ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏಪ್ರಿಲ್ ಒಂದನೇ ತಾರೀಖು ಬಂತೆಂದರೆ ಸಾಕು ಎಲ್ಲರಿಗೂ ಇನ್ನೊಬ್ಬರನ್ನು ಫೂಲ್ ಮಾಡುವ ಕಾತರ. ಮೊದಲನೇ ದಿನವೇ ನಾಳೆ ಯಾರನ್ನು ಫೂಲ್ ಮಾಡಬೇಕು ಹೇಗೆ ಮಾಡಬೇಕು? ಎಂದೆಲ್ಲಾ ಆಲೋಚನೆ ಮಾಡಿ,ಲೆಕ್ಕಚಾರ ಹಾಕಿ ಇಡುತ್ತಾರೆ. ಸಂಪತ್ ಯಾವಾಗಲೂ ತನ್ನ ಗೆಳೆಯರಿಂದ ಫೂಲ್ ಆಗುತ್ತಿದ್ದನು. ಎಲ್ಲರೂ ಅವನಿಗೆ ತಮಾಷೆ ಮಾಡುತ್ತಿದ್ದರು.ಈ ಬಾರಿ ಅವನು ಒಂದು ದೃಢ ನಿರ್ಧಾರ ಮಾಡಿದ್ದನು. ಏನಿದ್ದರೂ ನಾನು ಈ ವರ್ಷ ಮಾತ್ರ ಫೂಲ್ ಆಗಲೇಬಾರದು.ಯಾವಾಗಲೂ ಏಪ್ರಿಲ್ ಒಂದರ ಬೆಳಗ್ಗೆ ನನ್ನನ್ನು ಫೂಲ್ ಮಾಡುತ್ತಿದ್ದ ಶಂಕರನಿಗೆ ನಾನು ಈ ಬಾರಿ ಹೇಗಾದರೂ ಫೂಲ್ ಮಾಡಿಯೇ ಮಾಡುತ್ತೇನೆಂದು ಪಣತೊಟ್ಟಿದ್ದನು.ಇದನ್ನು ತನ್ನ ಇತರ ಗೆಳೆಯರಲ್ಲಿ ಕೂಡ ಹೇಳಿದ್ದನು. ಏಪ್ರಿಲ್ ಒಂದರಂದು ಬೆಳಿಗ್ಗೆ ಎದ್ದವನೇ ಬಹಳ ಎಚ್ಚರ ದಿಂದಲೇ ಇದ್ದನು.ತಾನು ಶಂಕರನಿಗೆ ಫೂಲ್ ಮಾಡುತ್ತೇನೆ ಎಂದವನು ತಾನು ಫೂಲ್ ಆಗದಂತೆ ಎಚ್ಚರ ವಹಿಸುವುದರಲ್ಲಿಯೇ ಮಗ್ನನಾಗಿದ್ದನು. ಅತ್ತ ಶಂಕರನಿಗೆ
ಸಂದೀಪ ತನ್ನನ್ನು ಫೂಲ್ ಮಾಡುತ್ತೇನೆ ಎಂದು ಹೇಳಿದ ವಿಷಯ ಅದು ಹೇಗೋ ಅವನ ಕಿವಿಗೆ ಬಿದ್ದಿತ್ತು.
ಅವನು ಆ ದಿನ ಬಹಳ ಎಚ್ಚರಿಕೆಯಿಂದಲೇ ಇದ್ದನು. “

ಸಂದೀಪ ಸಣ್ಣಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ,ಕೆಲಸದ ಒತ್ತಡ ತುಂಬಾ ಇತ್ತು. ತಾನು ಏನಾದರೂ ಕೆಲಸದ ಗಡಿಬಿಡಿಯಲ್ಲಿ ಫೂಲ್ ಆಗಿ ಬಿಡುವೆನು” ಎಂಬ ಭಯದಿಂದ ಆ ದಿನ ಸಂದೀಪ ಆಫೀಸಿಗೆ ರಜಾ ಹಾಕಿ ಬಿಟ್ಟಿದ್ದನು.ಸಾಕಷ್ಟು ಸಲ ಸರಕಾರದ ಕೆಲಸಕ್ಕೆ ಪ್ರಯತ್ನಿಸಿದರೂ ಅವನಿಗೆ ಯಾವುದೇ ಸರಕಾರಿ ಕೆಲಸ ಸಿಕ್ಕಿರಲಿಲ್ಲ. ಒಮ್ಮೆ ತನಗೆ ಒಂದು ಪರ್ಮನೆಂಟ್ ಕೆಲಸ ಸಿಕ್ಕರೆ ಸಾಕು ಎಂದು ದೇವರಲ್ಲೆಲ್ಲ ಹರಕೆ ಹೊತ್ತಿದ್ದನು.

