ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್

ಸ್ಫೂರ್ತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಾದರಿ ನಾಯಕತ್ವ” ಚಿಕ್ಕಂದಿನಲ್ಲಿ ಮೇಲಧಿಕಾರಿ ಮತ್ತು ನಾಯಕ ಇವೆರಡರ ನಡುವಿನ ವ್ಯತ್ಯಾಸವನ್ನು ಓದಿದ್ದೆ. ಅದರಲ್ಲಿನ ಕೆಲ ವಾಕ್ಯಗಳು ನನಗೆ ತುಂಬಾ ಇಷ್ಟವಾಗಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ ಕೂಡ.  ಬಾಸ್ ಅಥವಾ ಮೇಲಧಿಕಾರಿ ಆದವನು ತನ್ನ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಷಯವನ್ನು ಇಲ್ಲವೇ ಕೆಲಸವನ್ನು ಹೇಳಬೇಕಾದರೆ ನಾನು ಎಂದು ಆರಂಭಿಸುತ್ತಾನೆ…. ಆದರೆ ನಿಜವಾದ ಲೀಡರ್ ಅಥವಾ ನಾಯಕನಾದವನು ನಾವು ಎಂದು ಹೇಳುತ್ತಾನೆ ಎಂಬ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದ್ದವು. ಇದಕ್ಕೆ ಪೂರಕವಾಗಿ ನಮ್ಮ ಮಾಜಿ ರಾಷ್ಟ್ರಪತಿ ಆಗಿರುವ ಕ್ಷಿಪಣಿ ತಜ್ಞ ಎಂದೇ ಹೆಸರಾದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್ ಅವರು ಹೇಳಿದ ಒಂದು ವಿಷಯವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕು. ವಿಕ್ರಮ್ ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಅವರ ಸಹೋದ್ಯೋಗಿಗಳ ಅವಿರತ ಪ್ರಯತ್ನದ ಫಲವಾಗಿಪಿಎಸ್ಎಲ್ ವಿ ಉಪಗ್ರಹ  ಉಡಾವಣೆಯಾಯಿತು…. ಆದರೆ ಉಡ್ಡಯನಗೊಂಡ ಕೆಲವೇ ಕ್ಷಣಗಳಲ್ಲಿ ಉಪಗ್ರಹವು ಪತನವಾಯಿತು. ಇದು ದೇಶದ ಜನರ ಬೇಸರಕ್ಕೂ ರಾಜಕೀಯ ವಿರೋಧ ಪಕ್ಷಗಳ ಕೆಂಗಣ್ಣಿಗೂ ಗುರಿಯಾಯಿತು. ಕೋಟ್ಯಾಂತರ ಜನರು ಹೊಟ್ಟೆ ಹಸಿವಿನಿಂದ ಒದ್ದಾಡುತ್ತಿರುವ ಭಾರತದಂತಹ ದೇಶದಲ್ಲಿ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿ ಉಪಗ್ರಹವನ್ನು ಉಡಾಯಿಸುವ ಅವಶ್ಯಕತೆ ಇದೆಯೇ ಎಂಬ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದವು. ಅಂತಹ ಸಮಯದಲ್ಲಿ ಉಪಗ್ರಹವು ಪತನಗೊಂಡದ್ದು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೂ ಮುಂದಿನ ಅರ್ಧ ಗಂಟೆಯಲ್ಲಿ ಜರುಗುವ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಾದದ್ದು ಅವಶ್ಯ ವಾಗಿತ್ತು. ಎಲ್ಲಾ ವಿಜ್ಞಾನಿಗಳು ಪತ್ರಿಕಾಗೋಷ್ಠಿಗೆ ಹೋಗಲು ಹಿಂಜರಿಯುತ್ತಿರುವಾಗ  ಸಂಸ್ಥೆಯ ನಿರ್ದೇಶಕರಾದ ವಿಕ್ರಂ ಸಾರಾಭಾಯಿ ಅವರು ತಾವೇ ಖುದ್ದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಕಾರ್ಯ ವೈಖರಿಯ ಕುರಿತು ಮಾಧ್ಯಮದವರಿಗೆ ಮನದಟ್ಟು ಮಾಡಿಕೊಟ್ಟರು ಮಾತ್ರವಲ್ಲದೇ ಉಪಗ್ರಹ ಪತನದ ಹಿಂದಿನ ಎಲ್ಲಾ ಸೋಲನ್ನು ತಮ್ಮ ಮೇಲೆ ಹಾಕಿಕೊಂಡರು. ಈ ವಿಷಯ ಎಲ್ಲ ಯುವ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತ್ತು. ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಉಪಗ್ರಹವನ್ನು ಉಡಾಯಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು ಕೂಡ ಈ ಹಿಂದಿನ ಸೋಲು ಎಲ್ಲರಲ್ಲೂ ತುಸು ಆತಂಕವನ್ನು ಸೃಷ್ಟಿ ಮಾಡಿತ್ತು. ಉಪಗ್ರಹ ಯಶಸ್ವಿಯಾಗಿ ಉದಾವಣೆಯಾಗಿ ಎಲ್ಲರ ಚಪ್ಪಾಳೆಯ ಝೇಂಕಾರ ವೀಕ್ಷಣಾ ಕೋಣೆಯನ್ನು ತುಂಬಿತ್ತು. ಈ ಯಶಸ್ಸಿನ ಕುರಿತು ಬರೆಯಲು ಪತ್ರಕರ್ತರು ಕಾಯುತ್ತಿದ್ದರು…. ಆಗ ತಮ್ಮ ಸಹೋದ್ಯೋಗಿಗಳನ್ನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಕಳುಹಿಸಿಕೊಟ್ಟ ವಿಕ್ರಂ ಸಾರಾಭಾಯಿ ತಾವು ಹಿಂದೆ ಉಳಿದರು.ಸೋಲಿನ ಎಲ್ಲ ಭಾರವನ್ನು, ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಳ್ಳುವ ಮತ್ತು ಗೆಲುವನ್ನು ಸಂಭ್ರಮಿಸಲು ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟ ವಿಕ್ರಂ ಸಾರಾಭಾಯಿಯವರ ಅಂದಿನ ನಡೆ ನಿಜವಾದ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಕಲಾಂ ಅವರ ಈ ಅನುಭವದಿಂದ ನಾವು ತಿಳಿದುಕೊಳ್ಳಬಹುದು. ಇದೀಗ ನಾವು ಸಣ್ಣಪುಟ್ಟ ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗಿನ ಎಲ್ಲ ಭಾಗಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು, ದೇವಮಾನವರನ್ನು ಕಾಣುತ್ತೇವೆ. ಮತ್ತು ಅವರ ಅಭಿಮಾನಿ ಸಂಘಗಳನ್ನು ಕೂಡ. ನಿಜವಾದ ನಾಯಕತ್ವ ಎಂದರೇನು ಎಂಬುದರ ಪರಿಕಲ್ಪನೆಯೇ ಇಲ್ಲದ ಸಾಕಷ್ಟು ಜನ ತಮ್ಮನ್ನು ತಾವು ನಾಯಕರೆಂದು ಹೇಳಿಕೊಳ್ಳುತ್ತಿರುವುದು ಸ್ವಯಂ ಘೋಷಿತ ನಾಯಕರ ಅಜ್ಞಾನವೋ  ಅಥವಾ ಹಾಗೆ ಹೇಳಿಕೊಳ್ಳುತ್ತಿರುವವರನ್ನು