ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ

ಸಂಕ್ರಾಂತಿ ಸಂಗಾತಿ ನಾಗರತ್ನ ಹೆಚ್‌ ಗಂಗಾವತಿ “ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ಸಂಕ್ರಾಂತಿ ಹಬ್ಬದ ಪ್ರತೀಕವಾಗಿದ್ದು  .ಇದು ರೈತನ ಸುಗ್ಗಿ ಹಬ್ಬವಾಗಿದೆ ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಮತ್ತು ಕುಟುಂಬದ ನಡುವೆ ಬಾಂಧವ್ಯ ಬೆಸುವ ಹಬ್ಬ ವಾಗಿದೆ  . ಎಲ್ಲಾ ರಾಜ್ಯಗಳಲ್ಲಿ ಒಂದೊಂದು ಬಗೆಯ ಹೆಸರಿನಿಂದ ಕರೆಯಲಾಗುತ್ತದೆ ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಮತ್ತು ಅಸ್ಸಾಂನಲ್ಲಿ ,ಮಘಾ ಎಂದು ಆಚರಿಸಲಾಗುತ್ತದೆ. ಹೊಸ ಬೆಳೆ ಬಂದ ಸಮಯದಲ್ಲಿ ಆಚರಿಸುವ ಹಬ್ಬ ಇದು ರೈತರ ತಮ್ಮ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸಿ ಅಲಂಕರಿಸುತ್ತಾರೆ ಮತ್ತು ಕೆಲವೆಡೆ ಎತ್ತುಗಳನ್ನು ಸಿಂಗರಿಸಿ ಓಟದ ಸ್ಪರ್ಧೆಯನ್ನು ಕೂಡ ಮಾಡಲಾಗುತ್ತದೆ.ಸೂರ್ಯದೇವ ,ಬ್ರಹ್ಮ ವಿಷ್ಣು, ಮಹೇಶ್ವರ ಗಣೇಶ ಮತ್ತು ಆದಿಶಕ್ತಿಯನ್ನು ಕೂಡ ಈ ಹಬ್ಬದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಹಾಗೂ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಸಲಾಗುತ್ತದೆ. ಸಂಕ್ರಾಂತಿ ಕೇವಲ ಧಾರ್ಮಿಕ ಹಬ್ಬವಲ್ಲ ಇದು ಸಂಸ್ಕೃತಿ ಮತ್ತು ಕೃಷಿ ಮತ್ತು ಕುಟುಂಬದ ನಡುವಿನ ಭಾಂಧವ್ಯ ಬೆಳೆಸುವ ಒಂದು ಸಂಭ್ರಮದ ಹಬ್ಬವಾಗಿದೆ . ಹಾಗೂ ವಿಶೇಷ ಸ್ಥಳದಲ್ಲಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವ ವಿದ್ಯಮಾನಗಳು ಕೂಡ ನಾವು ಕಾಣಬಹುದು. ಸಾಮಾನ್ಯವಾಗಿ ಈ ದಿನ ಸೂರ್ಯನ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಚಲಿಸುತ್ತಾನೆ ಎಂದು ನಂಬಲಾಗುತ್ತದೆ ಉತ್ತರಾಯಣಕ್ಕೆ ಎಂದರೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುವ ಪವಿತ್ರ ಕಾಲ ಎಂದು ಕೂಡ ಕರೆಯಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಈ ದಿನದಂದು ಸ್ನಾನ ಮಾಡೋದು ಮತ್ತು ದಾನ ಮಾಡುವುದು ಮುಂತಾದ ಆಚರಣೆಯನ್ನು ಮಾಡುವುದರಿಂದ ಶುಭ ಫಲಿತಾಂಶ ದೊರೆಯುತ್ತವೆ ಎಂದು ನಂಬಿಕೆ ಅಷ್ಟೇ ಅಲ್ಲದೆ ಸಂತೋಷ ಸಮೃದ್ಧಿ ತುಂಬಿದ ಬದುಕು ಸಿಗುತ್ತದೆ. ಈ ದಿನ ಗಂಗಾ ಸ್ನಾನ ಮಾಡೋದು ಪವಿತ್ರ ಎಂದು ನಂಬಲಾಗಿದೆ ಬೆಳಿಗ್ಗೆ ಬೇಗ ಎನ್ನು ಸ್ನಾನ ಮುಗಿಸಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಒಳ್ಳೆಯ ಶುಭ ಫಲವನ್ನು ಕೂಡ ಪಡೆಯಬಹುದು ಎಂಬ ನಂಬಿಕೆ ಇದೆ. ಸಂಕ್ರಾಂತಿಯಲ್ಲಿ ಎಳ್ಳನ್ನು ಅದೃಷ್ಟ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಉದಾಹರಣೆಗೆ:  ನಿನ್ನ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು ಪೂಜ್ಯರಿಗೆ  ಎಳ್ಳು ದಾನ ಮಾಡುವುದು ಶಿವಮಂದಿರಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ ಎಂದು ಹಿರಿಯರ ಸಂಪ್ರದಾಯ. ನಾಗರತ್ನ ಹೆಚ್ ಗಂಗಾವತಿ.