ಏಪ್ರಿಲ್ ಒಂದರಂದು ಬೆಳಿಗ್ಗೆ ಹತ್ತೂವರೆ ಗಂಟೆಗೆ ಅವನಿಗೆ ಒಂದು ಫೋನ್ ಕರೆ ಬಂತು.ನಿನಗೆ ನೀನು ಅರ್ಜಿ ಹಾಕಿದ ಗುಮಾಸ್ತ ಹುದ್ದೆಗೆ ನೇಮಕಾತಿ ಆಗಿದೆ. ನಿನಗೆ ಅಂಚೆಯ ಮೂಲಕ ನೇಮಕಾತಿ ಆದೇಶ ಬರುವಾಗ ತಡವಾದೀತು ಎಂದು ತಾಲೂಕು ಆಫೀಸಿನಿಂದಲೇ ಕಾಲ್ ಮಾಡುತ್ತಿದ್ದೇವೆ ಎಂದು ಫೋನಿನಲ್ಲಿ ಮಾತನಾಡಿದ ವ್ಯಕ್ತಿ ತಿಳಿಸಿದನು. ಈಗ ಸಂದೀಪನ ಚುರುಕು ಬುದ್ಧಿ ಕೆಲಸ ಮಾಡಿತು. “ಬಹುಷಃ ಇದು ಶಂಕರನೇ ತನ್ನನ್ನು ಫೂಲ್ ಮಾಡಬೇಕೆಂದು ಬೇರೆಯವರಲ್ಲಿ ಹೇಳಿ ಕರೆ ಕೊಟ್ಟಿರಬಹುದು. ಯಾವುದಕ್ಕೂ ನಾನು ಯಾಮಾರಿಸಬಾರದು” ಎಂದು ಹೇಳಿ ಸುಮ್ಮನಾದನು. ಬದಲಾಗಿ ಶಂಕರನಿಗೆ ತಾನು ಹೇಗೆ ಫೂಲ್ ಮಾಡುವುದು ಎಂಬ ಆಲೋಚನೆಯಲ್ಲಿದ್ದವನಿಗೆ ಈಗ ಒಂದು ಆಲೋಚನೆ ಹೊಳೆಯಿತು

ನನಗೆ ಫೋನ್ ಕರೆ ಮಾಡಿದ ಹಾಗೆ ನಾನು ಯಾಕೆ ಶಂಕರನಿಗೆ ಬೇರೆಯವರ ಮೂಲಕ ಫೋನ್ ಕರೆ ಮಾಡಿ ಫೂಲ್ ಮಾಡಬಾರದು ಎಂದು ಆಲೋಚಿಸಿದನು. ತಾನಿರುವ ಜಾಗದಿಂದ ಕರೆ ಮಾಡಿದರೆ ಅವನಿಗೆ ತಿಳಿಯಬಹುದು ಎಂದು ಸುಮಾರು ಹತ್ತು ಕಿ ಮೀ ದೂರಕ್ಕೆ ಹೋಗಿ,ಅಲ್ಲಿನ ಒಬ್ಬರ ಮೊಬೈಲಿನಿಂದ ಶಂಕರನಿಗೆ ಪೋನ್ ಕರೆ ಮಾಡಿ, ತನ್ನ ಧ್ವನಿಯನ್ನು ಬದಲಾಯಿಸಿ “ತಾನು ತಾಲೂಕಿನ ಕೇಂದ್ರ ಕಛೇರಿಯಿಂದ ಕರೆ ಮಾಡುತ್ತಿರುವುದು.ನಿನಗೆ ಅಂಚೆ ಕಛೇರಿಯಲ್ಲಿ ಕೆಲಸ ಸಿಕ್ಕಿದೆ.ಇವತ್ತೇ ಹೋಗಿ ನೀನು ಕೆಲಸಕ್ಕೆ ಸೇರಿಕೊಳ್ಳಬೇಕು” ಎಂದು ಹೇಳಿ ಫೋನ್ ಕರೆಯನ್ನು ಕಟ್ ಮಾಡಿದನು.

