ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೀತಿಸುವುದಾದರೆ ಮೊದಲು ನಮ್ಮ ತಂದೆ-ತಾಯಿಯರನ್ನು ಪ್ರೀತಿಸೋಣ. ಗೌರವಿಸುವುದಾದರೆ ಮೊದಲು ನಮ್ಮ ತಂದೆ ತಾಯಿಯರನ್ನು ಗೌರವಿಸೋಣ. ಈ ಜಗತ್ತಿನಲ್ಲಿ ನಿಜವಾಗಿಯೂ ನಮ್ಮ ಸಂತೋಷವನ್ನು ಬಯಸುವವರು ಯಾರಾದರೂ ಇದ್ದಾರೆಂದರೆ ಅದು ನಮ್ಮ ತಂದೆತಾಯಿಗಳು ಮಾತ್ರ.
ಕೆಲವರಿಗೆ ತಂದೆ ತಾಯಿಗಳೇ ಇರುವುದಿಲ್ಲ. ಚಿಕ್ಕಂದಿನಲ್ಲಿ ತಂದೆಯನ್ನೊ, ತಾಯಿಯನ್ನೊ ಇಲ್ಲವೆ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾಗಿಯೋ ಅಥವಾ ಇನ್ನಾರದೊ ಆಶ್ರಯದಲ್ಲಿಯೊ ಬೆಳೆಯಬೇಕಾಗುತ್ತದೆ. ಆದರೆ ತಂದೆ-ತಾಯಿಗಳಿದ್ದವರು ನಿಜವಾಗಿಯೂ ಪುಣ್ಯವಂತರು. ಕಣ್ಣಿಗೆ ಕಾಣುವ ದೈವ ಎಂದರೆ ಅದು ನಮ್ಮ ತಂದೆ-ತಾಯಿಗಳೇ.
ಒಂಬತ್ತು ತಿಂಗಳು ಹೊತ್ತು-ಹೆತ್ತು, ೨೦-೩೦ ವರ್ಷ ನಮ್ಮನ್ನು ಸಲುಹಿ, ನಮಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಉದ್ಯೋಗ ಸಿಕ್ಕು ನಮ್ಮ ಕಾಲ ಮೇಲೆ ನಾವು ನಿಲ್ಲುವವರೆಗೂ ನಮಗೆ ಆಸರೆಯಾಗಿದ್ದು, ನಮ್ಮ ಬದುಕಿಗೊಬ್ಬ ಜೀವನ ಸಂಗಾತಿಯನ್ನು ಹುಡುಕಿ ನಮಗೊಂದು ಮದುವೆ ಮಾಡುವವರೆಗಿನ ಜವಾಬ್ದಾರಿಯನ್ನು ಹೊತ್ತು, ನಮ್ಮ ಮಕ್ಕಳು ಚನ್ನಾಗಿರಲೆಂದು ಶ್ರಮಿಸುವ ಜೀವಗಳೆಂದರೆ ಅದು ನಮ್ಮ ತಂದೆ-ತಾಯಿಗಳು.
ಮಕ್ಕಳಿಗಾಗಿ ಇಷ್ಟೆಲ್ಲ ಕಷ್ಟಪಡುವ ತಂದೆತಾಯಿಗಳಿಗೆ ಮಕ್ಕಳಾದ ನಾವುಗಳು ಇಂದು ಮಾಡುತ್ತಿರುವುದಾದರೂ ಏನು? ಇತ್ತೀಚಿಗೆ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿವೆ ಇದಕ್ಕೆ ಕಾರಣವೇನು? ಹೆತ್ತ ಮಕ್ಕಳು