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ Read Post »

ಇತರೆ, ಜೀವನ

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ

ವಿಚಾರ ಸಂಗಾತಿ ವನಜ ಮಹಾಲಿಂಗಯ್ಯ “ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?” ಹಿಂದಿನ ಕಾಲದಲ್ಲಿ ಈ ಜ್ಯೋತಿಷ್ಯಕ್ಕೆ  ಈಗ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೊಡತ್ತಿರಲಿಲ್ಲ. ಯಾಕೆಂದರೆ ಕಷ್ಟಪಟ್ಟು ದುಡಿಯೋದು  ಹೊಟ್ಟೆತುಂಬ ತಿನ್ನೋದು  ಕಣ್ತುಂಬ ನಿದ್ದೆ ಮಾಡೋದು ಅಷ್ಷೆ.   ಕಲ್ಲನ್ನು ಜೋಡಿಸಿ ಮಣ್ಣು ಕಲಸಿ ಮೆತ್ತಿ ಮನೆ ಕಟ್ಟಿ, ಅದಕ್ಕೆ ಸುಣ್ಣ, ಕೆಂಪುಬಣ್ಣ (ಉರುಮಂಜು) ಬಳಿದು ಕೊಂಡು ಬಂಗಾರದ ಬದುಕು ಬದುಕಿದವರು ನಮ್ಮ ಹಿರಿಯರು. ಹಬ್ಬ, ಮದುವೆ ಗಳಿಗೆ ಸಂಬಂಧಿ ಕರೆಲ್ಲ ಕೂಡಿಕೊಂಡು ಅವರ ಸಂಭ್ರಮ ಹೇಳತೀರದು. ಆಗ ಮನಸ್ಸನ್ನು ಹಾಳುಮಾಡುವ ಈ ಟಿ ವಿ , ಮೊಬೈಲು,   ಅಲ್ಲದೆ ಬೈಕು ಕಾರು ಇವ್ಯಾವು ಇರಲಿಲ್ಲ. ಅಂದು ಎತ್ತಿನ ಗಾಡಿ, ಕುದುರೆ ಸಾರೋಟ, ಸೈಕಲ್,ಇವ್ಯಾವು ಇಲ್ಲ ಅಂದ್ರೆ ಕಾಲ್ನಡಿಗೆ ಅಷ್ಟೇ. ಆದರೂ ಅಂದಿನಜನರೆಲ್ಲ ನೆಮ್ಮದಿಯಿಂದ  ಸಮಾಧಾನದಿಂದ ಪ್ರೀತಿ ವಿಶ್ವಾಸ ನಂಬಿಕೆಯಿಂದ ಹೊಂದಾಣಿಕಯಿಂದ ಜೀವಿಸುತ್ತಿದ್ದರು. ಎಲ್ಲವೂ ತನ್ನಷ್ಟಕ್ಕೆ ತಾನು ನಡೆಯುತ್ತಾ ಹೋಗುತ್ತಿತ್ತು. ಅಂದರೆ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತಾ ಜನ ಸೌಖ್ಯವಾಗಿ, ಖಷಿಯಿಂದ , ಹೊಂದಾಣಿಕೆಯಿಂದಬದುಕುತ್ತಿದ್ದರು. ಆಡಂಬರವಿಲ್ಲ, ಅತಿಯಾಸೆ ಇಲ್ಲ, ಅಸೂಯೆಯಿಲ್ಲ .  ಕಂಪ್ಲೇಟಿಲ್ಲ , ಕೋರ್ಟು ಕಚೇರಿಗಳಿಲ್ಲ. ಆದರೆ ಈಗ ವಿದ್ಯಾವಂತರು ಜಾಸ್ತಿಯಾಗಿ , ಅವರವರೇ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಂದರೆ ಬದುಕಿನ ಅರ್ಥವೇ ಬದಲಾಗಿದೆ. ಎಲ್ಲವೂ ಕ್ಷಣಿಕ ಎನ್ನಿಸಿದೆ.