ಅತಿಯಾಗಿ ಪುರಸ್ಕರಿಸುವ ಜನರ ತಪ್ಪೋ ಎಂಬುದು ಗೊತ್ತಾಗುತ್ತಿಲ್ಲ. ಹಾಗಾದರೆ ನಾಯಕ ಎಂದರೇನು? ನಾಯಕತ್ವದ ಲಕ್ಷಣಗಳು ಯಾವುವು ಎಂಬ ಸಂದೇಹ ನಮ್ಮಲ್ಲಿ ಕಾಡಬಹುದು ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಒಳ್ಳೆಯ ನಾಯಕ ಎಂದರೆ ಎಲ್ಲ ವಿಷಯಗಳ ಕುರಿತು ಅರಿವನ್ನು ಹೊಂದಿರುವುದು ಮತ್ತು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿ  ಎಂದಲ್ಲ. ನಾಯಕತ್ವ ಎನ್ನುವುದು ನೀವು ಜನರೊಂದಿಗೆ ಯಾವ ರೀತಿ  ವರ್ತಿಸುತ್ತೀರಿ, ಯಾವ ರೀತಿ ಸಹಾಯ ಮಾಡುತ್ತೀರಿ ಮತ್ತು ನೀವು ಮಾಡುವ ಸಹಾಯ ಅವರ ಬದುಕಿನಲ್ಲಿ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವುದು ನಾಯಕತ್ವ ಎಂದೆನಿಸಿಕೊಳ್ಳುತ್ತದೆ.  ಕೆಳಗಿನ ಏಳು ಸರಳ ವಿಧಾನಗಳು ಉತ್ತಮ ನಾಯಕತ್ವಕ್ಕೆ ಮಾದರಿ *ನಾಯಕನಾದವನು ದಯಾಳುವಾಗಿರಬೇಕು…. ಒಳ್ಳೆಯ ನಾಯಕನಾದ ವ್ಯಕ್ತಿ ಇತರರೊಂದಿಗೆ ಗೌರವ ಮತ್ತು ಕಾಳಜಿಯಿಂದ ವರ್ತಿಸುತ್ತಾನೆ. ದಯಾ ಗುಣವು ನಂಬಿಕೆಯನ್ನು ವೃದ್ಧಿಸುತ್ತದೆ. ವಿಶ್ವಾಸವನ್ನು ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ನಾಯಕನಾದವನು ಅವರು ತನ್ನ ವಿರೋಧಿಯೇ ಇರಲಿ, ತನ್ನನ್ನು ಹೀಯಾಳಿಸುವ ವ್ಯಕ್ತಿಯೇ ಇರಲಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು. * ನಾಯಕ ಮಿತ ಭಾಷಿಯಾಗಿರಬೇಕು…. ಒಳ್ಳೆಯ ನಾಯಕತ್ವ ಗುಣ ಹೊಂದಿರುವವನು ತನ್ನ ಎದುರಿಗಿರುವವರ ಮಾತನ್ನು ಗಮನವಿಟ್ಟು ಆಲಿಸುತ್ತಾನೆ. ತಾನು ಮಿತಭಾಷಿಯಾಗಿದ್ದು ತನ್ನ ಸಂಪೂರ್ಣ ಲಕ್ಷವನ್ನು ಇತರರ ಮಾತುಗಳನ್ನು ಕೇಳುವುದರಲ್ಲಿ ವಿನಿಯೋಗಿಸುವ ವ್ಯಕ್ತಿ ಒಳ್ಳೆಯ ನಾಯಕತ್ವಕ್ಕೆ ಉದಾಹರಣೆ. ಜನರಿಗೆ ನಿಜವಾಗಿಯೂ ಏನು ಬೇಕಾಗಿರುತ್ತದೆ ಎಂಬುದನ್ನು ಅರಿಯುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಿಜವಾದ ನಾಯಕ. * ನಾಯಕ ಎಲ್ಲರಿಗೂ ಸಿಗುವಂತಿರಬೇಕು….. ಮಹಡಿಯ ಮೇಲೆ ನಿಂತು ಕೈ ಬೀಸುವ, ವೇದಿಕೆಗಳಲ್ಲಿ ನಮಸ್ಕರಿಸುವ ವ್ಯಕ್ತಿಗಳಿಗಿಂತ ಜನಸಾಮಾನ್ಯರ ನಡುವೆ ಬೆರೆಯುವ ಜನರ ಕಷ್ಟ ಸುಖಗಳಿಗೆ ಪ್ರತಿ ಸ್ಪಂದಿಸುವ, ಜನರ ನೋವಿಗೆ ಕಿವಿಯಾಗುವ, ಅವರ ತೊಂದರೆಗೆ ದನಿಯಾಗುವ ವ್ಯಕ್ತಿ ನಿಜವಾದ ನಾಯಕ. ಜನರು ತಮ್ಮ ನಾಯಕನ ಬಳಿ ಬಂದು ತಮ್ಮ ತೊಂದರೆಗಳನ್ನು ಮತ್ತು ಯೋಜನೆಗಳನ್ನು ಸರಳವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿ ಕೊಡುವ ವ್ಯಕ್ತಿ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. *ತನ್ನ ಸಹೋದ್ಯೋಗಿಗಳಿಗೆ, ಹಿಂಬಾಲಕರಿಗೆ ವಿಶ್ರಾಂತಿಗೆ ಅವಕಾಶ ನೀಡುವ ವ್ಯಕ್ತಿ ನಿಜವಾದ ನಾಯಕ. *ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರಿಗೆ ತಪ್ಪು ಮಾಡಿದಾಗ ಅವಹೇಳನ ಮಾಡುವುದಿಲ್ಲ… ಆತನಿಗೆ ಗೊತ್ತು ತಪ್ಪುಗಳು ಕಲಿಕೆಗೆ ಮತ್ತು ಬೆಳವಣಿಗೆಗೆ ಸಹಾಯಕ ಎಂದು. ನಾಯಕನಾದವನು ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ. *ನಿಜವಾದ ನಾಯಕತ್ವ ಗುಣವಿರುವ ವ್ಯಕ್ತಿ ಜನರ ಸಾಮರ್ಥ್ಯ ಗಳನ್ನು ಅರಿಯುವ ಶಕ್ತಿಯನ್ನು ಹೊಂದಿರುತ್ತಾನೆ. *ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾನೆ. ಅವರ ಅನುಭವಕ್ಕೆ ಬೆಲೆ ನೀಡುತ್ತಾನೆ. ನಾಯಕತ್ವ ಗುಣವನ್ನು ಹೊಂದಿರುವುದು ದೈವದತ್ತ ಕಲೆ. ಕಲಿಕೆ ಮತ್ತು ಪ್ರಯತ್ನದ ಮೂಲಕ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿ ಮಗುವೂ ಉತ್ತಮ ನಾಯಕರಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ನಿಮ್ಮೊಂದಿಗೆ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಚಳಿ-ಚಳಿ”   ಎಲ್ಲವನು ಕಳೆದುಕೊಂಡೆತನುವು ಮನವುಒಲವು ಬಲವುಈ ಚಳಿಯರಾತ್ರಿಗೆ! ಏಕಾಂತದ ನಡುಕಎದೆಯೊಳಗೆವಿರಹದ ಉರಿಅರಿವು ಜರಿದುಮರೆವು ಮಸೆದು ಹೊರಗೆ-ರಂಧ್ರ ಕೊರೆವ ಚಳಿಒಳಗೆ-ದಹಿಸುವ ನಿನ್ನನೆನಪ ಸುಳಿ ನೀನಿರದ ವೇಳೆಜೀವ ಬಾದಿತನಿದಿರೆ ಬಾರದೆನೆಮ್ಮದಿ ಗದ್ಗದಿತ ಮೆಲ್ಲುವ ವೇದನಕನ್ನಡಿ ನಗುತಕಾಯಿಲೆಗೆ ಕೆಡವಿದಮೇಧಾವಿ ಶಕುನ ಗಡಿಯಾರದ ಮುಳ್ಳುಗಳಶಬ್ಧವು-ಕಿವಿಯೊಳಗೆಸಲಾಕೆ ಬಾರಿಸಿದ ಹಾಗೆಮಿಣುಕು ದೀಪಅಣಕಿಸಿದ ಹಾಗೆ ನೀನಿರದಈ ಚಳಿಯ ರಾತ್ರಿಹಿಂಡುತಿವೆಕರಳು ನರಳಗಳನುಹಿಮದ ಗರ್ಭದೊಳಗೆಮಲಗಿಸಿ ——– ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಅವರ ಕವಿತೆ, “ಚಳಿ-ಚಳಿ” Read Post »