ಶಂಕರ ಹೌದಾ! “ನಾನು ಎರಡು ವರ್ಷಗಳ ಹಿಂದೆ ಅಂಚೆ ಕಚೇರಿಯ ಕೆಲಸಕ್ಕೆ ಅರ್ಜಿ ಹಾಕಿದ್ದು. ಇವತ್ತು ಕೆಲಸ ಸಿಕ್ಕಿದೆಯಂತೆ .ಯಾವುದಕ್ಕೂ ಒಂದು ಸಲ ಹೋಗಿ ವಿಚಾರಿಸಿ ನೋಡೋಣ” ಎಂದು ಹೇಳಿ ಸೀದಾ ಅಂಚೆ ಕಚೇರಿಗೆ ಹೋದನು.ಅಂಚೆಯ ಅಧಿಕಾರಿಗಳು ಹೊಸಬರಾಗಿದ್ದು,ಹಿಂದಿನ ದಿನವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು.ಶಂಕರ ಹೋಗಿ ವಿಚಾರಿಸಿದಾಗ ಅವರು ಹೌದು ನೇಮಕಾತಿ ಪತ್ರ ಬಂದು ಹದಿನೈದು ದಿನಗಳೇ ಆಗಿವೆ.ನೀವು ಈ ಮೊದಲೇ ಬರಬೇಕಿತ್ತು ಎಂದಾಗ ಶಂಕರನಿಗೆ ಆಶ್ಚರ್ಯವಾಯಿತು.ನನಗೆ ತಿಳಿಸಲೇ ಇಲ್ಲ ಎಂದಾಗ, ಬಹುಶಃ ಈ ಮೊದಲಿನವರು ವರ್ಗಾವಣೆ ಆಗಿ ಹೋಗುವ ಅವಸರದಲ್ಲಿ ಮರೆತಿರಬೇಕು.ಇವತ್ತೇ ಕೊನೆಯ ದಿನಾಂಕವಿದೆ.ಇವತ್ತಾದರೂ ಬಂದಿರಲ್ಲ.ಕರ್ತವ್ಯಕ್ಕೆ ಹಾಜರಾಗಿ ಎಂದರು.ಶಂಕರನಿಗೆ ಅತೀವ ಸಂತೋಷವಾಯಿತು.ಕೆಲಸಕ್ಕೆ ಸೇರಿದನು.ಸಂಜೆ ಮನೆಗೆ ಬಂದವನೆ ತನಗೆ ಫೋನಾಯಿಸಿದೆ ವ್ಯಕ್ತಿಗೆ ಕೃತಜ್ಞತೆ ತಿಳಿಸಬೇಕೆಂದು ತಾನು ಬೆಳಿಗ್ಗೆ ಕರೆ ಸ್ವೀಕರಿಸಿದ ನಂಬರಿಗೆ ಕರೆ ಮಾಡಿದಾಗ,ಮಾತನಾಡಿದ ವ್ಯಕ್ತಿ “ಅದು ನಾನಲ್ಲ.ಬಹುಶ ಬೆಳಿಗ್ಗೆ ಕರೆ ಮಾಡಲಿದೆಯೆಂದು ನನ್ನಿಂದ
ಮೊಬೈಲ್ ಕೇಳಿ ಒಬ್ಬರು ಕರೆ ಮಾಡಿದ್ದಾರೆ.ಅವರೇ ಇರಬಹುದು ಎಂದರು.ಅವರ ಹೆಸರೇನೆಂದು ಕೇಳಿದಾಗ,ನಾನು ಹೆಸರು ಕೇಳಲಿಲ್ಲ ನೋಡುವಾಗ ಒಳ್ಳೆಯ ಆಫೀಸರ್ ತರ ಕಾಣುತ್ತಿದ್ದರು ಎಂದು ಕರೆ ಕಟ್ ಮಾಡಿದನು.