ಕಾರಣ ಅವಸರದ ಅಪಾಯದ ಪಯಣ. ತಂತ್ರಜಾನದ ಮುಂದೆ ಯಾಂತ್ರಿಕ ಜೀವನ.10 ರಿಂದ 1 ಲಕ್ಷದವರೆಗಿನ  ಅಂಗೈಯಲ್ಲಿರುವ  ಮೊಬೈಲ್ ಎಲ್ಲವನ್ನು  ಎಲ್ಲರನ್ನೂ ಬದಲಾಯಿಸಿದೆ.  ಟಿ ವಿ ಧಾರಾವಾಹಿಗಳ ಅಬ್ಬರ. ಸಂಬಂಧಗಳ ದೂರ ತೀರ,  ಎಲ್ಲವೂ ಆನ್ಲೈನ್, ಅಮ್ಮನ ಕೈರುಚಿಯಿಂದ ವಂಚಿತರಾಗಿ,  ದುಡ್ಡೇ ದೊಡ್ಡಪ್ಪ ಅದಿಲ್ಲ ಅಂದರೆ ಬದುಕೇ ಇಲ್ಲಪ್ಪ ಅನ್ನುವ ಹಾಗೆ, ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೆ ದುಡಿಯಲೆಂದು ಹೋದ ಮಕ್ಕಳು ತಂದೆ ತಾಯಿಯ ಸುಖಕ್ಕಲ್ಲ  ಅವರ ಶವಕ್ಕು ಬರದಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದರೆ ಎಲ್ಲಿಗೋಯಿತು? ನಮ್ಮ  ಜೀವನ?  ಅದರ ನಡು ವೆ ಜ್ಯೋತಿಷ್ಯ, ವಾಸ್ತು ಅಂತ ಜನ ಮುಗಿಬಿದ್ದಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳು ಅವರ ಬದುಕೆ ಅದ್ವಾನಕ್ಕಿಟ್ಟಿರುತ್ತದೆ , ಅದರೆ ಅವರು ಎಲ್ಲರ ಬದುಕಿನ ಬಗ್ಗೆ ಹೇಳಲು ಕೂತಿರುತ್ತಾರೆ. ಅವರ ಹಿನ್ನೆಲೆ ಹೇಗಿದೆ,  ಅವರಿಗೆ ಅವರ ಭವಿಷ್ಯದ ಬಗ್ಗೆಯೇ ಅವರಿಗೆ ಗೊತ್ತಿಲ್ಲ, ಇತ್ತೀಚೆಗೆ ನಡೆದ ಜ್ಯೊತಿಷಿಯ ಕೊಲೆಯನಂತರವಾದರು ,ಟಿ ವಿ ಮಾಧ್ಯಮಗಳು ಅಂತಹ  ಕಾರ್ಯಕ್ರಮಳಿಗೆ   ಹಾಗೂ ಟಿವಿಗಳಲ್ಲಿ ಬರುವ ಕೆಲವು ಜಾಹೀರಾತುಗಳು ನಿಜಕ್ಕೂ ಮನೆ ಮಂದಿಯನ್ನು ಮುಜುಗರ ಪಡಿಸುತ್ತಿವೆ. ಅದೂ ಅಲ್ಲದೆ ಮಹಿಳೆರ ಒಳ ಉಡುಪುಗಳ ಜಾಹೀರಾತು ಗಳು ಹಾಗೂ ಪ್ಯಾಡ್ ಮತ್ತು IVF  ಜಾಹೀರಾತು ಗಳು ನಿಜಕ್ಕೂ ಬೇಜಾರು ತರುತ್ತವೆ. ಹಾಗೆಯೇ ಕೆಲವು ರಿಯಾಲಿಟಿ ಷೋಗಳು  ಡಬಲ್ ಮೀನಿಂಗ್ ಬಳಸುವುದು ಹಾಗೂ ಕೆಟ್ಟ ಕೆಟ್ಟ ದೃಶ್ಯ ಗಳನ್ನು ವೈಭವೀಕರಿಸಿ ತೋರಿಸುವುದು ನಿಜಕ್ಕೂ ಅಸಹ್ಯವಾಗುತ್ತಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಿತ್ತು ಅಲ್ಲವೇ  ? ಕಡಿವಾಣ ಹಾಕುವವರು ಯಾರು? ವನಜ ಮಹಾಲಿಂಗಯ್ಯ                          

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ.

