ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದುಃಖ ಮೂಲದ ನೆನಪುಗಳಿಗೂ ಕೆಲವೊಮ್ಮೆ  ಅಸಂಬದ್ದಗಳು ಆವರಿಸಿಕೊಂಡು, ಅವು ಸಹ ಸಂತೋಷದ ಸಮಾರಂಭಗಳಾಗಿ ಮಾರ್ಪಟ್ಟು ಪಾರಂಪರ್ಯಗೊಳ್ಳುವುದಿದೆ.  ಅಂಥ ಅಸಂಗತಗಳಲ್ಲಿ ಮೊಹರಂ ಒಂದು. ಮುಸ್ಲಿಂರ ಈದ್ ಎಂದು   ಇದು ಭಾರತವೂ ಸೇರಿದಂತೆ ಇಸ್ಲಾಂ ರಾಷ್ಟಗಳಲ್ಲಿಯೂ ಆಚರಿಸಲ್ಪಡುತ್ತದೆ.  ಈ ಈದ್ ನ ಹಿನ್ನೆಲೆಗೆ ಅಪಾರ ದುಃಖದ ಕಥೆ ಅಂಟಿಕೊಂಡಿರುವುದು ಕೆಲವರು ಬಲ್ಲರು. ಇದರ ಅರಿವಿನ ಸಂಕೇತವಾಗಿ ಅಲ್ಲಲ್ಲಿ ಅದರ ದಟ್ಟ ಛಾಯೆಗಳು ಈಗಲೂ ಕಾಣಿಸಿಕೊಳ್ಳುತ್ತವೆ. ಆದರೆ ನನ್ನೂರಿನ ಬೆರಳೆಣಿಕೆಯ ಮುಸ್ಲಿಂರಿಗಿಂತ ಬಹುಸಂಖ್ಯಾತ ಇತರರೆಲ್ಲ ಇದನ್ನು ಹಿಗ್ಗಿನ ಹಬ್ಬವಾಗಿ ಆಚರಿಸುವುದು ವಿಶಿಷ್ಟ ಸಂಪ್ರದಾಯ. ಹೀಗೆಂದು ಕೊಂಡು ಹಿಂದೂ ಮೊಹರಂ ಎಂದು ಈ ಬರಹಕ್ಕೆ ಶೀರ್ಷಿಕೆ ಇರಿಸಿಕೊಂಡಿದ್ದೇನೆ.  ಗ್ರಾಮೀಣ ಭಾರತದ ಪರಂಪರೆಯಲ್ಲೇ ಒಕ್ಕಟ್ಟಿನ ಹಾಸು ಹೊಕ್ಕಾದ ಆಚರಣೆಯಿದು.
ಹಿಂದೂ ಸಂಪ್ರದಾಯಗಳಲ್ಲಿ ಹಬ್ಬಗಳಂದು ಗಂಡ ಮಕ್ಕಳೊಡಗೂಡಿ ತವರಿಗೆ ಬರುವ ಹೆಣ್ಣು ಮಕ್ಕಳ ಎಣಿಕೆಗೆ  ಮೊಹರಂ ಕೂಡ ಸೇರಿಕೊಂಡಿರುವುದು ಸಾಂಸ್ಕೃತಿಕ ಪುಳಕ ಉಂಟು ಮಾಡುವ ಸಂಗತಿ. ಇಂದಿಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪಟ್ಟಣಗಳ ಪ್ರತಿಕೂಲ ಪ್ರಭಾವಗಳ ಮಧ್ಯೆಯೂ ಭಾವೈಕ್ಯತೆಯ ಪವಿತ್ರ ಸಂಕೇತವಾಗಿ ಅತ್ಯಧಿಕ ಸಂಖ್ಯೆಯ ಹಿಂದೂಗಳಿಂದ ಮೊಹರಂ ಆಚರಿಸಲ್ಪಡುತ್ತದೆ. ಇದು ಸೋಜಿಗ ಶ್ರೇಷ್ಠವಾಗಿ ಉಳಿದಿದೆ. ಮಂದಿರ- ಮಸ್ಜಿದ್ ಗಳಿರುವ  ಕಲಬುರ್ಗಿ ಕೊಡೇಕಲ್-ಇಲ್ಲಕಲ್ ಗಳಂತಹ ನಮ್ಮ ರಾಜ್ಯದಲ್ಲಿರುವ ನೂರಾರು ಪುಣ್ಯಕ್ಷೇತ್ರಗಳ  ವರ್ಷಾ ವರ್ತಿ ಜಾತ್ರೆ ಉರುಸುಗಳು ಈ ಮಾತಿಗೆ ಸಂದರ್ಭ ಸಾಕ್ಷಿ. ಇಷ್ಟೇ ಏನು ಈ ಉರುಸುಗಳೆಲ್ಲ ಹಿಂದೂಗಳ ನೇತೃತ್ವ ಪ್ರಭುತ್ವ ,ನಿರ್ದೇಶನ ನೆರವಿನ ಸಹಕಾರ ಸಹಯೋಗದಲ್ಲಿ ನೆರವೇರುವುದು ಇಂದಿಗೂ ಎಂದಿಗೂ ಜೀವಂತ ಪ್ರದರ್ಶನ. ಮೊಹರಂನ ಹಾರ ತುರಾಯಿ ದೇವರ ಛತ್ರಿ ನವಿಲು ಬೀಸಣಿಕೆಯಂಥ ದಾನ ಸೇವೆಗಳಿಗೂ ಹಿಂದೂಗಳೇ ಆಗಬೇಕು. ಕೋಮು ಸೌಹಾರ್ದ ಎಂಬ ತಿಕ್ಕಲು ಸುಶಿಕ್ಷಿತರ ಮಧ್ಯ ಹಳ್ಳಿಯ ಆಶಿಕ್ಷಿತರು ಸಹಜ ಆಚರಣೆಯಲ್ಲೇ ಅದನ್ನು ತೋರಿಸಿ ಬಿಡುವ ಪ್ರಯೋಗಗಳ ಪೈಕಿ ಈ ಮೊಹರಂ ಶ್ರೇಷ್ಠ ಉದಾಹರಣೆ ಹಾಗೆಂದುಕೊಂಡೇ ಇದು “ಹಿಂದೂ ಮೊಹರಂ”……

