ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು

ಮಕ್ಕಳ ಸಂಗಾತಿ ಡಾ. ಮಮತ, ಶಿಕ್ಷಕರು, ಅನೇಕಮ್‌ ಬೆಂಗಳೂರು “ಅನೇಕಮ್‌ ಶಾಲೆಯ ಮಕ್ಕಳು ಬರೆದ ಕನ್ನಡ ಬರಹಗಳು” ಮರದ ಮಹತ್ವ ಒಂದು ಹಳ್ಳಿಯಲ್ಲಿ ಅನಿಕೇತ್ ಎಂಬ ಬಾಲಕನಿದ್ದನು. ಅವನು ಪ್ರತಿದಿನ ಶಾಲೆಗೆ ಹೋಗುವಾಗ ಒಂದು ದೊಡ್ಡ ಮಾವಿನ ಮರದ ಕೆಳಗೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಿದ್ದನು. ಒಂದು ದಿನ ಆ ಮರದ ಕೆಳಗೆ ಒಂದು ಚಿಕ್ಕ ಗಿಡ ಒಣಗುತ್ತಿರುವುದನ್ನು ಅವನು ಗಮನಿಸಿದನು. ಅದನ್ನು ಕಂಡ ಅನಿಕೇತ್‌ಗೆ ತುಂಬಾ ಬೇಸರವಾಯಿತು. ಆ ದಿನದಿಂದ ಪ್ರತಿದಿನ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಹಿಂದಿರುಗುವಾಗ ಆ ಗಿಡಕ್ಕೆ ನೀರು ಹಾಕಿ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದನು. ಕೆಲವು ವಾರಗಳ ನಂತರ ಆ ಗಿಡ ಹಸಿರಾಗಿ ಬೆಳೆದು ದೊಡ್ಡ ಮರವಾಯಿತು. ಅದರ ನೆರಳಿನಲ್ಲಿ ಪಕ್ಷಿಗಳು ಗೂಡು ಕಟ್ಟಿದವು. ದಾರಿಹೋಕರು ಅದರ ತಂಪಾದ ನೆರಳಿನಲ್ಲಿ ವಿಶ್ರಾಂತಿ ಪಡೆಯತೊಡಗಿದರು. ಒಂದು ದಿನ ಪಂಚಾಯಿತಿಯವರು ರಸ್ತೆ ವಿಸ್ತರಣೆಗಾಗಿ ಆ ಮರವನ್ನು ಕಡಿಯಲು ಬಂದರು. ಆಗ ಊರಿನ ಜನರು ಆ ಮರದ ಮಹತ್ವವನ್ನು ತಿಳಿಸಿ, ಅದನ್ನು ಕಡಿಯಬಾರದೆಂದು ಮನವಿ ಮಾಡಿದರು. ಜನರ ಮನವಿಯನ್ನು ಗೌರವಿಸಿದ ಪಂಚಾಯಿತಿಯವರು ಮರವನ್ನು ಉಳಿಸಲು ನಿರ್ಧರಿಸಿದರು. ಈ ವಿಷಯವನ್ನು ತಿಳಿದ ಅನಿಕೇತ್ ತುಂಬಾ ಸಂತೋಷಪಟ್ಟನು. ತಾನು ಪ್ರೀತಿಯಿಂದ ಬೆಳೆಸಿದ ಗಿಡ ಇಂದು ದೊಡ್ಡ ಮರವಾಗಿ ಅನೇಕರಿಗೆ ನೆರಳು, ಆಶ್ರಯ ಮತ್ತು ಸಂತೋಷ ನೀಡುತ್ತಿರುವುದನ್ನು ಕಂಡು ಹೆಮ್ಮೆಪಟ್ಟನು. ಆಗಿನಿಂದ ಅವನು ಇನ್ನೂ ಹೆಚ್ಚು ಮರಗಳನ್ನು ನೆಡುವ ಸಂಕಲ್ಪ ಮಾಡಿದರು. ನೀತಿ: ಒಂದು ಮರ ನೂರಾರು ಜೀವಗಳಿಗೆ ಆಸರೆಯಾಗುತ್ತದೆ. ಆದ್ದರಿಂದ ಮರಗಳನ್ನು ನೆಟ್ಟು, ಬೆಳೆಸಿ, ಕಾಪಾಡೋಣ .ಮೋನಿಶ್7 ನೇ ತರಗತಿಅನೇಕಮ್ ಶಾಲೆಬೆಂಗಳೂರು ಹಸಿರು ಲೋಕದ ಸಿರಿ ನನಗೆ ಪ್ರಕೃತಿ ತುಂಬಾ ಇಷ್ಟ. ಬೆಳಿಗ್ಗೆ ಪಕ್ಷಿಗಳ ಚಿಲಿಪಿಲಿ, ಹಸಿರು ಮರಗಳು, ಬಣ್ಣ ಬಣ್ಣದ ಹೂಗಳು ಮತ್ತು ತಂಪಾದ ಗಾಳಿ ನನಗೆ ತುಂಬಾ ಸಂತೋಷವನ್ನು ನೀಡುತ್ತವೆ. ಪ್ರಕೃತಿಯ ಸೌಂದರ್ಯ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಮರಗಳು ನಮಗೆ ಶುದ್ಧ ಗಾಳಿಯನ್ನು ನೀಡುತ್ತವೆ. ನದಿಗಳು, ಕೆರೆಗಳು ಮತ್ತು ಮಳೆಯ ನೀರು ನಮ್ಮ ಜೀವನಕ್ಕೆ ಆಧಾರವಾಗಿವೆ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಔಷಧೀಯ ಸಸ್ಯಗಳು ಪ್ರಕೃತಿಯ ಅಮೂಲ್ಯ ಕೊಡುಗೆಗಳಾಗಿವೆ. ಪ್ರಕೃತಿ ನಮಗೆ ಶುದ್ಧ ಗಾಳಿ, ನೀರು ಮತ್ತು ಆಹಾರವನ್ನು ನೀಡುತ್ತದೆ. ಆದ್ದರಿಂದ ನಾವು ಪ್ರಕೃತಿಯನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದೆ. ನಾನೂ ಮರಗಳನ್ನು ನೆಡುತ್ತೇನೆ. ನೀರನ್ನು ವ್ಯರ್ಥ ಮಾಡದೆ ಮಿತವಾಗಿ ಬಳಸುತ್ತೇನೆ. ನನ್ನ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತೇನೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತೇನೆ. ಇತರರಿಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತೇನೆ. ಪ್ರಕೃತಿಯನ್ನು ಪ್ರೀತಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ಚೆನ್ನಾಗಿದ್ದರೆ ನಮ್ಮ ಜೀವನವೂ ಆರೋಗ್ಯಕರ, ಸುಂದರ ಮತ್ತು ಸಂತೋಷಕರವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರವನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸಬೇಕು. ನೀತಿ: ಪ್ರಕೃತಿಯನ್ನು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಜೀವಿತ8 ನೇ ತರಗತಿಅನೇಕಮ್ ಶಾಲೆಬೆಂಗಳೂರು ಜವಾಬ್ದಾರಿಯ ಮಹತ್ವ ಶಾಂತಿನಗರ ಎಂಬ ಊರಿನಲ್ಲಿ ಒಂದು ಕುಟುಂಬ ವಾಸಿಸುತ್ತಿತ್ತು. ಆ ಕುಟುಂಬದಲ್ಲಿ ಒಬ್ಬ ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು. ಆ ಇಬ್ಬರು ಮಕ್ಕಳ ಹೆಸರು ಪ್ರಿಯಾ ಮತ್ತು ಶ್ವೇತ. ಅವರು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಕೆಲಸಕ್ಕೆ ಹೋಗುತ್ತಿದ್ದರು. ಅಜ್ಜಿ ಮನೆ ಕೆಲಸದ ಜೊತೆಗೆ ಕೈತೋಟದ ಕೆಲಸವನ್ನೂ ಮಾಡುತ್ತಿದ್ದರು. ಒಂದು ದಿನ ಅಜ್ಜಿ ತಾನು ಸಂಪಾದಿಸಿದ ಹಣದಿಂದ ಮಕ್ಕಳೊಂದಿಗೆ ಸಂತೆಗೆ ಹೋದರು. ಅಜ್ಜಿ ಇಬ್ಬರಿಗೂ ತಲಾ ೫೦೦ ರೂಪಾಯಿ ನೀಡಿ, ಮನೆಯ ದಿನಸಿ ಸಾಮಾನುಗಳನ್ನು ತಂದುಕೊಡಲು ಹೇಳಿದರು. ಪ್ರಿಯಾ ಅಜ್ಜಿ ಹೇಳಿದಂತೆ ಬೇಕಾದ ಎಲ್ಲಾ ದಿನಸಿ ಸಾಮಾನುಗಳನ್ನು ಖರೀದಿಸಿ ಮನೆಗೆ ತಂದಳು. ಆದರೆ ಶ್ವೇತ ಅಜ್ಜಿ ಹೇಳಿದ ವಸ್ತುಗಳನ್ನು ತರದೆ, ತನ್ನ ಇಷ್ಟದ ವಸ್ತುಗಳನ್ನು ಖರೀದಿಸಿಕೊಂಡು ಬಂದಳು. ಇದನ್ನು ಕಂಡ ಅಜ್ಜಿಗೆ ತುಂಬಾ ದುಃಖವಾಯಿತು. ಆ ರಾತ್ರಿ ಅಜ್ಜಿ ಮತ್ತು ಪ್ರಿಯಾ ಸೇರಿ ಶ್ವೇತಳಿಗೆ ಹಣದ ಮೌಲ್ಯ ಹಾಗೂ ಜವಾಬ್ದಾರಿಯ ಮಹತ್ವವನ್ನು ತಿಳಿಸಿ ಬುದ್ಧಿ ಹೇಳಿದರು. ಮುಂದಿನ ಬಾರಿ ಸಂತೆಗೆ ಹೋದಾಗ ಅಜ್ಜಿ ಶ್ವೇತಳಿಗೆ ಸ್ವಲ್ಪ ಹಣ ನೀಡಿ ಅಗತ್ಯವಿರುವ ವಸ್ತುಗಳನ್ನು ಮಾತ್ರ ಖರೀದಿಸಲು ಹೇಳಿದರು. ಆಗ ಶ್ವೇತ ತನ್ನ ತಪ್ಪನ್ನು ಅರಿತುಕೊಂಡಳು. ಅಜ್ಜಿಯ ಬಳಿ ಕ್ಷಮೆ ಕೇಳಿ, ಇನ್ನು ಮುಂದೆ ಹಣವನ್ನು ಜಾಗರೂಕತೆಯಿಂದ ಬಳಸುವುದಾಗಿ ಮಾತು ಕೊಟ್ಟಳು. ನೀತಿ: ಹಣವನ್ನು ಜವಾಬ್ದಾರಿಯಿಂದ ಬಳಸಬೇಕು ಮತ್ತು ಹಿರಿಯರ ಮಾತನ್ನು ಗೌರವಿಸಬೇಕು. ಕವನ7 ನೇ ತರಗತಿಅನೇಕಮ್ ಶಾಲೆಬೆಂಗಳೂರು ನಮ್ಮೂರ ಕೆರೆ ಸುತ್ತಮುತ್ತಲಿನ ಊರುಗಳಲ್ಲಿ ಮುತ್ತಿನಂತಿರುವುದು ನಮ್ಮೂರಿನ ಕೆರೆ. ಕೆರೆಯ ಸುತ್ತಲೂ ಹಸಿರಿನಿಂದ ಕಂಗೊಳಿಸುವ ಮರಗಳ ಸಾಲು. ಒಂದೊಂದು ಮರದಲ್ಲಿ ಹತ್ತಾರು ಗೂಡುಗಳು, ಪ್ರತಿಯೊಂದು ಗೂಡಿನಲ್ಲಿ ನೂರಾರು ಹಕ್ಕಿಗಳ ಕಲರವ. ಬೆಳ್ಳಿಯ ತಟ್ಟೆಯಂತೆ ಹೊಳೆಯುವ ನೀರು, ಮಿಂಚಿನ ಬಳ್ಳಿಯಂತೆ ತಲತಲ ಹೊಳೆಯುವ ಮೀನುಗಳು, ಕಪ್ಪೆಗಳ ಟರ್ರ್-ಟರ್ರ್ ಧ್ವನಿ – ಇವೆಲ್ಲವೂ ಕೆರೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕೆರೆಯ ಸುತ್ತ ಮೇವು, ಗಿಡಗಂಟಿಗಳು, ದನ-ಕರುಗಳಿಗೆ ಆಹಾರ, ಗಾಳಿಗೆ ತಲೆಯಾಡಿಸುವ ಹಸಿರು ಹುಲ್ಲು – ಇವೆಲ್ಲವೂ ಪ್ರಕೃತಿಯ ಸೊಬಗನ್ನು ಹೆಚ್ಚಿಸುತ್ತವೆ. ಆದರೆ ಕಾಲಕ್ರಮೇಣ ಕಾರ್ಖಾನೆಗಳ ತ್ಯಾಜ್ಯ, ಕೊಳಚೆ ನೀರು ಮತ್ತು ಪ್ಲಾಸ್ಟಿಕ್ ಕಸ ಕೆರೆಯಲ್ಲಿ ಸೇರಿ ನೀರು ಕಲುಷಿತವಾಯಿತು. ಕೆರೆ ಬತ್ತಿ, ಬಿರುಕು ಬಿಟ್ಟಿತು. ಇದನ್ನು ಕಂಡ ಊರಿನ ಜನರೆಲ್ಲ ಸಭೆ ಸೇರಿ ಕೆರೆಯನ್ನು ಉಳಿಸಲು ನಿರ್ಧರಿಸಿದರು. ಕಾರ್ಖಾನೆಗಳ ಕಲುಷಿತ ನೀರನ್ನು ಕೆರೆಗೆ ಬಿಡದಂತೆ ಕ್ರಮ ಕೈಗೊಂಡರು. ಪ್ಲಾಸ್ಟಿಕ್ ಬಳಕೆಗೆ ವಿದಾಯ ಹೇಳಿದರು. ಎಲ್ಲರೂ ಸೇರಿ ಕೆರೆಯನ್ನು ಸ್ವಚ್ಛಗೊಳಿಸಿ, ಮರಗಳನ್ನು ನೆಟ್ಟರು. ಕೆಲವೇ ದಿನಗಳಲ್ಲಿ ಕೆರೆ ಮತ್ತೆ ನೀರಿನಿಂದ ತುಂಬಿತು. ಹಸಿರು ಮರಗಳಲ್ಲಿ ಹಕ್ಕಿಗಳ ಹಾಡು ಮತ್ತೆ ಮೊಳಗತೊಡಗಿತು. ನೀತಿ:ನೀರು ಜೀವದ ಮೂಲ. ಪ್ರಕೃತಿಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ತಪ್ಪು ಮಾಡಿದವರು ನಾವೇ; ಅದನ್ನು ಸರಿಪಡಿಸುವ ಜವಾಬ್ದಾರಿಯೂ ನಮ್ಮದೇ. ತೇಜಸ್7ನೇ ತರಗತಿಅನೇಕಾಮ್ ಶಾಲೆಬೆಂಗಳೂರು. ಸ್ನೇಹದ ಪಯಣ ಆರನೇ ತರಗತಿಯಲ್ಲಿ ಅನು ಮತ್ತು ಮೀರಾ ಎಂಬ ಇಬ್ಬರು ಹುಡುಗಿಯರು ಮೊದಲ ಬಾರಿಗೆ ಭೇಟಿಯಾದರು. ಆರಂಭದಲ್ಲಿ ಅವರು ಒಬ್ಬರಿಗೊಬ್ಬರು ಪರಿಚಯವಿಲ್ಲದವರಾಗಿದ್ದರು. ಮೊದಲ ದಿನ ಸ್ವಲ್ಪ ನಾಚಿಕೆಪಟ್ಟು ಮಾತನಾಡಿದರೂ, ಕೆಲವೇ ದಿನಗಳಲ್ಲಿ ಉತ್ತಮ ಸ್ನೇಹಿತರಾದರು. ಅವರು ತರಗತಿಯಲ್ಲಿ ಓದಿನಲ್ಲಿ ಹಾಗೂ ಆಟಗಳಲ್ಲಿ ಆರೋಗ್ಯಕರ ಸ್ಪರ್ಧೆ ನಡೆಸುತ್ತಿದ್ದರು. ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡರು. ಕೆಲವೊಮ್ಮೆ ತಮಾಷೆ ಮಾಡುತ್ತಿದ್ದರು, ಶಿಕ್ಷಕರಿಂದ ಬೈಗುಳವೂ ತಿನ್ನುತ್ತಿದ್ದರು. ಅವರ ನಡುವಿನ ಸ್ಪರ್ಧೆ ಎಷ್ಟೇ ಗಟ್ಟಿಯಾಗಿದ್ದರೂ, ಅದರ ಹಿಂದೆ ಪ್ರೀತಿ ಮತ್ತು ಪರಸ್ಪರ ಗೌರವ ಅಡಗಿತ್ತು. ಶಾಲೆಯ ಅಂತಿಮ ವರ್ಷದ ವಾರ್ಷಿಕೋತ್ಸವದಲ್ಲಿ ಇಬ್ಬರೂ ಒಬ್ಬರ ಸಾಧನೆಯನ್ನು ಮತ್ತೊಬ್ಬರು ಹೃತ್ಪೂರ್ವಕವಾಗಿ ಸಂಭ್ರಮಿಸಿದರು. ಆ ಕ್ಷಣ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಏಳನೇ ತರಗತಿಯಲ್ಲಿ ಅವರ ಸ್ನೇಹ ಮತ್ತಷ್ಟು ಗಾಢವಾಯಿತು. ತಮ್ಮ ಸಂತೋಷ, ದುಃಖ, ಕನಸುಗಳು ಹಾಗೂ ರಹಸ್ಯಗಳನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಅಗತ್ಯವಿದ್ದಾಗ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಆದರೆ ಎಂಟನೇ ತರಗತಿಗೆ ಬಂದಾಗ ಪರಿಸ್ಥಿತಿ ಬದಲಾಯಿತು. ಮೀರಾಗೆ ಶಾಲೆ ಬದಲಾಯಿಸಬೇಕಾದ ಕಾರಣ ಇಬ್ಬರೂ ಬೇರ್ಪಡಬೇಕಾಯಿತು. ಆ ದಿನ ಇಬ್ಬರ ಕಣ್ಣಲ್ಲೂ ಕಣ್ಣೀರು ತುಂಬಿತ್ತು. ಆದರೂ ಅವರ ಸ್ನೇಹ ಅಲ್ಲಿಗೆ ಕೊನೆಗೊಳ್ಳಲಿಲ್ಲ. ಪ್ರತಿದಿನ ಸಂದೇಶಗಳು ಮತ್ತು ಮಾತುಕತೆಗಳ ಮೂಲಕ ಅವರು ತಮ್ಮ ಸ್ನೇಹವನ್ನು ಮುಂದುವರಿಸಿದರು. ವಯಸ್ಕರಾದ ಮೇಲೂ ಅವರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಜೀವನದ ಪ್ರತಿಯೊಂದು ಸಂತೋಷ, ದುಃಖ, ಗೆಲುವು, ಸೋಲು—ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಒಬ್ಬರಿಲ್ಲದೆ ಮತ್ತೊಬ್ಬರು ಇರಲಾರರು ಎಂಬಷ್ಟು ಆತ್ಮೀಯರಾಗಿದ್ದರು. ನೀತಿ:ನಿಜವಾದ ಸ್ನೇಹವು ಸ್ಪರ್ಧೆ, ದೂರ, ಕಾಲ ಮತ್ತು ಪರಿಸ್ಥಿತಿಗಳನ್ನೂ ಮೀರಿ ಸದಾ ಉಳಿಯುತ್ತದೆ. ಸತ್ಯ, ನಂಬಿಕೆ ಮತ್ತು ಪರಸ್ಪರ ಗೌರವದ ಮೇಲೆ ಕಟ್ಟಿದ ಸ್ನೇಹವೇ ಜೀವನದ ಅಮೂಲ್ಯ ಸಂಪತ್ತು. ಅರ್ಷಿಯಾ8ನೇ ತರಗತಿಅನೇಕಾಮ್ ಶಾಲೆಬೆಂಗಳೂರು ಅನೇಕಮ್‌ ಶಾಲೆ

“ಅನೇಕಮ್‌ ಶಾಲೆಯಮಕ್ಕಳು ಬರೆದ ಕನ್ನಡ ಬರಹಗಳು”ಡಾ. ಮಮತ, ಶಿಕ್ಷಕರು,ಅನೇಕಮ್‌ ಬೆಂಗಳೂರು Read Post »

ಇತರೆ

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ.

