿಶುಕಾವ್ಯ ಸ್ಪರ್ಧೆಯಲ್ಲಿ ಹಲವುಬಾರಿ ಬಹುಮಾನ ಪಡೆದಿವೆ. ಹಲವು ಸಂಸ್ಥೆಗಳ ಪ್ರಶಸ್ತಿಗಳ ಸಂಖ್ಯೆ ದೊಡ್ಡದು.- ಅವುಗಳಲ್ಲಿ ಮುಖ್ಯವೆನಿಸುವ ಪ್ರಸ್ತುತ “ಬಿಸಿ ಬಿಸಿ ಬಾತು” ಕೃತಿಗೆ – 2024 ನೇ ಸಾಲಿನ ಜಿ. ಬಿ. ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮತ್ತು 2024 ನೇ ಅಬ್ದದ ಕರ್ನಾಟಕ ಸಾಹಿತ್ಯ ಅಕಾಡೆಮಿಯಪುಸ್ತಕಬಹುಮಾನಕ್ಕೆ”ಬಿಸಿಬಿಸಿಬಾತು”ಆಯ್ಕೆಯಾಗಿದೆ. ಪ್ರಸ್ತುತ ಕೃತಿಯ ಪದ್ಯಗಳ ಬಗ್ಗೆಮೊದಲಕವಿತೆ ಹಬ್ಬ- ಹೀಗೆ ಪ್ರಾರಂಭವಾಗುತ್ತದೆ.ಹೂವು ಅರಳಿ ನಿಂದಿದೆದುಂಬಿ ಹಾರಿ ಬಂದಿದೆಬಿಸಿಲು ಮಳೆಯು ಕೂಡಿದೆಮಳೆಯಬಿಲ್ಲು ಮೂಡಿದೆ! ಹೌದು, ಬಿಸಿಲು ಮಳೆಯು ಕೂಡಿದಾಗಲೇ, ಇಂದ್ರಚಾಪ ಮೂಡುವುದೆಂಬ ಬಣ್ಣನೆಯಲ್ಲಿ – ಈಕೃತಿಯ ಮುಖಪುಟದಲ್ಲಿನ ಸೌಮ್ಯ ಕಲ್ಯಾಣಕರ್ ಅವರ ‘ಕಾಮನಬಿಲ್ಲು’ ಚಿತ್ತಾರ ಗಮನಿಸಬಹುದು. ಆನೆ – ಕವಿತೆಯಲ್ಲಿ, – ಆನೆ ಬಹಳ ದೊಡ್ಡದು, ಅದರಬಾಲ ಗಿಡ್ಡದು /ಕಣ್ಣು ಸಣ್ಣ ಸಣ್ಣದು, ಚರ್ಮ ಬೂದು ಬಣ್ಣದು; ಉದ್ದದೊಂದು ಸೊಂಡಿಲು, ದಿಮ್ಮಿ ಎತ್ತಿ,ಕೊಳ್ಳಲು,/ ಅಗಲ ಅಗಲ ಕಿವಿಗಳು, ಗಾಳಿಬೀಸಿ ಕೊಳ್ಳಲು; ಹೀಗೆ ಮಕ್ಳಳು ಓದಿ – ನಕ್ಕು ನಲಿಯಲು ಪೂರಕವಾದ ಶಬ್ದ ಪಂಜಗಳು ಕೃತಿಯುದ್ದಕ್ಕೂ ಮನಸೆಳೆಯುತ್ತವೆ. ಸೊಳ್ಳೆ, ನಾಯಿಮರಿ ಬಾಬಾ,ಗಡಿಯಾರ,ನಮ್ಮಮನೆಅಂದ, ದಂತಹಪದ್ಯಗಳುಮಕ್ಕಳಲ್ಲದೆ ಕಾವ್ಯ ಪ್ರಿಯ ದೊಡ್ಡವರಲ್ಲೂ ಉಲ್ಲಾಸ ತುಂಬಬಲ್ಲವು. ‘ನಿದ್ದೆ ಎಲ್ಲಿ ಇರುವುದು’ ಪದ್ಯದಲ್ಲಿ ‘ಕ್ಲಾಸಿನಲ್ಲಿ ಕಾಡಲಿಕ್ಕೆ ಧುತ್ತನೆಂದು ಬರುವುದು /ಪಾಠ ಕೇಳುವಾಗ ತನ್ನ ಆಟ ನಡೆಸುತಿರುವುದು! / ಹಗಲಿ ನಲ್ಲಿ ಚಂದ್ರತಾರೆ ಗಳನು ತೂರಿಬಿಡುವುದು /ಸಿನೆಮದಂತೆ ಕನಸುಗಳನು ತಲೆಗೆ ತೂರಿಬಿಡುವುದು… ಶಾಲೆಯಲ್ಲಿ ಡೆಸ್ಕಿನಮೆಲೆ ಕುಳಿತ ಚಿಣ್ಣರ ಚಿತ್ರಣವಿದು.- ಸಹಜ ಹಾಗೂ ನೈಜತೆಗೆ ಪಕ್ಕಾದ ರಚನೆ; ಬಾರೋ ಬಾರೋ ಮಳೆರಾಯ, ಡ್ರೈವರ ಅಣ್ಣ, ಐಯ್ಯಾಮ್ ವೆರಿ ಸಾರಿ, ಯಾಕೆ ಹೀಗೆ? ಗುಲಾಬ್ ಜಾಮೂನ್, ಪದ್ಯಗಳು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತವೆ. ಈಕೃತಿಯಶಿರೋನಾಮೆಯಪದ್ಯ’ಬಿಸಿಬಿಸಿಬಾತು’ಮಕ್ಕ ಳಲ್ಲದೆ, ಓದುಗರೆಲ್ಲರಬಾಯಿಯಲ್ಲಿ ನೀರೂರಿಸುವ “ರಚನೆ.ಬಿಸಿಬಿಸಿಬಾತು, ಕೇಸರಿಬಾತು ಬಾಯ್ತೆಗಿ ಚಿನ್ನು ಗಪ್ ಚುಪ್ ತಿನ್ನು /ಬಿಸಿಬಿಸಿ ಬಾತು ಟೊಮೆeಟೊe ಬಾತು ಬಾಯ್ತೆಗಿ ಚಿನ್ನು ಗಪಚುಪ್ ತಿನ್ನು -ಎಂದು ತಾಯಿ ತನ್ನ ಪುಟ್ಟಕಂದನಿಗೆ – ಬಿಸಿಬೇಳೆಬಾತು, ವಾಂಗೀ ಬಾತು, ಚೌ ಚೌ ಬಾತು ತಿನ್ನಿಸಿ – ಕೊನೆಗೆ, ತಾಯಿ ಮಗನಿಗೆ – ಬಿಸಿ ಬಿಸಿ ಬಾತು ತಿಂದದ್ದಾತು, ಚಿನ್ನು ಚಿನ್ನು, ನಿದ್ದೆಮಾಡಿನ್ನು!ಎಂಬಲ್ಲಿಗೆ ಕವಿತೆ ಮುಕ್ತಾಯ ಗೊಳ್ಳುತ್ತದೆ.ಇನ್ನೂ ಇಂತಹ ಮನಮಿಡಿಯುವ ಪದ್ಯಗಳು ಈ ಕೃತಿಯಲ್ಲಿವೆ. ರಾಜಶೇಖರ ಎಂಬ ಈ ಎಂಜಿನಿಯರಿಂಗ್ ಮೇಷ್ಟ್ರರ ಪುಟಾಣಿ ಪ್ರಾಸಗಳ ಗಮ್ಮತ್ತೆe ಬೇರೆಯದು. ತನ್ನದೇ ಮುದ್ರೆ ಹೊಂದಿದ ರಚನೆಗಳಿಗೆ ಒತ್ತುಕೊಟ್ಟು – ಪುಟಾಣಿಪ್ರಾಸಗಳಿಗೆ ಮೀಸಲಾದ ಪದ್ಯ ಸಂಕಲನ ಪ್ರಕಟಿಸಿದ್ದಾರೆ. ಈ ಕೃತಿ ಯಲ್ಲಿ ಕಾಡೆಲ್ಲಿ? ಎಂಬ ಮುಕ್ತಕದಲ್ಲಿ -“ಕಾಡಿಗೆ ಹೋಗೋ ರಾಮ – ಸೀತೆ – ಈಗೆಲ್ಲಿ? ಈಗೆಲ್ಲಿ? /ಒಂದು ವೇಳೆ ಇದ್ರು ಅನ್ಕೊ ಕಾಡೆಲ್ಲಿ? ಕಾಡೆಲ್ಲಿ?/.. ಇಲ್ಲಿ – ಕಾಡಿಲ್ಲದ ನಾಡಿನ ಭೀಭತ್ಸ ಚಿತ್ರಣ ವಿದೆ. ‘ಒಂದು ಎರಡು’ – ಪದ್ಯ, ಒಂಭತ್ತು ಹತ್ತರ ವರೆಗೆ ಪವಣಿಸಿಕೊಂಡ ಪರಿ ನೋಡಿ.” ಒಂದು ಎರಡು ಸೇರಿ ಆಟ ಆಡ್ತಿದ್ವು /ಮೂರು ನಾಲ್ಕುಸೆರಿ ಪಾಠ ಕೇಳ್ತಿದ್ವು /ಐದು ಆರು ಸೇರಿ ಊಟ ಮಾಡ್ತಿದ್ವು/ ಏಳು ಎಂಟು ಸೇರಿ ಜಗಳ ಆಡ್ತಿದ್ವು / ಒಭತ್ತು ಹತ್ತು ಸೇರಿ ನಿಂತು ನೋಡ್ತಿದ್ವು! ಇಂತಹ ನಿರ್ವಚನಗಳ ಮೋಡಿಯು – ಬಹುತೇಕ ಪುಟಾಣಿ ಪ್ರಾಸಗಳಲ್ಲಿ ಹಾಸುಹೊಕ್ಕಾಗಿವೆ.ಇರ್ವೆಗೆ ನೆಗಡಿ ಬಂದ್ರೆ? ಪದ್ಯದ ಗುಣ ಲಾವಣ್ಯವು ವೈಚಿತ್ರ್ಯ ಗಳಿಂದ ಕೂಡಿದೆ.ಇರ್ವೆಗೆ ನೆಗಡಿ ಬಂದ್ರೆ ಮೂಗುಹೇಗೆ ಒರ್ಸೋದು /ಮೈ ತಿಂಡಿಬಿಟ್ರೆ ಹೇಗಪ್ಪಾತುರ್ಸೋದು?ಕಿರಿಕಿರಿ ಮಾಡ್ದ್ರೆ ನಿದ್ದೆಹೇಗೆ ಬರ್ಸೋದು? ಹುಷಾರು ಇಲ್ದೆ ಹೋದ್ರೆ ಯಾರನ್ನ ಕರ್ಸೋದು? ಹೇಗಪ್ಪ ಬಾಯಿ ತೆರ್ಸಿ ಗುಳ್ಗೆನುಂಗ್ಸೋದು? ರಕ್ತನಾಳಹುಡ್ಕಿಹುಡ್ಕಿ ಸಲೈನ್ ಏರ್ಸೋದು?