             ಈ ಮೊಹರಂಗೆ ಹಲವಡೆ ಹಲವು ಹೆಸರಿನಿಂದ ಕರೆಯುವಂತೆ ನನ್ನೂರಿನಲ್ಲಿ ಇದನ್ನು ಅಲಾಯಿಹಬ್ಬ, ಅಲಾಬ್ ಎಂದೇ ಪ್ರಚಲಿತ. ಮುಸ್ಲಿಮರ ‘ಈದ್’ ಗಳೆಲ್ಲ ಅಮಾವಾಸ್ಯೆ ತರುವಾಯ.
ಚಂದ್ರ ದರ್ಶನದೊಂದಿಗೆ ನಿರ್ಧಾರವಾಗುವ ಕಾರಣ ಪ್ರತಿ ವರ್ಷ ಮಹಾನವಮಿ ಅಮಾವಾಸ್ಯೆಯ ಮೂರು ದಿನಗಳ ತರುವಾಯ ಬರುವ ಇದು ಗುದ್ದಲಿ ಹಾಕಿದ ಮೇಲೆ ಗೊತ್ತಾಗುತ್ತಿತ್ತು. ಮುಸ್ಲಿಮರೆನ್ನುವ ಒಂದೆರಡು ಕುಟುಂಬಗಳ ಜೊತೆ ಪಿಂಜಾರ್ ಜನಾಂಗದ ನಾಲ್ಕೆಂಟು ಮನೆಗಳ ಪೈಕಿ ಒಬ್ಬರು ಪಾಳಿ ಪದ್ಧತಿಯಂತೆ , ಐದು ದಿನಗಳ ಅಲಾಯಿಗೆ ಅದರ ಹಿಂದಿನ ಐದು ದಿನವೇ ಗುದ್ದಲಿ ವಿಧಿ ನೆರವೇರಿಸುತ್ತಿದ್ದರು. ಅಂದರೆ ಅಲ್ಲಿಗೆ ಒಟ್ಟು ಹತ್ತು ದಿನಗಳ ಹಬ್ಬದ ಆಚರಣೆಯಾಗುತ್ತಿತ್ತು. ನಮಗೆಲ್ಲ ಈ ಅಲಾಬ್ಬದ ‘ಕೆಂ ವಸಲ್’ ಪ್ರಮುಖ ಆಕರ್ಷಣೆಯಾಗುತ್ತಿತ್ತು. ದೊಡ್ಡವರು ಮಾತ್ರ ‘ಖಥಲ್’ ಮತ್ತು ‘ದಫನ್’ ದಿನ ರಾತ್ರಿಗಳೊಂದು ವಿಶಿಷ್ಟ ಹೆಜ್ಜೆ ಕುಣಿತದ ಕೆಂವಸೈಯ ಆಡುತ್ತಿದ್ದರು. ನೇರ ಭಾಗವಹಿಸುವಿಕೆ ಅವಕಾಶವಿರುತ್ತಿದ್ದ ಅಲಾಯಿ ಕುಣಿತ ನನ್ನಂಥ ಪೀಚು ಪೋರರಿಗೆಲ್ಲ  ಪ್ರಚೋದಿಸುತ್ತಿತ್ತು. ಭಯ, ಹಿಂಜರಿಕೆಗಳಿಗೆ…. ಬರೆದಂತಿದ್ದ ನಾನು ಈ ಮುಕ್ತ ಅವಕಾಶಗಳಲ್ಲಿ  ಸೇರಿಕೊಳ್ಳುತ್ತಿದ್ದೆ. ಬೇಕೆಂದಾಗ ಮೈ ಮನಗಳೆಲ್ಲ ದಕ್ ದಕ್ಕರಿಸಬೆಕೆಂಬಾಸೆ  ಈಡೇರದೆ, ದಿನದ ಸಾಯಂಕಾಲ ಮಾತ್ರ ವಾರಿಗೆಯಯರೊಡಗೂಡಿ ಕುಪ್ಪಳಿಸುತಿದ್ದೆ. ಇದನ್ನು ಹಲಗೆ ಚಳ್ಳಮ್ಮ್ಗಗಳ ಮೇಳದೊಂದಿಗೆ ಕುಣಿಯುವುದು ಇನ್ನೂ ರಂಜನೆ ನೀಡುತ್ತಿದ್ದರೂ ಅದು ‘ಖತಲ’, ‘ದಫನ’ ದಿನಗಳಂದು ಮಾತ್ರ ನೆರವೇರುತ್ತಿತ್ತು.
       ಗುದ್ದಲಿ ಹಾಕಿದ 5ನೇ ದಿನಕ್ಕೆ ಊರ ಮಧ್ಯದ ಏಕ ಮಾತ್ರ ಮಸೀದಿಯೊಳಗೆ ದೇವರು ಕೂಡುತ್ತಿದ್ದವು. ನಾಲ್ಕಾರು ಜನ ತಿಕ್ಕಿ ತಿಕ್ಕಿ ಬೆಳಗಿಸಿ, ಪಳಪಳ ಹೊಳೆಯುತ್ತಿದ್ದ ಮೂರು ಪಂಜಿನ ಹಿತ್ತಾಳೆ ತಾಮ್ರ ಪಟ್ಟಿಯ ಬೆರಳಾಕಾರದ ರೂಪವೇ ಅಲಾಯಿದೇವರು. ಪಟೇಲ್ ಕುಟುಂಬದ ಮನೆಯಿಂದ ಮಡಿ ವಸ್ತ್ರದ ಮೇಲೆ ಹಾಯ್ದು ಪಿಂಜಾರ ಲಾಲಸ, ಮೋದಿನಸಾ,ಮಲೀಕಸಾ….. ಇವರ ಪೈಕಿ ಓರ್ವ ಶ್ರದ್ಧೆಯಿಂದ ದೇವರನ್ನು ಹೊತ್ತು ತರುತ್ತಿದ್ದ . ಪ್ರಮುಖ ದೇವರನ್ನು ಹುಸೇನಿ ಎಂದು, ಬದಿಯ ಡೋಲಿಯೊಳಗಿರುತ್ತಿದ್ದ. ಎರಡು ಮೂರು ಪಂಜರಗಳುಳ್ಳ ಪುಟ್ಟ ದೇವರುಗಳನ್ನು ಕವಡಿ ಪೀರಗಳೆಂದು ಇವರನ್ನು ಹಿರಿಯ ದೇವರ ಸಂಬಂಧಿ, ಅನುಯಾಯಿಗಳಂತೂ ಗುರುತಿಸುತ್ತಿದ್ದರು. ಈ ದೇವರುಗಳಿಗೆ ಈದ್ ನಲ್ಲಿ ನೆರವೇರುತ್ತಿದ್ದ ಕೆಲ ಗಾಂಪರು ಕಟ್ಟಿಕೊಡುತ್ತಿದ್ದ ಕಾಲ್ಪನಿಕ ಕಥೆ–ಸಂಘಟನೆಗಳು ನನಗಾಗ ವಿಚಿತ್ರವಾಗಿ ತೋರುತ್ತಿದ್ದವು.

        ದೇವರು ಕುಳಿತಂದಿನಿಂದ ಈದ್ ವಾತಾವರಣ ಇಮ್ಮಡಿಕೊಳ್ಳುತ್ತಿತ್ತು. 5ನೇ ದಿನದವರೆಗೆ ಏರುತ್ತಾ ಹೋಗುತ್ತಿತ್ತು. ವಿವಿಧ ಉಪಾಸನಗಳು ಜರುಗುತ್ತಿದ್ದವು. ಉಪವಾಸ ವ್ರತ ಕೈಗೊಳ್ಳುತ್ತಿದ್ದ  ಫಕೀರರಿಗಿಂದು ಊರು ಸುತ್ತಿ ಅನ್ನದಾನ ಪಡೆಯುತ್ತಿದ್ದ ಗುಂಪಿನಲ್ಲಿ ನಾನು ಸೇರಿ ಬೇಡಿಕೊಂಡು ಬಂದುತಿಂದ ಬರೆವಾರಿ ಭಕ್ಷದ ಸವಿನೆನಪು ನಿರೂರಿಸುತ್ತದೆ. ಮನೆ ಮನೆ ಮುಂದೆ ತೆರಳಿ ಏಕ ಕಾಲಕ್ಕೆ ಒಕ್ಕೋರಿಲಿನಲ್ಲಿ “ ಮಾಮರಾಯಿ ಮೊಮ್ ದುಯೀಲೋ”…. ಎಂದು ಗಂಟಲು ಹರಿಯುವಂತೆ ಕೂಗುತ್ತಿದ್ದ ನನ್ನಂತವರಿಗೆಲ್ಲ ಕಿಸಿ ಕಿಸಿ ನಗು.ಫಕೀರರಿಗೆಂದೇರುತಿದ್ದ ದಾನದೂಟ ವೆಂಬುದು ಹೆಸರಿಗೆ ಮಾತ್ರವಾಗಿ,ಐದು ದಿನದ್ದನ್ನು ಒಂದೇ ದಿನ ಸೇರಿದವರೆಲ್ಲ ಒಂದೇ ಹೊತ್ತಿನಲ್ಲಿ ಮಸೂತಿ ಕಟ್ಟಿ ಮೇಲೆ ತಿಂದು ಮುಗಿಸುತ್ತಿದ್ದರು. ಇದರಿಂದಾಗಿ
ಫಕೀರ ರೆಲ್ಲ ಮತ್ತೆ ಪ್ರತ್ಯೇಕ ಮನೆ ತಿರುಗಿ ಬೇಡಿಕೊಳ್ಳುವ ಪ್ರಸಂಗವಿರುತ್ತಿದ್ದವು. ಈ ಸಿಟ್ಟನ್ನೆಲ್ಲ ದಫನ್ ದಿನ ಶೃಂಗಾರಶಂಖ ಕಿರೀಟ ದುಡುಗೆಯಲ್ಲಿದ್ದು
ಶಿಸ್ತು ನಿರ್ವಹಣೆಯ ನೆಪದಲ್ಲಿ  ವಸ್ತ್ರ ಹುರಿಗಟ್ಟಿದ ಏಟು ಬಾರಿಸಿ ತೀರಿಸಿಕೊಳ್ಳುತ್ತಿದ್ದರು.

        ಪೂಜಾರಿಗಳಂತೆ, ಐದು ದಿನ ಊರ ಹಿಂದೂ ಜನರಿಗಾಗಿ ದೇವರ ಸೇವೆಯಲ್ಲಿರುತ್ತಿದ್ದ ಒಬ್ಬಿಬ್ಬ ಮುಲ್ಲಾ, ಮುಸ್ಲಿಂರೂ “ಅಲ್ಹಾರಧಾನೆ” ನೆರವೇರೆಸಿಕೊಡುತ್ತಿದ್ದರು.ಮಸೀದಿಗೆ ಬಂದು ಹರಕೆ ಎದೆಯಿತ್ತು ಹೋಗುತ್ತಿದ್ದವರೆಲ್ಲ ಹಿಂದೂಗಳೇ ಇರುತ್ತಿದದ್ದು ವಿಶಿಷ್ಟವಾಗಿರುತಿತ್ತು. ಮನೆ ಮನೆಗಳಿಂದ ನಿರಂತರ ಮೂರು ದಿನ ಮಾದಲಿ_ ಊದು ,ಬೆಲ್ಲ ಊದು,ಸಕ್ಕರೆ ಊದು,ಚೊಂಗೆ ಊದಿನ ನೈವೇದ್ಯ ಹೊತ್ತು ಮಸಿದೆ ಮುಂದಿನ ಆಲಾಯಿ ಕುಣಿ ಐದು ಸುತ್ತು ಹಾಕಿ, ದೇವರೆದರು ಫಾ ತಾತೆ ಕೊಡಿಸಿಕೊಂಡು ಎಡೆ ನೀಡಿ ಬರುತ್ತಿರುವುದು ತುಂಬಾ ಅನನ್ಯದಿಂದ ಕೂಡಿರುತ್ತಿತ್ತು. ಫಾತೆ ಕೊಡಿಸುವ ನಾನಾ,ಬಾಬಾ,ಮುಕಾಬುಲ್, ಚಾಂದ ಪಟೇಲರೆಂಬ
ಹುಡುಗರೆಲ್ಲ ಅದೇನೋ ಪಠಿಸುತ್ತಿದ್ದರೋ…….
ಕೊನೆಯಲ್ಲಿ ಉಗ್ಗಳಿಸುತ್ತಿದ  ಹುಸೇನ್ ಭಾಷಾ ಕಿ ದೋಸ್ತಾರ ಹೋ ದಿನ ,ಲಾಲ ಸಾಹೇಬ್ ದೋಸ್ತಾರ ಹೊ ದಿನ, ಮಾಮಾರಾಯಿಮೊ ದುಯೀ ಲೋ……
ಮಾತ್ರ ಜೋರಾಗಿರುತಿತ್ತು. ತವರಿಗೆ ಬಂದವರು ಹೊಸತರಲ್ಲಿ ಗಂಡನೊಂದಿಗೆ ಅಲ್ಲಿ ತೋರಿಸುತ್ತಿದ್ದ ಧಿಮಾಕಿನ ಗಮತ್ತು , ಯಜಮಾನ ಸಹಿತ ಕುಟುಂಬದ ಸದಸ್ಯರೆಲ್ಲ ನಾಲ್ಕನೆಯ ದಿನದ ಸಂಜೆ   ಅಲಾಯಿ ಬೆಂಕಿ ಕುಣಿಗೆ ಹೊತ್ತು ತರುತ್ತಿದ್ದ ಎಡೇ ಯೊಂದಿಗಿನ  ಹಿಡಿ ಕಟ್ಟಿಗೆ , ಈ ಎಡೆ ಕಾಣಿಕೆಗಳೊಡನೆ ಉಗ್ಗಳಿಸುವ ಮಾಮಾರಾಯಿಮೋ ದುಯಿಲೋ ……ಸಂಜೆ ಸಂಭ್ರಮವನ್ನು ಸಾಭಿತಿಗೊಳಿಸುತ್ತಿದ್ದವು.

        ಅಂದಿನ ರಾತ್ರಿಯ ಖತಲ್ ಮತ್ತು ಬೆಳಗಿನ ದಫನದ ಕನಸಿನೊಂದಿಗೆ ನಿದ್ದೆ ಹೋಗುವ ಹುಡುಗರೆಲ್ಲ,ನಸುಕಿನ ವೇಳೆ ತಮ್ಮ ತಮ್ಮ ಓಣಿ ಬಳಸಿಕೊಂಡು ಸಾಗುತ್ತಿದ್ದ ಎದುರು ಬದುರಿನ ಉದ್ದುದ್ದ ಸಾಲುಗಳು ಅಲಾಯಿ ಕುಣಿತದಲ್ಲಿ ಸೇರಿಕೊಳ್ಳಲು ಹಾತೋರೆಯುತ್ತಿದ್ದರು. ಮಲಗುವ ಮುನ್ನ ನನ್ವವ್ವನಿಗೆ ಹೇಳಿಬಿಟ್ಟಿದ್ದಂತೆ ಅವಳು ಬೆಳಗಿನ ಜಾವ ಎಬ್ಬಿಸುತ್ತಿದ್ದ ಹಾಗೆ ಸರಸರ ಸ್ನಾನ ಗೈದು ಹೊಸ ಬಟ್ಟೆ ಉಟ್ಟು ನಾಯಿ ಕುಂತಕಿಂದ ತಯಾರಿಸುತ್ತಿದ್ದ ತಗಡಿನ ಕೊಡಲಿ ಹಿಡಿದು ಕೆಂವಸಲ್ ಗುಂಪು ಸೇರಿಕೊಳ್ಳುತ್ತಿದ್ದೆ. ಗಂಡಸಿರಿಗಷ್ಟೇ ಮೀಸಲಿದ್ದ ಕುಣಿತ
ಖತಲನ ರಾತ್ರಿ ಹೊತ್ತು ಪ್ರಾರಂಭವಾಗಿ ಮರುದಿನ ಮುಂಜಾನೆ ಹೊತ್ತಿರುವ ತನಕ ಪೂರ್ವಾರ್ಧಗ ಗೊಳ್ಳುತ್ತಿತ್ತು.. ಕುಣಿಯುವವರ ದೊಡ್ಡ ದೊಡ್ಡ ಹೆಜ್ಜೆಗಳಿಗೆ ಹೊಂದಿಕೊಳ್ಳುತ್ತಿದ್ದೆ. ನನ್ನ ಕುಣಿತದ ತಾಳ ನನಗೆ ಖುಷಿ ನೀಡುತ್ತಿತ್ತು. ಎರಡರಿಂದ 9 ತಾಳದ ಲೆಕ್ಕದಲ್ಲಿರುತ್ತಿದ್ದ ಕುಣಿತ, ನನ್ನೂರಿನಲ್ಲಿ ಮೂರು ಹೆಜ್ಜೆಯ ಸಾಮಾನ್ಯ ತಾಳದ್ದಾಗಿತ್ತು. ಕೆಲವೊಮ್ಮೆ ಎರಡ್ ಹೆಜ್ಜೆಯನ್ನು ಅನುಸರಿಸತ್ತಿದುಂಟು. ಹೆಜ್ಜೆಗಳ ತಾಳಕ್ಕೆ ಏಕ ತಾನತೆ, ಏಕ ಸ್ವರೂಪ ತರಲು ಸುತ್ತಿದ ಯಾರೋ ತಲೆ ರುಮಾಲು ಕುಣಿಯುವವರ ಕೈಗೆ ಸಿಕ್ಕು ಆಚೀಚೆಗಳುದ್ದಕ್ಕೂ ಸಾಲು ಜನರನ್ನು ಬಿಚ್ಚಿಕೊಳ್ಳುತ್ತಿತ್ತು. ಮಲ್ಲಣ್ಣನಂತವರು  ರುಮಾಲು ಕಿತ್ತುಕೊಳ್ಳುವ ಬದಲು ಕೆಲವರು ಟೋಪಿ ಹಾರಿಸಿ ಜಗಳಕ್ಕೆ ಕಾರಣವಾಗುತ್ತಿದ್ದರು. ಮುಂಜಾನೆ ಹೊತ್ತು ಮಸೂತಿ ಕಟ್ಟೆ ,ಚಾವಡಿ ಕಟ್ಟೆಯ ಮೇಲೆ ಹಬ್ಬದ ಹಿಗ್ಗಿನಲ್ಲಿರುತ್ತಿದ್ದ ಹದಿ ಹರೆಯದ ಹೆಂಗಳೆಯರ ಕಂಡು , ಕೆಂವಸಲ ಭವಂಸಲ್ ದಿಕ್ಕೆಟ್ಟು ಹೋಗುವಂತೆ
ಕುಣಿಯುತ್ತಿದ್ದ ಕುರುಬರ ಭಿಮಪ್ಪನಂತವರಿಗೆ ಬಾಟಲಿ ಸೆರೆಯ ನಶೆಯಲ್ಲಿ ಕಳಚಿ ಬೀಳುತ್ತಿದ್ದ ಧೋತರದ ಕಚ್ಚೆಯ ಪರವೆಯೂ ಇರುತ್ತಿರಲಿಲ್ಲ. ತಾಟಿನಗಲದ ಚಳ್ಳಂನ್ನು ಚೆಲ್ಲಂಗ್…. ಚಲ್ಲಂಗ್….. ಚಲ್ಲಂಗ್….. ಚೆಲ್ಲಂಗ್ ಎಂದು ತಟ್ಟುವ ಗೊಡ್ಡೆಮ್ಮೆ ಸಂಗಪ್ಪ, ಮನಗೂಳಿ ಸಿದ್ದಪ್ಪಣ್ಣವರ ನೃತ್ಯ ಸಮೇತ ತಾಳಕ್ಕೆ ಮೇಳಸಿರುತ್ತಿದ್ದ ಹಲಗೆಯ ಜೇಡ್ಡನಕ್ಕ…..ಜೇಡ್ಜ ನಕ್ಕಾಕ….ಜೇಡ್ಜಾಜ್ ನಕ್ಕಾಕಾ…..ನಾದವು ಸೇರಿಕೊಂಡು ಕುಣಿಯುವವರ ಬಾರಿಸುವವರ ಈ ಮುಖಾಮುಖಿ ದಿಟ್ಟತನಕ್ಕೆ ಉತ್ತೇಜನಗೊಂಡವರು ಅವರು ಮುಡಿಯಿಂದ ಅಡಿಯವರಿಗೆ ಚುರುಮುರಿ ಸುರಿಮಳೆ ಗಯುತ್ತಿದ್ದರು. ಕೆಲವೊಮ್ಮೆ ಕುಣಿತದ ಆಯತಪ್ಪು ಅಂತಿದ್ದ ಭಯಂಕರ ಹೆಜ್ಜೆಗಳ ಜೊತೆ ನನ್ನಂತ ಪಿಳ್ಳೆಗಳು ಸೇರಿಕೊಳ್ಳಲಾಗುತ್ತಿರಲಿಲ್ಲ. ಅಲಾಯಿ ಕುಣಿತವನ್ನು ಪವಿತ್ರವೆಂದು ಭಾವಿಸುತಿದ್ದ ಹೆಣ್ಣು ಮಕ್ಕಳು ತಮ್ಮ ಕಂಕುಳದ ಕೂಸುಗಳನ್ನು ಕುಣಿಯುವ ಮಾಜಿ ಮಿತ್ರರ ಕೈಗಿಟ್ಟು ಅವರ ಹೆಗಲನ್ನೇರಿಸುತ್ತಿದ್ದರು. ಪರ ಊರಿನ ಇತರ ದೇವರುಗಳೊಂದಿಗೆ ನನ್ನೂರಿಗೆ ಬರುತ್ತಿದ್ದ ಕುಣಿತದವರ ಪರಾಕ್ರಮ ಇನ್ನು ವಿಚಿತ್ರವಾಗಿರುತ್ತಿತ್ತು. ಅವರುಗಳ ಕೈಯಲ್ಲಿ ಕಾಣಿಸುವ ಕೊಡಲಿ, ಬಡಿಗೆ, ಹತಾರು ಗಳಂತಹ ಭಯಾನಕ ಶಸ್ತ್ರಗಳು ನನ್ನೆದೆ ನಡೆಗಿಸುತ್ತಿದ್ದವು.

