ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ರಂಗಭೂಮಿ

ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, ಡಾ.ಯಲ್ಲಮ್ಮ

ರಂಗ ಸಂಗಾತಿ ಡಾ.ಯಲ್ಲಮ್ಮ ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, *ಪರಿಪೂರ್ಣತೆಯ ಹುಡುಕಾಟ: ಹಯವದನ – ನಾಟಕದ ಜೀವಾಳ, ಗಿರೀಶ್ ಕಾರ್ನಾಡ್*ಒಂದಾನೊಂದು ಕಾಲದಲ್ಲಿ *ಧರ್ಮಪುರ* ಎಂಬ ಸುಂದರವಾದ ನಗರವಿತ್ತು. ಆ ಊರಿನಲ್ಲಿ ಇಬ್ಬರು ಪ್ರಾಣಸ್ನೇಹಿತರಿದ್ದರು – *ದೇವದತ್ತ* ಮತ್ತು *ಕಪಿಲ* . *ದೇವದತ್ತ ಬ್ರಾಹ್ಮಣ* ಯುವಕ, ಮಹಾನ್ ಬುದ್ಧಿವಂತ, ಕವಿ. ಆದರೆ ಆತನ ದೇಹ ದುರ್ಬಲವಾಗಿತ್ತು. ಇತ್ತ *ಕಪಿಲ ಕಮ್ಮಾರನ ಮಗ,** ದೈಹಿಕವಾಗಿ ಅತ್ಯಂತ ಬಲಶಾಲಿ ಮತ್ತು ಮಲ್ಲ. ಆದರೆ ಆತನಿಗೆ ದೇವದತ್ತನಷ್ಟು ಬುದ್ಧಿವಂತಿಕೆ ಇರಲಿಲ್ಲ. ಇಬ್ಬರ ನಡುವೆ *ರಾಮ-ಲಕ್ಷ್ಮಣರಂತಹ ಸ್ನೇಹ* ವಿತ್ತು. ಈ ಕಥೆಗೆ ರೋಚಕ ತಿರುವು ಸಿಗುವುದು *ಪದ್ಮಿನಿ* ಎಂಬ ಅತ್ಯಂತ ಸುಂದರ ಹೆಣ್ಣುಮಗಳ ಪ್ರವೇಶದಿಂದ. ದೇವದತ್ತ ಅವಳನ್ನು ನೋಡಿ ಮೊದಲ ನೋಟದಲ್ಲೇ ಪ್ರೀತಿಸುತ್ತಾನೆ. ಕಪಿಲನ ಸಹಾಯದಿಂದ *ದೇವದತ್ತ ಮತ್ತು ಪದ್ಮಿನಿಯ ವಿವಾಹ* ವೂ ನಡೆಯುತ್ತದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ, ದಿನ ಕಳೆದಂತೆ ಪದ್ಮಿನಿಯ ಮನಸ್ಸಿನಲ್ಲಿ ಒಂದು ದೊಡ್ಡ ತುಮುಲ ಶುರುವಾಗುತ್ತದೆ. ಅವಳಿಗೆ ತನ್ನ ಗಂಡ ದೇವದತ್ತನ ಬುದ್ಧಿವಂತಿಕೆ ಇಷ್ಟ, ಆದರೆ ಅದೇ ಸಮಯದಲ್ಲಿ ಕಪಿಲನ ಕಟ್ಟುಮಸ್ತಾದ ದೇಹದಾಢ್ಯತೆಯ ಬಗ್ಗೆಯೂ ಎಲ್ಲಿಲ್ಲದ ಆಕರ್ಷಣೆ ಹುಟ್ಟಿಕೊಳ್ಳುತ್ತದೆ!   ಒಮ್ಮೆ ಈ ಮೂವರೂ *ಉಜ್ಜಯಿನಿಗೆ* ಪ್ರಯಾಣ ಬೆಳೆಸುತ್ತಾರೆ. ದಾರಿಯಲ್ಲಿ ರುದ್ರ ಮತ್ತು ಕಾಳಿಮಾತೆಯ ದೇವಾಲಯ ಸಿಗುತ್ತದೆ. ತನ್ನ ಹೆಂಡತಿ ತನ್ನ ಗೆಳೆಯ ಕಪಿಲನತ್ತ ಆಕರ್ಷಿತಳಾಗಿದ್ದಾಳೆ ಎಂದು ಅರಿತ ದೇವದತ್ತ, ತೀವ್ರ ಹತಾಶೆಯಿಂದ ಕಾಳಿಮಾತೆಯ ಗುಡಿಗೆ ಹೋಗಿ ತನ್ನ ತಲೆಯನ್ನು ಕತ್ತರಿಸಿಕೊಂಡು ಪ್ರಾಣ ಬಿಡುತ್ತಾನೆ. ಗೆಳೆಯನನ್ನು ಹುಡುಕಿಕೊಂಡು ಗುಡಿಯೊಳಗೆ ಬಂದ ಕಪಿಲ, ದೇವದತ್ತನ ಮೃತದೇಹ ನೋಡಿ ತಡೆಯಲಾರದೆ ತನ್ನ ಗೆಳೆಯನ ಸಾವಿಗೆ ತಾನೇ ಕಾರಣ ಎಂದು ನೊಂದು ತಾನೂ ತನ್ನ ತಲೆ ಕಡಿದುಕೊಳ್ಳುತ್ತಾನೆ.   ಇಬ್ಬರೂ ಹಿಂದಿರುಗದಿದ್ದಾಗ ಅವರನ್ನು ಹುಡುಕಿಕೊಂಡು ಬಂದ ಪದ್ಮಿನಿ, ಇಬ್ಬರ ಮೃತದೇಹ ನೋಡಿ ಆಘಾತಗೊಂಡು ತಾನೂ ಪ್ರಾಣ ಬಿಡಲು ಮುಂದಾಗುತ್ತಾಳೆ. ಆಗ ಕಾಳಿ ಮಾತೆ ಪ್ರತ್ಯಕ್ಷಳಾಗಿ, “ಅವರ ರುಂಡಗಳನ್ನು ಮುಂಡಗಳಿಗೆ ಜೋಡಿಸು, ನಾನು ಅವರಿಗೆ ಜೀವ ನೀಡುತ್ತೇನೆ” ಎನ್ನುತ್ತಾಳೆ. ಗಾಬರಿ ಮತ್ತು ಗಡಿಬಿಡಿಯಲ್ಲಿ (ಅಥವಾ *ತನ್ನ ಆಳವಾದ ಆಸೆಯ ಕಾರಣದಿಂದಲೋ ಏನೋ* ) ಪದ್ಮಿನಿ ದೇವದತ್ತನ ತಲೆಯನ್ನು ಕಪಿಲನ ದೇಹಕ್ಕೂ, ಕಪಿಲನ ತಲೆಯನ್ನು ದೇವದತ್ತನ ದೇಹಕ್ಕೂ ಜೋಡಿಸಿಬಿಡುತ್ತಾಳೆ! ಇಬ್ಬರಿಗೂ ಜೀವ ಬರುತ್ತದೆ. ಆದರೆ ಈಗ ಅತಿ ದೊಡ್ಡ ಸಮಸ್ಯೆ ಎದುರಾಗುತ್ತದೆ – *ದೇವದತ್ತನ ತಲೆ ಮತ್ತು ಕಪಿಲನ ದೇಹವಿರುವ ವ್ಯಕ್ತಿ ಪದ್ಮಿನಿಯ ಗಂಡನೋ?* ಅಥವಾ ಕಪಿಲನ ತಲೆ ಮತ್ತು ದೇವದತ್ತನ ದೇಹವಿರುವ ವ್ಯಕ್ತಿ ಗಂಡನೋ? ನ್ಯಾಯಾಲಯದಲ್ಲಿ ಋಷಿಗಳು *”ತಲೆಯೇ ಮನುಷ್ಯನ ಪ್ರಧಾನ ಅಂಗ, ಹೀಗಾಗಿ ದೇವದತ್ತನ ತಲೆ ಇರುವವನೇ ಅವಳ ನಿಜವಾದ ಗಂಡ”* ಎಂದು ತೀರ್ಪು ನೀಡುತ್ತಾರೆ. ಪದ್ಮಿನಿಗೆ ತಾನು ಬಯಸಿದ್ದಂತೆಯೇ *’ಬುದ್ಧಿವಂತ ತಲೆ ಮತ್ತು ಬಲಶಾಲಿ ದೇಹವುಳ್ಳ’* ಪರಿಪೂರ್ಣ ಗಂಡ ಸಿಕ್ಕಂತಾಗಿ ಬಹಳ ಸಂತೋಷಪಡುತ್ತಾಳೆ. ಕಪಿಲ ಬೇಸರದಿಂದ ಕಾಡಿಗೆ ಹೊರಟುಹೋಗುತ್ತಾನೆ. ಆದರೆ ಪ್ರಕೃತಿಯ ನಿಯಮವೇ ಬೇರೆ ಇತ್ತು. ದಿನ ಕಳೆದಂತೆ ದೇವದತ್ತನ ತಲೆಗೆ ತಕ್ಕಂತೆ ಆ ಬಲಶಾಲಿ ದೇಹ ಕರಗಿ ಸಾಮಾನ್ಯವಾಗುತ್ತದೆ. ಇತ್ತ ಕಾಡಿನಲ್ಲಿದ್ದ ಕಪಿಲನ ತಲೆಗೆ ತಕ್ಕಂತೆ ಆ ದುರ್ಬಲ ದೇಹ ದೃಢವಾಗುತ್ತದೆ. ಕೊನೆಗೆ ಮನುಷ್ಯನ ಅಪೂರ್ಣತೆಯೇ ಸತ್ಯ ಎಂದು ಎಲ್ಲರಿಗೂ ಅರಿವಾಗುತ್ತದೆ. ಈ ಸಂಘರ್ಷದ ಕೊನೆಯಲ್ಲಿ *ದೇವದತ್ತ ಮತ್ತು ಕಪಿಲ ಇಬ್ಬರೂ ಹೋರಾಡಿ ಸಾಯುತ್ತಾರೆ. ಪದ್ಮಿನಿ ಸತಿ ಸಹಗಮನ ಮಾಡುತ್ತಾಳೆ.*    *ಕಥೆಯೊಳಗಣ ಕಥೆ – ಉಪಕಥೆ (ಹಯವದನ):* ಈ ಕಥೆಯ ಜೊತೆಯಲ್ಲೇ ಇನ್ನೊಂದು ಕಥೆ ನಡೆಯುತ್ತಿರುತ್ತದೆ. ಅದೇ ‘ *ಹಯವದನ’* ನ ಕಥೆ. ತಾಯಿ ಮನುಷ್ಯಳು, ತಂದೆ ಕುದುರೆ ಆಗಿದ್ದರಿಂದ, ಇವನಿಗೆ ಕುದುರೆಯ ತಲೆ ಮತ್ತು ಮನುಷ್ಯನ ದೇಹವಿರುತ್ತದೆ. ತಾನು *’ಪರಿಪೂರ್ಣ’* ಮನುಷ್ಯನಾಗಬೇಕು ಎಂದು ಕಾಳಿಮಾತೆಯಲ್ಲಿ ಮೊರೆ ಹೋಗುತ್ತಾನೆ. ಆದರೆ ಕಾಳಿಮಾತೆ ಆತುರದಲ್ಲಿ ಅವನನ್ನು ‘ಪರಿಪೂರ್ಣ ಕುದುರೆ’ಯನ್ನಾಗಿ ಮಾಡಿಬಿಡುತ್ತಾಳೆ!  *ಸಂದೇಶ:* ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ, ಎಲ್ಲವನ್ನೂ ಪಡೆದು ‘ಪರಿಪೂರ್ಣ’ರಾಗುವುದು ಈ ಜಗತ್ತಿನಲ್ಲಿ ಅಸಾಧ್ಯ, ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಅಪೂರ್ಣತೆ ಇದ್ದೇ ಇರುತ್ತದೆ ಎನ್ನುವುದೇ ಈ ಅದ್ಭುತ ಕಥೆಯ ಹಿಂದಿರುವ ತತ್ವ. ಡಾ. ಯಲ್ಲಮ್ಮ ಕೆ.                                          

ಪರಿಪೂರ್ಣತೆಯ ಹುಡುಕಾಟವೆ ಗಿರೀಶ್‌ ಕಾರ್ನಾಡ್‌ ಅವರ ಹಯವದನ – ನಾಟಕದ ಜೀವಾಳ, ಡಾ.ಯಲ್ಲಮ್ಮ Read Post »

ಇತರೆ, ಜೀವನ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಇರದುದರ ಬಗೆಗೆ ಧೇನಿಸುವ ಬದಲು?! ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು  ಬಂಗಾರದ ಸೂಜಿಯೆಂದು ಅದನ್ನು  ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ  ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು. ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ,  ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು  ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ.  ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ. ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ  ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ.  ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ. ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ  ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ. ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ  ಪ್ರಯತ್ನಿಸಿ. ಸ್ವಯಂ ಗೌರವ   ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ  ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ. ಪ್ರಾರ್ಥಿಸಿ ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ  ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು  ಕೂಡ ಉಪಯೋಗಿಸದೇ ಹೋದರೆ ಅದರ  ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ  ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ. ಜಯಶ್ರೀ.ಜೆ. ಅಬ್ಬಿಗೇರಿ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ Read Post »

ಆರೋಗ್ಯ, ಇತರೆ

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ

ವೈದ್ಯ ಸಂಗಾತಿ ಡಾ.ಸೌಮ್ಯ ಕೆ.ವಿ. “ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ  ಪ್ರತಿ ವರ್ಷ ಜುಲೈ 1 ಬಂತೆಂದರೆ ಸಾಕು, ಮೊಬೈಲ್‌ನಲ್ಲಿ ‘ಹ್ಯಾಪಿ ಡಾಕ್ಟರ್ಸ್ ಡೇ’ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತದೆ. ಅನೇಕ ವರ್ಷಗಳ ಹಿಂದೆ ಇದೇ ದಿನ ನಡೆದ ಘಟನೆಯೊಂದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ..        ಪಿಯುಸಿ ಮುಗಿದಾಗ ನನ್ನೆದುರು ಎರಡು  ದಾರಿಗಳಿದ್ದವು—ಒಂದು ಇಂಜಿನಿಯರಿಂಗ್, ಮತ್ತೊಂದು ವೈದ್ಯಕೀಯ. ಏನೋ ಒಂದು ಸಾಧನೆ ಮಾಡಬೇಕು, ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಅದಮ್ಯ ಉತ್ಸಾಹದಿಂದ ನಾನು ಆರಿಸಿಕೊಂಡಿದ್ದು ಬಿಳಿ ಕೋಟಿನ ವೈದ್ಯಕೀಯ ವೃತ್ತಿಯನ್ನು. ಆದರೆ ವಾಸ್ತವದ ದಿನಗಳು ಆರಂಭವಾದಾಗ ಹೋಲಿಕೆಯೆಂಬ ಭೂತ ಕಾಡತೊಡಗಿತು. ನನ್ನ ಜೊತೆಯಲ್ಲೇ ಇಂಜಿನಿಯರಿಂಗ್ ಆರಿಸಿಕೊಂಡ ಗೆಳೆಯರೆಲ್ಲಾ ನಾಲ್ಕೇ ವರ್ಷಕ್ಕೆ ಓದು ಮುಗಿಸಿ, ಕೈತುಂಬಾ ಸಂಬಳ ಗಳಿಸುತ್ತಾ, ಕಾರು-ಬಂಗಲೆ ಎಂದು ಸೆಟಲ್ ಆಗಿಬಿಟ್ಟಿದ್ದರು. ಇತ್ತ ನಾನೋ ಐದೂವರೆ ವರ್ಷದ ಎಂಬಿಬಿಎಸ್, ಆಮೇಲೆ ಪೋಸ್ಟ್ ಗ್ರಾಜುಯೇಷನ್, ಹಗಲು-ರಾತ್ರಿ ಎನ್ನದೆ ಡ್ಯೂಟಿ, ಎಕ್ಸಾಮ್ಸ್… ಹೀಗೆ ಜೀವನದ ಅಮೂಲ್ಯ ದಿನಗಳನ್ನು ಪುಸ್ತಕಗಳ ಮಧ್ಯೆಯೇ ಕಳೆದುಬಿಟ್ಟಿದ್ದೆ. ಗೆಳೆಯರು ಗಳಿಕೆಯನ್ನು ಎಣಿಸುತ್ತಿದ್ದರೆ, ನಾನು ಇನ್ನೂ ಕರಿಯರ್ ರೂಪಿಸಿಕೊಳ್ಳುವ ಹೋರಾಟದಲ್ಲಿದ್ದೆ. ಮನಸ್ಸಿನಲ್ಲಿ ಅರಿವಿಲ್ಲದಂತೆಯೇ ಮೂಡಿಬಿಡುತ್ತಿತ್ತು—”ಅಯ್ಯೋ… ನಾನೇಕೆ ವೈದ್ಯಳಾದೆ?!”          ಒಮ್ಮೆ ವೈದ್ಯರ ದಿನದ ಪ್ರಯುಕ್ತ ನನ್ನ ಇಂಜಿನಿಯರಿಂಗ್ ಗೆಳತಿ ಟ್ರೀಟ್ ಕೊಡಿಸೆಂದು ಒತ್ತಾಯ ಮಾಡಿದಳು. ಅವಳಂತೆ ಐಷಾರಾಮಿ ಹೋಟೆಲ್ ನಲ್ಲಿ ಟ್ರೀಟ್ ಕೊಡುವಷ್ಟು ನನ್ನ ಪರ್ಸ್ ಭಾರವಿರಲಿಲ್ಲ. ಹೀಗಾಗಿ ಚಾಟ್ಸ್ ತಿನ್ನಲು ಬೀದಿ ಬದಿಯ ಗಾಡಿಯೊಂದರ ಬಳಿ ಹೋಗಿದ್ದೆವು.  ತಿನ್ನುತ್ತಿರುವಾಗ, ಆ ಚಾಟ್ಸ್ ಅಂಗಡಿಯಾತ ನನ್ನನ್ನು ಗುರುತಿಸಿ ಅತ್ಯಂತ ಪ್ರೀತಿ, ಗೌರವದಿಂದ ಮಾತನಾಡಿಸಿದ. ಅಷ್ಟೇ ಅಲ್ಲ, ಕೊನೆಯಲ್ಲಿ ಹಣ ನೀಡಲು ಹೋದಾಗ ಕೈಮುಗಿದು, “ಬೇಡ ಮೇಡಂ, ದುಡ್ಡು ತಗೋಳಲ್ಲ” ಎಂದ. ನಾನು ಆಶ್ಚರ್ಯದಿಂದ ನೋಡಿದಾಗ, ಕೃತಜ್ಞತೆಯ ಕಣ್ಣುಗಳಿಂದ ಅವನು ನೆನಪಿಸಿದ—”ಅಂದು ಮಧ್ಯರಾತ್ರಿ ನನ್ನ ಮಗನಿಗೆ ತಲೆಗೆ ಬಲವಾದ ಗಾಯವಾಗಿ ರಕ್ತ ಸುರಿಯುತ್ತಿದ್ದಾಗ, ನೀವೇ  ಹೊಲಿಗೆ ಹಾಕಿ ಗುಣಪಡಿಸಿದ್ರಿ . ಆ ಉಪಕಾರಕ್ಕೆ ಬೆಲೆ ಕಟ್ಟೋಕಾಗುತ್ತಾ?”        ಅವನ ಕಣ್ಣಲ್ಲಿದ್ದ ಆ ದೈವಿಕ ಕೃತಜ್ಞತೆಯನ್ನು ನೋಡಿ ನನ್ನ ಪಕ್ಕದಲ್ಲಿದ್ದ ಇಂಜಿನಿಯರಿಂಗ್ ಗೆಳತಿ ಸಂಪೂರ್ಣ ಆಶ್ಚರ್ಯಚಕಿತಳಾಗಿ ಮೂಕವಿಸ್ಮಿತಳಾದಳು. ಹಣದಿಂದ ಕೊಳ್ಳಲಾಗದ ಕೋಟಿ ರೂಪಾಯಿಯ ಗೌರವ ಅದಾಗಿತ್ತು.       ಆ ಕ್ಷಣ ನನ್ನ ಕಣ್ಣುಗಳು ತೇವಗೊಂಡವು. ಇಂಜಿನಿಯರಿಂಗ್ ಗೆಳೆಯರು ಗಳಿಸಿದ್ದು ಕೇವಲ ಬ್ಯಾಂಕ್ ಬ್ಯಾಲೆನ್ಸ್ ಆಗಿದ್ದರೆ, ಒಬ್ಬ ವೈದ್ಯಳಾಗಿ ನಾನು ಗಳಿಸಿದ್ದು ಜನರ ಅಭಿಮಾನ, ಪ್ರೀತಿ ಮತ್ತು ಕೋಟ್ಯಂತರ ರೂಪಾಯಿ ಕೊಟ್ಟರೂ ಸಿಗದ ಆಶೀರ್ವಾದ. ಆ ಕ್ಷಣವೇ ನನ್ನೊಳಗಿನ ವಿಷಾದ ಮಾಯವಾಗಿ, ಹೆಮ್ಮೆಯಿಂದ ಹೃದಯ ಹೇಳಿತು—”ನಾನು ವೈದ್ಯಳಾಗಿದ್ದು ವ್ಯರ್ಥವಾಗಲಿಲ್ಲ!” -ಡಾ ಸೌಮ್ಯ ಕೆ.ವಿ.

