ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

“ಆಸೆಗೆ, ಆಮಿಷಕ್ಕೆ, ಹೊನ್ನು-ಹೆಣ್ಣು- ಮಣ್ಣಿಗೆಂದು ಸತ್ತುದು ಕೋಟಿ ಕೋಟಿ! ಗುಹೇಶ್ವರ ನಿಮಗಾಗಿ ಸತ್ತವರನಾರನೂ ಕಾಣೆ!” ಎಂಬೀ ಅಲ್ಲಮಪ್ರಭುಗಳ ವಚನವ ಮುಖ್ಯ ಭೂಮಿಕೆಯನ್ನಾಗಿರಿಸಿಕೊಂಡು ಮುಂದಡಿಯಿಡುತ್ತೇನೆ..,

ಈ ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ ; ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರl ತನ್ನ ಗಂಡನಿಗೆ ತಿಳಿಹೇಳಿದ ಆಯ್ದಕ್ಕಿ ಲಕ್ಕಮ್ಮಳ ನಿಲುವು ನನ್ನೀ ಲೇಖನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ ಎಂದೇ ಹೇಳಬಹುದು.

ಆಸೆಯ ಬಗೆಗಿನ ಕನ್ನಡದ ಕೆಲವು ಚಿತ್ರಗೀತೆಗಳು ಸ್ಮೃತಿಪಟಲದಲ್ಲಿ ಸುಳಿದು ಹೀಗೆ ಬಂದು ಹಾಗೆ ಹೋದವು ಅವುಗಳನ್ನು ನಿಮ್ಮ ಕಿವಿದಾವರೆಗಳಿಗೆ ರವಾನಿಸುವುದಾದರೆ ;

“ಆಸೆಯ ಭಾವ ಒಲವಿನ ಜೀವ.., ಒಂದಾಗಿ ಬಂದಿದೆ, ಹೊಸ ಬಗೆ ಗುಂಗಿನ ನೀಷೆ ತಾನೇರಿದಂತಿದೆ” – ವಿಜಯನಾರಸಿಂಹ

“ಆಸೆ ಹೇಳುವಾಸೆ ಆಸೆ ಹೇಳುವಾಸೆ, ಹೇಳಲಾರೆ ನಾನು ತಾಳಲಾರೆ ನನ್ನ ಇನಿಯನಾಟಾ ಈ ಕೆನ್ನೆಗೇ” – ಚಿ. ಉದಯಶಂಕರ

“ನನ್ನಾಸೆ ಮಲ್ಲಿಗೆ ಬರುತಾಳಮ್ಮ ನಮ್ಮೂರ ಜ್ಯೋತಿಯು ಅವಳೆನಮ್ಮ ಬಂಗಾರದಂತ ಬೊಂಬೆಯೂ” –  ಎಸ್ ನಾರಾಯಣ್

“ಹಕ್ಕಿಯ ಹಾಡಿಗೆ ತಲೆ ದೂಗುವ ಹೂ ನಾನಾಗುವ ಆಸೆ ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ!” – ಕೆ ಎಸ್ ನರಸಿಂಹಸ್ವಾಮಿ

ಹೀಗೆ ಸಾಗುತ್ತದೆ ಆಸೆಯ ಮೆರವಣಿಗೆ ವಿಷಯ ಅದಲ್ಲ, ಮತ್ತೇನು ಎನ್ನುವುದಾದರೆ? ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಿ ಬಿ.ಕಾಂ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ನಿಗದಿತ ಪಠ್ಯ ಕ್ರಮದಲ್ಲಿನ ಜನಪದ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ‘ಮಲ್ಲೇಶಿ ಮತ್ತು ಪಾರ್ವತಿ’ ಲಾವಣಿಯನ್ನು ತರಗತಿಯ ಪಾಠ ಪ್ರವಚನದಿ ಮೊದಲಿನ ಎರಡು ಸಾಲುಗಳನ್ನು ಅರ್ಥೈಸುವ – ಸಂದರ್ಭ : ಶಿವ ಪಾರ್ವತಿ ದಂಪತಿಗಳಿಬ್ಬರ ನಡುವಿನ ಸರಸ-ಸಲ್ಲಾಪ, ಇರುಸು-ಮುರುಸು, ಮುನಿಸಿನ ಸಂಭಾಷಣೆ ಹೀಗಿದೆ:

