ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ… ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು ಮರ.. ಅಬ್ಭಾ! ಎಷ್ಟೊಂದು ಹೂವು ನೋಡು… ಅಲ್ನೋಡು ಕಾಕಿ `ಕಾವ್ ಕಾವ್’ ಅದರ ಬಳಗಾನೆಲ್ಲಾ ಕರೀತಿದೆ. ಹೌದಾ.. ಹಾರಿಹೋಯ್ತಾ ಅದು. ಅಲ್ಲೇ ನೋಡ್ತಾ ಇರು ಈಗ ಗಿಣಿಮರಿ ಬರತ್ತೆ ಅಲ್ಲಿ… ನೋಡ್ದ್ಯಾ ನೋಡ್ದ್ಯಾ ಎಷ್ಟು ಚೆನ್ನಾಗಿದೆ ನೋಡು.. ಈಗ ನೋಡು ಅದರ ಫ್ರೆಂಡೂ ಬಂತು.. ಏನೋ ಮಾತಾಡ್ಕೊಂಡು ಒಟ್ಗೆ ಹಾರೋದ್ವು. ಇಲ್ನೋಡಿಲ್ನೋಡು ಪಕ್ಕದ್ಮನೆ ಮೀನಾ ಅಜ್ಜಿ ಒಣಗಿ ಹಾಕಿರೋ ಬೇಳೇನ ಎಷ್ಟೊಂದು ಗುಬ್ಬಿಗಳು ತಿಂತಾ ಇವೆ.” ಅಷ್ಟರಲ್ಲಿ ಎದುರಂಗಡಿಯ ಬದರಿ ಮಾಮ ಪುಟ್ಟೂನ ಕರೀತಾನೆ “ಬರ್ತೀಯಾ ನಮ್ಮಂಗಡೀಗೆ ಬಿಸ್ಕತ್ತು, ಚಾಕಲೇಟು ಎಲ್ಲಾ ಕೊಡ್ತೀನಿ.” “ಆಮೇಲ್ಬರ್ತೀನಿ” ಅನ್ನೂ ಮಾಮಂಗೆ… ಅಲ್ನೋಡು ತರಕಾರಿ ಗಾಡಿ ಬರ್ತಾ ಇದೆ. ಅಜ್ಜೀನ ಕೇಳ್ಕೊಂಡು ಬರೋಣ್ವಾ ಏನು ತರಕಾರಿ ಬೇಕೂಂತ” ….. ಹೀಗೆ ಮಾತಾಡಿಸ್ತಾ ಇದ್ರೆ ಟೈಂಪಾಸಾಗದೆ ಅಳ್ತಾ ಇದ್ದ ಮಗು ಬೇರೆ ಪ್ರಪಂಚಕ್ಕೇ ಹೋಗ್ಬುಡತ್ತಲ್ವಾ… ಮಗೂನೆ ಯಾಕೆ?!.. ನಮಗೂ ಮನೆಯ ಏಕತಾನತೆ ಬೇಸರ ಬಂದರೆ ಒಂದು ಸ್ವಲ್ಪ ಹೊತ್ತು ಮನೆಯ ಮುಂದೋ ಅಥವಾ ಬಾಲ್ಕನಿಯ ಕಿಟಕಿಯೆದುರೋ ಕೂತು ಹಾಗೇ ಬೀದಿಯ ಕಡೆ ನೋಡುತ್ತಿದ್ದರೆ ಎಷ್ಟು ವೈವಿಧ್ಯಮಯ ಪ್ರಪಂಚದಲ್ಲಿ ನಾವೂ ಕಳೆದುಹೋಗುತ್ತೇವೆ…. ಏಳುವಾಗಲೇ `ಸೊಪ್ಪೋ ಸೊಪ್ಪು’ ಎಂದು ಕೂಗಿಕೊಂಡು ಬರುವ ಮುದುಕನ ಕರೆಯಿಂದಲೇ ನನಗೆ ದಿನವೂ ಬೆಳಗಾಗುವುದು. ಬೆಳಗಿನ ಐದು ಗಂಟೆಗೆ ಮುಲ್ಲಾ `ಏಳಿ ಬೆಳಗಾಯಿತು’ ಎಂದು ಕರೆದಾಗ ಎಚ್ಚರಾದರೂ `ಸ್ವಲ್ಪ ಹೊತ್ತು ಬಿಟ್ಟು ಏಳೋಣ’ ಎಂದು ಮುದುರಿಕೊಂಡವಳನ್ನು ಆರೂವರೆಯಾಯಿತು ಇನ್ನಾದರೂ ಏಳು ಎಂದು ಎಬ್ಬಿಸುವುದು ಸೊಪ್ಪಿನವನ ಕರೆಯೇ. ಎದ್ದ ಐದು ಹತ್ತು ನಿಮಿಷಗಳಲ್ಲಿಯೇ `ಹಾಲು’ ಎಂದು ಕೂಗುತ್ತಾ ಹಾಲಿನ ಪ್ಯಾಕೆಟ್ಟನ್ನು ತಂದಿಡುವ ಬದರಿ. `ಹೂವು’ ಎಂದು ಹೂವಿನ ಸರವನ್ನು ಬಾಗಿಲಿಗೆ ಸಿಕ್ಕಿಸಿ ಹೋಗುವ ಹೂವಮ್ಮ. ಕಾಫಿಯ ಲೋಟ ಹಿಡಿದು ಬರುವ ವೇಳೆಗೆ ದಿನ ಪತ್ರಿಕೆ ಎಸೆದು ಹೋಗುವ ಹುಡುಗ…. ಎಲ್ಲರೂ ಹೊರಗಿನ ಜಗತ್ತಿನ ಸಂಪರ್ಕವಾಹಕರು. ಹೂವಿನ ಗಾಡಿಯ ಹಿಂದೆಯೇ ತೆಂಗಿನ ಕಾಯಿ ಮಾರುವವನು ಬರುತ್ತಾನೆ. ಎಂಟು ಗಂಟೆಗೆ ತರಕಾರಿ ಗಾಡಿಯವರ ಸಾಲು ಶುರುವಾಗುತ್ತದೆ. ಕೆಲವು ಗಾಡಿಗಳು ಒಂದೊಂದೇ ತರಕಾರಿಯದು, ಟೊಮೇಟೋ, ಈರುಳ್ಳಿ, ಅವರೆ ಕಾಯಿ’ ಇಂತವು. ಇನ್ನು ಕೆಲವು ಡಿಪಾರ್ಟ್-ಮೆಂಟಲ್ ಸ್ಟೋರಿನ ಹಾಗೆ ಶುಂಟಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನಿಂದ ಶುರುವಾಗಿ ಎಲ್ಲ ಬಗೆಯ ತರಕಾರಿಗಳನ್ನೂ ಕಣ್ಣಿಗಂದವಾಗುವ ಹಾಗೆ ಜೋಡಿಸಿಕೊಂಡು ಬಂದ ತರಕಾರಿ ಗಾಡಿಗಳು. ಮನೆಯೊಳಗೇ ಇದ್ದರೂ, ಅವರ ಧ್ವನಿಯ ಮೇಲೆ ಇಂತದೇ ಗಾಡಿ ಬಂದಿದೆಯೆಂದು ಅಂದಾಜಾಗುವಷ್ಟರ ಮಟ್ಟಿಗೆ ಅವರ ಧ್ವನಿ ಮೆದುಳಿನೊಳಗೆ ಮುದ್ರಿತವಾಗಿರುತ್ತದೆ. ಹೀಗೇ ದಿನಾ ಬೆಳಗ್ಗೆ ಏಳೂವರೆಗೆ `ರೋಜಾ ಹೂವು ಶ್ಯಾವಂತ್ಗೆ ಹೂವೂ..’ ಅಂತ ಗೊಗ್ಗರು ದನಿಯಲ್ಲಿ ಕೂಗಿಕೊಂಡು ಬರುತ್ತಿದ್ದ ಮುದುಕನ ಧ್ವನಿ ಮೂರ್ನಾಲ್ಕು ದಿನ ಕೇಳದೇ ಏನೋ ಕೊರೆಯಾದಂತೆನಿಸುತ್ತಿತ್ತು. ನಂತರ ಅವನು ಮುಂದಿನ ಬೀದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವಾಗ ಸೇವಾಕ್ಷೇತ್ರ ಆಸ್ಪತ್ರೆಯ ಬಳಿ ಹೃದಯಾಘಾತವಾಗಿ ದಾರಿಯಲ್ಲೇ ಸತ್ತಿದ್ದ ಸುದ್ದಿ ಕೇಳಿದಾಗ ಬಂದುಗಳೊಬ್ಬರನ್ನು ಕಳೆದುಕೊಂಡ ಭಾವ ಬಹಳದಿನಗಳು ಆ ಹೊತ್ತಿಗೆ ಕಾಡುತ್ತಿತ್ತು. ಹನ್ನೊಂದು ಗಂಟೆಯ ವೇಳೆಗೆ ಬರುವ ಎಳನೀರು ಮಾರುವವನು, ಹಣ್ಣಿನ ಬುಟ್ಟಿ ಹೊತ್ತು ಬರುವವನು “ಪಕ್ಕದವ್ರಿಗೆ ಹೇಳ್ಬೇಡಿ. ನಿಮಗಂದ್ರೆ ಎರಡು ರೂಪಾಯಿ ಕಮ್ಮಿಗೇ ಕೊಡ್ತಿದೀನಿ” ಎಂದು ಎಲ್ಲರ ಮನೆಯಲ್ಲೂ ಹಾಗೆ ಹೇಳಿಯೇ ವ್ಯಾಪಾರ ಮಾಡಿದ್ದರೂ, ಅವನು ಹೇಳಿದ್ದು ನಮಗಷ್ಟೇ ನಿಜವೆಂದು ಆ ಕ್ಷಣಕ್ಕಾದರೂ ನಂಬುವಂತಾಗುತ್ತದೆ. ಮಧ್ಯಾನ್ಹದ ವೇಳೆ ಬರುವ ಪೈನಾಪಲ್, ಸೌತೆಕಾಯಿ, ಇಂತವನ್ನು ಹೆಚ್ಚಿಕೊಡುವ ಗಾಡಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹೂಕುಂಡಗಳನ್ನಿಟ್ಟುಕೊಂಡು ಬರುವ ಕೈಗಾಡಿಗಳು, ಸಾಯಂಕಾಲ ನಾಲ್ಕು ಗಂಟೆಯಿಂದ ಶುರುವಾಗುವ ಮಲ್ಲಿಗೆ ಮೊಗ್ಗು, ಕಳ್ಳೇ ಪುರಿ, ಚುರುಮುರಿ-ಪಾನೀಪೂರಿ ಗಾಡಿ, ಠಣಾ ಠಣಾ ಎಂದು ಸದ್ದು ಮಾಡುತ್ತಾ ಕಡಲೇಕಾಯನ್ನು ಹುರಿಯುವವನ ಗಾಡಿ ಎಲ್ಲರೂ ರಂಗಸ್ಥಳದ ಮೇಲಿನ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುವವರಂತೆ ಆಯಾಕಾಲಕ್ಕೆ ಬಂದು ಹೋಗುತ್ತಿರುತ್ತಾರೆ. ಇವರೆಲ್ಲಾ ನಿಯತಕಾಲಿಕರಂತಿದ್ದರೆ ಸೋಫಾ ರಿಪೇರಿ, ಛತ್ರಿ, ಪಾದರಕ್ಷೆ ರಿಪೇರಿಯವರು, ಚಾಕು, ಈಳಿಗೆಗಳನ್ನು ಚೂಪು ಮಾಡುವವರು, ಚಾಪೆ, ನೆಲವಾಸು, ಮತ್ತು ಕಾರ್ಪೆಟ್ಟುಗಳನ್ನು