“ಅಯ್ಯೋ… ನಾನೇಕೆ ವೈದ್ಯಳಾದೆ?!” ವೈದ್ಯ ದಿನಾಚರಣೆ ಅಂಗವಾಗಿ ಡಾ.ಸೌಮ್ಯ ಕೆ.ವಿ.ಅವರ ಕಿರು ಬರಹ Read Post »

ಇತರೆ

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್ 

ಸಾಮಾಜಿಕ ಸಂಗಾತಿ “ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  ಕಳೆದ ವಾರ ಜೂನ್ 18ರಂದು ಇಡೀ ದೇಶವನ್ನು ಬೆಕ್ಕಸ ಮಕ್ಕಳಬೆರಗಾಗಿಸಿದ, ನೋವಿನಲ್ಲಿ ಅದ್ದಿದ ಘಟನೆಯೊಂದು ಮಹಾರಾಷ್ಟ್ರ ರಾಜ್ಯದ ಪುಣೆಯ ಹೊರವಲಯದಲ್ಲಿ ನಡೆಯಿತು. ಇನ್ನೇನು ಕೆಲವೇ ತಿಂಗಳಲ್ಲಿ ತಾನು ಮದುವೆಯಾಗುವ ನಿಶ್ಚಿತ ವರ ಕೇತನ್ ಅಗರವಾಲ್ ನನ್ನು ಆತನ ನಿಶ್ಚಿತ ವಧು ಸಿಯಾ ಗೋಯಲ್ ನಾನೂರು ಅಡಿ ಎತ್ತರದ ಕೋಟೆಯ ಮೇಲಿನಿಂದ ತಳ್ಳಿ ಸಾಯಿಸಿದ ಘಟನೆಯ ವರದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವೆಲ್ಲರೂ  ನೋಡಿದ್ದೇವೆ.ನಿಖರ ಮಾಹಿತಿಗಳ ಪ್ರಕಾರ ಕೇತನ್ ಅಗರವಾಲ್ ಎಂಬ600 ಕೋಟಿ ಬೆಲೆ ಬಾಳುವ ಉದ್ಯಮ ಸಾಮ್ರಾಜ್ಯವನ್ನು ಹೊಂದಿದ ಶ್ರೀಮಂತ ಯುವಕನ ಕೊಲೆಯನ್ನು ಆತನ ಬಾವಿಪತ್ನಿಯೇ ಮಾಡಿದ್ದಾಳೆ… ಹಾಗೆ ಆತನನ್ನು ಕೊಲ್ಲಲು ಆಕೆ ನೀಡಿದ ಕಾರಣ ಆತ ಬಕ್ಕ ತಲೆಯವನಾಗಿದ್ದ ಎಂದು. ಜೊತೆಗೆ ಆಕೆಯ ಪ್ರೇಮಿಯ ಕುಮ್ಮಕ್ಕು ಕೂಡ ಈ ಕೃತ್ಯದ ಹಿಂದೆ ಇತ್ತು…. ಹಾಗೂ ಇದನ್ನು ಅವರಿಬ್ಬರೂ ಸೇರಿ ಸಂಚು ಮಾಡಿದ್ದರು. ಆದರೆ ಮನೋವಿಜ್ಞಾನ ಹೇಳುವುದು ಹೀಗೆ… ಯಾವುದೇ ಒಬ್ಬ ವ್ಯಕ್ತಿಯು ಕೇವಲ ಒಂದು ದಿನದಲ್ಲಿ ಮೋಸ ಮಾಡುವ, ಸತ್ಯವನ್ನು ಮುಚ್ಚಿಡುವ, ಕುತಂತ್ರ ಮಾಡುವುದನ್ನು ಕಲಿಯುವುದಿಲ್ಲ.ಈ ರೀತಿಯ ಒಂದು ಕಲಿಕೆಗೆ ಸಾಕಷ್ಟು ಸಮಯದ ಅವಶ್ಯಕತೆ ಇರುತ್ತದೆ. ಇದೊಂದು ಮನೋ ದೈಹಿಕ ಸಾಮರ್ಥ್ಯವಾಗಿದ್ದು ಇದನ್ನು ಕಲಿಯಲು ಸಾಕಷ್ಟು ಗ್ರಹಿಕೆಯ, ಸಮಯದ, ಅನುಭವದ ಅವಶ್ಯಕತೆ ಇರುತ್ತದೆ.ತನ್ನ ಹುಟ್ಟು ಹಬ್ಬವನ್ನು ಆಚರಿಸಲು ಪುಣೆಯ  ಹತ್ತಿರದ ಲೋಹಗಢ ಕೋಟೆಗೆ ತನ್ನ ನಿಶ್ಚಿತ ವರನನ್ನು ಕರೆದೊಯ್ದ ಆಕೆ ಫೋಟೋಶೂಟ್ ಮಾಡುವ ನೆಪದಲ್ಲಿ  ಆತನನ್ನು ನ 400 ಅಡಿ ಎತ್ತರದಿಂದ ತಳ್ಳಿ ಕೊಲೆ ಮಾಡಿದ್ದಾಳೆ.ನಂತರ ತಾನೇ ಖುದ್ದಾಗಿ ಪೊಲೀಸರಿಗೆ ಫೋನ್ ಮಾಡಿದ ಆಕೆ  ಮಾಹಿತಿಯನ್ನು ನೀಡಿದ್ದಾಳೆ. ಘಟನೆಯ ನಂತರ ಮುಂದುವರೆದ ಬೆಳವಣಿಗೆಯಲ್ಲಿ ಯುವಕನ ಅಂತ್ಯಕ್ರಿಯೆಯ ಎರಡು ದಿನಗಳ ನಂತರ ಕೇತನ್ ಅಗರವಾಲನ ಮನೆಗೆ ಆಕೆ ಭೇಟಿ ನೀಡಿದ್ದಾಳೆ. ಈ ಕುರಿತು ಪ್ರಶ್ನಿಸಿದಾಗ ಆಕೆಯ ವಿಭಿನ್ನ ಉತ್ತರಗಳನ್ನು ಆಲಿಸಿದ ಯುವಕನ ಸಹೋದರಿಗೆ ಅನುಮಾನ ಉದ್ಭವಿಸಿದೆ.ಅಂತೆಯೇ ತನ್ನ ಅನುಮಾನವನ್ನು ಆಕೆ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದು ನಂತರ ಕುಟುಂಬದ ಸದಸ್ಯರೆಲ್ಲರೂ ಈ ಕುರಿತು ಮಾತನಾಡಿಕೊಂಡಿದ್ದಾರೆ.ಕೇಸನ್ನು ಪುನರ್ ಪರಿಶೀಲಿಸಲು ಯುವಕನ ತಾಯಿ ಪೊಲೀಸರಲ್ಲಿ  ದೂರನ್ನು ನೀಡಿದರು. ಈಗಾಗಲೇ ಈ ಕೇಸಿನ ಕುರಿತು  ಕೊಂಚ ಗುಮಾನಿಯನ್ನು ಹೊಂದಿದ್ದ ಪೊಲೀಸರಿಗೆ ಈ ದೂರಿನಿಂದ ಮತ್ತಷ್ಟು ಪುಷ್ಟಿ ದೊರೆಯಿತು. ಸಿ ಸಿ ಟಿವಿಗಳ ಮೂಲಕ ಘಟನೆಯನ್ನು ಪುನರ್ ಪರಿಶೀಲಿಸಿದ ಪೊಲೀಸರು ಬಿರು ಬೇಸಿಗೆಯ ಸಮಯದಲ್ಲಿಯೂ ಹೂಡಿ ಧರಿಸಿ ಓಡಾಡುತ್ತಿದ್ದ ಓರ್ವ ಯುವಕನನ್ನು ಗುರುತಿಸಿದ್ದಾರೆ. ಸಿಯಾಳನ್ನು ಈ ಕುರಿತು ಪ್ರಶ್ನಿಸಿದಾಗ ಆಕೆ ತಡಬಡಾಯಿಸಿದ್ದನ್ನು ಕಂಡು ಅನುಮಾನದಿಂದ ವಿಚಾರಣೆ ನಡೆಸಿದರು.  ಸಿಯಾ ಹಾಗೂ ಆಕೆಯ ಪ್ರಿಯಕರನ ನಡುವಿನ ಸರಿ ಸುಮಾರು 2000 ಫೋನ್ ಕರೆಗಳನ್ನು, ವಾಟ್ಸಾಪ್ ಸಂದೇಶಗಳನ್ನು  ಪರಿಶೀಲಿಸಿದ ನಂತರ ಆರೋಪಿಯಾಗಿ ಸಿಯಾ ಮತ್ತು ಆಕೆಯ ಪ್ರಿಯಕರನನ್ನು  ಬಂಧಿಸಿದರು.ಆರಂಭದಲ್ಲಿ ತನ್ನ ಮೇಲೆ ಬಂದ ಎಲ್ಲ ಅಪವಾದಗಳನ್ನು ತಿರಸ್ಕರಿಸಿದ ಆಕೆ ಅಂತಿಮವಾಗಿ ತನ್ನ ಪ್ರಿಯಕರನ ಒತ್ತಾಯ ಹಾಗೂ ಹೇಳಿಕೆಯ ಮೇರೆಗೆ ಈ ಕೃತ್ಯವನ್ನು ಮಾಡಿರುವುದಾಗಿ ಒಪ್ಪಿಕೊಂಡರು.ಮರಣ ಹೊಂದಿದ ತನ್ನ ಮಗನ ಮುಖದ ಭಾಗವು180 ಡಿಗ್ರಿಯಷ್ಟು ತಿರುಚಿಕೊಂಡಿದ್ದು  ಬೆನ್ನಿನ ಭಾಗದಲ್ಲಿ ಮುಖ ಜಜ್ಜಿದಂತೆ ತೋರುತ್ತಿತ್ತು. ಬೇಡವಾದರೆ ಬಿಡಬೇಕಿತ್ತು… ಈಗ ನನ್ನ ಮಗನನ್ನು ಯಾರು ತಂದು ಕೊಡುತ್ತಾರೆ ಎಂದು ಅಳುವ ತಾಯಿಯ ಆಕ್ರಂದನ, ನನ್ನನ್ನು ಕಾಳಜಿ ಮಾಡಬೇಕಾದ ನನ್ನ ಮಗ ಇನ್ನಿಲ್ಲವಾಗಿ ಹೋದ.. ಅದೂ ಕುತಂತ್ರದಿಂದ ಎಂಬ ನೋವನ್ನು ಬದುಕಿನ ಕೊನೆಯವರೆಗೂ ಭರಿಸಬೇಕಾದ ತಂದೆಯ ಅಳಲು, ಸೋದರನನ್ನು ಕಳೆದುಕೊಂಡು ತಬ್ಬಲಿತನದ ಭಾವವನ್ನು ಹೊಂದಿರುವ ಸಹೋದರಿಯ ದುಃಖಭರಿತ ಆಕ್ರೋಶ ಒಂದೆಡೆ ಕಂಡರೆ, ಮತ್ತೊಂದೆಡೆ ತಮ್ಮ ಮಗಳ ಕೃತ್ಯದಿಂದ ಮನನೊಂದಿರುವ ತಂದೆ ತಾಯಿಯರು ಆಕೆಯನ್ನು ಕೂಡ ಅದೇ 400 ಅಡಿ ಎತ್ತರದ ಪರ್ವತದಿಂದ ನೂಕಿ ಸಾಯಿಸಿ ಬಿಡಬೇಕು ಎಂದು ತಮ್ಮ ನೋವನ್ನು ಆಕೆಯ ಪಾಲಕರು ಹೊರ ಹಾಕಿದ್ದಾರೆ. ಈ ಕುರಿತು ಆಳವಾಗಿ ಪ್ರಶ್ನಿಸಿದರೆ ಆಕೆ ಎಂದೂ ತನಗೆ ಈ ಸಂಬಂಧ ಇಷ್ಟವಿಲ್ಲ ಎಂದು ತೋರ್ಪಡಿಸಿರಲಿಲ್ಲ ಎಂದು ಹೇಳುತ್ತಾರೆ. ವಿವಾಹದ ಕುರಿತು ಅತ್ಯಂತ ಸಂತಸವನ್ನೆ ತೋರಿದ್ದಳು…. ಆಕೆಗೆ ಒಬ್ಬ ಬಾಯ್ ಫ್ರೆಂಡ್ ಇರುವ ಸಂಗತಿ ಕೂಡ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಮುಂದಿನ ಕಾನೂನಾತ್ಮಕ ಪರಿಣಾಮಗಳು ಏನೇ ಇರಲಿ ಆದರೆ ಮಾನವಿಕ ಮನೋವಿಜ್ಞಾನವನ್ನು ಸ್ವಲ್ಪವಾದರೂ ಓದಿಕೊಂಡಿರುವವರಿಗೆ ಬರುವ ಮೊದಲ ಪ್ರಶ್ನೆ…. ಎರಡು ವಿಭಿನ್ನ ಬದುಕುಗಳನ್ನು ಓರ್ವ ಹರೆಯದ ವ್ಯಕ್ತಿ ಅದು ಹೇಗೆ ಬದುಕುತ್ತಿದ್ದ ಎಂಬುದು ?ನಿಶ್ಚಿತಾರ್ಥದಲ್ಲಿ ನಗು ನಗುತ್ತಾ ಪಾಲ್ಗೊಂಡ ಯುವತಿ, ತನ್ನ ಮುಂದಿನ ಬದುಕನ್ನು ಜೊತೆಯಾಗಿ ಕಳೆಯುವ ಭಾವಿ ಪತಿಯ ಮನೆಯವರೊಂದಿಗೆ ಹಬ್ಬ ಉತ್ಸವಗಳಲ್ಲಿ ಪಾಲ್ಗೊಂಡಿರುವ, ಅವರ ಪ್ರೀತಿ, ನಂಬಿಕೆ ವಿಶ್ವಾಸ, ಆಶೀರ್ವಾದಗಳನ್ನು ಪಡೆದುಕೊಂಡಿರುವ, ಮದುವೆಯ ಪೂರ್ವಭಾವಿ ತಯಾರಿಯಲ್ಲಿ ತೊಡಗಿಕೊಂಡಿರುವ, ನಿಶ್ಚಿತ ವರನೊಂದಿಗೆ  ವಿವಾಹ ಪೂರ್ವ ಫೋಟೋ ಶೂಟ್ನಲ್ಲಿ ಭಾಗವಹಿಸಿರುವ ಬದುಕಿನ ಒಂದು ಮುಖ  ಇದ್ದರೆ, ಇದಕ್ಕೆ ತದ್ವಿರುದ್ಧವಾಗಿ ಬೇರೊಬ್ಬ ಯುವಕನೊಂದಿಗೆ ಪ್ರೀತಿಯನ್ನು ಹೊಂದಿದ್ದು,  ಆ ಪ್ರೀತಿಯನ್ನು ಯಾರಿಗೂ ಜಾಹೀರು ಮಾಡದೆ ಹೋದರೂ ಕೂಡ ಅದೇ ವ್ಯಕ್ತಿಯೊಂದಿಗೆ ಸೇರಿ ತಾನು ಮದುವೆಯಾಗಲಿರುವ ಯುವಕನನ್ನು ಕೊಲೆಗೈಯುವ ಸಂಚನ್ನು ಹೂಡಿ ಅದರಲ್ಲಿ ಯಶಸ್ವಿಯಾಗಿ ಎಲ್ಲರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದ ಮತ್ತೊಂದು ಹೇಯ ಮುಖ ನಮ್ಮನ್ನು ದಿಗ್ಭ್ರಮೆಗೊಳಿಸುತ್ತದೆ.ಪ್ರಶ್ನೆ ಇರುವುದು ತಪ್ಪು ಯಾರದು?  ಯಾಕೆ ಹೀಗಾಯ್ತು ? ಎಂದು ಕೇಳಿಕೊಳ್ಳುವುದರಲ್ಲಿಲ್ಲ… ಬದಲಾಗಿ ಇಂತಹ ತಪ್ಪುಗಳು ಆಗಲು ಕಾರಣವೇನು? ಎಂಬುದನ್ನು ಅರಿತು ಮುಂದೆ ಈ ರೀತಿಯ ತಪ್ಪುಗಳು ಆಗದೇ ಇರಲು ವಹಿಸಬೇಕಾದ ಮುನ್ನೆಚ್ಚರಿಕೆಗಳನ್ನು ಅರಿಯೋಣ.ಯಾವುದೇ ಮಕ್ಕಳಾದರೂ ಹುಟ್ಟಿನಿಂದಲೇ ಆಗಲಿ, ಇಲ್ಲವೇ ಚಿಕ್ಕಂದಿನಿಂದಲೇ ಆಗಲಿ ಇತರರನ್ನು ನೋಯಿಸುವ, ಮೋಸ ಮಾಡುವ,, ಕುತಂತ್ರಗಳನ್ನು ಬಳಸುವ, ತಪ್ಪಿಸಿಕೊಳ್ಳುವ ತಂತ್ರಗಳನ್ನು ಕಲಿತಿರುವುದಿಲ್ಲ.ಬಹಳಷ್ಟು ಬಾರಿ ಮನೆಯಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸುವುದನ್ನೇ ಕಲಿಯದ ಮಕ್ಕಳು ತಾವು ನೋಡಿರುವುದನ್ನು, ಗ್ರಹಿಸಿರುವುದನ್ನು …ಮತ್ತಿತರ ಸಾಮಾಜಿಕ ಸಿದ್ಧ ಮಾದರಿಗಳನ್ನು ನೋಡಿ ಕಲಿಯುತ್ತಾರೆ. * ನಮ್ಮ ಮಕ್ಕಳು ನಮ್ಮನ್ನು ಪ್ರತಿದಿನ ಪ್ರತಿ ಕ್ಷಣ ಗಮನಿಸುತ್ತಿರುತ್ತಾರೆ.*ನಾವು ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸುತ್ತೇವೆ, *ಕಠಿಣ ಪರಿಸ್ಥಿತಿಗಳಲ್ಲಿ ಯಾವ ರೀತಿ ವರ್ತಿಸುತ್ತೇವೆ ಎಂಬುದು ಅವರ ಗಮನದಲ್ಲಿ ಸದಾ ಇರುತ್ತದೆ. *ಅನಿವಾರ್ಯ ಪರಿಸ್ಥಿತಿಯಲ್ಲಿಯು ನಾವು ಸತ್ಯವನ್ನೇ ಮಾತನಾಡುತ್ತೇವೆಯೇ ಎಂಬುದನ್ನು ಅವರು ನೋಡುತ್ತಿರುತ್ತಾರೆ.* ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಳ್ಳುತ್ತೇವೆಯೇ? ಇಲ್ಲವೇ? ಎಂಬುದನ್ನು ಅವರು ಗಮನಿಸುತ್ತಿರುತ್ತಾರೆ. * ನಾವು ಮಾಡುವ ತಪ್ಪುಗಳು, ಅದಕ್ಕಾಗಿ ನಾವು ಕೊಡುವ ಸುಳ್ಳು ನೆಪಗಳು ಇಲ್ಲವೇ ಸಮರ್ಥನೆಗಳು, ವಿಷಯವನ್ನು ಮುಚ್ಚಿಡುವುದು, ತಮ್ಮ ಮೇಲೆ ಬರಬಹುದಾದ ತಪ್ಪನ್ನು ಬೇರೆಯವರ ಮೇಲೆ ನಿರ್ಧಾಕ್ಷಿಣ್ಯವಾಗಿ ಹಾಕುವುದು ಹಾಗೂ ಮುಖ್ಯವಾಗಿ ಸಮಯವು ಎಲ್ಲವನ್ನು ಮುಚ್ಚಿ ಹಾಕುತ್ತದೆ ಎಂದು ನಂಬುವುದು ಮಕ್ಕಳ ವಿಕಲ ಮಾನಸಿಕತೆಯನ್ನು ತೋರುತ್ತದೆ. ಮಕ್ಕಳು ಕೇವಲ ತಮ್ಮ ಪಾಲಕರ ವಂಶವಾಹಿಗಳನ್ನು ಹಾಗೂ ಸ್ವಭಾವಗಳನ್ನು ಮಾತ್ರ ತಮ್ಮೊಂದಿಗೆ ಮುಂದುವರೆಸಿಕೊಂಡು ಹೋಗುವುದಿಲ್ಲ… ಬದಲಾಗಿ ಅವರು ತಮ್ಮ ಪಾಲಕರು ಬದುಕುವ ರೀತಿ ನೀತಿಗಳನ್ನು ತಮ್ಮದಾಗಿಸಿಕೊಂಡು ನಡೆಯುತ್ತಾರೆ. ಪ್ರಾಮಾಣಿಕತೆ ಮತ್ತು ಅಪ್ರಾಮಾಣಿಕತೆಗಳಲ್ಲಿ ಯಾವುದನ್ನು ಹೆಚ್ಚಾಗಿ ತಮ್ಮ ಪಾಲಕರು  ಹೊಂದಿರುತ್ತಾರೆ ಎಂಬುದನ್ನು ಅವರು ತಮ್ಮ ಪಾಲಕರ ಅರಿವಿಗೆ ಬಾರದಂತೆ  ಸದಾ ಗಮನಿಸುತ್ತಿರುತ್ತಾರೆ.ಇಲ್ಲಿ ಆ ಯುವತಿ ತನಗೆ ಇಷ್ಟವಿಲ್ಲದ ಈ ಸಂಬಂಧವನ್ನು ನಿರಾಕರಿಸಬಹುದಿತ್ತು… ಹಾಗೆ ಹೇಳುವ ಮೂಲಕ ಆಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಲ್ಲದೇ ಯುವಕನ ಪ್ರಾಣವನ್ನು ಕೂಡ ಉಳಿಸಬಹುದಾಗಿತ್ತು. ಒಂದು ಇಡೀ ಕುಟುಂಬವನ್ನು ನೋವಿಗೆ ತಳ್ಳುವುದರ ಜೊತೆಗೆ  ತನ್ನದೇ ಕುಟುಂಬದ ಘನತೆ ಗೌರವಗಳನ್ನು ಬೀದಿ ಪಾಲು ಮಾಡುವುದನ್ನು ತಪ್ಪಿಸಬಹುದಿತ್ತು. ಈ ಸಂಬಂಧ ತನ್ನನ್ನು ಸಂತೋಷಗೊಳಿಸಿದೆ ಎಂದು ಎಲ್ಲರ ಮುಂದೆ ಹುಸಿ ನಗುವುದರ ಬದಲು ಇರುವ ವಿಷಯವನ್ನು ತನ್ನ ಕುಟುಂಬಕ್ಕೆ, ತನ್ನ ಭಾವಿ ಪತಿಗೆ ಹೇಳಿ  ಆಗುವ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಪಾಲಕರಾಗಿ ನಾವು ನಮ್ಮ ಮಕ್ಕಳನ್ನು ಬೆಳೆಸುವಲ್ಲಿ ಬಹಳಷ್ಟು ಜಾಗರೂಕತೆಯನ್ನು ವಹಿಸಬೇಕು. ನಮ್ಮ ಮಕ್ಕಳಿಗೆ ಉನ್ನತ ಅಂಕಗಳನ್ನು ಗಳಿಸಬೇಕು ಎಂದು ಹೇಳುವ ಹೆಮ್ಮೆಯ ಪಾಲಕರು ನಾವಾದರೆ ಸಾಲದು. ಗೌರವಾನ್ವಿತ ನೌಕರಿ ಪಡೆಯುವ/ ಒಳ್ಳೆಯ ಕುಟುಂಬದ ವ್ಯಕ್ತಿಯನ್ನು ಸಂಗಾತಿಯಾಗಿ ಪಡೆಯುವ ಕುರಿತು ಮಾತ್ರ ಕಲಿಸಿದರೆ ಸಾಲದು. ಮಕ್ಕಳು ತಮ್ಮ ಒಳ್ಳೆಯ ಮೌಲ್ಯಗಳನ್ನು ಮಾತ್ರ ಬಿಂಬಿಸಿದರೆ ಸಾಲದು… ಬದಲಾಗಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದನ್ನು ಕಲಿಸಲೇಬೇಕು. ತಮ್ಮ ಆಯ್ಕೆಯ ಕುರಿತು ಪುನರ್ ಪರಿಶೀಲನೆ ಮಾಡುವುದನ್ನು, ತಮಗಿಷ್ಟವಿಲ್ಲದ ವಿಷಯವನ್ನು ಬೇಡ ಎಂದು ತಳ್ಳಿ ಹಾಕುವ ಧೈರ್ಯವನ್ನು, ತಮಗೆ ಒಗ್ಗದ ಆಹಾರವನ್ನು ಬೇಡ ಎಂದು ತಳ್ಳುವಷ್ಟೇ ಧೈರ್ಯದಿಂದ ತಮಗಿಷ್ಟವಿಲ್ಲದ ವೈವಾಹಿಕ ಸಂಬಂಧದಿಂದ ಹೊರಟು ಹೋಗುವ ದಾಸ್ಟಿಕತೆಯನ್ನು ಪ್ರದರ್ಶಿಸಬೇಕು.ಹೊಣೆಗಾರಿಕೆ ಎಂಬುದು ಇಪ್ಪತ್ತನೇ ವರ್ಷದಲ್ಲಿ ಬರುವುದಲ್ಲ ಹುಟ್ಟಿದ ಮಗು ತನ್ನ ಐದನೇ ವರ್ಷದಿಂದಲೇ ತನ್ನ ವೈಯಕ್ತಿಕ ನಿಲುವುಗಳನ್ನು, ಸಾಮಾಜಿಕ ಬದ್ಧತೆಯನ್ನು, ಮೌಲ್ಯದ ಬದುಕನ್ನು ರೂಡಿಸಿಕೊಳ್ಳಲು ಪಾಲಕರು ಮಕ್ಕಳಿಗೆ ಸರಿಯಾದ ದಾರಿಯನ್ನು ತೋರಬೇಕು ಸಾಮಾಜಿಕ ಹೊಣೆಗಾರಿಕೆಯು ಮಗುವಿಗೆ ಐದನೇ ವರ್ಷದಲ್ಲಿ  ಕಲಿಕೆಯ ಭಾಗವಾಗಿ ದೊರೆತರೆ ಹತ್ತನೇ ವಯಸ್ಸಿನಲ್ಲಿ ಅದು ಮತ್ತಷ್ಟು ಬಲಿಷ್ಠವಾಗುತ್ತದೆ. ಹದಿಹರೆಯದ ಸಮಯದಲ್ಲಿ ಅವರ ಸಾಮಾಜಿಕ ಬದ್ಧತೆಯು ವಿಭಿನ್ನ ಹಂತಗಳಲ್ಲಿ ಪರೀಕ್ಷಿಸಲ್ಪಡುತ್ತದೆ ಮತ್ತೆ 20ನೇ ವಯಸ್ಸಿನ ಹೊತ್ತಿಗೆ ಅವರ ಬದುಕಿನ ಮೌಲ್ಯವನ್ನು ಮಾಪನ ಮಾಡಲಾಗುತ್ತದೆ.ಮನುಷ್ಯನ ಬದುಕಿನ ಕಲಿಕೆಗಳು ನಾವಂದುಕೊಂಡಷ್ಟು ಸರಳವಾಗಿಲ್ಲ ನಿಜ… ಆದರೆ ಅತ್ಯಂತ ಸಂಕೀರ್ಣವಾಗಬಾರದು ಎಂಬ ತಿಳುವಳಿಕೆ ಪಾಲಕರಾದ ನಮಗಿರಲೇಬೇಕು.ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸುತ್ತಲ ವಾತಾವರಣಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾನೆ ಎಂಬ ಹೊಣೆಗಾರಿಕೆ ಆತನಂತೆ ಆಗಿದ್ದು, ಎಷ್ಟೋ ಬಾರಿ ನಮ್ಮ ಬದುಕಿನ ಆಯ್ಕೆಗಳು ನಮ್ಮನ್ನು ರೂಪಿಸುತ್ತದೆ. ನಮ್ಮ ಮನದ ಭಾವಗಳು ಕನ್ನಡಿಯ ಪ್ರತಿಬಿಂಬದಂತೆ ನಮ್ಮನ್ನು ಈ ಸಮಾಜಕ್ಕೆ ತೋರುತ್ತವೆ.ನಾವು ಹೊಂದಿರುವ ಸ್ನೇಹಿತರು ಸಂಬಂಧಗಳು ನಮ್ಮ ವ್ಯಕ್ತಿತ್ವ ನಮ್ಮ ಬದುಕಿನ ಕುರಿತಾದ ನಮಗಿರುವ ಅವಗಾಹನೆಗಳು ಮತ್ತಿತರ ಹಲವಾರು ವಿಷಯಗಳು ಮನುಷ್ಯನ ವರ್ತನೆ ಆದರೆ ಎಲ್ಲಕ್ಕಿಂತ ಮಿಗಿಲಾಗಿ ಸದಾ ನಿಮ್ಮನ್ನು ಗಮನಿಸುವ ಎರಡು ಜೋಡಿ ಕಣ್ಣುಗಳು ನಿಮ್ಮನ್ನೇ ಪ್ರತಿಬಿಂಬಿಸುತ್ತವೆ ಹಾಗೂ ಹಾಗೆ ಪ್ರತಿಬಿಂಬಿಸುವ ಕಣ್ಣುಗಳು ನಿಮ್ಮ ಮಕ್ಕಳದ್ದೇ ಆಗಿರುತ್ತವೆ. ನಿಮ್ಮ ಮಕ್ಕಳು ತೆಗೆದುಕೊಳ್ಳುವ ಎಲ್ಲಾ ನಿರ್ಣಯಗಳಿಗೆ ನೀವು ಮಾತ್ರ ಜವಾಬ್ದಾರರು ಎಂದು ತಿಳಿದುಕೊಳ್ಳುವ ಮುನ್ನ ಬದುಕಿನಲ್ಲಿ ಸರಿ ಮತ್ತು ತಪ್ಪು ಎಂಬ ಎರಡು ಕವಲು ದಾರಿಗಳ ನಡುವೆ ನಿಮ್ಮ ಮಗು ಸಿಲುಕಿಕೊಂಡಾಗ ಮೌಲ್ಯವನ್ನು ತಮ್ಮದಾಗಿಸಿಕೊಂಡ ಮಕ್ಕಳು ಕಷ್ಟವಾದರೂ ಸರಿ, ಸರಿಯಾದ ಮಾರ್ಗವನ್ನು ಆಯ್ದುಕೊಳ್ಳುತ್ತಾರೆ. ತಪ್ಪು ಹಾದಿಯಲ್ಲಿ ನಡೆಯುವ ಆಯ್ಕೆಯನ್ನು ತಮ್ಮದಾಗಿಸಿಕೊಂಡವರು ಆರಂಭದಲ್ಲಿ ಸುಖವನ್ನೇ ಸೂರೆಗೊಂಡರೂ ಕೂಡ ಅನಿಶ್ಚಿತತೆಯ ಬದುಕು ಅವರದ್ದಾಗುತ್ತದೆ. ನಿಮ್ಮ ಮಕ್ಕಳ ಬದುಕನ್ನು  ಮೌಲ್ಯಗಳಿಂದ ತುಂಬ ಬೇಕೇ ಹೊರತು ಭಯದಿಂದಲ್ಲ.ಒಂದು ಪ್ರಾಮಾಣಿಕ ಸಂಭಾಷಣೆ, ಚರ್ಚೆಯು ಸಂಬಂಧವನ್ನು ಉಳಿಸಬಲ್ಲದು …. ಆದರೆ ಒಂದು ಸುಳ್ಳು ಎಲ್ಲವನ್ನು ನಾಶಪಡಿಸಬಲ್ಲದು. ಒಬ್ಬ ವ್ಯಕ್ತಿಯ ತಪ್ಪು ನಿರ್ಧಾರ ಸಾಕಷ್ಟು ಜೀವಿಗಳ ಬದುಕಿನಲ್ಲಿ ಬಿರುಗಾಳಿಯನ್ನು ಎಬ್ಬಿಸಬಲ್ಲದು. ಆದ್ದರಿಂದ ಪಾಲಕರೇ…. ನಿಮ್ಮ ಮಕ್ಕಳು ಬದುಕಿನಲ್ಲಿ ಯಶಸ್ವಿಯಾಗಿದ್ದಾರೆಯೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಡಿ… ಬದಲಾಗಿ ನಿಮ್ಮ ಮಕ್ಕಳು ಭಾವನಾತ್ಮಕವಾಗಿ ಪ್ರಾಮಾಣಿಕವಾಗಿದ್ದಾರೆಯೇ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಮಕ್ಕಳು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆಯೇ ? ತಮ್ಮ ಆಯ್ಕೆಯ ಪರಿಣಾಮಗಳ ಹೊಣೆಯನ್ನು ಹೊರುತ್ತಾರೆಯೇ  ಎಂದು ಪ್ರಶ್ನಿಸಿಕೊಳ್ಳಿ. ಬಹುಶಹ ಆಸ್ತಿ ಅಂತಸ್ತುಗಳಿಗಿಂತ ಹೆಚ್ಚಿನದಾಗಿ ನಾವು ನಮ್ಮ ಮಕ್ಕಳಿಗೆ ಕೊಡಬೇಕಾದದ್ದು ಮೌಲ್ಯಗಳು ಎಂಬ ತಲೆತಲಾಂತರವಾಗಿ  ಮುಂದುವರಿಸಲಾಗುವ ಆಸ್ತಿ.ನಾವು ನಮ್ಮ ಮಕ್ಕಳಿಗೆ ಕೇವಲ ಓದು, ಯಶಸ್ಸು, ವಿಧೇಯತೆಗಳನ್ನು ಮಾತ್ರ ಕಲಿಸಿದರೆ ಸಾಲದು ಧೈರ್ಯದಿಂದ ಬದುಕುವ,