ಪ್ರವಾಸಿ ಸಂಗಾತಿ ಗೊರೂರು ಅನಂತ ರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ” ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆಂದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ರ್ರಾಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ  ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟ್ರಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತು ಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪ ಕಲಾ ಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭ ಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊಂಡoತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪ ಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾಮಂಟಪದoತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡಂತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯoತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯು ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆಂದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿಂದ ಕೂಡಿದ ಸೂಕ್ಷ್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿ ಕದಂಬರೇಶ್ವರ, ಆದಿ ಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟ್ಯಾಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ. Read Post »

ಇತರೆ

“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ವೀಣಾ ಹೇಮಂತ್‌ ಗೌಡ ಪಾಟೀಲ್

ಸಂಕ್ರಾಂತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ಭಾರತ ದೇಶ ಹಲವು ಭಾಷೆಗಳ ಹಲವು ಜಾತಿಗಳ ನೂರಾರು ಸಂಸ್ಕೃತಿಗಳ ನೆಲೆವೀಡು. ಒಂದು ಮಾಹಿತಿಯ ಪ್ರಕಾರ ಪ್ರತಿ ೪೦ ಕಿಲೋಮೀಟರಿಗೆ ಒಮ್ಮೆ ಈ ದೇಶದ ಜನರು ಮಾತನಾಡುವ ಭಾಷೆ, ಸಂಸ್ಕೃತಿ, ನೆಲ,ಜಲ, ರೀತಿ ನೀತಿಗಳು ಬದಲಾಗುತ್ತದೆ. ಭಾವನೆಗಳು, ಬಣ್ಣಗಳು, ಭಾಷೆಗಳು, ಜಾತಿ ಧರ್ಮಗಳು ಬದಲಾದರೂ ಬಹುತೇಕ ಎಲ್ಲ ಸಂಪ್ರದಾಯಗಳ ಹೂರಣವು ಒಂದೇ ಅದು ಭಾವೈಕ್ಯತೆ. ಇಲ್ಲಿ ಹಿಂದೂ ದೇವರನ್ನು ಪೂಜಿಸುವ, ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮುಸಲ್ಮಾನರಿದ್ದಾರೆ. ದರ್ಗಗಳಿಗೆ ಹೋಗುವ, ಸಕ್ಕರೆ ಓದಿಸುವ, ಮೊಹರಂ ಹಬ್ಬದ ಕುಣಿತಗಳಲ್ಲಿ ಮಕ್ಕಳನ್ನು ತೊಡಗಿಸುವ, ಫಕೀರರನ್ನಾಗಿಸುವ ಹಿಂದುಗಳಿದ್ದಾರೆ. ನಾವು ದೇವಸ್ಥಾನಗಳಿಗೆ ಹೋಗುವಷ್ಟೇ ಸಲೀಸಾಗಿ ದರ್ಗಗಳಿಗೂ ಹೋಗುತ್ತೇವೆ ಚರ್ಚುಗಳಿಗೂ ಹೋಗುತ್ತೇವೆ. ಇದು ಭವ್ಯ ಭಾರತದ ಪರಂಪರೆ ಸಾವಿರಾರು ವರ್ಷಗಳಿಂದಲೂ ಇದು ನಡೆದು ಬಂದಿದೆ.ಭಾರತದಲ್ಲಿ ಅಮಾವಾಸ್ಯೆಗೊಂದು ಹುಣ್ಣಿಮೆ ಗೊಂದು ಹಬ್ಬಗಳು ಬರುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ, ನೆಲದ ಪ್ರತೀಕ. ಯುಗಾದಿ ನಮ್ಮ ಹೊಸ ವರ್ಷವಾದರೆ ಶಿವರಾತ್ರಿ ನಮ್ಮ ವರ್ಷದ ಕೊನೆಯ ಹಬ್ಬ. ಎಳ್ಳ ಅಮವಾಸೆ, ಶೀಗಿ ಹುಣ್ಣಿಮೆ, ಸಂಕ್ರಾಂತಿಗಳು ನಮ್ಮ ರೈತರ ಮುಖ್ಯ ಹಬ್ಬಗಳು. ಅದರಲ್ಲೂ ಸಂಕ್ರಾಂತಿ ಹಬ್ಬ ರೈತ ತಾನು ಬೆಳೆದ ಬೆಳೆಯನ್ನು ಕೊಯ್ದು ಒಕ್ಕಲು ಮಾಡುವ, ರಾಶಿ ಮಾಡುವ ಹಬ್ಬ.ಹಿಂದೂ ಪಂಚಾಂಗದ ಪ್ರಕಾರ ಜೂನ್ 22 ರಂದು ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣದ ಕಡೆಗೆ ಪಥವನ್ನು ಬದಲಿಸಿದರೆ ಜನವರಿ 14ರಂದು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥವನ್ನು ಬದಲಾಯಿಸುತ್ತಾನೆ. ಅದು ಮಕರ ರಾಶಿಯ ದಿನ. ಈ ಜನವರಿ ತಿಂಗಳಲ್ಲಿ 14 ಇಲ್ಲವೇ 15ನೇ ತಾರೀಕಿನಂದು ಬರುವ ಈ ದಿನವನ್ನು ಸಂಕ್ರಾಂತಿ, ಸಂಕ್ರಮಣ, ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ. ಮಕರ ಸಂಕ್ರಮಣದ ದಿನದಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ.  ಸಂಜೆ ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಜ್ಯೋತಿ ದರ್ಶನ ಪಡೆಯುವುದು ವಾಡಿಕೆ.  