ನಟ್ಟನಡುರಾತ್ರಿ ನನ್ನೊಬ್ಬಳನ್ನೇ ಬಿಟ್ಟು ಎದ್ದು ಮೋಹನಾಂಗ ಯಾವ ಮುದ್ದು ಮಾನಿನಿಯ ಬಳಿಗೆ ಕದ್ದು ಹೋಗಿದ್ದೆ, ಈಗ ಎದ್ದು ಬಂದೆಯಾ? ಎಂದು ಅನುಮಾನಿಸುತ್ತಾ ಶಿವನನ್ನು ಭದ್ರೆ ಪಾರ್ವತಿ ತಡೆದು ವಿಚಾರಿಸುತ್ತಾಳೆ ; ಆಗ ಮಲ್ಲೇಶಿಯು ಇಲ್ಲ ಇಲ್ಲ ನಾನು ಯಾರ ಬಳಿಯೂ ಹೋಗಿಲ್ಲ, ರಾತ್ರಿ ನಡುಗದ್ದಲವಾಗಲೂ ಅಂದ್ರೆ ಹೊಟ್ಟೆ ತೊಳಸಿದಂತಾಗಿ ಬಯಲ್ಕಡೆ ಹೊಗಿದ್ದೆ ಎಂದು ಹೇಳಲು..,

“ಸುಳ್ಳ ಹೇಳಲಿ ಬ್ಯಾಡ ಸುಳುವ ನಾ ಬಲ್ಲೆನು, ಕಳ್ಳ ಬುದ್ದಿಗಳ ಬಿಡಿ, ಮಂಡಿಯ ಈ ಗಾಯವೇನೋ ಮಲ್ಲೇಶ ; ಮಲ್ಲೇಶ ಮಂಡೀಯ ಗಾಯವೇನೊ?”  ಎಂದು ಕೇಳಲು ಅದಕ್ಕೆ ಉತ್ತರವಾಗಿ – ಅರ್ಜುನನ ಕೂಡೆ ಯುದ್ಧ ಮಾಡುವಾಗ ವದಗೀದ ಗಾಯ ಕಣೇ!” ಎನ್ನಲು ಶಿವಾರ್ಜುನರ ನಡುವೆ ಯುದ್ಧ[ಕಾಳಗ] ವಾಯಿತೇ? ಹಾಗಾದರೆ ಆ ಯುದ್ಧದ ಹಿನ್ನಲೆ ಏನಾಗಿತ್ತು? ಯುದ್ಧದ ಗತಿಯ ಬಗ್ಗೆ ಏನೊಂದನ್ನೂ ಹೇಳದೆ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಏನೋ ಒಂದು ಸುಳ್ಳನ್ನು ಹೇಳಿ ಮರೆಮಾಚಿದ ಎಂದು ಹೇಳಿ ತೇಲಿಸಿಕೊಂಡು ಮುನ್ನಡೆದರೆ ಅದು ಆ ಅಧ್ಯಾಪಕ ತನ್ನ ವೃತ್ತಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಡುವ ಮೋಸವೆ ಆಗಿದೆ, ಅಲ್ಲದೆ ಪಠ್ಯಕ್ಕೆ ನ್ಯಾಯ ಒದಗಿಸಿದಂತೆ ಆಗುವುದಿಲ್ಲ, ಅಂತಹ ಜಾಯಮಾನ ನನ್ನದಲ್ಲವಾದ್ದರಿಂದ ಆ ಬಗ್ಗೆ ತಡಕಾಡಿದಾಗ ಮಲ್ಲೇಶಿ ಅರ್ಥಾತ್ ಶಿವ ನೀಡಿದ ಸಬೂಬ್ಗೆ ಪುರಾವೆಯೂ ಶಿವಪುರಾಣದಿ ಇಂದ್ರಕೀಲ ಭಾಗ ಎರಡಲ್ಲಿ ಉಲ್ಲೇಖಿತ ಶಬರಾರ್ಜುನರ ಕಾಳಗ ಪ್ರಸಂಗದಿ ದೊರೆಯುತ್ತದೆ :

