ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇವರೇ, ಧರ್ಮವೇ, ನಿಮ್ಮನ್ನೆ ನಂಬಿದಾ
ಬದುಕೀಗ ಬಯಲಾಚೆ ಬಿಕ್ಕಳಿಸಿ ನರಳುತಿದೆ
ಅದೆಂಥಾ ಮತಿಹೀನ ಮನಸಿಟ್ಟು ಭೂಮಿಯಲಿ
ಈ ರಕ್ತ ಪಿಪಾಸಿನ ಪಿಂಡಗಳ ಹುಟ್ಟಿಸಿದೆ

ಧರ್ಮಕ್ಕು ಹಸಿ ರಕ್ತ ತರ್ಪಣವೆ ಕಣ್ಣೆದುರು
ಭಾರವಿದು ನಮ್ಮೊಡಲು ಸೈತಾನ ನಕ್ಕಂತೆ
ಮತಿಕೆಟ್ಟ ಮಂಗಗಳ ಬಂದೂಕು ಚೆಲ್ಲಾಟ
ಬದುಕನ್ನು ಬಯಲಲ್ಲಿ ಮುಕ್ಕಿತೇ ವಿಧಿಯಾಟ

ಧರ್ಮದಾ ಸೊಕ್ಕಿನಲಿ ಹಿಂಸೆಯಲಿ ನಕ್ಕವರ
ಎದೆಯಲ್ಲಿ ಒಲವಿನ ಒಂದಕ್ಷರ ಹುಟ್ಟಿಸದೆ
ನೆತ್ತರಲಿ ರಣಕೇಕೆ ಹಾಕಿದ ಪಿಶಾಚಿಗಳ
ಮೃಗತ್ವವ ನೆನೆದು ಕಣ್ಣಲ್ಲಿ ರಕ್ತ ಉಕ್ಕಿದೆ

ಕರುಣೆ ದಯೆ ಇಲ್ಲದಿಹ ನರ ರೂಪ ದೈತ್ಯರನು
ಹೊತ್ತಿಹಳೆ, ಹೆತ್ತಿಹಳೆ ಭೂಮಾತೆ ರಕ್ಕಸಿಯೆ
ಪಾತಕರ ಪಿಂಡವನು ಬೆಳೆಸಿದರೆ ಪಾಪಿಗಳು
ಮಾತೆಲ್ಲ ಮೌನದಲಿ ಧಗಧಗಿಸಿ ನಿರುತ್ತರ..

ಅತ್ತರೂ ಹಗುರ ಆಗಲಾರದು ಒಳಮನ
ನೆತ್ತರನು ಬಸಿದವರ ಸಂತತಿಯ ನಿರ್ನಾಮ
ಧರ್ಮವೇ ಮಾಡಿದರೆ ಧರ್ಮವಾದಿತು ನಿಜ
ಅಧರ್ಮದ ಕಂಸರಿಗೆ ವಿಶ್ವವೇ ಉತ್ತರಿಸಿ

ಮುಗ್ದರನು ಪೊರೆಯದವ ನಿರ್ದೋಷಿ,ನಿಷ್ಪಾಪಿ
ಜೀವಿಗಳ ಸಂಕಟದಲಿ ನಕ್ಕವರ ರಕ್ಷಕನು
ರಣಹೇಡಿ ಪಾಪಿಗಳ ಪಾತಕವ ಬೆಂಬಲಿಸಿದ
ಅಸಮರ್ಥ ದೇವರನ್ನೇ ಕೊಂದುಬಿಡಿ ಅವನೇಕೆ


About The Author

Leave a Reply

You cannot copy content of this page

Scroll to Top