ಆ ದಿನ ಸಂದೀಪ ಕೆಲಸದಿಂದ ಮನೆಗೆ ಹೋದವನಿಗೆ ಹೊಸ ವಿಷಯವೊಂದು ಕಿವಿಗೆ ಬಿತ್ತು. ಊರಿನಲ್ಲೆಲ್ಲ ಸುದ್ದಿ ಹರಡಿತ್ತು.ಶಂಕರನಿಗೆ ಪೋಸ್ಟ್ ಆಫೀಸ್ನಲ್ಲಿ ಕೆಲಸ ಸಿಕ್ಕಿದೆಯಂತೆ ಎಂದು ಸಿಹಿ ಹಂಚುತ್ತಿದ್ದರು. ಆ ಸುದ್ದಿಯನ್ನ ಕೇಳಿ ಸಂದೀಪನಿಗೆ ಆಶ್ಚರ್ಯವಾಯಿತು. “ನಾನು ಶಂಕರನಿಗೆ ಫೂಲ್ ಮಾಡಲೆಂದು ಮಾಡಿದ ಕರೆ ನಿಜವಾಯಿತೇ ?!?!ಎಂದು ಆಲೋಚಿಸುತ್ತಿದ್ದನು .ಆಗಲೇ ಶಂಕರ ಸಂದೀಪನಿಗೆ ಸಿಹಿ ಹಂಚಲೆಂದು ಬಂದು, ನಡೆದ ವಿಷಯವನ್ನು ಹೇಳುತ್ತಾ,” ಆ ಪುಣ್ಯಾತ್ಮ ನನಗಿಂದು ಫೋನ್ ಕರೆ ಮಾಡಿ ಹೇಳದೆ ಇರುತ್ತಿದ್ದರೆ, ನನಗೆ ಸಿಕ್ಕಿದ ಕೆಲಸವೂ ಹೋಗುತ್ತಿತ್ತು ಮಾರಾಯ. ಅವನು ದೇವರ ಹಾಗೆ ನನಗೆ ಕರೆ ಮಾಡಿ ತಿಳಿಸಿದ. ಅವನಿಗೆ ಕೃತಜ್ಞತೆ ಹೇಳೋಣವೆಂದರೆ ಆ ವ್ಯಕ್ತಿ ಯಾರೆಂಬುವುದು ಇನ್ನೂ ಗೊತ್ತಾಗಿಲ್ಲ” ಎಂದು ಒಂದೇ ಸವನೆ ಖುಷಿಯಲ್ಲಿ ಹೇಳಿದನು. ಆಗ ಸಂದೀಪನಿಗೆ “ಆ ವ್ಯಕ್ತಿ ನಾನೇ ಎಂದು ಹೇಳಬೇಕೆನಿಸಿದರೂ, ತಾನು ಸುಳ್ಳು ಹೇಳಿದ್ದೇನೆ.”ಅದು ಈತನಿಗೆ ಗೊತ್ತಾದರೆ ಎಂದು ಸುಮ್ಮನಾಗುತ್ತಾನೆ.ಶಂಕರನಿಂದ ಸಿಹಿಯನ್ನು ಸ್ವೀಕರಿಸಿ, ಅವನಿಗೆ ಶುಭಾಶಯ ಹೇಳಿದನು ಸಂದೀಪ. ಸರಿ ಎಂದು ಹೊರಟು ನಿಂತ ಶಂಕರ ಹಿಂದೆ ಬಂದು ಸಂದೀಪನಿಗೆ “ನನಗೆ ಗುಡ್ ನ್ಯೂಸ್ ಸಿಕ್ಕಿದ ಹಾಗೆ, ನಿನಗೂ ಸಿಗಲಿ ಕಣೋ” ಎಂದು ಶುಭ ಹಾರೈಸಿ ಹೊರಟನು.