ಹಾಸ್ಯ ಸಂಗಾತಿ ಗೊರೂರು ಅನಂತರಾಜು ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಬೋರನಿಗೆ ಹುಟ್ಟೂರುನಾಯಕರಹಳ್ಳಿಯಲ್ಲಿ  ಒಬ್ಬನೇ ಕುಂತು ತುಂಬಾ ಬೋರಾಗಿತ್ತು. ಅವನ ಗೆಳೆಯರೆಲ್ಲಾ  ಕೆಟ್ಟು ಪಟ್ಟಣ ಸೇರಿದ್ರು. ಇವನು ಮಾತ್ರ ಒಳ್ಳೆಯವನಾಗೇ ಹಳ್ಳಿಯಲ್ಲಿ ಉಳಿದುಬಿಟ್ಟಿದ್ದ. ಮನೆಗೆ ಸುಣ್ಣ ಬಣ್ಣ ಹೊಡೆಸಿ ಬಹಳ ದಿನ ಆಗಿತ್ತು. ಇಟ್ಟಿಗೆ.ಸಿಮೆಂಟ್,ಸಕಲೇಶಪುರದ ನಾಟಿ ಮರಳು ಇಲ್ಲದೇ ಇವರಪ್ಪ ಕೆಂಚ ಜೇಡಿ ಮಣ್ಣಲ್ಲೇ ಗೋಡೆ ಕಟ್ಟಿ, ಆರ್‌ಸಿಸಿ ಶೀಟ್ ಹೊದಿಸಿ ಲಲಿತ ಮಹಲ್ ಕಟ್ಟಿದ್ದ. ಅಪ್ಪ ಸತ್ತು ಇಪ್ಪತ್ತು ವರ್ಷ ಆಗಿತ್ತು. ಸತ್ತು ಹನ್ನೊಂದನೇ ದಿನಕ್ಕೆ ಹೊಡೆಸಿದ್ದು ಸುಣ್ಣ ಬಣ್ಣ. ಅವತ್ತು ಪುಣ್ಯ ಮಾಡಿಸ್ಕೊಂಡಿದ್ದ ಪುಣ್ಯಾತ್ಮ ಇವತ್ತಿನವರೆಗೂ ಗೋಡೆಗೆ ಸುಣ್ಣ ಬಣ್ಣ ಹೊಡೆಸಿರಲಿಲ್ಲ, ಆ ಜೇಡಿಮಣ್ಣಿನ  ಗೋಡೆ ಜಡಿಮಳೆಗೆ ಬಿರುಕು ಬಿಟ್ಟಿದ್ದು ತಿಗಣೆ, ಜಿರಲೆಸೇರ್ಕೊಂಡು ಬೋರನಿಗೆ ಬಹಳ ಕಾಟ ಕೊಡ್ತಿದ್ವು. ಹಗಲು ಹೊತ್ತಿನಲ್ಲಿ ಜಿರಲೆ ಕಾಟ. ರಾತ್ರಿ ವೇಳೆ ತಿಗಣೆ ಕಾಟ. ಯಾರೋ ಹೆಲ್ತ್ ಇನ್ಸ್ ಪೆಕ್ಟರ್ ಮನೆ ಹತ್ರ ಬಂದು ಮನೆ ಮುಂದೆ ಚರಂಡಿ ನೀಟಾಗಿ ಮಡಿಕೊ ಬೋರ.  ಚರಂಡಿಯಲ್ಲಿ ನೀರು ನಿಂತ್ರೆ ಸೊಳ್ಳೆಗಳು ನೀರಲ್ಲಿ ಮೊಟ್ಟೆ ಇಡ್ತವೆ.  ಅವು ಮರಿಯಾಗಿ ಅಭಿವೃದ್ಧಿ ಹೊಂದಿ ರೆಕ್ಕೆ ಬೆಳೆದು ಹಾರಿ ಬಂದು ನಿನ್ನ ಕಚ್ತವೆ. ಅವು ನಿನ್ನ ಹಗಲು ಹೊತ್ತು ಕಡಿದ್ರೆ ಡೆಂಗ್ಯೂ ಜ್ವರ.  ರಾತ್ರಿ  ಕಡಿದ್ರೆ ಮಲೇರಿಯಾ ಅಂತ ತಿಳ್ಕೋ.  ಸೊಳ್ಳೆಯಲ್ಲೂ ಎರಡು ಜಾತಿ ಐತೆ.. ಅಂತ ಜಾತ್ಯಾತೀತ ಭಾಷಣ ಮಾಡುತ್ತಿರಲು‘”ಇನ್ಸ್ ಸ್ಪೆಕ್ಟ್ರೇ, ನೀವೇನೋ ಉದ್ದುದ್ದ ಭಾಷಣ ಮಾಡಿ ಜನ ಜಾಗೃತಿ ಮಾಡ್ತಿದ್ದಿರಿ ತುಂಬಾ ಥ್ಯಾಂಕ್ಸ್..  ಇವೆಲ್ಲಾ ಸೈನ್ಸ್  ಮಾತು ನನ್ನ ನೈಸ್ ರೋಡ್ ತಲೆಗೆ ಹತ್ತಕ್ಕಿಲ್ಲ. ಸದ್ಯ ನನ್ನ ತಲೇಲಿ ಹೇನು ಕಾಟ ತಪ್ಪಕ್ಕಿಲ್ಲ. ತಿಗಣಿಗೆ ಹೊಡಿಯೋ ಔಷಧಿ ತರಹ ಹೇನು  ನಾಶಕ್ಕೆ ಏನಾದ್ರು ಆಯಿಲ್ ಇದ್ರೇ ಹೇಳಿ. ನಾನು ಸ್ಟ್ರೇ ಮಾಡ್ಕೋತಿನಿ.. ಎನ್ನಲು ಹೆಲ್ತ್ ಇನ್ಸ್ ಸ್ಪೆಕ್ಟರ್ ದೂಸ್ರ ಮಾತ್ನಾ ಡದೆ ತಲೆ ಕೆರೆದುಕೊಂಡು ಹೆರಿಗೆ ಆಸ್ಪತ್ರೆ ಕಡೆಗೆ ಹೊಂಟೋಗಿದ್ರು. ಛೇ ಏನು ಮಾಡೋದು ಮನೆಯಲ್ಲಿ ಮಲಗೊಂಗಿಲ್ಲ. ಈ ಸೊಳ್ಳೆ, ಜಿರಳೆ, ತಿಗಣಿ ಕಾಟ. ಹಲ್ಲಿ ಲೊಚ ಲೊಚ ಶಕುನ ಜ್ಯೊತಿಷ್ಯ ಭಯ!  ಅದ್ಕೇ ಏನ್ ಮಾಡೊದು..? ರಾತ್ರಿಯೆಲ್ಲಾ ಕುಂತು ಯೋಚ್ನೇ ಮಾಡ್ದ. ಬೆಳಿಗ್ಗೆ   ಹೊತ್ಗೆ ಒಂದು ಪ್ಲಾನ್ ತಲೇಲಿ ಹೊಳಿತು. ಅದೇನು ಐದು ವರ್ಷದ ಪಂಚವಾರ್ಷಿಕ ಯೋಜನೆ ಅಲ್ಲಾ. ಐದು ದಿನಗಳಲ್ಲಿ ಮುಗಿಸಬಹುದಾದ ಯೋಜನೆ. ತನ್ನ ಪಾಲಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಬಂದಿದ್ದ ಐದು ಗುಂಟೆ ಜಮೀನಿನಲ್ಲಿ ಒಂದು ಎತ್ತರವಾಗಿ ಅಟ್ಟಣಿ ಕಟ್ಟಿ ರಾತ್ರಿ ಅಲ್ಲೆ ಮಲಗೋದು. ಇತ್ತ ರಾತ್ರಿ ಕಾಡು ಹಂದಿ ಹೊಲಕ್ಕೆ ನುಗ್ಗಿ ಫಸಲು ಹಾಳು ಮಾಡ್ಡಂಗೆಕಾಯ್ದಂಗೂ ಆಗ್ತದೆ. ಅತ್ತ ಜಿರಳೆ ಕಾಟನೂ ತಪ್ತದೆ. ಸೊಳ್ಳೆಗಳು ಕೂಡ ಅಷ್ಟು ಎತ್ತರಕ್ಕೆ ಹಾರೋದು ಡೌಟು ಅಂತ ಥಾಟ್ಸ್ ಮಾಡಿದ್ದ.ಮಾರನೇ ದಿನ ಬೆಳಿಗ್ಗೆ ಎದ್ದು ಲುಂಗಿ ಸೊಂಟಕ್ಕೆ ಬಿಗಿಯಾಗಿ ಸಿಗಿಸಿಕೊಂಡು ಹೊಳೆ ಕಡೆ ಹೊರಟ. ಬೋರ ಮನೆಯಲ್ಲೇ ಕುಂತುoಡು ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು. ಬಿಳಿ ಪಂಚೆ ಬೇಗ ಕೊಳೆ ಆಗ್ತದೆ ಅಂತ ಅಡ್ಡಡ್ಡ  ಗೆರೆ  ಇರೋ ಪಟೆಪಟೆ ಲುಂಗಿನ ಸಿ.ನಂಜಪ್ಪನ ಅಂಗಡಿಯಲ್ಲಿ ಖರೀದಿಸಿ ತಂದಿದ್ದ. ಅದು ಪಕ್ಕ ಕಾಟನ್ ಪೇಟೆ  ಕಾಟನ್ ಲುಂಗಿ. ಒಂದೇ ಒಗೆತಕ್ಕೆ ಸಿಂಕ್ ಆಗಿಬಿಡ್ತು.  ಇವ  ಹದಿನಾರು ಮೊಳದ ಲುಂಗಿತಗಳೊದು ಬಿಟ್ಟು ಹನ್ನೆರೆಡು ಮೊಳದ್ದು ತಗೊಂಡಿದ್ದ. ಅದೇ ಎಡವಟ್ಟಾಗಿತ್ತು. ಅದನ್ನು ಪೂರಾ ಸೊಂಟಕ್ಕೆ ಸುತ್ಕೊಂಡು ಹಿಂದ್ಗಡೆ ಕಟ್ಟಿಕೊಳ್ಳೊಕ್ಕೆ ಆಗ್ತಿರಲಿಲ್ಲ. ಹೀಗಾಗಿ ಆಗಾಗ್ಗೆ ಜಾರಿ ಹೋಗ್ತಿದ್ದ ಲುಂಗಿನ ಸಿಗಿಸಿಕೊಂಡು ಸಿಗಿಸಿಕೊಂಡು ಸುಸ್ತಾಗಿದ್ದ. ಇತ್ತ ಬೋರ ಬೆಳಿಗ್ಗೆ ಎದ್ದೇಟಿಗೆ ಹೊಳೆ ಹತ್ರ ಬರುತ್ತಿರಲು ಅತ್ತ ಊರಿನ ಹಿರಿಯ ಈರಯ್ಯ ಮೇಷ್ಟು ಹೊಳೆ ಬದಿಯ ಎಲ್ಲಾ ನಿತ್ಯಕರ್ಮ ಮುಗಿಸಿಕೊಂಡು ಟರ್ಕಿ ಟವಲ್ ನಲ್ಲಿ ಮುಖ ಒರಸ್ಕೊoಡು ಸೂರ್ಯ ದೇವರಿಗೆ ನಮಸ್ಕಾರ ಮಾಡ್ತಿದ್ರು,‘ ಏನ್ ಮೇಷ್ಟ್ರೇ, ನಮ್ಮ ಹೇಮಾವತಿ ಹೊಳೆಲಿ ಎಷ್ಟು ಟಿಎಂಸಿ ನೀರು ಐತೆ..?ಬೋರನ ಈ ತರಲೆ ಪ್ರಶ್ನೆಗೆ ಈರಯ್ಯ ಮೇಷ್ಟ್ರು ಏನ್ ತಾನೇ ಉತ್ತರ ಕೊಟ್ಟಾರು?“ಲೋ, ಬೋರ, ನಿನ್ಗೆ ತಿ.. ಮುಖ ತೊಳ್ಕೊಳಕ್ಕೆ ಎಷ್ಟು ನೀರು ಬೇಕು ಅಷ್ಟೇ ಐತೆ ಹೋಗ್ಲ.. ರಾಜ್ಯದ ಉಸಾಬರಿ ಎಲ್ಲಾ ನಿನಗ್ಯಾಕೆ.. ರಾಜಧಾನಿಯಲ್ಲಿ  ಇರೋ ನಮ್ಮ ಮಂತ್ರಿ ಮಾನ್ಯರು ಅದನ್ನು ನೋಡ್ಕೊತ್ತಾರೆ. ಅದ್ಕೆ ಅಂತ್ಲೇ ನಾವು  ಹೆಬ್ಬಟ್ಟು ಒತ್ತಿ ಓಟ್ ಹಾಕಿ ಗೆಲ್ಸಿ ಕಳಿಸಿಲ್ವಾ..“ಮೇಷ್ಟ್ರೇ, ನಾಳೇ ಬೆಂಗಳೂರಿಗೆ ಹೋಗೋಕೆ ನಮ್ಮ ಊರಿಂದ ಜನ ಎಲ್ಲಾ ಹೊಂಟೋರೆ. ನೀನು ಬಾರಲಾ ಬೋರ ಅಂತ ಆ ವೆಂಕಟಸ್ವಾಮಿ ಹೇಳ್ವನೆ. ನಾನೂ ಬೆಂಗಳೂರಿಗೆ ಹೋಗಿ ಬಹಳ ದಿನ ಆಯ್ತು.  ಈಗೇನೋ ಅದ್ನ ಮೆಗಾಸಿಟಿ ಮಾಡೋಕೆ ಹೊಂಟೊರಂತೆ..!‘ ನೀನ್ಗೆ ನರೇಗದಲ್ಲಿ ಏನೂ ಕೂಲಿ ಕೆಲಸ ಸಿಕ್ಕಿಲ್ಲ ಅಂದ್ರೇ ಬೆಂಗಳೂರಿಗೆ ಹೋಗಿ ಬಾ. ಹಾಗೇ ಬರ್ತಾ ತಮಿಳುನಾಡಿನ ಸಿಎಂ ನಟಿಸಿರೋ ಮೆಗಾ ಹಿಟ್ ಸಿನಿಮಾನೂ ನೋಡ್ಕೊಂಡು ಬಾ..‘ ಆಯ್ತು ಮೇಷ್ಟ್ರೇ, ನೀವು ಬನ್ನಿ ಆ ಸ್ಟ್ರೈಕ್ ನಲ್ಲಿ ನೀವು ವಸಿ ಎಂಟರ್ ಟೈನ್ ಮೆಂಟ್ ತಗೊಳಿರಂತೆ..‘ ನಮಗ್ಯಾಕ್ಲ ಬೋರ ಮನರಂಜನೆ. ಕಾಡು ಬಾ ಅಂತದೆ ಊರು ಹೋಗು ಅಂತದೆ.  ಈ ಊರಲ್ಲಿ ಹುಟ್ಟಿ ಇದನ್ನೇ ಜನ್ಮಭೂಮಿ ನಮ್ಮ ಕರ್ಮಭೂಮಿ ಅನ್ಕೊಂಡು ಕಾಲ ಹಾಕೋ ಮಂದಿ ನಾವು.ನಾನು  ಹುಡ್ಗುನಾಗಿದ್ದಾಗ ಕೂಲಿಮಠದ ಮೇಷ್ಟ್ರು ಹತ್ರ ನಾಲ್ಕು ಅಕ್ಷರ ಮರಳಲ್ಲಿ ಬರ್ದಿ ಕಲ್ತಿದ್ದೆ.  ಅದು ನನ್ಗೆ  ಈಗ ರಾಮಾಯಣ, ಮಹಾಭಾರತ, ಭಾಗವತ ಓದಿಕೊಳ್ಳೊಕೆ ನೆರವಾಗ್ತಿದೆ. ನಮ್ಮಪ್ಪ ಲಕ್ಷ್ಮೇಗೌಡ್ರುಸುತ್ತಮುತ್ತಲ ಊರಿಗೆ ಹೋಗಿ ಪೌರಾಣಿಕ ನಾಟಕ ಕಲಿಸ್ತಿದ್ರು.  ಅಪ್ಪ  ಬಿಟ್ಟು ಹೋಗಿದ್ದು ಅದೊಂದೆ ಹಳೇ ಹಾರ್ಮೊನಿಯಂ ಮತ್ತು ಮರದ  ಪೆಟ್ಟಿಗೆ. ಆಗೆಲ್ಲಾ ನಾನು ನಮ್ಮಪ್ಪನ ಜೊತೆ ನಾಟಕ ನೋಡೋಕೆ ಹಳ್ಳಿ ಹಳ್ಳಿಗೆ ಹೋಗ್ತ ಇದ್ದೆ.  ಅವರಿವರು ಸಮಯ ಸಂದರ್ಭ ಏನೇನೋ ಕಾರಣ ಹೇಳಿ ನಾಟಕದ ಪ್ರದರ್ಶನ ದಿನ ತಪ್ಪಿಸಿಕೊಂಡಾಗ ಆ ಪಾರ್ಟು ನಾನೇ ಮಾಡ್ತಿದ್ದೆ. ನಮ್ಮಪ್ಪ  ಹಾರ್ಮೋನಿಯಂ ನುಡಿಸ್ತಿದ್ದನ್ನೇ ನೋಡ್ಕೊಂಡು, ಮನೇಲಿ ಕುಂತು ಅಭ್ಯಾಸ ಮಾಡಿ ಅಂತೂ ಇಂತು ಹಾರ್ಮೋನಿಯಂ ಮೇಷ್ಟ್ರಾಗಿ ನಿಮ್ಮಂತಹ ಕಲಿಯುಗದ ನಾಟಕ ಕಲಿಯುವ ಊರ ಹುಡುಗರಿಗೆಲ್ಲಾ ನಾಟಕ ಕಲಿಸಿದೆ. ಅದ್ಕೆ ನೀವೆಲ್ಲಾ ನಾಟಕದ ಮೇಷ್ಟ್ರು ಅಂತ ಆಗ ನನ್ನನ್ನು ಕರಿತಿದ್ರಿ. ಈಗ ನನ್ಗೂ ವಯಸ್ಸಾಯ್ತು. ನೀವೆಲ್ಲಾ ನನ್ನ ಕೈ ಬಿಟ್ರಿ. ಅದ್ಕೇ ಈಗ ನಾನು ಬರೇ ಮೇಷ್ಟ್ರು ಆಗಿ ಉಳಿದಿದ್ದೀನಿ ಅಷ್ಟೇ..” ಬೇಜಾರು ಮಾಡ್ಕೋಬೇಡಿ ಮೇಷ್ಟೇ. ಹಳೇ ಮೇಷ್ಟ್ರು ರಿಟೈರ್ಡ್ ಆದ್ಮೇಲೆ ಹೊಸ ಮೇಷ್ಟ್ರು ಬರಬೇಕಲ್ವೇ.! ಹಂಗೆ ಈ ದೇಶದ ಪಾಲಿಟಿಕ್ಸ್ ನಲ್ಲಿ ಹಳೇ ಪಾರ್ಟಿಗಳೆಲ್ಲಾ ಟೆಂಟ್ ಸಿನಿಮಾಗಳಂತೆ ಪ್ಯಾಕಪ್ ಆಗ್ತಿವೆ.  ಈಗೇನೋ ಹೊಸದಾಗಿ ಜಿರಲೆ ಪಾರ್ಟಿ ಅಂತ ಜೋರಾಗಿ ಹವಾ ಹುಟ್ಟಾಕ್ತ  ಐತೆ..ನಾನು ಆ ಪಾರ್ಟಿ ಸೇರೋಣ ಅಂತ ಯೋಚ್ನೆ ಮಾಡಿವ್ನಿ..‘ಲೇ ತರಲೇ, ನಿಮ್ಮಂತಹ ಎಸ್.ಎಸ್.ಎಲ್.ಸಿ. ಫೇಲಾದ ಹುಡುಗರಿಗೆಲ್ಲಾ ಆ ಪಾರ್ಟಿಯಲ್ಲಿ ಸೀಟು ಸಿಕ್ಕಲ್ಲ ಹೋಗ್ಲಾ ನಿನ್ನ ಕೆಲಸ   ನೋಡ್ಕೋ. ಈ ಹಳ್ಳಿಯಲ್ಲಿ ನೀನು ಕಷ್ಟ ಪಟ್ಟು ದುಡಿಮೆ ಮಾಡಿ ನಿನ್ನ ಹೊಟ್ಟೆಪಾಡು ಹೇಗೋ ನಡಿತಾ ಐತೆ.  ನಾಳೆ ಬೆಂಗಳೂರಿಗೆ ನೀನು ಹೋಗಿ ಬಾ  ಬೇಡ ಅನ್ನಲ್ಲಾ. ಏನಾದ್ರೂ ವಿರೋಧ ಪಕ್ಷದವರು  ಐನೂರು ಸಾವಿರ ಕೊಟ್ರೇ ಹೋಗಿ ಬಾ. ನಿನಗೆ ನಷ್ಟ ಏನೂ ಆಗಲ್ಲ. ಪುಕ್ಸಟ್ಟೆ ಬಸ್ ಮಾಡವರೇ ಅಂತ ಮನೆ ಕೆಲಸ ಎಲ್ಲಾ ಬಿಟ್ಟು ಸಿಟಿಗೆ ಹೋಗಿ ಗಲಾಟೆ ಮಾಡಿ ಏಟು ತಿಂದು ಬರಬ್ಯಾಡ ದಡ್ಡ..ಎಂದು ಬಿಳಿ ಗಡ್ಡ ಕೆರೆದುಕೊಂಡರುಈರಯ್ಯ ಮೇಷ್ಟು. ” ನೀವು ಹೇಳೋ ಮಾತಿನಲ್ಲೂ ಸತ್ಯ ಐತೆ ಮೇಷ್ಟ್ರೇ. ನಾನೂ ಕೂಡ ನಮ್ಮ ಹೊಲದಲ್ಲಿ ಒಂದು  ಅಟ್ಟಣಿ ಕಟ್ಟಬೇಕು ಅಂತ ಇವತ್ತು ಬೆಳಿಗ್ಗೆ  ತಾನೇ ಯೋಚನೆ ಮಾಡಿವ್ನಿ. ನಾಳೆ ಬೆಂಗಳೂರು ಚಲೋ ಚಳುವಳಿಗೆ ನಾನು ಬರೊಲ್ಲಾ. ನಂಗೆ ಡೆಂಗ್ಯೂ ಜ್ವರ ಬಂದೈತೆ ಅಂತ ವೆಂಕಟಸ್ವಾಮಿಗೆ ಒಂದು ಸುಳ್ಳು ಹೇಳಿ ಸಾಗ ಹಾಕ್ತಿನಿ..” ಸರಿ, ಈಗ ಹೇಮಾವತಿ ಹೊಳೆಯಲ್ಲಿ ಇರೋ ಡೆಡ್ ಸ್ಟೊರೇಜ್ ವಾಟರ್ ನಲ್ಲಿ ಒಂದಿಷ್ಟು ಎಡದಂಡೆ ನಾಲೇಲಿ ನೀರು ಬಿಟ್ಟವರೇ.. ನಾಳೆ ಏನ್ ಮಾಡ್ತಾರೋ ಗೊತ್ತಿಲ್ಲ.  ಸಧ್ಯ ಈಗ ಹೇಮಾವತಿ  ಹೊಳೆಯಲ್ಲಿ ಹರಿತಿರೋ ಈ ಶುದ್ಧವಾದ ನೀರಲ್ಲಿ ಮುಖ ತೊಳ್ಕೊಂಡು ಆ ಆಕಾಶ  ದೇವನಿಗೆ ಮೋಡ ಕಟ್ಟಿ ಮಳೆ ಹುಯ್ಸಪ್ಪ ಅಂತ ಪ್ರಾರ್ಥನೆ ಮಾಡಿ,  ಮನೆಗೆ ಹೋಗಿ ಹೆಂಡ್ತಿ ಮೈನಾವತಿ ಮಾಡಿಟ್ಟಿರೋ ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ತಿಂದು ಗೊರೂರು  ಗ್ರಾಮ ಪಂಚಾಯ್ತಿ ಆಫೀಸ್ ಹತ್ರ ಹತ್ತು ಗಂಟೆ ಹೊತ್ತಿಗೆ  ಸರಿಯಾಗಿಬಾ. ಗೊರೂರು ಮಧ್ಯೆ ಹಾಯ್ದ ಹೋಗಿರುವ ಚಂಗರವಳ್ಳಿ ನಾಲೆಯಲ್ಲಿ  ಹೂಳು ತುಂಬಿಕೊಂಡೈತೆ. ಇದರಿಂದ ನಮ್ಮೂರ ತನಕ ನೀರು ಬರ್ತಿಲ್ಲಾ. ಆ ಹೊಳನ್ನೆಲ್ಲಾನರೇಗ ಸ್ಕಿಂ ನಲ್ಲಿ ಬಿಲ್ ಮಾಡಿ ತೆಗಿಸಿಬಿಡಪ್ಪ.  ಬೋರನಂತಹ ಹಳ್ಳಿಯಲ್ಲಿ ಉಳಿದಿರುವ ಶ್ರಮಿಕ ಕೂಲಿ ಕಾರ್ಮಿಕರ ಕೈಗೆ ಒಂದಿಷ್ಟು ಕೆಲಸ ಕೊಡಪ್ಪ   ಅಂತ ಹೊಸದಾಗಿ  ಅಪಾಯಿಂಟ್ ಆಗಿ ಬಂದಿರೋ ಪಿಡಿಯೋ ಸಾಹೇಬ್ರಿಗೆ ಹೇಳ್ತಿನಿ. ಪಾಪ ಆತ ನೀಟಾಗಿ  ಮನೇಲಿ ಕುಂತು  ಓದಿ ನೀಟ್ ಪರೀಕ್ಷೆ ಬರೆದು ಮುಂದೆ ಬಿಇ ಸಿವಿಲ್ ಇಂಜಿನಿಯರಿಂಗ್ ಪದವಿ ಮುಗಿಸಿ,  ಐಎಎಸ್, ಐಪಿಎಸ್, ಕೆಪಿಎಸ್ಸಿ ಪರೀಕ್ಷೆಗೆ ಅಂತೆಲ್ಲಾ ಓದ್ಕೊಂಡು   ಸದ್ಯಕ್ಕೆ ಈ ಪಿಡಿಓ ಉದ್ಯೋಗಕ್ಕೆ ಬಂದವ್ನೇ.  ಪುಣ್ಯಾತ್ಮ ತಾನು   Rank ಸ್ಕೂಡೆಂಟ್ ಅಂತ ಕೆಲಸ ಹುಡಿಕ್ಕೊಂಡು ವಿದೇಶಕ್ಕೆ ಹಾರಿ ಹೋಗಿಲ್ಲ.  ಹೊಸ ಮನುಷ್ಯ ಲಂಚದ ಆಮಿಷಕ್ಕೆ ಇನ್ನೂ ಬಗ್ಗಿಲ್ಲ.  ಮುಂದೆ ಎಲ್ಲಿ ಈ ಗುತ್ತಿಗೆದಾರರು ಆಮಿಷ ತೋರಿ ಏನು ಹಾಳು  ಮಾಡ್ತಾರೋ ಗೊತ್ತಿಲ್ಲ. ಇರಲಿ ಸಧ್ಯಕ್ಕಂತೂ ಆತ  ನಯ ವಿನಯ ಇರೋ ವ್ಯಕ್ತಿಯಾಗಿ  ಕಾಣ್ಸಿತ್ತಾವ್ನೆ..”  ಹೌದ ಮೇಷ್ಟ್ರೇ, ನೀವು ಹೇಳಿದ ಹೊತ್ತಿಗೆ ಸರಿಯಾಗಿ ಬರ್ತಿನಿ. ಕಡೆದಾಗಿ ಒಂದು ಪ್ರಶ್ನೆ. ಅದೇನೋ  ಹಳೇ ನರೇಗ  ಹೋಗಿ ಈಗ ಹೊಸದಾಗಿ..ರಾಗ ಎಳೆದ“ಹೋಗ್ಲ ಬೋರ.. ನಮ್ಮ  ಮಾತು ಹೀಗೆ ಕಂಬಿ ಇಲ್ಲದ ರೈಲಿನಂತೆ ಹೋಗ್ತ ಇದ್ರೇ ಡೆಡ್ ಲೈನ್ ಇರೊಲ್ಲ…—ಗೊರೂರು ಅನಂತರಾಜು,ಹುಣಸಿನಕೆರೆ ಬಡಾವಣಿ,29ನೇ ವಾರ್ಡ್, 3 ನೇ ಕ್ರಾಸ್,ಹಾಸನ.