      ಈ ಪರಿ ಊರ ತುಂಬಾ ಹಾಯ್ದು ಬರುತ್ತಿದ್ದ ಅಲಾಯಿ ನೃತ್ಯ ಸೂರ್ಯೋದಯದ ಮುನ್ನ ಮಸೀದಿ ತಲುಪುತ್ತಿತ್ತು. ಆ ಹೊತ್ತಿಗೆ ದೇವರನ್ನು ಹಿಡಿಯುವ ದಾದಾ ಪಟೇಲ್ ಅದೇನನ್ನೋ ಗುನು ಗುನು ಮಂತ್ರ ಹಲವು ಸಲ ಚಟಪಟ ಪಟಿಸಿ ಮೈನವಿರೇಳಿಸಿಕೊಳ್ಳುತ್ತಿದ್ದ. ಮೈ ಮುಖ ಕೈಕಾಲುಗಳಲ್ಲ ಮಂತ್ರ ಮುಗಿಯುತ್ತಿದ್ದಂತೆ ಗಡಗಡ ನಡುಗುತ್ತಿದ್ದವು ಇದೇ ದೇವರು ಮೈಯಲ್ಲಿ ಬರುವುದಾಗಿತ್ತು . ಅತ್ಯುಗ್ರಾ ಭರಿತನಾಗಿ ಅಲಾಯಿ ಕುಣಿಯನ್ನು ನಾಲ್ಕು ಸಲ ಸುತ್ತಿ ಐದನೇ ಬಾರಿಗೆ ನಿಗನಿಗೆ ಉರಿಯುವ ಕುಂಡದ ಕೆಂಡ ಕಚಕಚ ತುಳಿದು ಮಸೀದೆಯೇರಿ ದೇವರು ಹಿಡಿಯುತ್ತಿದ್ದ . ಆಗ ಊರ ಜನ ದಾದಾ ಪಟೇಲನನ್ನು ಭೂಮಿಗಿಳಿದ ಮನುಷ್ಯರೂಪದ ದೇವರು ಅವತಾರ ಎಂದೇ ಭಾವಿಸುತ್ತಿದ್ದರು. ದೇವರು ಮೈಮೇಲೆ ಬಂದಾಗಲಂತು ಸರಿಯೇ ಸರಿ ಬಾಕಿ ಸಮಯದಲ್ಲಿ ಅವರು ಕಂಡೊಡನೆ ಹಿಂದೂ ಭಕ್ತರು ಹಣೆಯಿಟ್ಟು ನಮಸ್ಕರಿಸುತ್ತಿದ್ದರು..   …

