ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈಗ ಆಕೆ ಇರಬೇಕಾಗಿತ್ತು….

ಲಕ್ಷ್ಮಿ ಕೆ ಬಿ

Female Statue Pictures | Download Free Images on Unsplash

ಸದಾ ನನ್ನ ಮುಖಕಮಲದಲ್ಲಿ ಕುಳಿತು
ಕಣ್ಣ ಕೊಳದೊಳಗೆ ನಿಧಾನವಾಗಿ ಇಳಿದು
ಎದೆಯ ಸುಳಿಯೊಳಗೆ ಸದಾ ಸುಳಿದು
ಹಾಲ್ಜೇನ ಕಡಲೊಳಗೆ ನನ್ನ ಮುಳುಗಿಸಿ ಮೀಯಿಸುತ್ತಿದ್ದ
ಆಕೆ ಈಗ ಇರಬೇಕಾಗಿತ್ತು..

ನನ್ನ ಭಾವ ಪದಗಳಿಗೆ ಭಾವಗೀತೆಯಾಗಿ
ನನ್ನ ಕವಿಮನದ ಕಾಡುವ ಕವಿತೆಯಾಗಿ
ನನ್ನ ಬಿಸಿಯುಸಿರಿಗೆ ಚಾಮರವಾಗಿ
ರಾಗ ರಂಗಿನ ಸಂಗೀತದ ಅಲೆಗಳಲಿ ನನ್ನ ತೇಲಿಸುತ
ನಿದ್ದೆ ಬಾರದ ನನ್ನ ಕಂಗಳಿಗೆ ನಿದ್ರಾಮಾತೆಯಾಗಿದ್ದ
ಆಕೆ ಈಗ ಇರಬೇಕಾಗಿತ್ತು..

ಹೇಳುವ ಮುನ್ನವೇ ಮನವರಿತು ಬಾಳುತ್ತಿದ್ದವಳು
ಒಂದು ಕಪ್ ಚಹಾದೊಂದಿಗೆ ಬೇಸರವ ಮರೆಸಿ
ನನ್ನ ನೋವ ಹಾಡುಗಳಿಗೆ ನಲಿವಿನಾ ದೀಪವಿರಿಸಿ
ನನ್ನ ಬಾಳ ದಾರಿಯುದ್ದಕ್ಕೂ ಬೆಳಕ ಹಾಸುತ
ಒಲವ ಸಸಿ ಬೆಳೆಸಿದ
ಆಕೆ ಈಗ ಇರಬೇಕಾಗಿತ್ತು..

ನನ್ನ ಕಾವ್ಯಕ್ಕೆ ಮುನ್ನುಡಿ ಯಾದರೂ
ಬೆನ್ನುಡಿಯಾಗು ಳಿದವಳು
ನನ್ನ ಪ್ರತಿ ಅಕ್ಷರಕ್ಕೂ ಇಣುಕು ಹಾಕಿ
ಸದ್ದಿಲ್ಲದೆ ತನ್ನ ರೂಪ ಮೂಡಿಸಿ
ನನ್ನ ಕಾವ್ಯದ ಒಳಹೊರಗನ್ನು ಆವರಿಸಿ
ಮೌನವಾಗಿ ಮರೆಯಾದ
ಆಕೆ ಈಗ ಇರಬೇಕಾಗಿತ್ತು..

ಎಷ್ಟು ಬರೆದರು ಬರೆಯಿಸಿಕೊಳ್ಳುವ ಪ್ರೀತಿಯ ಸೆಲೆ
ತನ್ನ ಮರೆತು ನನ್ನ ಮೆರೆಸಿದ ಪ್ರೇಮದ ಕಲೆ
ಸದಾ ತನ್ನ ಗುಂಗಿನಲ್ಲೆ ನನ್ನ ಹಿಡಿದಿಡುವ ಒಲವಿನ ಬಲೆ
ತನ್ನುಸಿರ ಕೊನೆಯಲ್ಲೂ ನನ್ನ ಹೆಸರನೇ ಉಸುರಿದ
ಆಕೆ ಈಗ ಇರಬೇಕಾಗಿತ್ತು…..


About The Author

Leave a Reply

You cannot copy content of this page

Scroll to Top