ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇರುವುದೊಂದೇ ಭೂಮಿ” ಹೆತ್ತ ತಾಯಿ ಮತ್ತು ಹೊತ್ತ ಭೂಮಾತೆ ಯ ಮಹತ್ವವನ್ನು ವರ್ಣಿಸಿದಷ್ಟೂ ಕಡಿಮೆ. ಪದಗಳು ಸಾಲವು.” ಜನನೀ ಜನ್ಮ ಭೂಮೀಶ್ಚ ಸ್ವರ್ಗಾದಪಿ ಗರೀಯಸಿ” ಎಂಬ ಉಕ್ತಿಯಲ್ಲಿ ನಮಗೆ ಭೂಮಿಯ ಮಹತ್ವ ತಿಳಿಯುತ್ತದೆ. ಪಂಚಭೂತಗಳಲ್ಲಿ ಒಂದಾದ ಭೂಮಿ ಮಾತ್ರ ಸಕಲ ಜೀವಿಗಳಿಗೆ ವಾಸಿಸಲು ಯೋಗ್ಯವಾದ ಗ್ರಹ ಎಂಬುದು ವೈಜ್ಞಾನಿಕವಾಗಿ ಸತ್ಯ. ಇದನ್ನು ನಾವು ಕಣ್ಣಾರೆ ಕಾಣುತ್ತಿದ್ದೇವೆ. ಸುಂದರ ವಸುಧೆಯಲ್ಲಿ ಚಂದದ ಬೆಸುಗೆಯಿದೆ. ನೀರು, ಗಾಳಿ ,( ಪ್ರಾಣವಾಯು), ಬಿಸಿಲು, ಮಣ್ಣು( ಭೂಮಿ), ಸಸ್ಯ, ಪ್ರಾಣಿ,ಪಕ್ಷಿ ಸಂಕುಲಗಳ ಹಿತವಾದ, ಸಮತೋಲಿತ ಬೆಸುಗೆಯನ್ನು ಭೂಮಿಯಮೇಲೆ ಕಾಣುತ್ತೇವೆ. ಕಾಂತೀಯ ಗುಣಗಳನ್ನು ಹೊಂದಿದ ಭೂಮಿ ಮಾತ್ರ ಜೀವಸೃಷ್ಟಿಯನ್ನು ಮಾಡಬಲ್ಲದು. ಭೂಮಿಯಲ್ಲಿ ಜೀವ ವೈವಿಧ್ಯತೆಯಿದೆ, ಅವುಗಳ ಸುಮಧುರ ಸಂಗಮವಿದೆ. ಚರಾಚರಗಳಿಗೆ ಚೈತನ್ಯ ಶಕ್ತಿ ಭೂಮಿ ನೀಡುತ್ತದೆ.ಭೂಮಿ ನಮ್ಮ ತಾಯಿ ಎಂಬ ಭಾವನಾತ್ಮಕ ಸಂಬಂಧ ನಮ್ಮಲ್ಲಿ ಆಳವಾಗಿ ಬೇರೂರಬೇಕು. ಇದು ಕೇವಲ ಗ್ರಹ ಎಂಬ ಕಲ್ಪನೆ ಹೋಗಿ ಭಾವನಾತ್ಮಕ ಬಂಧ ಬೆಳೆದಾಗ ತಾಯಿಯಮಹತ್ವದ ಅರಿವಾಗುತ್ತದೆ. ತಾಯಿ ಇಲ್ಲದಿರೆ ನಾವಿಲ್ಲ ಹಾಗೇ ಭೂಮಾತೆಯಿಲ್ಲದಿದ್ದರೆ ಒಂದು ಹುಲ್ಲುಕಡ್ಡಿಯಾದಿಯಾಗಿ ಜೀವಸಂಕುಲವಿರಲು ಸಾಧ್ಯವಿಲ್ಲ.
ಭೂಮಿಯ ಮಹತ್ವವನ್ನು ತಿಳಿದ ಪ್ರಜ್ಞಾವಂತ ಮಾನವರು ಸ್ವಾರ್ಥದ ಬೆಂಬತ್ತಿ ಭೂಮಿಯ ಜೀವಸಂಕುಲದ ಬೆಸುಗೆಯನ್ನು ಬೇರ್ಪಡಿಸ ಹೊರಟಿರುವುದು ವಿಪರ್ಯಾಸ.
ಭೂ, ಜಲ ವಾಯು ಎಲ್ಲೆಡೆಯೂ ಪ್ಲಾಸ್ಟಿಕ್ ರಾರಾಜಿಸುತ್ತಿದೆ. ಹೆದ್ದಾರಿಗಳ ಇಕ್ಕೆಲಗಳಲ್ಲಿ ಕೆಲವೊಂದು ಕಡೆ ಎರ್ರಾ ಬಿರ್ರಿಯಾಗಿ ಎಸೆದ ಪ್ಲಾಸ್ಟಿಕ್ ನೋಡಿದಾಗ, ನೀರಿನಲ್ಲಿ ಕರಗದ, ಮಣ್ಣಿನಲ್ಲಿ ಲೀನವಾಗದ ಈ ಪ್ಲಾಸ್ಟಿಕ್ ಎಂಬ ವಿಷವನ್ನು ಭೂಮಿಗೆ , ನೀರಿಗೆ, ಗಾಳಿಗೆ ಹಾಕಿ ಮೂಕ ಪ್ರಾಣಿಗಳ ವನಾಶಕ್ಕೆ, ಜೀವಸಂಕುಲದ ಅಳಿವಿಗೆ ನಾವೇ ಕಾರಣರಾಗುತ್ತಿರುವುದು ಶೋಚನೀಯ. ಇರುವ ಭೂಮಿಯನ್ನು ರಕ್ಷಿಸಿಕೊಳ್ಳದೆ ಉಳಿಗಾಲವಿಲ್ಲ. ಎಲ್ಲ ಸಂಪದವೂ ಇಲ್ಲಿಯಷ್ಟು ನಿರಾಳವಾಗಿ ಇನ್ನೆಲ್ಲಿ ಸಿಕ್ಕೀತು? ಕೇವಲ ಒಂದು ವಸ್ತು, ಗ್ರಹದಂತೆ ಭೂಮಿಯನ್ನು ಅರಿತರೆ ಮಣ್ಣು ನೀರು ಗಾಳಿಯ ಮೇಲೆ ಪ್ರೀತಿಬರಲು ಸಾಧ್ಯವೇ? ಇಲ್ಲ.

