ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ.

ಕಾವ್ಯ ಸಂಗಾತಿ ಜಯಲಕ್ಷ್ಮಿ ಕೆ. “ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!” ”  ಕ್ಯೂಗೆ ನುಗ್ಗಿ ಬಂದು ಸೇರಿಕೊಳ್ಳುತ್ತಾರಲ್ಲಯ್ಯ..? ನೀನು ನೋಡಿಕೊಂಡು ಸುಮ್ಮನಿದ್ದರೆ ಹೇಗೆ? “” ಅಲ್ಲ ಸರ್… “” ಏನು ಅಲ್ಲ ? ಯೂನಿಫಾರಂ ಬ್ಯಾಡ್ಜ್ ಎಲ್ಲಾ ಹಾಕ್ಕೊಂಡು, ಕೋಲು ಹಿಡ್ಕೊಂಡು, ಏನ್ ಕತ್ತೆ ಕಾಯೋದಕ್ಕಾ ನಿಂತಿದ್ದೀ? ಕ್ಯೂ ಮೈನ್ಟೈನ್ ಮಾಡಕ್ಕಾಗಲ್ವಾ ?  “” ಹೌದು ನಿಮ್ಮಂಥ ಕತ್ತೆ ಕಾಯೋಕೆ ನಾನು ನಿಂತಿರೋದು ಏನೀಗ? “” ದೇವಸ್ಥಾನದಲ್ಲಿ ಜನರನ್ನ ಕಾಯೋದಕ್ಕೆ ನಿಂತವನಿಗೂ ಏನ್ ಪೊಗರು? “” ಸರ್ .. ಪೊಗರು  – ಗಿಗರು ಅಂತೆಲ್ಲ ಮಾತಾಡ್ಬೇಡಿ. ವರ್ಷಕ್ಕೆ ಒಂದೆರಡು ಸಲ ಬಂದು ಇಲ್ಲಿ ಕ್ಯೂ ನಿಲ್ಲುವ ನಿಮಗೇ ಇಷ್ಟು ಕಷ್ಟ ಆಗುತ್ತೆ… ಇನ್ನು ನಾವು…. ವರ್ಷಪೂರ್ತಿ ಈ ಕೆಲಸ ಮಾಡ್ಬೇಕು,  ನಿಮ್ಮಂಥವರಿಂದ ಉಗುಸ್ಕೊಬೇಕು.. ನಮ್ಮ ಕಷ್ಟ ಎಷ್ಟಿರಬೇಡ?  ಅಷ್ಟಕ್ಕೂ  ಅವ್ರು ನನ್ನ ಪರ್ಮಿಷನ್ ಕೇಳಿ ಕ್ಯೂ ನಿಂದ ಆಚೆ ಹೋಗಿ ತಿರುಗಿ ಬಂದವರು “” ಎಷ್ಟು ಮಾತಾಡ್ತೀಯಾ? ಬಾಯಿ ಮುಚ್ಚು “” ನೀವೇ ಆ ಕೆಲಸ ಮಾಡಿ ನಿಮ್ಮಂಥವರನ್ನು ಪ್ರತಿದಿನ ಸಾಕಷ್ಟು ನೋಡ್ತಾ ಇರ್ತೇನೆ “  ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಮತ್ತು ಭಕ್ತಾದಿಗಳನ್ನು ಸಾಲಾಗಿ ದೇವರ ದರ್ಶನಕ್ಕೆ ಕಳುಹಿಸುತ್ತಿದ್ದವನ ನಡುವೆ ನಡೆದ ಮಾತಿನ ಚಕಮಕಿ ಇದು! ನಾಲ್ಕೈದು ಸಾಲುಗಳಲ್ಲಿ ಇದ್ದ ಅಷ್ಟೂ ಭಕ್ತಾದಿಗಳಿಗೆ  ಕಿರಿಕಿರಿ ಉಂಟುಮಾಡಿದ ಪ್ರಸಂಗವದು. ಯಾರ ಸಮಾಧಾನದ ಮಾತುಗಳಿಗೂ ಅವರ ಜಗಳ ಜಗ್ಗಲಿಲ್ಲ. ಕೊನೆಗೆ  ದೇವರ ದರ್ಶನಕ್ಕೆಂದು ಬಂದಿದ್ದ ಆ ವ್ಯಕ್ತಿ ತನ್ನ ಮನೆ ಮಂದಿಯನ್ನು ಎಳೆದುಕೊಂಡು ಬ್ಯಾರಿಕೇಡರ್ ಹತ್ತಿ ಇಳಿದು ದರ್ಶನಕ್ಕೆ ಹೋಗುವ ಕ್ಯೂನಿಂದ ಆಚೆ ಹೋಗಿಯೇ ಬಿಟ್ಟರು. ಒಂದು ರೀತಿಯಲ್ಲಿ ಅವರು ಅಲ್ಲಿಂದ ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ ಕೋಪದಿಂದ ಕುದಿಯುತ್ತಿದ್ದ ಆ ವ್ಯಕ್ತಿ ದೇವರ ಎದುರು ನಿಂತರೂ ಯಾವ ಮನಸ್ಥಿತಿಯಿಂದ ಪ್ರಾರ್ಥನೆ ಮಾಡಬಹುದು?  ಕೋಪ ಶಮನ ಮಾಡಿಕೊಂಡು ದರ್ಶನ ಪಡೆಯುವುದೇ ಒಳಿತು ಎಂದು ಅತ್ತ ಹೋದರೋ  ಏನೋ!!  ಒಟ್ಟಿನಲ್ಲಿ ಅವರು ಅತ್ತ ಹೋದ ಮೇಲೆ ವಾತಾವರಣ ಶಾಂತವಾಯಿತು.  ಕ್ರಿಸ್ಮಸ್ ರಜೆಯಲ್ಲಿ  ಕರ್ನಾಟಕದ ಒಂದು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕ ಹೋಗಿದ್ದಾಗ   ದೇವರ ದರ್ಶನಕ್ಕೆಂದು ನಿಂತಿದ್ದ ಸಂದರ್ಭದಲ್ಲಿ  ನನ್ನನ್ನೂ ಒಳಗೊಂಡಂತೆ  ಸರದಿಯಲ್ಲಿ ನಿಂತಿದ್ದ  ಭಕ್ತಾದಿಗಳ  ಗಮನ ಸೆಳೆದ ಜಗಳವದು. ದೇವರ ದರ್ಶನಕ್ಕೆಂದು ಯಾವ ಯಾವುದೋ ಊರಿನಿಂದ ಎಷ್ಟೋ ದೂರ ಪಯಣ ಬೆಳೆಸಿ ಹೋಗುತ್ತೇವೆ. ಅಲ್ಲಿ ಚಿಕ್ಕಪುಟ್ಟ ವಿಷಯಕ್ಕೆ ಸಹನೆ  ಸಂಯಮ ಕಳೆದುಕೊಂಡು ರೇಗಾಡಿ ದೇವಾಲಯದ ಸಾತ್ವಿಕ ವಾತಾವರಣವನ್ನು ಹದಗೆಡಿಸುತ್ತೇವೆ. ಅಲ್ಲಿ ಕ್ಯೂನಲ್ಲಿ ನಿಂತಿದ್ದ  ನಾರಿ  ಆಚೆ ಹೋಗಿ ಪುನಹ ಬರುವ ಅವಶ್ಯಕತೆ ಇರಲಿಲ್ಲ. ಅಥವಾ ನಿಂತಿದ್ದ ವ್ಯಕ್ತಿ ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಅಗತ್ಯ ಇರಲಿಲ್ಲ. ಕೆಲವೊಂದು ದೇವಸ್ಥಾನಗಳಲ್ಲಿ ಒಮ್ಮೆ ಲೈನ್ನಿಂದ ಆಚೆ ಹೋದರೆ ಮತ್ತೆ ಒಳಗೆ ಸೇರಿಸುವುದಿಲ್ಲ ಎಂದೇ ಹೇಳಿಬಿಡುತ್ತಾರೆ.  ಇಂತಹ ಜಗಳಗಳು ಆಗದಿರಲು ಅಂಥ ಕಟ್ಟು ನಿಟ್ಟಿನ  ಕ್ರಮವೇ ಸರಿ ಅನಿಸುತ್ತದೆ. ಇಂಥ ಸಂದರ್ಭಗಳಲ್ಲಿ  ಸರಿ ಯಾವುದು,ತಪ್ಪುಯಾವುದು ಎನ್ನುವ ಯೋಚನೆಗಳಿಗಿಂತಲೂ ಮುಖ್ಯವಾಗುವುದು  ನಾವು ಎಲ್ಲಿ ನಿಂತಿದ್ದೇವೆ? ನಿಂತಿರುವ ಉದ್ದೇಶ ಏನು? ಎಂಬುದು. ನಮ್ಮ ಜೊತೆ ಜೊತೆಯಲ್ಲಿ ಸಾಗುವವರಿಗೆ  ನಮ್ಮಿಂದ ಕಿರಿಕಿರಿ ಆಗಬಾರದು ಎಂಬ ಸಾಮಾನ್ಯ ಜ್ಞಾನ . ಆ ಸಂಯಮ ಇಲ್ಲದೇ ಹೋದರೆ ” ಇಲ್ಲಿಂದಲೇ ಕೈಮುಗಿವೆ ಅಲ್ಲಿಂದಲೇ ಹರಸು” ಎನ್ನುತ್ತಾ ಮನೆಯಲ್ಲೇ ಪ್ರಾರ್ಥನೆ ಮಾಡಬಹುದಲ್ಲವೇ ? ದೇವಸ್ಥಾನ ಎಂದ ಮೇಲೆ ಭಕ್ತರು ಪಾಲಿಸಲೇಬೇಕಾದ ಕೆಲವು ನಿಯಮಗಳಿರುತ್ತವೆ. ಆ ವಾತಾವರಣದ ಧನಾತ್ಮಕ ಅಂಶಗಳನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಭಕ್ತಾದಿಗಳಿಗಿದೆ. ಚಿತ್ತವನ್ನು ದೇವರತ್ತ ನೆಲೆಗೊಳಿಸಲು ಪ್ರಶಾಂತ ವಾತಾವರಣ ಬೇಕಲ್ಲವೇ? ದೇಗುಲದ ಪಾವಿತ್ರಕ್ಕೆ ಅಡ್ಡಿ ಬರುವಂತಹ  ಅಲ್ಲಿನ ಶಾಂತ ವಾತಾವರಣವನ್ನು ಅಶಾಂತ ಗೊಳಿಸುವ ಯಾವ ಕೆಲಸಗಳನ್ನು ನಾವು ಮಾಡಿದರೂ ನಮಗೆ ದೇವರ ಕೃಪಾಶೀರ್ವಾದ ದೊರೆಯದು. ” ಇಲ್ಲಿ ಭಾವಚಿತ್ರಗಳನ್ನು ತೆಗೆಯಕೂಡದು ” ಎಂಬ ನಾಮ ಫಲಕವಿದ್ದರೂ  ಕೆಲವರು ಅಲ್ಲಿನ ಮೇಲುಸ್ತುವಾರಿ ಮಾಡುವವರ ಜೊತೆ ಕಿತ್ತಾಟ ನಡೆಸಿ ಅಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ‘ ಮೌನ  ವಹಿಸಿ ‘ ಎಂಬ ಬರಹದ ಬಳಿಯೇ ನಿಂತು ಜೋರಾಗಿ ತಿರುಚಾಡುತ್ತಾರೆ. ” ತೀರ್ಥ ಸ್ವೀಕಾರ ಮಾಡಲು ಸಾಲಿನಲ್ಲಿ ಶಿಸ್ತುಬದ್ಧವಾಗಿ ನಿಲ್ಲುವುದನ್ನು ಬಿಟ್ಟು ಎಲ್ಲರೂ  ಅರ್ಚಕರ ಮುಂದೆ ಒಟ್ರಾಸಿ ಕೈ ಚಾಚುವುದು,  ತಮ್ಮ ಕೈಗೆ ತೀರ್ಥ ಸಿಗುವುದು ಸ್ವಲ್ಪ ವಿಳಂಬ ಆದರೆ ಸಾಕು, ” ಇಲ್ಲಿ ಹಾಕಿ ” ಎಂದು ಜೋರಾಗಿ ಹೇಳುವುದು, ದೇವರ ಪ್ರಸಾದಕ್ಕೆ ಸಾಲಾಗಿ ಬನ್ನಿ”  ಎಂದರೆ  ಅಲ್ಲಿಯೂ ನೂಕುನುಗ್ಗ ಲು.. ದೇವಾಲಯದ ಆವರಣದ ಮೂರ್ತಿಗಳನ್ನು ಮುಟ್ಟಕೂಡದು ಎಂದರೆ  ಆ ಮೂರ್ತಿಗಳಿಗೆಲ್ಲ ಅರಿಶಿನ ಕುಂಕುಮ ಹಚ್ಚುವುದು. ಗಂಧ ಅಂಟಿಸಿ  ಇಡುವುದು.. ದೇವಸ್ಥಾನದ ಮೆಟ್ಟಿಲುಗಳ ಮೇಲೆಲ್ಲಾ ದೀಪ   ಹಚ್ಚಿ ಇಡುವುದು, ದೇವಸ್ಥಾನದ ಸರಳುಗಳಿಗೆ  ದಾರ ಕಟ್ಟಿ ಇಡುವುದು ಇತ್ಯಾದಿ ಅವಿಧೇಯ ವರ್ತನೆಗಳನ್ನು  ಮಾಡುವುದರಿಂದ , ಆಶಿಸ್ತಿನ ನಡವಳಿಕೆಗಳನ್ನು ತೋರುವುದರಿಂದ  ತಾನೇ ಅಲ್ಲಿ ಕೆಲಸ ಕಾರ್ಯನಿರ್ವಹಿಸುವವರು ಕೂಡ ನಮ್ಮ ಮೇಲೆ ರೇಗುವುದು? ಅವರಾದರೂ  ಎಷ್ಟು ಅಂತ ಸಹಿಸಿಯಾರು? ಯಾವ ಸ್ಥಳವೇ ಆಗಲಿ  ಅಲ್ಲಿನ ನೀತಿ ನಿಯಮಗಳನ್ನು  ಪಾಲಿಸುವುದರಲ್ಲಿಯೇ ನಮ್ಮ ವ್ಯಕಿತ್ವದ ಹಿರಿಮೆ ಇದೆ. ಶಿಸ್ತು ಪಾಲನೆ ಮತ್ತು ಸಂಯಮದ ವರ್ತನೆ  ನಮ್ಮದಾದಾಗ   ನಮ್ಮೊಳಗೂ  ಹೊರಗೂ ಶಾಂತಿ ನೆಲೆಸಲು ಸಾಧ್ಯ.ಆ ಪ್ರಬುದ್ಧತೆ ನಮ್ಮಲ್ಲಿರಲಿ. ಜಯಲಕ್ಚ್ಮಿ ಕೆ.