ಮಾರುವವರು, ಪ್ಲಾಸ್ಟಿಕ್, ಅಲ್ಯುಮಿನಿಯಂ, ಮತ್ತು ಸ್ಟೀಲ್ ಪಾತ್ರೆ ಮಾರಾಟಗಾರರು, ಕಡೆಗೆ ರಂಗೋಲಿ, ಪೊರಕೆ, ಮಕ್ಕಳ ಬಟ್ಟೆಗಳು, ಆಟಿಕೆಗಳು, ಪೆಟ್ಟಿಕೋಟು ಇತ್ಯಾದಿಗಳನ್ನು ಮಾರುವವರು ಅತಿಥಿ ನಟರಂತೆ ಆಗೀಗ ಬಂದು ತಮ್ಮ ದರ್ಶನ ಭಾಗ್ಯವನ್ನು ಇತ್ತು ಹೋಗುತ್ತಿರುತ್ತಾರೆ. ಇದಷ್ಟೇ ಬೀದಿ ಪ್ರಪಂಚವೇ? ಖಂಡಿತಾ ಅಲ್ಲ. ಈಗ ಅಂಚೆಯಣ್ಣ ಇಲ್ಲ ಬಿಡಿ; ಅವನಾದರೆ ಒಂದು ನಿಗದಿತ ಸಮಯದಲ್ಲಾದರೂ ಬರುತ್ತಿದ್ದ. ಈಗ ಅವನ ಬದಲಿಗೆ ಕೊರಿಯರ್ ಹುಡುಗರು ಹೊತ್ತು ಗೊತ್ತಿಲ್ಲದೆ ಬಾಗಿಲು ತಟ್ಟುತ್ತಾರೆ. ಮೊದಲಿಗೆ ದಿನವೂ ಬರುತ್ತಿದ್ದ ಅಂಚೆಯಣ್ಣ ಮನೆಯವರೆಲ್ಲರಿಗೆ ಪರಿಚಿತನಾಗಿರುತ್ತಿದ್ದ. ಎಷ್ಟೋ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಂದೇಶವಾಹಕನಾಗಿಯೂ ಇರುತ್ತಿದ್ದ. ಓದು ಬಾರದವರಿಗೆ ಪತ್ರದಲ್ಲಿದ್ದುದನ್ನು ಓದಿ ಹೇಳುತ್ತಿದ್ದ. ಬಿಸಿಲು ಹೊತ್ತಿನಲ್ಲಿ ಬಂದವನಿಗೆ ಒಂದು ಲೋಟ ಪಾನಕವೋ, ಮಜ್ಜಿಗೆಯೋ ಕೊಡುವ ಪರಿಪಾಠವೂ ಕೆಲವು ಮನೆಗಳಲ್ಲಿರುತ್ತಿತ್ತು. ಬಂಧುವಲ್ಲದಿದ್ದರೂ ಆತ ಮಿತ್ರರ ಗುಂಪಿನಲ್ಲಿ ಸೇರಿ ಹೋಗುತ್ತಿದ್ದ. ಈಗಲಾದರೋ ದಿನಕ್ಕೊಬ್ಬ ಕೊರಿಯರ್ ಹುಡುಗರು. ಯಾರು ನಿಜವಾದವರೋ, ಯಾರು ಮೋಸಗಾರರೋ ಒಂದೂ ಅರಿವಾಗದೆ ಅವರನ್ನು ಬಾಗಿಲ ಹೊರಗೇ ನಿಲ್ಲಿಸಿ ಗ್ರಿಲ್ ಬಾಗಿಲಿನ ಕಿಂಡಿಯಿಂದಲೇ ಮಾತಾಡಿಸಿ ಲಕೋಟೆಯಾದರೆ ಅಲ್ಲಿಂದಲೇ ತೆಗೆದುಕೊಂಡು, ಪಾರ್ಸೆಲ್ ಆದರೆ, ಅದರ ಹಿಂದು ಮುಂದನ್ನೆಲ್ಲಾ ವಿಚಾರಿಸಿಕೊಂಡು ನಂತರ ಬಾಗಿಲನ್ನು ಸ್ವಲ್ಪವೇ ತೆರೆದು ಡಬ್ಬಿಯನ್ನು