…ಇವರ ಆಲೋಚನಾ ಲಹರಿಯಲ್ಲಿ ‘ವಸ್ತುನವೀನತೆ’ ಇದೆ . ಇರುವೆಗೆ ನರನಂತೆ ಪರಿಕಿಸುವಪರಿ – ಇಲ್ಲಿ ಅಚ್ಚರಿ ಗೊಳಿಸುತ್ತದೆ!°°°ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಸಂಯೋಜಿತ ಪ್ರಾಧ್ಯಾಪಕರಾಗಿ ಸುದೀರ್ಘಸೇವೆಸಲ್ಲಿಸಿದ ಕುಕ್ಕುಂದಾ ಅವರು ಪ್ರಸಕ್ತ ವರ್ಷದ ಜುಲೈ 31 ಕ್ಕೆ, ತಮ್ಮ ಸೇವಾ ಹುದ್ದೆಯಿಂದ ನಿವೃತ್ತಿಹೊಂದಲಿದ್ದಾರೆ. ಎಡೆಬಿದದ ಬೋಧಕವೃತ್ತಿ ಯಲ್ಲಿಯಲ್ಲಿದ್ದೂ ಐದು ಕವಿತಾ ಸಂಕಲನ ಪ್ರಕಟಿಸಿ – ತಮ್ಮ ರಚನೆಗಳಲ್ಲಿ ನವೀಕರಣಕ್ಕೆ ಒತ್ತುಕೊಡುತ್ತ ಬಂದ ಈ ಕವಿ ಸದ್ಯ ಕಟ್ಟುಬಿಡಿಸಿಕೊಂಡಿದ್ದು, ಮುಂದಿನ (Re-tired) ಅವಧಿಯಲ್ಲಿನ ಇವರ ಕಾವ್ಯದ ಬೆಳವಣಿಗೆ ಇನ್ನೂ ಹೊಸತಿನಿಂದ ಪಡಿಮೂಡುತ್ತಿರಲಿ ಎಂದು ಮನದುಂಬಿ ಹಾರೈಸುವೆ. ಪ್ರಭುರಾಜ ಅರಣಕಲ್
ರಾಜಶೇಖರ ಕುಕ್ಕುಂದಾ ಅವರ ಕೃತಿ “ಬಿಸಿ ಬಿಸಿ ಬಾತು” ಒಂದು ಅವಲೋಕನ,ಪ್ರಭುರಾಜ ಅರಣಕಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ಜ್ವಲಿಸುವ ಪ್ರೀತಿಯ ಸಹಿಸಿ ನುಂಗಲೆಂಗ ಹೇಳುಸುಡುವ ಕೆಂಡವ ಕಟ್ಟಿಕೊಂಡು ತಾಳಲೆಂಗ ಹೇಳು ಬಯಕೆ ಬಾಂದಳ ತೋಟ ನಳನಳಿಸುತಿದೆ ನೋಡುಒಲವಿನೊರತೆಯ ಒತ್ತರವ ತಡೆಯಲೆಂಗ ಹೇಳು ಮನಸು ಕಂಡ ಆಸೆಯೆಲ್ಲಾ ಫಲಿಸದೆಂದು ನಾ ಬಲ್ಲೆಪ್ರೇಮದುಯ್ಯಾಲೆಯ ಏರಿಳಿತ ತಾಳಲೆಂಗ ಹೇಳು ಜೀವ ಜೀವಕಂಟಿದ ನಂಟಿನ ಗಂಟು ಬಿಡಿಸಲುಂಟೆಪ್ರೇಮಾಮೃತವೇ ವಿಷವಾದರೆ ಬಾಳಲೆಂಗ ಹೇಳು ಒಡಲಾಳ ವಿರಹ ಭೋಗ೯ರೆತಕೆ ಸಿಕ್ಕು ತಪ್ತವಾಗಿದೆತುಟಿಯ ಮಧು ಹೆಪ್ಪುಗಟ್ಟಿದರೆ ಉಸುರಲೆಂಗ ಹೇಳು ಸರಸವಿಲ್ಲದ ಕೋಲಾಹಲ ಅವುಡುಗಚ್ಚಿಸಿ ಚುಚ್ಚುತಿದೆಹಾರಬೇಕೆನುವ ಬಯಕೆ ಪುಕ್ಕವ ಕತ್ತರಿಲೆಂಗ ಹೇಳು ಹುಚ್ಚೆದ್ದ ಆಸೆಗಳ ಸೊಕ್ಕನೆಲ್ಲ ಮುರಿಯಲಾಗುತಿಲ್ಲಕುದಿವ ಬೆಚ್ಚನೆಯ ಆ ಭಾವ ಹೊಚ್ಚಲೆಂಗ ಹೇಳು ಅನುಳೆದೆಯಲ್ಲೆ ಅಚ್ಚಾದ ಚಿತ್ರ ಕೊಚ್ಚಿ ಕತ್ತರಿಸಲುಂಟೆಚಿತ್ತ ಬಿತ್ತಿಯ ನೆನಪು ವಿಧಿ ಚೋರಗ ಒಪ್ಪಿಸಲೆಂಗ ಹೇಳು// ಡಾ ಅನ್ನಪೂರ್ಣ ಹಿರೇಮಠ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ ವಂಶವೃಕ್ಷ ನಾಟಕ” ಗೊರೂರು ಅನಂತರಾಜು
ರಂಗ ಸಂಗಾತಿ ಗೊರೂರು ಅನಂತರಾಜು “ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ ವಂಶವೃಕ್ಷ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ. ಗೊರೂರು, ಡಾ.ಎಸ್.ಎಲ್. ಭೈರಪ್ಪ, ಶ್ರೀಮತಿ ಭಾನು ಮುಷ್ತಾಕ್ ಅವರ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ಈ ಮೂವರು ಸಾಹಿತಿಗಳ ಸಾಹಿತ್ಯವನ್ನು ಮೂರು ವಿಭಿನ್ನ ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ ತಲುಪಿಸಲು ಸಾಫಲ್ಯ ಸಾಧಿಸಿತು. ಡಾ.ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಸಾಹಿತಿಗಳಷ್ಟೇ ಅಗಿ ಉಳಿಯಲಿಲ್ಲ. ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧಿ ಪ್ರಭಾವಕ್ಕೆ ಒಳಗಾದವರು. ಆ ದಿಶೆಯಲ್ಲಿ ಬದುಕು ರೂಪಿಸಿಕೊಂಡವರು. ತಾವು ಜನ್ಮ ತಳೆದ ಊರು ನದಿಯನ್ನು ಆವರಿಸಿಕೊಂಡು ಗ್ರಾಮ್ಯ ಬದುಕನ್ನು ಪ್ರಬಂಧ ಸಾಹಿತ್ಯದಲ್ಲಿ ಹಾಸ್ಯ ಪ್ರಜ್ಞೆಯಲ್ಲಿ ಚಿತ್ರಿಸಿದವರು. ಆ ಕಾಲದ ಬದುಕನ್ನು ಇಂದಿಗೆ ಹೋಲಿಸಿ ಮಾತನಾಡಿದವರು ಡಾ.ರಶ್ಮಿ ಪಿ. ಅವರು. ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಪು.ತಿ.ನರಸಿಂಹಾಚಾರ್ ಅವರ ಲಲಿತ ಪ್ರಬಂಧಗಳು ತೌಲನಿಕ ಅಧ್ಯಯನ ಪ್ರಬಂಧಕ್ಕೆ ಪಿಹೆಚ್‌ಡಿಯನ್ನು ಇದೇ ಆಗಸ್ಟ್ ೧೭ರಂದು ಪಡೆದಿದ್ದಾರೆ. ಇವರು ಗೊರೂರರ ಸಾಹಿತ್ಯ ಸಮಕಾಲೀನ ದೃಷ್ಟಿಕೋನ ವಿಷಯವಾಗಿ ಪ್ರಬಂಧ ಮಂಡಿಸುವಲ್ಲಿ ಪ್ರಚಲಿತ ಬದುಕನ್ನು ನೋಡಿದ್ದಾರೆ ನಿಜ. ಆ ಕಾಲಘಟ್ಟದ ಬದುಕನ್ನು ಓದಿ ತಿಳಿದಿದ್ದಾರೆ ಖರೆ. ನಮ್ಮೂರ ಜನರನ್ನು ಬಂದು ಮಾತನಾಡಿಸಿ ಮಾತನಾಡಿದ್ದರೆ ಚೆಂದಿತ್ತು ಎನಿಸಿತು. ಶ್ರೀಮತಿ ವಾಸಂತಿಮೂರ್ತಿ ಅವರು ಹೊಸ ತಲೆಮಾರಿಗೆ ಗೊರೂರರ ಸಾಹಿತ್ಯ ಕೆಲವು ಆಲೋಚನೆಗಳು ಮತ್ತು ಯೋಜನೆಗಳು ವಿಷಯದಲ್ಲಿ ಮಾತನಾಡಿದ ವಿಡಿಯೋವನ್ನು ಪ್ರದರ್ಶಿಸಲಾಯಿತು. ಮೇಡಂ ಕೆನಡದಲ್ಲಿ ನೆಲೆಸಿದ್ದಾರೆ. ಮರ‍್ನಾಲ್ಕು ವರ್ಷಗಳಿಂದ ಡಾ.ಗೊರೂರರ ಜನ್ಮ ದಿನ ಜುಲೈ೪ರ ಸಂಧರ್ಭ ಭಾರತಕ್ಕೆ ಬಂದು ಡಾ.