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ. Read Post »

ಇತರೆ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ

ರಾಷ್ಟ್ರೀಯ ಸಂಗಾತಿ ನಾಗರತ್ನ ಎಚ್ ಗಂಗಾವತಿ “ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” *ಏಳಿ ಎದ್ದೇಳಿ ಎಚ್ಚರಾಗಿ* ಎನ್ನುವ ಸಂದೇಶವನ್ನು ನೀಡಿದಂತಹ ಸ್ವಾಮಿ ವಿವೇಕಾನಂದರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ ಎನ್ನುವ ಮಂತ್ರದೊಂದಿಗೆ ವ್ಯಕ್ತಿತ್ವ ಪ್ರಭಾವ ಪೂರ್ವ ಮತ್ತು ಉತ್ತಮ  ಬರಹಗಳ ಮೂಲಕ ಉತ್ತಮ ಸಂದೇಶ ನೀಡಿದರು  ಸ್ವಾಮೀ ವಿವೇಕಾನಂದರು. ತಮ್ಮ ವಿಚಾರಗಳಿಗೆ ಅನುಗುಣವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು ಹಾಗೂ ವೈಜ್ಞಾನಿಕ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಜಾತಿ ಪದ್ಧತಿಯನ್ನು ಮುಕ್ತವಾದ ನವ ಭಾರತ ನಿರ್ಮಾಣದ ಕನಸನ್ನು ಕಂಡಿದ್ದರು. ಸ್ವಾಮಿ ವಿವೇಕಾನಂದರು ಭಾರತೀಯ ದೇಶಭಕ್ತ ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರಸ್ಥಾನದ ಶಕ್ತಿಗಳನ್ನು ಹೊಡೆದ ಆಂಗ್ಲ ಆಡಳಿತದ ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರಸ್ಥಾನದ ಹಾದಿ ಯನ್ನು ಸುಗಮಗೊಳಿಸಿದ ಅಗ್ರಗಣ್ಯರು ಎನ್ನಬಹುದು.  ಭಾರತದ ಬಡ ಜನರ ಪರವಾಗಿ ಅಷ್ಟೊಂದು ತೀವ್ರ ಮರುಕರಿಂದ ತಡೆಯಲಾರದ ನೋವಿನಿಂದ ಮಾತಾಡಿ ಅವರ ಪರವಾಗಿ ಹೋರಾಡಿದರು. ಹಾಗೂ ಆಧ್ಯಾತ್ಮಿಕ ವ್ಯಕ್ತಿ ದೇಶ ಕಂಡರಿಯದ ಅಪ್ರತಿಮ ಚಿಂತಕರು ಸ್ವಾಮಿ ವಿವೇಕಾನಂದರು ರಾಷ್ಟ್ರೀಯತೆಯ  ಪ್ರತೀಕವಾದರು. ಬಡವರನ್ನ ಹಿಂಸಿಸಿ ಸುಖ-ಸೌಕರ್ಯಗಳಲ್ಲಿ ತೇಲಾಡುವವರನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ಅಂತವರನ್ನು ದೇಶದ್ರೋಹಿ ಅಥವಾ ವಂಚಕರೆಂದು ಕರೆಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸ್ವಾಮಿ ವಿವೇಕಾನಂದರು ಜನವರಿ 12 1863ನೇ ಜನಿಸಿದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಿದ್ದಾರೆ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು *ರಾಷ್ಟ್ರೀಯ ಯುವ ದಿನವೆಂದು* ಆಚರಿಸಲಾಗುತ್ತದೆ. ಇವರ ಜನ್ಮನಾಮ ನರೇಂದ್ರನಾಥ ದತ್ತಇವರ ತಾಯಿ ಭುವನೇಶ್ವರಿ ದೇವಿ ತಂದೆ ವಿಶ್ವನಾಥನತ್ತ.ಉತ್ತಮ ವೇದಾಂತತ್ವಗಳನ್ನು ಅನುಸರಿಸಿದಂತ ಬಿಟ್ಟ ವ್ಯಕ್ತಿ ಹಾಗೂ ಇವರ ಗುರುಗಳು ರಾಮಕೃಷ್ಣ ಪರಮಹಂಸರು ಅಷ್ಟೇ ಇಲ್ಲದೆ ಹಲವಾರು ಪ್ರಮುಖ ಕೃತಿಗಳನ್ನು ಕೂಡ ರಚನೆ ಮಾಡಿದ್ದಾರೆ ಅವುಗಳೆಂದರೆ ರಾಜಯೋಗ ಕರ್ಮ ಯೋಗ ಭಕ್ತಿ ಯೋಗ ಮತ್ತು ಜ್ಞಾನ ಯೋಗ ವಿಶೇಷವಾಗಿ ರಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ. ನರೇಂದ್ರರು 5 ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಹಾಗೂ ಭಾರತದ ಪರ್ಯಟನೆಗೆ 1888 ರಲ್ಲಿ  ಹೊರಟರು ಅವರು ಹೋಗುವಾಗ ಅವರ ಜೊತೆಯಲ್ಲಿ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆಯನ್ನು ಒಯ್ಯುತ್ತಿದ್ದರು. ವಿವೇಕಾನಂದರು ಭಾರತದ ತತ್ವ ಜ್ಞಾನ ಯೋಗ ವೇದಾಂತ ಇವೆಲ್ಲವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ  ಪ್ರಚಾರ ಮಾಡಿದರು ಹಾಗೂ ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು.  ನಂತರ ಚಿಕಾಗೋ ಪ್ರವಾಸ ಕೈಗೊಂಡರು 1893ರಲ್ಲಿ ಹಾಗೂ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು.  ದೇಶದ ಬಡ ಜನರಿಗಾಗಿ ಕೆಲಸ ಮಾಡಲು ಕರೆ ನೀಡಿದರು ಅಷ್ಟೇ ಅಲ್ಲದೆ ಹಿಂದೂ ಧರ್ಮದ ಮೂಲ ತತ್ವಗಳಾದ ವೇದಾಂತ ಮತ್ತು ಯೋಗವನ್ನು ಪಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು. ಹಾಗೂ ಮಾನವರಲ್ಲಿ ದೈವತ್ವವನ್ನು ಕಂಡರು ಮತ್ತು ಆತ್ಮವಿಶ್ವಾಸ ಧೈರ್ಯ, ಶುದ್ಧತೆ, ತಾಳ್ಮೆ ಮತ್ತು ಏಕಾಗ್ರತೆಗಳ ಮೂಲಕ  ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ತಿಳಿಸಿದರು. ಅವರ ಮುಖ್ಯ ಸಂದೇಶವೆಂದರೆ ಆತ್ಮವಿಶ್ವಾಸ *ನಿನ್ನನ್ನು ನೀನು ನಂಬು ನೀನು ಅಸಾಧ್ಯವಾದನ್ನು ಸಾಧಿಸಬಲ್ಲೆ*ಹಾಗೂ ಮಾನವನ ಕಲ್ಯಾಣ ಮತ್ತು ಆಧ್ಯಾತ್ಮಿಕತೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ರಾಮಕೃಷ್ಣ ಮಿಷನ್ 1897ರಲ್ಲಿ ಸ್ಥಾಪಿಸಿದರು.ಹಾಗೂ ವೇದಗಳ ಸಾರವನ್ನು ಆಧುನಿಕ ಸಾರ್ವತ್ರಿಕ ರೂಪದಲ್ಲಿ ಪ್ರಸ್ತುತಪಡಿಸಿದರು.ಎಲ್ಲಾ ಜೀವಗಳಲ್ಲಿ ದೇವರನ್ನು ಕಂಡು ಮಾನವ ಸೇವೆಯ ಮೂಲಕ ದೇವರನ್ನು ಪೂಜಿಸಬೇಕು ಎಂದು ಬೋಧಿಸಿದರು. ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ ಅದು ವ್ಯಕ್ತಿತ್ವ ವಿಕಾಸನ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಇಂದಿಗೂ ಕೂಡ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಆದರ್ಶಗಳು ಜನರಿಗೆ ಉತ್ತಮ ಸ್ಪೂರ್ತಿದಾಯಕ ಸಂದೇಶಗಳಾಗಿವೆ. ನಾಗರತ್ನ ಎಚ್ ಗಂಗಾವತಿ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ Read Post »

ಇತರೆ, ಜೀವನ

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳನ್ನುಉಳಿಸಿಕೊಳ್ಳಿ” ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು  ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ. ವನಜ ಮಹಾಲಿಂಗಯ್ಯ ಮಾದಾಪುರ                        

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ

ವೈವಾಹಿಕ ಸಂಗಾತಿ ವನಜ ಮಹಾಲಿಂಗಯ್ಯ “ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ” “ರಹಸ್ಯ ಪ್ರೀತಿ, ಮದುವೆ ಒಳ್ಳೆಯದಲ್ಲ.”ದುಶ್ಯಂತ ಶಾಕುಂತಳೆಯನ್ನು ಮದುವೆಯಾಗಿರುವುದನ್ನೆ  ಮರೆತುಬಿಟ್ಟಿದ್ದಾನೆ. ಅಲ್ಲಿ ಶಕುಂತಳೆ ಗರ್ಭವತಿಯಾಗಿದ್ದಾಳೆ. ಅವಳನ್ನು ದುಷ್ಯಂತನ ಬಳಿಗೆ ಬಿಟ್ಟುಬರಲು ಕಣ್ವಮಹರ್ಷಿಗಳು ಶಿಷ್ಯ ನೊಂದಿಗೆ ಶಕುಂತಲೆಯನ್ನು ಅರಮನೆಗೆ ಕಳುಹಿಸುತ್ತಾರೆ.ಅಲ್ಲಿ ದುಷ್ಯಂತ ಹಾಗು ಶಿಷ್ಯ ಶಾಂಘ್ರವನಿಗೂ ಮಾತು ಕತೆ ನಡೆಯುತ್ತದೆ. ಶಂಕುತಳೆ ನಿನ್ನ ಹೆಂಡತಿಯೆಂದು ಕಣ್ವರ ಶಿಷ್ಯ ಎಷ್ಟು ಹೇಳಿದರೂ ದುಷ್ಯಂತ ಒಪ್ಪುವುದಿಲ್ಲ. ಆಗ ಶಾಂಘ್ರವನಿಗೆ ಶಕುಂತಳೆಯ ಮೇಲೆ  ಕೋಪ ಬರುತ್ತದೆ.ಕಾರಣ  ಇವಳ ಒಂದು ಕ್ಷಣದ ಅವಿವೇಕದಿಂದ ಎಂತಹ ಅಪಹಾಸ್ಯಕ್ಕೆ ಗುರಿಯಾದಳೆಂದು. ಆಗ ಒಂದು ಮಾತನ್ನು ಹೇಳುತ್ತಾನೆ.ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುವಾಗ ಅಥವಾ ರಹಸ್ಯವಾಗಿ ಮದುವೆಯಾಗುವಾಗ  ಆ ವ್ಯಕ್ತಿಯ ಬಗ್ಗೆ ಚನ್ನಾಗಿಪರೀಕ್ಷೆ ಮಾಡಿರಬೇಕು. ಅವರ ಸ್ವಭಾವ ಸರಿಯಾಗಿ ತಿಳಿಯದಿದ್ದರೆ ಪ್ರೀತಿಯೂ ಸಹ ದ್ವೇಷವಾಗಿ ಮಾರ್ಪಾಡಾಗಲು ತುಂಬಾ ಸಮಯವಾಗುವುದಿಲ್ಲ.ದುಷ್ಯಂತ ಹಾಗು ಶಂಕುತಳೆ ಗುಟ್ಟಾಗಿ ಸೇರಿದವರು. ಅವರಿಬ್ಬರ ಸಂಬಂಧಕ್ಕೆ  ಯಾವ ಸಾಕ್ಷಿಯೂ ಇರಲಿಲ್ಲ. ಇದ್ದ ಒಂದು ಉಂಗುರವೂ ಕಳೆದುಹೋಗಿದೆ. ಅವರಿಬ್ಬರ ಮದುವೆಯಾಗಿದ್ದು ಹಿರಿಯರಿಗೆ ಗೊತ್ತಿದ್ದರೆ ಶಕುಂತಳೆಯನ್ನು ಹೆಂಡತಿಯೆಂದು ದುಷ್ಯಂತ ಒಪ್ಪಿಕೊಳ್ಳಬೇಕಿತ್ತು. ರಹಸ್ಯವಾಗಿ ಮದುವೆಯಾಗಿದ್ದರಿಂದ ಶಕುಂತಳೆಯ ಪೋಷಕರು ಅಸಹಾಯಕರು.   ಅಂದು ಕಾಳಿದಾಸ ಈ ನಾಟಕ ಬರೆದ ಸಮಯ ಈಗಿನ ಸಮಯಕ್ಕೂ ತುಂಬಾ ಅಂತರ ವಿದ್ದರೂ ಪರಿಸ್ಥಿತಿ ಮಾತ್ರವೇ ಬದಲಾಗಿಲ್ಲ. ಇಂದಿನ ಮಕ್ಕಳು ಗುಟ್ಟಾಗಿ ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಎಡವಟ್ಟಾಗಿ ತುಂಬಾ ನೋವು ಅನುಭವಿಸುತ್ತಾರೆ. ಪಾಲಕರಿಗೂ ಕಷ್ಟ ಕೊಡುತ್ತಾರೆ.ಅದರಲ್ಲೂ ಹೆಚ್ಚು ಕಷ್ಟಕ್ಕೆ ಗುರಿಯಾಗುವವರು ಅಪ್ಪ ಅಮ್ಮ.ಪ್ರಾಯದ ಬಿಸಿಯಲ್ಲಿ  ಪ್ರೀತಿಯ ಗುಂಡಿಗೆ ಬೀಳಲು ಒಂದು ಕ್ಷಣ ಸಾಕು. ಆದರೆ ಒಬ್ಬರನ್ನು ಒಬ್ಬರು ಅರಿತುಕೊಳ್ಳದೇ ಆಕರ್ಷಣೆಗೆಪ್ರೀತಿಸಿದರೆ ಅದು ಹೆಚ್ಚುಕಾಲ ಉಳಿಯವುದು ಅಕ್ಷರಶಃ ಸುಳ್ಳು.  ಯಾವ ವ್ಯಕ್ತಿಯ ಗುಣ ಸರಿಯಾಗಿ ಗೊತ್ತಿರುವುದಿಲ್ಲವೋ ಅಂತಹ ವ್ಯಕ್ತಿಯು ವೈರಿಯಾಗುತ್ತಾನೆ. ಅಂದಾಗಲಿ ಇಂದಾಗಲಿ ಸಂಬಂಧಗಳೇ ಸಾಕ್ಷಿಯನ್ನು ಹೇಳುತ್ತವೆ.  ನಾವಿಬ್ಬರೂ ಮದುವೆಯಾಗಿದ್ದೇವೆ ಎಂದರೆ  ಸಾಕ್ಷಿ ತೋರಿಸಲು ಕೋರ್ಟು ಕೇಳುತ್ತದೆ. ಅಂದು ದುಷ್ಯಂತನು  ಶಕುಂತಳೆಗು ಅದನ್ನೆ ಕೇಳಿದ್ದು.  ಅದಕ್ಕೆ ಗುಟ್ಟಾಗಿ ಮದುವೆ ಮಾಡಿಕೊಂಡು ಹೆತ್ತವರಿಗೂ ಸಂಬಂಧಿಕರಿಗೂ ಅವಮಾನ ಮಾಡಬೇಡಿ. ಜೀವ ಚಿಕ್ಕದು, ಜೀವನ ದೊಡ್ಡದು.  ಎಲ್ಲರ ಒಪ್ಪಿಗೆಯಿಂದ ನಡೆದ ಮದುವೆಗಳಲ್ಲಿ ಏನಾದರೂ ತೊಂದರೆಯಾದರೆ ಹೇಳಲು  ನಿಮ್ಮವರು ಎಲ್ಲರೂ ಇರುತ್ತಾರೆ.ಗುಟ್ಟಾಗಿ ಮದುವೆಯಾಗಿ ಆತ್ಮಹತ್ಯಗೆ ಶರಣಾಗಿ ಹೆತ್ತವರ ಮನಸ್ಸು ನೋಯಿಸಬೇಡಿ. ಅಂದು ದುಷ್ಯಂತ ಶಕುಂತಳೆಯ ಮದುವೆ ಸಾಕ್ಷಿಯಾಗಿದ್ದುದು ಒಂದು ಉಂಗುರ, ಹಾಗು ಕಣ್ವಾಶ್ರಮದಲ್ಲಿದ್ದ ಒಂದು ಜಿಂಕೆ ಮಾತ್ರವೆ.  ಆದರೆ ಉಂಗುರ ಕಳೆದಿತ್ತು .  ಪಾಪ ಜಿಂಕೆ ಸಾಕ್ಷ್ಯ ಯಾರು ಕೇಳುತ್ತಾರೆ?    ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮೈ ಜುಮ್ಮೆನಿಸುತ್ತದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಹುಡುಗಿಯ  ಕತೆ. ಬೇಡ ಮಕ್ಕಳೆ ಯಾರೂ ಅಂತಹ ತಪ್ಪು ಮಾಡಿ  ಜೀವಕಳೆದುಕೊಳ್ಳಬೇಡಿ. ಮದುವೆಯ ವಿಷಯದಲ್ಲಿ ದುಡುಕಬೇಡಿ.  ಗುಟ್ಟು ಮಾಡಬೇಡಿ. ಹೆತ್ತವರಿಗೆ ಅವರ ಜವಾಬ್ದಾರಿ ಗೊತ್ತಿರುತ್ತದೆ. ವನಜ ಮಹಾಲಿಂಗಯ್ಯಅಧ್ಕಕ್ಷರುವಿಶ್ವವಿನೂತನ ಮಹಿಳಾ ಸಮಾಜ ದಾವಣಗೆರೆ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ Read Post »

ಇತರೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು ಸಂಗಾತಿಗೆ ಹೆಚ್ಚು ಬರೆಯದೇ ಹೋದರು ತಮ್ಮ ಬರಹಗಳಬಗ್ಗೆತಮ್ಮ ಪುಸ್ತಕಗಳ ಬಗ್ಗೆ ಜೊತೆಗೆ ತಮಗಿಷ್ಟವಾದ ಸಾಹಿತ್ಯ ಚಟುವಟಿಕೆಗಳ ಬ ಗ್ಗೆ ನಮ್ಮೊಂದಿಗೆ ಸದಾ ಮಾಹಿತಿ ಹಂಚಿಕೊಳ್ಳುತ್ತಿದ್ಷದರುಈಗವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಮಗೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿದೊರೆಯಲೆಂದು ಸಂಗಾತಿ ಪತ್ರಿಕೆ ಪ್ರಾರ್ಥಿಸುತ್ತದೆ ಸಂಪಾದಕೀಯ ಮಂಡಳಿ,ಸಂಗಾತಿ ಸಾಹಿತ್ಯ ಪತ್ರಿಕೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು Read Post »

ಇತರೆ, ಜೀವನ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ “ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಸುತ್ತು ಬಳಸಿ ಮತ್ತೆ ಮತ್ತೆ ಸಮಸ್ಯೆಗಳೆಲ್ಲ ನನ್ನ ಪಾಲಿಗೆ ಏಕೆ ಬರುತ್ತಿವೆ? ಉಳಿದವರೆಲ್ಲ ಹಾಯಾಗಿದ್ದಾರೆ ನನಗೆ ಮಾತ್ರ ಹೀಗಾಗುತ್ತಿದೆ. ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತೇವೆ.. ಪ್ರೀತಿ ಪಾತ್ರರು ಮರಣಿಸಿದಾಗ, ಬಹಳಷ್ಟು ಇಷ್ಟ ಪಟ್ಟದ್ದು ಸಿಗದೇ ಇದ್ದಾಗ, ಅಂದುಕೊoಡದ್ದು ಅಂದುಕೊoಡoತೆ ಆಗದೇ ಇದ್ದಾಗ ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆ ಬೆನ್ನು ಬಿಡದ ಬೇತಾಳನಂತೆ ಬೆನ್ನು ಹತ್ತಿವೆ. ನನಗೇ ಏಕೆ ಹೀಗೆ ಆಗುತ್ತೆ? ಎನ್ನುವ ಪ್ರಶ್ನೆ ತಲೆ ಹೊಕ್ಕು ಕಟ್ಟಿಗೆ ಹುಳು ಕೊರೆಯುವಂತೆ ಕೊರೆಯುತ್ತದೆ. ಪದೇ ಪದೇ ತೊಂದರೆ ಕೊಡುವ, ನಮ್ಮನ್ನು ಏಳ್ಗೆ ಆಗದಂತೆ ತಡೆಯುವ ಈ ಪ್ರಶ್ನೆಯಿಂದ ಬಚಾವಾಗುವುದು ಹೇಗೆ? ಎಂದು ಯೋಚಿಸುತ್ತೇವೆ. ಅಲ್ಲವೇ? ಈ ಕಾಡುವ ಯೋಚನೆಗೆ ಪೂರ್ಣ ವಿರಾಮ ಹಾಕಲು ಸಹಕಾರಿಯಾಗುವ ಅಂಶಗಳತ್ತ ಒಮ್ಮೆ ಗಮನ ಹರಿಸಿ.ಸುತ್ತ ಕಣ್ಣು ಹರಿಸಿ ದುರಂತಗಳು ಸಂಭವಿಸಿದಾಗ, ವಿಷಮ ಗಳಿಗೆಯಲ್ಲಿ ಭವಿಷ್ಯದ ದಾರಿಯೇ ಕಾಣದೇ ಕತ್ತಲೆಯಲ್ಲಿ ಕುಳಿತಾಗ ನನಗೇಕೆ ಹೀಗೆ? ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮಸುತ್ತ ಮುತ್ತಲಜನ-ಜೀವನದೆಡೆಗೆ ಕಣ್ಣು ಹರಿಸಿ ಇತರರು ನಿಮ್ಮಂತೆ ಸಮಸ್ಯೆಯಲ್ಲಿದ್ದರೂ ಅದನ್ನು ದೊಡ್ಡದಾಗಿಸಿದೇ ನಗುವ ಮೊಗವ ಹೊತ್ತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದ ನೋವಿನ ಕಡೆ ಹೆಚ್ಚು ಗಮನ ಕೊಡದೇ ನೋವುಂಡರೂ ನಗುವ ಪ್ರಯತ್ನ ಮಾಡುತ್ತಾರೆ. ಇತರರ ದುಃಖಕ್ಕೆ ಕಿವಿಗೊಡುವದರಲ್ಲಿ ಸಂತೃಪ್ತಿ ಕಾಣುತ್ತಾರೆ. ‘ನಾನು ಬರಿಗಾಲಲ್ಲಿ ನಡೆಯಬೇಕಿದೆ ನನ್ನ ಬಳಿ ಪಾದರಕ್ಷೆಗಳಿಲ್ಲ ಎಂದು ಕಣ್ಣೀರಿಡುತ್ತಿರುವಾಗ ಕಾಲಿಲ್ಲದವನನ್ನು ಕಂಡೆ ನನ್ನ ನೋವು ನೋವೇ ಅಲ್ಲ ಅನಿಸಿತು. ದೇವರಿಗೆ ಕೃತಜ್ಞನಾಗಿರಬೇಕು ನಾನು.’ ಎಂದೊಮ್ಮೆ ವಿಲಿಯಮ್ ಶೇಕ್ಸ್ಪಿಯರ್ ಹೇಳಿದ ಮಾತು ಎಷ್ಟೊಂದು ಮಾರ್ಮಿಕವಾಗಿದೆ. ದುರಂತವೆoದರೆ ನಾವು ನಮ್ಮ ಸುತ್ತ ರೇಷ್ಮೆ ಹುಳುವಿನಂತೆ  ಗೂಡು ಕಟ್ಟಿಕೊಂಡು ಯಾರೋ ನಮ್ಮನ್ನು ಮೇಲೇಳದಂತೆ ತಡೆಯುತ್ತಿದ್ದಾರೆ ಎಂದು ಗೋಳಿಡುವುದುಕಣ್ಣು ಹೊರನೋಟಗಳನ್ನು ನೋಡಲಿ.  ಅಂತರಗಣ್ಣಿನಿoದ ಪರಾಮರ್ಶಿಸಲಿ. ಆಗ ನಿಮಗೆ ಬಂದ ಸಂಕಟ ಏನೂ ಅಲ್ಲವೇ ಅಲ್ಲ ನನಗಿಂತ ಕಷ್ಟದಲ್ಲಿರುವವರು ತುಂಬಾ ಜನರಿದ್ದಾರೆ. ನನಗೆ ದೇವರು  ಅಂಥ ದುಸ್ಥಿತಿ ಬರದಂತೆ ಕಾಪಾಡಿದ್ದಾನೆ ಎಂದೆನಿಸುವುದು.ದುಃಖದಿoದ ಹೊರಬಂದು ಅದೇ ಅನುಭವ ಪಡೆದ ಇತರರ ಬಗ್ಗೆ ಯೋಚಿಸಿ. ಅವರೊಂದಿಗೆ ಮಾತನಾಡಿ ಆಗ ಅವರ ಬಗೆಗೆ ನಿಮಗೆ ಅನುಕಂಪ ತಾದ್ಯಾತ್ಮತೆ ಮೂಡುತ್ತದೆ.ನೀವಿನ್ನೂ ಅನುಕೂಲಕರ ಪರಿಸ್ಥಿತಿಯಲ್ಲಿರುವಿರಿ ಎಂದೆನ್ನಿಸುವುದು.   ದುರ್ಘಟನೆ ಆಹ್ವಾನಿಸದಿರಿ ಎಲ್ಲ ದುರಂತಗಳು  ಒಮ್ಮಿಂದೊಮ್ಮೆಲೇ ಧುತ್ತನೇ ಘಟಿಸುವುದಿಲ್ಲ. ಕೆಲವೊಂದು ನಮ್ಮ ಸ್ವಯಂ ಕೃತ ತಪ್ಪುಗಳಿಂದ ಉದಾಸೀನತೆಯಿಂದ ಘಟಿಸುತ್ತವೆ. ಅವುಗಳನ್ನು ನಾವೇ ಕೈ ಹಿಡಿದು ತಂದು ನಮ್ಮ ಬಾಳಲ್ಲಿ ಮಣೆ ಹಾಕಿ ಕೂಡ್ರಿಸಿ ಕೊಳ್ಳುತ್ತೇವೆ.ನಮಗರಿವಿಲ್ಲದಂತೆ ಗೆದ್ದಲು ಹುಳುವಿನಂತೆ ನಮ್ಮ ಅಸ್ತಿತ್ವವನ್ನು ಇಲ್ಲದಂತೆ ಮಾಡಲು ದಿನವೂ ಕಾರ್ಯನಿರತಆಗಿರುತ್ತವೆ ತುರ್ತು ಜರೂರು ಮಹತ್ವದ ವಿಷಯಗಳನ್ನು ಪರಿಗಣಿಸಿ ಕ್ರಿಯಾಶೀಲರಾದರೆ, ನಡೆಯುವ ದುರ್ಘಟನೆಗಳ ಅವಕಾಶದ ಬಾಗಿಲು ಮುಚ್ಚಿದರೆ ಸದಾ ಕಾಲಕ್ಕೂ ಮುಚ್ಚಿ ಹೋಗುತ್ತವೆ. ಇನ್ನು ನಿಮ್ಮ ನಿಯಂತ್ರಣದಾಚೆಗೆ ನಡೆವ ದುರಂತಗಳಿಗೆ ಪ್ರತಿಯಾಗಿ  ಸಹನ ಶಕ್ತಿಯಿಂದ ದಿಟ್ಟತನದಿಂದ ಪ್ರತಿಕ್ರಿಯಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.ಏಳು ಬಾರಿ ಟೂರ್ ಡೇ ಫ್ರಾನ್ಸ್ ಗೆದ್ದ  ಲ್ಯಾನ್ಸ್ ಆರ್ಮಸ್ಟಾ ಹೀಗೆ ಹೇಳುತ್ತಾರೆ.‘ಬಹಳಷ್ಟು ಜನರು ಕೊನೆಗೆ ಇಟ್ಟುಕೊಳ್ಳುವ ಶೇಕಡಾ ಒಂದು ಮೀಸಲು ಶಕ್ತಿಯು ಕ್ರೀಡಾಪಟು ಬಳಸಲು ದಿಟ್ಟತನ ತೋರುವ ಹೆಚ್ಚುವರಿ ಶಕ್ತಿಯಾಗಿದೆ.’ಈ ಹೇಳಿಕೆಯಂತೆ  ನಮ್ಮ ದಿಟ್ಟತನದಿಂದ ತೋರುವ ಹೆಚ್ಚುವರಿ ಶಕ್ತಿಯ ಸದುಪಯೋಗಪಡಿಸಿಕೊಳ್ಳಿ. ಸಹಜವಾಗಿರಿ ಸದಾ ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಕೈ ಬಿಡಬೇಕು. ಈ ಹೋಲಿಕೆ ಇತರರಿಗಿಂತ ಕೆಳ ಮಟ್ಟದಲ್ಲಿದ್ದೇನೆ ಎಂದು ನಿತ್ರಾಣಗೊಳಿಸುವ ಕೀಳರಿಮೆ ಇಲ್ಲವೇ ಮೇಲರಿಮೆಯ ಅಹಂಕಾರವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಿಜ ಸ್ವರೂಪ ನೀಡದ ಕಲ್ಪಿತ ಭ್ರಮಾಲೋಕವು ಇಲ್ಲದ ತೊಂದರೆಗಳನ್ನು ತಂದು ನಿಮ್ಮ ಬದುಕಿನ ಮಡಿಲಲ್ಲಿ ಚೆಲ್ಲುತ್ತದೆ. ನಿಜದಲ್ಲಿ ತಾನು ತಾನಾಗದ ಹುಸಿ ಲೋಕದಲ್ಲಿ ಸಮಸ್ಯೆಗಳ ಜಾಲವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೊಮ್ಮೆ ನುಡಿಯಲ್ಲಿ ಎಚ್ಚೆತ್ತುಕೊಳ್ಳುತ್ತೇವೆ. ನಡೆಯಲ್ಲಿ ತಪ್ಪುತ್ತೇವೆ. ಜ್ಞಾನ ಕ್ರಿಯೆಗಳು ಸಮನಾಗಿರಿಸಿ ನಡೆಯುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಹೂದೋಟದಲ್ಲಿ ಮೈ ಅರಳಿಸಿ ನಿಂತ ಹೂಗಳು ತನಗಿಂತ ದೊಡ್ಡ ಇಲ್ಲ ಚಿಕ್ಕ ಹೂಗಳನ್ನು ನೋಡಿ ಕಣ್ಣ ಹನಿ ಸುರಿಸುವುದಿಲ್ಲ. ತನ್ನಷ್ಟಕ್ಕೆ ತಾನೆ ಬಿಮ್ಮನೇ ಅರಳಿ ಗಾಳಿ ಬೀಸಿದಲ್ಲೆಲ್ಲ ತನ್ನ ಕಂಪು ಸೂಸುವವು. ಬಿರಿದ ಕುಸುಮಗಳಂತೆ ಸಹಜವಾಗಿರಿ. ಛಲ ಬಲ ತುಂಬಿಕೊಳ್ಳಿ ಅಮಾನುಷ, ಭೀಕರ, ಹೃದಯ ವಿದ್ರಾವಕ, ಘೋರ ಹತ್ಯಾಕಾಂಡಗಳಲ್ಲಿ ಸಾವಿನ ಬಾಗಿಲು ತಟ್ಟಿ ಬಂದವರು ಸಮರ್ಥವಾಗಿ ಬದುಕಿ ತೋರಿದವರು  ಸಾಧನೆಯ ಉತ್ತುಂಗಕ್ಕೆ ಏರಿದವರು ಹಸಿರಾದ ಪ್ರೀತಿಯನ್ನು ಇತರರ ಬಾಳಲ್ಲಿ ತಂದವರ ಪಟ್ಟಿಯೇ ಇದೆ. ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಇಂಥ ವೀರ ಮಹನೀಯರ ಜೀವನ ಚರಿತ್ರೆಯನ್ನೊಮ್ಮೆ ಓದಿ. ನಿಮ್ಮಲ್ಲೂ ಛಲ ಬಲ ತುಂಬಿಕೊoಡರೆ  ಶೌರ್ಯದ ಖಣಿ ನೀವಾಗುವಿರಿ.   ಕವಿ ಕೆ ಎಸ್ ನಿಸ್ಸಾರ ಅಹ್ಮದ್ ರವರು  ‘ಹುದ್ದೆ ಮುದ್ದೆ ನಿದ್ದೆ ಈ ಬದುಕು ಇಷ್ಟೇ ಪೆದ್ದೆ?ಎಂಬ ಲೇಖನದಲ್ಲಿ ‘ದಿನವಹಿಯ ಊಟ ಬಟ್ಟೆಗಳ ಅಗತ್ಯಗಳನ್ನು ದಾಟದ, ಉಸಿರಾಡಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಪುನರಾವರ್ತಿತ ಯಾಂತ್ರಿಕ ಚಟುವಟಿಕೆಯೇ ಅನೇಕಾನೇಕರ ಪಾಲಿಗೆ ಬಾಳ್ವೆ ಎನ್ನಿಸುತ್ತಿದೆ.’ಎಂದು ವಿಷಾದದಿಂದ ಬರೆದಿದ್ದಾರೆ.ಜೀವನದ ಪ್ರತಿ ಸಂಕುಚಿತ ದೃಷ್ಟಿಕೋನ ತೊರೆಯಿರಿ ಎಂಬ ಸಂದೇಶ ನೀಡದ್ದಾರೆ. ಪರಿಹಾರದತ್ತ ಗಮನ ಹರಿಸಿಬಂದ ಸಂಕಟದತ್ತ ನೋಡುತ್ತ ಕುಳಿತರೆ ಅದು ದಿನೇ ದಿನೇ ದೊಡ್ಡದೆನಿಸತೊಡುತ್ತದೆ. ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿ ಬಿಡುವುದೇನೋ ಎಂಬ ಚಿಂತೆ ಆವರಿಸಿಕೊಳ್ಳುತ್ತದೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳುತ್ತ ತಿರುಗ ಬೇಡಿ. ಏಕೆಂದರೆ ಇಲ್ಲಿ ನಿಮ್ಮ ದುಃಖಗಳ ಪ್ರಚಾರಕ್ಕೆ ಜಾಗವಿಲ್ಲ. ಅದಲ್ಲದೇ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಸಮಸ್ಯೆಯ ಮೂಲ ಹುಡುಕಿದರೆ ಪರಿಹಾರ ತನ್ನಿಂದ ತಾನೇ ಹೊಳೆಯುತ್ತದೆ.ಒಮ್ಮೊಮ್ಮೆ ಅಚಾತುರ್ಯದಿಂದ ಅಲಕ್ಷö್ಯದಿಂದ ಸಮಸ್ಯೆ ಬೆಳೆದು ನಿಲ್ಲುತ್ತದೆ ಆಗ ಅನುಭವಿಕರನ್ನು ಜ್ಞಾನಿಗಳನ್ನು ಸಂಪರ್ಕಿಸಿದರೆ ಅಡ್ಡಗೋಡೆಯಾಗಿ ನಿಂತಿದ್ದ ನೋವು ತಾನೇ ಮಂಜಿನoತೆ ಕರಗುವುದು.ಕೆಲವೊಂದು ತೊಂದರೆಗಳಿಗೆ ಕಾಲವೇ ಉತ್ತರಿಸುವುದು ಕಾಲಕ್ಕಿಂತ ಉತ್ತಮ ಆರೈಕೆ ಮತ್ತೊಂದಿಲ್ಲ. ದೊಡ್ಡ ದೊಡ್ಡ ಅವಘಡಗಳಲ್ಲಿ ಕುಟುಂಬ ಸದಸ್ಯರನ್ನು  ಕಳೆದುಕೊಂಡವರು ಬೆಳಕಿನ ಆಶಾ ಕಿರಣ ಕಾಣದವರು ಜೀವನವೇ ಬೇಡ ಅಂದುಕೊoಡವರು ಬದುಕು ದುಸ್ತರ ಎಂದುಕೊoಡವರು  ಕಾಲ ಉರುಳಿದಂತೆ ಜೀವನ ಪ್ರೀತಿಗೆ ಸಿಲುಕಿ ಸಂತಸದ ಜೀವನ ಸಾಗಿಸುವುದನ್ನು ಆದರ್ಶವಾಗಿಸಿಕೊಳ್ಳಿ.  ದುಃಖ ದುಮ್ಮಾನ ಅವಮಾನಗಳ ಸರಣಿಯನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನ ಹೋರಾಟವನ್ನು ಹೇಗೆ ಜಯಸಬೇಕೆಂಬುದನ್ನು ತೋರಿದ ಅಂಬೇಡ್ಕರ್ ಅಬ್ರಾಹಾಂ ಲಿಂಕನ್‌ರoಥವರ ದೊಡ್ಡ ಕೀರ್ತಿಗೆ ಪಾತ್ರರಾದ ಅದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ವಿಚಾರ ವೈಖರಿಯನ್ನು ಬದಲಿಸಿದರೆ ಎಂದೆoದಿಗೂ ವ್ಯಥೆಯಾಗಿ ಉಳಿಯುವ ದುರಂತವೂ ಪ್ರಬಲರನ್ನಾಗಿಸುವ ಅಚ್ಚರಿ ಬದಲಾವಣೆಯನ್ನು ನೀವೇ ಗಮನಿಸಬಹುದು. ಕೊನೆ ಹನಿಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ ಮನೋಬಲವನ್ನು ಬಾನಿಗೆ ಹಾರಿಸೋಣ. ಬದುಕನ್ನು ಶ್ರೇಷ್ಠ ಪಥಕ್ಕೆ ಹೊರಳಿಸೋಣ.   ಜಯಶ್ರೀ.ಜೆ.ಅಬ್ಬಿಗೇರಿ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ Read Post »