ತೆಗೆದುಕೊಂಡ ತಕ್ಷಣ ಮತ್ತೆ ಬಾಗಿಲು ಮುಚ್ಚುವುದು ಸಹಜವೇ ಆಗಿದೆ. ಇನ್ನು ಮನೆ ಬಾಗಿಲು ತಟ್ಟುವ ಮಾರಾಟಗಾರರದಂತೂ ಇನ್ನೊಂದು ಉಪಟಳ. ಪುಸ್ತಕ, ದಿನೋಪಯೋಗಿ ವಸ್ತುಗಳಿಂದ ಹಿಡಿದು ಮಕ್ಕಳ ಡೈಪರ್ ವರೆಗೆ ಎಲ್ಲವನ್ನೂ ಮನೆಬಾಗಿಲಿಗೆ ತರುತ್ತಾರೆ. ನಕಲಿಯೆಷ್ಟೋ, ಅಸಲಿಯೆಷ್ಟೋ ದೇವನೇ ಬಲ್ಲ! ಬೀದಿಯ ಮೇಲೆ ಬರುವ ಮೆರವಣಿಗೆ, ದೇವರ ಉತ್ಸವಗಳೆಂದರೆ ಮಕ್ಕಳಾದಿಯಾಗಿ ದೊಡ್ಡವರವರೆಗೂ ಎಲ್ಲರಿಗೂ ಆಕರ್ಷಣೆ. ಅಂತಹ ಸದ್ದು ಕಿವಿಗೆ ಬಿದ್ದಿತೆಂದರೆ ಸಾಕು… ಮನೆಯಲ್ಲಿರುವವರೆಲ್ಲರೂ ಬೀದಿಯ ಕಡೆಗೇ… ನಾನು ಎಳೆಯದರಲ್ಲಿ ನೋಡುತ್ತಿದ್ದ ಮಾರ್ಗಶಿರ ಮಾಸದ ಬೆಳಗಿನ ಝಾವದಲ್ಲಿ ತಾಳ ತಟ್ಟಿಕೊಂಡು ತನ್ನದೇ ಒಂದು ಅಲೌಕಿಕ ಛಾಪನ್ನು ನಿರ್ಮಿಸಿಕೊಂಡು ಬರುತ್ತಿದ್ದ ದತ್ತ ಜಯಂತಿಯ ಭಜನೆ, ರಥಸಪ್ತಮಿಯಲ್ಲಿ ಸುಶ್ರಾವ್ಯ ವಾಲಗದೊಂದಿಗೆ ಬರುತ್ತಿದ್ದ ತೇರು, ಆಡಿ ಕೃತ್ತಿಕೆಯ ದಿನದಂದು ಗುಡ್ಡೇಕಲ್ಲಿನ ಸುಬ್ರಹ್ಮಣ್ಯೇಶ್ವರನ ದೇವಸ್ಥಾನಕ್ಕೆ `ಹರೋಹರ’ ಎಂದು ಕೂಗುತ್ತಾ ಬೇವಿನ ಮತ್ತು ಅರಿಶಿನ ಬಣ್ಣದ ಉಡುಗೆಯುಟ್ಟು ಕಾವಡಿ ಎತ್ತಿಕೊಂಡು ಹೋಗುತ್ತಿದ್ದ, ಕೆಲವರು ಭೀಕರವಾಗಿ ಕೆನ್ನೆಯನ್ನೂ, ನಾಲಗೆಯನ್ನೂ ಕಂಬಿಯಿಂದ ಚುಚ್ಚಿಕೊಂಡು, ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಾ ನಮ್ಮ ಮನದಲ್ಲಿ ಭಕ್ತಿಯೊಂದಿಗೆ ಭಯವನ್ನೂ ಹುಟ್ಟಿಸುತ್ತಿದ್ದ ಭಕ್ತರ ಗುಂಪು… ವಿಜಯ ದಶಮಿಯ ದಿನ ಊರಿನ ಎಲ್ಲ ದೇವರೂ ಬನ್ನಿ ಕಡಿಯುತ್ತಿದ್ದ ನೆಹರೂ ಮೈದಾನಕ್ಕೆ ಮೆರವಣಿಗೆ ಹೋಗುತ್ತಿದ್ದ ದೃಶ್ಯ… ಎಲ್ಲವೂ ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಬೇರುಬಿಟ್ಟು ಕುಳಿತುಬಿಟ್ಟಿವೆ. ಹೀಗೇ ಒಂದು ಆಡಿ ಕೃತ್ತಿಕೆಯ ದಿನ ನಾವೆಲ್ಲರೂ ಕಾವಡಿಯ ಮೆರವಣಿಗೆಯನ್ನು ನೋಡಲು ಬೀದಿಗೆ ಬಂದು ನಿಂತಿದ್ದೆವು. ನಮ್ಮ ಮನೆಯ ಕೆಲಸದಾಕೆ ಮುನಿಯಮ್ಮನೂ ನಮ್ಮ ಜೊತೆಗೇ ನಿಂತಿದ್ದವಳಿಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಅರೆಗಣ್ಣಿನಲ್ಲಿ ಎರಡೂ ಕೈಗಳನ್ನು ತಲೆಯಮೇಲೆ ಜೋಡಿಸಿ ಮುಗಿದುಕೊಂಡು ಮೆರವಣಿಗೆಯ ಹಿಂದೆಯೇ ಓಡಿಹೋದಳು. ನಾವೆಲ್ಲರೂ `ಮುನಿಯಮ್ಮಾ ಮುನಿಯಮ್ಮಾ’ ಎಂದು ಜೋರಾಗಿ ಕರೆಯುತ್ತಲೇ ಇದ್ದೇವೆ; ಅವಳಿಗೆ ಕೇಳಿಸಿದ್ದರೆ ತಾನೆ! ಸ್ವಲ್ಪ ಹೊತ್ತು ಕಾದು ನಿಂತಿದ್ದು ನಾವೆಲ್ಲಾ ಮನೆಯೊಳಗೆ ಬಂದವು. ಅದೆಷ್ಟು ದೂರ ಹೋಗಿದ್ದಳೋ… ಒಂದು ಗಂಟೆಯ ನಂತರ ಅವಳೂ ವಾಪಸ್ಸು ಬಂದಳು. ಬಹಳ ಆಯಾಸಗೊಂಡಿದ್ದಳು. ಅಮ್ಮನಿಗೆ ಅವಳು ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನೇ ಅನ್ನಿಸಿಬಿಟ್ಟಿತೋ ಏನೋ.. ಅವಳನ್ನು ಕೂರಿಸಿ ಒಂದು ಲೋಟ ತಣ್ಣಗೆ ಪಾನಕ ಮಾಡಿಕೊಟ್ಟು “ಸುಸ್ತಾಗಿದ್ದರೆ ಮನೆಗೆ ಹೋಗಿ ಮಲಗಿಕೋ. ನಾಳೆ ಬಂದು ಬಟ್ಟೆ ಒಗೆಯುವೆಯಂತೆ” ಎಂದರು. ಸ್ವಲ್ಪ ಹೊತ್ತು ಕೂತಿದ್ದವಳು ಮುನಿಯಮ್ಮನಾಗೇ `ಈಗ ಸರಿಹೋಯ್ತು’ ಎನ್ನುತ್ತಾ ತನ್ನ ಕೆಲಸಕ್ಕೆ ಎದ್ದಳು. ನಮಗೆಲ್ಲಾ ಭಕ್ತಿಯ ಈ ಮುಖದ ದರ್ಶನವಾಗಿತ್ತು! ಈಗ ಬೆಂಗಳೂರಿನಲ್ಲಿ ನಾವಿರುವ ರಸ್ತೆಯ ಒಂದು ಅಡ್ಡರಸ್ತೆಯಲ್ಲಿ ಗಂಗಮ್ಮನ ಗುಡಿಯಿದೆ. ಅದರ ಮುಂದಿನ ರಸ್ತೆಯಲ್ಲಿ ಮಸೀದಿಯಿದೆ. ಅಣ್ಣಮ್ಮ ದೇವಿಯ ಭಕ್ತಮಂಡಳಿ ನಮ್ಮ ಮನೆಯ ಪಕ್ಕಕ್ಕೇ ಇದೆ. ಮನೆಯ ಹಿಂಬಾಗದಲ್ಲಿ ವೆಂಕಟರಮಣನ ದೇವಸ್ಥಾನವಿದೆ. ಹಾಗಾಗಿ ಆಗಾಗ ಎಷ್ಟೆಲ್ಲಾ ಮೆರವಣಿಗೆಗಳನ್ನು ನೋಡುವ ಭಾಗ್ಯ ನಮ್ಮದಾಗಿದೆ. ಗಂಗಮ್ಮನ ಹೂವಿನ ಕರಗ, ರಥೋತ್ಸವ, ವೆಂಕಟರಮಣನ ಕಡೆಯ ಶ್ರಾವಣ ಶನಿವಾರದ ಉತ್ಸವ, ಮುಸ್ಲಿಮರ ಹಬ್ಬಗಳ ಹಲವು ಬಗೆಯ ಉತ್ಸವಗಳು, ಮೆರವಣಿಗೆಗಳು, ವರ್ಷಕ್ಕೊಮ್ಮೆ ಚೈತ್ರಮಾಸದಲ್ಲೋ, ವೈಶಾಖ ಮಾಸದಲ್ಲೋ ನಮ್ಮ ಮನೆಯ ಪಕ್ಕದಲ್ಲೇ ಮೂರು ದಿನ ಠಿಕಾಣಿ ಹಾಕುವ ಅಣ್ಣಮ್ಮ.. ಶುಕ್ರವಾರ ಆಕೆ ಬರುವುದು. ಅದಕ್ಕೆ ಪೂರ್ವಭಾವಿಯಾಗಿ ಆ ಸೋಮವಾರದಿಂದಲೇ ಇಡೀ ಬೀದಿ ಅಲಂಕರಿಸಿಕೊಂಡು ನಿಂತಿರುತ್ತದೆ. ಬೀದಿಯ ಮುಂಬಾಗದಲ್ಲಿ ವಿದ್ಯುದ್ದೀಪಗಳಲ್ಲಿ ಅಣ್ಣಮ್ಮನ ದೊಡ್ಡ ಚಿತ್ರ, ಬೀದಿಯುದ್ದಕ್ಕೂ ತೋರಣದಂತೆ ಬಣ್ಣ ಬಣ್ಣದ ವಿದ್ಯದ್ದೀಪಗಳು, ಮಾವು ಬೇವಿನ ತೋರಣಗಳು, ಬಾಳೆಯ ಕಂಬದ ಅಲಂಕರಣ, ಇನ್ನು ದೇವಿಯನ್ನು ಕೂರಿಸುವ ವೇದಿಕೆಯಂತೂ ಗುರುವಾರದಿಂದಲೇ ವೈಭವವಾಗಿ ಸಿದ್ಧವಾಗಿರುತ್ತದೆ. ಅಣ್ಣಮ್ಮ ಬೀದಿಯ ಕೊನೆಯಲ್ಲಿರುವಾಗಲೇ ಅವಳನ್ನು ಎದುರುಗೊಳ್ಳಲು ನಮ್ಮ ಪಕ್ಕದ ಅಡ್ಡರಸ್ತೆಯಲ್ಲಿರುವ ಗಂಗಮ್ಮದೇವಿಯ ಉತ್ಸವಮೂರ್ತಿ ಗೆಳತಿಯನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇಬ್ಬರೂ ಒಟ್ಟಿಗೆ ಅಲ್ಲಿಂದ ಬರುತ್ತಾರೆ. ದೇವಿಯರ ಮುಂದೆ ಪೂರ್ಣಕುಂಭ ಹೊತ್ತ ಸಿಂಗಾರಗೊಂಡ ಮಹಿಳೆಯರು, ಬಾಜಾ ಬಜಂತ್ರಿ, ಆರತಿಗಳು, ಕಿವಿ ಗಡಚಿಕ್ಕುವ ಅಣ್ಣಮ್ಮನ ಭಕ್ತಿಯ ಹಾಡುಗಳು.. ಅದೇನು ಸಂಭ್ರಮ… ಮೂರುದಿನಗಳೂ ಮನೆಯ ಮುಂದೆ ಹಬ್ಬವಿದ್ದಂತೆ. ಮಾರನೆಯ ದಿನ ಅಣ್ಣಮ್ಮ ದೇವಿ ಇಲ್ಲಿನ ಆಸುಪಾಸಿನ ಬೀದಿಯಲ್ಲಿರುವ ಅರವತ್ತು ಎಪ್ಪತ್ತು ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಮಗಳಂತೆ ಹೋಗಿ ಪೂಜೆ ಮಾಡಿಸಿಕೊಂಡು ಉಡಿತುಂಬಿಸಿಕೊಂಡು ಬರುತ್ತಾಳೆ. ಅಂದು ಸಂಜೆ ದೇವಿಯ ಎದುರಿಗೆ ಮೂರು ಬೀದಿ ಕೂಡುವಲ್ಲಿ ಒಂದು ಸ್ಟೇಜನ್ನು ಹಾಕಿ ನಾಟಕವೋ, ಆರ್ಕೆಸ್ಟ್ರಾನೋ ಏನಾದರೊಂದು ನಡೆಯುತ್ತಿರುತ್ತದೆ. ನಮ್ಮ ಮನೆಯ ಕಾರ್ ಗ್ಯಾರೇಜೇ ಅವರಿಗೆ ಗ್ರೀನ್ ರೂಮು. ಪಕ್ಕದ ಬೀದಿಗಳಲ್ಲಿರುವ ಮುಸಲ್ಮಾನ್ ಬಂಧುಗಳೂ ಹೆಂಗಸರು, ಮಕ್ಕಳಾದಿಯಾಗಿ ಇದರಲ್ಲಿ ಮತ್ತು ಮಾರನೆಯ ದಿನ ನಡೆಯುವ ರಾಗಿ ಅಂಬಲಿ ಮತ್ತು ಅನ್ನ ಸಂತರ್ಪಣೆಗಳಲ್ಲಿ ಪಾಲುಗೊಳ್ಳುತ್ತಾರೆ. ಎಲ್ಲರನ್ನೂ ಒಂದುಗೂಡಿಸಿ ಸಂತೋಷ ಪಡಿಸುತ್ತಾ ಪರಸ್ಪರ ಬಾಂಧವ್ಯ ವೃದ್ಧಿಸುವುದರಲ್ಲಿ ಬೀದಿಯ ಪಾತ್ರವೇನು ಕಮ್ಮಿಯೇ?! ಬೀದಿ ಜಗಳಗಳ ಮಹಾತ್ಮೆ ಅತ್ಯಂತ ಪುರಾತನವಾದದ್ದು. ಬೀದಿ ಬದಿಯಲ್ಲಿ ನೀರಿಗಾಗಿ ಕಾದಾಡುವುದು; ಅಕ್ಕಪಕ್ಕದವರ ಜಗಳ ಬೀದಿಗೆ ಬರುವುದು ಇವೆಲ್ಲಾ ಬಹಳ ಸಹಜವಾದ ಕ್ರಿಯೆಗಳು. ಇಬ್ಬರೂ ಅಮ್ಮ, ಅಪ್ಪ, ಅಜ್ಜಿ, ತಾತ ಎಲ್ಲರ ಜಾಯಮಾನವನ್ನೂ ನೀವಾಳಿಸುತ್ತಾ ಕೂಗಾಡುತ್ತಿದ್ದರೆ, ಅಲ್ಲಿಯವರೆಗೆ ಗೆಳೆಯರಾಗಿದ್ದ ಅವರಿಬ್ಬರ ಮನೆಯ ನಾಯಿಗಳೂ ತಮ್ಮ ಮಾಲೀಕರನ್ನು ಅನುಕರಿಸಿ `ಭೌ…ವೌ…’ ಎಂದು ಹಿಮ್ಮೇಳ ನೀಡುತ್ತಿದ್ದರೆ ಒಂದಷ್ಟು ಕಾಲ ಜನರೆಲ್ಲಾ ಮನರಂಜನೆಯನ್ನು ತೆಗೆದುಕೊಂಡು ನಂತರ ಯಾರೋ ಒಬ್ಬರು ಹಿರಿಯರು ಇಬ್ಬರ ಮಧ್ಯ ನಿಂತು ಇಬ್ಬರಿಗೂ ಸಮಾಧಾನ