ಗೊರೂರು ಸಾಹಿತ್ಯ ಗೋಷ್ಟಿಗಳಲ್ಲಿ ಭಾಗಿಯಾಗಿದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ಇತ್ತೀಚಿಗೆ ನೋಂದಣಿ ಕೂಡ ಮಾಡಿಸಿದ್ದಾರೆ. ಇವರು ತಮ್ಮ ತಂದೆ ಜೊತೆಗಿನ ಒಡನಾಟ ನೆನಪಿಸಿಕೊಂಡರು ಜೊತೆಗೆ ಸರ್ಕಾರಕ್ಕೆ ಹೀಗೆ ಮನವಿ ಮಾಡಿದರು. ಹಾಸನ ಹೇಮಗಂಗೋತ್ರಿಯಲ್ಲಿ ಗೊರೂರು ಅಧ್ಯಯನ ಪೀಠ ಸ್ಥಾಪಿಸಿ, ಬೆಂಗಳೂರು ಗೊರೂರರು ವಾಸವಿದ್ದ ರಾಜಾಜಿನಗರ ಮೆಟ್ರೊ ಸ್ಟೇಷನ್‌ಗೆ ಗೊರೂರರ ಹೆಸರು ಇಡಬೇಕೆಂದು ಮತ್ತು ಗೊರೂರು ಮನೆಯನ್ನು ಸರ್ಕಾರ ಪಡೆದು ಸ್ಮಾರಕ ಮಾಡಲೆಂಬುದು ಅವರ ಬೇಡಿಕೆ ಆಗಿತ್ತು. ಶ್ರೀಮತಿ ಭಾನುಮುಷ್ತಾಕ್ ಲಂಕೇಶ್ ಪತ್ರಿಕೆ ವರದಿಗಾರ್ತಿ ಜೊತೆಗೆ ವಕೀಲ ವೃತ್ತಿ ನಿರ್ವಹಿಸಿದವರು. ಇವರ ಎದೆಯ ಹಣತೆ ಕಥಾ ಸಂಕಲನವು ಮಡಿಕೇರಿ ದೀಪಾ ಭಾಸ್ತಿ ಇವರಿಂದ ಇಂಗ್ಲೀಷ್‌ಗೆ ಹಾರ್ಟ್ ಲ್ಯಾಂಪ್ ಹೆಸರಿನಲ್ಲಿ ಅನುವಾದವಾಗಿ ಈ ಕೃತಿಗೆ ೨೦೨೫ರ ಪ್ರತಿಷ್ಠಿತ ಅಂತರರಾಷ್ಟಿçÃಯ ಬೂಕರ್ ಪ್ರಶಸ್ತಿ ಲಭಿಸಿದೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಸಿಕ್ಕ ದೊಡ್ಡ ಗೌರವ. ಗೋಷ್ಠಿ ೧ರಲ್ಲಿ ಶ್ರೀಮತಿ ಬಾನು ಮುಷ್ತಾಕ್ ಅವರೊಂದಿಗೆ ಡಾ.ರೇಖಾದತ್ತ, ದಯಾನಂದ ಸಾಗರ್ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು ಸಂವಾದ ನಡೆಸಿದರು. ಬಾನು ಮೇಡಂ ಬೂಕರ್ ಪ್ರಶಸ್ತಿ ಸ್ವೀಕಾರಕ್ಕೆ ಹೋದ ದಿನ ಸೂಟ್ ಕೇಸ್ ಕಳೆದುಕೊಂಡ ಫಜೀತಿ ಹೇಳುವಾಗ ಡಾ.ಗೊರೂರರ ಅಮೇರಿಕಾದಲ್ಲಿ ಗೊರೂರು ಕಾದಂಬರಿ ನೆನಪಾಗುತ್ತದೆ. ಈ ಕೃತಿ ೧೯೮೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. ಇರಲಿ ಎದೆಯ ಹಣತೆ ಕೃತಿಯಲ್ಲಿ ಬಾನು ಮೇಡಂ ಹೇಳಿದ್ದಾರೆ. ಇದು ನನ್ನ ಬದುಕಿನ ಅತ್ಯಂತ ಸಂತೋಷದ ಸಂದರ್ಭ. ನನ್ನ ಬದುಕು ಮತ್ತು ಬರಹವು ಅತ್ಯಂತ ಕ್ರಿಯಾಶೀಲವಾಗಿ ಕವಲೊಡೆದ ಸಂದರ್ಭ. ಬುಕರ್ ಅದು ಕೈಗೆಟುಕಲಾರದ ಗಗನ ಕುಸುಮ ಎಂದೇ ನನ್ನ ಎಣಿಕೆಯಾಗಿತ್ತು. ಅದರ ಆರಂಭಿಕ ಹಂತದ ಸ್ಫರ್ಧೆಯೇ ನಾನು ಕಂಡು ಕೇಳಲರಿಯದ ಅನೇಕ ಸವಾಲುಗಳಿಂದ ಕೂಡಿತ್ತು. ಯಾವುದೇ ಭಾಷೆಯಿಂದ ಇಂಗ್ಲೀಷಿಗೆ ಅನುವಾದವಾದ ಕೃತಿಯಾಗಿರಬೇಕು. ಆಯಾ ವರ್ಷ ಮೇನಿಂದ ಸೆಪ್ಟಂಬರ್ ತಿಂಗಳಲ್ಲಿ ಪ್ರಕಟವಾಗಿರಬೇಕು. ಇಂಗ್ಲೆAಡ್ ಅಥವಾ ಐರ್ಲೆಂಡಿನ ಪ್ರಕಾಶನ ಸಂಸ್ಥೆಯಿAದ ಪ್ರಕಟವಾಗಿರಬೇಕು. ಹೀಗೆ ಅರ್ಹತೆಯ ಹಣೆಪಟ್ಟಿಯಲ್ಲಿ ಭಾಗವಹಿಸಿದ ಪುಸ್ತಕಗಳು ೧೫೪. ಜ್ಯೂರಿಗಳ ತಂಡ ೧೩ ಪುಸ್ತಕ ಆಯ್ಕೆ ಮಾಡಿ, ಬಿಡುಗಡೆಯಾದ ಪಟ್ಟಿ ಕಂಡು ನನಗೆ ಏನೇನೂ ಅನಿಸಲಿಲ್ಲ. ನನಗೆ ನನ್ನ ಮಕ್ಕಳ ಪೋನ್ ಕರೆ ಮರುದಿನದಿಂದ ಆರಂಭವಾಗಿ ಪತ್ರಕರ್ತರ ಸಂದರ್ಶನ ನಡೆದವು. ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಅಪವಾದ ಸುಳ್ಳು ಮಾಡುವ ದಿಕ್ಕಿನಲ್ಲಿ ನನ್ನ ಪುಸ್ತಕಗಳು ಓದುಗರ ಕೈ ಸೇರುತ್ತಿವೆ. ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆAಡ್ ನಲ್ಲಿ ದೊರಕಿತು. ಅಲ್ಲಿಯ ಜನರ ಪುಸ್ತಕ ಪ್ರೀತಿ ಲೇಖಕರ ಬಗೆಗಿನ ಅಭಿಮಾನವು ನನ್ನಲ್ಲಿ ಅಚ್ಚರಿಯನ್ನು ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತ ಇರಿಸುವ ಅವರ ಪ್ರಯತ್ನ ಎಂಥಾ ಸ್ಫೂರ್ತಿದಾಯಕ..? ಡಾ.ಎಸ್.ಎಲ್.ಬೈರಪ್ಪನವರು ಕಾದಂಬರಿಕಾರರಾಗಿ ಜನಪ್ರಿಯರು. ಇವರ ಕೃತಿಗಳು ಇಂಗ್ಲೀಷ್ ಭಾರತೀಯ ಭಾಷೆಗಳಿಗೆ ಅನುವಾದವಾಗಿವೆ. ಇವರಿಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ ೨೦೨೩ರಲ್ಲಿ ಲಭಿಸಿದೆ. ಇವರ ಗೃಹಭಂಗ, ವಂಶವೃಕ್ಷ, ನಾಯಿ ನೆರಳು, ದಾಟು ಕಾದಂಬರಿಗಳನ್ನು ನನ್ನ ಓದಿನ ದಿನಗಳಲ್ಲೇ ಓದಿದ್ದೆನು. ಇವರ ವಂಶವೃಕ್ಷ ಕಾದಂಬರಿಯ ನಾಟಕ ರೂಪಾಂತರವನ್ನು ಮೈಸೂರಿನ ಕಲಾಸುರುಚಿ ತಂಡದವರು ನಾಗಭೂಷಣ್ ಪಿ. ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಂದಿ ರೂಪಾಂತರ ಪ್ರತಿಭಾ ಅಗರವಾಲ್ ಅವರದು ಮತ್ತೇ ಕನ್ನಡಕ್ಕೆ ಶಾರದಾ ವೆಂಕಟಸುಬ್ಬಯ್ಯ ತಂದಿದ್ದಾರೆ. ವಂಶವೃಕ್ಷ ಒಂದು ವಂಶದ ಪರಂಪರೆಯ ಕಥೆ. ಈ ಪರಂಪರೆಯಲ್ಲಿ ಕಂಡುಬರುವ ಬಿರುಕಿನ ಕಥೆ ಇಂದಿನ ನಮ್ಮ ಬದುಕಿನಲ್ಲೂ ಪ್ರತಿಫಲಿಸುತ್ತದೆ. ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯವರದು ಆತ್ರೇಯ ಗೋತ್ರಕ್ಕೆ ಸೇರಿದ ಸಂಸ್ಕಾರ ಸಂಪ್ರದಾಯನಿಷ್ಠ ಮನೆತನ. ಈ ಪಾತ್ರದಲ್ಲಿ ಎನ್.