       ಇತ್ತ ದೇವರೇಳುತ್ತಿದ್ದಂತೆ ರಂಗಿನ ಹಾಳೆಗಳಿಂದ ಅಲಂಕರಿಸಲ್ಪಟ್ಟ ಡೋಲಿ ದೇವರೊಡನೆ ಅಲೆಯುತ್ತಿತ್ತು. ಹುಯಿಲೋ….ದುಯೀಲೋ,ಹುಯಿಲೊ…. ದುಯಿ ಲೋ…ಉಗ್ಗಳನೆ ಮುಗಿಲ ಮುಟ್ಟುತ್ತಿತ್ತು. ಡೋಲಿ ಹೊರುವ ನಾಲ್ಕು ಜನ ಹಿಂದೂಗಳೇ ಆಗಿರುತ್ತಿದ್ದರು. ಈ ಡೋಲಿ ಪವಿತ್ರದ ಸಂಕೇತ , ಅಲ್ಲಾನ ಪಾದ ಸೇರಿದ ಇಮಾನ್ ಹುಸೇನರ ಸಮಾಧಿಯ ಸೂಚಕ. ಪುಣ್ಯಾರ್ಜಣೆಗಾಗಿ ಹರಕೆ ಹೊತ್ತು ಹಂಬಲ ದಾಸೆ ಇಟ್ಟುಕೊಂಡು ಇದನ್ನು ಹೊತ್ತಿದವರು ಮಕ್ಕಳಾಗದವರು, ವಿದುರರು, ನಿರುದ್ಯೋಗಿಗಳು…. ಹೆಚ್ಚಾಗಿರುತ್ತಿದ್ದರು. ಹಲವು ವರ್ಷಗಳಿಂದ ಈ ಸೇವೆಯಲ್ಲಿದ್ದ ಗೋಡ್ಡೆಮ್ಮೆ ಸಾಯಬಣ್ಣನಿಗೆ ಮಕ್ಕಳೇ ಇರಲಿಲ್ಲ. ಸ್ವತಹ  ದೇವರೆದುರು ಸಿಟ್ಟುಗೊಂಡು ಡೋಲಿ ಹೊರುವುದನ್ನು ಆಗಾಗ ನಿರಾಕರಿಸುತ್ತಿದ್ದ. ನೇರವಾಗಿ ಗಮನಿಸುತ್ತಿದ್ದ ದೇವಮಾನವ ಬಂದು ಈತನ ಮೈಕೈ ನೆವರಿಸಿ, ಆಶೀರ್ವದಿಸಿ ಮತ್ತೆ ಆದೇಶವಿತ್ತು ಪುನಹ ಸೇವೆಗೆ  ಅನಿಗೊಳಿಸುತ್ತಿದ್ದ. ವರ್ಷಂಪ್ರತಿ  ಅವನ ಹಣೆಬರವೇ ಅಷ್ಟೇ ಎಂಬಂತಾಗಿ ಇಬ್ಬರು ಹೆಂಡಂದಿರ ಪೈಕಿ ಒಬ್ಬರಿಂದಲೂ ಸಂತಾನ ಸೌಭಾಗ್ಯ ಪಡೆಯಲಾಗದೆ ಆತ ಸತ್ಯೇ ಹೋದದ್ದು ಸತ್ಯ ಸಂಗತಿ. ಪವಿತ್ರ ಡೋಲಿಯೊಳಗಿರುತ್ತಿದ್ದ ಹುತಾತ್ಮ ಹುಸೇನರ ಸಂಬಂಧಿ ಕೌಡಿ ಪೀರಾಗಳಿಗೆ ನೆರೆದವರೆಲ್ಲ ಭಕ್ತಿ ಪೂರ್ವಕವಾಗಿ ಉತ್ತತ್ತಿ ಶೇಂಗಾ ಕಾಯಿ ಚುರುಮುರಿ ಎಸೆಯುತಿದ್ದರು. ಈ ತಿನಿಸುಗಳನ್ನು ನಾವು ಕಾಣದಂತಿರುತ್ತಿದ್ದೆವು. ಬಿದ್ದವುಗಳನ್ನು ಕಚ್ಚಾಡಿ ಆರಿಸಿಕೊಳ್ಳುತ್ತಿದ್ದೆವು. ಜನಜಂಗುಳಿಯ ತುಳಿತಕ್ಕೆ ಕೆಲವರು ಆಯ್ದುಕೊಂಡಿರುತ್ತಿದ್ದ ಉತ್ತತ್ತಿ ಕೈ ಸಮೇತ ಜಜ್ಜಿ ಹೋಗುತ್ತಿತ್ತು.

      ಇನ್ನೊಂದೆಡೆ ದೇವರನ್ನು ಹೊತ್ತ ದಾದಾ ಪಟೇಲನ ಪಾದಕ್ಕೆರಗಿ ತಮ್ಮ ಸಂಸಾರ ಬದುಕಿನ ಆಗುಹೋಗುಗಳನ್ನು ಕುರಿತು ಭವಿಷ್ಯ ಕೇಳುತ್ತಿದ್ದವರೆಲ್ಲ ಭರವಸೆಯ ಸಂಕೇತವಾಗಿ ದೇವರು ಹೂ ಪ್ರಸಾದ ಪಡೆಯುತ್ತಿದ್ದರು. ಇಂಥವರು ಹೆಚ್ಚಾಗಿ ಹೆಣ್ಣು ಮಕ್ಕಳೇ ಆಗಿರುತ್ತಿದ್ದರು. ಮಗನ ನೌಕರಿ, ಮಗಳಿಗೆ ವರ, ಮಕ್ಕಳಾಗದಿರುವುದು……

       ಮೊಹರಂ ಮಸೀದಿಯ ಬಯಲ ತುಂಬೆಲ್ಲ ಹೀಗೆ ಹರಡಿ ಕೊಂಡಿರುತ್ತಿದ್ದಾಗಲೇ ಮೈಲಿ ಗೂಲಿ ಬಾಬೂನ ನೇತೃತ್ವದಲ್ಲಿ ರಿವಾಯತ್ ಪದ ಕೇಳಿಸುವ ಎದುರು ಬದುರು ಗುಂಪುಗಳೆರಡು ಜನಸಂದಣೀಯ ಮೂಲೆಯೊಂದರಲ್ಲಿ ಜಮಾಯಿಸಿಕೊಂಡಿರುತ್ತಿತ್ತು. ಇಮಾಮ್ ಹುಸೇನ್ ಮತ್ತವನ ಶೋಕ ಗೀತೆಗಳು ಮೂಲ ರಿವಾಯತ್ಗಳು. ಮೊಹರಂ ಆಚರಣೆಯ ಮೂಲ ತಿರುಚಿಕೊಂಡ ತೆರದಲ್ಲಿಯೇ ರಿವಾಹಿತಗಳು ಬದಲಾದಂತಿದ್ದವು. ಭಕ್ತಿ, ಧರ್ಮ, ಸತ್ಯ ನ್ಯಾಯ ಪವಾಡ ವರ್ತಮಾನದ ಕಟಕಿತನಗಳೆಲ್ಲ ಸೇರಿಕೊಂಡು ಬದುಕಿನ ತಪ್ಪು ಒಪ್ಪುಗಳನ್ನೇ ಎತ್ತಿ ಹಿಡಿದು ಲಾವಣಿ ದಾಟಿಯಲ್ಲಿ ಹಾಡುತ್ತಿದಿದ್ದು ತೀರಾ ವಿಚಿತ್ರವಾಗಿ ತೋರುತ್ತಿತ್ತು. ಮೇಳವು ಎದುರುಗಿನ ಹಿಮ್ಮೇಳಗುಂಪನ್ನು ಉದ್ದೇಶಿಸಿ ಒಂದು ನುಡಿ ಹಾಡಿ ಮುಗಿಸುತ್ತಿದ್ದಂತೆ ಸವಾಲಿಗೆ ಜವಾಬು ಎಂಬಂತ ರೀತಿಯಲ್ಲಿ ಎದುರಿನಿಂದ ಅದೇ ಹಾಡಿನ ಮುಂದಿನ ನುಡಿ ಹೇಳಲಾಗುತ್ತಿತ್ತು. ಇವರುಗಳ ಪದಗಳೆಲ್ಲ ಮುಲ್ಲಾ ಮಠಪತಿಗಳ ಯಥೇಚ್ಛವಾಗಿ ಮುಸುಳಿ ಕೇಳುಗರ ಮೈಮರೆಸುತ್ತಿದ್ದವು. ರಿವಾಹಿತಗಳನ್ನು ಮುಸ್ಲಿಮೇತರರು ಕಟ್ಟಿ ಹಾಡುತ್ತಿದ್ದದ್ದು ಮತ್ತು ವಿಶೇಷವೆನಿಸುತ್ತಿತ್ತು. ಇವುಗಳ ತುಣುಕು ಎಂಬಂತೆ ಆಗಾಗ ಸಂಜೆ ಕಾಲದ ಧಪನ ಕೇಂ ವಸಲ ಕುಣಿತದಲ್ಲಿ ಅವು ಪ್ರತಿದ್ವನಿಸುತ್ತಿದ್ದವು. ಈ ಹಾಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡುವ ದೇವರು ಅವುಗಳ ಹಿಂದಿಂದೆ ಹೋಗುವ ಬಾರದ ಡೋಲಿ ಸೆರೆ ಕುಡಿದು ಹೇಗೆಂದ ಹಾಗೆ ಕುಪ್ಪಳಿಸುವ ಜನ……. ಇದನ್ನೆಲ್ಲಾ ನೋಡಿ ಬಂದ ಮೇಲೆ ನನ್ನವ್ವ ಅಲಾಬನ್ನು ಖಂಡಿತ ವ್ಯಾಖ್ಯಾನಿಸುತ್ತಿದ್ದದ್ದು ವಿಮರ್ಶೆಯಂತಿರುತ್ತಿತ್ತು. ನನಗೆ ಗೊತ್ತಿಲ್ಲದ ಹೊತ್ತು ಇಡೀ ಈದ್ ನ ಬಗ್ಗೆ ಪ್ರಶ್ನಿಸುತ್ತಿದ್ದರೆ ಆಗ ನನ್ನವ್ವನದು ನೇರ ಅಭಿಪ್ರಾಯ “ ಹುಚ್ಚ ಅಲಾಬ್ಬ ಮಳ್ಳ ಮಾಹಾನಮಿಗೆ ಏನು ಹೇಳೋದು” …….ತಿರುಚಿದ ಆಚರಣೆಗಳಿಗೆ ಹಳ್ಳಿ ಹೆಂಗಸಾದರು ನನ್ನವ್ವನ ಉತ್ತರ ತೀಕ್ಷ್ಣವಿರುತ್ತಿತ್ತು.