“ಒಂದು ಕೊಲೆ ಮತ್ತು ಆತ್ಮವಿಮರ್ಶೆ” ವೀಣಾ ಹೇಮಂತ್ ಗೌಡ ಪಾಟೀಲ್  Read Post »

ಇತರೆ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ವಚನ ಸಂಗಾತಿ “ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರುಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು.ಅಷ್ಟವಿಧಾರ್ಚನೆ ಷೋಢಶೋಪಚಾರಎಂಬರಲ್ಲದೆತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆಕೂಡಲ ಚೆನ್ನ ಸಂಗಮ ದೇವಾ –  ಚೆನ್ನ ಬಸವಣ್ಣ *ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು* ಭವಿ ನಾಲ್ಕು ಜಾವ ಅಂದರೆ ದಿನದ ಹನ್ನೆರಡು ಗಂಟೆಗಳ ಕಾಲ ತನ್ನ ಹೊಟ್ಟೆ ಉಪಜೀವನ ಬಗ್ಗೆ ಚಿಂತಿಸುತ್ತಾನೆ . ಆಹಾರ ಸಂಗ್ರಹ ಹಣ ಧನ ಕನಕ ಕ್ರೋಢೀಕರಿಸುವುದು  ,ಮನೆ ಕಟ್ಟುವುದು ಆಸ್ತಿ ಮಾಡುವುದು ಮಕ್ಕಳ ಮಡದಿಯ ಸೌಖ್ಯವನ್ನು ಬಯಸುವುದು .ತನ್ನ ಇಂದ್ರಿಯ ಚಾಪಲ್ಯಕ್ಕೆ ಮಾರು ಹೋಗಿ ಅದಕ್ಕೆ ಬೇಕಾದ ವಸ್ತು ವಿಷಯಗಳನ್ನು ಅನುಭವವಿಸಲು ಪರಿ ತಪಿಸುತ್ತಾನೆ  . ಭವಿಯು ಪ್ರಾಪಂಚಿಕ ವಿಷಯಾದಿಗಳಲ್ಲಿ ತನ್ನ ಮೂಲ ಬೌದ್ಧಿಕ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೆ.ಕೇವಲ ತನ್ನ ಹೊಟ್ಟೆ ಹೊರೆಗೆ ಐಹಿಕ ಸುಖಕ್ಕೆ ಕುದಿಯುತ್ತಾನೆ ಚಡಪಡಿಸುತ್ತಾನೆ. *ಇರುಳು  ನಾಲ್ಕು ಜಾವ ವ್ಯಸನಕ್ಕೆ  ಕುದಿವರು ಹಗಲಿನಲ್ಲಿ ಸಂಪಾದಿಸಿದ ಹಣ ಧನ ಆಸ್ತಿ ಹೇಗೆ ವ್ಯಯ ಮಾಡಬೇಕು ಎಂಬ ಲೆಕ್ಕದಲ್ಲಿ ಸದಾ ವಿಚಾರಿಸುವ ಭವಿ ,ರಾತ್ರಿಯಿಡಿ ವ್ಯಸನಕ್ಕೆ ಜಾರುತ್ತಾನೆ ಕನಸಿನಲ್ಲಿಯೂ ಕೂಡ ತಾನು ಪಡೆಯಬಹುದಾದ ಪದಾರ್ಥಿಕ ಸಂಗ್ರಹಣೆ ಆಸ್ತಿ ಅವುಗಳನ್ನು ಪಡೆಯುವ ತಂತ್ರಗಾರಿಕೆ ಬಗ್ಗೆ   ರಾತ್ರಿ ನಾಲ್ಕು ಜಾವ ಅಂದರೆ ಒಂದು ಜಾವಕ್ಕೆ ನಾಲ್ಕು ಗಂಟೆ ಸಮಯ ನಿಗಧಿಯಾಗಿರುತ್ತದೆ .ಸಂಪಾದಿಸಿದ ಆಸ್ತಿಯನ್ನು ವ್ಯಸನದಲ್ಲಿ ಕಳೆಯುವದರಲ್ಲಿ ಕುದಿಯುತ್ತಿರುವ ಮನುಷ್ಯ ತನ್ನ ನೆಮ್ಮದಿ ಶಾಂತಿ ಪ್ರೀತಿಯನ್ನು ಕಳೆದುಕೊಳ್ಳುತ್ತಾನೆ .ವ್ಯಸನ ದುರಾಭ್ಯಾಸದಲ್ಲಿ ತೊಡಗಿರುವ ಭವಿ ತಾನು ಗಳಿಸಿದ ಸಂಪತ್ತು ಆಸ್ತಿ ಎಲ್ಲಿ ತನ್ನ ಬಿಟ್ಟು ಹೋಗುತ್ತದೆ ಎಂದು ಸದಾ ಚಿಂತಿಸುತ್ತಾನೆ.ಆಗ ಮನುಷ್ಯ ತಾನು ಹಗಲು ಇರುಳು ವ್ಯಾಕುಲಕ್ಕೆ   ಒಳಗಾಗುತ್ತಾನೆ .ಹಗಲಿನಲ್ಲಿಯೂ ಹಂಬಲಿಸುವ ಮನ ರಾತ್ರಿಯಿಡಿ ಮತ್ತೆ ಚಿಂತಾಕ್ರಾಂತನಾಗುತ್ತಾನೆ . *ಅಷ್ಟವಿಧಾರ್ಚನೆ ಷೋಢಶೋಪಚಾರ ಎಂಬರಲ್ಲದೆ*   ಅನ್ಯ ಮಾರ್ಗದಿಂದ ಗಳಿಸಿದ ಆಸ್ತಿ ಹಣ ಸಂಪತ್ತು ಅವುಗಳ ಪಡೆದ ವಾಮ ಮಾರ್ಗಕ್ಕೆ ಸ್ವಲ್ಪ ಮಟ್ಟಿಗೆ ಶಾಂತಿ ಸಮಾಧಾನ ಹೊಂದಲು ಬಾಹ್ಯದಲ್ಲಿ ಅಷ್ಟವಿಧಾರ್ಚನೆ   ಹಾಗೂ ಅರ್ಘ್ಯ ಪಾದ್ಯ ದೂಪ ದೀಪ ನೈವೆದ್ಯ ಮುಂತಾದ ಷೋಢಶೋಪಚಾರ ಮುಂತಾದ ಒಣ ಆಚರಣೆಯಿಂದ ಭವಿ ಸಮಾಧಾನಪಡಲು ಯತ್ನಿಸುತ್ತಾನೆ. ತನ್ನ ಪ್ರತಿಷ್ಠೆಗೆ   ಆಡಂಭರದ ಪೂಜೆಯಲ್ಲಿ ತೊಡಗುತ್ತಾನೆ. ಇಂದು ಅನೇಕ ಶ್ರೀಮಂತರು ಸಂಸ್ಕಾರವಿಲ್ಲದಿದ್ದರೂ ಲಿಂಗಕ್ಕೆ ಸಮಾಜಕ್ಕೆ ಅನೇಕ ರೀತಿಯ ಆಚರಣೆಯ ಮೂಲಕ ತಮ್ಮ ಸ್ವಾಮ್ಯತ್ವವನ್ನು ಹೊಂದುತ್ತಾರೆ.ಪೂಜೆ ಪ್ರವಚನ ಕೀರ್ತನೆ ಸಾಮೂಹಿಕ ಪ್ರಸಾದ ಇದು ಹೊರಗೆ ಡಾಂಭಿಕವಾಗಿ ತೋರುವ ಇಂತಹ ಆಚರಣೆಗಳು ಲಿಂಗಕ್ಕೆ ಹೊರಗೆ .  *ತಮ್ಮನಿಕ್ಕಿ ನಿಧಾನವ ಸಾಧಿಸುವರ ಆರನೂ ಕಾಣೆ  ಕೂಡಲ ಚೆನ್ನ ಸಂಗಮ ದೇವಾ* ಸಂಸ್ಕಾರ ರಹಿತ ಭಾವ ಶುದ್ಧವಿಲ್ಲದವನ ಗಳಿಕೆ ಕಿಲ್ಬಿಷ ಉಂಟು ಮಾಡುತ್ತದೆ. ತನ್ನ ಚೈತನ್ಯವನ್ನು ನಂಬಿ ಸಮಷ್ಟಿಯ ನಿರಂತರ ಅಭಿವೃದ್ಧಿಗೆ ಸ್ವಾನುಭವ ಮಾಡುವ ಭಕ್ತ ಶ್ರೇಷ್ಠನಾಗುತ್ತಾನೆ. ಅಂತೆಯೇ ಲಕ್ಷಕೊಬ್ಬ ಭಕ್ತ ಕೋಟಿಗೊಬ್ಬ ಶರಣ ಎಂದಿದ್ದಾರೆ ಚೆನ್ನ ಬಸವಣ್ಣನವರು. ತನ್ನದೆನ್ನುವುದು  ಸತ್ಯ ಸಮತೆ ಶಾಂತಿ ತರ್ಕ ವೈಚಾರಿಕತೆ ಎಂಬ ಪ್ರಾಮಾಣಿಕ ಪ್ರಜ್ಞೆ ಅದುವೇ ನಿಜವಾದ ಆಸ್ತಿ ಖನಿಜ . ಉತ್ತಮ ಭಾವಗಳನ್ನು ಹೊಂದಿದ ಭಕ್ತನು ತನ್ನ ಉತ್ತಮ ಗುಣಗಳನ್ನು ಒತ್ತೆಯಿಟ್ಟು ನೆಮ್ಮದಿ ಶಾಂತಿ ಸಂತಸ ಎಂಬ   ನಿಧಾನವನ್ನು ಆಸ್ತಿಯನ್ನು ಗಳಿಸುವನು ,ಆದರೆ ಅಂತಹ ವ್ಯಕ್ತಿಗಳನ್ನು ಲಿಂಗ ಸಾಕ್ಷಿಯಾಗಿ ನಾನು ಕಾಣಲಾರೆನು ಎಂದು ಚೆನ್ನ ಬಸವಣ್ಣನವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ.ಸಮಾಜದಲ್ಲಿ ಒಳ್ಳೆಯ ನಡತೆ ಸಚ್ಚಾರಿತ್ರ್ಯಕ್ಕೆ ಬೆಲೆಕೊಡುವವರು ಕಡಿಮೆಯಾಗಿದ್ದಾರೆ ಲಾಂಛನ ಆಡಂಭರದ ಪೂಜೆ ಶ್ರೀಮಂತರ ಅಟ್ಟಹಾಸದಲ್ಲಿ ಲಿಂಗ ತತ್ವಮಸುಕಾಗುತ್ತಿದೆ ಎಂದೆನ್ನುವ ಭೀತಿ ಶರಣ ಚೆನ್ನ ಬಸವಣ್ಣನವ ವಚನದಲ್ಲಿ ಕಾಣಬಹುದು. ಡಾ.ಶಶಿಕಾಂತ.ಪಟ್ಟಣ -ರಾಮದುರ್ಗ

“ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಇತರೆ

“ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ಶ್ರೀದೇವಿ. ಮ.ಗುಮ್ಮಗೋಳ

ವಿಶೇಷ ಸಂಗಾತಿ ಶ್ರೀದೇವಿ. ಮ.ಗುಮ್ಮಗೋಳ “ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ನಮ್ಮ ನಾದನಿ ಬಹಳ ದಿನಗಳ ನಂತರ ನಮ್ಮ ಮನಿಗೆ ಬಂದಿದ್ದಳು. ಬಿಸಿಲಲ್ಲಿ ಬೆವಿತು ಬೆವಿರಿಳಿದು ತನ್ನ ಸೀರೆಯ ಸೆರಗಿನಿಂದ ಮುಖ ಒರಿಸ್ಕೊತ  “ಏನವ್ವ ನಿನ್ನ ಮನಿ ಹುಡುಕುದರಾಗ ಸಾಕಾ ಸಾಕಾಗಿ ಹೊತು… ಯಾರ ಕೇಳಿದರೂ ಗೊತ್ತಿಲ್ಲ ಅಂತ ಹೇಳಿತಾರ….  ಅದ… ನಮ್ಮ ಹಳ್ಳಿಯೊಳಗ ಆದರ… ಹೆಸರ ಹೇಳಿದರ….. ಮನಿತನಕಾ ತಂದ ಮುಟ್ಟಸ್ತಾರು..” ಅಂದಳು. ನಾವು ನಮ್ಮ ಬಜೆಟ್ಟಗೆ ಅನುಕೂಲ ಆಗುವ ಹಾಗೆ ದೂರದ ಜಾಸ್ತಿ ಮನೆಗಳಿಲ್ಲದ ಒಂದು ಎಕ್ಷಟೆನ್ಸನ್ (extension area) ದಲ್ಲಿ ಮನಿ ತುಗೊಂಡಿದ್ದಿವಿ.  ಮನಿ ಓಪನಿಂಗಗೆ ಬಂದವಳು ಮತ್ತೆ ಬಹಳ ದಿನಗಳ ಮೇಲೆ ಮನಿಗೆ ಬಂದಿದ್ದರಿಂದ ಮನೆಯ ಗುರುತು ಅವಳಿಗೆ ಸಿಗಲಿಲ್ಲ. ಅದುಲ್ಲದೇ ಇನ್ನೊಂದು ಕಾರಣ ಅಷ್ಟರಲ್ಲೆ ಮತ್ತೊಂದಿಷ್ಟು ಮನೆಗಳು ನಿರ್ಮಾಣವಾಗಿ ಅದೂ ಮನೆಗಳೆಲ್ಲ ಒಂದೆ ರೀತಿ ಇದ್ದು ಅವಳಿಗೆ ಗುರುತು ಸಿಗದ‌ ಹಾಗಾಗಿತ್ತು. ನಾನು “ಒಂದು ಪೊನ್ ಹಚ್ಚಬಾರದಾ… ನಾನ ಕರ್ಕೊಂಡ ಬರ್ತಿದ್ನಿ…”  ಅಂದಾಗ “ಪೊನ್ ತಂದಿಲ್ಲ ಗಂಡನ ಕಡೆ ಐತಿ ಮನೆಯೊಳಗ ಬೇಕಲ್ಲಾ” ಅಂದ್ಲು.  ನಮ್ಮ ನಾದನಿ ಹಳ್ಳಿಯೊಳಗ ರೈತರು. ಹೊಲಮನಿ ಕೆಲಸ ಮಾಡಕೊಂಡ ಇದ್ದವರು ಪಾಪ ಅವರಿಗೆ ನಮ್ಮ ಹಾಗೆ, ನೌಕರಿದವರಿಗೆ… ಮನೆಗೊಂದು.. ಹೊರಗೊಂದು.. ಅಂತ ಎಲ್ಲಿ ಪೊನ್ ಇರಬೇಕು. ಒಂದ ದಿನ ಇದ್ದವಳೆ ಹೊರಟು ನಿಂತಳು.   ಇನ್ನೊಂದೆರಡು ದಿನ ಇರಿ ಅಂದಾಗ ನಮ್ಮ ನಾದನಿ ಮಾತಡ್ತಾ  “ನಮಗ ಇಲ್ಲಿ ಹೊತ್ತ ಹೋಗಂಗಿಲ್ಲ. ಯಾವತ್ತಲೂ ಬಾಗಲ ಹಾಕ್ಕೊಂಡ ಇರತಿರಿ‌. ಆಜು ಬಾಜು ಯಾರದಾರೂ..‌‌ಅನ್ನುದು ಕೂಡ ಗೊತ್ತ ಇರಂಗಿಲ್ಲ. ಆದರ ಹಳ್ಯಾಗ ಒಂದ‌ ಇರುವಿ ಸತ್ತರು…. ಇಡೀ ಊರಿಗೆ ಗೊತ್ತಾಗ್ತೈತಿ. ನಮಗ ಆಜು ಬಾಜುದಾರ ಜೋಡಿ ಮಾತಾಡ್ಲಿಲ್ಲ ಅಂದರ ಏನೊ… ಕಳಕೊಂಡಂಗ ಆಗ್ತೈತಿ. ಇಲ್ಲಿ ಗೊಡ್ಡ ಎಮ್ಮಿ ತಂದು ಕಟ್ಟ ಹಾಕದಂಗ ಆಗ್ತೈತಿ. ಏನಂದರೂ ನಮ್ಮ ಹಳ್ಳಿ ನಮಗ ಚಂದ..ನಮ್ಮೂರು ನಮಗ ಪಾಡು..” ಅಂದು ಜಾನಪದದ ಹಾಡು “ನಮ್ಮ ಹಳ್ಳಿ ಊರ ನಮಗ ಪಾಡ….ಯಾತಕ್ಕವ್ವ ಹುಬ್ಬಳ್ಳಿ ಧಾರವಾಡ….” ಎಂದು ಅವರು ತಮ್ಮ ಬಾಯಿಂದಲೇ ಸುಂದರ ಜಾನಪದ ಹಾಡೊಂದನ್ನು ಗುಣಗುಣಿಸತ ಹೊರಟರು. ನಾನು ಹಳ್ಳಿಯಲ್ಲೆ ಹುಟ್ಟಿ ಬೆಳದವಳಾದರೂ ಈ ಶಹರದ ಐಶಾರಾಮಿ ಜೀವನಕೆ ಅರಾಮಾಗಿದ್ದೆ. ನನ್ನ ಮನಸ್ಸು ಹಳ್ಳಿ ಮತ್ತು ಶಹರದ ಜೀವನವನ್ನ ತಕ್ಕಡಿಯೊಳಗಿಟ್ಟು ತೂಗತೊಡಗಿತು. ಶಹರ ಜೀವನ ಚಂದೊ ಹಳ್ಳಿ ಜೀವನ ಚಂದೊ ಅಂತ.  ಶಹರದಲ್ಲಿರುವವರು ನಮಗ ಹಳ್ಳಿಗ ಹೋದರ ಹಗೆದಾಗ ಹಾಕದಂಗ ಆಗ್ತೈತಿ… ಯಾಕಂದರ ಮಕ್ಕಳಗ ನಮಗ ನೋಡಾಕ ಟಿ.ವಿ. ಇರುದಿಲ್ಲ.  ನಮಗಿಂತ ಮಕ್ಕಳು “ಮಮ್ಮಿ ಇಲ್ಲಿ ನೋಡಾಕ ಟ.ವಿ.ನ ಇಲ್ಲ. ಯಾವಾಗ ಊರಿಗೆ ಹೋಗೊವದು…..” ಅಂತ ಅಲವತ್ತು ಕೊಳ್ಳಲು ಶುರು ಮಾಡುತ್ತವೆ.  ಒಂದ ವೇಳೆ ಟಿ.ವಿ. ಇದ್ದರೂ ನಾವ ಹೋದ ಟೈಮಿಗೆ ಕರೆಂಟ ಇರುದಿಲ್ಲ.  ಹಳ್ಳಿಯೊಳಗ ಹಗಲ ಹೊತ್ತನಾಗ ಅಲ್ಲದ ರಾತ್ರಿ ಹೊತ್ತು ಕರೆಂಟ ಇಲ್ಲದ ಮುಖ ಕರ್ರಗ ಮಾಡಕೊಂಡ‌ ಕೂಡಬೇಕಾಗ್ತೈತಿ.   ಇನ್ನ ಮೊಬೈಲ್ ನಾಗ ವ್ಯಾಟ್ಸಪ್  ಪೇಸಬುಕ್ ತಿಕ್ಕಬೇಕಂದ ಇಂಟರ್ ನೆಟ್ ದಿಕ್ಕಲ್ಲದ ದಿಕ್ಕೆಟ್ಟು ಹೋಗಿರ್ತದ.   ವ್ಯಾಟ್ಸಪ್ ಹೆಟ್ಸಪ್ (hatsup) ಆಗಿರ್ತದ ಇನ್ನ ಪೇಸಬುಕ್ಕು ಪೇಕಬುಕ್(fake book) ಆಗಿರ್ತದ.  ವರ್ಷದಾಗ ಎರಡೊ ಮೂರೊ ಬಾರಿ ಊರಿಗೆ ಹೋದವರಿಗೆ ಅಕ್ಕಪಕ್ಕದವರು ಯಾರು ಅಂತ ಗೊತ್ತಿರುದಿಲ್ಲ. ಗೊತ್ತಾಗುದೊರೊಳಗ ಮನಿ ಹೆಣ್ಣಮಗಳು ಮದುವೆಯಾಗಿ ಗಂಡನ ಮನಿ ಸೇರಿರ್ತಾಳು. ಇನ್ನೂ ಇದ್ದ ಮನಿಗೆ ಹೊಸ ಸೊಸ್ತೇರು ಬಂದು ಯಾರಿವರು ಅಂತ ಮುಖ ಮುಖ ನೋಡೋಕಂತ ನಿಲ್ಲಬೇಕಾಗ್ತೈತಿ.   ಇನ್ನ ಸಿಟಿಯೊಳಗ ನಮ್ಮಷ್ಟಕ ನಾವ ಇರೊದರಿಂದ ದ್ವೇಷ, ಅಸೂಯೆ ಅನ್ನುದು ಇರುದಿಲ್ಲ ನೋಡ್ರಿ.  ಹಳ್ಯಾಗ ಜನ ಸಂದರ್ಭ ಬಂದರ ಜೀವಕ ಜೀವಾ ಕೊಡಾಕು ತಯಾರಿರ್ತಾರ.  ಆದರ ಇನ್ನೊಂದು ಭಯ ಅಂದರ ಒಬ್ಬರಿಗೊಬ್ಬರ ಆಗಲಿಲ್ಲಾ ಅಂದರ ಮಹಾಭಾರತನ ನಡಿದು ಜೀವಾ ಕೊಡೊರು ಜೀವಾ ತೆಗ್ಯಾಕ ತೈಯಾರ ಇರ್ತಾರ. ನಮ್ಮ ನಾದನಿ ಹೇಳಿದ್ದ.. ಪಾಪ ದ್ವೇಷಕ್ಕ ಅವರ ಸಂಬಂಧಿಕರ ಒಬ್ಬ ಹುಡುಗ ಮದುವೆ ಹಿಂದಿನ ದಿನವೇ ಹೆಣವಾಗಿ ಹೋಗಿದ್ದ. ಇಲ್ಲಿ ಬಟನ್ ಆನ ಮಾಡಿರ ಸಾಕೂ ಮುಖ ತೊಳಕೊಳ್ಳಾಕ, ಜಳಕಕ ಬಿಸಿ ನೀರು. ಯಾವಾಗ ಏನಬೇಕೊ ಅದು ಟಕ್ ಅಂತ ಬಂದ ಬೀಳ್ತೈತಿ. ಕಡೆಗೆ ರೊಕ್ಕ ಕೊಟ್ಟ ಆದರೂ ಟ್ಯಾಂಕರ್ ಮೂಲಕ ನೀರ ಹಾಕಿಸ್ಕೊಬಹುದು.   ಆದರ ಹಳ್ಳಯೊಳಗ ನೀರ ಅಂದರ ಬಂಗಾರ ಇದ್ದಂಗ‌.  “ನಾವ ಇಲ್ಲಿ ಮುಖ ತೊಳಕಾಳಕ ತಿಕಾ ತೊಳೊಕೊಳಾಕ ಒಂದ ಚರಗಿ ನೀರ ಬಳಸ್ಬೇಕು” ಅಂತ ನಮ್ಮ ನಾದನಿ ಹೇಳತಿದ್ಲು. ಅಲ್ಲಿ ಒಂದ…. ಮಗ್ಗನ್ಯಾಗ ಮುಖ ತಿಕಾ ತೊಳಕೊದರೊಳಗ… ಹಳ್ಳಿಗ ಬಂದ ಸಿಟಿ ಜನ ಎರಡ.. ತಾಸಿಗೆ ಓಡಿ ಸಿಟಿ ಸೇರ್ತಾರ‌.  ಹಬ್ಬ ಹುಣ್ಣವಿ, ಮದುವಿ ಮುಂಜವಿ ಅಂತ ಹಳ್ಳಿಗೆ ಬಂದ ಸಿಟಿ ಜನ ಹಳ್ಳಿಯಲ್ಲಿರುವ ಹಚ್ಚು ಹಸುರಿನ ಹೊಲ, ಗದ್ದೆ, ಮಾವು, ಚಿಕ್ಕು, ಪೇರಲ ತೋಟಗಳು, ಸ್ವಚ್ಚಗಾಳಿ, ಪ್ರಕೃತಿ ಸೌಂದರ್ಯ ಕಣ್ಣತುಂಬಿಕೊಂಡು ಬಾಯಿ ತುಂಬ ಹೊಗಳುವರು ಅಹಾ…..ಎನ್.. ಚಂದದ ಅಂತ.  ಆದರ ಅಲ್ಲಿ ಅದನ್ನೆಲ್ಲಾ ಇದ್ದು ಮಾಡುವ ರೈತನಿಗೆ ಗೊತ್ತು ಕಸ ತಗದು, ಬೀಜ ಬಿತ್ತಿ ಹಸಿರು ಉಸಿರಾಗಬೇಕಾದರ ಅವನ ಎಷ್ಟ ಬೆವರ ಹರಸಿರತಾನು ಅಂತ. ರೈತನ ಬದುಕು ಒಂದು ಹೆಣ್ಣು‌ ಒಂಬತ್ತ ತಿಂಗಳು ಹೊಟ್ಟಿಯೊಳಗ ಜೀವ ಹೊತ್ತು ತನ್ನ ರಕ್ತ ಬಸಿದು ಇನ್ನೊಂದು ಜೀವಕ್ಕ ಜೀವ ಕೊಟ್ಟಂಗ. ಜೀವನ ಕೊಟ್ಟಂಗ. ಆದರ ಗ್ರಾಮ ಜೀವನ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ನುವ ಹಾಗೆ ದೂರದಿಂದ ನೋಡಾಕ ಚಂದ ಆದರ ಜೀವನ ದುಸ್ತರ.   ಹಳ್ಳಿಯೊಳಗ ಹುಟ್ಟಿ ಬೆಳದ ನನಗೂ ಈಗ ಸಿಟಿ ಜೀವನಕ್ಕ ಒಗ್ಗೊಂಡು ಹಳ್ಳಿ ಜೀವನಾ ಅಂದರ ಎಷ್ಟ ಕಷ್ಟ ಅದ ಅನಸ್ತದ.  ಆದರೂ ಪಂಚಮಿ, ಗಣೇಶ ಚೌತಿ, ಮಹಾನವಮಿ, ದೀಪಾವಳಿ ಬಂದಾಗಲೆಲ್ಲ ಹಳ್ಳಿ ನೆನಪಾಗ್ತದ.  ಸಂಪ್ರದಾಯ, ಹಬ್ಬ- ಹರಿದಿನ ಅವು ನಿಜವಾಗಲೂ ಉಳಕೊಂಡಿದ್ದು ಹಳ್ಳಯೊಳಗ.  ಹಬ್ಬದ ಸಡಗರ ಸಂಭ್ರಮ ಇರುದು ಗ್ರಾಮದೊಳಗ.  ಹಬ್ಬ ಹರಿದಿನ ಬಂತು ಅಂದರ ಹಳ್ಳಿ ನೆನಪು… ಬಾಲ್ಯದ ನೆನಪುಗಳು.. ಕಣ್ಣ ಮುಂದ ಬಂದು ಕಾಡ್ತಾವ. ಏನ ಹೇಳು ಸಿಟಿಯೊಳಗ ಹಬ್ಬ ಹಬ್ಬ ಅನಸುವ ಹಂಗ ಇರುದಿಲ್ಲ. ಇಲ್ಲಿ ನಾವು ಮನಿ ಬಿಟ್ಟರ ಗುಡಿ ಗುಂಡಾರ ಒಂದ ಸುತ್ತ ಬಂದರ ಮುಗದ ಹೋತು… ಹಬ್ಬ ಮುಗದ ಹೋತು…..  ಹಳ್ಳಿಯೊಳಗ ಹಂಗಲ್ಲ ಹಬ್ಬ ಬಂತ ಅಂದರ ಇಡೀ ಓಣಿ… ಇಡೀ ಊರ… ಒಂದ ಕುಟುಂಬದಂಗ ಹಬ್ಬದ ಸಂಭ್ರಮ ಪಡತಾರ. ಒಬ್ಬರಿಗೊಬ್ಬರ ತಮ್ಮ ನೋವು, ನಲಿವುಗಳನ್ನ ಹಂಚಿಗೊಳ್ಳತಾರ. ನಾವು ಸಣ್ಣವರಿದ್ದಾಗ ನಮ್ಮ ಹಳ್ಳಿಯೊಳ ದೀಪಾವಳಿಯೊಳಗ ಬೆಳಿಗ್ಗೆ ನಾಲ್ಕ ಗಂಟೆಗೆ ಎದ್ದು ಪಾಂಡವರನ ಮಾಡೂದು, ಬಾಗಿಲಿಗೆ ರಂಗೋಲಿ ಹಾಕೊದು ಮಾಡ್ತಿದ್ವಿ. ಹಳ್ಳಿಯೊಳಗ ಅದರಾಗ ನಮ್ಮ ಬೆಳವಲ ಕಡೆ ಪಡಸಾಲಿಗೆ ಎರಡು ಮಗ್ಗಲು ಕಟ್ಟಿ ಇರುವವು. ಕಟ್ಟಿಗೆ ಮುಂದಕ್ಕೆ ಸಾಲಾಗಿ ಕಂಬಗಳು. ಆ ಕಂಬಗಳ ಮದ್ಯೆ ಲಕ್ಷ್ಮಿ ಕೂಡಿಸುವದು ವಾಡಿಕೆ.  ನಮ್ಮಣ್ಣ ಲಕ್ಷ್ಮಿ ಕೂಡಿಸುವ ಮುಂದಿರುವ ಕಂಬಗಳಿಗೆ ಹೊಲದೊಳಗಿನ ಚೆಂಡ ಹೂವಿನ ಗಿಡಗಳನ್ನ ತಂದು ಕಟ್ಟಿ ಅದಕ್ಕ ಲೈಟಿನ ಸರಾ ಜೋಡಿಸುತ್ತಿದ್ದ.  ಅದು ಜಗಮಗಾ ಅಂತ ಹೊಳೆಯುವದು ನೋಡಿದರ… ಗಿಡದಾಗ ನಕ್ಷತ್ರ ಹೊಳದಂಗ ಅನಸತಿತ್ತು.  ಅದನ್ನ ನೋಡುದ… ಕಣ್ಣಿಗೆ ಹಬ್ಬ.   ಇನ್ನ ಬಾಗಲಮುಂದ ಬಣ್ಣದ ದೊಡ್ಡ ಲೈಟ ಹಾಕಿದರ ಊರ ಸಣ್ಣ ಸಣ್ಣ ಹುಡಗರೆಲ್ಲಾ ಅದರ ಕೆಳಗ ನಿಂತು “ಲೇ… ಇಲ್ಲ ನೋಡು ನನ್ನ ಅಂಗಿ ಬಣ್ಣ ಹಸರ ಹೊಗಿ ನೀಲಿ ಕಾಣಕ್ಕತ್ತೈತಿ…..ಲೇ ನಿಂದು ಹಳದಿ ಹೋಗಿ ಹಸರಾಗೈತಿ….ಎನ್ ಮಜಾ ಅದ… “ಅನ್ನವರು. ಇನ್ನ ಮಹಾನವಮಿಯೊಳಗಿನ ಸಂಭ್ರಮನ ಬೇರೆ. ದಸರಾ ಕೊನೆ ದಿನ ಬನ್ನಿ ಕೊಡೊದು ಇರತಿತ್ತು. ಮನೆಯ ಗಂಡಸರು ಎಲ್ಲರೂ ಕೂಡಿ ಪಲ್ಲಕ್ಕಿ‌ ಜೊತೆಗೆ  ಹೋಗಿ ಊರ ಹೊರಗಿನ ಬನ್ನಿ ಗಿಡಕ್ಕ ಪೂಜಾ ಮಾಡಿ ಬನ್ನಿ ಹರಿದುಕೊಂಡು‌ ಬರುವರು. ಬಾಗಿಲಿಗೆ ಬಂದ ಅವರಿಗೆ‌ ಕುಂಕುಮ ಹಚ್ಚಿ, ಆರತಿ ಬೆಳಗುತ್ತಿದ್ದೇವು. ಬನ್ನಿಯನ್ನ ಆರತಿ ತಟ್ಟೆಯಲ್ಲಿ ಇಡುತ್ತಿದ್ದರು.  ಅದನ್ನ ದೇವರ ಮುಂದೆ ಇಟ್ಟು ನಮಸ್ಕಾರ ಮಾಡುತ್ತಿದ್ದೇವು. ನಂತರ ಅದನ್ನ ತೆಗೆದುಕೊಂಡು ಮೊದಲು ಮನೆಯ ಹಿರಿಯರಿಗೆ, ತಂದೆ ತಾಯಿಗೆ ಕೊಟ್ಟು ಕಾಲಿಗೆ ನಮಸ್ಕಾರ ಮಾಡಿ ಅವರ ಆಶಿರ್ವಾದ ಪಡೆದು ಓಣಿಗೆಲ್ಲಾ ಕೊಡಲು ಹೋಗುತ್ತಿದ್ದೇವು.   ನಾವು ಓಣಿಯೊಳಗ ಪ್ರತಿಯೊಬ್ಬರ ಮನಿಗೆ ಹೋಗಿ “ನಾವು ನೀವು ಬಂಗಾರ ತುಗೊಂಡ… ಬಂಗಾರದಂಗ ಇರೂನ…” ಎಂದು ಹೇಳಿ ಬಂಗಾರ ಕೊಟ್ಟು ಅವರ ಕಾಲಿಗೆ ಬಿದ್ದು ಅವರ ಆಶಿರ್ವಾದ ಪಡಿತಿದ್ವಿ.  ಪ್ರತಿಯೊಬ್ಬರು ಒಂದಿಲ್ಲ ಒಂದ ರೀತಿ ನಮಗ ಸಂಬಂಧಿಕರಂಗ ಇರತಿದ್ದರು. ಚಿಗವ್ವ-ಚಿಕ್ಕಪ್ಪ, ದೊಡ್ಡಪ್ಪ-ದೊಡ್ಡವ್ವ, ಮಾಮಾ-ಮಾಮಿ, ಅಕ್ಕ-ಅಣ್ಣ … ಹಿಂಗ ಪ್ರತಿಯೊಬ್ಬರನು ಕರಿತಿದ್ವಿ. ಅದೊಂತರ ಸಡಗರ ಬಾಯಲ್ಲಿ‌ ಅದನ್ನ ವ್ಯಕ್ತಪಡಿಸಲು ಸಾದ್ಯವಿಲ್ಲ. ಇನ್ನ ಪಂಚಮಿ ಬಂದರ ಹುಡಗೀಯರ ಸಂಭ್ರಮನ ಸಂಭ್ರಮ. ಎಲ್ಲರೂ ಸೇರಿ‌ ಆಲದ ಮರದ ಜೋಕಾಲಿ ಆಡುದು.  ಮನಿಯೊಳಗ ಜಂತಿಗೆ ದಾರದಿಂದ ಉಂಡಿ ಕಟ್ಟುದು. ಜೋರ ಜೀಕೊತ ಉಂಡಿ ಬಾಯಿಗಿಟ್ಟು ಜಿದ್ದ ಗೆಲ್ಲವದ ಒಂದ ಹೇಳಲಾರದ ಖುಷಿ.  ಗಂಡಮಕ್ಕಳು ಲಿಂಬಿಹಣ್ಣು ಜಿದ್ದ ಕಟ್ಟಿ ಆಡತ್ತಿದ್ದರು. ಬಣ್ಣದ ವೇಷ ಹಾಕೊಂಡು ಹುಡಗರು ಮನಿಮನಿಗೆ ಹೋಗಿ‌ ತಮ್ಮ ವೇಷಭೂಷಣ ತೊರಿಸಿ ಉಂಡಿ ಕೇಳತಿದ್ದರು.  ಶಾಲೆಯೊಳಗೂ ಅಷ್ಟೆ ದಿನಕ್ಕೊಂದು ಕಾರ್ಯಕ್ರಮ ಇರತಿತ್ತು.   ಈಗೆಲ್ಲ ಅವು ಕೇವಲ ನನಗ ನೆನಪು ಮಾತ್ರ.  ಒಟ್ಟಿನಲ್ಲಿ ಸಮಾಜಿಕವಾಗಿ, ಇದ್ದದ್ದರಲ್ಲೆ ಸಂಭ್ರಮ ಸಂತೋಷದಿಂದ ಬದುಕಬೇಕು,‌‌ ಜೀವನದ ನಿಜವಾದ ಸವಿಯನ್ನ ಸವಿಬೇಕಂದರ ಹಳ್ಳಿ ಜೀವನ ಬೇಕು ಅನಸ್ತದ.  ಆದರ ಶಿಕ್ಷಣ, ಉದ್ಯೋಗ, ಸ್ವಾವಲಂಬನೆ, ಪ್ರಗತಿಯಡೆಗೆ‌‌ ಸಾಗಬೇಕು ಅನ್ನುವನು ಶಹರದತ್ತ ಮುಖ ಮಾಡುತ್ತಾನೆ. ಅಲ್ಲಿ ತನ್ನ ನೆಲೆಯನ್ನ ಬದುಕನ್ನ ಕಂಡುಕೊಳ್ಳುತ್ತಾನೆ.  ಶಹರದ ಯಾಂತ್ರಿಕ ಬದುಕಿನಲ್ಲಿ ಆರ್ಥಿಕವಾಗಿ ಪ್ರಗತಿ, ಸಾಮಜಿಕ ಸ್ವಾವಲಭನೆ ಇದ್ದರೂ ಅವನ ವೈಯಕ್ತಿಕ ಬದುಕು ಸಂಕುಚಿತಗೊಳ್ಳುತ್ತಾ ಹೋಗುತ್ತದೆ.  ಆಡಂಬರತೆ ಇದ್ದರೂ ನಿಜವಾದ ಖುಷಿ, ಸಂತೊಷಗಳಿಂದ ವಂಚಿತನಾಗಿತ್ತಾನೆ. ಆದರೆ ಹಳ್ಳಿಯಲ್ಲಿ ಸಿಗುವ ಆಡಂಬರವಿಲ್ಲದ ಮುಗ್ಧ ಸ್ವಚ್ಛಂದ ಕ್ಷಣಗಳಲ್ಲಿ ಸಿಗುವ ಖುಷಿ ಸಂತೊಷ ಎಲ್ಲಿಯೂ ಸಿಗಲಾರದಂತು ಸತ್ಯ. ಶ್ರೀದೇವಿ. ಮ.ಗುಮ್ಮಗೋಳ

