ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹಗಲಲಿ ಅರಳದ ವಿರಹಿಣಿ

ಅನಿತಾ ಪಿ. ಪೂಜಾರಿ ತಾಕೋಡೆ

ಅಂದು…
ಹಿಂದೆಂದೂ ಮೂಡದ ಒಲವೊಂದು ಅನುವಾದಾಗ
ಅವನ ಹಿರಿತನವನು ಮರೆತು
ನನ್ನ ಮಗುತನವನೇ ಪೊರೆದು
ಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿ
ಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲ
ಅವನು ಕೇಳುತ್ತಿದ್ದುದೊಂದೇ

ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವ
ಮುಟ್ಟಿದರೆ ಮುನಿದು ಬಿಡುವ
ಕಟು ಮನಸ್ಸಿನ ಸೂರ್ಯ ನಾನು
ಎಲೇ ಮುದ್ದು ಪಾರಿಜಾತವೇ
ನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ

ಆಗ…
ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದ
ಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿ
ಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇ
ನಾನೆಂದಿಗೂ ನಿನ್ನವಳೆನ್ನುತಿದ್ದೆ

ಅವನೂ ಸುಮ್ಮನಿರುತಿರಲಿಲ್ಲ
ನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದ
ಸುರಭಿ ವಾರಿಣಿಯರ ಸಾಲಿನವಳು
ಕ್ಷೀರ ಸಮುದ್ರದೊಳವಿರ್ಭವಿಸಿದ
ಪಂಚವೃಕ್ಷಗಳಲಿ ನೀನೋರ್ವಳು
ಇಂದ್ರನ ನಂದನವನದಲ್ಲಿ ಪಲ್ಲವಿಸಿದವಳು
ಸತ್ಯಭಾಮೆಯೊಲವಿಗೆ ಕೃಷ್ಣ ನ ಜೊತೆ ಬಂದವಳು
ನಿನಗ್ಯಾಕೆ ನನ್ನ ಸಾಂಗತ್ಯ ಬಯಕೆ?

ವಾದ ವಿವಾದಗಳ ನಡುವೆ ಪ್ರೀತಿ ನಿಜವಾಗಿದ್ದು ಸುಳ್ಳಲ್ಲ
ನನಗೂ ಅವನಿಗೂ ಬಾನು ಭುವಿಯಷ್ಟೇ ಅಂತರವಿದ್ದರೂ
ಕ್ಷಣಕ್ಷಣಕೂ ನನ್ನ ಸನ್ನಿಧಿಯಲ್ಲೇ ಇರುತಿದ್ದನಲ್ಲಾ… |

ಕೆಲವೊಮ್ಮೆ ಕಪ್ಪು ಮೋಡ ಕವಿದು
ಪರಿಛಾಯೆಯ ಲವಲೇಶವಿಲ್ಲದೆ
ಹೇಳದೇ ಕೇಳದೇ ಏಕಾಏಕಿ ಮರೆಯಾದಾಗ
ಕಾಯುವಿಕೆ ಅಸಹನೀಯವಾಗಿ
ಅವನ ಓರಗೆಯವರಲ್ಲಿ ವಿಚಾರ ಮಾಡಿದ್ದುಂಟು
ಅವನ ಕ್ಷೇಮದ ಸುದ್ದಿ ತಿಳಿಯಲು ಹುಚ್ಚಳಾಗಿದ್ದುಂಟು

ನಿತ್ಯ ಹೊಸದಾಗಿ ಅರಳುವ ನಾನು
ಒಂದೊಂದು ನೆಪ ಹೇಳಿ ಇಲ್ಲವಾಗುವ ಅವನು
ಮತ್ತೆ ಬಂದು ಹೇಳುವ ಕಥೆ ವ್ಯಥೆಗಳು
ಬಾಗುವಿಕೆಯಿಲ್ಲದೆ ಕ್ಷೀಣವಾಗುತಿಹ ಭಾವಾನುರಾಗಗಳು
ಹೀಗೆಯೇ ನಡೆದಿತ್ತು ವರ್ಷಾನುವರ್ಷ

ಅದೇ ವಿರಹದ ಸುಳಿಯಲ್ಲಿ ನಲುಗಿ
ನಾನೀಗ ಹಗಲಲಿ ಎಂದೂ ಅರಳದ ವಿರಹಿಣಿ

ಯಾರೂ ಸುಳಿಯದ ಕಪ್ಪಿರುಳಿನಲಿ
ಮೊಗ್ಗು ಮನಸು ಹದವಾಗಿ ಒಡೆದು
ನೆಲದ ಮೇಲುರುಳಿ ಹಗುರಾಗುತ್ತೇನೆ
ಅವ ಬರುವ ವೇಳೆಯಲಿ
ಅದೇನೋ ನೆನೆದು ಬಿದ್ದಲ್ಲೇ ನಗುತ್ತೇನೆ.
ನಮ್ಮೀರ್ವರ ಮಾತಿರದ ಮೌನಕೆ
ಒಳಗೊಳಗೆ ಸುಡುವ ಝಳದಲಿ ತೆಳುವಾಗುತ್ತೇನೆ

ಅವನೂ ಹಾಗೆಯೇ ಕಂಡೂ ಕಾಣದಂತೆ
ಮೂಡಣದಿಂದ ಪಡುವಣಕ್ಕೆ ತಿರುಗುತ್ತಲೇ ಇರುತ್ತಾನೆ
ನಾನೂ ನೋಡು ನೋಡುತ್ತಲೇ
ನೆಲದ ಗುಣವನು ಒಪ್ಪಿಕೊಳ್ಳುತ್ತೇನೆ
ಬರುವ ನಾಳೆಯಲಿ ಮತ್ತೆ ಗೆಲುವಾಗಲು

***************************
.

About The Author

19 thoughts on “ಹಗಲಲಿ ಅರಳದ ವಿರಹಿಣಿ”

    1. Dr. Yogish kairodi

      ಕವಿತೆ ಅನಾವರಣಗೊಳಿಸುವ ಅರ್ಥ ಸಾಧ್ಯತೆ ಅನನ್ಯ..ಅನಿತಾ….ಬರೆಯುತ್ತಾ ಬಲಗೊಂಡ ಅಪರೂಪದ ಕವಯತ್ರಿ.

  1. ಅರ್ಥ ಗರ್ಭಿತವಾದ ಕವನ ,,,,,
    ಕವಿಯಿತ್ರಿ ಅನಿತಕ್ಕ ನಿನಗೆ ಮನದಾಳದ ನಮನ

  2. ಅಶೋಕ್ ವಳದೂರು

    ಕವಿತೆ ತುಂಬಾ ಚೆನ್ನಾಗಿದೆ. ವಿರಹಿಣಿಯ ಭಾವ ಅನುಭವ ಇಷ್ಟವಾಯಿತು. ಆಕಾಶ…. ನೆಲದ ಚುಂಬಕತೆ… ಸದಾ ಗೆಲುವಾಗಿ ನಲಿವಾಗುವ ಅಂತರ್ಯ ಹಿಡಿಸಿತು.

Leave a Reply

You cannot copy content of this page

Scroll to Top