ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಲ್ಯದಲಿ ಅಮ್ಮನ ಕೈತುತ್ತಲಿ ಅಮೃತವಿತ್ತು
ಚಂದಿರನ ಬೆಳದಿಂಗಳ ಬೆಳಕು ತಂಪಾಗಿತ್ತು
ಅಜ್ಜಿಯ ಕಥೆಗಳಲಿ ಬದುಕಿನ ನೀತಿಯಿತ್ತು
ಅಜ್ಜನ ಛಡಿಏಟಲಿ ವಿದ್ಯೆಯ ಘಮವಿತ್ತು

ತಾಯಿಯ ಸೆರಗಿನಲಿ ಪ್ರೀತಿಯ ಜೇನಿತ್ತು
ತಂದೆಯ ಪ್ರೀತಿಯಲಿ ಹರುಷದ ಹೊನಲಿತ್ತು
ಅಣ್ಣನ ಕಾಳಜಿಯಲಿ ಭರವಸೆಯ ಬಲವಿತ್ತು
ಸಂತೋಷದ ಸಂಭ್ರಮದಲಿ ಮನ ತುಂಬಿತ್ತು

ಅದೆಷ್ಟು ಸುಂದರ ಬಾಲ್ಯದ ಆ ದಿನಗಳು
ಗೆಳೆಯರ ಸಂಗಡ ಸವಿ ಸವಿ ಮಾತುಗಳು
ತರಲೆ ತಂಟೆಗಳು ಮೋಜು ಮಸ್ತಿಗಳು
ಒಂದೆ ಎರಡೆ ಮಧುರ ರಸ ಘಳಿಗೆಗಳು

ಕಟ್ಟಿಗೆ ಕದ್ದು ಕಾಮಣ್ಣನ ಸುಟ್ಟು ಹಾಕಿದ್ದು
ನಿಗಿ ಕೆಂಡದಲಿ ಕಡಲೆ ಸುಟ್ಟು ಸವಿದದ್ದು
ಬಣ್ಣದ ಓಕುಳಿಯ ಎರಚಿ ಕುಣಿದಾಡಿದ್ದು
ರಂಗಾದ ಮೊಗವ ಕನ್ನಡಿಯಲಿ ಕಂಡು ನಕ್ಕಿದ್ದು

ಜಾತ್ರೆಯಲಿ ತುತ್ತೂರಿ ಊದಿದ ಆನಂದವು
ಬಾನೆತ್ತರಕೆ ಗಾಳಿಪಟ ಹಾರಿಸಿದ ಸಂತಸವು
ಒಟ್ಟಾಗಿ ಜೋಕಾಲಿಯ ಜೀಕಿದ ಸಂಭ್ರಮವು
ಮಳೆಯಲ್ಲಿ ಸುತ್ತಾಡಿ ನಲಿದ ಸುಂದರ ಕ್ಷಣವು

ಮನದಾಳದ ನೆನಪಿನ ಬಿಚ್ಚಿಟ್ಟ ಬುತ್ತಿಯು
ಬಲು ಸೊಗಸು ನೆನಪಿಸಿಕೊಂಡು ಸವಿಯಲು
ಬಾಳಿನ ಸಿಹಿ ಕಹಿ ಘಟನೆಗಳ ಸುರುಳಿಯು
ಚೈತ್ರದ ಚೈತನ್ಯ ತುಂಬಿದ ಹಸಿರ ಹೊನಲು

About The Author

1 thought on “ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಬಿಚ್ಚಿಟ್ಟ ಬುತ್ತಿ”

Leave a Reply

You cannot copy content of this page

Scroll to Top