ಭೂಮಿ ಎಂಬುದು ಜೀವವಿರದ ಗ್ರಹವಲ್ಲ, ಇದು ಜೀವಿಗಳಿಗೆ ಜೀವನೀಡುವ ಸಂಜೀವಿನಿ ಎಂಬುದು ನಮ್ಮ ಅಂತರಾತ್ಮದಲ್ಲಿ ತುಂಬಿದಾಗ ಮಾತ್ರ ಭೂಮಿಯರಕ್ಷಣೆ ನಮ್ಮಿಂದ ಸಾಧ್ಯ. ಆದರೆ ಕಾಡಿನ ನಾಶ, ಮಣ್ಣು, ನೀರು, ಗಾಳಿಯ ಮಾಲಿನ್ಯ, ಗಳಿಂದ ತಾಯಿಯ ಗರ್ಭವನ್ನು ಸೀಳುವ ಪರಿಸ್ಥಿತಿಗೆ ಮಾನವ ಬಂದಿದ್ದಾನೆ. ಭೂದೇವಿ ತನ್ನ ಸಮತೋಲನವನ್ನು ಕಳೆದುಕೊಳ್ಳಲು ನರನ ದುರಾಸೆ ಕಾರಣವಾಗಿದೆ. ತಾಯಿಯ ಮಹತ್ವವನ್ನು ಅರಿತ ಮಕ್ಕಳಂತೆ ಮಾನವ ವರ್ತಿಸುತ್ತಿಲ್ಲ.ಇದರಿಂದಾಗಿ ಭೂಮಿಯನ್ನು ವಿಕೋಪಗಳು, ಪಿಡುಗುಗಳು, ಆವರಿಸಿಕೊಳ್ಳುತ್ತಿವೆ. ತನ್ನ ಪ್ರಾಣಕ್ಕೆ ತಾನೇ ಸಂಚಕಾರ ತಂದುಕೊಳ್ಳತ್ತಿರುವ ಮಾನವನಿಗೆ ಇನ್ನಾದರೂ ಮುಂದಿನ ಪೀಳಿಗೆಗಾಗಿ “ಇರುವುದೊಂದೇ ಭೂಮಿ” ಎಂಬ ಅರಿವು ಮೂಡಬೇಕಾದ ಅನಿವಾರ್ಯತೆ, ಅಗತ್ಯತೆ, ಜವಾಬ್ಧಾರಿ ಇದೆ.ಅನಾದಿಕಾಲದಿಂದ ಹಿತವಾದ ಬೆಸುಗೆಯಲ್ಲಿರುವ ವಸುಧೆಯನ್ನು ಹಾಗೆಯೇ ಉಳಿಸಲು ನಾವೆಲ್ಲ ಕಟಿಬದ್ಧರಾಗೋಣ


About The Author

Leave a Reply

You cannot copy content of this page

Scroll to Top