“ಹಳ್ಳಿ ಹಾಡು-ಪಟ್ಟಣದ ಪಾಡು ನಮ್ಮೂರ ನಮಗ ಪಾಡು” ಶ್ರೀದೇವಿ. ಮ.ಗುಮ್ಮಗೋಳ Read Post »

ಇತರೆ, ಜೀವನ

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ

ಕಾವ್ಯ ಸಂಗಾತಿ ವನಜಾ ಮಹಾಲಿಂಗಯ್ಯ “ಹಳ್ಳಿಗಳಲ್ಲು ಸಂಬಂಧಗಳ ಬಿರುಕು” “ಒಂದೇ ಹೊಟ್ಟೆಯಲ್ಲಿ ಹುಟ್ಟಿದರೂ  ಒಂದೇ ಮನಸ್ಥಿತಿಇಲ್ಲ” ಎನ್ನುವ ಮಾತು ಇಂದು ಹಳ್ಳಿಯ ಪ್ರತಿ ಕೇರಿಯಲ್ಲೂ ಕೇಳಿಬರುತ್ತಿದೆ. ಅಣ್ಣ-ತಮ್ಮಂದಿರು ಮುಖ ನೋಡದಂತೆ ಆಗಿದ್ದಾರೆ, ಅಕ್ಕಪಕ್ಕದ ಮನೆಯವರು ಬೇಲಿ ಮೇಲೆ ಜಗಳಕ್ಕೆ ನಿಲ್ಲುತ್ತಾರೆ. ಹಿಂದೆ ಕಷ್ಟ ಬಂದಾಗ ಊರೇ ಒಂದಾಗಿ ನಿಲ್ಲುತ್ತಿದ್ದ ಕಾಲ ಈಗ ಕಥೆಯಾಗಿದೆ. ಯಾಕೆ ಹೀಗಾಯ್ತು? 1. ಹಿಂದಿನ ಹಳ್ಳಿ:  ಒಂದು ಕುಟುಂಬದಂತೆ  50 ವರ್ಷಗಳ ಹಿಂದೆ ಹಳ್ಳಿ ಎಂದರೆ ದೊಡ್ಡ ಅವಿಭಕ್ತ ಕುಟುಂಬ. ಜಮೀನು ಹೆಚ್ಚಿತ್ತು, ಆಸೆ ಕಡಿಮೆ ಇತ್ತು. ಸುಗ್ಗಿ ಬಂತೆಂದರೆ ಎಲ್ಲರೂ ಸೇರಿ ಕೆಲಸ. ಮದುವೆ-ಮುಂಜಿ ಊರ ಹಬ್ಬ. “ನನ್ನದು” ಎನ್ನುವುದಕ್ಕಿಂತ “ನಮ್ಮದು” ಎನ್ನುವ ಭಾವನೆ ಗಟ್ಟಿಯಾಗಿತ್ತು. ಅಣ್ಣ ದೊಡ್ಡವನು, ತಮ್ಮ ಚಿಕ್ಕವನು – ಹಿರಿತನಕ್ಕೆ ಬೆಲೆ ಇತ್ತು. ಮನೆಯಲ್ಲಿ ಸಾಂಬಾರ್ ಮುಗಿದರೆ “ಒಂದು ಲೋಟ ಸಾಂಬಾರ್ ಕೊಡಮ್ಮ”  ಬೆಂಕಿಕಡ್ಡಿ ಖಾಲಿಯಾದರೆ ಒಂದೆರಡು ಬೆಂಕಿಕಡ್ಡಿ ಕೊಡಮ್ಮ ಅಂತ ಪಕ್ಕದ ಮನೆಯಲ್ಲಿ ಕೇಳಲು  ನಾಚಿಕೆ ಇರಲಿಲ್ಲ. ಏಕೆಂದರೆ ನಾಳೆ ಅವರಿಗೂ ಬೇಕಾಗಬಹುದು ಎನ್ನುವ ವಾಸ್ತವ ಅರಿವಿತ್ತು. ಕಷ್ಟ-ಸುಖ ಹಂಚಿಕೊಂಡರೆ ಹಗುರವಾಗುತ್ತದೆ ಎನ್ನುವ ಜೀವನಪಾಠವನ್ನು ಹೆತ್ತವರು ಹೇಳಿಕೊಡುತ್ತಿದ್ದರು. 2. ಬಿರುಕು ಬಿಡಲು ಕಾರಣವೇನು?  ಭೂಮಿ ಸಣ್ಣದಾಯ್ತು, ಆಸೆ ದೊಡ್ಡದಾಯ್ತು  10 ಎಕರೆ 4 ಮಕ್ಕಳಿಗೆ ಹಂಚಿದರೆ ತಲಾ 2.5 ಎಕರೆ. ಈಗ ಅದೇ 2.5 ಎಕರೆ 3 ಮೊಮ್ಮಕ್ಕಳಿಗೆ ಹಂಚಬೇಕು. ಭೂಮಿ ತುಂಡಾದಂತೆ ಮನಸ್ಸುಗಳೂ ತುಂಡಾಗುತ್ತಿವೆ. “ಅವನಿಗೆ ರಸ್ತೆ ಬದಿ ಜಾಗ ಕೊಟ್ಟರು, ನನಗೆ ಬಂಜರು” ಎನ್ನುವ ಲೆಕ್ಕಾಚಾರ ಶುರುವಾಯ್ತು. * ದುಡ್ಡು ಬಂತು, ದುರಹಂಕಾರ ತಂದಿತು  ಒಬ್ಬ ಮಗ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ ಲಕ್ಷ ಸಂಪಾದಿಸಿದರೆ, ಹಳ್ಳಿಯಲ್ಲಿರುವ ತಮ್ಮನಿಗೆ ಕೀಳರಿಮೆ. “ನಾನು ಮಣ್ಣಲ್ಲಿ ದುಡಿದರೆ ಅವನು ಫ್ಯಾನ್ ಕೆಳಗೆ” ಎನ್ನುವ ಹೊಟ್ಟೆಕಿಚ್ಚು. ಹಬ್ಬಕ್ಕೆ ಬಂದವನು ಕಾರು ತೊಳೆಯುವಾಗ ಅಣ್ಣನ ಟ್ರ್ಯಾಕ್ಟರ್ ಮೂಲೆ ಸೇರುತ್ತದೆ. * ಮೂರನೇ ದನಿ ಜೋರಾಯ್ತು  ಹಿಂದೆ ಮನೆಯ ತೀರ್ಮಾನವನ್ನು ಹಿರಿಯರು ಮಾಡುತ್ತಿದ್ದರು. ಈಗ ಸೊಸೆ-ಅಳಿಯಂದಿರ ಮಾತು ಮನೆಯೊಳಗೆ ಬೆಂಕಿ ಹಚ್ಚುತ್ತದೆ. “ನಿಮ್ಮ ತಮ್ಮನ ಹೆಂಡತಿ ಹಾಗಂದ್ಲು”  ಅತ್ತೆ ಮಾವ ಅವಳನ್ನು ಮಾತ್ರ ಪ್ರೀತಿಯಿಂದ ಮಾತನಾಡಿಸುತ್ತಾರೆ,ಎಂಬ ಒಂದು ಚಾಡಿ ಮಾತು 40 ವರ್ಷದ ಸಂಬಂಧವನ್ನು ಮುರಿಯುತ್ತದೆ. *  ಕಾಲವಿಲ್ಲ, ಕ್ಷಮೆಯೂ ಇಲ್ಲ  ಮೊದಲು ಸಂಜೆ ಎಲ್ಲರೂ ಕಟ್ಟೆಯ ಮೇಲೆ ಸೇರುತ್ತಿದ್ದರು. ಮಾತುಕತೆಯಲ್ಲಿ ತಪ್ಪು ತಿಳುವಳಿಕೆ ಕರಗುತ್ತಿತ್ತು. ಈಗ ಎಲ್ಲರ ಕೈಯಲ್ಲಿ ಮೊಬೈಲ್. ಪಕ್ಕದ ಮನೆಯಲ್ಲಿ ಸಾವು ಆದರೆ ಸ್ಟೇಟಸ್ ಹಾಕಿ ಸುಮ್ಮನಾಗುತ್ತೇವೆ, ಹೆಗಲು ಕೊಡಲು ಸಮಯವಿಲ್ಲ. 3. ಕಳೆದುಕೊಂಡಿದ್ದೇನು?  ನಾವು ಬರೀ ಸಂಬಂಧ ಕಳೆದುಕೊಳ್ಳಲಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡೆವು. ಕೋರ್ಟ್-ಕಚೇರಿ ಅಲೆದು ದುಡ್ಡು, ಆರೋಗ್ಯ ಎರಡೂ ಹಾಳು. ಮಕ್ಕಳಿಗೆ “ಚಿಕ್ಕಪ್ಪ” ಎಂದರೆ ಕೋರ್ಟ್‌ನಲ್ಲಿ ಕಾಣುವ ಶತ್ರು ಎನ್ನುವ ಚಿತ್ರಣ ಕೊಡುತ್ತಿದ್ದೇವೆ. ಹಬ್ಬ ಬಂದರೂ ಅಡುಗೆ ಮನೆಗೆ 4 ಜನ ಸೇರುವುದಿಲ್ಲ. 4. ಮತ್ತೆ ಒಂದು ಮಾಡುವುದು ಹೇಗೆ?  ಬದಲಾವಣೆ ಸರ್ಕಾರದಿಂದ ಬರಲ್ಲ, ನಮ್ಮ ಮನೆಯ ಒಳಗಿಂದಲೇ ಬರಬೇಕು.   ವಾರಕ್ಕೊಮ್ಮೆ 1 ಗಂಟೆ ಫೋನ್ ದೂರ ಇಟ್ಟು ಮನೆಯವರೆಲ್ಲ ಕೂತು ಮಾತಾಡಿ.   ತಂದೆ-ತಾಯಿ ಇದ್ದಾಗ ಅವರ ಮಾತೇ ಅಂತಿಮವಾಗಿರಬೇಕು. ಅವರು ಹೋದ ಮೇಲೆಅಣ್ಣನ ಸ್ಥಾನ ದೊಡ್ಡದು.  ಪಾರದರ್ಶಕತೆ ಇರಬೇಕು.ಆಸ್ತಿ, ದುಡ್ಡಿನ ವಿಷಯದಲ್ಲಿ ಮುಚ್ಚುಮರೆ ಬೇಡ. ಎಲ್ಲರೂ ಕೂತು ಬರೆದಿಟ್ಟುಕೊಳ್ಳಿ.  ಯಾರಿಂದಲಾದರೂ ತಪ್ಪಾದಾಗ “ಅವನೇ ಮೊದಲು ಬರಲಿ” ಎನ್ನುವ ಅಹಂ ಬಿಡಿ. ನೀವು ಒಂದು ಹೆಜ್ಜೆ ಇಟ್ಟರೆ ಅವನು 2 ಹೆಜ್ಜೆ ಇಡುತ್ತಾನೆ.  ಅಪ್ಪ ಅಮ್ಮಮಕ್ಕಳಿಗೆ ಮಾದರಿ ನಾವು ಅಣ್ಣ-ತಮ್ಮಂದಿರು ಜಗಳವಾಡಿದರೆ ನಾಳೆ ನಮ್ಮ ಮಕ್ಕಳೂ ಹಾಗೇ ಆಗುತ್ತಾರೆ.   ಕೊನೆಯ ಮಾತು  ಹಳ್ಳಿ ಎಂದರೆ ಮಣ್ಣಿನ ವಾಸನೆ ಮಾತ್ರವಲ್ಲ, ಮನುಷ್ಯತ್ವದ ವಾಸನೆಯೂ ಹೌದು. ಬೇಲಿ ಹಾಕಿಕೊಳ್ಳುವುದು ಸುಲಭ, ಪ್ರೀತಿಯ ಸೇತುವೆ ಕಟ್ಟುವುದು ಕಷ್ಟ. ಆದರೆ ಆ ಸೇತುವೆ ಒಮ್ಮೆ ಕಟ್ಟಿದರೆ 7 ತಲೆಮಾರು ನೆಮ್ಮದಿಯಿಂದ ದಾಟಬಹುದು. “ಕೆರೆಗೆ ಹನಿ ನೀರು” ಎನ್ನುವಂತೆ, ಬದಲಾವಣೆ ನಮ್ಮ ಒಂದು ನಗುವಿನಿಂದ, ಒಂದು ಕ್ಷಮೆಯಿಂದ ಶುರುವಾಗಲಿ. ಏಕೆಂದರೆ ಕೊನೆಗೆ ಉಳಿಯುವುದು ಆಸ್ತಿಯಲ್ಲ, ಅನುಬಂಧ. ಅಣ್ಣ-ತಮ್ಮ, ಅಕ್ಕ -ತಂಗಿ, ಅಕ್ಕಪಕ್ಕ – ಇವರೇ ನಮ್ಮ ಮೊದಲ ಮತ್ತು ಕೊನೆಯ ಸಂಬಂಧ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾoತ್ರಿಕತೆಯಿಂದ ಸ್ವಲ್ಪ ದೂರವಿರೋಣ.  ವನಜ ಮಹಾಲಿಂಗಯ್ಯ.           