ಸಂದೀಪನಿಗೆ ಈಗ ತಾನು ಎಡವಟ್ಟು ಮಾಡಿದೆನೋ ಎಂದು ಭಯವಾಗತೊಡಗಿತು. ಹೌದು ನನಗೆ ಕೆಲಸ ಸಿಕ್ಕಿದೆ ಎಂದು ಕರೆ ಬಂದಾಗ ನಾನು ಅದನ್ನು ನನ್ನನ್ನು ಫೂಲ್ ಮಾಡಲು ಇರಬಹುದು ಎಂದು ಹೇಳಿ,ಶಂಕರನಿಗೆ ಫೂಲ್ ಮಾಡಲೆಂದು ಕರೆಯನ್ನು ಮಾಡಿದ್ದೆ. ಕಾಕ ತಾಳಿಯವೆಂಬಂತೆ ಅವನಿಗೆ ಮಾಡಿದ ಸುಳ್ಳು ಕರೆ ನಿಜವಾಯಿತು. ಹಾಗಾದರೆ ನನಗೆ ಮಾಡಿದ ಕರೆ ಕೂಡ ನಿಜವಾಗಿರಬಹುದಾ? ಏನು ಮಾಡುವುದು ಈಗ? ನಾನು ಯಾಕೆ ಹೀಗೆ ಮಾಡಿದೆ ?ಹೋಗಿ ಒಮ್ಮೆ ವಿಚಾರಿಸಲಾ? ಎಂದೆಲ್ಲಾ ಆಲೋಚನೆ ಮಾಡಿದನು. “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಏನಾದರೂ ಇರಲಿ.ನಾಳೆ ಹೋಗಿ ವಿಚಾರಿಸೋಣ ಎಂದು ಸಮಾಧಾನ ಪಟ್ಟು, ರಾತ್ರಿ ಊಟ ಮಾಡಿ ಮಲಗಿದವನಿಗೆ ಕಣ್ಣಿಗೆ ನಿದ್ದೆ ಹತ್ತಲಿಲ್ಲ.ಬೆಳಿಗ್ಗೆ ಬೇಗ ಎದ್ದವನೇ, ಸೀದಾ ಕರೆ ಮಾಡಿ ತಿಳಿಸಿದ ತಾಲೂಕು ಕೇಂದ್ರಕ್ಕೆ ಹೋಗಿ ವಿಚಾರಿಸಿದನು. ಅಲ್ಲಿನ ಅಧಿಕಾರಿ “ಹೌದು. ನಿಮಗೆ ನಿನ್ನೇನೆ ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಎಂದಿದ್ದೆನಲ್ಲ. ನಿನ್ನೆ ಕೊನೆಯ ದಿನಾಂಕವಾಗಿತ್ತು .ಇನ್ನೇನು ಮಾಡಲಿ ಎಂದು ಹೇಳಿದಾಗ ಸಂದೀಪನಿಗೆ ತಲೆಯ ಮೇಲೆ ಪರ್ವತವೇ ಬಿದ್ದಂತಾಯಿತು. ಮನಸ್ಸು ಒಳಗೊಳಗೆ ತನ್ನನ್ನೇ ಶಪಿಸತೊಡಗಿತು, ನಾನು ಏಕೆ ಹೀಗೆ ಸಂಶಯ ಪಟ್ಟೆ? ಸಿಕ್ಕಿದ ಕೆಲಸ ಹೋಯಿತಲ್ಲ!! ಇನ್ನೇನು ಮಾಡಲಿ ಎಂದು ಚಿಂತೆ ಮಾಡುತ್ತಿದ್ದನು.