ನಿಮ್ಮೊಂದಿಗೆ

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ

ಸಿನಿಮಾ ಸಂಗಾತಿ ಶಶಿಕಾಂತ್‌ ಪಟ್ಟಣ ರಾಮದುರ್ಗ “ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ” ಮಹಾರಾಷ್ಟ್ರ ಮತ್ತು ಭಾರತೀಯ ಚಿತ್ರ ರಂಗಕ್ಕೆ ಕನ್ನಡದ ಕೊಡುಗೆ ಅಪಾರ. ಅಮೀರ್ ಬಾಯಿ ಕರ್ನಾಟಕಿಗುರು ದತ್ತ  ಶ್ಯಾಮ ಬೆನಗಲ್ ಗಿರೀಶ್ ಕಾರ್ನಾಡ  ವಿ ಶಾಂತಾರಾಮ ರೋಹಿಣಿ ಹಟ್ಟಂಗಡಿ ಇನ್ನೂ ಅನೇಕರುಮತ್ತು ಇತ್ತೀಚಿನ ವರ್ಷಗಳಲ್ಲಿ ನಟಿಸಿದ ಸುನೀಲ್ ಶೆಟ್ಟಿ ಐಶ್ವರ್ಯ ರೈ ಶಿಲ್ಪಾ ಶೆಟ್ಟಿ ಮುಂತಾದವರು ಇಂತವರ ಸಾಲಿನಲ್ಲಿ ಬ್ರಿಟಿಷರ ಕಾಲದಲ್ಲಿ ಮುಂಬೈ ಚಲನ ಚಿತ್ರದಲ್ಲಿ ನಾಯಕಿ  ನಟಿಸಿದ್ದವರು ನಮ್ಮ ಕರ್ನಾಟಕ ಮೂಲದವರು. ಅವರೇ ಶಾಂತಾ ಹುಬ್ಳಿಕರ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಹುಟ್ಟಿದ ರಾಜಮ್ಮ ಎಂಬ ಲಿಂಗಾಯತ ಶೆಟ್ಟರ ಹುಡುಗಿ ಮುಂದೆ ಬಾಲಿವುಡ್ ಬೆಡಗಿಯಾಗಿ ಮೆರೆಯುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ರಾಜಮ್ಮ (1914ಏಪ್ರಿಲ್,  – 17 ಜುಲೈ, 1992), ತಮ್ಮ ತೆರೆಮೇಲಿನ ಶಾಂತಾ ಹುಬ್ಳೀಕರ್ ಎಂಬ ಹೆಸರಿನಿಂದ ಖ್ಯಾತರಾದ ಚಿತ್ರನಟಿ ಮತ್ತು ಗಾಯಕಿ. ಸ್ವಾತಂತ್ರ್ಯಪೂರ್ವದ ಭಾರತೀಯ ಚಿತ್ರರಂಗದ ಅಭಿನೇತ್ರಿಯಾಗಿ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕೂ ಮತ್ತು ಹಾಡುಗಾರಿಕೆಗೂ ಹೆಸರಾದ ಶಾಂತಾ ಕನ್ನಡ ಮೂಲದವರು. ನಟಿಗಾಯಕಿಯಾಗಿ ಪ್ರಸಿದ್ಧಿ ಪಡೆದ ಶ್ರೇಷ್ಠ ಕಲಾವಿದೆ. ಬಾಲ್ಯ ಶಾಂತಾ ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿ ಎಂಬ ಊರಿನಲ್ಲಿ 1914 ಏಪ್ರಿಲ್ 14ರಂದು. ಅವರ ಹುಟ್ಟುಹೆಸರು ರಾಜಮ್ಮ ಬಡ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ಜನಿಸಿದಳು.  ಶಾಂತಾ ಮೂರನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ನಿಧನರಾಗಿ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೂವರು ಅಕ್ಕತಂಗಿಯರಲ್ಲಿ ಮಧ್ಯದವರಾದ ಶಾಂತಾ ಮತ್ತು ಅವರ ತಂಗಿಯನ್ನು ಹುಬ್ಬಳ್ಳಿಯ ಹತ್ತಿರದ, ಮಕ್ಕಳಿಲ್ಲದ ಸಂಬಂಧಿಕರೊಬ್ಬರಿಗೆ ದತ್ತು ಕೊಟ್ಟು ಸಾಕುವ ವ್ಯವಸ್ಥೆಯಾಗಿ, ದತ್ತುತಾಯಿಯ ಕಟ್ಟುನಿಟ್ಟಿನ ಪರಿಸರದ ಮಧ್ಯೆಯೇ ಪ್ರೌಢಶಾಲೆಯ ತನಕ ಶಾಂತಾ ಓದಿದರು. ಸಂಗೀತಾಭ್ಯಾಸ ಎಳವೆಯಿಂದ ಹಾಡುವ ಆಸಕ್ತಿ ಹೊಂದಿದ್ದ ಶಾಂತಾ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಅಬ್ದುಲ್ ಕರೀಂ ಖಾನ್ ಸಾಹೇಬರ ಬಳಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಅಜ್ಜಿಯಿಂದ ಜನಪದ ಗೀತೆ ಮತ್ತು ವಚನಗಳನ್ನು ಕಲಿತಿದ್ದ ಅವರಿಗೆ ಮುಂದೆ ಗಾಯಕಿಯಾಗುವ ಅವಕಾಶಗಳಲ್ಲಿ ಈ ಸಂಗೀತಾಭ್ಯಾಸ ನೆರವಾಯಿತು.ಯೌವನಕ್ಕೆ ಕಾಲಿಡುವ ಸಮಯದಲ್ಲಿ ಯಾರೂ ದಿಕ್ಕಿಲ್ಲದ ಈ ಅನಾಥೆ ಹುಡುಗಿಗೆ ಒಬ್ಬ ವೃದ್ಧನಿಗೆ ಕೊಟ್ಟು ಮದುವೆ ಮಾಡಿಕೊಡಬೇಕೆಂಬ ವಿಚಾರ ಪ್ರಸ್ತಾಪವಾಯಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಬಾಲಕಿ ರಾಜಮ್ಮ ಮನೆ ಬಿಟ್ಟು ಹೋಗಿ ಶ್ರೀ ಗುಬ್ಬಿ ವೀರಣ್ಣನವರ ಆಶ್ರಯ ಪಡೆದಳು. ನಟಿಯಾಗಿ ರಂಗಭೂಮಿ ನಟಿಯಾಗಿ ಶಾಂತಾ ಮೊದಲು ರಂಗನಟಿಯಾಗಿ ಹುಬ್ಬಳ್ಳಿ ಧಾರವಾಡದಾದ್ಯಂತ ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ಗುಬ್ಬಿ ಕಂಪನಿ ಸೇರಿದ ಶಾಂತ, ರಂಗಲೋಕದಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಮುಖ ಪಾತ್ರಗಳನ್ನು ಪಡೆದರು ಮಾತ್ರವಲ್ಲ, ಒಳ್ಳೆಯ ಗಾಯಕಿ ಎಂದೂ ಹೆಸರಾದರು. ಶಾಂತಾ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಗೆ ಬರುತ್ತಲೇ ಪುಣೆಯ ಚಿತ್ರನಿರ್ಮಾಪಕರಿಂದ ಶಾಂತಾ ಅವರಿಗೆ ಅವಕಾಶಗಳು ಬಂದವು. ತಮ್ಮ 18ನೇ ವಯಸ್ಸಿನಲ್ಲಿ ಕರ್ನಾಟಕ ಬಿಟ್ಟು, ಸಿನಿಮಾ ಅವಕಾಶಗಳಿಗೆ ಪುಣೆಗೆ ಶಾಂತಾ ಬಂದರು. ಸಿನಿಮಾ ನಟಿಯಾಗಿ1934ರಲ್ಲಿ ನಿರ್ಮಾಣಗೊಂಡ, ಮರಾಠಿ ಮತ್ತು ಹಿಂದಿ ಎರಡರಲ್ಲೂ ತೆರೆಕಂಡ ಭೇಡಿ ರಾಜಕುಮಾರ/ತಾಕ್ಸೇನ್ ರಾಜಪುತ್ರ ಶಾಂತಾ ಅವರ ಮೊದಲ ಸಿನಿಮಾ. ಇಲ್ಲಿ ಸಣ್ಣ ಪಾತ್ರ ಮಾಡಿದ್ದ ಅವರಿಗೆ ಸಿಕ್ಕ ಮೊದಲ ಗಮನಾರ್ಹ ಸಿನಿಮಾ ಎಂದರೆ 1937ರಲ್ಲಿ ಬಂದ ಮರಾಠಿ ಚಿತ್ರ ಕನ್ಹೋಪಾತ್ರ. ಇದು ಮರಾಠಿ ಸಂತೆ ಕನ್ಹೋಪಾತ್ರಳ ಮೇಲೆ ಮಾಡಿದ ಸಿನಿಮಾವಾಗಿತ್ತು. ಇಲ್ಲಿ ಶಾಂತಾರ ನಟನೆ ಮತ್ತು ಹಾಡುಗಾರಿಕೆ ಹೆಚ್ಚಿನ ಪ್ರಶಂಸೆ ಗಳಿಸಿತು. ಇದು ಪುಣೆಯ ಅತಿದೊಡ್ಡ ಚಿತ್ರಸಂಸ್ಥೆಯಾಗಿದ್ದ ‘ಪ್ರಭಾತ್ ಫಿಲ್ಮ್ ಕಂಪನಿ’ಯವರ ಗಮನ ಸೆಳೆಯಿತು. ಪ್ರಭಾತ್ ಫಿಲ್ಮ್ ಕಂಪನಿಯ, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ವಿ. ಶಾಂತಾರಾಂ ಅವರು ತಮ್ಮ ಮಾಝಾ ಮೂಲಗಾ /ಮೇರಾ ಲಡ್ಕ (1938) ಚಿತ್ರದ ನಾಯಕಿಯಾಗಿ ಶಾಂತಾರನ್ನು ಆಯ್ಕೆ ಮಾಡಿದರು. ಕಂಪನಿಯ ಒಳಗೆ ಮತ್ತು ಹೊರಗೆ ಶಾಂತಾರಾಂ ಅವರ ಈ ನಿರ್ಧಾರ ಜನರಲ್ಲಿ  ಅಚ್ಚರಿಗೆ, ಚರ್ಚೆಗೆ ಕಾರಣವಾಗಿತ್ತು. ಅದಾಗಲೇ ಕಂಪನಿಯ ಬಹುಪಾಲು ಎಲ್ಲಾ ಚಿತ್ರಗಳ ಯಶಸ್ವೀ ನಾಯಕಿಯಾಗಿ ಹೆಸರು ಮಾಡಿದ್ದ ಖ್ಯಾತ ಮರಾಠಿ ನಟಿ ಶಾಂತಾ ಆಪ್ಟೆ ಇದ್ದರೂ ಸಹಿತ  ಅವರನ್ನು ಬಿಟ್ಟು ಹೊಸ ಮತ್ತು ಮರಾಠಿ ಬಾರದ ಕನ್ನಡದ ಹುಡುಗಿಯನ್ನು ಆರಿಸಿಕೊಂಡಿದ್ದು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ , ಗಮನ ಬರುವಂತಾಯಿತು. ಶಾಂತಾರಾಂ ನೀಡಿದ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಶಾಂತಾ ಒಳ್ಳೆಯ ಅಭಿನಯ ಮತ್ತು ಹಾಡುಗಳನ್ನು ಹಾಡಿ ಶಾಂತಾರಾಂ ಅವರನ್ನೂ ಸೇರಿದಂತೆ ಎಲ್ಲಾ ಮರಾಠಿ ಮತ್ತು ಹಿಂದಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು. 1939 ರಲ್ಲಿ ಶಾಂತಾರಾಂ ನಿರ್ದೇಶಿಸಿದ ಮಹತ್ವಪೂರ್ಣ ಸಿನಿಮಾ ‘ಮನೂಸ್/ಆದ್ಮಿ’. ಇದು ವೇಶ್ಯೆಯೊಬ್ಬಳ ಜೀವನವನ್ನು ಕುರಿತಾದ ಸಿನಿಮಾವಾಗಿದ್ದು, ವಸ್ತು-ವಿಷಯ ಮತ್ತು ನಿರೂಪಣೆಗಳೆರಡೂ ಸವಾಲಿನಿಂದ ಕೂಡಿದ್ದಾಗಿತ್ತು. ಬಿಡುಗಡೆಗೊಂಡ ಆ ಚಿತ್ರ ಶಾಂತಾ ಹುಬ್ಳೀಕರರಿಗೆ  ಭಾರತದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಆ ಚಿತ್ರದಲ್ಲಿ ಶಾಂತಾ ಹಾಡಿದ ಕಶಾಲಾ ಉದ್ಯಾಚಿ ಬಾತ್/ಕಿಸಿಲಿಯೇ ಕಲ್ಕಿ ಬಾತ್ ಹಾಡು ಜನಜನಿತವಾಯಿತು.ಇದಾದ ಬಳಿಕ ಸಾಲು ಸಾಲಾಗಿ ಮರಾಠಿ ಚಿತ್ರಗಳಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಶಾಂತಾ ನಟಿಸಿದರು. ಕನ್ನಡ ಚಿತ್ರರಂಗದಲ್ಲಿ ಭಾರತದಾದ್ಯಂತ ಶಾಂತಾ ಹುಬ್ಳೀಕರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕನ್ನಡದ ಹಲವರು ಶಾಂತಾ ಅವರನ್ನು ಕರೆತರುವ ಯತ್ನ ಮಾಡಿದರಾದರೂ ಬಿಡುವಿಲ್ಲದ ಶಾಂತಾ ಮರಾಠಿಯಲ್ಲೇ ಮಗ್ನರಾದರು. ಆದರೆ ಗುಬ್ಬಿ ವೀರಣ್ಣ ಅವರು ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿದ್ದ ಜೀವನ ನಾಟಕ (1942) ಚಿತ್ರಕ್ಕೆ ಶಾಂತಾ ಅವರನ್ನು ಕರೆತಂದು ಚಿತ್ರ ಮಾಡಿದರು. ಈ ಚಿತ್ರದಲ್ಲಿ ಕೆಂಪರಾಜ ಅರಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಇವರೊಂದಿಗೆ ಎಂ. ವಿ. ರಾಜಮ್ಮ, ಬಿ. ಜಯಮ್ಮ ಮತ್ತು ಶಾಂತಾ ಹುಬ್ಳೀಕರ್ ನಟಿಸಿದರು. ಇದು ಶಾಂತಾ ನಟಿಸಿದ ಏಕೈಕ ಕನ್ನಡ ಚಲನಚಿತ್ರ. ಮರಾಠಿ ಹಿಂದಿಯ ಸಿನಿಮಾಗಳಲ್ಲಿ ಅತ್ಯಂತ ಬೇಡಿಕೆಯ ನಾಯಕಿ ನಟಿಯಾಗಿ ಹೆಸರು ದುಡ್ಡು ಪದವಿ ಆಸ್ತಿ ಎಲ್ಲವನ್ನೂ ಪಡೆಯುತ್ತಾ ದಾಪುಗಾಲು ಹಾಕುತ್ತಾ ನಡೆದ ಶಾಂತಾ ಹುಬ್ಳಿಕರ ಅವರಿಗೆ ಅವರೇ ಮಾದರಿಯಾಗಿದ್ದರು. ಇಂತಹ ಸಂದರ್ಭದಲ್ಲಿ ಅವರು ತನ್ನ ಪತಿಯನ್ನಾಗಿ ಸಂಗಾತಿಯನ್ನಾಗಿ ಉದ್ಯಮಿಬಾಪುಸಾಹೇಬ್ ಗೀತೆ ಅವರನ್ನು ಮದುವೆಯಾಗಲು ನಿರ್ಧರಿಸಿದರು. ಬಹುಶಃ ಶಾಂತಾ ಹುಬ್ಳಿಕರ ಅವರ ಜೀವನದಲ್ಲಿ ಇದು ಮಾಡಿದ ದೊಡ್ಡ ತಪ್ಪು ಎನಿಸಿತು. ಗಂಡ ಬಾಪುಸಾಹೇಬ ನಿರ್ಮಾಪಕರಲ್ಲಿ ಶಾಂತಾ ಹುಬ್ಳಿಕರ ಮಾಡಿದ ಚಲನ ಚಿತ್ರಗಳ ಸಂಭಾವನೆಯನ್ನು ಮುಂಚಿತವಾಗಿ ಪಡೆದು ಕೊಳ್ಳುತ್ತಾ ತನ್ನ ಐಷ್ಯಾರಾಮಿ ಜೀವನವನ್ನು ನಡೆಸ ಹತ್ತಿದನು . ಇದೆ ಹೊತ್ತಿನಲ್ಲಿ ಒಂದು ಗಂಡು ಮಗು ಹುಟ್ಟಿತು.ಅವನೂ  ಕೂಡ ಮುಂದೆ ತನ್ನ ತಾಯಿಯನ್ನು ಮನೆ ಬಿಟ್ಟು ಹೊರ ಹಾಕಿದನು .ಜೀವನದಲ್ಲಿ ರಾಣಿಯಾಗಿ ಮೆರೆಯಬೇಕಾದ ಶಾಂತಾ ಹುಬ್ಳಿಕರ ಎಂಬ ಮರಾಠಿ ಹಿಂದಿಯ ಸಿನಿಮಾಗಳಲ್ಲಿ ನಟಿಸಿದ್ದ ದಂತ ಕಥೆ ಮುಂದೆ ಅನಾಥೆಯಾಗಿ ಬಿಟ್ಟಳು .ಆದರೂ ಧೃತಿಗೆಡಲಿಲ್ಲ ಸಣ್ಣ ಪುಟ್ಟ ಪಾತ್ರ ಮಾಡುತ್ತ ತನ್ನ ಜೀವನ ನಿರ್ವಹಣೆಗೆ ಪುಣೆಯಲ್ಲಿ ಆರಂಭದಲ್ಲಿ ಒಂದು ಪುಟ್ಟ ಬಾಡಿಗೆಯ ಮನೆ ಮಾಡಿ ಕೊಂಡು ಜೀವನ ನಡೆಸಿದಳು .ಇವಳ ಗಂಡ ಮಗ ಇವಳ ಆಸ್ತಿ ಕಡೆದುಕೊಂಡು ಬೀದಿಗೆ ತಳ್ಳಿದರು. ಕೊನೆಗೆ ಪುಣೆಯ ಅನಾಥಾಶ್ರಮದಲ್ಲಿ ತನ್ನ ಜೀವಿತ ಕಾಲದ ಕೊನೆಯವರೆಗೂ ಕಾಲ ಕಲೆಗೂ 1992 ರಲ್ಲಿ ಬಯಲಾದಳು. ಇಡೀ ಮುಂಬೈ ನಗರಿಗೆ ಬೇಕಾದ ಈ ಚೆಲುವೆ ಹೀಗೆ ಮುಂದೆ ಅನಾಥ ಶವವಾಗುತ್ತಾಳೆ ಎಂದು ಯಾರೂ ಊಹಿಸಿರಲಿಲ್ಲ. ಅನಾಥಾಶ್ರಮದಲ್ಲಿ ಇರುವಾಗಲೇ ತನ್ನ ಆತ್ಮ ಕಥೆಯನ್ನು ಬರೆದಳು. ನಟನೆ ಗಾಯನ ಒಂದು ತಪಸ್ಸು ಅದು ತನಗೆ ಒಲಿದು ಬಂದಿತ್ತು ಜನರನ್ನು ಪ್ರೇಕ್ಷಕರನ್ನು ರಂಜಿಸಿ ಸಂತೋಷ ತಂದಿರುವೆನು. ನನ್ನ ಕೆಲಸ ಅಷ್ಟೆ. ಜೀವನದಲ್ಲಿ ಬಡತನ ಕಷ್ಟ ಅನುಭವಿಸಿದ ತಾನು ನಟನೆಯಲ್ಲಿ ಎಲ್ಲವನ್ನೂ ಮರೆತೇನು ಎಂದು ಹೇಳುತ್ತಾ ನಾಳೆಯ ಚಿಂತ್ಯಾಕೆ ಎಂಬ ಕನ್ನಡಕ್ಕೆ ಅನುವಾದಗೊಂಡ ಮೂಲ ಕೃತಿ ಕಶಾಲಾ ಉದ್ಯಾಚಿ ಬಾತ್’ ಎಂಬ ಕೃತಿಯಲ್ಲಿ ಎಲ್ಲವನ್ನೂ ದಾಖಲಿಸಿ ಈ ಭೂಮಿಯ ಮೇಲೆ ತಾನು ಬದುಕಿ ಉಳಿದವರಿಗೆ ಸಂತೋಷವನ್ನು ಕೊಟ್ಟು ನಿರ್ಗಮಿಸ ಬೇಕು. ಅಂತಹ ಮಹಾರಾಣಿಯನ್ನು ಗೆಳತಿಯರು ಸಹ ಕಲಾವಿದರು ಮೇಲಿಂದ ಮೇಲೆ ನಿನ್ನ ಪರಿಸ್ಥಿತಿ ಮುಂದೆ ಹೇಗೆ ಏನು ಎಂಬ ಹಲವು ಪ್ರಶ್ನೆಗಳಿಗೆ ಯಾಕೆ ನಾಳೆಯ ಮಾತು ಚಿಂತೆ ಎಂದು ಮುಗುಳು ನಗುತ್ತಾ ಉತ್ತರ ನೀಡಿದ ನಟಿ ಎಲ್ಲಾ ಸಿಹಿ ಕಹಿ ಅನುಭವ ಘಟನೆಗಳನ್ನು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿ ತೆರೆಯ ಮರೆಗೆ ಸರಿದಳು. *ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ* ಶಾಂತಾ ತಮ್ಮ ಆತ್ಮಕಥೆ ‛ *ಕಶಾಲಾ ಉದ್ಯಾಚಿ ಬಾತ್’* ಮರಾಠಿಯಲ್ಲಿ ಬರೆದಿದ್ದಾರೆ. ಇದರ ಕನ್ನಡಾನುವಾದ ‛ನಾಳೀನ ಚಿಂತ್ಯಾಕ ’ ಪುಸ್ತಕವನ್ನು ಅಕ್ಷತಾ ಹುಂಚದಕಟ್ಟೆ ಅವರು ತಮ್ಮ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ. *ನಿಧನ*ತಮ್ಮ ಕೊನೆಯ ದಿನಗಳನ್ನು ಪುಣೆಯ ವೃದ್ಧಾಶ್ರಮದಲ್ಲಿ ಕಳೆದ ಶಾಂತಾ ಜುಲೈ 19, 1992ರಂದು ನಿಧನವಾದರು.  *ಶಾಂತಾ ಹುಬ್ಳಿಕರ ಅವರು ನಟಿಸಿದ ಆಯ್ದ ಚಲನ ಚಿತ್ರಗಳ ಪಟ್ಟಿ* ಶಾಂತಾ ನಟಿಸಿದ ಆಯ್ದ ಚಿತ್ರಗಳು: ಭೇಡ್ಕ ರಾಜಕುಮಾರ್ (1934)ಕನ್ಹೋಪಾತ್ರ (1937)ಮೇರಾ ಲಡ್ಕ (1938)ಮನೂಸ್/ಆದ್ಮಿ (1939)ಜೀವನ ನಾಟಕ ಕನ್ನಡ ಚಲನ ಚಿತ್ರ (1942) ಹೀಗೆ ಹಲವಾರು ನಾಟಕ ಚಲನ ಚಿತ್ರಗಳಲ್ಲಿ ನಟಿಸಿದ ಶಾಂತಾ ಹುಬ್ಳಿಕರ ಇವರು ಮಣ್ಣಲ್ಲಿ ಹುಟ್ಟಿ ಮಣ್ಣ ಮೇಲೆ ಬೆಳೆದು ಮಣ್ಣಲ್ಲಿ ಮಣ್ಣಾಗಿ ಹೋದರು. ಕನ್ನಡಿಗರು ಮರೆತ ದೈತ್ಯ ಪ್ರತಿಭೆ ಶಾಂತಾ ಹುಬ್ಳಿಕರ ಅವರಿಗೆ ನಮ್ಮ ಭಾವ ಪೂರ್ಣ ಶ್ರದ್ಧಾಂಜಲಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ 