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ Read Post »

ಇತರೆ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಕು ಸರಿಯಾದ ಸಮಯಕೆ ಕಾಯುವಿಕೆ”                                       ಇನ್ಫೋಸಿಸ್ ಸಂಸ್ಥೆ ಹೆಸರು ಯಾರು ಕೇಳಿಲ್ಲ ಹೇಳಿ. ಅದು ಕೋಟ್ಯಂತರ ಜನರಿಗೆ ಉದ್ಯೋಗ ನೀಡಿದ ಸಂಸ್ಥೆ ಹೀಗಾಗಿ ಎಲ್ಲರಿಗೂ ಗೊತ್ತು. ಈ ಸಂಸ್ಥೆಯನ್ನು ಪ್ರಾರಂಭಿಸುವಾಗ ನಾರಾಯಣ ಮೂರ್ತಿ ಅವರ ಬಳಿ ದೊಡ್ಡ ಬಂಡವಾಳವಿರಲಿಲ್ಲ. ಪರಸ್ಥಿತಿ ಎಲ್ಲ ಸುಧಾರಿಸಿದ ಮೇಲೆ ಕಂಪನಿ ಆರಂಭಿಸುತ್ತೇನೆoದು ಕಾಯಲಿಲ್ಲ. ಪತ್ನಿ ಸುಧಾ ಮೂರ್ತಿಯವರಿಂದ ಪಡೆದ ಕೇವಲ ೧೦,೦೦೦ ರೂ ಗಳೊಂದಿಗೆ ಚಿಕ್ಕ ಕೋಣೆಯಲ್ಲಿ ಕಂಪನಿಯನ್ನು ಆರಂಭಿಸಿದರು. ಅವರು ಅಂದು ಇಟ್ಟ ದೃಢ ನಿರ್ಧಾರದ  ಹೆಜ್ಜೆ  ಪರಿಸ್ಥಿತಿ ಪೂರಕವಾಗುವವರೆಗೆ ಕಾಯುವ ಅಗತ್ಯವಿಲ್ಲ ಎಂಬುದನ್ನು ಸಾರಿದೆ. ಶುಭ ಗಳಿಗೆ ಯಶಸ್ಸಿನ ದಾರಿಯಲ್ಲಿ ಅತ್ಯಂತ ದೊಡ್ಡ ತಡೆಗೋಡೆ ಎಂದರೆ ಶುಭ ಮುಹೂರ್ತಕ್ಕಾಗಿ, ಸರಿಯಾದ ಸಮಯಕ್ಕಾಗಿ ಕಾಯುವುದು. ನಮ್ಮಲ್ಲಿ ಬಹುತೇಕರು ಹೊಸ ಉದ್ಯೋಗ ಆರಂಭಿಸಲು ಇಲ್ಲವೇ ಹೊಸ ವ್ಯಾಪಾರ ಶುರು ಮಾಡಲು ಇಲ್ಲವೇ ಯಾವುದೇ ಒಳ್ಳೆಯ ಕೆಲಸ ಮಾಡಬೇಕಾದರೂ ಶುಭ ಮುಹೂರ್ತ ನೋಡಿಯೇ ಮುಂದುವರೆಯುತ್ತಾರೆ. ಈಗ ನನ್ನ ಪರಿಸ್ಥಿತಿ ಸರಿಯಾಗಿಲ್ಲ, ನನ್ನ ಬಳಿ ಹಣ ಇಲ್ಲ. ಗ್ರಹಗತಿಗಳು ಚೆನ್ನಾಗಿಲ್ಲ, ಶುಕ್ರ ದೆಸೆ ನಡೆಯುತ್ತಿಲ್ಲ. ಹಣ ಕೈಗೆ ಸೇರಿದ ಮೇಲೆ ಕೆಲಸ ಆರಂಭಿಸುವೆ ಗ್ರಹಗತಿಗಳು ಚೆನ್ನಾಗಿ ಆದ ಮೇಲೆ ಎಂಬ ಮಾತುಗಳನ್ನು ಹೇಳುತ್ತ ಮಾಡುವ ಉತ್ತಮ ಕೆಲಸವನ್ನು ಮುಂದೂಡುತ್ತಲೇ ಹೋಗುತ್ತಾರೆ. ಸಿಕ್ಕ ಅವಕಾಶಗಳನ್ನು ಕೈ ಚೆಲ್ಲಿ ನಂತರ ಅವಕಾಶಗಳೇ ಇಲ್ಲವೆಂದು ಅಳುವುದು ಹುಚ್ಚುತನವಲ್ಲದೇ ಮತ್ತೇನು? ತಲೆಯಲ್ಲಿ ಭ್ರಮೆ ಇಟ್ಟುಕೊಂಡು ಶುಭ ಗಳಿಗೆ ಬರುವವರೆಗೂ ಕೆಲಸವನ್ನು ಶುರು ಮಾಡಲು ಕಾಯುತ್ತಾರೆ. ಕೆಲವರಿಗೆ ಆ ಗಳಿಗೆ ಎಂದಿಗೂ ಬರುವುದೇ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ. ಹಾಗಾದರೆ ಉತ್ತಮ ಕೆಲಸಕ್ಕೆ  ಕೈಯಲ್ಲಿರುವ ಈ ಗಳಿಗೆಯನ್ನು ಉತ್ತಮ ಗಳಿಗೆಯನ್ನಾಗಿ ಮಾಡಿಕೊಳ್ಳುವುದು ಹೇಗೆ ನೋಡೋಣ ಬನ್ನಿ. ಕಾರ್ಯಪ್ರವೃತ್ತರಾಗಿ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡಲು ಕಾಯುವಷ್ಟು ಸಮಯವಿಲ್ಲ. ಹಾಗೆ ನೋಡಿದರೆ ಸರಿಯಾದ ಸಮಯಕ್ಕಾಗಿ ಕಾಯುವುದು ಒಳ್ಳೆಯ ಗಳಿಗೆಗಾಗಿ ಕಾಯುತ್ತಲೇ ಇರುವುದು ಒಂದು ತರಹ ಕೆಲಸವನ್ನು ಮುಂದೂಡುವ ಕಾಯಿಲೆಯೇ ಸರಿ. ಏಕೆಂದರೆ ಜೀವನ ತುಂಬಾ ಚಿಕ್ಕದು. ಹಾಗಾಗಿ ಉತ್ತಮ ಕೆಲಸಗಳನ್ನು ಮಾಡಲು ಸೂಕ್ತ ಸಮಯ ಅಥವಾ ಪರಿಪೂರ್ಣ ಸಂದರ್ಭಕ್ಕಾಗಿ ಕಾಯಬೇಕಿಲ್ಲ. ಕಾಯುವಿಕೆ ಪ್ರಗತಿಯ ಶತ್ರು ಎಂಬುದನ್ನು ಮರೆಯಬಾರದು. ಜಗತ್ತಿನ ಪ್ರಸಿದ್ಧ ಚಿಂತಕರಾದ ಮಾರ್ಕ್ ಟ್ವೇನ್ ಹೇಳಿದ ಮಾತು ಇಲ್ಲಿ ಸೂಕ್ತವೆನಿಸುತ್ತದೆ. ‘ಮುಂದೆ ಸಾಗಲು ಇರುವ ಏಕೈಕ ರಹಸ್ಯವೆಂದರೆ ಕಾರ್ಯಪ್ರವೃತ್ತರಾಗುವುದು.’ ನೇರವಾಗಿ ಹೇಳಬೇಕೆಂದರೆ ಸರಿಯಾದ ಕೆಲಸಕ್ಕೆ ವಿಶೇಷ ಸಮಯದ ಅಗತ್ಯವಿರುವುದಿಲ್ಲ.. ಈ ಕಾಯುವಿಕೆ ಎಂಬುದು ಆಲಸ್ಯತನಕ್ಕೆ ಮಣೆ ಹಾಕುತ್ತದೆ. ಮತ್ತು ಇದರಲ್ಲಿ ಭಯವೂ ಅಡಗಿರುತ್ತದೆ. ಭಯ ಮತ್ತು ಆಲಸ್ಯವನ್ನು ಮೀರಿ ಕಾರ್ಯಪ್ರವೃತ್ತರಾದರೆ ಯಶಸ್ಸಿನತ್ತ ಹೆಜ್ಜೆ ಹಾಕಲು ಸಾಧ್ಯ. ಲಭ್ಯ ಸೌಲಭ್ಯ ಬಳಸಿ ‘ಹಾಸಿಗೆ ಇದ್ದಷ್ಟು ಕಾಲು ಚಾಚು.’ ಎಂಬ ಗಾದೆ ಮಾತು ನಮಗೆ ಲಭ್ಯವಿರುವ ಸಂಪನ್ಮೂಲಗಳಲ್ಲೇ ಬದುಕುವುದನ್ನು ಕಲಿಸುತ್ತದೆ. ಸರಿಯಾದ ಕೆಲಸಕ್ಕೆ ಸಂಪನ್ಮೂಲಗಳಿಗಿoತ ನಾ ಈ ಕೆಲಸ ಮಾಡಿಯೇ ತೀರಬೇಕೆಂಬ ಛಲ ಮುಖ್ಯ. ಛಲವಿದ್ದರೆ ಕೆಲಸ ತಾನೇ ಕೂಡಿ ಬರುತ್ತದೆ. ಅದ್ಭುತ ಸಾಧನೆ ಮಾಡಿದವರೆಲ್ಲ ಎಲ್ಲ ಸೌಲಭ್ಯಗಳು ಲಭ್ಯವಾದ ಮೇಲೆ ತಮ್ಮ ಸಾಧನೆ ಆರಂಭಿಸಬೇಕೆoದು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಸೂಕ್ತ ಸಮಯಕ್ಕಾಗಿ ಕಾಯಲಿಲ್ಲ. ಬದಲಾಗಿ ಇದ್ದ ಪರಿಸ್ಥಿತಿಯಲ್ಲೇ ಕೆಲಸ ಆರಂಭಿಸಿದರು. ಕಷ್ಟಗಳ ಹಾದಿಯಲ್ಲೂ ಹೆದರದೇ ಮುನ್ನುಗ್ಗಿದರು. ಈ ಹೊತ್ತನ್ನು ಉತ್ತಮವಾಗಿ ಬಳಸಿಕೊಳ್ಳುವವನಿಗೆ ಯಾವಾಗಲೂ ಶುಭ ಸಮಯವೆ ಇರುತ್ತದೆಂಬುದನ್ನು ನೆನಪಿನಲ್ಲಿಡಿ. ಯಾರಿಗಾಗಿಯೂ ಯಾವುದಕ್ಕಾಗಿಯೂ ಕಾಯದೇ ನೀವಂದುಕೊoಡ ಉತ್ತಮ ಕೆಲಸ ಆರಂಭಿಸಿ. ನಿಮ್ಮ ಬಳಿ ಇರಲಾರದ್ದನ್ನು ನೆನೆಯುತ್ತ ಬಳಿಯಿರುವುದನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಳಿ ಇರುವ ಸೌಲಭ್ಯಗಳನ್ನು ಸಂಪನ್ಮೂಲವನ್ನು ಗೌರವಿಸಿ. ಈಗ ನಿಮ್ಮ ಬಳಿಯಿರುವ ಬುದ್ಧಿವಂತಿಕೆಯನ್ನು ಸವಲತ್ತುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಕೆಲಸದ ಫಲಾಫಲಗಳು ಅವಲಂಬಿತವಾಗಿರುತ್ತವೆ ಹೊರತು ಎಂದೋ ಬರುವ ಯಾವುದೇ ಸಮಯವಲ್ಲ. ಹಾಗಾಗಿ ನಿಮ್ಮ ಬಳಿ ಇರುವುದನ್ನು ಗೌರವಿಸುವುದನ್ನು ಕಲಿಯಬೇಕು.  ಕೈಯಲ್ಲೇ ಇದೆ. ಬುದ್ಧ ಹೇಳುತ್ತಾನೆ ‘ನಿಮ್ಮಲ್ಲಿರುವ ದೊಡ್ಡ ಭ್ರಮೆ ಎಂದರೆ ನಿಮಗೆ ಇನ್ನೂ ಸಮಯವಿದೆ ಎಂದುಕೊಳ್ಳುವುದು.’ ನಾಳೆ ದಿನ ಏನೋ ಹೇಗೋ ಯಾರಿಗೂ ಗೊತ್ತಿಲ್ಲ. ಆದರೆ ಇಂದು ಮಾತ್ರ ನಮ್ಮ ಕೈಯಲ್ಲೇ ಇದೆ. ಇರುವ ಸಮಯವನ್ನು ಮುಂದೂಡುತ್ತ ಹಾಳು ಮಾಡಿ ಮುಂದೆ ಬರುವ ಸಮಯಕ್ಕಾಗಿ ಕಾಯುತ್ತ ಕೂರುವುದು ಶುದ್ಧ ಮೂರ್ಖತನ. ನಾವು ದೃಢ ನಿರ್ಧಾರದಿಂದ ಇಡುವ ಮೊದಲ ಹೆಜ್ಜೆ. ಮನಸ್ಸಿನಲ್ಲಿರುವ ದೃಢ ಸಂಕಲ್ಪ ಮತ್ತು ಮಾಡಿಯೇ ತೀರಬೇಕೆಂಬ ಛಲಗಳೇ ಒಳ್ಳೆಯ ಕೆಲಸಕ್ಕೆ ಆ ಸಮಯವನ್ನು ಸರಿಯಾದ ಸಮಯವಾಗಿ ಬದಲಾಯಿಸುತ್ತವೆ. ‘ಸಮಯ ಮತ್ತು ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ.’ ಎಂಬ ಮಾತಿದೆ. ಕಾಯುತ್ತ ಕುಳಿತರೆ ಕಾಲ ದಾಟಿ ಹೋಗಿಬಿಡುತ್ತದೆ. ಒಮ್ಮೆ ಕಳೆದ ಸಮಯ ಮತ್ತೆಂದಿಗೂ ಮರಳಿ ಬಾರದು. ಉತ್ತಮ ಸಮಯಕ್ಕಾಗಿ ಕಾಯುವ ಬದಲು ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವ ಸೂಕ್ತ ಸಮಯವನ್ನು ಸೃಷ್ಟಿಸಿಕೊಳ್ಳಬೇಕು. ಮಹಾತ್ಮ ಗಾಂಧೀಜಿ ಹೇಳಿದಂತೆ, ‘ನಿಮ್ಮ ಭವಿಷ್ಯವು ನೀವು ಇಂದು ಏನು ಮಾಡುತ್ತೀರಿ ಎಂಬುದರ ಮೇಲೆ ಆಧಾರಿತವಾಗಿದೆ.’ ಬೇಡ ನೆಪ ಇಂದು ಬೇಡ ನಾಳೆಯಿಂದ ಶುರು ಮಾಡುತ್ತೇನೆ. ಸೋಮವಾರದಿಂದ ಆರಂಭಿಸುತ್ತೇನೆ. ಇನ್ನೇನು ಈ ತಿಂಗಳು ಮುಗಿಯುತ್ತಲೇ ಬಂತು ಮುಂದಿನ ತಿಂಗಳು ಖಂಡಿತ ಆರಂಭಿಸುತ್ತೇನೆ. ಇಂಥ ನೆಪಗಳು ಜೀವವನ್ನು ತಿನ್ನುತ್ತವೆ. ನೆಪದ ಬಲೆಗೆ ಒಮ್ಮೆ ಬಿದ್ದರೆ ಸಾಕು ಅಲ್ಲಿಂದ ಮರಳಿ ಎದ್ದು ಬರುವುದು ಅಷ್ಟು ಸುಲಭದ ಮಾತಲ್ಲ. ದಿನದಿಂದ ದಿನಕ್ಕೆ ನೆಪಗಳ ಸುರುಳಿ ಹೆಚ್ಚುತ್ತಲೇ ಹೋಗುತ್ತದೆ. ನೆಪಗಳ ಗೂಡಿನಲ್ಲಿ ಉಳಿಯುವ ಚಟ ಒಮ್ಮೆ ಅಂಟಿಕೊoಡರೆ ಅದು ಅಷ್ಟು ಸರಳ ಬಿಟ್ಟು ಹೋಗುವುದಿಲ್ಲ. ಹಾಗಾಗಿ ಯಾವುದೇ ಹೊಸ ಕೆಲಸ  ಆರಂಭಿಸಲು ಇಂದಿಗಿಂತಶ್ರೇಷ್ಢವಾದ ದಿನ ಮತ್ತೊಂದಿಲ್ಲ. ಯಾವುದೇ ಹೊಸತನ್ನು ಆರಂಭಿಸಿದಾಗ ಆರಂಭದಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ. ಅಡೆತಡೆಗಳಿಗೆ ನೆಪಗಳನ್ನು ಹೇಳುತ್ತ ಕುಳಿತುಕೊಳ್ಳಬಾರದು. ಉದ್ದೇಶ ಚೆನ್ನಾಗಿದ್ದರೆ ಸಾಕು ಸಮಯ ತನ್ನಷ್ಟಕ್ಕೆ ತಾನೇ ನಮ್ಮ ಜೊತೆ ನಡೆಯುತ್ತದೆ. ಉನ್ನತ ಧ್ಯೇಯದೊಂದಿಗೆ ಉತ್ತಮ ಉದ್ದೇಶದೊಂದಿಗೆ ಆರಂಭಿಸಿದ ಕೆಲಸಕ್ಕೆ ಪರಿಸ್ಥಿತಿಗಳು ತಾವಾಗಿಯೇ ಪೂರಕವಾಗಿ ಬದಲಾಗತೊಡಗುತ್ತವೆ. ಎದೆಗಾರಿಕೆ ‘ಆಳಾಗಿ ದುಡಿದವನೇ ಅರಸನಾಗುತ್ತಾನೆ.’ ಎನ್ನುವಂತೆ ಅಂದುಕೊoಡ ಕೆಲಸವನ್ನು ತಕ್ಷಣ ಆರಂಭಿಸಿದವನಿಗೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ.. ತಕ್ಷಣ ಆರಂಭಿಸುವವನೇ ಕೊನೆಗೆ ವಿಜಯಿಯಾಗುತ್ತಾನೆ. ‘ಇಂದು ಮಾಡುವ ಕೆಲಸ ಈಗಲೇ ಮಾಡು ಎನ್ನುವ ದಾಸರ ವಾಣಿ ಇಲ್ಲಿ ಅತ್ಯಂತ ಪ್ರಸ್ತುತ. ಕಾಲಾಯ ತಸ್ಮೈ ನಮಃ ಎಂಬ ನುಡಿ ಕಾಲದ ಮಹತ್ವವನ್ನು ಹೇಳುತ್ತದೆ. ಕಾಲ ಎಲ್ಲಕ್ಕಿಂತಲೂ ಶಕ್ತಿಶಾಲಿ.  ಕಾಲ ಮಿಂಚಿದರೆ ಕಣ್ಣೀರು ಗ್ಯಾರಂಟಿ. ಎನ್ನುವಂತೆ ಶುಭ ಮುಹೂರ್ತ ಒಳ್ಳೆಯ ಸಮಯವೆಂದು ಕಾಯುತ್ತ ಕುಳಿತರೆ ಪಶ್ಚಾತ್ತಾಪದ ಹೊರತು ಮತ್ತೇನೂ ಸಿಗುವುದಿಲ್ಲ. ಪರಿಸ್ಥಿತಿ ಹೇಗೆ ಇರಲಿ ಏನೇ ಬರಲಿ ಎದೆಗಾರಿಕೆಯಿಂದ ಎದುರಿಸುತ್ತ ಮುಂದೆ ಹೆಜ್ಜೆ ಹಾಕಿದರೆ ಸರಿಯಾದ ಗುರಿಗೆ ಸರಿಯಾದ ಸಮಯ ತಾನೇ ಜೊತೆಯಾಗುತ್ತದೆ. ಗೆಲುವಿನ ಅರಮನೆಗೆ ಕರೆದೊಯ್ಯುತ್ತದೆ. ಜಯಶ್ರೀ.ಜೆ. ಅಬ್ಬಿಗೇರಿ