ಬೋರನಿಗೆ  ಡೆಂಗ್ಯೂ ಜ್ವರ ಬೆಂಗಳೂರಿಗೆ ಬರೊಲ್ಲಾ…! ಹಾಸ್ಯ ಬರಹ, ಗೊರೂರು ಅನಂತರಾಜು, ಹಾಸನ. Read Post »

ಇತರೆ, ಜೀವನ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ

ವಿಶೇಷ ಸಂಗಾತಿ ಜಯಶ್ರೀ. ಜೆ. ಅಬ್ಬಿಗೇರಿ “ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ಒಂದು ಹಳ್ಳಿಯಲ್ಲಿ ಸೋಮಣ್ಣ ಎಂಬ ಒಬ್ಬ ಕೃಷಿಕನಿದ್ದನು. ಅವನು ತುಂಬಾ ದಯಾಳುವಾಗಿದ್ದರೂ, ಅತಿಯಾದ ಸೋಮಾರಿಯಾಗಿದ್ದನು. “ನಾಳೆ ಮಾಡೋಣ ಬಿಡು” ಎಂದು ಪ್ರತಿಯೊಂದು ಕೆಲಸವನ್ನೂ ಮುಂದೂಡುವುದು ಅವನ ಹವ್ಯಾಸವಾಗಿತ್ತು.ಒಂದು ದಿನ ಅವನ ಹಳ್ಳಿಗೆ ಒಬ್ಬ ಸಾಧು ಬಂದರು. ಸೋಮಣ್ಣನ ಬಡತನ ಮತ್ತು ಸೋಮಾರಿತನವನ್ನು ಕಂಡು ಅವರಿಗೆ ಮರುಕ ಉಂಟಾಯಿತು. ಸಾಧುಗಳು ಅವನಿಗೆ ಒಂದು ಕಪ್ಪಾದ ವಿಚಿತ್ರ ಕಲ್ಲನ್ನು ನೀಡಿ ಹೀಗೆ ಹೇಳಿದರು, “ಸೋಮಣ್ಣ, ಇದು ಕೇವಲ ಕಲ್ಲಲ್ಲ, ಇದೊಂದು ‘ಪರಸಮಣಿ’ ಇದನ್ನು ನೀನು ಯಾವುದೇ ಕಬ್ಬಿಣಕ್ಕೆ ಮುಟ್ಟಿಸಿದರೂ ಅದು ಚಿನ್ನವಾಗುತ್ತದೆ. ಆದರೆ ನೆನಪಿಡು, ನಾನು ನಾಳೆ ಸಂಜೆ ಸರಿಯಾಗಿ ಆರು ಗಂಟೆಗೆ ಇದನ್ನು ಮರಳಿ ಪಡೆಯಲು ಬರುತ್ತೇನೆ. ಅಷ್ಟರೊಳಗೆ ನಿನಗೆ ಎಷ್ಟು ಬೇಕೋ ಅಷ್ಟು ಚಿನ್ನ ಮಾಡಿಕೊ ಹಾಗೂ ನಿನ್ನ ಬಡತನ ನೀಗಿಸಿಕೊ” ಎಂದು ಹೇಳಿ ಹೊರಟರು.ಸೋಮಣ್ಣನಿಗೆ ಅಪಾರ ಸಂತೋಷವಾಯಿತು. ಅವನು ಯೋಚಿಸಿದನು, “ನನ್ನ ಬಳಿ ನಾಳೆ ಸಂಜೆಯವರೆಗೆ ಸಮಯವಿದೆಯಲ್ಲ! ಈಗ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾಳೆ ಬೆಳಿಗ್ಗೆ ಮಾರುಕಟ್ಟೆಗೆ ಹೋಗಿ ತುಂಬಾ ಕಬ್ಬಿಣ ತಂದು, ಚಿನ್ನವಾಗಿ ಬದಲಾಯಿಸುತ್ತೇನೆ.”ಮಾರನೇ ದಿನ ಬೆಳಿಗ್ಗೆ ಎದ್ದ ಸೋಮಣ್ಣ, “ಇನ್ನೂ ತುಂಬಾ ಸಮಯವಿದೆ, ಮಧ್ಯಾಹ್ನ ಹೋದರಾಯಿತು” ಎಂದುಕೊಂಡು ಆರಾಮವಾಗಿ ಊಟ ಮಾಡಿ ನಿದ್ದೆ ಹೋದನು. ಮಧ್ಯಾಹ್ನ ಮೂರು ಗಂಟೆಗೆ ಎದ್ದಾಗ ಅವನಿಗೆ ಮಾರುಕಟ್ಟೆಗೆ ಹೋಗಿ ಕಬ್ಬಿಣ ತರಬೇಕು ಎಂದು ನೆನಪಾಯಿತು. ಆದರೆ ಸೋಮಾರಿತನದಿಂದಾಗಿ, “ಸಂಜೆಯಾಗಲು ಇನ್ನು ಮೂರು ಗಂಟೆ ಇದೆಯಲ್ಲ, ನಿಧಾನವಾಗಿ ಹೋಗೋಣ” ಎಂದುಕೊಂಡು ನಿಧಾನವಾಗಿ ಹೆಜ್ಜೆ ಹಾಕಿದನು.ಅವನು ಮಾರುಕಟ್ಟೆಗೆ ತಲುಪಿ, ಕಬ್ಬಿಣವನ್ನು ಖರೀದಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ಸರ‍್ಯ ಮುಳುಗುತ್ತಿದ್ದನು. ಅವನು ಓಡೋಡುತ್ತಾ ಮನೆಗೆ ಬಂದು ಕಬ್ಬಿಣಕ್ಕೆ ಆ ಮಾಂತ್ರಿಕ ಕಲ್ಲನ್ನು ಮುಟ್ಟಿಸಲು ಹೋದನು.ಆದರೆ ಅಷ್ಟರಲ್ಲೇ ಸರಿಯಾಗಿ ಸಂಜೆ ಆರು ಗಂಟೆಯಾಗಿತ್ತು!ಸಾಧುಗಳು ಅವನ ಮನೆ ಬಾಗಿಲಿಗೆ ಬಂದು ನಿಂತಿದ್ದರು. ಅವರು ಸೋಮಣ್ಣನ ಕೈಲಿದ್ದ ಮಾಂತ್ರಿಕ ಕಲ್ಲನ್ನು ಮರಳಿ ಪಡೆದರು. ಸೋಮಣ್ಣನು ಅಳುತ್ತಾ, “ಸ್ವಾಮಿ, ನನಗೆ ಇನ್ನೊಂದು ಐದು ನಿಮಿಷ ಕೊಡಿ, ನಾನು ಕಬ್ಬಿಣವನ್ನು ಚಿನ್ನ ಮಾಡಬೇಕು” ಎಂದು ಬೇಡಿಕೊಂಡನು.ಅದಕ್ಕೆ ಸಾಧುಗಳು ಶಾಂತವಾಗಿ ಹೇಳಿದರು, “ಸೋಮಣ್ಣ, ಯಾರು ಸಮಯದ ಬೆಲೆಯನ್ನು ಅರಿಯುವುದಿಲ್ಲವೋ, ಅವರಿಗೆ ಅದೃಷ್ಟವೂ ಒಲಿಯುವುದಿಲ್ಲ. ನಿನಗೆ ಪರ‍್ತಿ ಒಂದು ದಿನ ಸಿಕ್ಕರೂ ನೀನು ಸಮಯವನ್ನು ವ್ರ‍್ಥ ಮಾಡಿದೆ. ಕಳೆದುಹೋದ ಸಮಯ ಮತ್ತು ಕಳೆದುಕೊಂಡ ಅವಕಾಶಗಳು ಮತ್ತೆ ಎಂದಿಗೂ ಮರಳಿ ಬರುವುದಿಲ್ಲ.”ಸೋಮಣ್ಣನಿಗೆ ತನ್ನ ಸೋಮಾರಿತನದ ಅರಿವಾಯಿತು, ಆದರೆ ಅಷ್ಟರಲ್ಲೇ ಸಮಯ ಮೀರಿಹೋಗಿತ್ತು.ಕಥೆಯ ನೀತಿ:ಸಮಯವು ಅತ್ಯಂತ ಅಮೂಲ್ಯವಾದದ್ದು. ಇಂದಿನ ಕೆಲಸವನ್ನು ಇಂದೇ ಮಾಡಬೇಕು. ನಾಳೆಗೆ ಮುಂದೂಡುವ ಅಭ್ಯಾಸವು ನಮ್ಮ ಯಶಸ್ಸಿನ ದಾರಿಗೆ ಅತಿ ದೊಡ್ಡ ಶತ್ರು.ಶ್ರೇಷ್ಠ ಸಾಧಕಇತಿಹಾಸದ ಶ್ರೇಷ್ಠ ಸಾಧಕರ ಜೀವನವನ್ನು ಗಮನಿಸಿದರೆ, ಅವರು ಎಂದಿಗೂ ನಾಳೆಗಾಗಿ ಕಾಯಲಿಲ್ಲ ಎಂಬ ಸತ್ಯ ನಮಗೆ ಮನವರಿಕೆಯಾಗುತ್ತದೆ. ಭಾರತದ ಹೆಮ್ಮೆಯ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರು ಸಮಯ ಪಾಲನೆಗೆ ಮತ್ತು ತತ್‌ಕ್ಷಣದ ರ‍್ತವ್ಯ ಪ್ರಜ್ಞೆಗೆ ಹೆಸರಾಗಿದ್ದರು. ಒಮ್ಮೆ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಹಳಿಯ ಶಬ್ದದಲ್ಲಾದ ಸಣ್ಣ ವ್ಯತ್ಯಾಸವನ್ನು ಆ ಕ್ಷಣದಲ್ಲೇ ಗ್ರಹಿಸಿ ತಕ್ಷಣವೇ ರೈಲಿನ ಅಪಘಾತ ಸರಪಳಿಯನ್ನು ಎಳೆದರು. “ನಾಳೆ ನೋಡೋಣ” ಅಥವಾ “ಮುಂದಿನ ನಿಲ್ದಾಣದಲ್ಲಿ ಹೇಳೋಣ” ಎಂದು ಅವರು ಅಂದು ಉದಾಸೀನತೆ ತೋರಿದ್ದರೆ ನೂರಾರು ಜೀವಗಳು ಬಲಿಯಾಗುತ್ತಿದ್ದವು. ಅವರು ಇಂದಿನ ಕ್ಷಣದ ಮಹತ್ವವನ್ನು ಅರಿತು ಕರ‍್ಯಪ್ರವೃತ್ತರಾದ ಕಾರಣಕ್ಕೇ ದೊಡ್ಡ ದುರಂತ ತಪ್ಪಿತು. ಇದನ್ನೇ ಮಹಾತ್ಮರು “ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈ ಕ್ಷಣವೇ ಮಾಡು” ಎಂದು ಬಣ್ಣಿಸಿದ್ದಾರೆ.ಚಲನಶೀಲ ಬದುಕಿನ ಯಶಸ್ಸಿನ ಸೂತ್ರಬದುಕಿನ ಹಾದಿಯಲ್ಲಿ ಸಮಯ ಮತ್ತು ಅವಕಾಶಗಳು ನದಿಯ ನೀರಿನಂತೆ, ಅವು ಸದಾ ಹರಿಯುತ್ತಲೇ ಇರುತ್ತವೆ. “ಹೋದ ಆಯುಷ್ಯ, ಚಲಿಸಿದ ನದಿ ಮತ್ತು ಕಳೆದುಹೋದ ಸಮಯ ಎಂದಿಗೂ ಮರಳಿ ಬರುವುದಿಲ್ಲ” ಎಂಬ ಪ್ರಕೃತಿಯ ಕಠೋರ ನಿಯಮವನ್ನು ನಾವು ಅರಿತಾಗ ಮಾತ್ರ ಪ್ರಸ್ತುತ ಕ್ಷಣದ ನಿಜವಾದ ಮೌಲ್ಯ ನಮಗೆ ತಿಳಿಯುತ್ತದೆ. ಮನುಷ್ಯನ ಅತಿ ದೊಡ್ಡ ದರ‍್ಬಲ್ಯವೆಂದರೆ ಆಲಸ್ಯ ಮತ್ತು ಮುಂದೂಡುವಿಕೆ. ಇಂದು ಸಿಕ್ಕ ಅವಕಾಶವನ್ನು ನಾಳೆಗೆ ಮುಂದೂಡುವಾಗ ನಾವು “ಇದ್ದಾಗ ಇರದ ಮೌಲ್ಯ, ಹೋದಾಗ ತಿಳಿಯಿತು” ಎಂಬ ಗಾದೆ ಮಾತನ್ನು ಮರೆತುಬಿಡುತ್ತೇವೆ. ಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ವಿದ್ಯರ‍್ಥಿ ಜೀವನವಿರಲಿ ಅಥವಾ ವೃತ್ತಿ ಬದುಕಿರಲಿ, ನಮಗೆ ಸಿಗುವ ಸಣ್ಣ ಅವಕಾಶವನ್ನೂ ಕಡೆಗಣಿಸಬಾರದು.ನಾಳೆಯ ಭ್ರಮೆಯಲ್ಲಿಇಂದಿನ ಸುಂದರ ಕ್ಷಣಗಳನ್ನು, ಸಂಬಂಧಗಳನ್ನು ಅಥವಾ ಸಿಕ್ಕ ಸುರ‍್ಣಾವಕಾಶಗಳನ್ನು ನರ‍್ಲಕ್ಷಿಸಿ ನಾಳೆಯ ಭ್ರಮೆಯಲ್ಲಿ ಬದುಕುವುದೇ ಜೀವನದ ಅತಿ ದೊಡ್ಡ ಸೋಲು.ನಮ್ಮ ಕಣ್ಣೆದುರಿನ ನಿತ್ಯ ಸತ್ಯಗಳು:💡 ಬೆಳಕಿನ ಬೆಲೆ: ಹಗಲಿಡೀ ಸರ‍್ಯನ ಬೆಳಕಿದ್ದಾಗ ಅದರ ಬೆಲೆ ನಮಗೆ ತಿಳಿಯುವುದಿಲ್ಲ, ಆದರೆ ರಾತ್ರಿಯ ಕತ್ತಲಲ್ಲಿ ಇದ್ದಕ್ಕಿದ್ದಂತೆ ವಿದ್ಯುತ್ ಹೋದಾಗ ಮಾತ್ರ ಒಂದೇ ಒಂದು ಸಣ್ಣ ಮೇಣದಬತ್ತಿಯ ಬೆಳಕು ಎಷ್ಟು ಅಮೂಲ್ಯ ಎಂಬುದು ಮನವರಿಕೆಯಾಗುತ್ತದೆ. ನೀರಿನ ಮೌಲ್ಯ: ನಲ್ಲಿಯಲ್ಲಿ ನೀರು ಬರುತ್ತಿರುವಾಗ ಬೇಕಾಬಿಟ್ಟಿ ಪೋಲು ಮಾಡುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ಬಂದಾಗ ಮಾತ್ರ ನೀರಿನ ನಿಜವಾದ ಯೋಗ್ಯತೆಯನ್ನು ಅರಿಯುತ್ತೇವೆ.ಅಮ್ಮನ ಕೈರುಚಿಪ್ರತಿದಿನ ಅಮ್ಮ ಪ್ರೀತಿಯಿಂದ ಮಾಡುವ ಅಡುಗೆಯಲ್ಲಿ ನಾವು ನೂರು ತಪ್ಪುಗಳನ್ನು ಹುಡುಕುತ್ತೇವೆ, ಆದರೆ ಮನೆಯಿಂದ ದೂರದ ಊರಿಗೆ ಹೋಗಿ ಹೋಟೆಲ್ ಊಟ ತಿಂದಾಗ ಮಾತ್ರ ಅಮ್ಮನ ಕೈರುಚಿಯ ನಿಜವಾದ ಮೌಲ್ಯ ನೆನಪಾಗಿ ಕಣ್ಣೀರು ಬರುತ್ತದೆ. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕುಸಣ್ಣ ಅವಕಾಶಚಲನಚಿತ್ರ ರಂಗದ ಮಹಾನಾಯಕ ಅಮಿತಾಭ್ ಬಚ್ಚನ್ ಅವರು ೯೦ರ ದಶಕದಲ್ಲಿ ತಮ್ಮದೇ ಕಂಪನಿಯ ನಷ್ಟದಿಂದಾಗಿ ಸಂಪರ‍್ಣ ದಿವಾಳಿಯಾಗಿದ್ದರು. ಆ ಕಠಿಣ ಸಮಯದಲ್ಲಿ ಅವರಿಗೆ ದೂರರ‍್ಶನದ ‘ಕೌನ್ ಬನೇಗಾ ಕರೋಡ್ ಪತಿ’ ಕರ‍್ಯಕ್ರಮದ ಆಫರ್ ಬಂದಾಗ, ಅದನ್ನು ಸಣ್ಣ ಅವಕಾಶವೆಂದು ಅವರು ತಳ್ಳಿಹಾಕಲಿಲ್ಲ. ಅಂದು ಸಿಕ್ಕ ಆ ಒಂದು ಅವಕಾಶವನ್ನು ಅತ್ಯಂತ ಶ್ರದ್ಧೆಯಿಂದ ಬಳಸಿಕೊಂಡಿದ್ದರಿಂದಲೇ ಅವರು ಮತ್ತೆ ಯಶಸ್ಸಿನ ಶಿಖರಕ್ಕೇರಲು ಸಾಧ್ಯವಾಯಿತು. ಅವರು ಅಂದು ಇಂದಿನ ಅವಕಾಶವನ್ನು ಕಳೆದುಕೊಂಡಿದ್ದರೆ ನಾಳೆಯ ವೈಭವ ಸಿಗುತ್ತಿರಲಿಲ್ಲ.ಹೆಚ್ಚಿನ ಸಮಯನಮ್ಮ ಹಿರಿಯರು “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂದು ಸುಮ್ಮನೆ ಹೇಳಿಲ್ಲ; ಸಿಕ್ಕ ಅವಕಾಶವನ್ನು ಆರಂಭದಲ್ಲೇ ಬಳಸಿಕೊಳ್ಳುವ ಜಾಣ್ಮೆ ನಮ್ಮದಾಗಬೇಕು.ಅದೇ ರೀತಿ, ಬಡತನ ಮತ್ತು ಕಡು ನಿರಾಶೆಯಲ್ಲಿದ್ದ ಲೇಖಕಿ ಜೆ.ಕೆ. ರೌಲಿಂಗ್ ಅವರು ತಮಗೆ ಕಲ್ಪನೆಗಳು ಮೂಡಿದ ತಕ್ಷಣ ಸಿಕ್ಕ ಹರಿದ ಕಾಗದದ ಚೂರುಗಳ ಮೇಲೆಯೇ ಹ್ಯಾರಿ ಪಾಟರ್ ಕಥೆಯನ್ನು ಬರೆಯಲು ಶುರು ಮಾಡಿದರು. ಒಂದು ವೇಳೆ ಅವರು ಮನಸ್ಸಿನ ಸ್ಥಿತಿ ಸರಿಯಿಲ್ಲ ಎಂದು ಇಂದಿನ ಬರವಣಿಗೆಯನ್ನು ನಾಳೆಗೆ ಮುಂದೂಡಿದ್ದರೆ, ಜಗತ್ತಿನ ಅತ್ಯಂತ ಯಶಸ್ವಿ ಸಾಹಿತ್ಯ ಸರಣಿ ಎಂದಿಗೂ ಸೃಷ್ಟಿಯಾಗುತ್ತಿರಲಿಲ್ಲ. ಬದುಕಿನಲ್ಲಿ “ಸಮಯವು ಹಣಕ್ಕಿಂತ ಹೆಚ್ಚು ಅಮೂಲ್ಯವಾದುದು; ನೀವು ಹೆಚ್ಚು ಹಣವನ್ನು ಗಳಿಸಬಹುದು, ಆದರೆ ಹೆಚ್ಚಿನ ಸಮಯವನ್ನು ಗಳಿಸಲು ಸಾಧ್ಯವಿಲ್ಲ” ಎಂಬ ಸತ್ಯಕ್ಕೆ ರೌಲಿಂಗ್ ಅವರ ಜೀವನವೇ ಸಾಕ್ಷಿ.ಕೊನೆಯದಾಗಿ ಹೇಳಬೇಕೆಂದರೆ,“ಇಂದು” ಎಂಬುದು ಪ್ರಕೃತಿ ನಮಗೆ ನೀಡಿರುವ ಅಮೂಲ್ಯವಾದ ಉಡುಗೊರೆ. “ದೂರವಿರುವ ಬೆಟ್ಟ ಕಣ್ಣಿಗೆ ನುಣುಪಾಗಿ ಕಾಣುವುದು ಸಹಜ, ಆದರೆ ಬಾಯಾರಿಕೆ ಇಂಗಿಸುವುದು ನಮ್ಮ ಕಾಲ ಬುಡದಲ್ಲಿ ಹರಿಯುವ ಸಣ್ಣ ತೊರೆ ಮಾತ್ರ” ಎಂಬಂತೆ, ನಾಳೆಯ ಸುಳ್ಳು ಭರವಸೆಗಳಿಗಾಗಿ ಇಂದಿನ ವಾಸ್ತವವನ್ನು ಕಳೆದುಕೊಳ್ಳಬಾರದು. ಸಂಬಂಧಗಳು, ಆರೋಗ್ಯ ಮತ್ತು ಸಮಯ ನಮ್ಮ ಕೈಯಲ್ಲಿದ್ದಾಗಲೇ ಅವುಗಳನ್ನು ಗೌರವಿಸಬೇಕು. ಇಂದು ಸಿಕ್ಕ ಅವಕಾಶವನ್ನು ಇಂದೇ ಸದುಪಯೋಗಪಡಿಸಿಕೊಂಡು, ನಾಳೆಯ ಪಶ್ಚಾತ್ತಾಪದಿಂದ ಮುಕ್ತಿ ಪಡೆದು ಯಶಸ್ಸಿನತ್ತ ಹೆಜ್ಜೆ ಇಡುವುದೇ ನಿಜವಾದ ಬುದ್ಧಿವಂತಿಕೆ. ಜಯಶ್ರೀ. ಜೆ. ಅಬ್ಬಿಗೇರಿ

“ಇಂದು ಸಿಕ್ಕಿದ್ದು ನಾಳೆ ಸಿಗುವುದಿಲ್ಲ” ವಿಶೇಷ ಲೇಖನ ಜಯಶ್ರೀ. ಜೆ. ಅಬ್ಬಿಗೇರಿ Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ”