ಇತರೆ, ಜೀವನ

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್

ಜೀವನ ಸಂಗಾತಿ ಶಿವಲೀಲಾ ಶಂಕರ್ “ಹೆತ್ತವರು..ಯಾರಿಗೆ ಭಾರ ಯೋಚಿಸಿ!” ನಾವು ಫೇಸ್ ಬುಕ್, ಇನ್ಸ್ಟಾಗ್ರಾಮ್ ಗಳಲ್ಲಿ ವಯಸ್ಸಾದವರ ಬಗ್ಗೆ ಅದೆಷ್ಟು ಕಾಳಜಿಯಿಂದ  ಮರುಕ ವ್ಯಕ್ತಪಡಿಸುತ್ತೆವೆ.ಅಯ್ಯೋ.. ಪಾಪ ಮಗ,ಮಗಳು,ಸೋಸೆ ಇಂತವಳು…ಸಾಕಷ್ಟು ಉತ್ತೇಜಕ ಕಾಮೆಂಟ್ ಹಾಕುತ್ತ ಮನದ ಮೂಲೆಯ ಅಭಿವ್ಯಕ್ತಿ ಹೊರ ಹೊಮ್ಮಿಸುತ್ತೆವೆ..ಅಲ್ಲಗೆ ಮುಗಿತು ನಮ್ಮ ಮಾತು ಕಥೆಗಳು.ಆದರೆ ದೀಪದ ಬುಡದಲ್ಲಿ ಕತ್ತಲೆ ಅಷ್ಟೇ.. ವೃದ್ಧ ದಂಪತಿಗಳು ತಮ್ಮ ಇಳಿವಯಸ್ಸಿನಲ್ಲಿ ಒದ್ದಾಡುವುದು, ಪೇಚಾಡುವುದು ಬೇಕಿತ್ತಾ? ಎಂಬ ಮಾತಿಗೆ ಉತ್ತರ ಕೊಡುವವರು ಯಾರು?.ಮನಸ್ಸು ಒಮ್ಮೆ ಭಾರವಾಗಿ ಮಗ್ಗುಲಾಗಿದ್ದು ಇದೆ.ತಂದೆ ತಾಯಿಗೆ ಮಕ್ಕಳು ಒಂದೇ. ಆದರೆ ಮಕ್ಕಳಿಗೆ ತಂದೆ-ತಾಯಿ ಬೇರೆ ಬೇರೆ..ಹತ್ತಿರವಾಗುವುದು ಯಾವಾಗ? ಅಂದರೆ ಆಸ್ತಿ ಪಾಸ್ತಿ ಯಾರಲ್ಲಿ ಹೆಚ್ಚಿರುತ್ತದೆಯೋ ಅಲ್ಲಿ ಸಂಬಂಧಗಳು ಸಾಪ್ಟ್ ಆಗಿ ಹ್ಯಾಂಡಲ್ ಮಾಡುವಂತಹ ಮನೋಭಾವಕ್ಕೆ ಒಳಗಾಗಿರುತ್ತಾರೆ.ಆಗ ಹೆತ್ತವರು ಭ್ರಮೆಯಲ್ಲಿ..ಮಕ್ಕಳು ನಮ್ಮವರೆಂಬ ಆತ್ಮ ವಿಶ್ವಾಸದ ಸಾಗರದಲ್ಲಿ. ನಾವು ಚಿಕ್ಕವರಿದ್ದಾಗ ಅಪ್ಪ ಅಮ್ಮ ನಮ್ಮ ಬೆಳೆಸಿದ ರೀತಿ,ಅವರು ಕಷ್ಟ ಪಟ್ಟದಿನವನ್ನು ನೆನೆದರೆ ಸಾಕು!. ಅವರ ರೆಟ್ಟೆಗಳು,ಹರಿದ ಚಪ್ಪಲಿ,ಹರಿದ ಅಂಗಿಗಳು,ಅರೆಹೊಟ್ಟೆಯ ದಿನಗಳು.ಅವರಿಗೆಲ್ಲ ಕಾಮನ್.. ಯಾಕೆಂದರೆ ಮಕ್ಕಳ ಭವಿಷ್ಯದ ಬಗ್ಗೆ ಜವಾಬ್ದಾರಿ ಕನಸು ಎಲ್ಲವೂ ನಿರ್ಭರ.ಇಳಿವಯಸ್ಸಿನಲ್ಲಿ ಆಸರಾಗುವರೆಂಬ ಅತಿಆಸೆ.ತಮ್ಮ ಕರ್ತವ್ಯ ಪ್ರಜ್ಞೆಯನ್ನು ಚಾಚು ತಪ್ಪದೆ ಪಾಲಿಸಿದ್ದರ ಪ್ರತಿಫಲ ನಾವೆಲ್ಲ ಪ್ರಪಂಚಕ್ಕೆ ಗುರುತಿಸಲ್ಪಡುವ ವಿಶೇಷ ವ್ಯಕ್ತಿಗಳಾಗಿ ರೂಪುಗೊಂಡಿದ್ದು.ಇಷ್ಟೆಲ್ಲಾ ಆದರೂ ನಮ್ಮ ಅಸಹಜ ಗುಣದಿಂದ ನಾವು ಭಿನ್ನವಾಗಿಯೇ ಬೆಳೆದು ನಿಂತಿದ್ದೆವೆ.ಅವರು ನೆಟ್ಟ ಮಾವಿನ ಮರ ನೀಡಿದ ಫಲ ಸಿಹಿಯಾಗದೇ ಕಹಿಯ ಫಲವಾದರೆ ಪ್ರಾಣಿ ಪಕ್ಷಿಗಳ ಗತಿಯೇನು? ಹೌದರಿ…ಜವಾಬ್ದಾರಿ ಹೊರುವ ಕಾಯಕವನ್ನು ಕೈಗೆತ್ತಿಕೊಂಡು ನೆಡದವರಿಗೆ ಭಗವಂತ ರಕ್ಷಣೆ ಖಂಡಿತ ನೀಡುವನು..ಅದೆಷ್ಟೋ ಸಾಂತ್ವಾನ ನೀಡಿದರೂ ಅದ್ಯಾಕೋ… ಮನಸ್ಸು ‘ವಿಲವಿಲ’ ವೆಂದು ಒದ್ದಾಡುತ್ತಿದೆ.ಮಕ್ಕಳು ಮುಪ್ಪಿನಲಿ..ಇದ್ದು ಇಲ್ಲದಂತಾಗುವ ಗಳಿಗೆ ಯಾವ ಜೀವಿಗೂ ಬೇಡ! ನೂರು ದೇವರ ಅನುಗ್ರಹಕ್ಕೆ ನೂರಾರು ದೇವಾಲಯ ಅಲೆದು,ಬೇಡಿ ಬಯಸಿ ಜನ್ಮಕೊಟ್ಟ ಹಸುಗೂಸಿಗೆ ಬೆನ್ನೆಲುಬಾಗಿ ನಿಂತು,ಸಲುಹಿ,ರಟ್ಟೆಯಲ್ಲಿ ಬಲಬರುವ ತನಕವೂ ರೆಸ್ಟಲೆಸ್ ಆಗಿ ದುಡಿದು ದಣಿವಾರಿಸಲು ಬಯಸದ ಕಂಗಳಿಗೆ,ಅದ್ಯಾವ ಪೊರೆ ಮೆತ್ತಿತ್ತೊ ಕಾಣೆ?. ಮನೆಯಂಗಳದಲಿ ನಲಿದಾಡುವ ಪುಟ್ಟ ಜೀವಕ್ಕೊಸ್ಕರ ಎಲ್ಲವನ್ನೂ ಮರೆತು ದುಡಿದಿದ್ದು ಯಾಕಂತ ಅರ್ಥವಾಗುವ  ಸಮಯ ಬರದೆ ಹೋದರೆ ಆ ಬದುಕಿಗೆ ಅರ್ಥವೇನು?.. ಎಷ್ಟೊಂದು ಪರಿಣಾಮವನ್ನು ಬೀರಿತು ನಮ್ಮೆದೆಯೊಳಗೆ..ಆದರೆ ಅದ್ಯಾವ ಭಾವವೂ ಕೂಡ ನಮಗೀಗ ಅರಿವಿಗೆ ಬೇಕಿಲ್ಲ!. ದಿನಕಳೆದಂತೆಲ್ಲ ದೇಹಕ್ಕೊ,ಮನಸ್ಸಿಗೂ ಬಿರುಕುಗಳು ಮೂಡುವ ಕಾಲಘಟ್ಟ.ಯೌವ್ವನದ ಹೇಳ ಹೆಸರಿಲ್ಲದಂತೆ,ಸಂತೆಯೊಳು ಮಾಯವಾದಂತೆ.ಹಿಡಿದಿಟ್ಟುಕೊಳ್ಳುವ ಸಾಹಸ ಯಾರಿಂದ ಸಾಧ್ಯವಾದಿತು!. “ಯಯಾತಿ” ಪ್ರಸಂಗವೊಂದು ಇದಕ್ಕೆ ಸಾಕ್ಷಿಯಾದಿತು.ಸುಖ,ವೈಭೋಗ ಎಷ್ಟು ದಿನ,ವರುಷ ಅನುಭವಿಸಲು ಸಾಧ್ಯ?.ಮುಪ್ಪು ಸದ್ದಿಲ್ಲದೆ ಮೈಗಂಟಿಕೊಳ್ಳುವ ಜಾದೂಗಾರ!.ಅಲ್ಲಿಯೇ ನೋಡಿ ನಮಗಿರುವ ಕಿಮ್ಮತ್ತು ಅಂದರೆ ಸತ್ಯ ದರ್ಶನ !. ಹೌದು ನಾವೆಲ್ಲ ಏನನ್ನೂ ಸಾಧಿಸದೆ…ಒಂದಿಷ್ಟು ಆಸ್ತಿ ಪಾಸ್ತಿ ಹೊಂದಿದ್ದು..ಮಗ,ಮಗಳಿಗೆ ಕಷ್ಟ ಬರಬಾರದೆಂದು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ. ಮಕ್ಕಳ ಭವಿಷ್ಯಕ್ಕೆ ಆಕಾರನೀಡುವಲ್ಲಿ ಯೌವ್ವನ ಯಾವಾಗ ಮುಪ್ಪಾಗಿ ಪರಿಣಮಿಸಿತೋ ಅರಿವಿಗೆ ಬರಲಿಲ್ಲ.ತಾಕತ್ತು ಎಲ್ಲಿಯವರೆಗೆ?.. ಮಗ,ಮಗಳು ಬಲಿಷ್ಠರಾಗುವ ತನಕ.ಅಲ್ಲಿಗೆ ಒಂದು ಧೀರ್ಘಕಾಲದ ಅಧ್ಯಾಯ ಮುಕ್ತಾಯವಾದಂತೆ.ನಿರೀಕ್ಷೆಯ ಮಹಾಪೂರವೇ ಹರಿದುಬಂದಿತೆಂಬ ಕನಸು.ಅಪ್ಪ ಅಮ್ಮ ಮಕ್ಕಳನ್ನು ತಿದ್ದಿ ತೀಡಿ ಆನಂದ ಕಂಡ ಜೀವಗಳು.ತಮ್ಮ ತ್ಯಾಗಕ್ಕೆ ಫಲ ಸಿಗುದೆಂಬುದು ಊಹೆ ಅಷ್ಟೇ!. ರೆಕ್ಕೆ ಬಲಿತ ಮರಿಗಳು ಗೂಡು ಬಿಟ್ಟು ಹಾರಿಹೋದಂತೆ.ವಿದ್ಯೆ, ಸಂಸ್ಕಾರ, ಉದ್ಯೋಗ ಎಲ್ಲವೂ ದಕ್ಕಿದ ಮೇಲೆ ಅಂದರೆ,ಹೊಳೆ ದಾಟಿದ ಮೇಲೆ ಅಂಬಿಗನ ಮರೆತಂತೆ!. ಮಕ್ಕಳ ಬದುಕಿಗೆ ಎಣಿಯಾದ ತಂದೆ ತಾಯಿ ಕೊನೆಗೊಂದು ದಿನ ಮೂಲೆಗುಂಪು.ಇದು ಕಾಲಚಕ್ರದ ಪರಿಣಾಮವೂ,ವಿಧಿಯ ಆಟವೋ,ಅಥವಾ ಬೆಳೆಸುವುದರಲ್ಲಿ ಹೆಚ್ಚು ಪ್ರಾಮಾಣಿಕರಾಗಿದ್ದೋ ಗೊತ್ತಿಲ್ಲ.