ತಮ್ಮ ತಂದೆತಾಯಿಗಳನ್ನು ನಿರ್ಲಕ್ಷಿಸಿ, ವಯಸ್ಸಾದ ಕಾಲದಲ್ಲಿ ಅವರನ್ನು ಸಾಕಲಾರದೇ ಹೋಗಿದ್ದಕ್ಕೆ ಆ ವಯೋವೃದ್ಧ ತಂದೆತಾಯಿಗಳು ವೃದ್ಧಾಶ್ರಮ ಸೇರುತ್ತಿರುವುದು ಒಂದೆಡೆಯಾದರೆ. ಮತ್ತೊಂದೆಡೆ ತಂದೆ ತಾಯಿಗಳು ಕಷ್ಟಪಟ್ಟು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ, ಮಕ್ಕಳು ಒಳ್ಳೆಯ ಉದ್ಯೋಗ ಹೊಂದುವವರೆಗೆ ಅವರೊಂದಿಗೆ ಬೆನ್ನೆಲುಬಾಗಿರುತ್ತಾರೆ. ಆದರೆ ಹೀಗೆ ಒಳ್ಳೆಯ ವಿದ್ಯೆ ಪಡೆದು ಉದ್ಯೋಗ ಪಡೆದ ಮಕ್ಕಳು ದೂರದ ಊರಿನಲ್ಲೊ, ವಿದೇಶಗಳಲ್ಲಿಯೊ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿದ್ದೂ ತಂದೆತಾಯಿಗಳು ಒಂಟಿಯಾಗಿಯೋ ಅಥವಾ ವೃದ್ಧಾಶ್ರಮದಲ್ಲಿಯೊ ಬೆಳೆಯಬೇಕಾಗುತ್ತದೆ.
ಪ್ರಜ್ಞಾವಂತರಾದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮಗೆ ಜೀವಕೊಟ್ಟು ಬೆಳೆಸಿ ನಮಗೊಂದು ಅಸ್ಥಿತ್ವ ರೂಪಿಸಿ, ಸಮಾಜದಲ್ಲಿ ನಮಗೊಂದು ಮೂಲಭೂತ ಐಡೆಂಟಿಟಿಯನ್ನು ಕೊಟ್ಟವರು ನಮ್ಮ ತಂದೆತಾಯಿಗಳು. ಅಂತಹ ತಂದೆತಾಯಿಗೆ ವಯಸ್ಸಾದ ಕಾಲದಲ್ಲಿ ಮಕ್ಕಳು ನೆರಳಾಗದಿದ್ದರೆ ಅಂತಹ ಮಕ್ಕಳು ಇದ್ದರೇನು ಫಲ? ಮಕ್ಕಳನ್ನು ಹೆರುವುದಾದರೂ ಯಾವ ಸಾರ್ಥಕ್ಯಕ್ಕೆ ಎಂದೆನಿಸದೆ ಇರಲಾರದು ಆ ಹಿರಿಯ ಜೀವಗಳಿಗೆ.  
ತಂದೆತಾಯಿಗಳ ಹೆಸರಿನಲ್ಲಿದ್ದ ಆಸ್ತಿ ಬೇಕು ಆದರೆ ಅವರು ಬೇಡಾ ಎಂಬುದು ಯಾವ ನ್ಯಾಯ? ನಾವು ಮಕ್ಕಳಾಗಿದ್ದಾಗ ತಂದೆ ತಾಯಿಗಳು ನಮಗೆ ಮಾಡಿದ ಕಾಳಜಿಯಲ್ಲಿ ಅರ್ಧದಷ್ಟಾದರೂ ಪ್ರೀತಿ ಕಾಳಜಿಯನ್ನು ನಾವು ಅವರ ವಯಸ್ಸಾದ ಕಾಲದಲ್ಲಿ ಮಾಡಿದರೆ ನಿಜಕ್ಕೂ ಜನ್ಮ ಸಾರ್ಥಕವಾಗುತ್ತದೆ.