ದೇವರನ್ನು ಹೊತ್ತ ದಾದಾ ಪಟೇಲನ ಮೈ ಉಗ್ರ ಇಳಿಯುತ್ತಿದ್ದಂತೆ ಖತಲ್ ಮುಗಿಯುತ್ತಿತ್ತು. ಪಕ್ಕದ ಊರಿನಿಂದ ಬರುತ್ತಿದ್ದ ಪಂಜೆ ದೇವರುಗಳು, ಮರಳುತ್ತಿದ್ದವು. ಡೋಲಿ  ಮಸೀದಿಯನ್ನು ಪ್ರವೇಶಿಸುತ್ತಿತ್ತು. ಅಬ್ಬರದ ಹಬ್ಬ ನೋಡಲು ಬಂದ ಹೆಂಗಸರು ಮನೆ ಸೇರುತ್ತಿದ್ದರು……

  ಊರು ಮನೆ ಮನಗಳು ಮೊಹರಂ ದ ಮುಂಜಾನೆ ಗುಂಗಿನಲ್ಲಿ ಹೊತ್ತು ಸರಿದು ಹೋದದ್ದನ್ನು ಗುರುತಿಸಲಾಗುತ್ತಿರಲಿಲ್ಲ. ಸಂಜೆ ನಾಲ್ಕು ಬಡೆಯುತ್ತಿದ್ದಂತೆ ಮತ್ತೆ ಹೆಜ್ಜೆ ಕುಣಿತ, ಹಲಗೆನಾದ. ಪುನಹ ಬಂದು ನೋಡಲು ಮಕ್ಕಳು ಮಹಿಳೆಯರು. ಇದು ಹಬ್ಬದ ಉತ್ತರಾರ್ಧ ದಫನ್ ಸಾಯುವ ಅಥವಾ ಆತ್ಮ ಬಲಿದಾನಗೈದ ಹುಸೇನನ ಮರಣೋತ್ತರ ಕ್ರಿಯಾವಿಧಿ.ಹೀಗೆಂದುಕೊಂಡು ದೇವರನ್ನು ಹೊತ್ತವರ ಮೈಯಲ್ಲಿ ರೌಧ್ರವಿರುತ್ತಿರಲಿಲ್ಲ.
ಆದರೆ ಕೆಂವಸಲ್ ಕುಣಿತ ಮಾತ್ರ ಅಂತಿಮ ಅಬ್ಬರಗೊಳ್ಳುತಿತ್ತು. ಕಳೆದ ರಾತ್ರಿಯಿಡೀ ನಿದ್ದೆಗೆಟ್ಟು ,ಬೆಳಗಿನಿಂದ ಮಾರು ಹೊತ್ತಿನವರೆಗೆ ಹಾಡಿ ಕುಣಿದವರು, ಕುಡಿದು ಕುಪ್ಪಳಿಸುಸವರು ನಾಲ್ಕಾರು ತಾಸು ನಿದ್ದೆಗೈದು ನಿರಾಳ ಮೈ ಮನದಿ ‘ ಅಲಾಯಿ ಆಡಿದೆನು ‘, ಮೊಹರಂ ಕೆಂ ವಸಯ ಆಡಿದೇನು….ಎಂದು ನಿರ್ಮಲ ಹೆಜ್ಜೆಯಿಕುತ್ತಿದ್ದರು ಅದಕ್ಕೆ ಅದರದೇ ಆದ ಸೌಂದರ್ಯ…..ಮತ್ತೊಮ್ಮೆ ಅಲಾಯಿ ಮೊಹರಂ ನ ಪ್ರಮುಖ ಆಕರ್ಷಣೆಯಾಗಿ ಪ್ರದರ್ಶಿತಗೊಳಿತ್ತಿತ್ತು. ಮನಸೂರೆಗೋಳುತಿತ್ತು. ಪ್ರಶಾಂತ ಸಂಜೆಯ ತಾಳಬದ್ಧ ತುಳಿತಕ್ಕೊಮ್ಮೆ ಧುಪ್ಪೆಂದು ಮೇಲೆಳುತ್ತಿದ್ದ ಹುಡಿ ಮಣ್ಣಿನ ದೂಳು ದುಃಖದ ಸಂಕೇತವನ್ನು ಸುತ್ತಾಕಾಶದ ತುಂಬಾ ಹರಡುವಂತಿರುತ್ತಿತ್ತು.