ಆಗ ಅಲ್ಲಿನ ಅಧಿಕಾರಿಗಳು “ನೋಡೋಣ ಇವತ್ತೇ ಕರ್ತವ್ಯಕ್ಕೆ ಹಾಜರಾದ ಪತ್ರವನ್ನು ಬರೆದುಕೊಡಿ ಕಳಿಸಿ ನೋಡುತ್ತೇನೆ,ಸ್ವೀಕರಿಸಿದರೆ ನಿಮ್ಮ ಅದೃಷ್ಟ ಎಂದರು. ” ಸಂದೀಪ ತಾನು ನಂಬಿದ ಹನುಮಂತ ದೇವರಿಗೆ ಮನಸಾರೆ ಸ್ಮರಿಸಿ,ಕರ್ತವ್ಯಕ್ಕೆ ಸೇರಿದ ಪತ್ರವನ್ನು ಬರೆದು ಸಹಿ ಹಾಕಿ ನೀಡಿದನು. ಅಧಿಕಾರಿಗಳು ಅದನ್ನು ಮೇಲಾಧಿಕಾರಿಗಳಿಗೆ ಕಳಿಸಿದರು.ಬೆಳಿಗ್ಗೆ ಹನ್ನೊಂದು ಗಂಟೆಯೊಳಗೆ ಪತ್ರ ಹೋದ ಕಾರಣ ಸ್ವೀಕಾರವಾಯಿತು. ಸಂದೀಪನಿಗೆ ಒಳಗೊಳಗೆ ತಾನು ಮಾಡಿದ ಕೃತ್ಯಕ್ಕೆ ನಗು ಬಂದರೂ, ಅದನ್ನು ಯಾರಲ್ಲಿಯೂ ಹೇಳುವ ಹಾಗಿಲ್ಲ. ತನ್ನ ಮೂರ್ಖತನಕ್ಕೆ ಉಳಿದವರೆಲ್ಲರೂ ತಮಾಷೆ ಮಾಡಿ ಮತ್ತಷ್ಟು ನಗುವರು ಎಂಬ ದೃಷ್ಟಿಯಿಂದ ನಡೆದ ವಿಚಾರವನ್ನು ಯಾರಲ್ಲಿಯೂ ಹೇಳಲಿಲ್ಲ.

ಮರುದಿನ ಅವನ ಊರಿನಲ್ಲಿ ಹಿಂದಿನ ದಿನದಂತೆ ಸಂದೀಪನಿಗೂ ಕೆಲಸ ಸಿಕ್ಕಿದೆಯಂತೆ ಎಂದು ಜನ ಮಾತನಾಡಿಕೊಂಡಾಗ, ಸಂದೀಪನಿಗೆ ಅಭಿನಂದನೆಗಳನ್ನು ತಿಳಿಸಲು ಮರುದಿನ ಬೆಳಿಗ್ಗೆ ಅವನ ಅಭಿಮಾನಿಗಳು,ಗೆಳೆಯರು ಅವನ ಮನೆಗೆ ಬಂದಿದ್ದರು. ಬಂದವರು ಮೊದಲು “ಇದು ಏಪ್ರಿಲ್ ಪೂಲ್ ಅಲ್ಲ ತಾನೇ ?ಯಾಕೆಂದರೆ ನೀನು ಶಂಕರನಿಗೆ ಫೂಲ್ ಮಾಡಿಯೇ ಮಾಡುತ್ತೇನೆಂದು ಪಣತೊಟ್ಟಿದೆಯಲ್ಲ!! ಹಾಗೆ ಎಲ್ಲಿಯಾದರೂ ಸುಳ್ಳು ಹೇಳುತ್ತಿರುವೆಯಾ… ಇಲ್ಲ ತಾನೇ?” ಎಂದು ಅವನನ್ನು ಚುಡಾಯಿಸುತ್ತಾ,ಎಲ್ಲರೂ ಜೋರಾಗಿ ನಕ್ಕರು.ಸಂದೀಪನಿಗೂ ತಾನು ಮಾಡಿಕೊಂಡಿದ್ದ ಎಡವಟ್ಟಿಗೆ ಒಳಗೊಳಗೆ ನಗು ಬರುತ್ತಿತ್ತು
ಎಲ್ಲರೂ ಸಂದೀಪನಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಎಪ್ರಿಲ್ ಫೂಲ್ ದಿನ ಎಲ್ಲರೂ ಮಜ ಮಾಡಿದರು.

About The Author

1 thought on ““ಏಪ್ರಿಲ್ ಫೂಲ್” ಸಣ್ಣಕಥೆ ಡಾ.ಸುಮತಿ ಪಿ ಅವರಿಂದ”

Leave a Reply

You cannot copy content of this page

Scroll to Top