ಲೇಖನ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್  ಆಯ್ಕೆ “ಆಯ್ಕೆ” ಎಂಬ ಪದ ಚಿಕ್ಕದಾದರೂ, ಅದರ ಅರ್ಥ ಮತ್ತು ಪರಿಣಾಮ ಬಹಳ ದೊಡ್ಡದು.ನಮ್ಮ ಜೀವನವೇ ಆಯ್ಕೆಗಳ ಮೇಲೆ ನಿಂತಿದೆ.ಮಾರುಕಟ್ಟೆಗೆ ಹೋದಾಗ ತಾಜಾ ತರಕಾರಿಯನ್ನು ಆಯ್ಕೆ ಮಾಡುತ್ತೇವೆ. ಅಂಗಡಿಯಲ್ಲಿ ದಿನನಿತ್ಯದ ಸಾಮಾನುಗಳನ್ನು ಗುಣಮಟ್ಟ ನೋಡಿ ಆಯ್ಕೆ ಮಾಡುತ್ತೇವೆ. ಬಟ್ಟೆ, ಮನೆ, ವಾಹನ, ಉದ್ಯೋಗ, ಶಿಕ್ಷಣ—ಪ್ರತಿಯೊಂದರಲ್ಲೂ ನಮ್ಮ ಆಯ್ಕೆ ಇರುತ್ತದೆ.ನೆಂಟಸ್ತಿಕೆ ಆಗುವಾಗ, ಹೆಣ್ಣು ಹಾಗೂ ಗಂಡಿನ ಯೋಗ್ಯತೆ, ಸಂಸ್ಕಾರ, ಶಿಕ್ಷಣ, ಸ್ವಭಾವ ಎಲ್ಲವನ್ನೂ ಗಮನಿಸಿ ಆಯ್ಕೆ ಮಾಡಲಾಗುತ್ತದೆ.ರಾಜಕೀಯದಲ್ಲಿ ಮುಖ್ಯಮಂತ್ರಿ, ಸಚಿವರು ಹಾಗೂ ಜನಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ. ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆ, ಕ್ರೀಡಾ ತಂಡದಲ್ಲಿ ಆಟಗಾರರ ಆಯ್ಕೆ, ಉದ್ಯೋಗದಲ್ಲಿ ಅಭ್ಯರ್ಥಿಗಳ ಆಯ್ಕೆ—ಹೀಗೆ ಜೀವನದ ಪ್ರತಿಯೊಂದು ಹಂತದಲ್ಲೂ ಆಯ್ಕೆ ಅನಿವಾರ್ಯ.ಸಾಮಾನ್ಯವಾಗಿ ನಾವು ಒಳ್ಳೆಯದನ್ನೇ, ಯೋಗ್ಯವಾದದ್ದನ್ನೇ ಅಥವಾ ಒಳ್ಳೆಯ ವ್ಯಕ್ತಿಯನ್ನೇ ಆಯ್ಕೆ ಮಾಡಲು ಬಯಸುತ್ತೇವೆ.ಆದರೆ, ಕೆಲವು ಆಯ್ಕೆಗಳು ಮನಸ್ಸಿಗೆ ನೋವು ಕೊಡುತ್ತವೆ.ಕೆಲವರು ಗೆಳೆತನದಲ್ಲಿ, ಪ್ರೀತಿಯಲ್ಲಿ ಅಥವಾ ಗಂಡ-ಹೆಂಡತಿಯ ಸಂಬಂಧದಲ್ಲಿಯೂ ಎದುರಿನ ವ್ಯಕ್ತಿಯನ್ನು ಮೊದಲ ಆದ್ಯತೆಯಾಗಿ ಅಲ್ಲ, ಕೇವಲ “ಆಯ್ಕೆ”ಯಾಗಿ ಇಟ್ಟುಕೊಳ್ಳುತ್ತಾರೆ.ಅವರಿಗೆ ಸಮಯ ಇದ್ದಾಗ ಮಾತ್ರ ನೆನಪಾಗುತ್ತದೆ. ಬೇಸರವಾದಾಗ ಮಾತ್ರ ಕರೆ ಮಾಡುತ್ತಾರೆ. ಬೇರೆಯವರು ಸಿಗದಿದ್ದಾಗ ಮಾತ್ರ ಮಾತನಾಡುತ್ತಾರೆ. ಅಗತ್ಯವಿದ್ದಾಗ ಮಾತ್ರ ಹತ್ತಿರವಾಗುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ದೂರವಾಗುತ್ತಾರೆ.ಇಂತಹ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ; ಸ್ವಾರ್ಥ ಮಾತ್ರ ಇರುತ್ತದೆ.ನಿಜವಾದ ಸಂಬಂಧ ಎಂದರೆ, ಅನುಕೂಲಕ್ಕೆ ತಕ್ಕಂತೆ ನೆನಪಾಗುವ ವ್ಯಕ್ತಿಯಾಗಿರುವುದಲ್ಲ. ಸುಖದಲ್ಲೂ ದುಃಖದಲ್ಲೂ ಜೊತೆಯಾಗುವ, ಗೌರವ ಕೊಡುವ, ವಿಶ್ವಾಸ ಉಳಿಸಿಕೊಳ್ಳುವ ವ್ಯಕ್ತಿಯಾಗಿರುವುದು.ಯಾರ ಜೀವನದಲ್ಲೂ “ಆಯ್ಕೆ”ಯಾಗಿ ಉಳಿಯುವುದಕ್ಕಿಂತ, “ಆದ್ಯತೆ”ಯಾಗಿ ಬದುಕುವುದು ಹೆಚ್ಚು ಮೌಲ್ಯಯುತ.ಏಕೆಂದರೆ, ನಮ್ಮನ್ನು ಬೇಕಾದಾಗ ಮಾತ್ರ ನೆನಪಿಸಿಕೊಳ್ಳುವವರಿಗಿಂತ, ಯಾವಾಗಲೂ ನಮ್ಮನ್ನು ಗೌರವಿಸುವವರೇ ನಿಜವಾದ ಸಂಬಂಧಗಳು.“ನಮ್ಮನ್ನು ಕೇವಲ ಒಂದು ‘ಆಯ್ಕೆ’ಯಾಗಿ ನೋಡುವವರ ಹಿಂದೆ ಓಡುವುದಕ್ಕಿಂತ, ನಮ್ಮನ್ನು ‘ಆದ್ಯತೆ’ಯಾಗಿ ಕಾಣುವವರನ್ನು ಗೌರವಿಸೋಣ. ಅದೇ ಸಂಬಂಧದ ನಿಜವಾದ ಮೌಲ್ಯ.” ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

ಕವಿತಾ ಶ್ರೀನಿವಾಸ್ ನಾಯಕ್ “ಆಯ್ಕೆ” Read Post »

ಇತರೆ, ವರ್ತಮಾನ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ

ಕನ್ನಡ ಸಂಗಾತಿ ಆರ್ ಜಿ ಹಳ್ಳಿ ನಾಗರಾಜ “ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ಕನ್ನಡ – ಕನ್ನಡಿಗ – ಕರ್ನಾಟಕದ ಅಸ್ಮಿತೆಯ ಸಂಕೇತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಪ್ರಾಯ. ಮೈಸೂರಿನ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಈ ಸಂಸ್ಥೆಯ ಧ್ಯೇಯೋದ್ದೇಶಗಳು ಆರೇಳು ದಶಕಗಳ ಕಾಲ ಸಮಸ್ಯೆ ಇಲ್ಲದೆ ನಡೆದುಕೊಂಡು ಹೋದವು. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ – ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಯ ಮುಖ್ಯ ಉದ್ದೇಶದಿಂದ 1915ರಲ್ಲಿ ಸ್ಥಾಪಿತವಾದ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಅಂದಿನಿಂದಲೂ ಈ ಮಹಾ ಸಂಸ್ಥೆ ಅನೇಕ ವಿದ್ವಾಂಸರ, ನಾಡು ನುಡಿಯ ಅಭಿಮಾನಿಗಳ ಮತ್ತು ಸರಕಾರದ ಪ್ರೋತ್ಸಾಹ ಪಡೆದುಕೊಂಡು ಜನತೆಯಲ್ಲಿ ಹೊಸ ಹೊಸ ಉತ್ಸಾಹವನ್ನೂ ಭಾಷಾ ಅಭಿಮಾನವನ್ನೂ ಬೆಳೆಸುತ್ತ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಸಾಹಿತ್ಯ ಪರಿಷತ್ತಿನ ಇತಿಹಾಸ ಪ್ರಕಟಿಸಿದೆ. ಅದರ ದಾಖಲೆಯಲ್ಲಿ  – “ಕರ್ನಾಟಕ ಈಗಿರುವಂತೆ ಸಂಘಟಿತವಾಗುವುದಕ್ಕೆ ಮೊದಲು ಹಲವಾರು ಆಡಳಿತಗಳಡಿ ಹಂಚಿ ಹೋಗಿತ್ತು. ಮದರಾಸು, ಬೊಂಬಾಯಿ ಪ್ರಾಂತಗಳಿಗೆ ಹಾಗೂ ಮೈಸೂರು, ಹೈದರಾಬಾದ್ ಸಂಸ್ಥಾನಗಳಿಗೆ ಕನ್ನಡ ನಾಡಿನ ಕೆಲವು ಭಾಗಗಳು ಸೇರಿದ್ದವು. ಕೊಡಗು ಒಂದು ಪ್ರತ್ಯೇಕ ಆಡಳಿತಕ್ಕೆ ಒಳಪಟ್ಟಿತ್ತು. ಬ್ರಿಟಿಷ್ ಇಂಡಿಯಾ ಸರಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದರಾಸು, ಬೊಂಬಾಯಿ ಪ್ರಾಂತಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿ ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ-ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರು. ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ಕಾಣುತ್ತಿತ್ತು” ಎಂಬ ಅಂಶದ ಮೇಲೆ‌ ಬೆಳಕು ಚೆಲ್ಲುತ್ತದೆ. ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನಸು ಕಂಡ ಅನೇಕ ಹಿರಿಯ ಸಾಹಿತಿಗಳು ಸರ್ಕಾರ ನೀಡಿದ ಅನುದಾನದಲ್ಲಿ ಉಪನ್ಯಾಸ, ಪುಸ್ತಕ, ಪತ್ರಿಕೆ ಪ್ರಕಟಣೆ, ಕನ್ನಡ ಜನತೆ ಒಗ್ಗೂಡಲು ಸಾಹಿತ್ಯ ಸಮ್ಮೇಳನ ನಡೆಸುತ್ತಾ ಬಂದು ಜನಮನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಟ್ಟಿಯಾಗಿ  ನೆಲೆ ಊರಿತು. ಕನ್ನಡಿಗರ ವಿಶ್ವಾಸ ಗಳಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಶತಮಾನದ 70ರ ದಶಕದ ಕೊನೆಯಲ್ಲಿ ವಿವಾದಕ್ಕೊಳಗಾಗಿತ್ತು. ನಂತರ ಮತದಾರರಿಂದ ಆಯ್ಕೆಯಾಗಿ ಬಂದ ಅಧ್ಯಕ್ಷರು ಅದಕ್ಕೆ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋದರು. ಆದರೆ, ಕಳೆದ 11 ವರ್ಷದಲ್ಲಿ ಬಂದ ಇಬ್ಬರು ಕಸಾಪ ರಾಜ್ಯಾಧ್ಯಕ್ಷರಿಂದ ಪರಿಷತ್ತಿಗೆ ಕಳಂಕ ಒದಗಿತು. ಆಡಳಿತ ವಿಫಲವಾಗಿವೆ. ಪ್ರಕಟಣೆ, ವಿಚಾರ ಸಂಕಿರಣ, ಸಮ್ಮೇಳನಗಳು ನೆನೆಗುದಿಗೆ ಬಿದ್ದಿವೆ. ಅಧಿಕಾರದಾಹ, ಸರ್ವಾಧಿಕಾರ, ಭ್ರಷ್ಠಾಚಾರ ಅಲ್ಲಿ ತಾಂಡವಾಡಿದೆ. ಕಸಾಪ ಮರ್ಯಾದೆ ಕಳೆಯಲು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಲ್ಲಿ ಭ್ರಷ್ಟಾಚಾರ ಎಸಗಿದ್ದು ಮೇಲು ನೋಟಕ್ಕೆ ಸಾಬೀತು ಆಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಇಂದಿನ  ಈ ದುಸ್ಥಿತಿಗೆ ನಿಕಟಪೂರ್ವ ಅಧ್ಯಕ್ಷ  ಮಾನ್ಯ ಮನು ಬಳಗಾರ ಅವರು ಕಾರಣ. ಅವರ ಅಧಿಕಾರದಾಹ, ಸ್ವಾರ್ಥಕ್ಕೆ ಕಸಾಪ ಬಲಿಯಾಯ್ತು. 3 ವರ್ಷ ಇದ್ದ ಅಧ್ಯಕ್ಷರ ಅವಧಿಯನ್ನು ಹಿಗ್ಗಿಸಿಕೊಂಡರು. ಪರಿಷತ್ತು ಅದರ ಪಾಡಿಗೆ ಅದು ನಡಕ್ಕೊಂಡು ಹೋಗ್ತಿತ್ತು. ಇವರು ಎಲ್ಲೋ ದ.ಕ.  ಜಿಲ್ಲೆಯ  ಮೂಲೆಯಲ್ಲಿ ಕಳ್ಳಾಟದಿಂದ ಸರ್ವ ಸದಸ್ಯರ ಸಭೆ ನಡೆಸಿ ಅಲ್ಲಿ ತನ್ನದೇ ಅವಧಿಯ 3 ವರ್ಷದ  ಅಧಿಕಾರವನ್ನು 5 ವರ್ಷಕ್ಕೆ ವಿಸ್ತರಿಸಿಕೊಂಡರು! ಆಯ್ತು, 5 ವರ್ಷವಾದ ನಂತರವಾದರೂ ಗೌರವದಿಂದ ನಿರ್ಗಮಿಸಬೇಕು ಬೇಕು ತಾನೆ? ಇಲ್ಲ! ಕಳ್ಳಿಗೊಂದು ಪಿಳ್ಳೆ ನೆವ ಅಂತ ಕರೋನಾ ಕಡೆ ಬೆರಳು ತೋರಿ, ನನಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಸಾಪ ಕೆಲಸ ಬೆಟ್ಟದಷ್ಟಿದೆ! ಅಂತ ಬೋಂಗ್ ಬಿಟ್ಟು ಬರೋಬ್ಬರಿ 6 ವರ್ಷ ಪೂರೈಸಿದರು ಈ ಮಹಾಶಯರು! ಅಲ್ಲಿಗೆ ಮೂರು ವರ್ಷಕ್ಕೆ  ಇನ್ನೊಬ್ಬರು ರಾಜ್ಯ, ಜಿಲ್ಲಾ ಅಧ್ಯಕ್ಷರಾಗಿ ಬರೋದನ್ನ ತಪ್ಪಿಸಿದ ಪಾಪ ಅಂಟಿಸಿಕೊಂಡು ನಿರ್ಗಮಿಸಿದರು. ಆದರೆ, “ನಾನು ಬಿಟ್ಟರೆ ಇನ್ನೊಬ್ಬರು ಈ ರಾಜ್ಯದಲ್ಲಿ ಕಸಾಪ ಅಧ್ಯಕ್ಷರಾಗಲು ಅರ್ಹರಿಲ್ಲ!” ಎಂಬ ಅಹಂನಿಂದ  ಮತ್ತೆ ಮುಂದಿನ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು‌ ಚಾಪೆ ಹಾಕಿ, ಕನಸು ಕಟ್ಟಿ ಹಲವು ಜಿಲ್ಲೆಗಳಲ್ಲಿ ಪ್ರವಾಸವನ್ನೂ ಮಾಡಿಯಾಯ್ತು. ನನ್ನನ್ನು ಒಳಗೊಂಡು ಹಲವರು “ಬಳಿಗಾರರು ಪುನಃ ಸ್ಪರ್ಧಿಸಿದರೆ ಠೇವಣಿ‌ ಕಳೆಯಿರಿ” ಎಂಬ ಅಭಿಯಾನ ಶುರು ಮಾಡಿದೆವು. ಬಹುಶಃ ನಮ್ಮ ಪ್ರತಿರೋಧ ಗೊತ್ತಾಗಿಯೋ, ನನ್ನಂತಹವರ ಹೊಡೆತ ತಾಳಲಾರದೆಯೋ  ಮುಂದೆ ಮತ್ತೊಬ್ಬರು ಸ್ಪರ್ಧಿಸುತ್ತಾರೆಂದು ಸಾಹಿತಿ ಒಬ್ಬರ  ಹೆಸರನ್ನ ತೇಲಿಬಿಟ್ಟು  ಜಾಗ ಖಾಲಿ ಮಾಡಿದರು. ಆದರೆ ಅವರು ಸಾತ್ವಿಕ ಸಾಹಿತಿ! ಕನ್ನಡ ಸಾಹಿತ್ಯ ಪರಿಷತ್ತು ಉಳಿಸಲು “ಕನ್ನಡ ನಾಡು – ನುಡಿ ಹೋರಾಟ ಸಮಿತಿ” ಭ್ರಷ್ಟಾತಿ ಭ್ರಷ್ಟ ಜೋಶಿ ವಿರುದ್ಧ ಹೋರಾಡುತ್ತಿದ್ದರೆ ನನಗೂ ಇದಕ್ಕು ಸಂಬಂಧ ಇಲ್ಲ ಎಂದು ತಮ್ಮಪಾಡಿಗೆ ತಾವಿದ್ದರು. ಇನ್ನೊಬ್ಬರು ಐಎಎಸ್ ಅಧಿಕಾರಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಹುರಿಯಾಳು. ಅವರಾಗಲಿ, ಅವರ ಬೆಂಬಲಿಗ “ಓರಟಗಾರ!”