ವೇದವ್ಯಾಸರಿಂದ ಉಪದೇಶಿಸಲ್ಪಟ್ಟ ದೇವದೇವನಾದ ಪರಮೇಶ್ವರನ ಆ ದಿವ್ಯ ಮಂತ್ರವನ್ನು ಜಪಿಸುತ್ತ, ಶಿವನನ್ನು ಧ್ಯಾನಿಸುತ್ತಾ, ನಿರಾಹಾರನಾಗಿ, ನಿಂತಲ್ಲಿಂದ ಕದಲದೇ ಉಗ್ರವಾದ ತಪಸ್ಸನ್ನು ಆಚರಿಸತೊಡಗಿದನು. ತಪೋಶಕ್ತಿಯು ಜ್ವಾಲೆಯಾಗಿ ಇಂದ್ರಕೀಲ ಪ್ರದೇಶವನ್ನೆಲ್ಲ ಸುಡತೊಡಗಿತು, ಋಷಿ ಮುನಿಗಳು ಕಂಗಾಲಾಗಿ ಶಿವನಬಳಿಗೆ ಹೋಗಿ, ನಮ್ಮ ಉಳಿವಿಗಾಗಿ ಕೂಡಲೇ ಅರ್ಜುನನಿಗೆ ದರುಶನವಿತ್ತು ಆಶೀರ್ವದಿಸಬೇಕಾಗಿ ಬೇಡಿಕೊಂಡರು ; ಮೂಖಾಸುರನೆಂಬ ರಕ್ಕಸ ವರಾಹ ರೂಪು ತಾಳಿ ಆಗಾಗ್ಗೆ ಋಷಿ ಮುನಿಗಳು ಮೇಲೆ ದಾಳಿಮಾಡಿ ತಿವಿದು, ಕೊಂದು ಹಿಂಸಿಸುತ್ತಿದ್ದ ಅವನ ಉಪಟಳದ ಬಗ್ಗೆಯೂ
ಈ ಹಿಂದೆಯೇ ದೂರನ್ನೂ ಸಲ್ಲಿಸಿದ್ದರು.

ಈಶ್ವರನು ಮಡದಿಯಾದ ಪಾರ್ವತಿಯನ್ನು ಕರೆದು ಅವಳಿಗೆ ತನ್ನ ಮನದ ಸಂಕಲ್ಪವನ್ನು ತಿಳಿಸಿ, ಅರ್ಜುನನಿಗೆ ಅನುಗ್ರಹಿಸುವ ಮೊದಲು ಆತನನ್ನು ಒಮ್ಮೆ ಪರೀಕ್ಷಿಸುವ ಮನಸ್ಸಾಗಿದೆ ನನಗೆ ಎನ್ನುತ್ತಾನೆ. ಆಗ ಪಾರ್ವತಿಯು “ಇದುವರೆಗೂ ಅರ್ಜುನನು ಯುದ್ಧದಲ್ಲಿ ಯಾರಿಗೂ ಸೋಲದವನಂತೆ, ಸೋತು ಯಾರಿಗೂ ಬೆನ್ನು ತೋರಿಸದೇ ಇರುವ ಅಂತಹ ವೀರ ಅರ್ಜುನನ ಬೆನ್ನು ನೋಡಬೇಕೆಂಬ ಆಸೆ ನನಗೆ” ಎನ್ನುತ್ತಾಳೆ.