ಧನಂಜಯ ಅವರು ತುಂಬು ಗಾಂಭೀರ್ಯ ನಡೆನುಡಿ ಅಭಿನಯದಲ್ಲಿ ಜೀವ ತುಂಬಿದರು. ಇವರ ಧರ್ಮಪತ್ನಿ ಭಾಗೀರಥಿ ಪಾತ್ರದಲ್ಲಿ ದೀಪಾ ರವಿಶಂಕರ್ ಕೂಡ ಅಷ್ಟೇ ಗಮನ ಸೆಳೆದರು. ಇವರ ಮಗ ನಂಜುAಡ ಆಕಸ್ಮಿಕವಾಗಿ ಕಪಿಲಾ ನದಿಯಲ್ಲಿ ಜಾರಿಬಿದ್ದು ಸಾವಿಗೀಡಾಗಿದ್ದಾನೆ. ಸೊಸೆ ಕಾತ್ಯಾಯಿನಿ ಚಿಕ್ಕ ವಯಸ್ಸಿಗೆ ವಿಧವೆ ಆಗಿದ್ದಾಳೆ. ಅವಳ ಓದಿನ ಆಕಾಂಕ್ಷೆಗೆ ಮಾವ ಅಡ್ಡಿಯಾಗದೇ ಕಾಲೇಜಿಗೆ ಕಳಿಸುತ್ತಾನೆ. ಈ ಪಾತ್ರವನ್ನು ಅದಿತಿ ಕೂಡ ಸಮರ್ಥವಾಗಿ ನಿಭಾಯಿಸಿದರು. ಅಲ್ಲಿ ರಾಜಾರಾವ್ ಎಂಬ ಅಧ್ಯಾಪಕನ ಪರಿಚಯ ಪ್ರೇಮಕ್ಕೆ ತಿರುಗಿ ಗಂಡನ ಮನೆ ತೊರೆಯುತ್ತಾಳೆ. ಇತ್ತ ನಂಜುAಡ ಶ್ರೋತ್ರಿಯ ಮಗ ಚೀನಿ ತನ್ನ ತಾತ ಶ್ರೀನಿವಾಸ ಶ್ರೋತ್ರಿಗಳ ಆರೈಕೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ. ಶ್ರೀನಿವಾಸ ಶ್ರೋತ್ರಿಗಳಿಗೆ ತಮ್ಮ ಹುಟ್ಟಿನ ರಹಸ್ಯ ಮನೆಯಲ್ಲೇ ಇದ್ದ ಲಕ್ಷಿö್ಮÃಯಿಂದ ತಿಳಿಯುತ್ತದೆ. ತಾನು ಶ್ರೋತ್ರೀಯ ವಂಶದವನಲ್ಲವೆAಬ, ತನ್ನದು ಆತ್ರೇಯ ಗೋತ್ರವೂ ಅಲ್ಲ ಬದಲು ಶಾಮದಾಸನೆಂಬ ಹರಿಕಥೆದಾಸರಿಗೆ ತನ್ನ ತಾಯಿಯ ಅನೈತಿಕ ಸಂಬAಧದಿAದ ಹುಟ್ಟಿದÀವನೆಂದು ತಿಳಿದು ಹತ್ತಾನಾಗುತ್ತಾನೆ. ತಾನು ಆವರೆಗೂ ನಂಬಿಕೊAಡು ಬಂದ ಆಚಾರ ವಿಚಾರ ಸಂಸ್ಕಾರಗಳೆಲ್ಲಾ ಎಷ್ಟು ಸುಳ್ಳು ಎಂಬ ಕಟು ಸತ್ಯ ಅರಿವಾಗಿ ಅತನ ಸ್ವಾಭಿಮಾನಿ ಕಟ್ಟಡÀ ತಳಹದಿ ಕುಸಿಯುತ್ತದೆ. ಜಿಗುಪ್ಸೆಗೊಂಡು ಶ್ರೋತ್ರಿಗಳು ವಾರಸುದಾರರು ಸಿಗದೆ ಎಲ್ಲವನ್ನೂ ದಾನ ಮಾಡುತ್ತಾರೆ. ಇತ್ತ ಕಾತ್ಯಾಯಿನಿಯಾದರೂ ಓದಿನ ನಂತರ ಕಾಲೇಜು ಅದ್ಯಾಪಕಿಯಾಗಿದ್ದಾಳೆ. ಅದೇ ಕಾಲೇಜು ಸೇರುವ ಚೀನಿ ಅವಳನ್ನು ಗುರುತಿಸಲೂ ಇಷ್ಟಪಡದೆ ಕಾಲೇಜು ತೊರೆಯುತ್ತಾನೆ. ಮರುಮದುವೆದ ಕಾತ್ಯಾಯಿನಿಗೆ ಮಕ್ಕಳಾದೆ ಕರ್ತವ್ಯ ಧರ್ಮಗಳ ತೊಳಲಾಟದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ. ಮುಂದೆ ಶ್ರೋತ್ರಿಗಳು ರಾಜಾರಾವ್‌ರನ್ನು ಭೇಟಿಯಾಗಿ ಆತ ತನ್ನ ಚಿಕ್ಕಪ್ಪನ ಮೊಮ್ಮಗನೇ ಎಂದು ತಿಳಿದು ಖಿನ್ನರಾಗುತ್ತಾರೆ. ಪ್ರಬುದ್ಧ ಮನಸ್ಸಿನ ಪರಿಪಕ್ವ ವ್ಯಕ್ತಿತ್ವದ ಶ್ರೀನಿವಾಸ ಶ್ರೋತ್ರಿಗಳು ಲೌಕಿಕ ಬದುಕಿನ ವ್ಯಾಮೋಹ ತೊರೆದು ಬೆಳಕಿನ ಪಥದತ್ತ ಸಾಗುತ್ತಾರೆ. ಪ್ರಯೋಗದಲ್ಲಿ ಕೆಲವು ಬದಲಾವಣೆಗಳನ್ನು ಸನ್ನಿವೇಶಕ್ಕೆ ಪೂರಕ ಹಾಡುಗಳನ್ನು ಸಂಯೋಜಿಸಿದ್ದು (ರಚನೆ: ಪ್ರೊ.ಡಿ.ಎ.ಶಂಕರ್) ಗಂಭೀರ ನಾಟಕಕ್ಕೆ ರಂಜನೆ ನೀಡಿದೆ. ಹಾಡುಗಾರಿಕೆಯಲ್ಲಿ ಸುಮನಾ, ನಿಸರ್ಗಾ, ವಿಸ್ಮಯ ತಂಡ ಮತ್ತು ಇವರಿಗೆ ಸಂಗೀತ ಸಾಂಗತ್ಯದಲ್ಲಿ ವಿದ್ವಾನ್ ಪುಟ್ಟಣ್ಣಯ್ಯ ವೈ.ಎಂ. ಅವರ ಹರ‍್ಮೋನಿಯಂ ಕೀಬೋರ್ಡ್ನ್ನು ಮೀರಿಸುತ್ತದೆ. ಮಹದೇವ್ ತಬಲ ಸಾತ್ ನೀಡಿದರು. ನಾಟಕದಲ್ಲಿ ಬರುವ ಲಕ್ಷಿö್ಮ ಪಾತ್ರದಲ್ಲಿ ವಿಜಯಲಕ್ಷಿö್ಮ ಎಂ. ಚೀನಿಯಾಗಿ ಬಾಲಾಜಿ ಎಂ.ಎನ್. ಹಾಗೂ ಸದಾಶಿವರಾವ್ ಪಾತ್ರವನ್ನು ಮಂಜುನಾಥ್ ಎಂ.ಎನ್ ನಿಭಾಯಿಸಿದರು. ರಾಜಾರಾವ್ ಆಗಿ ಉಲ್ಲಾಸ್ ಎಚ್.ಎಸ್. ಹಾಗೂ ಅನಂತ ಮೇಷ್ಟುç ಪಾತ್ರವನ್ನು ಪ್ರದೀಪ್ ಎಂ. ನಿರ್ವಹಿಸಿದರು. ಬೆಳಕು: ಮಧುಸೂದನ್ ನೀನಾಸಂ, ರಂಗಸಜ್ಜಿಕೆ ನರಸಿಂಹಕುಮಾರ್. ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶಯ ನುಡಿಯಲ್ಲಿ ಸಾಹಿತಿ ವಿಮರ್ಶಕರು ಕೆ.ಸತ್ಯನಾರಾಯಣ ಅರ್ಥಪೂರ್ಣವಾಗಿ ಮೂವರು ಸಾಹಿತಿಗಳ ಒಟ್ಟಾರೆ ಸಾಹಿತ್ಯವನ್ನು ತಮ್ಮ ಟೈಮ್ ಲಿಮಿಟ್‌ನಲ್ಲಿ ಚೆನ್ನಾಗಿಯೇ ಕಟ್ಟಿಕೊಟ್ಟರು. ಸುಧೀಶ್ ವೆಂಕಟೇಶ್, ಮುಖ್ಯ ಸಂವಹನಾಧಿಕಾರಿಗಳು ಪ್ರಾಸ್ತಾವಿಕ ನುಡಿ, ಸಂಸ್ಥೆಯ ಮಹೇಶ್ ಕುಮಾರ್ ಸಿ.ಎಸ್. ರಾಘವೇಂದ್ರ ಹೇರ್ಳೆ, ಎಸ್.ವಿ.ಮಂಜುನಾಥ್ ಅವರ ಕಾರ್ಯ ತತ್ಪರತೆ ಮೂವರು ಸಾಹಿತಿಗಳ ಚಿತ್ರಪಟಗಳ ಸಂಗ್ರಹಣೆ ಪ್ರದರ್ಶನ ಏರ್ಪಾಡು ಮೆಚ್ಚತಕ್ಕದ್ದು. ಇದು ಅಜೀಂ ಪ್ರೇಮ್‌ಜಿ ವಿಶ್ವ ವಿದ್ಯಾಲಯ, ಬೆಂಗಳೂರು ಇವರ ೮ನೇ ಸಾಹಿತ್ಯ ಸಹವಾಸ ಕಾರ್ಯಕ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ವಿಶೇಷವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ರೂಪಿಸಲು ಕಾರ್ಯಕ್ರಮ ಯಶಸ್ವಿಯೇ ನಮಗೆ ಸ್ಫೂರ್ತಿ, ಪ್ರೇರಣೆಯಾಗುತ್ತದೆ ಎಂಬ ಸಂಸ್ಥೆಯ ಆಶಯಕ್ಕೆ ಕಾಲೇಜು, ಸಂಘ ಸಂಸ್ಥೆಗಳು ಕೈ ಜೋಡಿಸಬೇಕಾಗಿದೆ.
“ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಸಾಹಿತ್ಯ ಸರಣಿ ವಂಶವೃಕ್ಷ ನಾಟಕ” ಗೊರೂರು ಅನಂತರಾಜು Read Post »
“ಎಸ್ .ವಿ.ಪರಮೇಶ್ವರ ಭಟ್ಟರ ಕೆಲವು ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ
ಸಾಹಿತ್ಯ ಸಂಗಾತಿ ಡಾ.ವೈ.ಎಂ.ಯಾಕೊಳ್ಳಿ “ಎಸ್ .ವಿ.ಪರಮೇಶ್ವರ ಭಟ್ಟರ ಕೆಲವು ಮುಕ್ತಕಗಳು” ಹಿರಿಯ ಕವಿ ಎಸ್ ವಿ.ಪರಮೇಶ್ವರ ಭಟ್ಟರು ಕನ್ನಡದಲ್ಲಿ ಮುಕ್ತ ಕ ಸಾಹಿತ್ಯವನ್ನು ಬೆಳೆಸಿದವರು. ಅವರು ಆಧುನಿಕ ವಚನಕಾರರೆಂದೂ,ಅನುವಾದಕರೆಂದೂ ಕೂಡ ಹೆಸರಾದ ವರು. ಅವರ ಅನುವಾದಗಳು ತುಂಬ ಮೌಲಿಕವಾಗಿವೆ ಸಂಸ್ಕೃತದ ,ಪ್ರಾಕೃತದ ಮಹಾಮಹಾ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.ಅವುಗಳಲ್ಲಿ ಕನ್ನಡ ಕಾಳಿದಾಸ ಮಹಾಸಂಪುಟ,ಭಾಸ ಕವಿ ಮಹಾಸಂಪುಟ ,ಅಮರು ಶತಕ,ಗಾಥಾ ಸಪ್ತಶತಿ,ಭತೃಹರಿ ಕಾವ್ಯ ಸಂಪುಟ, ಗೀತಗೋವಿಂದ ಮೊದಲಾದ ಮಹತ್ವದ ಕೃತಿ ಸಂಪುಟ ಗಳನ್ನು ಅವರು ಕನ್ನಡ ಓದುಗರಿಗೆ ನೀಡಿದ್ದಾರೆ. ಹೊಸಗನ್ನಡದ ಆದ್ಯ ವಚನಕಾರ ರಲ್ಲಿ ಒಬ್ಬರಾದ ಅವರು ಎಂಟು ಆಧುನಿಕ ವಚನ ಸಂಕಲನಗಳನ್ನು ಪ್ರಕಟಿಸಿದ್ದು ಅವುಗಳಲ್ಲಿ ‘ಉಪ್ಪು ಕಡಲು’, ‘ಇಂದ್ರ ಗೋಪ’ ಮೊದಲಾದವು ಪ್ರಸಿದ್ಧವಿವೆ. ಹಾಗೆಯೆ ಕನ್ನಡದಲ್ಲಿ ಮುಕ್ತಕಗಳನ್ನು ಬರೆದ ಆದ್ಯರಲ್ಲಿ ಒಬ್ಬರಾದ ಅವರು ಐದು ಮುಕ್ತಕ ಸಂಕಲನ ಪ್ರಕಟಿಸಿದ್ದು’ ಇಂದ್ರಚಾಪ’,’ಚಂದ್ರವೀಧಿ,’ ‘ಸುರಗಿ ಸುರಹೊನ್ನೆ’, ‘ ತುಂಬೆ ಹೂವು’ ..ಮೊದಲಾದವು ಪ್ರಸಿದ್ಧವಾಗಿವೆ. ಅವರ ಇಂದ್ರಚಾಪ ಸಂಕಲನದ ಕೆಲವು ಮುಕ್ತಕಗಳ ಓದು ಇಲ್ಲಿದೆ. ಅವರಿಗೆ ಕವಿತೆಯೇ ಇಂದ್ರಚಾಪ ವಾಗಿ ( ಮಳೆ ಮೋಡ) ವಾಗಿ ಕಂಡಿದೆ.ತಮ್ಮ ಒಂದು ಮುಕ್ತಕದಲ್ಲಿ ಮನವೇ ಬಾನಂಗಣ,ದುಗುಡವೇ ಮಳೆ ಮೋಡಕವಿಗಣ ಸೂಕ್ತಿಯೆ ದಿನಪಮೂಡಿತು ಮಳೆ ಬಿಸಿಲಿನ ಮೇಳದೊಳು ನೋಡಾಕವಿತೆಯ ಇಂದ್ರಚಾಪ ಕವಿಗೆ ಬಾನಂಗಣವನ್ನು ಸುಂರಗೊಳಿಸುವಂತೆ ಮೂಡಿದ ಕಾಮನಬಿಲ್ಲು ,ಕವಿಯ ಮನದಲ್ಲಿ ಉದಿಸಿದ ಕವಿತೆ ಎರಡೂ ಅಷ್ಟೇ ಸುಂದರವಾಗಿ ಕಂಡಿವೆ.ಇಲ್ಲ ಕವಿತೆ ಮೂಡಲು ಮನವೇ ಬಾನಂಗಣವಾದರೆ ಅವನ ಮನದ ಭಾವಗಳ ರೂಪುಗೊಂಡು ಕವಿತೆಯಂಬ ಇಂದ್ರಚಾಪ ವಾಗಿವೆ ಎನ್ನುತ್ತಾರೆ ಕವಿ. ಅವರ ಇನ್ನೊಂದು ಮುಕ್ತಕ ಸಾಹಿತ್ಯ ಮತ್ತು ಮಿತ್ರರ ಗುಂಪಿನ ಮಹತ್ವ ಸಾರಿದೆ.ಕವಿಗೆ ಕವಿತೆಯೆ ಸಂಜಿವಿನಿ ಶಕ್ತಿಯಾಗಿದೆ. ಅದನ್ನು ಕವಿ ಸಾಹಿತ್ಯವೊಂದೆಯೆನ್ನ ಸಂಜೀವಿನಿಅದೆ ನನ್ನ ತಾರಕಶಕ್ತಿಮಿತ್ರಸಲ್ಲಾಪವೆ ಚಿತ್ತಾಹ್ಲಾದಿನಿಅದರಿಂದಲೆಯೆ ನನ್ನಮುಕ್ತಿ ತನ್ನೊಳಿರುವ ಸಾಹಿತ್ಯ ಶಕ್ತಿಯೆ ನನ್ನ ಬಲ ಎನ್ನುವ ಕವಿ ಅಷ್ಟೇ ಮಹತಗವದ ಸ್ಥಾನವನ್ನು ಮಿತ್ರರೊಡನೆ ಆಡುವ ಸಲ್ಲಾಪಕ್ಕೂ ನೀಡುತ್ತಾರೆ.ಮಿತ್ರರೊಡನೆ ಆಡುವ ಮಾತು ವ್ಯರ್ಥ ಸಲ್ಲಾಪವಲ್ಲ ಅದು ಕವಿಯ ಮನಸಿಗೆ ಆಹ್ಲಾದ ವನ್ಬು ಕೊಡುವ ಚಿತ್ತಾಹ್ಲಾದಿನಿ,ಮಾತ್ರವಲ್ಲ ಅದರಿಂದಲೇ ಕವಿಗೆ ಮುಕ್ತಿ ಎನ್ನುತ್ತಾರೆ. ಕವಿತೆಮಾತ್ರವಲ್ಲ ಕವಿಗೆ ಮಿತ್ರ ಗಣ ಸಲ್ಲಾಪವೂ ಮುಖ್ಯವೆನಿಸಿದೆ. ಇರುವ ಬಾಳಿನಲಿ ಆನಂದ ಹುಡುಕದಿದ್ದರೆ ಸಂಸಾರ ನಿಸ್ಸಾರವೆನಿಸುತ್ತದೆ.ಕಷ್ಟ ಸುಖ ಗಳ ನಡುವೆಯೆ ಸಂತಸವ ಹುಡುಕಿದರೆ ಸಂಸಾರವೂ ರಸಮಯವೆನಿಸುತ್ತದೆ.ಕವಿ ತನ್ನ ಕವಿತೆಯೊಡನೆ ಸಂಸಾರವನ್ನು ಮೇಳವಿಸುವದು ಹೀಗೆ. ಸಾಹಿತ್ಯವನು ಕಂಡೆ ಸಂಸಾರದೊಳು ಹೀಗೆಸಾಂಗತ್ಯವಾಗಿಸಿ ಕೊನೆಗೆಇಲ್ಲದೆ ಹೋದರೆ ಉಸಿರಾಡುವುದು ಹೇಗೆಹೊಗೆಗಟ್ಟಿದೀ ಗೂಡಿನೊಳಗೆ ಇರುವ ಬಾಳಿನಲ್ಲಿಯೆ ಸುಖ ಕಾಣಬೇಕು.ಹೇ ಇದರಲ್ಲೇನಿ ದೆ ? ಎಂದು ಅಲಕ್ಷಿಸುತ್ತಾ ಹೋದರೆ ಅದು ಹೊಗೆಗಟ್ಟಿದ ಗೂಡಾಗುತ್ತದೆ.ಅದನ್ನೆ ಬಹಳ ಹಿಂದೆ ಮಹಾಕವಿ ಪಂಪ “ಸಾರಂ ಅನಂಗ ಜಂಗಮಲಲಿತಾಲತಾಂಗಿಯರಿಂದಮಲ್ತೇ ಸಂಸಾರಂ ” ಎಂದು ಸಂಸಾರವನ್ನು ಸಾರವಾಗಿಸುವ ದಾರಿ ಕಂಡಿದ್ದನು.ಇಲ್ಲ ಕವಿ ಪರಮೇಶ್ವರಭಟ್ಟರೂ ಕೂಡ ಅದೇ ಮಾರ್ಗವನ್ನು ಹೇಳುತ್ತಾರೆ. ಬಾಳು ಎಂದ ಮೇಲೆ ಕಷದಟಗಳು ಬರುವವೇ.ಆದರೆ ಅವು ಹೇಳಿಕೇಳಿ ಬರುವದಿಲ್ಲ.ಆಕಸ್ಮಿಕವಾಗಿಯೆ ಬರುತ್ತವೆ. ಕೆಲವೊಮ್ಮೆ ಒಳ್ಳೆಯವರೇ ಇಲ್ಲಿ ತೊಂದರೆಗೀಡಾಗುತ್ತಾರೆ. ಅವರದೇನೂ ತಪ್ಪಿರುವದಿಲ್ಲ.ಆದರೂ ತೊಂದರೆಗಳು ಅವರಿಗೆ ಬರುತ್ತವೆ. ಅದನ್ನು ಸುಂದರವಾದ ರೂಪಕದಿಂದ ಕವಿ ಬಣ್ಣಿಸುತ್ತಾರೆ. ಬಾಳೆ ಹಣ್ಣನು ತಿಂದವರೆಸೆದರು ಸಿಪ್ಪೆಯ ಬೀದಿಯ ಕೊನೆಗೆಕಾಣದೆ ಕಾಲಿಟ್ಟು ಜಾರುವನ್ಯರುಕಷ್ಟವು ಬರುವುದೆ ಹೀಗೆ ಯಾರೋಬಾಳೆ ಹಣ್ಣನು ತಿಂದು ಸಿಪ್ಪೆಯನ್ನು ಬೀದಿಯಲ್ಲಿ ಎಸೆದು ಬಿಡುತ್ತಾರೆ.