ರಾಗಲಿ “ಕಸಾಪಗೆ ಮಸಿ ಬಳಿದ ‘ಜೋಸಿ’ ವಿರುದ್ಧ ಒಂದೇ ಒಂದು ಹೇಳಿಕೆಯನ್ನು ಕೊಡಲಿಲ್ಲ! ಒಳ ಒಪ್ಪಂದ ಏನಾದರೂ‌ ಆಗಿರಲೂಬಹುದೇನೋ… ಗೊತ್ತಿಲ್ಲ. *ಜೋಶಿ ಇಚ್ಛೆಯಂತೆ ಬೈಲಾ!* ಪಕ್ಕಾ ಹಿಂದುತ್ವವಾದಿ ಮಹೇಶ ಜೋಶಿ ತನ್ನ ಅಂತರಂಗದ ಸನಾತನವಾದ, ಸರ್ವಾಧಿಕಾರದಿಂದ  ಸುಳ್ಳು ಹೇಳಿ, ಜನರಿಗೆ ಮಂಕು ಬೂದಿ ಎರಚಿ ಅಧ್ಯಕ್ಷರಾದವರು, ಎಲ್ಲರ ಠೇವಣಿ ಕಳೆದು ಗೆದ್ದು ಬಂದಿದ್ದೇನೆ ಎಂದು ಮೀಸೆ ತಿರುವಿದರು. ಸೋತ ಅಭ್ಯರ್ಥಿಯನ್ನು ನಿಕೃಷ್ಟವಾಗಿ ಕಂಡರು. ಹಿಯಾಳಿಸಿದರು. ದಿನದಿಂದ ದಿನಕ್ಕೆ ಸಾಹಿತ್ಯೇತರ ಚಟುವಟಿಕೆಗಳೆ ಹೆಚ್ಚಾದವು. ಅಸಾಹಿತಿಯಾದ ಈ ಮನುಷ್ಯ ಸಾಹಿತ್ಯ ಗಂಟು ಮೂಟೆ ಕಟ್ಟಿ ಏನೆಲ್ಲಾ ಕ್ರಿಮಿನಲ್ ಆಟ ಆಡಿದ ಅಂತ ನೋಡಿದೆವು…! ಇವರಿಗೆ ಸಾಹಿತ್ಯದ ಗಂಧಗಾಳಿ ಇಲ್ಲದಿದ್ದರಿಂದ, ಯಾವ ಸಾಹಿತಿಗೂ ಗೌರವ ಕೊಡಲಿಲ್ಲ. ಎಲ್ಲರನ್ನು ಕೇವಲವಾಗಿ ಕಂಡು, ದುರಹಂಕಾರದಿಂದ  ಠೇಂಕರಿಸುತ್ತ  ಏನೆಲ್ಲ ಭ್ರಷ್ಟಾಚಾರ ಎಸಗಿದ್ದು ಮಾಧ್ಯಮಗಳಲ್ಲಿ ಬಿಂಬಿತವಾಗಿದೆ. ಜೋಶಿ ಗೆದ್ದ ನಂತರ ಪರಿಷತ್ತಿನ “ನಿಬಂಧನೆ” (ಬೈಲಾ)  ತನ್ನಿಚ್ಚೆಯಂತೆ ಅಮೂಲಾಗ್ರ ತಿದ್ದುಪಡಿ ಮಾಡಿದ್ದು ಚರ್ಚೆಗೆ ಗ್ರಾಸವಾಯ್ತು. ನಾಮಕಾವಸ್ತೆಗೆ ಈ ಬೈಲಾ ತಿದ್ದುಪಡಿಗೆ ನಿವೃತ್ತ ನ್ಯಾಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿದ್ದರೂ, ಅಲ್ಲಿನ ಎಲ್ಲ ವಿಚಿತ್ರ ನಿಯಮಗಳು ಅಧ್ಯಕ್ಷನಿಗೆ ಪರಮಾಧಿಕಾರ  ಒಳಗೊಂಡಿದ್ದವು. ಇದಕ್ಕೆಲ್ಲ ಅಧ್ಯಕ್ಷ ಜೋಶಿಯ ಕೈವಾಡವೆ ಕಾರಣವಾಯ್ತು. *ಸಚಿವ ದರ್ಜೆ ಸ್ಥಾನ ಎಂಬ ಭೂತ* ಹಿಂದಿನ ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್ ಕುಮಾರರನ್ನು ಹಿಡಿದು, ಕೇಶವಕೃಪಾದಿಂದ ಪ್ರಭಾವ ಬೀರಿಸಿ ಸಚಿವದರ್ಜೆ ಸ್ಥಾನಮಾನ ಗಿಟ್ಟಿಸಿಕೊಂಡರು. ಈ ಸ್ಥಾನ ಸಿಕ್ಕಿದ್ದಕ್ಕೆ ಸರ್ಕಾರದ ಲೋಗೋ ಬಳಸಿ “ಸರ್ಕಾರದ ಸಚಿವದರ್ಜೆ ಸ್ಥಾನಮಾನದ ಅಧ್ಯಕ್ಷ ಸ್ಥಾನ!” ಅಂತ ಲೆಟರ್ ಹೆಡ್ ಮುದ್ರಿಸಿ, ಉನ್ನತದರ್ಜೆಯ ಅಧಿಕಾರಿಗಳನ್ನು  ಬ್ಲ್ಯಾಕ್ ಮೇಲ್ ಮಾಡಿದರು. ಅದರಲ್ಲು ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲಾಧಿಕಾರಿಗಳಿಗೆ ಧಮ್ಕಿ ಹಾಕಿದ ಉದಾಹರಣೆಯೂ ಇದೆ. ಸಚಿವದರ್ಜೆ ಸ್ಥಾನಮಾನ ಅತಿ ದುರುಪಯೋಗ ಆಗುವ‌ ದೂರುಗಳು ಬಂದಾಗ ಸಾಹಿತಿಗಳು, ಕನ್ನಡಪರ ಹೋರಾಟಗಾರರು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿ ಆ ಸಚಿವ ದರ್ಜೆ ಸ್ಥಾನಮಾನ ಕಿತ್ತಾಕಿಸಿದ್ದಾಯ್ತು. ಜೋಶಿ, ತನ್ನ ನಾಲ್ಕು ವರ್ಷದ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ವಿಚಾರ ಸಂಕಿರಣ, ಯುವ ಬರಹಗಾರರಿಗೆ ತರಬೇತಿ / ಶಿಬಿರ, ಮೌಲಿಕ ಪುಸ್ತಕ ಪ್ರಕಟಣೆ, ಶತಮಾನೋತ್ಸವ ಕಂಡ ಸಾಹಿತಿಗಳ ಸ್ಮರಣೆ – ಯಾವುದನ್ನೂ ಮಾಡಲಿಲ್ಲ. ಅಬ್ಬಾ! ಈ ಮನುಷ್ಯ ಎಷ್ಟೊಂದು ಮೆರೆದ…! ಹಲವು  ಜಿಲ್ಲಾಧ್ಯಕ್ಷರನ್ನು ಗಿರಿಗಿಟ್ಲೆ ಆಡಿಸಿ ಕಿರುಕುಳ ಕೊಟ್ಟಿದ್ದೇನು ಕಮ್ಮಿಯೆ? ಸಾಹಿತಿಗಳು, ಕನ್ನಡಪರ ಹೋರಾಟಗಾರರು ಪರಿಷತ್ತು ವಿರುದ್ಧ ಒಂದೆ ಒಂದು ಮಾತಾಡಲು ಅವಕಾಶ ಕೊಡದೆ, ಸಭೆ ಮಾಡಲೂ ಬಿಡದೆ ಅವರನ್ನು ಬೆದರಿಸಲು ಹಲವು ಲಾಯರ್ ನೋಟೀಸು ನೀಡಿದ್ದಾಯ್ತು. ಮಾನ ನಷ್ಟ ಮೊಕದ್ದಮೆ  ಹೂಡುವೆನೆಂದು ಬೆದರಿಸಿದ ಪತ್ರಗಳು ಬಂದವು. ತನ್ನ ವಿರುದ್ಧ   ಇದ್ದವರ ಆಜೀವ ಸದಸ್ಯತ್ವವನ್ನು ಏಕಪಕ್ಷೀಯವಾಗಿ ಕಿತ್ತಾಕಿದ್ದು ಆಯ್ತು. ಇದು ಆತನ ಸಣ್ಣತನ ಹಾಗೂ ಸೇಡಿನ ಮನೋಭಾವ ತೋರಿಸಿತ್ತು. *ಕೋಟಿಗಟ್ಟಲೆ ಹಣ ದುರುಪಯೋಗ!* ಆರಂಭದಿಂದಲೂ  ಕಸಾಪ  ಸಾಹಿತ್ಯ ಚಟುವಟಿಕೆಗಳಿಗೆ ಗಂಟುಮೂಟೆ ಕಟ್ಟಿ ಅಲ್ಲಿ “ಕಾನೂನಿನ ಕಡತಗಳ ಪೇರಿಸಿ”, ವಕೀಲರ ಕಚೇರಿಯನ್ನಾಗಿ ಮಾಡಿದ್ದನ್ನು ಯಾವ ಜಿಲ್ಲಾಧ್ಯಕ್ಷರು ಪ್ರಶ್ನೆ ಮಾಡದಂತೆ ಕಾಣಲಿಲ್ಲ. ಅವರನ್ನು ಭಯ, ಆತಂಕದಲ್ಲಿ ಇರಿಸಿದ್ದರು. ಕೇಂದ್ರ ಕಸಾಪ ಕಟ್ಟಡದ ಕಾಮಗಾರಿಯಲ್ಲಿ 7-8 ಕೋಟಿ ರೂ.ಗಳ ದುರುಪಯೋಗ ಆದ ಬಗ್ಗೆ ಸಾಹಿತಿಗಳು ನ್ಯಾಯಾಲಯಕ್ಕೆ ದೂರು ದಾಖಲಿಸಿದ್ದರು. ಅದು ಭಾಗಶಃ ಸಾಬೀತು ಆಗಿದ್ದು ಈ ಅಪಾರ ನಷ್ಟವನ್ನು ಜೋಶಿ ತುಂಬಿಕೊಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.ಕಸಾಪದ ಪುಟ್ಟ ಕಟ್ಟಡಕ್ಕೆ ಬರೋಬ್ಬರಿ 56 ಸಿಸಿ ಕ್ಯಾಮೆರಾ ಹಾಕಿಸಿ ಪರಿಷತ್ತನ್ನು ಕುಬ್ಜಗೊಳಿಸಿ ಕಣ್ಗಾವಲು ಇರಿಸಿದರು. (ಹೈಕೋರ್ಟು ನ್ಯಾಯಾಧೀಶರು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಿಸಿ ಕ್ಯಾಮೆರಾ ಬೇಕಾ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದರು!) *ನಾಲ್ವಡಿ ಅವರ ಫೋಟೋಗೆ ಖೋ!* ಅಧ್ಯಕ್ಷ ತಾನು ಕೂರುವ ಎ‌.ಸಿ. ಕೋಣೆ ಹಾಳು ಕೊಂಪೆಯನ್ನಾಗಿ ಮಾಡಲಾಗಿತ್ತು.  ಅಲ್ಲಿ ಕಬೋಡ್ ಕಂ ಬುಕ್ ರ್ಯಾಕಲ್ಲಿ  ಗಣಪತಿ ವಿಗ್ರಹ ಬಿಟ್ಟರೆ ಕಸಾಪದ ಒಂದು ಪ್ರಕಟಣೆಯೂ ಇಲ್ಲವಾಗಿತ್ತು! ಆ ಕೋಣೆಯಲ್ಲಿ ಕಸಾಪ ಹುಟ್ಟಿಗೆ ಕಾರಣರಾದ ಜನಪರ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋ ಸಹಾ ಇರಲಿಲ್ಲ! ಬದಲು ಭುವನೇಶ್ವರಿ ಫೋಟೋ, ಇನ್ನೊಂದು ಗೋಡೆಗೆ ಆಳೆತ್ತರದ ಗಣೇಶ ಫೋಟೊ ರಾರಾಜಿಸುತ್ತಿತ್ತು!  ಇದೆಲ್ಲ ಗಮನಿಸಿದ ಸಾಹಿತಿಗಳು ಆಡಳಿತಾಧಿಕಾರಿ ಕೆ‌.ಎ. ದಯಾನಂದ, ಐಎಎಸ್,  ಅವರಿಗೆ ಹೇಳಿದಾಗ, ಅವರಿಗೂ ಜೋಶಿ ಮಾಡಿದ ತಪ್ಪಿನ ಅರಿವಾಯ್ತು. ವಾರದಲ್ಲೇ ಖಾಲಿ ರ್ಯಾಕಿಗೆ ಕಸಾಪ ಪ್ರಕಟಣೆಗಳಾದ ನಿಘಂಟು, ಮೌಲಿಕ ಪುಸ್ತಕಗಳನ್ನು ಇರಿಸಿ, ನಾಲ್ವಡಿ ಕೃಷ್ಣರಾಜ ಒಡೆಯರ ಫೋಟೋಗೆ ವ್ಯವಸ್ಥೆ  ಮಾಡಿದರು. ಹಾಗೆಯೇ ಕಸಾಪ ಮಹಾದ್ವಾರದಲ್ಲಿ ಇದ್ದ ಮಹಾಕವಿ ಪಂಪನ  “ಮನುಷ್ಯ ಜಾತಿ ತಾನೊಂದೆ ವಲಂ” ಎಂಬ ಉದಾತ್ತ ಧ್ಯೇಯ ಹೊಂದಿದ್ದ ಕಮಾನನ್ನು ಜೋಶಿ, ಅಧಿಕಾರಕ್ಕೆ ಬಂದ ದಿನವೆ ಕಿತ್ತಾಕಿಸಿದ್ದನ್ನು ನೋವಿನಿಂದ ಹೇಳಿದ ಸಾಹಿತಿ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಅವರು “ಮತ್ತೆ ಅದನ್ನು ಬರೆಯಿಸಿ ಮರು ಸ್ಥಾಪಿಸಿ” ಅಂದದ್ದನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಈಗ ಕಸಾಪ ಆಡಳಿತ ಕಚೇರಿ ಪ್ರವೇಶ ದ್ವಾರದಲ್ಲೆ ಹಾಕಿಸಿದ್ದಕ್ಕೆ ನಮಗೆಲ್ಲ ಸಂತೋಷವಾಗಿದೆ. ಆಡಳಿತಾಧಿಕಾರಿಗೆ ನಮ್ಮ “ಕನ್ನಡ ನಾಡು ನುಡಿ ಜಾಗೃತ ಸಮಿತಿ”  ಪರವಾಗಿ  ಧನ್ಯವಾದ ಹೇಳಲೆ ಬೇಕು. ಹಣ ದುರುಪಯೋಗದಿಂದಾಗಿ  ಜೋಶಿ ಮೇಲೆ ೧೭ ಗುರುತರವಾದ ಆಪಾದನೆ  ಮಾಡಿ ಸಹಕಾರ ಇಲಾಖೆಗೆ, ನ್ಯಾಯಾಲಯಕ್ಕೆ  ದೂರು ಸಲ್ಲಿಸಿದಾಗ, ಎಲ್ಲವೂ “ಸಾಬೀತಾಗಿ”; ಇದೇ ಈಗ  ಪ್ರಾಥಮಿಕ ಸದಸ್ಯತ್ವ ರದ್ದಾಗಲು ಕಾರಣವಾಯಿತು ಎಂಬುದು ವಾಸ್ತವದ ಸಂಗತಿ. ನ್ಯಾಯಾಲಯ ಜೋಶಿಯ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದಂತೆ, ಭ್ರಷ್ಟಾಚಾರಕ್ಕು ಶಿಕ್ಷೆ ಕೊಟ್ಟು ಜೈಲಿಗೆ ಹಾಕಬೇಕು. ಜೋಸಿ  ನುಂಗಿದ ೭-೮ ಕೋಟಿ ರೂ.ಗಳ ವಸೂಲಿ ಮಾಡಬೇಕು. ಆಗಲೆ ನ್ಯಾಯಪರ ಹೋರಾಟಗಾರರಿಗೆ ಸಮಾಧಾನ ಎಂದು ಸಾಹಿತಿಗಳು ಹೇಳಿದ್ದಾರೆ. *ಸಾಹಿತಿಯನ್ನೆ ಆಯ್ಕೆ ಮಾಡಿ* ಕಸಾಪದ ೧೧೨ ವರ್ಷಗಳ ಪರಂಪರೆ, ಇತಿಹಾಸ ಇಬ್ಬರು “ಅಧಕ್ಷರ” ಕೈಗೆ ಸಿಕ್ಕು ಹಾಳಾಗಿ ಹೋಯ್ತು. ಮುಂದೆ ಬರುವವರಾದರೂ ಕಸಾಪ ಅಧಿಕಾರವನ್ನು ಬೈಲಾ ತಿದ್ದುಪಡಿ ಮಾಡಿ 3 ವರ್ಷಕ್ಕೆ ತರಲಿ. ಮುಂದೆ ಸಾಹಿತಿಯೊಬ್ಬರು ಅಧ್ಯಕ್ಷರಾಗಿ ಬಂದರೆ,  ಸರ್ವಾಧಿಕಾರಿ ಆಗಲಾರರು. ಎರಡು ಅವಧಿಯ ಅಧಿಕಾರಶಾಹಿ ಆಡಳಿತ ನೋಡಿದ ಸದಸ್ಯರು ಮೂರನೇಬಾರಿಯೂ ಅಧಿಕಾರಶಾಹಿ ಆಯ್ಕೆ ಮಾಡದೆ

“ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಹಿತಿಯೆ  ಅಧ್ಯಕ್ಷರಾಗಲಿ” ವಿಶೇಷ ಲೇಖನ,ಆರ್ ಜಿ ಹಳ್ಳಿ ನಾಗರಾಜ Read Post »

ಇತರೆ

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ

ಶರಣ ಸಂಗಾತಿ ಜಯಲಕ್ಷ್ಮಿ ಕೆ “ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಕಾಯಕ ತತ್ವದ ಮೂಲಕ ವ್ಯಕ್ತಿಗತ ವಿಕಾಸದ ಪಥವನ್ನು  ಜಗತ್ತಿಗೆ ತೋರಿದ ಶರಣನೆಂದರೆ ವಚನಕಾರ ಹಡಪದ ಅಪ್ಪಣ್ಣ.  ಕ್ಷೌರ ಮಾಡುವ ವೃತ್ತಿಯ ಮೂಲಕ ಜನರ ಮುಖಗಳನ್ನು ಅಂದಗೊಳಿಸುತ್ತಿದ್ದ ಹಡಪದ ಅಪ್ಪಣ್ಣ  ತನ್ನ ವಚನ ಸಾಹಿತ್ಯದ ಮೂಲಕ ಜನರ ಮನದಲ್ಲಿ ಮನೆ ಮಾಡಿದ್ದ ಮೂಢನಂಬಿಕೆಗಳ  ಕೊಳೆ  ತೊಳೆದು ವೈಚಾರಿಕ ಚಿಂತನೆಗೆ ದಾರಿ ತೋರಿದನು. ವ್ಯಕ್ತಿಯಾಗಲಿ ಸಮಾಜವಾಗಲಿ  ಮೌಲ್ಯಗಳ ತಳಹದಿಯಲ್ಲಿ ಸಾಗುದರಿಂದ ಮಾತ್ರ     ಅಭಿವೃದ್ಧಿಯಾಗಲು ಸಾಧ್ಯ ಎಂಬುದನ್ನು ತನ್ನ ವೃತ್ತಿ ಮತ್ತು ಪ್ರವೃತ್ತಿಗಳ ಮೂಲಕ  ಜಗತ್ತಿಗೆ ಸಾರಿದವನು ಹಡಪದ ಅಪ್ಪಣ್ಣ. ಮಾಡುವ ಕೆಲಸ ಯಾವುದೇ ಇರಲಿ ಮೇಲು ಕೀಳು ಎಂದು ಭಾವಿಸದೆ , ತಮ್ಮ ಹೆಸರಿನ ಹಿಂದೆ ಕಾಯಕವನ್ನು ಅಂಟಿಸಿಕೊಂಡು ಆ ಕಾಯಕಕ್ಕೆ ಅಂತಿದ್ದ ಜಾತಿಯ ಲೇಪವನ್ನು ತೊಡೆದು ಹಾಕಿದವರು ವಚನಗಾರರು. ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ,  ಮೇಧಾರ ಕೇತಯ್ಯ ಮೊದಲಾದವರಂತೆ ಹಡಪದ ಅಪ್ಪಣ್ಣ ಕೂಡಾ ತನ್ನ ಕುಲಕಸುಬನ್ನು ಸತ್ಯ ಶುದ್ಧ ಕಾಯಕವನ್ನಾಗಿ ಪರಿವರ್ತಿಸಿಕೊಂಡವನು. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳದ ಚೆನ್ನವೀರಪ್ಪ ಮತ್ತು ದೇವಕಮ್ಮ ದಂಪತಿಗಳ ಪುತ್ರನಾದ  ಹಡಪದ ಅಪ್ಪಣ್ಣನವರು ಚೆನ್ನಮಲ್ಲೇಶ್ವರರಿಂದ ದೀಕ್ಷೆಯನ್ನು ಪಡೆದರು. ಕಾಯಕ ನಿಷ್ಠೆಯಿಂದಲೇ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿದ್ದ ಮೌಢ್ಯ ನಡವಳಿಕೆಗಳನ್ನು  ತೊಡೆದು ಹಾಕಿದ ಕೀರ್ತಿ ಶರಣ ಅಪ್ಪಣ್ಣನಿಗೆ ಸಲ್ಲುತ್ತದೆ. ತನ್ನ ವೃತ್ತಿಯ ಬಗ್ಗೆ ಯಾವ ಕೀಳರಿಮೆಯೂ ಇಲ್ಲದೆ ಪ್ರಾಮಾಣಿಕವಾಗಿ ಕಾಯಕ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಭಕ್ತಿ ಭಂಡಾರಿ ಬಸವಣ್ಣನವರ ರಕ್ಷಾ ಕವಚವಾಗಿ, ಅವರ ಬಲಗೈ ಭಂಟನಾಗಿ, “ವಿಶ್ವದ ಪ್ರ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ” ಎಂದೇ ಪ್ರಸಿದ್ಧವಾದ ಅನುಭವ ಮಂಟಪದಲ್ಲಿ ಬಸವಣ್ಣನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯಕ್ಷಮತೆ ಮೆರೆದವರು. ಬೆಳಗೆದ್ದು ಹಡಪದ( ಕ್ಷೌರಿಕ ) ನ ಮುಖವನ್ನು ನೋಡಿದರೆ ಅಪಶಕುನ ಎಂದು ಪರಿಭಾವಿಸಿದ್ದ ಆ ಕಾಲದಲ್ಲಿ ” ತಮ್ಮನ್ನು ಕಾಣಲು ಬರುವ ಯಾವ ವ್ಯಕ್ತಿಯಾದರೂ ಸರಿ, ಮೊದಲು ತನ್ನ ಕಾರ್ಯದರ್ಶಿ ಹಡಪದ ಅಪ್ಪಣ್ಣನನ್ನು ನೋಡಿಯೇ ತನ್ನ ಬಳಿಗೆ ಬರತಕ್ಕದ್ದು ” ಎನ್ನುವ ಬಸವಣ್ಣನವರ ನಿಯಮ ಅವರು ಶರಣ ಅಪ್ಪಣ್ಣನವರಿಗೆ ನೀಡಿದ್ದ ಆದ್ಯತೆ ಹಾಗೂ ಅವನ ಮೇಲಿನ ನಂಬಿಕೆ,ವಿಶ್ವಾಸ, ಗೌರವಾದರ ಸಂಕೇತವಾಗಿದೆ.  ಕಾಯಕ ನಿಷ್ಠೆ, ದಾಸೋಹ, ಆಚಾರ -ವಿಚಾರ ಇತ್ಯಾದಿಗಳ ಬಗೆಗಿನ  ಹಡಪದ ಅಪ್ಪಣ್ಣನ ಚಿಂತನೆಗಳು ಅವರು ರಚಿಸಿದ ವಚನಗಳಲ್ಲಿ ಬಿಂಬಿತವಾಗಿವೆ. ಜನ ಸಮುದಾಯದಲ್ಲಿದ್ದ ಮೂಢ ನಂಬಿಕೆ ಹಾಗೂ ಶೋಷಣೆಯನ್ನು   ವಚನಗಳ  ಮೂಲಕವೇ ತೀವ್ರವಾಗಿ ಖಂಡಿಸುತ್ತಾ,   ಪ್ರಾಮಾಣಿಕವಾಗಿ ತನ್ನ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಸಂತೋಷವಾಗಿದ್ದ ಹಡಪದ ಅಪ್ಪಣ್ಣನನ್ನು ಜಗಜ್ಯೋತಿ ಬಸವಣ್ಣನವರು ” ನಿಜ ಸುಖಿ ” ಎಂದೇ ಕರೆದರು. ಇವರು ಸುಮಾರು ಇನ್ನೂರ ಐವತ್ತು (250) ವಚನಗಳನ್ನು ರಚಿಸಿದ್ದು ಅವೆಲ್ಲವೂ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅಪೂರ್ವ ಕೊಡುಗೆಯೇ ಆಗಿವೆ. ” ನುಡಿದರೆ ಗುರುವಾಗಿ ನುಡಿಯಬೇಕುನಡೆದರೆ ಪರವಾಗಿ ನಡೆಯಬೇಕುಕುಳಿತರೆ ಲಿಂಗವಾಗಿ ಕುಳಿತಿರಬೇಕುಇದ್ದರೆ ಜಂಗಮನಾಗಿ ಇರಬೇಕುಈ ನಾಲ್ಕರ ಹೊಂದಿಕೆಯನ್ನರಿಯದವನು ಎಷ್ಟು ದಿನವಿದ್ದರೂ ಫಲವೇನು ಹೇಳಾ…ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ..ಎನ್ನುವ ಶರಣ ಹಡಪದ  ಅಪ್ಪಣ್ಣ   ನಮ್ಮ ನಡೆ ನುಡಿ ಬದುಕೆಲ್ಲ ಗುರು ಲಿಂಗ ಜಂಗಮ ಎನ್ನುವ ತ್ರಿವಿಧಗಳಿಗೆ ಮೆಚ್ಚುಗೆಯಾಗುವಂತಿರಬೇಕು ಎಂದಿದ್ದಾರೆ.  ನಮ್ಮ ನಡೆಗೂ ನುಡಿಗೂ ಸಾಮರಸ್ಯವಿರಬೇಕು ಎನ್ನುವುದನ್ನು ” ನುಡಿದರೇನಯ್ಯಾ.. ನಡೆ ಇಲ್ಲದನ್ನಕ್ಕ…ನಡೆದರೇನಯ್ಯ ನುಡಿ ಇಲ್ಲದನ್ನಕ್ಕ ” ಎಂಬ ವಚನನ ಮುಖೇನ ಪ್ರತಿಪಾದಿಸಿದ್ದಾರೆ. ” ಮನವನರಿದವಂಗೆ ಮತದ ಹಂಗೇಕೋ… ನಿತ್ಯವನರಿದಂಗೆ ತೀರ್ಥದ ಹಂಗೇಕೋ ” ಎನ್ನುವ ಮೂಲಕ ಜಾತಿ ಮತ ದೇವರುಗಳ ವಿಚಾರವಾಗಿ ಜನ ಮನದಲ್ಲಿಇರಬೇಕಾದ ಅರಿವಿನ ಸ್ಪಷ್ಟ ಚಿತ್ರಣ ಮೂಡಿಸುತ್ತಾ ” ಅರಿವೆಂಬುದೇ ಆಚಾರ, ಆಚಾರವೆಂಬುದೇ ಅರಿವು ”  ಎಂದು ವಚನಗಳ ಮೂಲಕ ಸಾರಿದ್ದಾರೆ. ಹೆಸರು ಮತ್ತು ಕೀರ್ತಿ ನಮ್ಮನ್ನರಸಿ ಬರಬೇಕೇ ಹೊರತು ಮನುಷ್ಯ ಅವುಗಳನ್ನು ಅರಸಿ ಹೋಗಬಾರದು ಎನ್ನುವ ಅವರ ನಿಲುವು ” ವಂದನೆಗಾಗಿ ನಿಲ್ಲಬೇಡ, ನಿಂದೆಗಂಜಿ ಓದಬೇಡ, ” ಎನ್ನುವ ವಚನದ ಮೂಲಕ ವ್ಯಕ್ತವಾದರೆ ” ದ್ವಂದ್ವ ಬುದ್ಧಿಯ ಕಳೆದು ನಿಂತವನ ಬಸವ ಪ್ರಿಯ ಕೂಡಲಚೆನ್ನಬಸವಣ್ಣ ಪೊರೆವ ” ಎನ್ನುವ ವಚನದಲ್ಲಿ ನಾವು ಇತರರ ಸಮ್ಮುಖದಲ್ಲಿ ಆಡುವ ಮಾತಿಗೂ ಅವರ ಹಿಂದೆ ಅವರ ಬಗ್ಗೆ ಪರರೊಂದಿಗೆ ಆಡುವ ಮಾತಿಗೂ ವ್ಯತ್ಯಾಸವಿರಬಾರದು ಎನ್ನುವ ವಿವೇಕವಿದೆ.  ಕಲ್ಯಾಣ ಕ್ರಾಂತಿಯ ವರೆಗೂ ಬಸವಣ್ಣನ ಜೊತೆಯಲ್ಲಿಯೇ ಇದ್ದು ತದ ನಂತರ ಕೂಡಲಸಂಗಮಕ್ಕೆ ತೆರಳಿ ಅಲ್ಲಿ ಲಿಂಗೈಕ್ಯರಾದ ಹಡಪದ ಅಪ್ಪಣ್ಣನ ಸರಳ ವ್ಯಕ್ತಿತ್ವ ಮತ್ತು ಉದಾತ್ತ ಚಿಂತನೆಗಳು ಆದರ್ಶಪ್ರಾಯ ಮತ್ತು ಅನುಕರಣೀಯ. ತನ್ನ ಕಾಯಕ ಮತ್ತು ಸಾಹಿತ್ಯದಿಂದ ಸಾಮಾಜಿಕ ಕ್ರಾಂತಿಯನ್ನೇ ಹುಟ್ಟು ಹಾಕಿದ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ ಹಡಪದ ಅಪ್ಪಣ್ಣನವರ 892 ನೇ ಜನುಮ ದಿನಾಚರಣೆಯನ್ನು ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದೆ. ಜಯಲಕ್ಷ್ಮಿ ಕೆಮಡಿಕೇರಿ.

“ನಿಜ ಸುಖಿ ವಚನಕಾರ ಹಡಪದ ಅಪ್ಪಣ್ಣ” ಜಯಲಕ್ಷ್ಮಿ ಕೆ Read Post »

ಇತರೆ

“ನಮ್ಮ ಬದುಕಿನ ಬ್ಯಾಟರಿಯ ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್