ಈ ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ? ಈಸಕ್ಕಿಯಾಸೆ ನಿಮಗೇಕೆ? ಎಂದು ಲಕ್ಕಮ್ಮ ಗಂಡನಿಗೆ ಪ್ರಶ್ನಿಸುವ ನಲಿವು! ಶಿವಭಕ್ತರಿಗಿಲ್ಲದಾ ಆಸೆ, ಶಿವನಿಗೆ ಯಾಕೆ ಬಂತು? ಸೋಲರಿಯದ ವೀರನ ಬೆನ್ನು ನೋಡಬೇಕೆಂಬ ಆಸೆ ಪಾರ್ವತಿದೇವಿಗೆ ಏಕೆ ಬಂತು? ಆಸೆ ಎಂಬುದು ಯಾರನ್ನೂ ಬಿಟ್ಟಿಲ್ಲವೆನ್ನಿ! ಅದೇನೇ ಇರಲಿ ಹೆಂಡತಿಯ ಮನೋಇಚ್ಛೆಯನ್ನು ಈಡೇರಿಸುವುದು ಗಂಡನ ಕರ್ತವ್ಯವಲ್ಲವೇ?
ಅದಕ್ಕೆ ಈಶ್ವರನು “ಹಾಗಿದ್ದರೆ ನನ್ನೊಡನೆ ನೀನೂ ಕೂಡಾ ಬಾ, ಮಾತ್ರವಲ್ಲದೇ ನಂದಿ, ಗುಹ, ಗಣಪ ಹಾಗೂ ಸಮಸ್ತ ಪ್ರಮಥಾದಿ ಗಣಗಳೂ ಹೊರಡಿ, ನಾವೆಲ್ಲರೂ ಬೇಟೆಗಾರರಂತೆ ವೇಷ ಧರಿಸಿಕೊಂಡು ಹೋಗೋಣ” ಎಂದು ಅಪ್ಪಣೆ ಮಾಡುತ್ತಾನೆ.

ಅಂತೆಯೇ  ಶಿವ-ಪಾರ್ವತಿ, ನಂದಿ, ಗುಹ, ಗಣಪ, ಸಮಸ್ತ ಪ್ರಥಮಾದಿ ಗಣಂಗಳೆಲ್ಲರೂ ಬೇಡ/ಶಬರ ವೇಷದಿ ಮಲ್ಲೇಶಿ – ಪಾರ್ವತಿ ಹೆಸರಿನಲ್ಲಿ ಭೂಲೋಕದ ಕೀಲಪರ್ವತಕ್ಕೆ ಬಂದು ಅಲ್ಲಿ ಮೂಕಾಸುರನ ಸಂಹಾರ ಅರ್ಜುನನ ತಪೋನಿಷ್ಠೆ ಹಾಗೂ ಭಕ್ತಿಯ ಪರೀಕ್ಷೆಯು ಒಟ್ಟಿಗೆ ಸಾಗುತ್ತದೆ.