         ಬೆಳಗಿನ ಸಂಕೀರ್ಣ ಸನ್ನಿವೇಶಗಳ ಪಡಿಯಂಚಿನಂತಿರುತ್ತಿದ್ದ ನನ್ನಂತ ಕಿರಿಯರೆಲ್ಲ ಸಂಯಮದ ಸಂಜೆಗಾಲದ ಕೆಂವಸಲ ಆಟದ ಕಿಕ್ಕಿರಿದು ಸೇರುತ್ತಿದ್ದೆವು. ಅಸಂಬದ್ಧ ಹಾಡು ಹಾಡಿನ ಸಾಲುಗಳು ….. ಹೆಜ್ಜೆಯ ತಾಳಕ್ಕೆ ಹೊರಹೊಮ್ಮುತ್ತಿದ್ದವು…. ಚಂಗೆ ಮಾಡ್ಯಾಳಯಿ ಬೋಲ್ _ ತಾನೇ ತಿಂದಾಳಾಯಿ… ಬೋಲ್ …ಗ್ವಾಡಿ  ಮೇಲೆ ಮಸಿ ಗೌಡರ ಸೊಸಿ…. ಬೇನ್ ಗಿಡದಾಗ ಬಿಲ್ಲೋ ಬೆಳ್ಳಕ್ಕಿ….. ಎಂಬೆಲ್ಲಾ ಪೂರ್ವ ಉತ್ತರ ಪದಪುಂಜಗಳನ್ನು ವ್ಯಕ್ತಿ ಗುಂಪಿನ ಮಧ್ಯ ಬಾರಿ ಹೇಳಿಕೊಂಡು ಬಾಯಿ ಕಿಸಿಯುತ್ತಿದ್ದವು. ಇಂಥ ಸಾಲುಗಳು ಹಾಡುಗಳು ಉದ್ದೇಶ, ಹಾಡುತ್ತಿರುವ ಸನ್ನಿವೇಶ, ಅರ್ಥ ಒಂದಕ್ಕೊಂದು ಸಂಬಂಧವಿಲ್ಲದವುಗಳಾಗಿರುತ್ತಿದ್ದವು. ಗಂಡಸಿನ ಅಗಮ್ಯ ವಿಕೃತ ಚಪಲಗಳಿಗೆ , ಹೋಳಿ – ಮೊಹರಂ ಹಬ್ಬಗಳು ಪ್ರಶಸ್ತವಾಗುತ್ತಿದ್ದವು.

   ಸೂರ್ಯ ಮುಳಗಿ ಶಶಿ ಉದಯಿಸುತ್ತಿದ್ದಂತೆ, ಅಗ್ನಿಕುಂಡದ ಕುಣಿ ಮುಚ್ಚುತ್ತಿದ್ದಂತೆ- “ಧಫನ” ಸಂಕೇತ ಪೂರ್ಣಗೊಳ್ಳುತ್ತಿತ್ತು. ಆಗ ದೇವರುಗಳು ಹೊಳೆಗೆ ಹೋಗುತ್ತಿದ್ದವು. ಊರ ಹೊರಗಿನ ಬಾವಿಯಂದು ಹೊಳೆಯೇನಿಸಿಕೊಂಡಿತ್ತು. ಹುಸೇನ್ ಹತನಾದ ಕಾರಣ ದೇವರ ಸೌಮ್ಯ ರೂಪ ಹೊಳೆ ಮುಟ್ಟುವತನಕವಿರುತ್ತಿತ್ತು. ಹೊಳೆಗೆ ಹೊರಟ ಹಾದಿ ಇದ್ದಕ್ಕೂ ಕೆಂವಸಲ ಕುಣಿತ ಮಾತ್ರ ಸಾಗಿರುತ್ತಿತ್ತು. ಹುತಾತ್ಮ ಹುಸೇನನ ಪ್ರಯುಕ್ತ ಪಂಜೆ ದೇವರುಗಳನ್ನು ತೊಳೆದು ಬಿಳಿ ವಸ್ತ್ರತ್ರದಲ್ಲಿ ಸುತ್ತಿ, ಶ್ವೇತ ಸಮಾಧಿಗೊಳಿಸುವ ಮರಣೋತ್ತರ ಕ್ರಿಯೆಗಳು ಜರುಗುತ್ತಿದ್ದಂತೆ ನೆರೆದವರಿಗೆಲ್ಲ ಚೊಂಗೆ- ಕೊಬ್ಬರಿ ವಿತರಣೆಗೋಳುತ್ತಿತ್ತು. ಈ ‘ಚೊಂಗೆ’ ಹಳ್ಳಿ ಹುಡುಗರಿಗೆ ವರ್ಷದ ವಿಭಿನ್ನ ರುಚಿಯಾಗಿ ತೋರುತ್ತಿದ್ದ ಕಾರಣ ಎರಡೆರಡು ಸಲ ಬೇಡಿ ಬಾಯಿ ಚಪ್ಪರಿಸುತ್ತಿದ್ದೆವು. ಸಾಂಕೇತಿಕ ಸಮಾದಿಗೈದು ಡೋಲಿಗೆ ಶ್ವೇತ ವಸ್ತ್ರ ಸುತ್ತಿ ಹೊತ್ತವರು ಹುಸೇನಿ ಹುತಾತ್ಮನಾದ ಹಾಡನ್ನು ಮೇಳ- ಹಿಮ್ಮೇಳನದಲ್ಲಿ ಹಾಡುತ್ತಾ ಮನೆ –ಮಸೀದಿಗೆ ತೆರಳುತ್ತಿದ್ದರು.

    ಅಲ್ವಿದಾಯ, ಅಲ್ವಿದಾಷಾ ಹೈ ಸೈದಾ ಏ …..ಹುಸೇನಿ ಬಲಿ…..ಮತ್ತೆ ಮುಂದಿನ ಮೊಹರಂ ಮುಂದಿನ ವರ್ಷಕ್ಕೆ ನಮ್ಮಗಳ ಮನಸ್ಸು ಹಾತೊರೆದು ಕಾಯುತ್ತಿತ್ತು.

About The Author

3 thoughts on ““ಹಿಂದೂ ಮೋಹ” ರಂ ನೆನಪುಗಳ ಸುತ್ತ ಶಿವಾನಂದ ಕಲ್ಯಾಣಿ”

  1. ಇಂತಹ ಬಾಂಧವರು – ಬಾಂಧವ್ಯ ಲೋಕವ್ಯಾಪಿ ಪಸರಿಸಲಿ. ಉಗ್ರವಾದಿಗಳ, ಭಯೋತ್ಪಾದಕರ, ಕಲ್ಲೆಸೆಯುವವರ, ಬಾಂಬ್ ಹಾಕುವವರ ಸಂತತಿ ನಶಿಸಲಿ

  2. Ilahi Hangaragi

    ಮೊಹರಂ ಹಬ್ಬದ ಕುರಿತಾಗಿ ತಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು sir

Leave a Reply

You cannot copy content of this page

Scroll to Top