ಬದುಕಿನ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ನಮ್ಮ ಬದುಕಿನ ಬ್ಯಾಟರಿಯ . ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ಈ ಹಿಂದೆ ನಮ್ಮ ಮನೆಗಳಲ್ಲಿ ರಾತ್ರಿಯ ಸಮಯದಲ್ಲಿ ಹಿತ್ತಲಿಗೆ ಹೋಗಲು, ಕರೆಂಟ್ ಇಲ್ಲದ ಸಮಯದಲ್ಲಿ  ರಸ್ತೆಯಲ್ಲಿ ಓಡಾಡಲು,, ಹೊಲಗಳಿಗೆ ಹೋಗಲು ಹೀಗೆ ಹತ್ತಾರು ಕೆಲಸ ಕಾರ್ಯಗಳಿಗೆ ಟಾರ್ಚ್ ಗಳನ್ನು ಬಳಸುತ್ತಿದ್ದರು .ರೂಢಿಯ ಭಾಷೆಯಲ್ಲಿ ಬ್ಯಾಟರಿ ಎಂದು ಇವುಗಳನ್ನು ಕರೆಯುತ್ತಿದ್ದರು. ಜೇಬಿನಲ್ಲಿ ಇಟ್ಟುಕೊಳ್ಳುವ ಅಂಗೈಯಲ್ಲಿ ಹಿಡಿಯುವಷ್ಟು ಪುಟ್ಟದಾದ ಪೆನ್ಸಿಲ್ ಟಾರ್ಚ್ ನಿಂದ ಹಿಡಿದು 50-60 ಅಡಿ ದೂರದವರೆಗೆ ಬೆಳಕನ್ನು ಚೆಲ್ಲುವ ದೊಡ್ಡ ಟಾರ್ಚ್ ಗಳು ಪ್ರತಿಯೊಬ್ಬರ ಮನೆಯ ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತಿದ್ದವು. ಅವುಗಳ ಆಕರ ಕೋಶಗಳನ್ನು ಬ್ಯಾಟರಿ ಎಂದು ಕರೆಯುತ್ತಿದ್ದರು. ಸೆಲ್ ಗಳನ್ನು ಬಳಸಿ ಬೆಳಕನ್ನು ಪಡೆಯುವ ಈ ಬ್ಯಾಟರಿಗಳು ಇದೀಗ ಅತ್ಯಂತ ಪುಟ್ಟ ಗಾತ್ರಗಳನ್ನು ಹೊಂದಿದ್ದು ಗಡಿಯಾರದಿಂದ ಹಿಡಿದು ಎಲ್ಲ ಎಲೆಕ್ಟ್ರಾನಿಕ್ ಸಾಮಾನುಗಳಲ್ಲಿ ತಮ್ಮ ಸ್ಥಾನವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿವೆ.ಆದರೆ ಸ್ನೇಹಿತರೆ !ನಿಮಗೆ ಗೊತ್ತೇ ?ನಮ್ಮ ದೇಹ ಒಂದು ಮಾನವ ಬ್ಯಾಟರಿ. ಮನುಷ್ಯನೇ ಒಂದು ಹ್ಯೂಮನ್ ಬ್ಯಾಟರಿ ಎಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ದೇಹ ಎಂಬ ಬ್ಯಾಟರಿಯು ನೀಡುವ ಶಕ್ತಿಯಿಂದ ನಾವು ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ದೈಹಿಕ ಶಕ್ತಿಯು….ನಮ್ಮ ದೇಹವು ಒಂದು ಇಂಧನವಾಗಿ ಇಡೀ ದೇಹದ ಎಲ್ಲಾ ಅಂಗಗಳು ಸಕ್ಸಮವಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡುತ್ತದೆ. ಆಹಾರದ ಮೂಲಕ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೆ ಸಂಚಯವಾದ ಶಕ್ತಿಯನ್ನು ವಿವಿಧ ಅಂಗಗಳ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬಳಸುತ್ತದೆ. ದೈಹಿಕ ಸಾಮರ್ಥ್ಯವನ್ನು, ದೇಹದ ಚಾಲಕ ಬಲವನ್ನು ಹೆಚ್ಚಿಸುತ್ತದೆ. ನಮ್ಮ ದೇಹದ ಭಾವನಾಶಕ್ತಿಯ ಆಕರ ಹೃದಯವಾಗಿದ್ದು ಇದು ನಮ್ಮ ಮನಸ್ಸಿನ ಭಾವಗಳನ್ನು ನಿಯಂತ್ರಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಕಾರ್ಯ ಚಟುವಟಿಕೆಯ ಜೊತೆಗೆ ನಮ್ಮ ಮಾನಸಿಕ, ಭಾವನಾತ್ಮಕ ಚಟುವಟಿಕೆಗಳಿಗೆ ಇದುವೇ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಬಂಧಗಳನ್ನು ಜೋಡಿಸುವ, ಸೌಹಾರ್ದತೆಯನ್ನು ತುಂಬುವ ಸಾಮರ್ಥ್ಯ ಇದಕ್ಕಿದೆ. ಪ್ರೀತಿ,ಪ್ರೇಮ, ಸ್ನೇಹ, ಕರುಣೆ, ವಿಶ್ವಾಸ, ಸಹಾನುಭೂತಿಗಳಂತಹ ಒಳ್ಳೆಯ ಭಾವಗಳ ಜೊತೆಗೆ ಸಿಟ್ಟು, ಸೆಡವು, ಕ್ರೌರ್ಯ, ಅಸಮಾಧಾನ, ಅಜ್ಞಾನ ಮುಂತಾದ ಭಾವಗಳನ್ನು ಕೂಡ ಇದು ಹೊಂದಿರುತ್ತದೆ. ಇದರಲ್ಲಿ ಯಾವುದನ್ನು ನಾವು ಹೆಚ್ಚು ಪೋಷಿಸುತ್ತೇವೆಯೋ ಅವೇ ಗುಣಗಳು ನಮ್ಮನ್ನು ಆಳುತ್ತವೆ. ಒಳ್ಳೆಯ ಕುಟುಂಬ, ಪಾಲಕರು, ಉತ್ತಮ ಸಂಸ್ಕಾರಗಳು, ಸೌಹಾರ್ದ ಮತ್ತು ಸಾಮರಸ್ಯಗಳನ್ನು ಹೊಂದಿರುವ ಸಾಮಾಜಿಕ ಪರಿಸರ ನಮ್ಮನ್ನು ರೂಪುಗೊಳಿಸುತ್ತದೆ…. ಇದೆಲ್ಲವನ್ನು ತನ್ನ ಮೂಲಕ ಗ್ರಹಿಸುವ ಹೃದಯವು ನಮ್ಮೆಲ್ಲ ಭಾವನಾತ್ಮಕ ಯೋಚನೆಗಳು ಹಾಗೂ ಯೋಜನೆಗಳಿಗೆ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.ಮಾನಸಿಕ ಶಕ್ತಿ …. ಸಾಮಾನ್ಯವಾಗಿ ಬುದ್ಧಿ, ಜ್ಞಾನ ಎಂದೆಲ್ಲ ಕರೆಯಲ್ಪಡುವ ಈ ಶಕ್ತಿಯನ್ನು ನಮ್ಮ ದೇಹದ ಮೆದುಳಿನ ಭಾಗ ಹೊಂದಿದೆ. ಸೃಷ್ಟಿ ಕಾರ್ಯದ ಶಕ್ತಿಯನ್ನು ಮೆದುಳು ಹೊಂದಿದೆ. ನಮ್ಮೆಲ್ಲ ಕಾರ್ಯ ಯೋಜನೆಗಳ ಸೃಷ್ಟಿಯಾಗುವುದು ಮೊದಲು ಇಲ್ಲಿಯೇ. ನಂತರ ವಿವಿಧ ಅಂಗಗಳ ಮೂಲಕ ಅದು ಕಾರ್ಯಗತವಾಗುತ್ತದೆ ಆ ಮಾತು ಬೇರೆ. ನಮ್ಮ ಯೋಚನೆಗಳು, ಯೋಜನೆಗಳು ಸೃಷ್ಟಿಯಾಗುವುದು ನಮ್ಮ ಮೆದುಳಿನಲ್ಲಿಯೇ. ನಮ್ಮ ಗ್ರಹಿಕೆಗಳು ಬೇರೂರುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಬದುಕಿನಲ್ಲಿ ನಾವು ಸಾಧಿಸಬೇಕೆಂದಿರುವ ಗುರಿಯನ್ನು ಹೊಂದುವ ಉದ್ದೇಶ ಸೃಷ್ಟಿಯಾಗುವುದು ಕೂಡ ನಮ್ಮ ಮೆದುಳಿನಲ್ಲಿಯೇ. ನಮ್ಮ ಯೋಚನೆಗಳಲ್ಲಿ ಹುಟ್ಟುವ ತಪ್ಪು-ಸರಿ, ಒಳಿತು-ಕೆಡುಕು ಗಳ ಕುರಿತು ಸ್ಪಷ್ಟವಾದ ತಿಳುವಳಿಕೆಯನ್ನು ನಮಗೆ ನೀಡಲು ಮೆದುಳು ಅತ್ಯಂತ ಸಹಾಯಕ.ಸ್ನೇಹಿತರೆ, ಒಂದೊಮ್ಮೆ ನಮ್ಮ ದೇಹ, ಭಾವ, ಬುದ್ಧಿಗಳು ಏಕಾತ್ಮಕವಾದರೆ ಅದು ದಿವ್ಯ ಶಕ್ತಿಯಾಗಿ ಪರಿಣಮಿಸುತ್ತದೆ. ನಮ್ಮ ದೇಹ ಮನಸ್ಸು ಮತ್ತು ಬುದ್ಧಿಗಳನ್ನು ಒಂದು ಸರಳ ರೇಖೆಯಲ್ಲಿ ಹಿಡಿದಿಡುವ ದಿವ್ಯ ಶಕ್ತಿ ಅಷ್ಟಾಂಗ ಯೋಗದಲ್ಲಿದೆ. ಹೌದು ಅಷ್ಟಾಂಗ ಯೋಗದ ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಗಳಲ್ಲಿ ಮೊದಲ ಎರಡು ನಿಯಮಗಳು ನಮಗೆ ಸಾಮಾಜಿಕ ಮತ್ತು ವೈಯುಕ್ತಿಕ ಬದುಕಿನಲ್ಲಿ ನಾವು ಪಾಲಿಸಬಹುದಾದ ಶಿಸ್ತಿನ ಪಾಠವನ್ನು ನಮಗೆ ಹೇಳಿ ಕೊಡುತ್ತವೆ. ಆಸನವು ನಮಗೆ ದೇಹವನ್ನು ಸುಲಲಿತವಾಗಿ ಬಳಸುವ ಮೂಲಕ ನಿಯಮಿತವಾದ ಉಚ್ಚ್ವಾಸ ಮತ್ತು ನಿ:ಶ್ವಾಸಗಳ  ಜೊತೆಗೆ ವಿವಿಧ ಬಗೆಯ ಭಂಗಿಗಳನ್ನು ವ್ಯಾಯಾಮದ ರೂಪದಲ್ಲಿ ಅಭ್ಯಾಸ ಮಾಡಲು…ತನ್ಮೂಲಕ ಶಾರೀರಿಕ ಹಾಗೂ  ಮಾನಸಿಕ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ. ಪ್ರಾಣಾಯಾಮದ ವಿವಿಧ ಕ್ರಿಯೆಗಳು ಮಾನಸಿಕ ಸ್ಥಿತಿಯ ಸಮತೋಲನಕ್ಕೆ ಕಾರಣವಾಗುತ್ತದೆ. ಪ್ರತ್ಯಾಹಾರವು ನಮ್ಮನ್ನು ವಿಚಲಿತಗೊಳಿಸುವ ಇಂದ್ರಿಯಗಳನ್ನು ನಿಗ್ರಹಿಸಲು ಸಹಾಯಕವಾಗುತ್ತದೆ ನಮ್ಮನ್ನು ಆಕರ್ಷಿಸುವ ಎಲ್ಲ ಬಗೆಯ ಲೌಕಿಕ ವಿಷಯಗಳ ಮೇಲೆ ನಿಯಂತ್ರಣವನ್ನು ಹೊಂದುವ ಕ್ರಿಯೆಯೇ ಪ್ರತ್ಯಾಹಾರ. ಅಷ್ಟಾಂಗ ಯೋಗದ ಕೊನೆಯ ಮೂರು ಅಂಗಗಳಾದ ಧ್ಯಾನ ಧಾರಣ ಹಾಗೂ ಸಮಾಧಿಗಳು ಮನುಷ್ಯನನ್ನು ಆಂತರಿಕವಾಗಿ ಬಲಿಷ್ಠಗೊಳಿಸಿ ಲೌಕಿಕ ವಿಷಯಗಳಿಂದ ಒಂದು ಒಳ್ಳೆಯ ಅಂತರವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗಿ ಕಾರ್ಯನಿರ್ವಹಿಸುತ್ತವೆ…. ಎಲ್ಲವನ್ನು ಸಮಚಿತ್ತ, ಸಮಭಾವದಿಂದ ನೋಡುವ ಮಾನಸಿಕ ಶಕ್ತಿ ಇವುಗಳನ್ನು ರೂಡಿಸಿಕೊಳ್ಳುವವರ ಪಾಲಾಗುತ್ತದೆ   ಧಾರಣ ಎಂದರೆ ಏಕಾಗ್ರತೆ. ಮಾಡುವ ಯಾವುದೇ ಕೆಲಸದಲ್ಲಿಯೂ ಶ್ರದ್ದೆ ಹಾಗೂ ತನ್ಮಯತೆಯನ್ನು ಹೊಂದಿ ಏಕಾಗ್ರ ಚಿತ್ರದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು. ಅಷ್ಟಾಂಗ ಯೋಗದ ಮೊದಲ ಏಳು ಅಂಗಗಳನ್ನು ನಾವು ನಿರ್ವಹಿಸಿದಾಗ ನಮಗೆ ದೊರೆಯುವ ಸ್ಥಿತಿಯೇ ಸಮಾಧಿ. ಸಮಾಧಿ ಸ್ಥಿತಿಯಲ್ಲಿ ವ್ಯಕ್ತಿಯು ತನ್ನ ಅಹಮಿಕೆಯಿಂದ,, ಎಲ್ಲ ರೀತಿಯ ಇಂದ್ರಿಯ ಲಾಲಸೆಗಳಿಂದ ಸಂಪೂರ್ಣ ಮುಕ್ತವಾಗಿರುತ್ತಾನೆ ಹಾಗೂ ಈ ಬ್ರಹ್ಮಾಂಡದ ಅನಂತತೆಯಲ್ಲಿ ತನ್ನನ್ನು ತಾನು ಒಂದಾಗಿಸಿಕೊಳ್ಳುತ್ತಾನೆ.ಹೀಗೆ ತನ್ನ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಬದುಕನ್ನು ಏಕತ್ರಗೊಳಿಸುವ ವ್ಯಕ್ತಿಯ ಬದುಕು ಖಂಡಿತವಾಗಿಯೂ ಬದಲಾಗುತ್ತದೆ. ಆತನ ಸುತ್ತಲೂ ಆತನ ವ್ಯಕ್ತಿತ್ವದ ಪ್ರಭಾವಳಿ ಹರಡುತ್ತದೆ. ಆತನ ನಿರ್ಣಯಗಳು ವೈಯುಕ್ತಿಕತೆಯನ್ನು ಹಿಂದಕ್ಕೆಳಸಿ ಮನುಕುಲದ ಉದ್ಧಾರವನ್ನು ಕುರಿತಾಗಿ ಇರುತ್ತದೆ.ನೋಡಿದಿರಾ ಸ್ನೇಹಿತರೆ ಬದುಕು ನಮ್ಮದು ನಿರ್ಧಾರಗಳು ಕೂಡ ನಮ್ಮವೇ ಆಗಿರಬೇಕು ನಮ್ಮ ಬದುಕಿನ ಚುಕ್ಕಾಣಿಯನ್ನು ನಾವೇ ಹಿಡಿದು ಒಳ್ಳೆಯ ಹವ್ಯಾಸಗಳನ್ನು ನಮಗಾಗಿಸಿಕೊಂಡು ಬದುಕನ್ನು ಬಂಗಾರವಾಗಿಸಿಕೊಳ್ಳುವ ಆಯ್ಕೆ ಹಾಗೂ ಹಕ್ಕು ನಮ್ಮದೇ ಏನಂತೀರಾ? ವೀಣಾ ಹೇಮಂತ್ ಗೌಡ ಪಾಟೀಲ್ 