“ಬಾಲಿವುಡ್ ಬೆಡಗಿಯಾಗಿ ಮೆರೆದ ಕನ್ನಡದ ಹುಡುಗಿ ಶಾಂತಾ ಹುಬ್ಳಿಕರ”ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ, ಗಝಲ್, ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಮಾತಿನ ಪದಗಳು ತೊದಲುತಿವೆ ಇಂದುಕತ್ತಲೆಗೆ ಕನಸುಗಳು ನಡುಗುತಿವೆ ಇಂದು ಎಷ್ಟು ಹುಡುಕಿದರು ಸಿಗದು ಸಮಾಧಾನಪಡೆದ ಬಯಕೆಗಳು ಬಳಲುತಿವೆ ಇಂದು ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆಹೊಳೆಯುವ ಕಿರಣಗಳು ಕರಗುತಿವೆ ಇಂದು ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾಮಾಯೆ ಮೋಹಗಳು ತೊರೆಯುತಿವೆ ಇಂದು ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಗಜಲ್

ಕಾವ್ಯ ಸಂಗಾತಿ ನಿನ್ನೊಲವಿನಲಿ ನಾನು ಗೆಲುವಾಗಿರುವೆ ಈಗದೃಢ ಧೈರ್ಯದಚಲ ಶಿಖರವಾಗಿರುವೆ ಈಗ ಜಗದ ಜಂಜಾಟಗಳನೆಲ್ಲ ಮರೆಸಿರುವೆ ನೀನುಬದುಕ ಗುರಿಗೆ ನಾನು ನಿಖರವಾಗಿರುವೆ ಈಗ ನೋಡು ನೋಡುತ್ತಲೆ ಕಾಲಚಕ್ರ ಉರುಳಿದೆಸಮಯದ ನಡಿಗೆಯಲಿ ದಿಟವಾಗಿರುವೆ ಈಗ ಊಸರವಳ್ಳಿಯಂತೆ ಬಣ್ಣ ಬದಲಿಸುವ ಜನನೀಲಿಯಾಗಸದ ನಗುವಿನಂತಾಗಿರುವೆ ಈಗ ಎದೆಯೊಳಗಿನ ಕಿಚ್ಚು ಜ್ವಾಲೆಯಾಗಿದೆ ಮಾಜಾಬೂದಿಯಲೆದ್ದ ಫಿನಿಕ್ಸ ಹಕ್ಕಿಯಾಗಿರುವೆ ಈಗ ———————- ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಗಜಲ್ Read Post »

ನಿಮ್ಮೊಂದಿಗೆ

ಡಾ.ಲೀಲಾ ಗುರುರಾಜ್ ಅವರ “ಬಳೆ”

ಕಾವ್ಯ ಸಂಗಾತಿ ಡಾ.ಲೀಲಾ ಗುರುರಾಜ್ “ಬಳೆ” ಹೆಣ್ಣು ಬಳೆ ಧರಿಸಲು ಅಂದವುಗಾಜಿನ ಬಳೆಗಳು ಇನ್ನೂ ಚಂದವುಇದು ಮುತ್ತೈದೆಯ ಸಂಖೇತವುಘಲ್ ನಾದ ಮನಕಾನಂದವು ಜನಪದ ಗೀತೆಯಲ್ಲಿ ಉಲ್ಲೇಖವಿದೆಕೆಂಪು ಗೀರಿನ ಬಳೆಯುಚಂದವೆಂದಿದೆಸ್ತ್ರೀ ಕುಲದ ಶುಭ ಸ್ವರಗಳು ಎಂದಿದೆತೊಟ್ಟಿಲಿನ ಕೂಸಿನ ದೃಷ್ಟಿಪರಿಹರಿಸಿದೆ ಋಷಿಗಳು ಈ ಶಬ್ದಕ್ಕೆ ಮಾರು ಹೋಗಿರುವರುತಪೋಭಂಗವಾಗಿ ಮತ್ತೆ ತಪಸ್ಸಿಗೆ ಕೂತಿರುವರುಹೆಣ್ಣಿನ ಕೈಗಳ ಶೃಂಗಾರದ ಸಾಧನ ಎನುವರುಅಮ್ಮನಿರುವಳು ಎಂಬ ಖಾತ್ರಿ ಕೂಸಿಗೆ ಅರಿವರು ಗೌರಿ ಹಬ್ಬದಲ್ಲಿ ತೌರಿನವರು ಅದ ತೋಡಿಸುವರುಅದಕ್ಕೆoದೆ ಹೆಣ್ಣು ಮಕ್ಕಳು ಕಾಯುತ್ತಲಿರುವರುಅರಿಶಿಣ ಕುಂಕುಮ ನೀಡಿ  ಬಳೆಗಳನ್ನು ಇಡುವರು ಡಾ.ಲೀಲಾ ಗುರುರಾಜ್ 

ಡಾ.ಲೀಲಾ ಗುರುರಾಜ್ ಅವರ “ಬಳೆ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಡಾ ಡೋ ನಾ ವೆಂಕಟೇಶ‌ ಅವರ ಕವಿತೆ, “ಹಲ್ಲಿಗಳು”

ಕಾವ್ಯ ಸಂಗಾತಿ

ಡಾ ಡೋ ನಾ ವೆಂಕಟೇಶ‌

“ಹಲ್ಲಿಗಳು”
ಹಲ್ಲಿಗಳೇ ಇವರು,
ನಾವೋ ಹಲ್ಲಿಗೆ ಹೆದರುವವರು
ಹಲ್ಲಿಗಳ ಶಾಪಕ್ಕೆ ಬೆದರುವವರು

ಡಾ ಡೋ ನಾ ವೆಂಕಟೇಶ‌ ಅವರ ಕವಿತೆ, “ಹಲ್ಲಿಗಳು” Read Post »

ಇತರೆ, ನಿಮ್ಮೊಂದಿಗೆ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ.
ಇದು ಕಾನೂನಿನ ಕಣ್ಣಿನಲ್ಲಿ ಎಲ್ಲರೂ ಸಮಾನರು ಮತ್ತು ಯಾರಿಗೂ ತಮ್ಮ ಕೃತ್ಯದ ಫಲದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನ್ಯಾಯದ ಸ್ಥಿರತೆಯನ್ನು ಖಾತರಿಪಡಿಸುತ್ತದೆ.

“ಗಾದೆಗಳು, ಮತ್ತು ಕಾನೂನು ಅಂಶಗಳ ವಿಶ್ಲೇಷಣೆ.”ಒಂದು ಆಸಕ್ತಿದಾಯಕ ಲೇಖನ ವಿಜಯ ಅಮೃರಾಜ್‌ ಅವರ ಲೇಖನಿಯಿಂದ Read Post »

