ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವನು ಕಾಲಿಲ್ಲದೆ ಕುಂಟುತ್ತಾ, ಕುಂಟುತ್ತಾ,  ಇನ್ನೊಬ್ಬರ ಆಶ್ರಯವನ್ನು ಬಯಸುತ್ತಿದ್ದನು  ಆದರೆ ಇತ್ತೀಚಿಗೆ ಅವನು ಸ್ವತಂತ್ರವಾಗಿ ಓಡಾಡುತ್ತಾನೆ.

 ಇಲ್ಲಿ,  ಇನ್ನೊಬ್ಬಳು ಕಣ್ಣಿಲ್ಲದೆ ಜಗತ್ತನ್ನು ನೋಡಲಾರದ ಪರಿಸ್ಥಿತಿಯಲ್ಲಿದ್ದಾಗ, ಈಗ  ಯಾರ ಸಹಾಯವಿಲ್ಲದೆ ತನ್ನ ಬದುಕಿನಲ್ಲಿ ಮಹತ್ವದ ಸಾಧನೆಯನ್ನು  ಮಾಡುತ್ತಾಳೆ.

ಮೇಲಿನ ಎರಡು ಸನ್ನಿವೇಶಗಳು ವಿಕಲಚೇತನರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು  ತಂದಿರುವುದನ್ನು ನಮಗೆ ಮನದಟ್ಟಾಗುತ್ತದೆ.  ಇತ್ತೀಚಿಗೆ ಸಾಕಷ್ಟು ಹೊಸ ಹೊಸ  ವೈಜ್ಞಾನಿಕ ಸಂಶೋಧನೆಗಳು, ಹೊಸ ಹೊಸ ಪರಿಕರಗಳ ಉತ್ಪಾದನೆಗಳು, ವಿಕಲಚೇತನರ ಬಾಳಿನಲ್ಲಿ ಹೊಸ ಬೆಳಕನ್ನು ಮೂಡಿಸಿವೆ.  ಅವರಲ್ಲಿ ಮೂಡಿರುವ ನಿರಾಶೆಯ ಕಾರ್ಮೋಡ, ಹತಾಶೆಯ ನೋವುಗಳು ಕರಗಿ ಇವುಗಳನ್ನು ಕಿತ್ತೊಗೆದು ಬದುಕಿನಲ್ಲಿ ಹೊಸ ಚೈತನ್ಯ ಮೂಡುವಂತಾಗಿದೆ.

 ಈ ರೀತಿಯ ಬದುಕಿನಲ್ಲಿ ಹೊಸ ಬೆಳಕನ್ನು ಕಂಡ ವಿಶೇಷ ವಿಕಲಚೇತನರ ಬದುಕಿಗೆ ಆಸರೆಯಾಗಿ ನಿಂತವರು ಒಬ್ಬಿಬ್ಬರಲ್ಲ ಹತ್ತು  ಹಲವಾರು ವ್ಯಕ್ತಿಗಳ ಬೆವರಿನ ಪರಿಶ್ರಮವೆನ್ನಬಹುದು. ವಿಕಲಚೇತನರಾಗಿದ್ದುಕೊಂಡೇ ಹಲವರು ಸಾಧನೆಗಳನ್ನು ಮಾಡುತ್ತ, ಜಗತ್ತಿಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡಿದವರ ದೊಡ್ಡ ಪಡೆಯೇ ನಮ್ಮ ಮುಂದಿದೆ.

 ಇದಕ್ಕಾಗಿ  ವಿಕಲಚೇತನರ ಕುಟುಂಬದವರು,  ವೈದ್ಯರ ತಂಡಗಳು,  ಸ್ವಯಂ ಸೇವಾ ಸಂಸ್ಥೆಗಳ  ಸೇವಕರ, ಶಿಕ್ಷಕರ  ಅಪರಿಮಿತ ಪರಿಶ್ರಮವೇ ಕಾರಣ ಎನ್ನಬಹುದು.  ಒಂದು ಕಾಲದಲ್ಲಿ ವಿಶೇಷ ಚೇತನ ಮಗು ಹುಟ್ಟಿತೆಂದರೆ ಶಾಪ ಎಂದೇ ಭಾವಿಸಲಾಗಿತ್ತು. ಆ ನೋವಿನಲ್ಲಿಯೂ ವಿಶೇಷ ಚೇತನ ಸಾಧಕರ ಸಾಧನೆ ವರ್ಣನಾತೀತ.