“ಸಾಕು ಸರಿಯಾದ ಸಮಯಕೆ ಕಾಯುವಿಕೆ” ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು

ಕೃಷಿ ಸಂಗಾತಿ ಗೊರೂರು ಅನಂತರಾಜು “ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಪಠ್ಯ ಬೋಧನೆ, ಜನಪದ ಸಂಶೋಧನೆ, ಕೃಷಿಕಾಯಕ  ಈ ಮೂರೂ ಕ್ಷೇತ್ರಗಳ ಪ್ರಗತಿಪರ ಕೃಷಿಕ ಡಾ. ಬಿ.ಡಿ.ಕುಮಾರ್  ಅರಸೀಕೆರೆಯ ಜಗದ್ಗುರು ಶ್ರೀ ಕೋಡಿಮಠ ಪದವಿಪೂರ್ವ ಕಾಲೇಜಿನಲ್ಲಿ ೧೯೯೧ರಿಂದ ಕನ್ನಡ ಉಪನ್ಯಾಸಕರು. ಇವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಇತ್ತೀಚಿಗೆ ಬಿಡುಗಡೆಯಾಗಿದೆ. ಲೇಖನ ಕೊಟ್ಟಿದ್ದ ನಾನು  ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮೊನ್ನೆ ಕುಮಾರ್ ಹಾಸನಕ್ಕೆ ಬಂದು ಪೋನ್ ಮಾಡಿದರು. ಗೌರವ ಪ್ರತಿ ನೀಡಿದರು. ಬರೆಯಿರಿ ಎಂದು ಪ್ರೀತಿಯಿಂದ ಹೇಳಿದರು.  ಓದುತ್ತಾ ಹೋದ ನನಗೆ ಇಷ್ಟವಾಗಿದ್ದು ಇವರ ಬಾಲ್ಯದ ದಿನಗಳು.  ‘ಬಣ್ಣದ ಗುಬ್ಯಾರು ಮಳೆರಾಜ-ಅವರು ಮಣ್ಣಾಗಿ ಹೋದಾರು ಮಳೆರಾಜ.. ಮನದ ನೆನಪಿನ್ನು ಮಾಸಿಲ್ಲ. ನನ್ನ ಭೋಧನಾ ವೃತ್ತಿ ಬದುಕಿನ ಮೊದಲ ಭೋದನೆ ಈ ಜನಪದ ಗೀತೆಯಾಗಿತ್ತು. ಮಳೆಯ ಬೆಳೆಯ ಇಳೆಯ ಪೂರಕ ಸಂಬAಧ,ಉಳಿವಿದ್ದರೆ ಹೋರಾಟ ಕೂಳಿದ್ದರೆ ಕಾಳಗ ಮೇವಿದ್ದರೆ ಮೇಳ ಅನ್ನವಿದ್ದರೆ ಪ್ರಾಣ, ಪ್ರಾಣವಿದ್ದರೆ ಪರಾಕ್ರಮ ಈ ವೈವಿಧ್ಯ ವಿಷಯ ಲೇಪನದೊಂದಿಗೆ ಅತೀವೃಷ್ಟಿ  ಅನಾವೃಷ್ಟಿಯ ರಣಭೀಕರ ಕಠೋರತೆ ಹೇಳುತ್ತಾ ಒಕ್ಕಲ ಬಿಕ್ಕಲು ಆರಂಭವಾಗಿ ಬದುಕು ಮೂರಾಬಟ್ಟೆಯಾಗುತ್ತದೆ. ನಿಸರ್ಗದೆದುರು ಮಾನವನÀ ಆಟ  ನಡೆಯುವುದಿಲ್ಲ ಎಂಬ ಕರಾಳ ಸತ್ಯ ಈ ಗೀತೆಯಲ್ಲಿದೆ..ಲೇಖಕರು ಕನ್ನಡ ಉಪನ್ಯಾಸಕರಾಗಿ ಪ್ರಥಮ ಪಿಯುಸಿಗೆ ಈ ಪಾಠ ಮಾಡುವಾಗ  ಅವರಿಗೆ ಅರಿವಿಲ್ಲ. ತನ್ನ ಬದುಕು  ಇದೇ ಜನಪದ ಹಾಡಿನಂತೆ ಆಗುತ್ತದೆ ಎಂದು.  ನಿಜ, ಯಾರು ತಾನೇ ನಮ್ಮ ಭವಿಷ್ಯದ ಬದುಕು ಹೀಗೆ ಇರುವುದೆಂದು ಊಹಿಸಲು ಸಾಧ್ಯ. ಆದರೆ ನಾವು  ಸನ್ಮಾರ್ಗದಲ್ಲಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಕನಸು ಕಾಣುತ್ತೇವೆಯೋ ಅದು ಕೆಲವರಿಗೆ ಸಿಗುತ್ತದೆ. ಇದಕ್ಕೆ  ಕುಮಾರ್ ಉದಾಹರಣೆ ಅಷ್ಟೇ. ಪಠ್ಯ ಬೋಧನೆಯೊಂದಿಗೆ ತಮ್ಮ ಜೀವನದ ಅನುಭವ ಪಾಠವನ್ನು ಅರಗಿಸಿಕೊಂಡು ಒರ್ವ ಪ್ರಗತಿಪರ ರೈತನಾಗಿ ಹೊರಹೊಮ್ಮಿರುವುದು ಮಾದರಿ ಎನಿಸುತ್ತದೆ.  ಜೀವಿತದ ಹೋರಾಟ ಬದುಕಿನಲ್ಲಿ   ಹಲವು ಕಷ್ಟನಷ್ಟ ಎದುರಿಸಿ ಗೆದ್ದವರು ಈ ಬಿ.ಡಿ.ಕುಮಾರ್. ಕೃತಿಯ ಸಂಪಾದಕರು ಡಾ. ಹರೀಶ್ ಕುಮಾರ್ ಬರೆದಂತೆ ಇವರು  ವಿದ್ಯಾರ್ಥಿಗಳಿಗೆ ಕೇವಲ ಪಾಠ ಹೇಳಿಕೊಟ್ಟ ಮೇಷ್ಟುç ಮಾತ್ರವಲ್ಲ ಬದುಕಿನ ದಾರಿ ಕಂಡುಕೊAಡ  ಮಾರ್ಗದರ್ಶಿ. ಇವರ ವ್ಯಕ್ತಿತ್ವ ಬಹುಮುಖಿ ಕ್ಯಾನ್ವಾಸ್. ಜಮೀನಲ್ಲಿ ನಿಂತರೆ ಮಣ್ಣಿನ ವಾಸನೆಯ ಅಪ್ಪಟ ಕೃಷಿಕ. ತಮಟೆ ತಂಬೂರಿ ಹಿಡಿದರೆ ಜನಪದ ಕಲಾವಿದ. ಪುಸ್ತಕ ಹಿಡಿದರೆ ಓದಿನ ಸಂತ.  ಸಾವಿರ ಪುಟಗಳ ಕೃತಿಯಲ್ಲಿ ನನಗೆ ಇಷ್ಟವಾಗಿದ್ದು ಇವರ ನೇರ ನುಡಿಯ ಬಾಲ್ಯದ ಘಟನೆಗಳು.ದಿನಾಂಕ ೨೧-೬-೧೯೬೬ರ ಮಧ್ಯಾಹ್ನ ೪ ಗಂಟೆಯಲ್ಲಿ ದ್ಯಾವೇಗೌಡ ದೇವಮ್ಮ ಇವರ ದ್ವಿತೀಯ ಪುತ್ರನಾಗಿ ಈ ಭೂಮಿಗೆ ಬಂದನAತೆ. ನನ್ನ ಅಜ್ಜಿ ತಾಯಮ್ಮನ ತಮ್ಮ ಕೃಷ್ಣಪ್ಪ ಕಲ್ಯಾಡಿಕೊಪ್ಪಲಿನ ಬ್ರಾಹ್ಮಣ ಗೆಳೆಯ ಶಿವಪ್ರಕಾಶ್ ಇದೇ ದಿನ ಬೆಳಿಗ್ಗೆ ಹುಟ್ಟಿದರಂತೆ. ಇವನನ್ನು ನೋಡಿಕೊಂಡ ಕೃಷ್ಣಪ್ಪ ಬಸವಾಘಟ್ಟಕ್ಕೆ ಬಂದು ನನ್ನನ್ನು ನೋಡಿದರÀಂತೆ. ಈ ವಿಷಯದಿಂದ ನಾನು ಜನಿಸಿದ ನಿಜ ದಿನಾಂಕ ಗೊತ್ತಾಯಿತು..ಕುಮಾರ್ ಒಬ್ಬರೇ ಅಲ್ಲಾ ಎಲ್ಲಾ ಅನಕ್ಷರಸ್ಥ ನಮ್ಮ ತಂದೆತಾಯಿಗಳದು ಇದೇ ಸ್ಥಿತಿ.   ಐದು ವರ್ಷಗಳ ನಂತರ ಶಾಲೆಗೆ ಸೇರಿಸುವಾಗ ಹುಟ್ಟಿದ ದಿನಾಂಕ ಸರಿಯಾಗಿ ನೆನಪಿಲ್ಲದೇ ಒಂದು ಅಂದಾಜಿನ ಮೇಲೆ ಶಾಲೆಗೆ ಸೇರಿಸುತ್ತಿದ್ದ ಆ ದಿನಗಳು.   ಶಾಲೆಗೆ ಬೇಗನೇ ಸೇರಿಸಲು ಕೆಲವು ಪೋಷಕರು ಒಂದು ವರ್ಷ ಫ್ಲಸ್ ಮಾಡಿ ಬರೆಸಿ ಸರ್ಕಾರಿ ನೌಕರಿಯಲ್ಲಿ ನಿವೃತ್ತಿ ಹೊಂದುವಾಗ ಅದು ಮೈನಸ್ ಆಗಿದ್ದನ್ನು ನೊಂದುಕೊAಡು  ಹೇಳಿದ್ದನ್ನು ಕೇಳಿದ್ದೇನೆ. ಹಳ್ಳಿಯ ಹಂಚಿನ ಮನೆ ತೊಲೆಗಳಲ್ಲಿ ಮಕ್ಕಳು ಹುಟ್ಟಿದ ದಿನಾಂಕ ಬರೆದಿದ್ದನ್ನು  ನೋಡಿದ್ದೆನೆ.ಈ ಸಂದರ್ಭದಲ್ಲಿ ಒಂದು ನೆನಪು ನನ್ನನ್ನು ಮತ್ತೆ ಮತ್ತೆ ಕಾಡಿದೆ. ಅದೇನೆಂದರೆ ಅಷ್ಟೊತ್ತಿಗಾಗಲೇ ಹೊಲದಲ್ಲಿ ಹೊಸಮನೆ ಕಟ್ಟುತ್ತಿದ್ದೆವು. ಹಳೆ ಮನೆಗೂ ಹೊಸ ಮನೆಗೂ ತಿರುಗಾಟ ಸಾಗುತ್ತಿತ್ತು. ಆಗ ತಾನೇ ನೀರುಗುಂದ ಹೊಲಕ್ಕೆ ಅಲೆಮನೆ ಕಟ್ಟಿದ್ದರಂತೆ. ಅಲ್ಲಿ ಗಡಿಗೆಗಳಿಗೆ ಗುಳ ತುಂಬಿಸಿ ಮನೆಯಲ್ಲಿ ತಂದಿಟ್ಟಿದ್ದರು. ನಾನು ಅಂಕೆಯಿಲ್ಲದೆ ಅದನ್ನು ಕುಡಿದು ಹೊಟ್ಟೆಯಲ್ಲಿ ಲಾಡಿ ಉಳವಾಗಿತ್ತು. ಅದೊಂದು ಸುಂದರವಾದ ದಿನ ಆ ಹುಳ ಈಚೆಗೆ ಬರಲು ಆಗದೇ ಒಳಗೆ ಹೋಗಲು ಆಗದ ಅದನ್ನು ನೇತಾಡಿಸಿಕೊಂಡು ಊರಲೆಲ್ಲಾ ತಿರುಗಾಡಿದ್ದೆ. ನನ್ನ ಪಾಲಿಗೆ ಅದನ್ನು ಕಾಳಿಂಗ ಸರ್ಪವೆಂದೇ ಬಾವಿಸಿ ಭಯಭೀತರಾಗಿ ಊರ ತುಂಬಾ ಓಡಾಡಿದ್ದೆ… ಕುಮಾರರ ಈ ನೆನಪು ನಗು ತರಿಸಿದರೂ ಇಂತಹ ದೃಶ್ಯಗಳನ್ನು ಕಂಡಿರುವೆ.      ಕೃತಿಯ ಕವಲು-೧À ಅಂತರAಗ ವಿಭಾಗದಲ್ಲಿ ೩೭ ಲೇಖಕರು ಇವರ ವ್ಯಕ್ತಿ ಚಿತ್ರಣವನ್ನು ತಮ್ಮ ಸ್ನೇಹನೆಲೆಯಲ್ಲಿ ಬರೆದಿದ್ದಾರೆ. ಕುಮಾರ್ ಪದವಿಪೂರ್ವ ಐಚ್ಛಿಕ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು. ಕೆ.ಪಿ.ಎಸ್.ಸಿ ಸ್ಫರ್ಧಾತ್ಮಕ ಪರೀಕ್ಷೆ ಪ್ರಶ್ನೆಪತ್ರಿಕೆ ತಯಾಸಿದ್ದಾರೆ. ರಾಜ್ಯ ಸಬ್ ಇನ್ಸ್ಸ್ಪೆಕ್ಟರ್ ಪರೀಕ್ಷೆÀ ಮೌಲ್ಯಮಾಪಕರು. ಜಿಲ್ಲಾ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷರು. ದೆಹಲಿಯಲ್ಲಿ ೧೯೯೬ರಲ್ಲಿ ರಾಷ್ಟಿçÃಯ ಜಾನಪದ ಹಬ್ಬದಲ್ಲಿ  ತಮಟೆ ಕಲಾವಿದರಾಗಿ ಭಾಗವಹಿಸಿದ್ದಾರೆ.   ಇವರ ತೋಟದ ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳ ಸಂಗ್ರಹ ಇದೆ. ಅಮೇರಿಕದ ತತ್ವಜ್ಞಾನಿ ಹೆನ್ರಿ ಡೇವಿಡ್ ಥೋರೋ ತರಹ ಇವರದು ನಿಸರ್ಗಪ್ರೇಮ ಜೀವನ.  ಬಾಗೇಶಪುರದ ಬಳಿ  ೧೨ ಎಕರೆ ಭೂಮಿ ಖರೀದಿಸಿ ಗುಡ್ಡದಲ್ಲೊಂದು ಮನೆಯ ಮಾಡಿ ಪಂಚೆ ಕಟ್ಟಿ ಕೃಷಿ ಕಾಯಕ ಮಾಡಿದವರು. ಅದೀಗ ಜಮೀನಾಗಿ ಉಳಿಯದೇ ಅಲ್ಲಿ ನೂರಾರು ಜಾತಿಯ ಹಣ್ಣಿನ ಮರಗಳು ಬೆಳೆದು, ಪ್ರಾಣಿ ಪಕ್ಷಿಗಳ ನೆಲೆವೀಡಾಗಿ ಕಾಡುಕೃಷಿಗೆ ಮಾದರಿಯಾಗಿದೆ. ಹಸು ಕುರಿ ಕೋಳಿ ಸಾಕಣಿಕೆಯಿಂದ  ಕೃಷಿ ಬದುಕಿಗೆ ಮತ್ತೊಂದು ದಾರಿ ತೋರಿಸಿದ್ದಾರೆ. ಅಕ್ಷರ ಸಂಸ್ಕೃತಿ ಮಣ್ಣಿನ ಸಂಸ್ಕೃತಿ ನಡುವೆ ಸಂತನಾಗಿದ್ದಾರೆ. ಇದೊಂದು ಅಭಿನಂದನಾ ಗ್ರಂಥ ಮತ್ತು  ನಾಡಿನ ಅನೇಕ ಜನಪದ ವಿದ್ವಾಂಸರು ಲೇಖಕರ ವಿಶಿಷ್ಟ ಬರಹಗಳ ಸಂಗ್ರಹ.  ಕವಲು-೨ ಜನಪದ ಪಲುಕು ಜನಪದ ಸಾಹಿತ್ಯ ವಿಶೇಷವಾಗಿದೆ.  ಡಾ.ಕಾಳೇಗೌಡ ನಾಗವಾರರ  ಲೇಖನವು ಗಮನಾರ್ಹ. ಕರ್ನಾಟಕವು ವಿಸ್ತಾರ ಭೂಪ್ರದೇಶವಾಗಿ ನಾನಾ ಬಗೆಯ ವೈವಿಧ್ಯಗಳಿಂದ ಕೂಡಿದೆ. ಒಂದು ಕಡೆ ಅರಬ್ಬಿಸಮುದ್ರ, ಉತ್ತರ ಕನ್ನಡ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶ, ಶಿವಮೊಗ್ಗ  ಆವರಿಸಿದ ಮಲೆನಾಡು, ಪೂರ್ವ ಪಶ್ಚಿಮ ಘಟ್ಟಗಳ ನಡುವಣ ಉತ್ತರ ದಕ್ಷಿಣ ಕರ್ನಾಟಕಗಳ ಬಗೆಬಗೆಯ ಪದ್ಧತಿ ಅನುಸರಿಸುವ ಜನರ ಗುಂಪು ಒಳಗೊಂಡಿದೆ. ಈ ನಡುವೆ ಕೊಡವ ತುಳು ಕೊಂಕಣಿ  ಭಾಷೆಗಳ ಜಾನಪದ ಸಂಪತ್ತು  ಅರಳಿದೆ. ಈ ಎಲ್ಲಾ  ಜನಪದ ಸಾಹಿತ್ಯವು ಪೂರ್ಣ ಸಂಗ್ರಹವಾಗಬೇಕೆAದು ಆಶಿಸಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಆಡಿ ಬೆಳೆದು ಗಾಣದೆತ್ತಿನಂತೆ ನಿರಂತರವಾಗಿ ದುಡಿಯುತ್ತಲೇ ಬಂದು ಉದ್ದಕ್ಕೂ ಅಕ್ಷರ ಜ್ಞಾನದಿಂದ ವಂಚಿತರಾಗಿರುವ ನಮ್ಮ ಜನಪದ ಕಲಾವಿದರು ವಾಸ್ತವವಾಗಿ ಗಂಧರ್ವಲೋಕದ ಗೆಣೆಕಾರರು ಎಂದಿದ್ದಾರೆ.  ಡಾ.ಹಿ.ಶಿ.ರಾಮಚಂದ್ರೇಗೌಡರು ಬಿ.ಡಿ.ಕುಮಾರ್ ಅವರಿಗೆ ಗೈಡ್ ಆಗಿದ್ದವರು. ಇವರ ಮಾರ್ಗದರ್ಶನದಲ್ಲಿ ಕುಮಾರ್ ಡಾಕ್ಟರೇಟ್ ಮಾಡಿದ್ದಾರೆ. ಗೌಡರಿಗೆ ತಮ್ಮ ಶಿಷ್ಯನ ಸಾಧನೆಗೆ ಪ್ರೀತಿ ಇದೆ. ವೈಫಲ್ಯದ ಬಗ್ಗೆ ಬೇಸರವೂ ಇದೆ. ‘ನಾನು ಪ್ರತಿಭೆ ಮತ್ತು ಕ್ರಿಯಾಶೀಲತೆ  ಕಂಡಲ್ಲಿ ಪುಳಕಗೊಳುತ್ತೇನೆ, ಸಂಭ್ರಮಿಸುತ್ತೇನೆ. ಇಂಥ ದ್ವಿಜತ್ವವನ್ನು ಹೊಂದಿದ ವ್ಯಕ್ತಿ ಡಾ. ಬಿ.ಡಿ.ಕುಮಾರ್. ಅವರ ಬಗ್ಗೆ ನನಗೆ ಪ್ರೀತಿಯೂ ಇದೆ. ಸಿಟ್ಟು ಇದೆ. ಪ್ರೀತಿ ಯಾಕೆಂದರೆ ಆ ಎರಡನ್ನೂ ಒಳಗೊಂಡ ವ್ಯಕ್ತಿ. ಸಿಟ್ಟು ಯಾಕೆಂದರೆ ಅವನ್ನು ಫಲಪ್ರದವಾಗಿ ಬಳಸಿಕೊಂಡಿಲ್ಲ ಎಂದು. ಅವರ ಪ್ರತಿಭೆ ಹೊರಚೆಲ್ಲುವ ಯಾವ ಉತ್ತಮ ಕೆಲಸ ಅವರು ಮಾಡಿದಂತೆ ನನಗೆ ಕಂಡಿಲ್ಲ. ನನ್ನ ಮಾರ್ಗದರ್ಶನ ದಲ್ಲಿ ಅವರು ಪಿಹೆಚ್‌ಡಿ ಪಡೆದರು. ವಿಷಯ: ಹಾಸನ ಜಿಲ್ಲೆಯ ಐತಿಹ್ಯಗಳನ್ನು ಕುರಿತು. ಪಿಹೆಚ್‌ಡಿಯ ನಂತರ ಆ ವಿಷಯದಲ್ಲಿ ತುಂಬ ಕೆಲಸ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಆವರ ಪ್ರತಿಭೆಯನ್ನು ದುಡಿಸಿಕೊಳ್ಳಲಿಲ್ಲ..    ಇದೇ ಕೃತಿಯನ್ನು ಪರಿಚಯಿಸುವ ನನ್ನ ಲೇಖನವು (ಗೊರೂರು ಅನಂತರಾಜು)  ಕವಲು ೨ರಲ್ಲಿದೆ. ಜಾನಪದವು ವಿಶಾಲವೂ ಮತ್ತು ವ್ಯಾಪಕವೂ ಆಗಿದ್ದು ಜಗತ್ತನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡಿದೆ. ಇಲ್ಲಿ ಪ್ರಾಚೀನ ಅರ್ವಾಚೀನಗಳೆರಡೂ ಸಂಧಿಸಿ ಪರಸ್ಪರ ಕೈಕುಲುಕುತ್ತವೆ. ಈ ಜಾನಪದಕ್ಕೆ ಆದಿ ಅಂತ್ಯಗಳಿಲ್ಲ ಸಾವಿಲ್ಲ. ಆಧುನಿಕ ಮಾನವನಲ್ಲಿ ಗುಪ್ತಗಾಮಿನಿಯಾಗಿ ಪ್ರವಹಿಸುತ್ತಾ ಬೀಜದಲ್ಲಿ ವೃಕ್ಷವಡಗಿರುವಂತೆ ಕಲೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಜಾನಪದ ಚೈತನ್ಯ ಸುಪ್ತವಾಗಿರುತ್ತದೆ. ಕೃತಿಯಲ್ಲಿ ಲೇಖಕರು ತಮ್ಮ ಭೌಗೋಳಿಕ ನೆಲೆಯಲ್ಲಿ ಐತಿಹ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ. ಅವುಗಳ ಸಾಂಸ್ಕೃತಿಕ ಒಳತೋಟಿಗಳನ್ನು ಒಳನುಗ್ಗಿ ನೋಡಲು ಪ್ರಯತ್ನ ಮಾಡಿದ್ದಾರೆ. ಬಹುಮುಖಿ ದೃಷ್ಟಿಯಿಂದ ಅವುಗಳ ಆಶಯ ಕಾರ್ಯತತ್ಪರತೆಯನ್ನು ಪ್ರಾತ್ಯಕ್ಷೀಕರಿಸಲು ಪ್ರಯತ್ನಿಸಿದ್ದಾರೆ. ಜನಪದದಲ್ಲಿ ಜಾತಿ ಇಲ್ಲ ಅರ್ಥಾತ್ ತಾರತಮ್ಯ ಇಲ್ಲ. ಅಲ್ಲಿರುವುದು ಸಹಜ ಮಾನವೀಯ ಬದುಕು.. ಇದು  ಡಾ. ಹಿ.ಶಿ.ರಾಮಚಂದ್ರೇಗೌಡರ ಮುನ್ನುಡಿ ಬರಹ. –ಗೊರೂರು ಅನಂತರಾಜು, ಹಾಸನ.ಮೊ:೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ. 