ಯಾರಾದರೇನು? ಸಮಯಕ್ಕೆ ಆಗದ ಹಣವಾದರೇನು? ನೆಂಟರಾದರೇನು? ಮಕ್ಕಳಾದರೇನು?. ನೋವು ನೋವೆ!. ಅದನ್ನು ಸರಿದೂಗಿಸಲು ಯಾರಿಂದಲೂ ಸಾಧ್ಯವಿಲ್ಲ. ಹೌದು..ಇದೆಲ್ಲ ಯಾಕೆ? ಹೆತ್ತವರ ಎದೆಗೊದ್ದು ಬದುಕುವ ಅವಕಾಶ ಗಿಟ್ಟಿಸಿಕೊಂಡ ಮಕ್ಕಳು.ಕೇವಲ ಅವರ ಆಸ್ತಿಗಾಗಿಯೇ ಹೊರತು ಹೆತ್ತವರ ಆರೈಕೆಗಲ್ಲ. ಮನಸ್ಸು ಭಾರವಾದಿತು ಒಂದುಕ್ಷಣ!. ಹೆಣ್ಣಾಗಲಿ,ಗಂಡಾಗಲಿ ನಡೆದುಕೊಳ್ಳುವ ರೀತಿಗೆ ಕರುಳು ಚುರ್ ಅನ್ನುತ್ತೆ. ಮಕ್ಕಳಿಗೆ ಹೆತ್ತವರು ಭಾರವಾದರೆ ಬೇರಾವ ಮಾತಿದೆ?. ಕೂಲಿನಾಲಿ ಮಾಡಿ,ತಾವು ಉಪವಾಸವಿದ್ದು ನಮಗೆ ತುತ್ತು ನೀಡಿ ಬೆಳೆಸಿದ ಅವರಿಗೆ…ಊಟ ಹಾಕದೆ ಕೊಂದ ಮಕ್ಕಳ ಬಗ್ಗೆ ಆಕ್ರೋಶವಿದೆ…ಹೌದು.ವಯಸ್ಸಾದ ಮೇಲೆ ದುಡಿಯುವ ಕ್ಷಮತೆ ಕ್ಷೀಣಿಸುತ್ತದೆ ಎಂಬ ಸಣ್ಣ ಅಂಶ ಅರಿವಿಗೆ ಬಾರದಿದ್ದರೆ ಈ ಜನ್ಮಕೆ ಬೆಲೆಯಿಲ್ಲ!.ಹೆತ್ತವರು ಯಾರಿಗೆ ಭಾರ ಯೋಚಿಸಿ!. ನಿಜ ಅಲ್ವಾ…ವಯಸ್ಸಾದವರು ಕಾಯಿಲೆಗೆ ಬಿದ್ದರೆ ಅವರನ್ನು ಮನೆಯಿಂದ ಹೊರದೂಡುವುದು..ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ನನ್ನಪ್ಪನ ಹೋರಾಟ ಇದಷ್ಟುದಿನ ಒಮ್ಮೆ ಹಸಿವ ನೀಗಿಸಲು ಕಠಿಣ ಪರಿಶ್ರಮದ ಬಾಗಿಲು ತಟ್ಟಿದವ,ಒಂದು ಪೈಸೆಯು ಸಾಲವಿಲ್ಲದೆ ನಿವೃತ್ತಿಯಾದವ..ಕೈಗಡ ಸಾಲವೂ ಉಳಿಸಿಕೊಳ್ಳದವ‌..೧೦ ರೂಪಾಯಿಯಲ್ಲೆ ಬದುಕುವುದು ಹೇಗೆ ಎಂಬುದನ್ನು ಬಲ್ಲವ..ತನಗಾಗಿ ಕೂಡಿಡುವ ಕನಸು ಕಂಡವನಲ್ಲ.ಕಲಿಯುವ ಆಸೆ ಹೊತ್ತ ನನಗೆ ಕಲಿಯಲು ಬಿಂದಾಸ್ ಆಗಿ ಬಿಟ್ಟವ.ಅವನ ಭರವಸೆ,ನಂಬಿಕೆ ಉಳಿಸಿಕೊಂಡು ಕಲಿತ ಫಲ ಇವತ್ತು ನಾನು ಉಣ್ಣುವ ಅನ್ನವೆಂದರೆ ತಪ್ಪಾಗದು..ಅಪ್ಪ ಅಮ್ಮರನ್ನು ನೋಡಿಕೊಳ್ಳುವ ಭಾಗ್ಯ ನನ್ನದು..ಅವರು ಸ್ವಾವಲಂಬಿ ನಿಲುವಿನ ವ್ಯಕ್ತಿಗಳು.. ಆದರೆ ಮುಪ್ಪು,ಕಾಯಿಲೆ ಯಾರ ಮನೆ ಸೊತ್ತು?… ಅದು ಬಂದಾಗಲೇ ಯಾರು? ಯಾರಿಗೆ? ಹತ್ತಿರವಾಗುತ್ತಾರೆ ಎಂಬುದು?…. ಮಗನಾದವ ಕೈ ಚೆಲ್ಲಿದ ಮೇಲೆ…ಮಗಳಾಗಿ ನನ್ನ ಕರ್ತವ್ಯ ಮಾಡುವುದು ಪುಣ್ಯವೆಸರಿ.. ಅಪ್ಪ…ಕಲ್ಲು ತಿಂದು ಕಲ್ಲು ಕರುಗಿಸಿದ ದೇಹ…ಕೆಮ್ಮು,ದಮ್ಮು,ಕಫಕ್ಕೆ ನಲುಗಿದ್ದ…ನಮ್ಮ ಯಜಮಾನ್ರು,ಇನ್ನೋರ್ವ ಸಹೋದರ ಡಾಕ್ಟರ್ ದಂಪತಿಗಳು,ನನ್ನ ಮಕ್ಕಳು ಅಜ್ಜನ ಸೇವೆ ಮಾಡಲು ಎಚ್ಚರಿದ್ದವರು.ಅವ್ವ ಸಾಕಷ್ಟು ಪ್ರಯತ್ನ ಮಾಡಿ ಒಂದು ಚೇತರಿಕ ಹಂತಕ್ಕೆ.ತಂದಿದ್ದರು.ನಮಗೆಲ್ಲ 81 ರ ಅಪ್ಪನ ಮಾತು ಖಡಕ್…ಅವನ ಒದ್ದಾಟ,ನೋವು ಅನುಭವಿಸುವುದು ಕಂಡಾಗೆಲ್ಲ ಕಣ್ಣೀರ ಹೊರತು ಮತ್ತೇನಿಲ್ಲ..ಗಂಜಿ ಕುಡಿಸುವಾಗ ಅವನ ಅಸಹಾಯಕ ಸ್ಥಿತಿ ಯಾರಿಗೂ ಈ ನೋವು ಬೇಡ ಅನ್ನುತ್ತಿದ್ದರು.ಹಾಗಂತ ಮಲಗಿದವರಲ್ಲ.. ಓಡಾಡುತ್ತಿದ್ದರು.ರೂಮನ್ನು ಹೀಟರ್ ಮೂಲಕ ಗರಂ ಇಟ್ಟರೂ,ಅದ್ಯಾಕೆ ಈ ಸಲ ವಿಪರೀತ ಚಳಿ ನಡುಕ..ರಕ್ತ ಹಾಕಿಸಿ ಇನ್ನೇನು ಗುಣಮುಖರಾದರೂ ಅನ್ನುವ ಮೂರುದಿನ ಅವರು ತನ್ನ ಪೂರ್ವಜರ ಹೊಲದಲ್ಲಿಯ ದೃಶ್ಯಾವಳಿಗಳನ್ನು ಹೇಳತೊಡಗಿದ್ದ…ವಯಸ್ಸಾದ ಮೇಲೆ ಹಿರಿಯರು ಪುಟ್ಟ ಮಕ್ಕಳಂತೆ ಅನ್ನೊ ಮಾತು ಅಕ್ಷರಶಃ ಸತ್ಯ.ಮನೆಯವರು ಉಸಿರಾಟಕ್ಕೆ ತೊಂದರೆಯಾದಿತೆಂದು ಚಕ್ ಮಾಡಿಸಿ ರಕ್ತ ಪರೀಕ್ಷೆ,ಎಕ್ಷರೆ ತಗಿಸಿಕೊಂಡು ಕರೆತಂದಿದ್ದರು.ಮನೆಯ ಅಂಗಳ ಕಟ್ಟೆಯ ಮೇಲೆ ಕುಳಿತು ಗಂಜಿ ಕುಡಿದು,,ಮೆಡಿಸಿನ್ ತಗೊಂಡು ಸ್ವಲ್ಪ ಹೊತ್ತಿಗೆ ಇಹಲೋಕ ತ್ಯಜಿಸಿದರು… ಆಗ ನಾನು ಶಾಲೆಯಲ್ಲಿ!. ಬೆಳಿಗ್ಗೆ ಮಾತಾಡಿದ್ದೆ ಬಂತು.ಒಂದು ಸುಳಿವು ಕೊಡದೆ ನನ್ನಪ್ಪ ಮೌನಕ್ಕೆ ಜಾರಿದ್ದ. ಒಟ್ಟಾರೆ ಹೇಳುವುದಾದರೆ, ಹೆತ್ತವರನ್ನು ಮಕ್ಕಳು ಭಾರವಾಗಿ ನೋಡಬಾರದು…ಅವರಿಗಾಗಿ ಸಮಯ ಕಳೆಯಬೇಕು..ಅವರು ತಮ್ಮ ಸುಖಸಂತೋಷವನ್ನು ತ್ಯಾಗ ಮಾಡಿ ನಮ್ಮ ಬದುಕ ಕಟ್ಟಿರುವಾಗ.. ಇಳಿವಯಸ್ಸಿನಲ್ಲಿ ನಾವುಗಳು ಅವರ ಆತ್ಮ ಬಲವಾಗದಿದ್ದರೆ ಏನು ಪ್ರಯೋಜನ?. ಹೆಣ್ಣಿರಲಿ,ಗಂಡಿರಲಿ ಯಾರಾದರೇನು? ಕರ್ತವ್ಯ ಮಾಡಲೇಬೇಕು..ಅವರ ಆಶೀರ್ವಾದ ನಮಗೆ ಶ್ರೀರಕ್ಷೆ..ಆದರೆ ನಾನು ನನ್ನ ಮಕ್ಕಳು ಹೆಂಡತಿಯಂತ ಇದ್ದರೆ ಅವರೆಲ್ಲಿ ಹೋಗಬೇಕು? ಮೌಲ್ಯಗಳನ್ನು ಬಿತ್ತುವುದು ಬರಿ ಶಾಲೆಯ ಕೆಲಸವಲ್ಲ, ಮನೆಯಿಂದ ಬರಬೇಕಾದ ಸಂಸ್ಕಾರ! ತಂದೆ ತಾಯಿ ಇದ್ದ ಮನೆಗೆ ಹೆಣ್ಣು ಕೊಡುದಿಲ್ಲ ಅನ್ನೊ ವಿಷಯ ಒಂದಾದರೆ,ಮಗನಾದವ ತಂದೆಯ ಆಸ್ತಿ ಪಾಸ್ತಿ ಗಾಗಿ ಮಾತ್ರ ಬರುವುದು..ಹತ್ತು ಹಲವಾರೂ ರೂಪಗಳು ಹೆತ್ತವರನ್ನು ಪೀಡಿಸಲು!. ಇದ್ದಾಗ ಅವರಿಗೆ ಹೊಟ್ಟೆ ತುಂಬ ಊಟ ಮಾಡಿಸಿ,ಅವರು ಖುಷಿಯಿಂದ ಇರುವಂತೆ ನೋಡಿ.. ಅಂದರೆ ಅವರು ಇಲ್ಲದಾಗ ಮಾಡುವ ‘ತಿಥಿ’ ಊಟಕ್ಕೆ ಬೆಲೆ ಬಂದಿತು!. ಆಡಂಬರದ ಬದುಕಿಗಿಂತ ಸಾಮರಸ್ಯದ ಜೀವನ ಬಹುಮುಖ್ಯ… ಏನಂತಿರಿ?. ಶಿವಲೀಲಾ ಶಂಕರ್

“ಹೆತ್ತವರು..ಯಾರಿಗೆ ಭಾರ ಯೋಚಿಸಿ!” ವಿಶೇಷ ಲೇಖನ ಶಿವಲೀಲಾ ಶಂಕರ್ Read Post »