ಶಿವಾರ್ಜುನರ ಬಾಣಗಳ ಹೊಡೆತಕ್ಕೆ ಸಿಕ್ಕು ಸತ್ತುಹೋದ ಬೇಟೆಯ ಹಂದಿಗಾಗಿ ಶಿವಾರ್ಜುನರ ನಡುವೆ ಘನಘೋರ ಕಾಳಗವಾಗುತ್ತದೆ, ಬಿಲ್ವಿದ್ಯೆ, ಖಡ್ಗ ಪ್ರಯೋಗ, ಘಾಂಡೀವದಿಂದ ಹೊಡೆಯಲು ಮುಂದಾದ, ಕೊನೆಗೆ ನಿರಾಯುಧನಾದ ಅರ್ಜುನ ಮಲ್ಲಯುದ್ಧಕ್ಕೇ ಇಳಿಯುತ್ತಾನೆ, ಶಿವನು ಹಾಕಿದ ಪಟ್ಟು ನೀಡಿದ ಪೆಟ್ಟುಗಳಿಂದ ನೆಲಕ್ಕೆ ಉರುಳಿದ, ಬೋರಲಾಗಿ ಕವುಚಿ ಬಿದ್ದಿರುವ ಅರ್ಜುನನ ಬೆನ್ನಿನ ಮೇಲೆ ತನ್ನ ಕಾಲನ್ನು ಇಟ್ಟು ಒತ್ತುತ್ತಾನೆ. ಪರಶಿವನ ಪದಾಘಾತವನ್ನು ತಾಳಲಾರದೇ ಅರ್ಜುನನ ಬಾಯಿಯಿಂದ ರಕ್ತ ಒಸರಲಾರಂಭಿಸುತ್ತದೆ, ಶಿವನು ಪಾರ್ವತಿಯನ್ನು ಬಳಿಗೆ ಕರೆದು “ನೋಡು, ನಿನ್ನ ಭಕ್ತನ ಬೆನ್ನನ್ನು ನೋಡು” ಎಂದು ಆಕೆಗೆ ಅರ್ಜುನನ ಬೆನ್ನನ್ನು ತೋರಿಸುತ್ತಾನೆ. ಬಾಯಿಯಿಂದ ರಕ್ತ ಒಸರುತ್ತಾ ಕವುಚಿ ಬಿದ್ದಿರುವ ಪಾರ್ಥನನ್ನು ಕಂಡು ಪಾರ್ವತಿಗೆ ಮರುಕವುಂಟಾಗುತ್ತದೆ. ಅವಳು “ಸಾಕು, ಇನ್ನು ಯುದ್ಧ ಸಾಕು. ನನ್ನಿಂದ ಈ ದೃಶ್ಯ ನೋಡಲಾಗುತ್ತಿಲ್ಲ” ಎನ್ನುತ್ತಾಳೆ. ಪರಶಿವನು ಕೂಡಲೇ ಪಾರ್ಥನ ಬೆನ್ನಿನ ಮೇಲೆ ಇಟ್ಟಿದ್ದ ಕಾಲನ್ನು ತೆಗೆದು ತಾತ್ಸಾರದಿಂದ “ಹೋಗು, ಬದುಕಿಕೋ ಹೋಗು” ಎನ್ನುತ್ತಾ ಬದಿಗೆ ಸರಿಯುತ್ತಾನೆ.

ಸೋಲನ್ನೊಪ್ಪಿಕೊಳ್ಳದ ಅರ್ಜುನ, ಆ ಶಬರನನ್ನು ತಡೆದು ಸ್ವಲ್ಪ ಸಮಯ ಕೊಡು ಮತ್ತೆ ಕಾದಾಡುವ ಎಂದು – ಸನಿಹದಲ್ಲೇ ಇರುವ ತೊರೆಯಲ್ಲಿ ಮಿಂದು ಶುಚಿರ್ಭೂತನಾಗಿ ಬಂದು, ಮಣ್ಣಿನಿಂದಲೇ ಶಿವಲಿಂಗವೊಂದನ್ನು ಮಾಡಿ. ಅಕ್ಕ ಪಕ್ಕದಲ್ಲೇ ಇರುವ ಬಿಲ್ವಪತ್ರೆ ಹಾಗೂ ಪುಷ್ಪಗಳನ್ನು ಕೊಯ್ದು ಮಾಲೆ ಮಾಡಿ ಅದನ್ನು ಆ ಶಿವಲಿಂಗಕ್ಕೆ ಅರ್ಪಿಸಿ ಪೂಜೆಯನ್ನು ಸಲ್ಲಿಸುತ್ತಾನೆ. “ಓ ಮಹಾದೇವ, ಶಂಭೋ ಶಂಕರಾ ನನಗೆ ಜಯವನ್ನು ಕರುಣಿಸು” ಎನ್ನುತ್ತಾ ಶಿವಲಿಂಗಕ್ಕೆ ಉದ್ದಂಡವಾಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ.