ಬಾಲ್ಯದಿಂದಲೋ ಅಥವಾ ಆಕಸ್ಮಿಕ ಅಪಘಾತದ ವೇಳೆಯಿಂದಲೋ ಈ ರೀತಿಯ ಆಕಸ್ಮಿಕವಾಗಿ ಉಂಟಾಗುವ ಅನೇಕ ಅವಘಡಗಳಿಂದಾದ ವಿಕಲತೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಿಪಡಿಸಿ, ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸುವುದಕ್ಕಾಗಿ ಸಾಕಷ್ಟು ವೈದ್ಯರು ಪರಿಶ್ರಮ ಪಡುತ್ತಾರೆ.  ಸ್ವಂತ ತಮ್ಮ ಮಕ್ಕಳಂತೆ ಹಗಲಿರುಳು  ಪರಿಶ್ರಮಪಡುತ್ತಲೇ  ತಮ್ಮ ವೈಯಕ್ತಿಕ ಬದುಕನ್ನೂ ಕೂಡ ಬದಿಗೊತ್ತುತ್ತಾ, ವಿಶೇಷ ಚೇತನರ ಆರೈಕೆ ಮಾಡುವ ವೈದ್ಯರ ತಂಡದ ಪರಿಶ್ರಮವನ್ನು ಯಾವತ್ತೂ ಮರೆಯುವಂತಿಲ್ಲ. ಹಾಗಾಗಿ “ವೈದ್ಯದೇವೋ ನಾರಾಯಣ”  ಎನ್ನುವ ಮಾತು ಸತ್ಯ.   ಹೀಗಾಗಿ ಅನೇಕ ಹಾರೈಕೆಗಳು, ಮಸಾಜ್ ಗಳು, ಮಾತ್ರೆಗಳು, ಸಂಶೋಧನೆಗಳು, ಟಾನಿಕ್ ಗಳು,…..ಕೆಲಸ ಮಾಡುತ್ತವೆ.

ಅಂಗವಿಕಲರಾಗಿ ಹುಟ್ಟಿದಾಗಿನಿಂದ ಮಾನಸಿಕವಾಗಿ ಅನೇಕ ನೋವುಗಳನ್ನು ಅನುಭವಿಸುತ್ತಾ, “ನನ್ನ ಮಗ ಹೀಗೆ ಹುಟ್ಟಿಬಿಟ್ಟನಲ್ಲ…. ನನ್ನ ಮಗಳು ಹೀಗೆ ಹುಟ್ಟಬಾರದಾಗಿತ್ತು…”  ಎನ್ನುವ ಸಂಕಟಗಳನ್ನು ಅನುಭವಿಸುತ್ತಾ, ಅವರ ಮಲ ಮೂತ್ರಾದಿಗಳನ್ನು ಸ್ವಚ್ಛಗೊಳಿಸುವ ತಂದೆ ತಾಯಿಗಳ ಸಂಕಟಗಳನ್ನು ಒಂದು ಮಾತಿನಲ್ಲಿ ಹೇಳಿದರೆ ಸಾಲುವುದೇ ಇಲ್ಲ.

 ಹಾಗೆಯೇ ಮುಂದುವರಿದು ಶಾಲೆಗೆ ದಾಖಲಾದ ಅಂತಹ ಮಕ್ಕಳನ್ನು ನಿರ್ವಹಿಸುವ ಶಿಕ್ಷಕರ ಸಂಯಮ, ತಾಳ್ಮೆ ಅದಕ್ಕೆ ಮಿತಿಯೇ ಇಲ್ಲ. ಅವರಿಗೆ  ಅಕ್ಷರಭ್ಯಾಸದ ಜೊತೆ ಜೊತೆಗೆ ಸಾಮಾಜಿಕವಾಗಿ ಮತ್ತು ಸಾಮಾಜೀಕರಣಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ.  ಅಂತಹವರ ಪರಿಶ್ರಮವನ್ನು ನಾವು ನೆನಪಿಸಲೇಬೇಕು.

 ವಿಕಲಚೇತನರೆಂದರೆ… ಮೂಗು ಮುರಿಯುವ ಸಮಾಜವು ಮುಂದೊಂದು ದಿನ ಸಮಾಜವೇ ಮೂಗಿನ ಮೇಲೆ ಬೆರಳಿಡುವಂತೆ ಸಾಧನೆಗಳನ್ನು ಮಾಡಿ ತೋರಿಸಿದಾಗ ವಿಕಲಚೇತನರ ಸಾಧನೆಗೆ ಸಹಾಯ  ಮಾಡಿದವರ ಶ್ರಮ ಸಾರ್ಥಕವಾಗುತ್ತದೆ. ಹಾಗೆಯೇ ವಿಕಲಚೇತನ ಮಕ್ಕಳೆಂದರೆ ‘ದೇವರ ಸ್ವರೂಪ’ , ದೇವರೆಂದರೇ ಒಳಿತು’  ಅವರು ಯಾವುದೇ ಕಲ್ಮಶವನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸದಾ ತನ್ನ ಕೊರತೆಯನ್ನು ನೆನಪಿಸಿಕೊಂಡು, ತಾನು ಕೂಡ ಇತರರಂತೆ ಮುನ್ನಲೆಗೆ ಬರಬೇಕೆಂದು ಆಲೋಚಿಸುತ್ತಾರೆ. ಶ್ರಮ ಪಡುತ್ತಾರೆ. ಸಾಧನೆಯನ್ನು ಮಾಡಲು ಮುಂದುವರಿಯುತ್ತಾರೆ.