ಇತರೆ

“ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಎನ್.ವಿ.ರಮೇಶ್‌ ಅವರ ಲೇಖನ

ಡಿಜಿಟಲ್‌ ಸಂಗಾತಿ ಎನ್.ವಿ.ರಮೇಶ್‌ “ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಮಿರಾಬಲ್ ಸಹೋದರಿಯರ ಹತ್ಯೆಯ ವಾರ್ಷಿಕೋತ್ಸವದ ನೆನಪಿಗಾಗಿ ಪ್ರತಿ ವರ್ಷ ಒಂದು ದಿನವನ್ನು ಗೊತ್ತುಪಡಿಸಲಾಗಿದೆ.     ಈ ಆಚರಣೆಯ ಉದ್ದೇಶ ದೈಹಿಕ, ಲೈಂಗಿಕ ಮತ್ತು ಮಾನಸಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವುದು, ಲಿಂಗ-ಆಧಾರಿತ ಅಸಮಾನತೆಗಳನ್ನು ತಡೆಗಟ್ಟುವುದು ಮತ್ತು ಮಹಿಳೆಯರು ಮುಕ್ತವಾಗಿ ಬದುಕಲು ಅವಕಾಶ ಕಲ್ಪಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದರ‍್ಜನ್ಯವು ವಿಶ್ವದಲ್ಲಿ ಅತ್ಯಂತ ಪ್ರಚಲಿತ ಮತ್ತು ವ್ಯಾಪಕವಾದ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಒಂದಾಗಿದೆ. ಜಾಗತಿಕವಾಗಿ, ಸುಮಾರು ಮೂರು ಮಹಿಳೆಯರಲ್ಲಿ ಒಬ್ಬರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ದೈಹಿಕ ಮತ್ತು/ಅಥವಾ ಲೈಂಗಿಕ ನಿಕಟ ಪಾಲುದಾರ ಹಿಂಸೆ, ಪಾಲುದಾರರಲ್ಲದ ಲೈಂಗಿಕ ಹಿಂಸೆ ಅಥವಾ ಎರಡಕ್ಕೂ ಒಳಗಾಗಿದ್ದಾರೆ.ಇದು ವಿಭಿನ್ನ ಸನ್ನಿವೇಶಗಳಲ್ಲಿ ತೀವ್ರಗೊಂಡಿರುವ ಒಂದು ಪಿಡುಗು, ಡಿಜಿಟಲ್ ಕ್ಷೇತ್ರ. ಆನ್ಲೈನ್ ಪ್ಲಾಟ್ಫರ‍್ಮ್ಗಳಲ್ಲಿ ಮಹಿಳೆಯರ ಮೇಲಿನ ದರ‍್ಜನ್ಯವು ಇಂದು ಗಂಭೀರ ಮತ್ತು ವೇಗವಾಗಿ ಬೆಳೆಯುತ್ತಿರುವ ಬೆದರಿಕೆಯಾಗಿದ್ದು, ಇದು ಅನೇಕ ಮಹಿಳೆಯರ ಧ್ವನಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತದೆ-ವಿಶೇಷವಾಗಿ ರಾಜಕೀಯ, ಕ್ರಿಯಾಶೀಲತೆ ಅಥವಾ ಪತ್ರಿಕೋದ್ಯಮದಂತಹ ಕ್ಷೇತ್ರಗಳಲ್ಲಿ ಬಲವಾದ ಸರ‍್ವಜನಿಕ ಮತ್ತು ಡಿಜಿಟಲ್ ಉಪಸ್ಥಿತಿಯನ್ನು ಹೊಂದಿರುವವರು.ದರ‍್ಬಲ ತಾಂತ್ರಿಕ ನಿಯಂತ್ರಣ, ಹೊಂದಿದ್ದಾರೆ.  ಕೆಲವು ದೇಶಗಳಲ್ಲಿ ಈ ರೀತಿಯ ಆಕ್ರಮಣಕ್ಕೆ ಕಾನೂನು ಮಾನ್ಯತೆಯ ಕೊರತೆ, ಡಿಜಿಟಲ್ ಪ್ಲಾಟ್ಫರ‍್ಮ್ಗಳ ಶಿಕ್ಷೆಯ ವಿನಾಯಿತಿ, ಂI ಬಳಸಿಕೊಂಡು ಹೊಸ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ದುರುಪಯೋಗದ ರೂಪಗಳು, ಲಿಂಗ ಸಮಾನತೆಯನ್ನು ವಿರೋಧಿಸುವ ಚಳುವಳಿಗಳು, ಅಪರಾಧಿಗಳ ಅನಾಮಧೇಯತೆ ಮತ್ತು ಡಿಜಿಟಲ್ ಬಲಿಪಶುಗಳಿಗೆ ಸೀಮಿತ ಬೆಂಬಲದಿಂದಾಗಿ ಇದು ಹೆಚ್ಚುತ್ತಿರುವ ಹಿಂಸೆಯ ಒಂದು ರೂಪವಾಗಿದೆ.. ಡಿಜಿಟಲ್ ದುರುಪಯೋಗ ಎಂದರೇನು? ಮಹಿಳೆಯರು ಮತ್ತು ಹುಡುಗಿಯರನ್ನು ಹಿಂಬಾಲಿಸಲು, ಕಿರುಕುಳ ನೀಡಲು ಮತ್ತು ನಿಂದಿಸಲು ಡಿಜಿಟಲ್ ಪರಿಕರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ . ಇದರಲ್ಲಿ ಇವು ಸೇರಿವೆ:• ಚಿತ್ರ ಆಧಾರಿತ ನಿಂದನೆ/ಒಪ್ಪಂದವಿಲ್ಲದೆ ಆತ್ಮೀಯ ಚಿತ್ರಗಳ ಹಂಚಿಕೆ – ಇದನ್ನು ಸಾಮಾನ್ಯವಾಗಿ ಸೇಡಿನ ಅಶ್ಲೀಲ ಅಥವಾ ಸೋರಿಕೆಯಾದ ನಗ್ನ ಚಿತ್ರಗಳು ಎಂದು ಕರೆಯಲಾಗುತ್ತದೆ.• ಸೈರ‍್ಬುಲ್ಲಿಂಗ್, ಟ್ರೋಲಿಂಗ್ ಮತ್ತು ಆನ್ಲೈನ್ ಬೆದರಿಕೆಗಳು.• ಆನ್ಲೈನ್ ಕಿರುಕುಳ ಮತ್ತು ಲೈಂಗಿಕ ಕಿರುಕುಳ.• ಲೈಂಗಿಕವಾಗಿ ಸ್ಪಷ್ಟವಾದ ಚಿತ್ರಗಳು, ಡೀಪ್ಫೇಕ್ ಅಶ್ಲೀಲತೆ ಮತ್ತು ಡಿಜಿಟಲ್ ಆಗಿ ಕುಶಲತೆಯಿಂದ ಮಾಡಿದ ಚಿತ್ರಗಳು, ವೀಡಿಯೊಗಳು ಅಥವಾ ಆಡಿಯೊದಂತಹ – ರಚಿತವಾದ ಡೀಪ್ಫೇಕ್ಗಳು.• ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ದ್ವೇಷ ಭಾಷಣ ಮತ್ತು ತಪ್ಪು ಮಾಹಿತಿ.• ಡಾಕ್ಸಿಂಗ್ – ಖಾಸಗಿ ಮಾಹಿತಿಯನ್ನು ಪ್ರಕಟಿಸುವುದು.        • ಯಾರೊಬ್ಬರ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಆನ್ಲೈನ್ನಲ್ಲಿ ಹಿಂಬಾಲಿಸುವುದು ಅಥವಾ ಕಣ್ಗಾವಲು/ಟ್ರ‍್ಯಾಕಿಂಗ್.• ಆನ್ಲೈನ್ ಶೃಂಗಾರ ಮತ್ತು ಲೈಂಗಿಕ ಶೋಷಣೆ..• ಸ್ತ್ರೀದ್ವೇಷಿ ಜಾಲಗಳು – ಉದಾ. ಮಾನೋಸ್ಪಿಯರ್ , ಇನ್ಸೆಲ್ ವೇದಿಕೆಗಳು.ಈ ಕೃತ್ಯಗಳು ಆನ್ಲೈನ್ನಲ್ಲಿ ಮಾತ್ರ ನಡೆಯುವುದಿಲ್ಲ. ಅವು ಹೆಚ್ಚಾಗಿ ನಿಜ ಜೀವನದಲ್ಲಿ ಆಫ್ಲೈನ್ ಹಿಂಸಾಚಾರಕ್ಕೆ (Iಖಐ) ಕಾರಣವಾಗುತ್ತವೆ, ಉದಾಹರಣೆಗೆ ಬಲವಂತ, ದೈಹಿಕ ಕಿರುಕುಳ ಮತ್ತು ಸ್ತ್ರೀ ಹತ್ಯೆ – ಮಹಿಳೆಯರು ಮತ್ತು ಹುಡುಗಿಯರ ಹತ್ಯೆ. ಈ ಹಾನಿ ದರ‍್ಘಕಾಲೀನವಾಗಿರಬಹುದು ಮತ್ತು ದರ‍್ಘಕಾಲದವರೆಗೆ ಬದುಕುಳಿದವರ ಮೇಲೆ ಪರಿಣಾಮ ಬೀರುತ್ತದೆ.ಡಿಜಿಟಲ್ ಹಿಂಸಾಚಾರವು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸುತ್ತದೆ, ಜೀವನದ ಎಲ್ಲಾ ಹಂತಗಳಲ್ಲಿ, ವಿಶೇಷವಾಗಿ ಸರ‍್ವಜನಿಕ ಅಥವಾ ಆನ್ಲೈನ್ ಗೋಚರತೆಯನ್ನು ಹೊಂದಿರುವವರು – ಉದಾಹರಣೆಗೆ ಕರ‍್ಯರ‍್ತರು, ಪತ್ರರ‍್ತರು, ರಾಜಕೀಯದಲ್ಲಿರುವ ಮಹಿಳೆಯರು, ಮಾನವ ಹಕ್ಕುಗಳ ರಕ್ಷಕರು ಮತ್ತು ಯುವತಿಯರು .ಜನಾಂಗ, ಅಂಗವೈಕಲ್ಯ, ಲಿಂಗ ಗುರುತಿಸುವಿಕೆ ಅಥವಾ ಲೈಂಗಿಕ ದೃಷ್ಟಿಕೋನ ಸೇರಿದಂತೆ ಪರಸ್ಪರ ಭಿನ್ನವಾದ ತಾರತಮ್ಯವನ್ನು ಎದುರಿಸುತ್ತಿರುವ ಮಹಿಳೆಯರ ಮೇಲೆ ಇದರ ಪರಿಣಾಮ ಇನ್ನೂ ಕೆಟ್ಟದಾಗಿದೆ . ೮೫% ಮಹಿಳೆಯರು ವೈಯಕ್ತಿಕವಾಗಿ ಡಿಜಿಟಲ್ ಹಿಂಸೆಯನ್ನು ಅನುಭವಿಸಿದ್ದಾರೆ ಅಥವಾ ಇತರ ಮಹಿಳೆಯರ ವಿರುದ್ಧ ಅದನ್ನು ವೀಕ್ಷಿಸಿದ್ದಾರೆ.ತಪ್ಪು ಮಾಹಿತಿ ಮತ್ತು ಮಾನನಷ್ಟವು ಮಹಿಳೆಯರ ವಿರುದ್ಧದ ಆನ್ಲೈನ್ ಹಿಂಸೆಯ ಅತ್ಯಂತ ಪ್ರಚಲಿತ ರೂಪಗಳಾಗಿವೆ . ಡಿಜಿಟಲ್ ಹಿಂಸೆಯನ್ನು ಅನುಭವಿಸಿದ ೬೭% ಮಹಿಳೆಯರು ಮತ್ತು ಹುಡುಗಿಯರು ಈ ತಂತ್ರವನ್ನು ವರದಿ ಮಾಡಿದ್ದಾರೆ.ಎಲ್ಲಾ ಆನ್ಲೈನ್ ಡೀಪ್ಫೇಕ್ಗಳಲ್ಲಿ ೯೦ – ೯೫% ರಷ್ಟು ಒಮ್ಮತವಿಲ್ಲದ ಅಶ್ಲೀಲ ಚಿತ್ರಗಳಾಗಿದ್ದು, ಇವುಗಳಲ್ಲಿ ಸುಮಾರು ೯೦ ಪ್ರತಿಶತ ಮಹಿಳೆಯರನ್ನು ಚಿತ್ರಿಸುತ್ತವೆ.೭೩% ಮಹಿಳಾ ಪತ್ರರ‍್ತರು ಆನ್ಲೈನ್ ಹಿಂಸಾಚಾರವನ್ನು ಅನುಭವಿಸಿರುವುದಾಗಿ ವರದಿ ಮಾಡಿದ್ದಾರೆ. ಪದೇ ಪದೇ ಕೇಳಲಾಗುವ ಪ್ರಶ್ನೆಗಳು: ಡಿಜಿಟಲ್ ನಿಂದನೆ, ಟ್ರೋಲಿಂಗ್, ಹಿಂಬಾಲಿಸುವಿಕೆ ಮತ್ತು ಮಹಿಳೆಯರು ಮತ್ತು ಹುಡುಗಿಯರ ವಿರುದ್ಧ ತಂತ್ರಜ್ಞಾನ-ಸಹಾಯಿತ ಹಿಂಸೆಯ ಇತರ ರೂಪಗಳು ನಿಮ್ಮ ದಿನಚರಿಯ ಬಗ್ಗೆ ನಿಖರವಾದ ವಿವರಗಳನ್ನು ಹೊಂದಿರುವ ಅಪರಿಚಿತ ವ್ಯಕ್ತಿಯಿಂದ ಸಂದೇಶ ಬರುವುದನ್ನು ಕಲ್ಪಿಸಿಕೊಳ್ಳಿ. ಅಥವಾ ನಿಮ್ಮ ದೃಶ್ಯಗಳನ್ನು ಡಿಜಿಟಲ್ ರೂಪದಲ್ಲಿ ಸ್ಪಷ್ಟ ವಿಷಯವಾಗಿ ಮರ‍್ಪಡಿಸಿ ಇಂರ‍್ನೆಟ್ನಾದ್ಯಂತ ಹರಡಲಾಗಿದೆ ಎಂದು ಕಂಡುಹಿಡಿದಾಗ ಉಂಟಾಗುವ ಆಘಾತವನ್ನು ಪರಿಗಣಿಸಿ. ಇವು ಡಿಜಿಟಲ್ ದುರುಪಯೋಗದ ಕಾಲ್ಪನಿಕ ಸನ್ನಿವೇಶಗಳಲ್ಲ – ಇಂದು ಡಿಜಿಟಲ್ ಜಗತ್ತಿನಲ್ಲಿ ಸಂಚರಿಸುವ ಲಕ್ಷಾಂತರ ಮಹಿಳೆಯರು ಮತ್ತು ಹುಡುಗಿಯರಿಗೆ ಅವು ಭಯಾನಕ ವಾಸ್ತವವಾಗಿದೆ. ತಂತ್ರಜ್ಞಾನವು ನಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತಿರುವುದರಿಂದ, ಮಹಿಳೆಯರು ಮತ್ತು ಹುಡುಗಿಯರಿಗೆ ಹೊಸ ಮತ್ತು ಆತಂಕಕಾರಿ ರೀತಿಯಲ್ಲಿ ಹಾನಿ ಮಾಡಲು ಇದನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಹೊಸ ವಿದ್ಯಮಾನವಲ್ಲದಿದ್ದರೂ, ಇತ್ತೀಚಿನ ರ‍್ಷಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ತಂತ್ರಜ್ಞಾನ-ಪ್ರೇರಿತ ಹಿಂಸೆ ವೇಗವಾಗಿ ಹೆಚ್ಚುತ್ತಿದೆ , ಇದು ಎಲ್ಲೆಡೆ ಮಹಿಳೆಯರು ಮತ್ತು ಹುಡುಗಿಯರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಗಂಭೀರ ಬೆದರಿಕೆಗಳನ್ನು ಒಡ್ಡುತ್ತಿದೆ. ಆನ್ಲೈನ್ ನಿಂದನೆಯಿಂದ ಪ್ರಾರಂಭವಾಗುವ ಅಪಾಯವು ಪರದೆಗಳು ಮತ್ತು ಗಡಿಗಳನ್ನು ಮೀರಿ ವಿಸ್ತರಿಸಬಹುದು, ಇದರಿಂದಾಗಿ ಅನೇಕ ಮಹಿಳೆಯರು ಮನೆಯಲ್ಲಿ, ಕೆಲಸದಲ್ಲಿ ಅಥವಾ ಸರ‍್ವಜನಿಕ ಸ್ಥಳಗಳಲ್ಲಿ ಸುರಕ್ಷಿತವಾಗಿರುವುದು ಅಸಾಧ್ಯವಾಗುತ್ತದೆ. ಎನ್.ವಿ.ರಮೇಶ್

“ಮಹಿಳೆಯರ ಮೇಲಿನ ಡಿಜಿಟಲ್ ಹಿಂಸಾಚಾರ ತಡೆಯುವುದು” ಎನ್.ವಿ.ರಮೇಶ್‌ ಅವರ ಲೇಖನ Read Post »

ಇತರೆ, ಜೀವನ

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್

ಲೇಖನ ಸಂಗಾತಿ ಶಿವಲೀಲಾ ಶಂಕರ್ “ವಿದಾಯ ಹೇಳಬೇಕಿದೆ ಅಂತರಾಳದಿಂದ….” ಇದು ಹೀಗೆ ಆಗುತ್ತದೆಂಬ ಭ್ರಮೆ ಒಮ್ಮೆ ಹಾದು ಹೋದರು, ನಾವುಗಳು ಮತ್ತೊಂದು ವಿಚಾರದತ್ತ ನಮ್ಮನ್ನು  ಸಕ್ರಿಯವಾಗಿಸಿಕೊಂಡಿರುತ್ತೆವೆ.ಮನುಷ್ಯನ ಜನ್ಮ ಬರಿ ನಿರೀಕ್ಷೆಯಲ್ಲೇ ಕಳೆದು ಹೋಗಿದ್ದು ಗೊತ್ತೆಯಾಗಲ್ಲ.ನೂರೆಂಟು ಕನಸುಗಳು ನನಸಾಗುವ ಹೊಸ್ತಿಲಿನಲ್ಲಿ ಮುಗ್ಗರಿಸಿ ಬಿಕರಿಯಾದ ಕನಸುಗಳು ಒಡೆದ ಗಾಜಿನ ಚೂರಿನಂತೆ.ಹೌದುಈ ವರುಷ ಇದನ್ನು ಸಾಧಿಸಬೇಕೆಂಬ ಆಸೆ ಹೊತ್ತರು,ಆಸೆಗೆ ಮಿತಿಬೇಕಲ್ಲ.ಹೊಂಟದಾರಿ ಒಂದಾದರೆ,ಎದುರಾಗುವ ಸಂಕಷ್ಟಗಳು ನೂರಾರು!ಯಾವುದನ್ನು ಮೊದಲು ಪರಿಹರಿಸಬೇಕು? ಎಂಬ ನಿಖರತೆ ಮನಸ್ಸು ನೀಡದಿರುವುದು ಮತ್ತು ಹೃದಯ ಮೌನವಾಗಿರುವುದು ಒಂದು ನಿದರ್ಶನ. ಕಳೆದು ಹೋದ ಘಟನೆಗಳು ಮತ್ತೆ ಮರುಳಿಸುವ ಸಂಭವ ಸಾಧ್ಯತೆ ಕಡಿಮೆ.ಆದರೆ ಅವು ನೀಡಿದ ನೋವುಗಳು  ಶಾಶ್ವತ. ಪ್ರತಿಯೊಬ್ಬರ ಬದುಕಲ್ಲಿ ಕಹಿ-ಸಿಹಿ ಅಂಶಗಳು ತಮ್ಮದೇ ಆದ ಛಾಪನ್ನು ಮೂಡಿಸಿರುತ್ತವೆ.”ವಿದಾಯ” ಯಾವುದಕ್ಕೆ ಹೇಳಬೇಕು? ವರುಷಕ್ಕಾ? ಅಥವಾ ನಾವು ಬಳಸುವ ಕ್ಯಾಲೆಂಡರ್ ಗಾ? ಮನಸ್ಸನ್ನು ನುಚ್ಚು ನೂರು ಮಾಡಿದ ಕನಸುಗಳಿಗಾ? ನಂಬಿಕೆಯ ಅಡಿಪಾಯ ಕಳಚಿದ್ದಕ್ಕಾ? ಯಾವುದಕ್ಕೆ ಎಂಬ ಪ್ರಶ್ನೆ? ಸತ್ಯ ಅಲ್ಲವಾ? “ವಿದಾಯ”ಎಂಬ ಸರಳ ಪದ ಮನುಷ್ಯನ ದೇಹದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆಯೆಂದು ಯಾರು ಉಹಿಸಲು ಸಾಧ್ಯವಿಲ್ಲ!. ಕಳೆದುಕೊಳ್ಳುವುದು ಅತ್ಯಂತ ಸುಲಭದ ಸರಕಾಗಿ ನಿಂತಿದೆ.ವಸ್ತುವಾದರೂ ಸರಿ,ವ್ಯಕ್ತಿಯಾದರು ಸರಿ..ಅವಕಾಶ ಕೊನೆಯಾದಾಗ ಇಲ್ಲವೇ ವಾಸ್ತವ ನಿಲುಗಡೆಯ ಹಾದಿ ಹಿಡಿದಾಗ…ಎಲ್ಲೊ ಒಂದುಕಡೆ ಬಿರುಕಾದ ಸಂಬಂಧ ಬಿರುಸಾಗಿ ಗಾಳಿಗುಂಟ ಹಾರಿ ಹೋದಾಗ ‘ವಿದಾಯ’ ಅನಿವಾರ್ಯ. 2025 ಅಂತಹ ಸುಂದರ ಕನಸುಗಳನ್ನು ಹೆಣೆದಂತೆ ಭಾಸವಾದರೂ,ನೋವನ್ನು ಇಂಚಿಂಚಾಗಿ ಅನುಭವಿಸುವ ಭಾಗ್ಯ ನೀಡಿದ್ದು ವಿಶೇಷ. ನೋವು ತಡೆದುಕೊಳ್ಳಬಹುದು…ಆದರೆ ಬದುಕನ್ನೇ ನುಂಗಿ ಬಿಟ್ಟರೆ ಸಂಭ್ರಮಿಸುವ ಹೊಣೆ ಹೊರಲಾದಿತೆ? ಆದರೂ ಜೀವನ ನಿಂತ ನೀರಲ್ಲ!. ಉಸಿರಿರುವ ತನಕವೂ ಹೋರಾಡಲೇ ಬೇಕು ನಮ್ಮೊಳಗಿನ ಚೈತನ್ಯ ಕೈಚೆಲ್ಲುವ ತನಕ!. ಪ್ರತಿವರ್ಷವೂ ಹೊಸ ಚಿಂತನೆಗಳನ್ನು ಹಮ್ಮಿಕೊಳ್ಳುವ ನಾವು,ಯಾವ ಯೋಚನೆಗೆ ಚಾಲನೆ ನೀಡಿದ್ದಿವಿ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳುವುದನ್ನೇ ಮರೆತು ಬಿಡುತ್ತವೆ. ಮರೆವು ಮನುಷ್ಯನ ಸಹಜ ಗುಣ.ಅದಿಲ್ಲದಿದ್ದರೆ, ಮೆದುಳೆಂಬ ಮೆಮರಿಕಾರ್ಡ ಬ್ಲಾಸ್ಟ್ ಆಗುವುದರಲ್ಲಿ ಸಂಶಯವಿಲ್ಲ. ಪುಟ್ಟ ಮೆದುಳು ಏನೆಲ್ಲಾ ಅಂಶಗಳನ್ನು ತನ್ನೊಳಗೆ ಸಂಗ್ರಹಿಸಿಕೊಳ್ಳಬೇಕು? ಯಾವ ನರಕ್ಕೆ ಯಾವ ಸಂದೇಶ ರವಾನಿಸಬೇಕು ಎಂಬ ಚಿಂತೆ ಕಾಡದಿರದು!. ಅದಕ್ಕೆ ಒಮ್ಮೊಮ್ಮೆ ಕಣ್ಣಿಗೆ ಕತ್ತಲು ಆವರಿಸಿ ಎಚ್ಚರ ತಪ್ಪುವುದು ಇದೆ. ಇದೊಂದು ನೋವಿನ ಸಂಗತಿಯಾದರೂ,ಜೀವನ್ಮರಣದ ನಡುವೆ ಒದ್ದಾಡುವ ಜೀವಗಳು ಬಯಸುವುದು ಶೂನ್ಯವೆಂಬುದನ್ನು ಮರೆಯುವಂತಿಲ್ಲ. ವರ್ಷದ ಅಂತ್ಯಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವುದು ಸಹಜವೆನ್ನಿಸಿದರು,ಮಾಡಿಕೊಳ್ಳುವವರು ಯಾರು ಅನ್ನುವ ಪ್ರಶ್ನೆ?.ಪ್ರೀತಿ ಪ್ರೇಮ,ಮೋಸ,ವಂಚನೆ,ಅಕ್ರಮ,ಆತ್ಮಹತ್ಯೆ, ಅತ್ಯಾಚಾರ, ಅಪಘಾತ,ಕೊಲೆಗಳಿಗೆ ಬಲಿಯಾದ ಅದೆಷ್ಟೋ ಮುಗ್ದರ ವೃತ್ತಾಂತವು ಹೃದಯ ಕಲುಕದೆ ಇರದು.ಕಣ್ಣಂಚಲಿ ನೋವಿನ ಕಣ್ಣೀರು ಜಿನುಗದೆ ಇರದು…ಇಂತಹ ಘಟನೆಗಳು  ನಮಗೆ ಹತ್ತಿರವಾದವರಾಗಿದ್ದರಂತೂ ಕರುಳು ಮಿಡಿಯದೆ ಇರದು….ಮೊನ್ನೆ ಮೊನ್ನೆಯಷ್ಟೇ…ಗೆಳತಿಯ ಸಾವು ಇಡೀ ಕುಟುಂಬಕ್ಕೆ ಆಘಾತ ನೀಡಿದ್ದು…ನಂಬಲು ಅಸಾಧ್ಯ!. ಮೆದುಳು ಕೇಳುವಷ್ಟು,ಹೇಳುವಷ್ಟು, ಕೇಳಿದ್ದಕ್ಕೆ ಉತ್ತರಿಸುವಷ್ಡು ಇದ್ದರೆ ಮಾತ್ರ ಸುರಕ್ಷಿತ!. ಆದರೆ ಮಿತಿಮೀರಿ ಚಿಂತಿಸುವ ಕೆಲಸಕ್ಕೆ ಸೇರಿದ ಮೇಲಂತೂ, ನಿದ್ರೆಯೆಂಬ ಅಸ್ತಿತ್ವ ಮರಿಚೀಕೆ!. ನಾವೆಲ್ಲ ಒಂದಿಲ್ಲೊಂದು ಒತ್ತಡಕ್ಕೆ ಸಿಲುಕಿದ್ದೆವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಕೂಲ್ ಆಗಿರಬೇಕು, ಅನ್ನೊರಿಗೆ cool ನ ಅರ್ಥ ಕೇಳಬೇಕು.ವಿದಾಯ ಹೇಳಿ ಹೋದವರಿಗೆಪುನಃ ಬರಲಾಗದೆ ತಮ್ಮೊಳಗೆ ಒದ್ದಾಟ ನಡೆಸಿರುವರು… ನಿಜ ಕಣ್ರಿ,ಮರಳಿ ಬಾರದ ಊರಿಗೆ ಪಯಣ ಬೆಳೆಸಿದ ಅದೆಷ್ಟೋ ಜೀವಗಳು ಎಷ್ಟು ನಲುಗಿರಬಹುದು? ಅವರು ಕಂಡ ಕನಸುಗಳು ಅರೆಬೆಂದಾವಸ್ಥೆಯಲ್ಲಿ ಇನ್ನೂ ಇಲ್ಲೆ ಇರುವುದನ್ನು ಅಲ್ಲಗಳೆಯುವಂತಿಲ್ಲನಾವೆಲ್ಲ ಒಂದಲ್ಲ ಒಂದು ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದೆವೆ. ಸಂಬಂಧಗಳ ಸಂಕೋಲೆಯಲ್ಲಿ ಬಿಕ್ಕುವ ಗಳಿಗೆ ಹೆಜ್ಜೆ ಹೆಜ್ಜೆಗೂಬಂಧಿಸಿದೆ.ಯಾರೆಲ್ಲ ಈ ಪ್ರಪಂಚದಲ್ಲಿ ಉಸಿರಾಡುತ್ತಿದ್ದಾರೋ ಎಲ್ಲರಿಗೂ ವಿದಾಯದ ಕಿರುಕಾಣಿಕೆ.ಕೇವಲ ಸಾಂಕೇತಿಕವಾಗಿ ಕ್ಯಾಲೆಂಡರ್ ಬದಲಾಗಿದೆ…ಅದು ಕ್ಯಾಲೆಂಡರ್ ಅಷ್ಟೇ ಅಲ್ಲ ಜೀವನದ ಮಹತ್ವದ ದಿನಗಳು.ವಿದಾಯ ಸಾರಿದ್ದು ನಮಗೆ ಗೊತ್ತೆಯಾಗಿಲ್ಲ. ಒಟ್ಟಾರೆ ಹೇಳುವುದಾದರೆ ವಿದಾಯದ ಕಹಿ ಸಿಹಿ ನೆನಪು ತುಂಬಾನೆ ದುಃಖ ಮತ್ತು ಖಿನ್ನತೆ ನೀಡುವ ಮೂಲ ಸಾಧನಗಳು.ಹೀಗಿರುವಾಗ ನಾವುಗಳು ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ಸಕಾರಾತ್ಮಕ ಗುಣವನ್ನು ಮೈಗೂಡಿಸಿಕೊಳ್ಳುವುದು ಸುಲಭವಾದರೂ,ಆಚರಣೆಗೆ ತರುವುದು ಕಷ್ಟವೆಂಬುವುದು ನಮಗೆಲ್ಲ ತಿಳಿದಿದೆ.ಕಳೆದುಕೊಂಡ ವಸ್ತು ಪುನಃ ಸಿಗಬಹುದೇನೋ,ಆದರೆ ನಂಬಿಕೆ,ವಿಶ್ವಾಸ, ಪ್ರೀತಿ ಹಾಗೂ ಪ್ರೀತಿಪಾತ್ರರಾದವರು…ಪುನಃ ಸಿಗಲಾರದು…!ಜೀವನದ ಮಜಲುಗಳನ್ನು ಮೆಲುಕು ಹಾಕುವುದು,ಹೊಸ ಕ್ಯಾಲೆಂಡರ್ ತಂದು ಹಾಕುವುದು ಒಂದೇ ಆದಿತೆ?… ನೆನಪು ಜೀವನ್ಮರಣದ ಬೆಸುಗೆ…ವಿದಾಯ ಕಣ್ಣೀರಿಗೆ ಮಾತ್ರ ಅಲ್ಲ ಹೃದಯಕ್ಕೂ ಸಂಬಂಧಿಸಿದ್ದು…..ಅರ್ಥೈಸಿಕೊಳ್ಳಲು ಸಮಯ ಬೇಕು ಅಷ್ಟೇ!… ಶಿವಲೀಲಾ ಶಂಕರ್

“ವಿದಾಯ ಹೇಳಬೇಕಿದೆ ಅಂತರಾಳದಿಂದ….” ವಿಶೇಷ ಲೇಖನ, ಶಿವಲೀಲಾ ಶಂಕರ್ Read Post »

ಇತರೆ

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು

ಸಿನಿ ಸಂಗಾತಿ ಪ್ರಶಾಂತ್‌ ಬೆಳತೂರು ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ. ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ.ಎನ್.ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ ಚಿತ್ರದ ಕಡೆ ಒಂದು ದಿವ್ಯ ನಿರ್ಲಕ್ಷ್ಯ ವಹಿಸಿಬಿಟ್ಟಿದೆ. ಆದರೆ ಸ್ವತಃ ಇದರ ನಿರ್ದೇಶಕರಾದ ಪ್ರಕಾಶ್ ರಾಜ್ ಮೇಹು ಅವರು ನಿನ್ನೆ ತಮ್ಮ ಡಿಎನ್ಎ ಚಿತ್ರದಯೂಟ್ಯೂಬ್ ಲಿಂಕ್ ಅನ್ನು ಕಳುಹಿಸಿದ್ದರಿಂದ ಕುತೂಹಲಗೊಂಡು ಅದನ್ನು ತೆರೆದು ಚಿತ್ರವನ್ನು ನೋಡಲು ಶುರು ಮಾಡಿದೆ.ನೀನಾಸಂ ಸತೀಶ್ ಮತ್ತು ಯೋಗರಾಜ್ ಭಟ್ ಅವರ ಹಾಡಿನ ಧ್ವನಿಯ ಹಿನ್ನೆಲೆಯಲ್ಲಿನ ಸಾಹಿತ್ಯವನ್ನು ಅರ್ಥೈಸುತ್ತಾ ಇದರ ಕಥಾ ತಿರುಳನ್ನು ಕ್ರಿಯಾಶೀಲ ನಿರ್ದೇಶಕನೊಬ್ಬ ಹೇಗೆ ಆರಂಭದಲ್ಲಿ ನೋಡುಗನಿಗೆ ತನ್ನ ಕತೆಯ ಅಂತ್ಯವನ್ನು ಸುಲಭವಾಗಿ ಬಿಟ್ಟು ಕೊಡದೆ ಸೂಕ್ಷ್ಮವಾಗಿ ಹೇಳುವ ರೀತಿ ನನ್ನೊಳಗೆ ಆಸಕ್ತಿ ಹುಟ್ಟಿಸಿತು.! ಡಿಎನ್ಎ ಎಂದರೆ ಇಲ್ಲಿ  ಡಿಯೋಕ್ಸಿರೈಬೋ ನ್ಯೂಕ್ಲಿಕ್ ಆಮ್ಲವೆಂಬ ನಮ್ಮ ಸಾಮಾನ್ಯ ವಿಜ್ಞಾನದ ತಿಳವಳಿಕೆಗಳನ್ನು ಬದಿಗೊತ್ತಿ  ಒಡೆದು ಹಾಕುವ ಕತೆಗಾರ ಧ್ರುವ, ನಕ್ಷತ್ರ, ಆಕಾಶಗಳೆಂಬ ತನ್ನ ಕತೆಯ ಪಾತ್ರಗಳನ್ನು ಹಾರಲು ಬಿಡುವ ಮೂಲಕ ಪ್ರೇಕ್ಷಕನನ್ನು ಭದ್ರವಾಗಿ ಹಿಡಿದಿಕೊಳ್ಳುತ್ತಾನೆ ಎಂದು ಅನಿಸದೆ ಇರದು. ಕತೆಯ ಎಳೆ ಮೇಲ್ನೋಟಕ್ಕೆ ತೀರಾ ಸಾಧಾರಣವೆನ್ನುವಂತೆ ಕಂಡರೂ ಭಾವಂತಃಕರಣದ ತೊಳಲಾಟದ ಗಾಳಗಳಲ್ಲಿ ಸಿಲುಕಿಕೊಳ್ಳುವ ಎರಡು ಅಪರಿಚಿತ ವಿಭಿನ್ನ ಕುಟುಂಬಗಳ ಪರಿಚಯವನ್ನು ತೋರಿಸಲು ಒಂದು ಸಿದ್ದ ಮಾದರಿಯನ್ನು ಎಲ್ಲೂ ಬೇಸರವಾಗದಂತೆ ತೋರಿಸಿರುವ ನಿರ್ದೇಶಕರ ಕಲಾತ್ಮಕತೆ ವಿಶಿಷ್ಟವೆನಿಸುತ್ತದೆ.ಎಲ್ಲೂ ಜಾತಿಯ ಹೆಸರನ್ನು ಬಳಸದೆ ಹೆಸರುಗಳ ಸೂಚಕಗಳಿಂದಲೇ ಒಂದು ಶುದ್ಧ ಬ್ರಾಹ್ಮಣ ಕುಟುಂಬ ಮತ್ತೊಂದು ಶೂದ್ರ ಗೌಡರ ಕುಟುಂಬ ಎಂಬ ಅರಿವನ್ನು ಪ್ರೇಕ್ಷಕನಿಗೆ ಸುಲಭದಲ್ಲಿ ದಾಟಿಸಿಬಿಡುವ ಪ್ರಯತ್ನದಲ್ಲಿ ನಿರ್ದೇಶಕನ ಹೆಚ್ಚುಗಾರಿಕೆ ಕಾಣುತ್ತದೆ. ಆರು ವರ್ಷಗಳ ನಂತರ ಮಗು ಅದಲು ಬದಲಾದ ವಿಷಯವನ್ನು ಪ್ರಸ್ತಾಪಿಸುತ್ತಾ ಬೆಂಗಳೂರಿನ ಸಿಟಿ ಆಸ್ಪತ್ರೆಯೊಂದಕ್ಕೆ ಹೆಂಡತಿಯೊಡನೆ ಭಾವಾವೇಶದಿಂದ ಕಾಲಿರಿಸುವ ಪ್ರಶಾಂತ್ ಗೌಡನ ಪಾತ್ರದ ಮೂಲಕ ಕಾಣಿಸಿಕೊಳ್ಳುವ ಅಚ್ಯುತ್ ಕುಮಾರ್ ಅವರ ನಟನೆ ಮನೋಜ್ಞವಾಗಿದೆ. ಪ್ರಾಯಶಃ ಈ ಸಿನಿಮಾ ಒಬ್ಬ ವೀಕ್ಷಕನಿಗೆ ತೀರಾ ಗಂಭೀರವಾಗಿ ಅವನೆದುರು ತೆರೆದುಕೊಳ್ಳುವುದು ಇಲ್ಲಿಯೇ.! ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳು ಗಟ್ಟಿ ಸಂಭಾಷಣೆಯ ಮೂಲಕ ಭಾವಗಳ ಲೋಕದಲ್ಲಿ ವಿಹರಿಸುತ್ತಾ ಹೋಗುತ್ತದೆ. ದೇವನೂರು ಮಹಾದೇವ ಅವರ ಕುಸುಮಬಾಲೆಯ ಸಂಬಂಜ ಅನ್ನದು ದೊಡ್ಡದು ಕನಾ ಎಂಬ ಮಾತುಗಳ ತತ್ವದಲ್ಲಿಯೇ ಕತೆಗಾರ ಈ ಕತೆಯನ್ನು ವಿಶಿಷ್ಟ ರೂಪದಲ್ಲಿ ಹೆಣೆಯಲು ಪ್ರಯತ್ನಿಸಿದ್ದಾನೆ ಎಂದು ಎನಿಸಿತು.ಕರುಳಿನ ರಕ್ತ ಸಂಬಂಧ ಮತ್ತು ಒಂದು ಪರಿಸರದಲ್ಲಿ ಹುಟ್ಟಿ ಬೆಳೆವಾಗ ಅದು ಬೆಳೆಸಿಕೊಳ್ಳುವ ಭಾವ ಸಂಬಂಧಗಳನ್ನು ಮುಖಾಮುಖಿಯಾಗಿಸುವ ಕತೆಗಾರ ಮನುಷ್ಯನ ಬದುಕಿನ ತತ್ವಗಳ ಮೂಲವನ್ನು ಓರೆಗೆ ಹಚ್ಚುತ್ತಾನೆ. ನದಿಯ ಹುಟ್ಟು ಮುಖ್ಯವೋ? ಅಥವಾ ಅದು ಎಲ್ಲಿಗೆ ಸೇರುತ್ತದೆ ಎನ್ನುವುದು ಮುಖ್ಯವೋ? ಎಂಬ ಸಹಜ ಪ್ರಶ್ನೆಗಳು ಎದುರಾದಾಗ ದ್ವಂದ್ವಗಳು ಸಹಜವಾಗಿ ಮನುಷ್ಯನೊಳಗೆ ಬೆಳೆಯುತ್ತಾ ಹೋಗುತ್ತದೆ. ಹರಿಯುವ ನದಿಗೆ ಅಡ್ಡಲಾಗಿ ಅಣೆಕಟ್ಟೆಯನ್ನು ಕಟ್ಟಬಹುದು, ಅದರ ದಿಕ್ಕನ್ನು ಬದಲಿಸಬಹುದು ಆದರೆ ಆ ನೀರಿನ ಗುಣವನ್ನು ಬದಲಿಸಿಲಾದಿತೇ? ಎಂಬ  ತರ್ಕಬದ್ಧವಾದ ಪ್ರಶ್ನೆಯನ್ನು ಕರುಳಿನೊಂದಿಗಿನ ಭಾವಸಂಬಂಧಗಳನ್ನು ಎದುರುಬದುರಾಗಿಸಿ ತಾಕಲಾಟಕ್ಕೆ ದೂಡಿಕೊಳ್ಳುವ ತಂದೆ- ತಾಯಿ ಹಾಗೂ ಮಕ್ಕಳ ಭಾವಗಳನ್ನು ಬದುಕಿನ ದ್ವಂದ್ವಗಳ ತೊಯ್ದಾಟದಲ್ಲಿ ಅಷ್ಟು ಪಾತ್ರಗಳನ್ನು ಅಚ್ಚುಕಟ್ಟಾಗಿ ಅದರಲ್ಲಿ ಮಿಂದೇಳಿಸಿದ್ದಾರೆ.ಹಾಗೆಯೇ  ಅಲ್ಲಲ್ಲಿ ನಿರ್ದೇಶಕ ತಮ್ಮ ನೆಚ್ಚಿನ ನಟರಾದ ರಾಜಕುಮಾರರ ಪ್ರಸಿದ್ಧ ಸಿನಿಮಾ ಸಂಭಾಷಣೆಗಳನ್ನು ಭಾವಾಭಿನಯಗಳನ್ನು ಮೂಲ ಕತೆಗೆ ಚ್ಯುತಿಯಾಗದಂತೆ ಹಾಸ್ಯ ರೂಪದಲ್ಲಿ ನವಿರಾಗಿ ಬೆರೆಸಿರುವುದು ಕೂಡ ನೋಡುಗನಿಗೆ ಇಷ್ಟವಾಗುತ್ತದೆ.ಚಿತ್ರದ ಕೊನೆಯ ಹಂತಕ್ಕೆ ಕುಸುಮಬಾಲೆಯ ಆರಂಭದಲ್ಲಿ ಬರುವ  ಅಲ್ಲಮ ಪ್ರಭುವಿನ  ವಚನದ  ಸಮುದ್ರದೊಳಗಣ ಉಪ್ಪಿಗೂ ಬೆಟ್ಟದ ನೆಲ್ಲಿಕಾಯಿಗೂ , ಗುಹೇಶ್ವರ ಲಿಂಗಕ್ಕೂ ಮತ್ತು ತನಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಎಂಬ ಭಾವ ತಂತುಗಳನ್ನು ಮೀಟುತ್ತಲೇ ಕರುಳ ಸಂಬಂಧವನ್ನು ಮೀರಿ ಬೆಳೆಯುವ ಮಗುವೊಂದು ಕುವೆಂಪು ಅವರ ವಿಶ್ವಮಾನವ ರೂಪ ತಾಳುವಲ್ಲಿಗೆ ಬಂದು ನಿಲ್ಲುತ್ತದೆ..! ಇದು ನಿಜವಾದ ಸೃಜನಶೀಲ ನಿರ್ದೇಶಕನೊಬ್ಬನ ಕಲಾತ್ಮಕತೆಯ ಜೊತೆಗೆ ಆತನ ಸೈದ್ಧಾಂತಿಕ ಬದ್ಧತೆಯ ಮಾನವೀಯ ನಿಲುವುಗಳನ್ನು ಚಿತ್ರವೊಂದರಲ್ಲಿ ಹೇಗೆ ಸಾಮಾನ್ಯರಿಗೆ ಮನಮುಟ್ಟುವಂತೆ ಕಟ್ಟಬಹುದು ಎಂಬುದಕ್ಕೆ ಈ ಚಿತ್ರ ಖಂಡಿತ ಸಾಕ್ಷಿಯಾಗಿದೆ.! ಒಟ್ಟಿನಲ್ಲಿ ತುಂಬಾ ವರ್ಷಗಳ ನಂತರ ಕನ್ನಡದಲ್ಲಿ ನಾನು ಹೀಗೊಂದು ಅರ್ಥಪೂರ್ಣ ಕಲಾತ್ಮಕ ಚಿತ್ರವನ್ನು ನೋಡಿದ ಖುಷಿಯಂತೂ ನನ್ನ ಪಾಲಾಯಿತು..! ಮೂರು ವರ್ಷಗಳ ಹಿಂದೆಯೇ ಇಂತಹ ಚಿತ್ರವೊಂದು ಬಿಡುಗಡೆಗೊಂಡರು ನಾನು ನೋಡದೆ ಹೋದೆನಲ್ಲ ಎಂಬ ಕಸಿವಿಸಿಯು ಕೂಡ ಮನಸಿನೊಳಗೆ ಮೂಡಿತು..! ಕನ್ನಡದಲ್ಲಿ ದುನಿಯಾ ಸೂರಿಯ ನಿರ್ದೇಶನವೆಂದರೆ ಒಂದಷ್ಟು ಥಿಯೇಟರಿನತ್ತ ಹೆಜ್ಜೆ ಹಾಕುವ ಮನಸು ಮಾಡುತ್ತಿದ್ದ ನಾನು ಇನ್ಮುಂದೆಪ್ರಕಾಶ್ ರಾಜ್ ಮೇಹು  ಅವರ ಮುಂದಿನ ನಿರ್ದೇಶನಗಳ ಸಿನಿಮಾಗಳಿಗಾಗಿಯೂ ಕುತೂಹಲದಿಂದ ಕಾದು ನೋಡಬಹುದು ಎಂದೆನಿಸಿದ್ದು ಮಾತ್ರ ಸುಳ್ಳಲ್ಲ..! ಒಂದೊಳ್ಳೆಯ ಸದಭಿರುಚಿಯನ್ನು ನೋಡಲು ಕಾರಣವಾದ ಪ್ರಕಾಶ್ ರಾಜ್ ಮೇಹು ಅವರಿಗೆ ಈ ಮೂಲಕ ನನ್ನ ಪ್ರೀತಿಪೂರ್ವಕ ಧನ್ಯವಾದಗಳು..! ಅವರಿಂದ ಮತ್ತಷ್ಟು ಒಳ್ಳೆಯ ಕಲಾತ್ಮಕತೆಯ ಚಿತ್ರದ ಜೊತೆ‌ ಜೊತೆಗೆ ಕನ್ನಡದ ನೆಲಕ್ಕೆ ಒಗ್ಗುವಂತೆ ಹದವಾಗಿ ಬೆರೆತ ಕಮರ್ಷಿಯಲ್ ಹಿಟ್ ಸಿನಿಮಾಗಳ ಕತಾ ಪ್ರಯೋಗಗಳನ್ನು ಕೂಡ ಅವರು ಯಶಸ್ವಿಯಾಗಿ ಮಾಡುವಂತಾಗಲೆಂದು ಪ್ರೀತಿಯಿಂದ ಹಾರೈಸುವೆ ಪ್ರಶಾಂತ್‌ ಬೆಳತೂರು

“ಒಂದು ಸದಭಿರುಚಿಯ ಚಿತ್ರ – ಡಿ.ಎನ್.ಎ.” ಪ್ರಶಾಂತ್‌ ಬೆಳತೂರು Read Post »

You cannot copy content of this page

Scroll to Top