“ನಮ್ಮ ಬದುಕಿನ ಬ್ಯಾಟರಿಯ ಚಾರ್ಜಿಂಗ್… ನಮ್ಮದೇ ಜವಾಬ್ದಾರಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ, ಜೀವನ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಬೆಳಗುವ ಬಾಳಿಗೆ ಕರಗುವ ಮನಸ್ಸು ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ದಯೆ ಎಂದರೇನು? ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ. ‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು. ಸಹಾನುಭೂತಿ ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ. ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’ ಆಲಿಸಿ ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.ಸಕಾರಾತ್ಮಕತೆಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್‌ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು. ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’ ಪ್ರಕೃತಿ ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು. ಕ್ಷಮಾ ಗುಣ ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.ಭಾವನಾತ್ಮಕತೆಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು.  ‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ.  ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’ ಬದುಕಲು ಬಿಡೋಣ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ  ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು ಜಯಶ್ರೀ.ಜೆ. ಅಬ್ಬಿಗೇರಿ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ Read Post »

ಇತರೆ, ಶಿಕ್ಷಣ

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು.

ಶಿಕ್ಷಣ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ಅಂಕ ಆಧಾರಿತ ಶಿಕ್ಷಣಕ್ಕಿಂತ ಕೌಶಲ್ಯ ಮತ್ತು ವೃತ್ತಿಪರತೆ ಆಧಾರಿತ ಮೂಲ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಈ ಶಿಕ್ಷಣ ವ್ಯವಸ್ಥೆ ಸುಧಾರಿಸಬಹುದೇನೋ. ಅಂಕ ಮಾಡಲು ಯೋಗ್ಯತೆ ಇಲ್ಲದವನು ಅದನ್ನು ಕೊಂಡುಕೊಂಡು ಅದೆಷ್ಟೋ ಪ್ರತಿಭಾವಂತರಿಗೆ ತೊಂದರೆ ಮಾಡುವ ಬದಲು ವೃತ್ತಿ ಕೌಶಲ್ಯ ಆಧಾರಿತ ಕಲಿಕೆ ಪ್ರತಿಭಾವಂತರನ್ನು ಸೃಷ್ಟಿಸುತ್ತದೆ. ಕೌಶಲ್ಯ ಮತ್ತು ಪ್ರತಿಭೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವತಃ ರೂಡಿಸಿಕೊಳ್ಳುವಂತದ್ದು. ಕೆಲಸಕ್ಕೆ ತಕ್ಕ ಕೌಶಲ್ಯ ಕೌಶಲ್ಯಕ್ಕೆ ತಕ್ಕ ಅನುಭವ ಅನುಭವಕ್ಕೆ ತಕ್ಕ ಪರಿಶ್ರಮ ಸಿಕ್ಕಾಗ ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಬಲ ತುಂಬಿದಂತಾಗುತ್ತದೆ.    ಬರೀ ಅಂಕ ಗಳಿಕೆಯ ಹಿಂದೆ ಓಡುತ್ತಿರುವ ಇಂದಿನ ಯುವ ಸಮುದಾಯ ಅತ್ತ ಅಂಕ ಗಳಿಸಲು ಬರದಾಡುತ್ತಿದ್ದರೆ ಇತ್ತ ಪಟ್ಟಭದ್ರರು ತಮ್ಮವರ ಹಿತಕ್ಕಾಗಿ ಕೋಟ್ಯಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ತಾವು ಮಾತ್ರ ತಮ್ಮ ಹಣ ಅಧಿಕಾರ ಪ್ರಭಾವ ಬಳಸಿ ಎಲ್ಲಾ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮೆರೆಯುತ್ತಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಹೆತ್ತವರಿಗೆ ಇನ್ನಿಲ್ಲದ ನೋವು ಕೊಡುವ ಪರಿಸ್ಥಿತಿಗೆ ತಂದು ಬಿಟ್ಟಿದೆ ಈ ವ್ಯವಸ್ಥೆ. ಶಿಕ್ಷಣ ಸ್ವಉದ್ಯೋಗಿಗಳನ್ನು ಸೃಷ್ಟಿ ಮಾಡಬೇಕೆ ವಿನಹ ಸರ್ಕಾರ ಸಂಘ ಸಂಸ್ಥೆಗಳ ಬಾಗಿಲಲ್ಲಿ ನಿಂತು ಕೆಲಸಕ್ಕಾಗಿ ಅಂಗಲಾಚುವ ದೈನಿಶಿ ಸ್ಥಿತಿಯಲ್ಲಿ ಮಕ್ಕಳನ್ನು ತಂದು ನಿಲ್ಲಿಸಿದೆ.    ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡುವ ಬದಲು ಪುಸ್ತಕದ ಹುಳುಗಳನ್ನಾಗಿಸಿ ಸ್ವಂತಿಕೆಯನ್ನೇ ಮರೆಸಿ ಕೇವಲ ಅಂಕ ್ರ್ಯಾಂಕ್ಗಳ ಹಿಂದೆ ಓಡುವಂತೆ ಮಾಡಿದೆ. ಇಲ್ಲಿ ವಿಫಲನಾದನವನಿಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳುವ ಬದಲು ಕೈ ತಪ್ಪಿದ ಅವಕಾಶದ ಚಿಂತೆಯಲ್ಲಿಯೇ ಬದುಕು ಭವಿಷ್ಯಗಳ ಎರಡನ್ನು ಕತ್ತಲೆ ಮಾಡಿಕೊಂಡು ಹೆತ್ತವರಿಗೆ ಸರಿಯಾಗಿ ಜನ್ಮಕ್ಕಾಗುವಷ್ಟು ನೋವನ್ನು ನೀಡಿ ಸೊರಗಿ ಹೋಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಸತ್ಯತೆ ಮತ್ತು ಪ್ರಾಮಾಣಿಕತೆಗೆ ಅವಕಾಶ ಇರುವುದಿಲ್ಲ. ಅಲ್ಲಿ ಏನಿದ್ದರೂ ತಾಂತ್ರಿಕತೆಗೆ ನಾವೆಷ್ಟು ಸಮರ್ಥರು ಎಂಬುದನ್ನು ಸಾಬೀತುಪಡಿಸಬೇಕಷ್ಟೆ. ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆ ಇಲ್ಲದವನು ಹಣ ಅಧಿಕಾರಗಳ ಪ್ರಭಾವ ಬಳಸಿ ಅದನ್ನು ಕೊಂಡುಕೊಳ್ಳಲು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ದುರಂತ. ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ಕತ್ತಲಾಗಿಸಿಬಿಡುತ್ತದೆ.     ಶಿಕ್ಷಣ ಜ್ಞಾನವನ್ನು ಕೊಡಬೇಕು ಅಂಕಗಳನ್ನಲ್ಲ. ಜ್ಞಾನ ಬದುಕನ್ನು ಅನ್ವೇಶಿಸಿ ಸರಿ ತಪ್ಪುಗಳ ವಿಶ್ಲೇಷಿಸಿ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಓದಿನಲ್ಲಿ ಮುಂದಿರುವವರಿಗೆ ಬದುಕಿನ ಪರ್ಯಾಯ ಹಾದಿಗಳು ಗೊತ್ತೇ ಇರುವುದಿಲ್ಲ. ಕುದುರೆಗೆ ಕಣ್ಣು ಕಟ್ಟಿದಂತೆ ಓಡುವುದಷ್ಟೇ ಅವನ ಗುರಿಯಾಗಿರುತ್ತದೆ. ಕೈಗೆಟುಕದ ಉನ್ನತ ಗುರಿಗಿಂತಲೂ ಅಂಗೈಯಲ್ಲಿರುವ ಬೆಣ್ಣೆಯನ್ನೇ ತುಪ್ಪವಾಗಿಸುವ ಕೌಶಲ್ಯವನ್ನು ಇಂದಿನ ಶಿಕ್ಷಣ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ತಂತ್ರಜ್ಞಾನದ ಆವಿಷ್ಕಾರ ಮನುಷ್ಯನನ್ನು ಸೋಮಾರಿಯಾಗಿಸಿದೆ. ಅವನ ಶ್ರಮದ ಕೆಲಸಗಳನ್ನೆಲ್ಲ ನುಂಗಿ ಹಾಕಿ ಗುಂಡಿ ಬತ್ತಿದರೆ ಸಾಕು ಆಗಬೇಕಾದ ಕೆಲಸಗಳೆಲ್ಲ ನಿರ್ದಿಷ್ಟ ಸಮಯದಲ್ಲಿ ಮುಗಿಸಿ ಕೊಡುತ್ತಿರುವಾಗ ಮನುಷ್ಯನ ದೈಹಿಕ ಶ್ರಮ ಕೌಶಲ್ಯ ಎಲ್ಲವೂ ಮೂಲೆಗುಂಪಾಗಿ ನಿರುದ್ಯೋಗಿಗಳು ಉತ್ಪಾದನೆಯಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೇಶದ ಪ್ರಗತಿಯ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಲಿದೆ.      ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾದ ಈ ಕಾಲಘಟ್ಟದಲ್ಲಿ ಪ್ರತಿಭೆಗಳು ಹುಟ್ಟುವುದು ಅಷ್ಟು ಸುಲಭವಲ್ಲ. ಉಳ್ಳವರ ಎದೆಗೊದ್ದು ಪ್ರತಿಭಾವಂತ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಲ್ಲೂ ಇಂದಿನ ರಾಜಕೀಯ ವ್ಯವಸ್ಥೆ ಕೇವಲ ಗುಲಾಮರನ್ನು ಸೃಷ್ಟಿಸುವ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತಿದೆ ವಿನಹ ಕೌಶಲ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದು ಅವರರಿಗೂ ಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ಗಳಿಸಿಕೊಂಡು ತಾನು ಮಾತ್ರ ಉದ್ದಾರವಾಗುವ ಮನಸ್ಥಿತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಹೀಗಿರುವಾಗ ಓದಿದ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಕರ್ತನನ್ನಾಗಿಸುವ ಬದಲು ಕೇವಲ ಅನುಯಾಯಿಯಾಗಿ ಅನುಸರಿಸುವ ಅಮಾಯಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ.     ಯುವ ಸಮುದಾಯ ಒಂದು ಮಹಾನ್ ಶಕ್ತಿ. ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇಂದು ಅದನ್ನು ಮಾರ್ಗದರ್ಶಿಸುವ ಹಾಗೂ ಅದಕ್ಕೆ ಸರಿಯಾದ ಗುರಿ ನಿಗದಿಪಡಿಸುವ ಗುರುವಿನ ಕೊರತೆ ಎದ್ದು ಕಾಣುತ್ತದೆ. ಯುವಶಕ್ತಿಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದನ್ನು ಒಗ್ಗೂಡಿಸಿಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಆಡಿಸುವವರ ಯೋಗ್ಯತೆ ಒಟ್ಟುಗೂಡಿಸುವಲ್ಲಿನ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುವ ಬದಲು, ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಬದಲು ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಸರಿಪಡಿಸಲು ಬೇಕಾದ ಚಾಕಚಕ್ಯತೆಯನ್ನು ಹೊಂದಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಸಿಕೊಂಡು ವ್ಯವಸ್ಥೆಯ ಓರೆ ಕೋರೆಗಳನ್ನು ತಿದ್ದಿ ಅರ್ಹರಿಗೆ ಅವಕಾಶಗಳ ಬಾಗಿಲನ್ನು ತೆರೆಸುವ ಶಿಕ್ಷಣ ವ್ಯವಸ್ಥೆ ಅದನ್ನು ಮುನ್ನಡೆಸುವ ಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿ ಬೇಕಾಗಿದೆ. ಅಮು ಭಾವಜೀವಿ ಮುಸ್ಟೂರು.

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು. Read Post »

ಆರೋಗ್ಯ, ಇತರೆ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ

ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ  ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ  ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ  ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ  ಸಂಘ ಜೀವಿ.  ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು  ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;-  ಉತ್ತಮ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »

You cannot copy content of this page

Scroll to Top