ಮತ್ತೆ ನಾವ್ಯಾರು ಮರೆಯಬಾರದು ಜೀವನದ ಕಾಲಚಕ್ರದಲ್ಲಿ ನಮಗೂ ಒಂದು ದಿನ ಮುಪ್ಪು ಬರುತ್ತದೆ. ಆಗ ನಮ್ಮ ಕೈಕಾಲುಗಳಲ್ಲೂ ಶಕ್ತಿ ಕುಂದಿರುತ್ತದೆ. ಆಗ ನಮಗೂ ಬೇರೆಯವರ ಆಶ್ರಯ ಬೇಕಾಗುತ್ತದೆ. ನಾವು ನಮ್ಮ ವಯಸ್ಸಾದ ತಂದೆತಾಯಿಗಳನ್ನು ಗೌರವಿಸಿ ಅವರ ಸೇವೆ ಮಾಡದಿದ್ದರೆ ನಮಗೂ ನಮ್ಮ ಮಕ್ಕಳು ನಮ್ಮಂತೆಯೇ ವಯಸ್ಸಾದ ನಮ್ಮನ್ನು ನೋಡಿಕೊಳ್ಳಲು ನಿರಾಕರಿಸಬಹುದು ಅಥವಾ ಯಾವುದೊ ವೃದ್ಧಶ್ರಮಗಳಿಗೆ ನಮ್ಮನ್ನು ಕಳುಹಿಸಬಹುದು. ಹಾಗಾಗಿ ನಾವು ಎನೇ ಮಾಡಿದರೂ ಅದು ನಮಗೆ ತಿರುಗಿ ಬರುತ್ತದೆ. ಅದು ಒಳಿತಾದರೂ ಸರಿ, ಕೆಡಕಾದರೂ ಸರಿ. ಅದಕ್ಕೆ ಅಲ್ವೆ ನಮ್ಮ ಜನಪದರು ಹೇಳೊದು ಮಾಡಿದ್ದುಣ್ಣೊ ಮಾರಾಯಾ ಎಂದು. ಹಾಗಾಗಿ ನಾವು ನಮ್ಮ ಹಿರಿಯರಿಗೆ, ತಂದೆತಾಯಿಗಳಿಗೆ ಮಾಡುವ ಸೇವೆ ಅದು ಕೇವಲ ಸೇವೆಯಲ್ಲ ಅದು ನಮ್ಮ ಭಾಗ್ಯ ಅದು ನಮ್ಮ ಪುಣ್ಯ ಎಂದೇ ಭಾವಿಸಬೇಕು. ಈ ಪುಣ್ಯದ ಫಲ ಖಂಡಿತವಾಗಿಯೂ ನಮ್ಮನ್ನು ಕಾಪಾಡುತ್ತದೆ.
‘ಮಾತೃ ದೇವೋ ಭವ, ಪಿತೃದೇವೋ ಭವ’ ಎಂಬ ಸನಾತನ ಸಂಸ್ಕೃತಿ ನಮ್ಮದು. ತಂದೆತಾಯಿಗಳ ಬಗೆಗಿನ ಈ ಪೂಜ್ಯನೀಯ ಭಾವ ನಮ್ಮ ಮನೆಮನಗಳಲ್ಲಿ ಎಂದಿಗೂ ಹಸಿರಾಗಿರಲಿ. ನಮಗೆ ಉಸಿರು ನೀಡಿದ ಹಿರಿಯ ಜೀವಗಳನ್ನು ಸದಾ ಗೌರವಾದರಗಳಿಂದ ಕಾಣುವ ಸಂಸ್ಕಾರವನ್ನು  ಉಳಿಸಿ-ಬೆಳಸುವುದು ನಮ್ಮೆಲ್ಲರ ಕರ್ತವ್ಯ.

———————————–

About The Author

1 thought on ““ಕಣ್ಣಿಗೆ ಕಾಣುವ ದೈವ ಎಂದರೆ ಅದು ನಮ್ಮ ತಂದೆ-ತಾಯಿಗಳು”ಡಾ. ಸುಮಂಗಲಾ ಅತ್ತಿಗೇರಿ”

Leave a Reply

You cannot copy content of this page

Scroll to Top