 ಇಂತಹವರಿಗೆ, ನಿರಂತರವಾಗಿ ಪಾಲಕರು ಪಡುವ ಶ್ರಮ  ಆವರ್ಣನೀಯ.  ಹಾಗಾಗಿ ವಿಕಲಚೇತನರ ಸಾಧನೆಯ ಉತ್ತುಂಗ ಹಾಗೂ  ಅವರ ವ್ಯಕ್ತಿತ್ವ ರೂಪಿಸುವಲ್ಲಿ , ಬಹುಮುಖ ಪ್ರತಿಭೆಯನ್ನು ಗುರುತಿಸುವಲ್ಲಿ  ಅದಕ್ಕೆ ನೀರೇರೆದು ಪೋಷಿಸುವಲ್ಲಿ ಪಾಲಕರ ಶ್ರಮ ಬಹು ದೊಡ್ಡದು.   ಇದನ್ನು ನಾವೇಲ್ಲ ಕೊಂಡಾಡಲೇಬೇಕು. ಸಮಾಜದ ಮುಖ್ಯವಾಹಿನಿಯಲ್ಲಿರುವ ನಾವುಗಳು ವಿಕಲಚೇತನರೂ ಕೂಡ ನಮ್ಮವರು ಮತ್ತು ನಮ್ಮಂತೆ ಎಂದು ಪರಿಗಣಿಸಿದಾಗ ಮಾತ್ರ ಈ ಸಮಾಜ ಆರೋಗ್ಯವಂತವಾಗಿರಲು ಸಾಧ್ಯವಾಗುತ್ತದೆ.

ಸ್ನೇಹಿತರೇ,  ಅದೆನೇ ಇರಲಿ ವಿಕಲಚೇತನರ ಬೆಳವಣಿಗೆ ಪ್ರಗತಿಯಲ್ಲಿ ಸದಾ ಶ್ರಮವಹಿಸುತ್ತಿರುವ ಸ್ವಯಂಸೇವಕರ, ಶಿಕ್ಷಕರ, ಪಾಲಕ ಪೋಷಕರ ಹಾಗೂ ಸಂಶೋಧಕರ, ವೈದ್ಯರುಗಳ,  ನರ್ಸುಗಳ ಹಾಗೂ ಸಹಾಯಕರ ಶ್ರಮವನ್ನು ನಾವು ಯಾವತ್ತೂ ಅಲ್ಲಗಳೆಯುವಂತಿಲ್ಲ. ಇವತ್ತು ನಾವು ಅನೇಕ ವಿಕಲಚೇತನ ಸಾಧಕರನ್ನು ಸ್ಮರಿಸುವುದಾದರೆ ಅದರ ಹಿಂದೆ ಇಂತಹವರ ಶ್ರಮ ಇದ್ದೇ ಇರುತ್ತದೆ.  ಅಂತಹವರ ಪರಿಶ್ರಮವನ್ನು ನಾವು ಗೌರವಿಸಲೇಬೇಕು. ಅಂತಹವರಿಂದ ಸಮಾಜ  ಉತ್ತಮವಾಗಬಲ್ಲದು.  ನಾವೆಲ್ಲರೂ ಅವರ ಶ್ರಮವನ್ನು ಗೌರವಿಸೋಣ ಎಂದು ಆಶಿಸುವೆ.


About The Author

1 thought on “”

  1. ವಿಕಲಚೇತನರ ಬಗ್ಗೆ ಬಹಳಷ್ಟು ವಿಷಯಗಳನ್ನು ವಿವರವಾಗಿ ಪ್ರಸ್ತಾಪಿಸಿದ್ದೀರಿ. ತುಂಬಾ ಉಪಯುಕ್ತ ಲೇಖನ. ಅಭಿನಂದನೆಗಳು.

Leave a Reply

You cannot copy content of this page

Scroll to Top