ಆದರೆ ಅದನ್ನು ನೋಡದ ಇನ್ನು ಯಾರೊ ಅದರ ಮೇಲೆ ಕಾಲಿಟ್ಟು ಜಾರಿ ಬೀಳುತ್ತಾರೆ. ಅವರದೇನು ತಪ್ಪೇ ಇರದು ಆದರೂ ಕೆಲವು ಸಲ ತೊಂದರೆ ಅವರನ್ನು ಹುಡುಕಿ ಬಂದು ಬಿಡುತ್ತವೆ.ಇದೇ ಬಾಳಿನ ವೈಚಿತ್ರ್ಯ. ಕವಿ ಎಷ್ಟೇ ಶ್ರೇಷ್ಠವಾದ ಕವಿತೆ ಬರೆಯಲಿ ಅದನ್ನು ಮೆಚ್ಚುವವರು ಎಲ್ಲಕಾಲಕ್ಕೂ ಸಿಗುವದು ಅಸಾಧ್ಯ.ಎಲ್ಲೊಕೆಲವು ಭಾಗ್ಯವಂತರಿಗೆ ಮಾತ್ರ ಅವರ ಕವಿತೆಯ ಕುರಿತು ಸರಿಯಾದ ವಿಮರ್ಶೆ,ಮೆಚ್ಚಿಕೆ ಗೌರವ ಗಳು ಸಿಗುತ್ತವೆ .ಆಧುನಿಕಕಾಲದ ಕವಿಗಳು ತಮ್ಮ ಕವಿತೆಯನ್ನು ಕುರಿತು ತಾವೇ ಜಾಹಿರಾತು ಕೊಟ್ಟು ಇತರರಿಗೆ ಪರಿಚಯ ಮಾಡಿಕೊಡುತ್ತಾರೆ.ಇಂಥ ಪರಿಚಯಅವರಿಗೆ ಗೌರವವನ್ನು ತಂದುಕೊಡುತ್ತದೆ. ನನಗೆ ಯಾರ ಗೌರವ ಪ್ರಶಸ್ತಿ ಬೇಡ ಎಂದು ಕವಿತೆ ಬರೆಯುತ್ತ ಕೂಡ್ರುವ ಜನ ಆಧುನಿಕ ಕಾಲಕ್ಕಂತೂ ಕಡಿಮೆ. ಎಲ್ಲರೂ ಏನಾದರೂ ಪ್ರಯತ್ನ ಮಾಡುವವರೆ .ಇಂಥವರನ್ನು ಕಂಡು ಕವಿ ಪರಮೇಶ್ವರ ಭಟ್ಟರು ಪ್ರತಿಭೆಯೊಂದಿರಬೇಕು, ವುತ್ಪನ್ನಮತಿಅಭ್ಯಾಸ, ಗುರುಸೇವೆ ಬೇಕುಈ ಹಳೆಯ ಪಟ್ಟಿಗಿನ್ನೊಂದು ಸೇರಬೇಕುಕವಿಗೆ ಜಾಹಿರಾತು ಬೇಕು ಕವಿತೆ ಬರೆಯಲು ಏನೆನು ಬೇಕು ಎಂದು ಪ್ರಶಗನಿನಿಸ ಕಾವ್ಯಮೀಮಾಂಸಕರು ಪ್ರತಿಭೆ,ವುತ್ಪತ್ತಿ,ಗುರುಸೇವೆ ,ಅಭಾಸ ಹೀಗೆ ಆರು ಗುಣಗಳು ಬೇಕು ಎಂದು ಹೇಳಿದ್ದರು .ಆದರೆ ಆಧುನಿಕಕಾಲಕ್ಕೆ ಇಷ್ಟೇ ಸಾಕಾಗೊಲ್ಲ. ಎಷ್ಟೇ ಪ್ರತಿಭಾವಂತ ರಿದ್ದರೂ ಜಾಹಿರಾತು ಇಲ್ಲದೆ ಕವಿ ಯ ಕಾವ್ಯ ಪ್ರಸಿದ್ಧಿಗೆ ಬಾರದು ಎಂಬ ನೈರಾಸ್ಯ ಬಾವವನ್ನು ವ್ಯಕ್ತ ಮಾಡಿದ್ದಾರೆ.ಒಮ್ಮೊಮ್ಮೆ ಜಾಹಿರಾತಿನ ಬಲದಿಂದ ಅಂಥ ಶ್ರೇಷ್ಟ ಕಾವ್ಯವಲ್ಲದ್ದೂ ಕೂಡ ಮಿಂಚತೊಡಗುತ್ತದೆ. ಇಂಥದನ್ನು ಕಂಡು ನಿಜ ಕವಿಗಳು ಮರುಗಬೇಕಾಗುತ್ತದೆಯಷ್ಠೆ. ಇವು ಕೆಲವು ಅರ್ಥಪೂರ್ಣ ಮುಕ್ತಕಗಳ ಉದಾಹರ ಣೆ ಯಷ್ಟೇ.ಇಂಥ ಹಲವಾರು ಸುಂದರ ಮುಕ್ತಕಗಳ ಕಣಜವೇ ಅವರ ಸಂಕಲನಗಳಲ್ಲಿದೆ.ಓದುವ , ಸವಿಯುವ ಗುಣ ನಮ್ಮದಾಗಬೇಕಷ್ಟೇ. ಡಾ.ವೈ.ಎಂ.ಯಾಕೊಳ್ಳಿ
“ಎಸ್ .ವಿ.ಪರಮೇಶ್ವರ ಭಟ್ಟರ ಕೆಲವು ಮುಕ್ತಕಗಳು”ಒಂದು ಓದು,ಡಾ.ವೈ.ಎಂ.ಯಾಕೊಳ್ಳಿ Read Post »
ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ”
ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” ತಲ್ಲಣಗಳೆಲ್ಲ ಮೀರಿದಮೇಲೆ—ಕದ ತಟ್ಟಿದೆ ನೀನು;ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,ನೀನು ಹೊತ್ತಿಸಿದ ಬೆಳಕಿಗೆಕತ್ತಲೆ ಗೋಳಾಡಿ ಕರಗಿತು. ಒಡೆದು ಗಾಯಗೊಂಡಅಪರಾಹ್ನದ ಕನಸಿಗೆ,ಬಂದೆರಗಿದ ತಂಗಾಳಿತಲೆ ಸವರಿದಂತಿತ್ತು;ಇಂಗಿಹೋದ ಒಣ ಹಂಗುಕಂಬಳಿಯ ಮರೆಯಲ್ಲಿಮುತ್ತೈದೆಯಂತೆಪಿಸುಗುಟ್ಟಿತು. ನೆನಪು ಕೊಯ್ದ ಕಂಬನಿ,ಟಪಕ್ಕನೆ ಉದುರಿತೆರೆಯ ಮರೆಯಲ್ಲಿನೆಲ ಹಿಡಿಯಿತು;ಹಳಸಲು ಪ್ರೀತಿಯಹಿಲಾಲು ಒಗೆದುಇಸ್ತ್ರಿ ಹಾಕಿ ನೀನುಲೇಪನ ಹಚ್ಚಿದರೂ—ಲವಲವಿಕೆಯೇ ಲೇವಡಿ ಮಾಡಿತು! ನೀನು ಬಂದದ್ದುತುಸು ತಡವಾಯ್ತೇನೋ…?ಕತ್ತಲು ಮುಸುಕಿದ ತೇವದಲಿಒಣಗಿಹೋದ ಶಬ್ದಗಳುಗದ್ಗದಿಸಿ ಬಿಕ್ಕಳಿಸಿದವು;ಬಹು ಬಿರಿಯಾದ ಎದೆಯೊಳಗೆಉತ್ತರವಿಲ್ಲದ ಪ್ರಶ್ನೆಗಳುಮತ್ತೆ ನರಳಿಸಿದವು. ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ನೆನಪು ಕೊಯ್ದ ಕಂಬನಿ” Read Post »
“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್
ಗೃಹ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಗೃಹ ಕೃತ್ಯಗಳ ನಿರ್ವಹಣೆ (ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ಇತ್ತೀಚಿಗೆ ಮುಖ ಪುಸ್ತಕದಲ್ಲಿ ಒಂದು ಜಾಹೀರಾತು ನೋಡಿದೆ. ಪುಟ್ಟ ವಯಸ್ಸಿನ ಇಬ್ಬರು ಮಕ್ಕಳು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ಅಮ್ಮನ ಮಾರ್ಗದರ್ಶನದಲ್ಲಿ ಅಡುಗೆ ತಯಾರಿಸುತ್ತಿದ್ದರು. ಇದನ್ನು ನೋಡಿದ ಅಜ್ಜಿ ಅರೆ ಮಕ್ಕಳು ಅಮ್ಮನಿಗೆ ಸಹಾಯ ಮಾಡುವಷ್ಟು ದೊಡ್ಡವರಾದರೆ! ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಕೂಡಲೇ ಬಾಯಿಯ ಮೇಲೆ ಬೆರಳಿಟ್ಟ ಮಗಳು ಅಮ್ಮ.. ಪ್ಲೀಸ್ ಹಾಗೆಲ್ಲ ಹೇಳಬೇಡ ಮಕ್ಕಳು ಮನೆಯ ಕೆಲಸದಲ್ಲಿ ಪಾಲ್ಗೊಳ್ಳುವುದು ಅವರು ನಮಗೆ ಮಾಡುವ ಸಹಾಯವಲ್ಲ, ಬದಲಾಗಿ ಅದು ಅವರ ಜೀವನದಲ್ಲಿ ಅತ್ಯವಶ್ಯಕವಾಗಿ ಕಲಿಯಲೇಬೇಕಾದ ಒಂದು ಕೌಶಲ ಸಹಾಯ ಮಾಡುವ ಮೂಲಕ ತಾವು ಮತ್ತೊಬ್ಬರಿಗೆ ಮಹದುಪಕಾರ ಮಾಡುತ್ತಿದ್ದೇವೆ ಎಂಬ ಭಾವ ಮಕ್ಕಳಲ್ಲಿ ಮೂಡುವುದು ಬೇಡ ಎಂದು ತಾಯಿಗೆ ಹೇಳಿದಾಗ ಆಕೆಯ ತಾಯಿ ಹೌದು ಎಂಬಂತೆ ತಲೆಯಾಡಿಸಿದರು.