ನಿಮ್ಮೊಂದಿಗೆ

“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು

ಆರೋಗ್ಯ ಸಂಗಾತಿ “ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ       ಪ್ರತಿ ವರ್ಷ ನವೆಂಬರ್ 7 ರಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜನಸಾಮಾನ್ಯರಲ್ಲಿ ಕ್ಯಾನ್ಸರ್ ಎಂಬ ರೋಗದ ಬಗ್ಗೆ ಅರಿವು ಮೂಡಿಸುವುದು, ಅದರ ತಡೆಗಟ್ಟುವ ಕ್ರಮಗಳು, ಶೀಘ್ರ ಪತ್ತೆಯ ಮಹತ್ವ ಹಾಗೂ ಚಿಕಿತ್ಸೆಯ ಆಯ್ಕೆಗಳ ಬಗ್ಗೆ ತಿಳುವಳಿಕೆ ನೀಡುವುದು. ಭಾರತದಲ್ಲಿ ಕ್ಯಾನ್ಸರ್ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿರುವುದರಿಂದ, ಇದರ ಬಗ್ಗೆ ಸಮಾಜದ ಪ್ರತಿಯೊಬ್ಬ ಸದಸ್ಯರೂ ಜಾಗೃತರಾಗಿರಬೇಕಾಗಿದೆ. “ಕ್ಯಾನ್ಸರ್” ಎಂಬುದು ದೇಹದ ಯಾವುದೇ ಭಾಗದ ಕೋಶಗಳು ನಿಯಂತ್ರಣವಿಲ್ಲದೆ ಬೆಳೆಯಲು ಪ್ರಾರಂಭಿಸುವ ರೋಗವಾಗಿದೆ. ಸಾಮಾನ್ಯವಾಗಿ ದೇಹದ ಕೋಶಗಳು ನಿರ್ದಿಷ್ಟ ಸಮಯದ ನಂತರ ಸಾಯುತ್ತವೆ ಮತ್ತು ಹೊಸ ಕೋಶಗಳು ಅವುಗಳ ಸ್ಥಾನವನ್ನು ತುಂಬುತ್ತವೆ. ಆದರೆ, ಕ್ಯಾನ್ಸರ್‌ನ ಸಂದರ್ಭಗಳಲ್ಲಿ ಕೋಶಗಳು ಸಾಯದೆ, ನಿರಂತರವಾಗಿ ವಿಭಜನೆಗೊಂಡು “ಟ್ಯೂಮರ್”  ಎನ್ನುವ ಗುಚ್ಛವನ್ನು ರಚಿಸುತ್ತವೆ. ಈ ಕೋಶಗಳು ದೇಹದ ಇತರ ಭಾಗಗಳಿಗೆ ಹರಡಿದರೆ ಅದನ್ನು ಮೆಟಾಸ್ಟಾಸಿಸ್ ಎಂದು ಕರೆಯಲಾಗುತ್ತದೆ.ಕ್ಯಾನ್ಸರ್‌ಗಳು ಅನೇಕ ವಿಧಗಳಿವೆ — ಉದಾಹರಣೆಗೆ ಶ್ವಾಸಕೋಶ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಚರ್ಮ ಕ್ಯಾನ್ಸರ್, ರಕ್ತ ಕ್ಯಾನ್ಸರ್ ಮುಂತಾದವು. ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವನ್ನು ಭಾರತದಲ್ಲಿ 2014ರಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ಆಚರಿಸಲಾಯಿತು. ಈ ದಿನವನ್ನು ಆಯ್ಕೆ ಮಾಡಿದ್ದು ಪ್ರಸಿದ್ಧ ಭಾರತೀಯ ವಿಜ್ಞಾನಿ ಮ್ಯಾಡಮ್ ಮೇರಿ ಕ್ಯೂರಿ  ಅವರ ಜನ್ಮದಿನದ ಹಿನ್ನೆಲೆಯಲ್ಲಿ. ಮ್ಯಾಡಮ್ ಕ್ಯೂರಿ ಅವರು ರೇಡಿಯಮ್ ಹಾಗೂ ಪೊಲೋನಿಯಮ್ ಎಂಬ ಕಿರಣೋತ್ಪಾದಕ ಅಂಶಗಳನ್ನು ಕಂಡುಹಿಡಿದವರು. ಅವರ ಸಂಶೋಧನೆಗಳು ಕ್ಯಾನ್ಸರ್ ಚಿಕಿತ್ಸೆಯಾದ ರೇಡಿಯೇಶನ್ ಥೆರಪಿಗೆ  ಪಥಕಾರಣವಾದವು. ಈ ದಿನದ ಆಚರಣೆ ಮೂಲಕ ಸರ್ಕಾರ, ವೈದ್ಯಕೀಯ ಸಂಸ್ಥೆಗಳು, ಸ್ವಯಂಸೇವಾ ಸಂಘಟನೆಗಳು ಹಾಗೂ ಶಾಲಾ-ಕಾಲೇಜುಗಳು ಜನರಿಗೆ ಕ್ಯಾನ್ಸರ್ ಕುರಿತು ಶಿಕ್ಷಣ ನೀಡುವ ಕಾರ್ಯಕ್ರಮಗಳನ್ನು ನಡೆಸುತ್ತವೆ. ಕ್ಯಾನ್ಸರ್ ಉಂಟಾಗಲು ಅನೇಕ ಕಾರಣಗಳು ಕಾರಣವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳು:ತಂಬಾಕು ಮತ್ತು ಧೂಮಪಾನ: ಭಾರತದಲ್ಲಿ ಬಾಯಿ, ಗಂಟಲು ಮತ್ತು ಶ್ವಾಸಕೋಶ ಕ್ಯಾನ್ಸರ್‌ಗಳಿಗೆ ಮುಖ್ಯ ಕಾರಣ ಧೂಮಪಾನ ಹಾಗೂ ತಂಬಾಕು ಉಪಯೋಗ.ಮದ್ಯಪಾನ: ಮದ್ಯಪಾನದಿಂದ ಯಕೃತ್ ಹಾಗೂ ಹೊಟ್ಟೆಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.ಅಹಿತಕರ ಆಹಾರ ಪದ್ಧತಿ: ಅತಿ ಕೊಬ್ಬು, ಉಪ್ಪು, ಶುದ್ಧೀಕರಿಸಿದ ಆಹಾರಗಳು ಹಾಗೂ ಹಣ್ಣು-ತರಕಾರಿ ಕೊರತೆಯ ಆಹಾರ ಪದ್ಧತಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾನಿಕರ ಕಿರಣಗಳು ಮತ್ತು ರಾಸಾಯನಿಕಗಳು: ಅಲ್ಟ್ರಾವಯೊಲೆಟ್ ಕಿರಣಗಳು ಅಥವಾ ಕೈಗಾರಿಕಾ ರಾಸಾಯನಿಕಗಳು ಚರ್ಮ ಹಾಗೂ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗಬಹುದು. ಆನುವಂಶಿಕ ಕಾರಣಗಳು: ಕೆಲವೊಂದು ಕ್ಯಾನ್ಸರ್‌ಗಳು ಕುಟುಂಬದಲ್ಲಿ ಆನುವಂಶಿಕವಾಗಿ ಹರಡುವುದೂ ಇದೆ.ಜೀವನಶೈಲಿ: ಶಾರೀರಿಕ ಚಟುವಟಿಕೆ ಕೊರತೆ, ಒತ್ತಡ ಮತ್ತು ಅಸ್ವಸ್ಥ ಜೀವನಶೈಲಿ ಕೂಡಾ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕ್ಯಾನ್ಸರ್‌ನ ಪ್ರಾರಂಭಿಕ ಹಂತಗಳಲ್ಲಿ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಕೆಲವೊಂದು ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿವೆ:ಅನಿಯಂತ್ರಿತ ರಕ್ತಸ್ರಾವ ಅಥವಾ ಗಾಯದ ಗುಣಮುಖವಾಗದಿರುವುದು.ದೀರ್ಘಕಾಲದ ಕೆಮ್ಮು ಅಥವಾ ಶ್ವಾಸಕೋಶ ಸಮಸ್ಯೆಅತಿಯಾದ ತೂಕ ಇಳಿಕೆ ಅಥವಾ ಆಹಾರದಲ್ಲಿ ಆಸಕ್ತಿ ಕಳೆದುಕೊಳ್ಳುವುದು.ಚರ್ಮದ ಬಣ್ಣ ಬದಲಾವಣೆ ಅಥವಾ ಗಡ್ಡೆ-ಗುಂಡಿಗಳು ಕಾಣಿಸಿಕೊಳ್ಳುವುದು.ದೀರ್ಘಕಾಲದ ನೋವು ಅಥವಾ ದುರ್ಬಲತೆಈ ರೀತಿಯ ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಅಗತ್ಯ. ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲದಿದ್ದರೂ, ಕೆಲವೊಂದು ಕ್ರಮಗಳಿಂದ ಅಪಾಯವನ್ನು ಕಡಿಮೆ ಮಾಡಬಹುದು: ಧೂಮಪಾನ ಹಾಗೂ ತಂಬಾಕು ತ್ಯಜಿಸಿಆರೋಗ್ಯಕರ ಆಹಾರ ಸೇವನೆ: ಹಣ್ಣು, ತರಕಾರಿ, ಧಾನ್ಯ, ಪ್ರೋಟೀನ್‌ಯುಕ್ತ ಆಹಾರ ಸೇವಿಸಬೇಕು.ನಿಯಮಿತ ವ್ಯಾಯಾಮ: ದಿನವೂ ಕನಿಷ್ಠ 30 ನಿಮಿಷ ಶಾರೀರಿಕ ಚಟುವಟಿಕೆ ಮಾಡಬೇಕು. ವೈದ್ಯಕೀಯ ತಪಾಸಣೆ: ವರ್ಷಕ್ಕೆ ಕನಿಷ್ಠ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ರೋಗ ನಿರೋಧಕ ಲಸಿಕೆಗಳು: ಉದಾಹರಣೆಗೆ, HPV ಲಸಿಕೆ ಗರ್ಭಾಶಯ ಕ್ಯಾನ್ಸರ್ ತಡೆಗಟ್ಟಲು ಸಹಾಯಕವಾಗಿವೆ.ಮದ್ಯಪಾನ ನಿಯಂತ್ರಣಸೂರ್ಯನ ಕಿರಣಗಳಿಂದ ರಕ್ಷಣೆ: ಚರ್ಮ ಕ್ಯಾನ್ಸರ್ ತಡೆಗೆ ಸೂಕ್ತವಾದ ವಸ್ತ್ರಧಾರಣೆ ಹಾಗೂ ಸನ್‌ಸ್ಕ್ರೀನ್ ಬಳಕೆ ಮಾಡಬೇಕು. ಕ್ಯಾನ್ಸರ್‌ನ ಚಿಕಿತ್ಸೆ ಅದರ ಹಂತ, ಸ್ಥಳ ಹಾಗೂ ರೋಗಿಯ ಶಾರೀರಿಕ ಸ್ಥಿತಿಯ ಮೇಲೆ ಅವಲಂಬಿತವಾಗಿದೆ. ಮುಖ್ಯವಾಗಿ ಮೂರು ರೀತಿಯ ಚಿಕಿತ್ಸೆಗಳು ವ್ಯಾಪಕವಾಗಿ ಬಳಕೆಯಲ್ಲಿವೆ: ಶಸ್ತ್ರಚಿಕಿತ್ಸೆ : ಕ್ಯಾನ್ಸರ್ ಕೋಶಗಳನ್ನು ದೇಹದಿಂದ ತೆಗೆದುಹಾಕುವುದು.ರೇಡಿಯೇಶನ್ ಥೆರಪಿ :  ಕಿರಣಗಳ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವುದು.ಕೀಮೋಥೆರಪಿ (Chemotherapy): ಔಷಧಿಗಳ ಮೂಲಕ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಗಟ್ಟುವುದು.ಇತ್ತೀಚಿನ ದಿನಗಳಲ್ಲಿ ಇಮ್ಯುನೋಥೆರಪಿ, ಟಾರ್ಗೆಟೆಡ್ ಥೆರಪಿ, ಹಾಗೂ ಹಾರ್ಮೋನ್ ಥೆರಪಿಗಳು ಕೂಡಾ ಪರಿಣಾಮಕಾರಿಯಾಗಿ ಬಳಕೆಯಲ್ಲಿವೆ. ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಜನರಿಗೆ ಕ್ಯಾನ್ಸರ್ ಪತ್ತೆಯಾಗುತ್ತದೆ. ಆದರೆ ಅನೇಕರಿಗೆ ಶೀಘ್ರ ಪತ್ತೆಯಾಗದ ಕಾರಣದಿಂದ ಚಿಕಿತ್ಸೆ ವಿಳಂಬವಾಗುತ್ತದೆ ಮತ್ತು ಪ್ರಾಣಹಾನಿ ಸಂಭವಿಸುತ್ತದೆ. ಜನರು ಕ್ಯಾನ್ಸರ್ ಬಗ್ಗೆ ಭಯಭೀತರಾಗದೇ, ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿದರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿರುತ್ತದೆ.ಜಾಗೃತಿ ದಿನದ ಪ್ರಯುಕ್ತ ಶಾಲೆ, ಕಾಲೇಜು, ಆಸ್ಪತ್ರೆ ಹಾಗೂ ಸಾಮಾಜಿಕ ಸಂಸ್ಥೆಗಳು ರಕ್ತದಾನ ಶಿಬಿರಗಳು, ಉಪನ್ಯಾಸಗಳು, ಪೋಸ್ಟರ್ ಪ್ರದರ್ಶನಗಳು ಹಾಗೂ ಆರೋಗ್ಯ ಶಿಬಿರಗಳು ಆಯೋಜಿಸುತ್ತವೆ. ಈ ಮೂಲಕ ಜನರಲ್ಲಿ ಅರಿವು ಮತ್ತು ತಡೆಗಟ್ಟುವ ನಡವಳಿಕೆ ಬೆಳೆಸುವುದು ಮುಖ್ಯ ಉದ್ದೇಶವಾಗಿದೆ.       ಭಾರತ ಸರ್ಕಾರವು ಕ್ಯಾನ್ಸರ್ ವಿರುದ್ಧ ಹೋರಾಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಉದಾಹರಣೆಗೆ: NPCDCS (National Programme for Prevention and Control of Cancer, Diabetes, Cardiovascular Diseases and Stroke)ರಾಷ್ಟ್ರೀಯ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆ ಕೇಂದ್ರಗಳುಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತ ಅಥವಾ ಕಡಿಮೆ ದರದ ಚಿಕಿತ್ಸೆ. ಕ್ಯಾನ್ಸರ್ ಸ್ಕ್ರೀನಿಂಗ್ ಅಭಿಯಾನಗಳು – ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗಾಗಿಈ ಕ್ರಮಗಳಿಂದ ಜನರಿಗೆ ಸಮಾನ ವೈದ್ಯಕೀಯ ಸೇವೆ ದೊರಕುವಂತಾಗಿದೆ.             ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನವು ಕೇವಲ ಒಂದು ಆಚರಣೆಯ ದಿನವಲ್ಲ, ಅದು ಆರೋಗ್ಯದ ಹೊಣೆಗಾರಿಕೆಯನ್ನು ನೆನಪಿಸುವ ದಿನ. ಕ್ಯಾನ್ಸರ್ ಒಂದು ಅಂತ್ಯವಲ್ಲ – ಸಮಯಕ್ಕೆ ಪತ್ತೆಹಚ್ಚಿ, ಸರಿಯಾದ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ. ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಜಾಗೃತಿಯಿಂದ ನಡೆದುಕೊಂಡರೆ ಕ್ಯಾನ್ಸರ್‌ನಂತಹ ಭಯಾನಕ ರೋಗವನ್ನೂ ತಡೆಗಟ್ಟಬಹುದು.ಕ್ಯಾನ್ಸರ್ ವಿರುದ್ಧ ಹೋರಾಟವು ಕೇವಲ ವೈದ್ಯರ ಕೆಲಸವಲ್ಲ – ಅದು ಸಮಾಜದ ಪ್ರತಿಯೊಬ್ಬ ಸದಸ್ಯನ ಸಹಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ನಾವು ಎಲ್ಲರೂ ಸೇರಿ ಈ ದಿನದ ಮಹತ್ವವನ್ನು ಅರಿತು, ಆರೋಗ್ಯಕರ ಹಾಗೂ ಉತ್ತಮ ಮಾನವೀಯ ನೆಲೆಯುಳ್ಳ  ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸೋಣ ಅಲ್ಲವೇ? ನೀವೇನ ಹನಿಬಿಂದು

“ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ” ವಿಶೇಷ ಲೇಖನ ಹನಿ ಬಿಂದು Read Post »

You cannot copy content of this page

Scroll to Top