ಮತ್ತೆ ಯುದ್ಧಕ್ಕೆ ನಿಲ್ಲುತ್ತ ಶತಾಯ ಗತಾಯ ಪ್ರಯತ್ನಿಸಿ ಸೋತು ಸುಣ್ಣವಾಗುತ್ತಾನೆ, ಆಗ ನಗುತ್ತಾ ನಿಂತ ಶಬರ ದಂಪತಿಗಳು ಸಾಕಿನ್ನು ಪರೀಕ್ಷೆ ಎಂದು ಪ್ರಸನ್ನರಾಗುತ್ತಾರೆ ; ಕಾಳಗದಿ ಅರ್ಜುನ ಸೋತನಾದರೂ ಭಕ್ತಿಪರೀಕ್ಷೆಯಲ್ಲಿ ಅವನು ಗೆದ್ದಿದ್ದ! ಶಿವನೇ ಸೋತು ಏನು ವರಬೇಕು ಎಂದಾಗ? ಶಿವನಿಂದ ಪಾಶುಪತಾಸ್ತ್ರವನ್ನು ಬೇಡಿ ಪಡೆಯುತ್ತಾನೆ, ಪಾರ್ವತಿಯೂ ಈತನ ಭಕ್ತಿಗೆ ಮೆಚ್ಚಿ ಅಂಜನಾಸ್ತ್ರವನ್ನು ದಯಪಾಲಿಸುತ್ತಾಳೆ, ನಂದಿ, ಗುಹ, ಗಣಪರು ವಿವಿಧ ಅಸ್ತ್ರಗಳನ್ನು ನೀಡಿ ಅರಸುತ್ತಾರೆ.  

 ಹೀಗೆ ಪಠ್ಯವು ವಿಸ್ತಾರಗೊಳ್ಳುತ್ತಾ ಸಾಗುತ್ತದೆ, ಇದನ್ನೇ ನಾವು ಕಾವ್ಯದ ಶಕ್ತಿ ಎಂದು ಕರೆದಿರುವುದು, ಕಾವ್ಯದ ಆಳಕ್ಕೆ ಇಳಿದಾಗಲೇ ನಮ್ಮಲ್ಲಿ ಏನೋ ಒಂದು ರೀತಿಯ  ನಿರಾಳ ಭಾವ ತಾಳುತ್ತೇವೆ ಅದನ್ನೇ ನಾವು ಕಾವ್ಯ ಪ್ರಯೋಜನ ಎಂದು ಕರೆದಿರುವುದು..,

ಹೀಗೆ ಸಂಭಾಷಣೆ ಮುಂದುವರೆದು ಈ ಮಂಡೀಯ ಗಾಯವೇನು ಮಲ್ಲೇಶ? ಎಂದು ಮರುಪ್ರಶ್ನಿಸುತ್ತಾಳೆ ; ಮಲ್ಲೇಶಿ ತಡವರಿಸುತ್ತಾ ಅದು ಅದು.., ಅರ್ಜುನನ ಕೂಡೆ ಯುದ್ಧಮಾಡುವಾಗ ಒದಗಿದ/ ಆದ ಗಾಯ ಕಣೇ ನನ್ನ ಮುದ್ದು ಅರಗಿಣಿ ಎನ್ನಲು ; ಅಡಿಯಿಂದ ಮುಡಿವರೆಗೂ ಕಣ್ಣರಳಿಸಿ ದೋತ್ರ್ಯಾಕ ಮಾಸಿದವೋ ಮಲ್ಲೇಶಿ ಎಂದು ಕೇಳಲು ; ಗರುಡಾನ ಕೂಡ ಸರಸವಾಡುವಾಗ ಬೀಸಿದ ಧೂಳು ಕಣೇ ಅದು ಎನ್ನಲು ; ಹಾಲು ಅನ್ನವ ಕೊಡವೆ, ಹೊದ್ದು ಮಲಗಲು ಮೇಲಾದ / ಒಳ್ಳೆಯ ಹೊದಿಕೆಯ ಕೊಡುವೆ – ಹಂಗಂಥ ಭಾಷೆಕೊಡು ಬಾರೋ, ಸಂಗಯ್ಯನಾಣೆಗೂ ಹೇಳು ಮಲ್ಲೇಶಿ ಎಂದು ಕೇಳಲು ಈಶನು ನಾನು, ಜಗದೇಶ್ವರನು ನಾನಲ್ಲವೇ ಇಂಥ ಭಾಷೆಗಳ ಮಾತೆಕೆ? ಎನ್ನಲು ; ಈಶನು ನೀನಾದಮೇಲೆ ವ್ಯೇಶ್ಯಯ ಮನೆಗೆ ಯಾಕೆ ಹೋಗಿದ್ದೆ? ಎಂದು ಬಿಡದೆ ಪಟ್ಟು ಹಿಡಿಯಲು ; ವ್ಯೇಶ್ಯಯ ಮನೆಗೆ ಹೋಗಿದ್ದೆನೆಂದು ದೋಷವ ಎಣಿಸಿದರೆ ನಿನ್ನಗೆ ದೋಷ ತಪ್ಪದು, ದೋಷವ ಎಣಿಸದಲೆ ಲೇಸಾಗಿ ಬಾಳಿಕೊಳ್ಳಿ ಬಾಳು ಹಸನಾದೀತು ಎಂದಾಗ ; ಈಶ್ವರನಾದ ನಿನಗೆ ಯಾವ ದೋಷವು ತಾಗದು ಬಿಡಿ, ಹರಹರ ನೀನಲ್ಲವೇ, ನಿನ್ನಲ್ಲಿ ಸೆರಗೊಡ್ಡಿ ಬೇಡುವೆ, ನನ್ನ ಬಿಟ್ಟುಕೊಟ್ಟು ಎಲ್ಲೂ ಹೋಗಲ್ಲ, ಯಾರ ಸಂಗವ ಮಾಡಲ್ಲ ಎಂದು ಕರ್ಪೂರ ವೀಳ್ಯವ ಕೊಳ್ಳಯ್ಯ ಎಂದು ಪಾರ್ವತಿ ಮಲ್ಲೇಶಿಯಲ್ಲಿ ಬೇಡಿಕೊಳ್ಳುತ್ತ.., ಶಿವನನ್ನು ತನ್ನೊಳಗೆ ಕಟ್ಟಿಹಾಕಿಕೊಳ್ಳುವ ಪ್ರಯತ್ನ ಮಾಡುತ್ತಾಳೆ.

ಇಲ್ಲಿ ಗಂಡ-ಹೆಂಡರ ದಾಂಪತ್ಯ ಜೀವನದಲ್ಲಿ ಸಾಮಾನ್ಯವಾಗಿ ತಲೇದೋರಬಹುದಾದ ಅನೈತಿಕ ಸಂಬಂಧದ ಕುರಿತಾದ ಒಳಜಗಳಗಳಿಗೆ ಶಿವ-ಪಾರ್ವತಿಯರ ರೂಪಕದಿ ಚಿತ್ರಿಸಲಾಗಿದ್ದು, ಅನುಮಾನಕ್ಕೆ ಮದ್ದೆಲ್ಲಿ? ಸುಖಾಸುಮ್ಮನೆ ಗಂಡ-ಹೆಂಡತಿಯನ್ನು, ಹೆಂಡತಿ-ಗಂಡನನ್ನು ಅನುಮಾನಿಸಿದರೆ ಸಂಸಾರ ಹಾಳಾದೀತು, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತಿನ ಅರ್ಥದಲ್ಲಿ ಪ್ರಸ್ತುತ ಲಾವಣಿಯನ್ನು ನಮ್ಮ ಜನಪದರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ.  

-ಹೊಸ ವರುಷದ ಹರುಷಕೆ, ನಿಮ್ಮೀ ಓದಿನ ಪ್ರೀತಿಗೆ ನನ್ನೀ ಲೇಖನ ಅರ್ಪಣೆ


About The Author

Leave a Reply

You cannot copy content of this page

Scroll to Top