ಕಲಿತ ಹೆಣ್ಣು ಮಗಳೊಬ್ಬಳು ಮನೆಯವರ ಸ್ನೇಹಿತರ ಅದೆಷ್ಟೇ ಒತ್ತಾಯದ ನಡುವೆಯೂ ಕೂಡ ಒಂದೇ ಒಂದು ಅಡುಗೆಯನ್ನು ಕಲಿಯಲಿಲ್ಲ….ಅಡುಗೆ ಮಾಡುವುದನ್ನು ಹೆಣ್ಣು ಮಕ್ಕಳು ಕಡ್ಡಾಯವಾಗಿ ಕಲಿಯಲೇಬೇಕು ಎಂಬ ಸಾಮಾಜಿಕ ಗ್ರಹಿಕೆಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಆಕೆ ಹಾಗೆ ವರ್ತಿಸುತ್ತಿದ್ದಳು.ಅದೊಂದು ದಿನ ಆಕೆಯ ಪುಟ್ಟ ಸಹೋದರಿ ಅಕ್ಕನಿಗೆ ಅಕ್ಕ ನಿನಗೂ ಹಸಿವಾಗುತ್ತದಲ್ಲವೇ?’ ಆದ್ದರಿಂದ ನೀನು ಅಡುಗೆ ಮಾಡುವುದನ್ನು ಕಲಿತುಕೋ ಎಂದು ಹೇಳಿದಾಗ ಅದನ್ನು ಮೂಲಭೂತ ಅವಶ್ಯಕತೆ ಎಂದು ಸಹಜವಾಗಿ ಸ್ವೀಕರಿಸಿದ ಆ ಹೆಣ್ಣು ಮಗಳು ಅಡುಗೆ ಮಾಡುವುದನ್ನು ಕಲಿತಳು.ಮೇಲಿನ ಎರಡು ಜಾಹೀರಾತುಗಳು ನಿಜವಾಗಿಯೂ ಅಡುಗೆ ಎಂಬ ಕಲೆ ಕೇವಲ ಹೆಣ್ಣು ಮಕ್ಕಳು ಕಲಿಯಲೇಬೇಕಾದ ಕೌಶಲವಲ್ಲ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬರು ತಮ್ಮ ಬದುಕನ್ನು ನಿರ್ವಹಿಸಲು ಹೊಂದಿರಲೇಬೇಕಾದ ಅಗತ್ಯ ಮೂಲಭೂತ ಕೌಶಲಗಳಲ್ಲಿ ಒಂದು ಎಂಬುದನ್ನು ನಮಗೆ ತೋರಿಸಿಕೊಡುತ್ತವೆ.ಮತ್ತೊಂದು ಕಡೆ ಇನ್ನೇನು ಕೆಲವೇ ದಿನಗಳಲ್ಲಿ ತನ್ನದೇ ವೃತ್ತಿಯಲ್ಲಿ ಇರುವ ಹೆಣ್ಣು ಮಗಳನ್ನು ವಿವಾಹವಾಗುತ್ತಿರುವ ಮಗನಿಗೆ ಅಡುಗೆ ಕೆಲಸಗಳನ್ನು ಕಲಿಸಿದ ತಾಯಿ ಇಬ್ಬರು ಒಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ ಎಂದ ಮೇಲೆ ಮನೆಯ ಕೆಲಸಗಳನ್ನು ಕೂಡ ಒಟ್ಟಾಗಿ ನಿರ್ವಹಿಸಬೇಕು ಎಂದು ಹೇಳುವುದು ಹಾಗೂ ಅದಕ್ಕೆ ಮಗ ಅತ್ಯಂತ ಪ್ರೀತಿಯಿಂದ ಸಮ್ಮತಿಸಿ ಕಲಿಯಲು ಉತ್ಸಾಹ ತೋರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಮಾನಗಳಲ್ಲಿ ಈ ಮಾದರಿಯನ್ನು ನಾವು ಇನ್ನೂ ಹೆಚ್ಚು ಅಳವಡಿಸಿಕೊಳ್ಳಬೇಕಾದ ಅಗತ್ಯತೆ ಖಂಡಿತವಾಗಿಯೂ ಇದೆ.ನಿಜ ಅಲ್ಲವೇ ಸ್ನೇಹಿತರೆ ?… ಗೃಹ ಕೃತ್ಯಗಳು ಯಾರು ಯಾರಿಗೂ ಮಾಡಬಹುದಾದ ಉಪಕಾರವಲ್ಲ ಬದಲಾಗಿ ಅವು ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಜೀವನ ಕೌಶಲ್ಯಗಳು. ಅಡುಗೆ ಮಾಡುವುದು ಕೇವಲ ಹೆಣ್ಣು ಮಕ್ಕಳ ಕೆಲಸವಲ್ಲ. ಅಂತೆಯೇ ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಎಲ್ಲಾ ಕೆಲಸಗಳು ಕೇವಲ ಮಹಿಳೆಯರವಲ್ಲ. ಅಡುಗೆ ಮಾಡುವ ಮೂಲಕ ಗಂಡಸು ಹೆಣ್ಣಾಗುವುದಿಲ್ಲ ಅಥವಾ ಅಡುಗೆ ಮಾಡುವ ಮನೆ ಕೆಲಸಗಳನ್ನು ನಿರ್ವಹಿಸುವುದು ಲಿಂಗ ಆಧಾರದ ಕೆಲಸ ಕಾರ್ಯಗಳಲ್ಲ.ಮಾತೆತ್ತಿದರೆ ಭೀಮಸೇನ, ನಳ ಮಹಾರಾಜರು ಅತ್ಯಂತ ಪಾಕ ಪ್ರವೀಣರು ಎಂದು ಬೊಬ್ಬೆ ಹೊಡೆಯುವ ಗಂಡಸರು ತಮ್ಮ ತಮ್ಮ ಮನೆಗಳಲ್ಲಿ ಒಂದು ಕಪ್ ಚಹಾ ಮಾಡಿಕೊಳ್ಳಲು ಕೂಡ ಪರದಾಡುವುದನ್ನು ನಾವು ನೋಡುತ್ತೇವೆ. ಅದು ಹೋಗಲಿ ಕುಟುಂಬದ ಇತರ ಮಹಿಳಾ ಸದಸ್ಯರೇ ಅವರಿಗೆ ಅವರು ಕುಳಿತಲ್ಲಿಯೇ ನೀರು ಚಹಾ ತಿಂಡಿ, ಊಟಗಳನ್ನು ಕಾಲಕಾಲಕ್ಕೆ ಒದಗಿಸಬೇಕು.ಒಗೆದು ಇಸ್ತ್ರಿ ಮಾಡಿದ ಬಟ್ಟೆಗಳನ್ನು ಪೂರೈಸಬೇಕು, ಓರಣವಾಗಿ ಮನೆಯನ್ನು ಇಟ್ಟುಕೊಳ್ಳಬೇಕು. ಹಬ್ಬ ಹುಣ್ಣಿಮೆಗಳಲ್ಲಿ ಮನೆ ದೇವರ ಪೂಜೆಯಿಂದ ಹಿಡಿದು ಹಬ್ಬದ ಅಡುಗೆಯನ್ನು ಕೂಡ ಹೆಣ್ಣು ಮಕ್ಕಳೇ ಮಾಡ್ತಾ ಬಂದಿದ್ದು ಅದೊಂದು ರೀತಿಯಲ್ಲಿ ಗಂಡು ಮಕ್ಕಳ ಪಾತ್ರ ಕೇವಲ ತಂದು ಹಾಕುವುದು ಎಂಬಂತಹ ಪರಿಸ್ಥಿತಿ ಅವರದ್ದಾಗಿದೆ.ನಮ್ಮ ಮನೆಯ ಗಂಡು ಮಕ್ಕಳನ್ನು ನಾವು ರಾಜಾ ಬೇಟಾ ಎಂಬಂತೆ ಬೆಳೆಸುತ್ತಿದ್ದು ದೈನಂದಿನ ಎಲ್ಲ ಜವಾಬ್ದಾರಿಗಳಿಂದ ದೂರವಿರಿಸುತ್ತೇವೆ… ಆದರೆ ಹೀಗೆ ಗಂಡು ಮಕ್ಕಳನ್ನು ಬೆಳೆಸುವ ಮೂಲಕ ನಾವು ಅವರನ್ನು ಇತರರ ಮೇಲೆ ಅವಲಂಬನೆ ಹೊಂದಿರುವಂತೆ ಮಾಡುತ್ತೇವೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ತಾವೇ ನಿರ್ವಹಿಸಿಕೊಳ್ಳುವ ಓರ್ವ ಸಮರ್ಥ ವ್ಯಕ್ತಿಯನ್ನಾಗಿಸದೆ ಪರಾವಲಂಬಿ ಆಗಿಸುತ್ತೇವೆ.ಗೃಹ ಕೃತ್ಯಗಳನ್ನು ತಮ್ಮ ಮಕ್ಕಳ ನಡುವೆ ಹಂಚಿ ಕೊಟ್ಟು ಕೆಲಸ ಮಾಡಿಸುವ ಮೂಲಕ ಪಾಲಕರು ಕೌಟುಂಬಿಕ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಬೇಕು. ಇದು ಅವರನ್ನು ಆತ್ಮ ನಿರ್ಭರ, ಕಾಳಜಿಪರ ಹಾಗೂ ಆತ್ಮವಿಶ್ವಾಸವುಳ್ಳ ನಾಗರಿಕರನ್ನಾಗಿಸುತ್ತದೆ. ಮಗು ಗಂಡಿರಲಿ ಹೆಣ್ಣಿರಲಿ ಇದು ನನ್ನ ಕೆಲಸ ನಾನು ಇದನ್ನು ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಹೇಳಿದಾಗ ಅದು ಸಂಪೂರ್ಣ ಆತ್ಮ ನಿರ್ಭರತೆಯ ಸ್ವತಂತ್ರ ವ್ಯಕ್ತಿತ್ವವನ್ನು ಸೂಚಿಸುತ್ತದೆ…. ಅದು ನಿಜವಾದ ಸಬಲೀಕರಣ.