“ಅಕ್ಷರ ಕೃಷಿಕ ಡಾ. ಬಿ.ಡಿ.ಕುಮಾರ್ ಅವರ ಕೃಷಿ ಬದುಕಿನ ಪಾಠ” ಗೊರೂರು ಅನಂತರಾಜು Read Post »

ಇತರೆ, ಲಹರಿ

“ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”  ಐಗೂರು ಮೋಹನ್ ದಾಸ್ ಜಿ.                    

ವಿಶೇಷ ಸಂಗಾತಿ ಐಗೂರು ಮೋಹನ್ ದಾಸ್ ಜಿ.                     “ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”   ದಾರಿ ದೀಪ :                                                               ಅವಳು…..!ಅವಳು…..! ಕೇವಲ ನನ್ನ ಗೆಳತಿ… ಪ್ರಾಣಸಖಿ ಮಾತ್ರವಾಗಿರಲಿಲ್ಲ….! ಆ ಪ್ರಿಯಾ ನನ್ನ ದಾರಿ ದೀಪ ಸಹ ಆಗಿದ್ದಳು….! ದಾರಿ ತಪ್ಪಿ ಹೆಜ್ಜೆ ಹಾಕುವ ವೇಳೆ ಎಲ್ಲಾ ಎಚ್ಚರಿಕೆಯ ‘ ಗಂಟೆ’ ಬಾರಿಸಿ ನನ್ನನ್ನು ಎಚ್ಚರಿಸುತ್ತಿದ್ದಳು..!ಹೆಚ್ಚಿನ ಮಾತುಕತೆ ಇಲ್ಲಾದೇ ಇದ್ದರೂ, ‘ಮೋರಿ ಕಟ್ಟೆ’ಯ ಮೇಲೆ ಕುಳಿತುಕೊಂಡ ವೇಳೆ, ನನ್ನ ಮುಖ ನೋಡಿ ಹೇಳುತ್ತಿದ್ದ ಎಲ್ಲಾ ‘ಭವಿಷ್ಯ’ಗಳು ಸತ್ಯವಾಗುತ್ತಿತ್ತು…! ಆದರೂ ನಾನು ಅವಳನ್ನು ನಂಬಲಿಲ್ಲ…!ನಾನು ನನ್ನ ಲೋಕದಲ್ಲಿಯೇ ಮುಳುಗಿ ಬಿಟ್ಟೆ….!!   .                                   ದಿನ… ವಾರ… ತಿಂಗಳು…. ವಷ೯…. ಎಂದು ಸಮಯ ಸಾಗಿದ್ದು ನನಗೆ ತಿಳಿಯಲೇ ಇಲ್ಲ…! ಏಕೆಂದರೆ ನಾನು ‘ಗಂಟೆ’ ನೋಡಿ ಕೆಲಸ ಮಾಡುವ ವ್ಯಕ್ತಿವಾಗಿರುವುದಿಲ್ಲ…! ಕೆಲಸ ಮುಗಿಸಿ ಗಂಟೆ      ನೋಡುವ ಪಾಳು ಜನ್ಮ….! ಕಾಲಿಗೆ ಹಾಕಿಕೊಂಡಿರುವ ಚಪ್ಪಲಿ ಸವೆದು ಹೋಗುತ್ತಿದ್ದರೂ, ಮನದಲ್ಲಿ ಕಂಡ ಕನಸುಗಳನ್ನು ನನಸು ಮಾಡುಲು ಓಡುತ್ತಿರುವ ಬ್ರೇಕ್ ಇಲ್ಲಾದ ಗಾಡಿ….!                                                                 ಈ ವೇಳೆಗೆ ಪ್ರಿಯಾ ನನ್ನ ಬಾಳಿನಿಂದ ದೂರವಾಗಿ ಬಿಟ್ಟಳು…! ನಾನು ಸಾಗುತ್ತಿದ್ದ ಹಾದಿಯಲ್ಲಿ ಬೆಳಕು ಇರಲಿಲ್ಲ…!ಹಗಲು ಕಂಡ ಬಾವಿಯಲ್ಲಿಯೇ ರಾತ್ರಿ ಬೀಳುತ್ತಿದ್ದೆ…! ಆದರೂ ನನಗೆ ಬುದ್ಧಿ ಬರುತ್ತಿರಲಿಲ್ಲ…! ನನ್ನ ದಡ್ಡ ಕೆಲಸಗಳಿಂದ ಬಹು ಬೇಗಾನೆ ‘ಪೆದ್ದ ಶಿಖಾಮಣಿ’ ಎಂಬ ಬಿರುದು ನನಗೆ ಸಿಕ್ಕಿ ಬಿಟ್ಟಿತ್ತು…!ನಾನು ಮತ್ತು ಪ್ರಿಯಾ ನಡುವೆ ಯಾವುದೇ ಭೇಟಿ ಮತ್ತು ಮಾತುಕತೆ ಇಲ್ಲಾದಿದ್ದರೂ ಕೆಲ ದಿನಗಳಿಂದ ಕನಸಿನಲ್ಲಿ ಬಂದು, ಕೆಲ ನೀತಿ ಕಥೆಗಳನ್ನು ಹೇಳುತ್ತಾ, ನನಗೆ ಜ್ಞಾನೋದಯವಾಗಲು ಪ್ರಯತ್ನ ಮಾಡುತ್ತಿದ್ದಳು….!                                                ನಾವು ಯಾವುದೇ ಮಂದಿಯನ್ನು ಈ ಭೂಮಿಯಲ್ಲಿ  ಕಣ್ಣು ಮುಚ್ಚಿ ನಂಬಬಾರದು…!ನಮ್ಮ ‘ ನಂಬಿಕೆ’ಯೂ ರಾಜಕೀಯ ಪಕ್ಷಗಳ ಆಶ್ವಾಸನೆಗಳಂತೆ ಢಮಾರ್ ವಾಗ   ಬಹುದು…! ಆಗ ಸುಮ್ಮನೆ ದುಃಖಿಸಿ ಪ್ರಯೋಜನ ಇಲ್ಲ…! ಕೆಲವೊಂದು ವಿಚಾರಗಳಲ್ಲಿ ನಮ್ಮ ಕಣ್ಣುಗಳನ್ನು ಸಹ ನಂಬು ವಂತೆ ಇಲ್ಲ….! ಈ ವಿಚಾರ ಕುರಿತು ಒಂದು ಕಥೆಯನ್ನು ಪ್ರಿಯಾ ನನಗೆ ಕೆಲ ದಿನಗಳ ಹಿಂದೆ ಹೇಳಿದ್ದಳು…! ಆ ಕಥೆ ಈಗ ನಿಮಗಾಗಿ…. !!        ಒಂದು ಏಡಿ ಸಮುದ್ರ ತೀರದ ಮರಳಿನಲ್ಲಿ ಹೆಜ್ಜೆ ಹಾಕುತ್ತಿತ್ತು…. ಸುಮಾರು ದೂರ ಸಾಗಿದ ಮೇಲೆ ಏಡಿ ಒಮ್ಮೆ ತಿರುಗಿ ನೋಡಿದಾಗ, ಮರಳಿನಲ್ಲಿ ತನ್ನ ಕಾಲಿನ ಗುರುತುಗಳಿಂದ ರಚನೆಯಾಗಿರುವ ‘ಕಲಾಕೃತಿ’ಯನ್ನು ನೋಡಿ ಮನಸ್ಸಿಗೆ ಬಹಳ ಖುಷಿ ಮತ್ತು ಹೆಮ್ಮೆ ಎನ್ನಿಸಿತ್ತು..! ತಾನು ಒವ೯ ‘ಕಲಾವಿದ ‘ ಎಂದು ಏಡಿ ಭಾವಿಸಿತ್ತು…! ಆದರೆ ಈ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ..!ಏಕೆಂದರೆ ದೊಡ್ಡ ಸಮುದ್ರ ಅಲೆಯೊಂದು ಅಪ್ಪಳಿಸಿ , ಈ ಏಡಿಯ ಸುಂದರವಾದ ಹೆಜ್ಜೆ ಗುರುತುಗಳ ಕಲಾಕೃತಿಯನ್ನು ಮಾಯ ಮಾಡಿಯೇ ಬಿಟ್ಟಿತ್ತು…!ಆಗ ಏಡಿಯೂ ಬಹಳ ಮನನೊಂದು ಸಮುದ್ರದ ಬಳಿ ಕೇಳಿಯೇ ಬಿಟ್ಟಿತ್ತು.     “ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೆ…. ನಾನು ನಿನಗೆ ಯಾವುದೇ ದ್ರೋಹಗಳನ್ನು ಮಾಡಿಯೇ ಇಲ್ಲ….! ನೀನು ಇಂತಹ   ‘ಅನ್ಯಾಯ’ವನ್ನು, ನನಗೆ ಮಾಡಬಹುದು   ಎಂದು ಮನಸ್ಸಿನಲ್ಲಿ ಒಮ್ಮೆಯೂ ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ.. ಆದರೆ ನನ್ನ ಕಲಾಕೃತಿಗಳನ್ನು ನೋಡಿ ನಿನಗೆ ‘ಅಸೂಯೆ’ ಬರಲು ಕಾರಣ ಏನು….?”.     ಆಗ ಸಮುದ್ರ ನಗುತ್ತಾ ಸರ್ವ ಪ್ರಶ್ನೆಗಳಿಗೂ ಶಾಂತವಾಗಿ ಉತ್ತರಿಸ ತೊಡಗಿತ್ತು…!     “ನೀನು ನನ್ನನ್ನು ತಪ್ಪಾಗಿ ತಿಳಿದುಕೊಂಡಿರುವೆ…. ನನಗೆ ನಿನ್ನ ಮೇಲೆ ಯಾವುದೇ ಅಸೂಯೆ- ಕೋಪ ಇಲ್ಲ..! ನೀನು ಮರಳಿನಲ್ಲಿ ನಿನ್ನ ಕಾಲುಗಳಿಂದ ರಚಿಸಿರುವ ಕಲಾಕೃತಿಯನ್ನು ನೋಡಿ, ಬೇರೆಯೊಂದು ಪ್ರಾಣಿ ನಿನ್ನನ್ನು ಹಿಡಿದು, ತಿಂದು ಮುಗಿಸಲು ಬರುವುದನ್ನು ನೋಡಿ, ನಿನ್ನ ಹೆಜ್ಜೆ ಗುರುತುಗಳನ್ನ ಅಳಿಸಿ, ನಿನ್ನ ಜೀವವನ್ನು ಉಳಿಸಿದೆ ಅಷ್ಟೇ…!” ಎಂದು ಸಮುದ್ರ ಹೇಳಿದನ್ನು ಕೇಳಿದಾಗ, ಏಡಿಗೆ ತನ್ನ ಅಜ್ಞಾನ ಮತ್ತು ತಪ್ಪಿನ ಅರಿವು ತಿಳಿಯಿತ್ತು… ಕೃತಜ್ಞತೆ ಭಾವದಿಂದ ಏಡಿಯೂ ಸಮುದ್ರಕ್ಕೆ ಕೈ ಮುಗಿದು ಮುಂದಕ್ಕೆ ಸಾಗಿತ್ತು…!  ಈ ಭೂಮಿಯಲ್ಲಿ ಬದುಕು ಸಾಗಿಸುತ್ತಿರುವ ಪ್ರತಿಯೊಂದು ಜೀವಿಗಳಿಗೂ ಒಂದು ‘ನಗ್ನ ಸತ್ಯ’ ಗೊತ್ತಿರಲೇಬೇಕು….!      “ನಮ್ಮ ಕಣ್ಣುಗಳು ಕಾಣುವುದು ಎಲ್ಲಾ ಸತ್ಯವಾಗಿರುವುದಿಲ್ಲ…..! ಸತ್ಯವಾಗಿರುವುದು ಎಲ್ಲಾ ಕಾಣುವುದು ಸಹ ಇಲ್ಲ….!!!.”. ಐಗೂರು ಮೋಹನ್ ದಾಸ್ ಜಿ.                             

“ಈ ಜಗತ್ತಿನಲ್ಲಿ ಸತ್ಯ ಗೋಚರಿಸುವುದಿಲ್ಲ……!”  ಐಗೂರು ಮೋಹನ್ ದಾಸ್ ಜಿ.                     Read Post »

You cannot copy content of this page

Scroll to Top