ಹೋಂ ಮೇಕರ್ ಎಂದರೆ ಕೇವಲ ಅದು ಮಹಿಳೆಯರು ಎಂಬಂತೆ ಅನಾದಿಕಾಲದಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ.ಗೃಹ ಕೃತ್ಯಗಳು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಲ್ಲ ಎಂಬುದಕ್ಕೆ ಪುಷ್ಠಿ ನೀಡಲು ಇತ್ತೀಚೆಗೆ ಕರ್ನಾಟಕದ ಉಚ್ಚ ನ್ಯಾಯಾಲಯವು ಹೋಂ ಮೇಕರ್ ಎಂಬ ಪದವನ್ನು ಗಂಡು ಮತ್ತು ಹೆಣ್ಣು ಎರಡು ಆಗಿರಬಹುದಾದ ನ್ಯೂಟ್ರಲ್ ಅಂದರೆ ತಟಸ್ಥ ಲಿಂಗ ಅಂದರೆ ಎಲ್ಲರಿಗೂ ಅನ್ವಯಿಸಲಾಗುತ್ತದೆ. ವ್ಯಕ್ತಿ ತಮ್ಮ ಮನೆಯ ದೈನಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ದುಡಿಯುವ ಕೂಲಿಯಾಗಿದ್ದರೂ, ದೊಡ್ಡ ಆಫೀಸರ್ ಆಗಿದ್ದರೂ ಅದು ಗಂಡೇ ಇರಲಿ, ಹೆಣ್ಣೇ ಇರಲಿ ಗೃಹ ಕೃತ್ಯಗಳನ್ನು ಮಾಡಿಕೊಳ್ಳಲು ಕಲಿತಿರಬೇಕು ಹಾಗೂ ಮಾಡಲೂಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಹೇಳಿದೆ.ಪಂಪಾಲಾಲ್ ಎಂಬ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ತೀವ್ರ ಗಾಯಗೊಂಡ. ನಂತರ ಪರಿಹಾರಕ್ಕೆ ಅರ್ಜಿ ಗುಜರಾಯಿಸಿದ ಸಂಬಂಧ ನಡೆದ ವಿಚಾರಣೆಯಲ್ಲಿ ಗೃಹಕೃತ್ಯದ ವಿಷಯ ಮುನ್ನೆಲೆಗೆ ಬಂದಿತ್ತು ಅವರಿಗೆ ವಿರೋಧವಾದ ಎದುರಾಳಿಗಳ ವಾದ ಗಮನಾರ್ಹವಾಗಿತ್ತು. ಸ್ನಾತಕೋತ್ತರ ಪದವಿಯನ್ನು ಹೊಂದಿದ್ದ ಹಾಗೂ ಈ ಹಿಂದೆ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಣ್ಣು ಮಗಳನ್ನು ಗೃಹಿಣಿ ಎಂದು ಹೇಳಲು ಬರುವುದಿಲ್ಲ ಎಂಬ ಮಾತನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು ಒಪ್ಪಲಿಲ್ಲತನ್ನ ತೀರ್ಪಿನಲ್ಲಿ ಉಚ್ಚ ನ್ಯಾಯಾಲಯವು ಹೆಣ್ಣುಮಗಳು ಅನಕ್ಷರಸ್ಥ ಳೇ ಆಗಬೇಕಾಗಿಲ್ಲ ಆಕೆ ದಿನದ 24 ಗಂಟೆಯೂ ಮನೆಯಲ್ಲಿ ಇರುವ ಹಾಗೂ ಗೃಹ ಕೃತ್ಯಗಳನ್ನು ನಿಭಾಯಿಸುವುದನ್ನು ಗೃಹಿಣಿ ಎಂದು ಹೇಳಲಾಗುವುದಿಲ್ಲ. ಗೃಹಿಣಿಯಾಗಿರುವ ಆಕೆಗೆ 1.96 ಲಕ್ಷ ರೂ ಹಣವನ್ನು ಆರು ಶೇಕಡ ವಾರ್ಷಿಕ ಬಡ್ಡಿಯೊಂದಿಗೆ ನೀಡಬೇಕು ಎಂದು ಆದೇಶ ಮಾಡಿತು.ಆದರೂ ಕೂಡ ಗೃಹ ಕೃತ್ಯಗಳು ಪ್ರಾಥಮಿಕವಾಗಿ ಕೇವಲ ಹೆಣ್ಣು ಮಕ್ಕಳದ್ದೇ ಎಂಬಂತೆ ನಾವೇಕೆ ಯೋಚಿಸುತ್ತೇವೆ ಎಂಬುದು ಪ್ರಶ್ನೆಯಾಗಿದೆ ಉಳಿಯುತ್ತದೆ. ಹಾಗಾದರೆ ನಾವೇನು ಮಾಡಬೇಕು ?ಗೃಹ ಕೃತದ ಎಲ್ಲಾ ಕೆಲಸಗಳನ್ನು ಯಾವುದೇ ಬಗೆಯ ಲಿಂಗ ಭೇದವಿಲ್ಲವೇ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನವಾಗಿ ಕಲಿಸಬೇಕು. ದೈನಂದಿನ ಬದುಕಿನಲ್ಲಿ ಕುಟುಂಬದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಅಡುಗೆ ಮಾಡುವುದನ್ನು, ಮನೆಯ ಇನ್ನಿತರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದನ್ನು ಸ್ವಲ್ಪವಾದರೂ ಕಲಿತಿರಲೇಬೇಕು… ಅದು ಅವರ ಮೂಲಭೂತ ಅವಶ್ಯಕತೆಯೂ ಹೌದು. ಕಲಿತಿರುವವರು ಬದುಕಿನ ಎಲ್ಲ ಬಗೆಯ ಪರೀಕ್ಷೆಗಳಿಗೆ ಸಿದ್ಧರಾಗಿರುತ್ತಾರೆ.ಕಳೆದ ಒಂದೆರಡು ದಶಕಗಳಿಂದ ವಿದೇಶಗಳಲ್ಲಿ ಶಿಕ್ಷಣ ಪಡೆಯಲು ಹೋಗುತ್ತಿರುವ ಯುವಕ ಯುವತಿಯರು ತಮ್ಮ ದೈನಂದಿನ ಬದುಕಿಗೆ ಅತ್ಯವಶ್ಯಕವಾದ ಈ ಎಲ್ಲವನ್ನು ಕಲಿಯುತ್ತಿದ್ದಾರೆ ಆದರೆ ಒಂದೊಮ್ಮೆ ಮದುವೆಯಾದರೆ ಕೂಡಲೇ ಇದೆಲ್ಲವನ್ನು ಹೆಣ್ಣು ಮಕ್ಕಳ ಜವಾಬ್ದಾರಿಗೆ ಒಪ್ಪಿಸಿ ಗಂಡಸರು ತಾವು ನಿಶ್ಚಿಂತರಾಗುವರು…. ಇದು ಸಲ್ಲದು.ಗೃಹ ಕೃತ್ಯಗಳನ್ನು ಅರಿತಿರುವುದು ವೈಯುಕ್ತಿಕವಾಗಿ ನಮ್ಮೆಲ್ಲ ಕೆಲಸಗಳನ್ನು ನಾವೇ ಮಾಡಿಕೊಳ್ಳುವುದು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿದಷ್ಟೇ ಒಳ್ಳೆಯದು.ಗಂಡಿರಲಿ ಹೆಣ್ಣಿರಲಿ ಸಮಯ ಸಂದರ್ಭ ಹಾಗೂ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮಗೆ ತಾವು ಪರಾವಲಂಬಿ ಗಳಾಗದೆ ಇರುವ ನಿಟ್ಟಿನಲ್ಲಿ ಎಲ್ಲ ಬಗೆಯುವ ಗೃಹ ಕೃತ್ಯಗಳ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವೀಣಾ ಹೇಮಂತ್ ಗೌಡ ಪಾಟೀಲ್
“ಗೃಹ ಕೃತ್ಯಗಳ ನಿರ್ವಹಣೆ(ಬದುಕಿನ ಮೂಲಭೂತ ಕಲಿಕೆ ಹಾಗೂ ಕಾನೂನು ಮಾನ್ಯತೆ )” ವೀಣಾ ಹೇಮಂತ್ ಗೌಡ ಪಾಟೀಲ್ Read Post »