ಈ ದಿನದಂದು ಬೆಳಿಗ್ಗೆ ಬೇಗನೆ ಏಳುವ ಮನೆಯ ಕಿರಿಕಿರಿಯ ಸದಸ್ಯರೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ  ಸಾಬೂನಿನ ಬದಲು ಎಳ್ಳು ಪುಡಿಯನ್ನು ಹಚ್ಚಿ ಸ್ನಾನ ಮಾಡುತ್ತಾರೆ. ವೈಜ್ಞಾನಿಕವಾಗಿ ಹೇಮಂತ ಋತುವಿನ ಕುಳಿರ್ಗಾಳಿಗೆ ಮೈಯಲ್ಲಿನ ಎಣ್ಣೆಯ ಅಂಶ ಮಾಯವಾಗಿ ಚರ್ಮ ವಿಪರೀತ ಶುಷ್ಕವಾಗಿರುತ್ತದೆ. ಹೀಗೆ ಶುಷ್ಕವಾದ ಚರ್ಮಕ್ಕೆ ಕಾಲಕಾಲಕ್ಕೆ ಹಬ್ಬದ ನೆಪದಲ್ಲಿ ಎಳ್ಳಿನ ಸೇವನೆ, ಎಣ್ಣೆಯ ಲೇಪನ ಮಾಡುವ ಮೂಲಕ ಚರ್ಮದ ಮೃದುತ್ವಕ್ಕೆ ಕಾರಣವಾಗುತ್ತವೆ  ನಮ್ಮ ಸಂಪ್ರದಾಯಗಳು. ಆಹಾರದಲ್ಲಿಯೂ ಅಷ್ಟೇ ಹುರಿದ ಎಳ್ಳು ಮತ್ತು ಹುರಿದ ಕಡಲೆ ಬೀಜ ಇಂದಿನ ಪ್ರಮುಖ ಆಹಾರವಾಗಿ ಬಳಸಲ್ಪಡುತ್ತದೆ.ಎಳ್ಳಮಾವಾಸೆಯಿಂದ ಹಿಡಿದು ಸಂಕ್ರಮಣದವರೆಗೆ ಒಂದಲ್ಲ ಒಂದು ಕಾರಣದಿಂದ ಎಳ್ಳು ಮತ್ತು ಶೇಂಗಾ (ನೆಲಗಡಲೆ) ಬಳಸುತ್ತ ದೇಹದಲ್ಲಿ ಜಿಡ್ಡಿನ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಹಬ್ಬಗಳ ಹೆಸರಿನಲ್ಲಿ ಕಡ್ಡಾಯವಾಗಿ ನಾವು ಈ ಸಂಪ್ರದಾಯವನ್ನು ಪಾಲಿಸುತ್ತೇವೆ. ಉತ್ತರ ಭಾರತದಲ್ಲಿ ನದಿಗಳು ಮತ್ತು ಸಮುದ್ರಗಳಲ್ಲಿ ಸ್ನಾನ, ಸೂರ್ಯದೇವನಿಗೆ ಪೂಜೆ, ಗಾಳಿಪಟಗಳನ್ನು ಹಾರಿಸುವ ಮೂಲಕ ಈ ಹಬ್ಬವನ್ನು ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಸುಗ್ಗಿಯಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕಬ್ಬು, ಜೋಳದ ದಂಟುಗಳನ್ನು ತಲೆಬಾಗಿಲಿಗೆ ಕಟ್ಟಿ ಶೃಂಗರಿಸಿ ದನಗಳಿಗೆ ಸ್ನಾನ ಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಮನೆ ಮಂದಿಯೆಲ್ಲ ಎಳ್ಳು ಹಚ್ಚಿ ಅಭ್ಯಂಗಸ್ನಾನ ಮಾಡುತ್ತಾರೆ. ಮನೆಯ ದೇವರಿಗೆ ಮತ್ತು ಸೂರ್ಯದೇವನಿಗೆ ಪೂಜಿಸಿ ಹೊಸ ಅಕ್ಕಿಯಿಂದ ತಯಾರಿಸಿದ ಪೊಂಗಲ್, ಅಕ್ಕಿ ಪಾಯಸ ಮುಂತಾದ ವಿಶೇಷ ಅಡುಗೆಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ವಿಧ ವಿಧ ತರಕಾರಿಗಳ ಅಡುಗೆ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಸಿಹಿ ಪೊಂಗಲ್, ಖಾರದ ಪೊಂಗಲ್, ಚಿತ್ರಾನ್ನ ಮೊಸರನ್ನ ಜೊತೆಗೆ ಹಬ್ಬದ ವೈಶಿಷ್ಟ್ಯವೆಂಬಂತೆ (ಕೆಲವೆಡೆ ಎಲ್ಲಾ ರೀತಿಯ ಸೊಪ್ಪುಗಳನ್ನು ಹಾಕಿ) ಗೆಣಸು, ಗಜ್ಜರಿ, ಬದನೆಕಾಯಿ, ಚಳ್ಳವರೆ ಮತ್ತು ಕುಂಬಳಕಾಯಿಯನ್ನು ಚೆನ್ನಾಗಿ ಕುದಿಸಿ ಅದನ್ನು ನುಣ್ಣಗೆ ಅರೆದು ಹಸಿಮೆಣಸಿನಕಾಯಿ  ಹಾಕಿ ಉಪ್ಪು ಬೆಲ್ಲ ಮತ್ತು ಎಳ್ಳಿನ ಪುಡಿಯನ್ನು ಹಾಕಿ ಕುದಿಸಿದ ಬರ್ಥವನ್ನು ತಯಾರು ಮಾಡುತ್ತಾರೆ  ಇದು ಆರೋಗ್ಯಕ್ಕೆ ಪುಷ್ಟಿದಾಯಕವೂ ಹಿತಕರವೂ ಹೌದು. ಇದನ್ನು  ಚಪಾತಿ, ತೆಳ್ಳಗೆ ಎಳ್ಳು ಮೆಣಸಿನ ಬೀಜ ಹಾಕಿ ಬಡಿದು ತಯಾರಿಸಿದ ಜೋಳದ ಮತ್ತು ಸಜ್ಜೆಯ ರೊಟ್ಟಿಗಳ ಜೊತೆಗೆ ತಿನ್ನಬಹುದು. ಇನ್ನು ಕೆಲವರು ಮನೆಯಲ್ಲಿ ಅಡುಗೆ ಮಾಡಿಕೊಂಡು ಹತ್ತಿರದ ನದಿ ತೀರಗಳಿಗೆ ಹೋಗಿ ಅಲ್ಲಿಯೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತೆಯನ್ನು, ಸೂರ್ಯ ದೇವರನ್ನು ಪೂಜಿಸಿ, ತಾವು ಮನೆಯಲ್ಲಿ ತಯಾರಿಸಿ ತಂದ ನೈವೇದ್ಯವನ್ನು ಅರ್ಪಿಸಿ ಬಂದು ಬಾಂಧವರೊಂದಿಗೆ ನದಿ ತೀರದಲ್ಲಿಯೇ ಊಟ ಮಾಡಿ ಸಂತಸ ಪಡುತ್ತಾರೆ. ಪುಣ್ಯಕ್ಷೇತ್ರ ದರ್ಶನದ ಜೊತೆ ಒಂದು ಸಂತಸದ ವನವಿಹಾರವು ನಡೆದು ಹೋಗುತ್ತದೆ. ನಂತರ ಸಾಯಂಕಾಲದ ಸಮಯದಲ್ಲಿ ಹುರಿದ ಎಳ್ಳು, ಹುರಿದ ಕಡಲೆ ಬೀಜ, ಕೊಬ್ಬರಿ, ಬೆಲ್ಲದ ಅತ್ಯಂತ ಚಿಕ್ಕ ತುಂಡುಗಳು ಇಲ್ಲವೇ ಸಕ್ಕರೆಯ ಪುಡಿ, ಏಲಕ್ಕಿ ಪುಡಿ ಹಾಗೂ ಬಣ್ಣ ಬಣ್ಣದ ಕುಸುರೆಳ್ಳು (ಎಳ್ಳು ಸಕ್ಕರೆಯ ಪಾಕದಿಂದ ತಯಾರಿಸಿದ ಮಿಶ್ರಣ) ಸೇರಿಸಿದ ಮಿಶ್ರಣವನ್ನು ಈಗಾಗಲೇ ದೇವರಿಗೆ ನೈವೇದ್ಯ ಮಾಡಿರುವುದರಿಂದ ಸಂಜೆ ಮನೆಮನೆಗೂ ತೆರಳಿ ಒಬ್ಬರಿಗೊಬ್ಬರು ಪರಸ್ಪರ ಕೊಟ್ಟು ಕೊಂಡು ಎಳ್ಳು ಬೆಲ್ಲ ತಗೊಂಡು ಒಳ್ಳೆದನ್ನೇ ಮಾತಾಡೋಣ ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿಯೂ ಕೂಡ ಕಹಿಯಾದ ಎಳ್ಳು ಮತ್ತು ಸಿಹಿಯಾದ ಬೆಲ್ಲ ನಮ್ಮ ಬದುಕಿನ ನೋವು ನಲಿವಿನ ದೃಷ್ಟಾಂತಗಳು. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಎಷ್ಟೇ ಸುಖ ಬಂದರೂ ತಗ್ಗದೆ ಎಳ್ಳು ಬೆಲ್ಲದ ಮಿಶ್ರಣದಂತೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಈ ಹಬ್ಬ ನಮಗೆ ನೀಡುತ್ತದೆ. ಮೈಸೂರು ಭಾಗದಲ್ಲಿ ಕಬ್ಬಿನ ತುಂಡುಗಳನ್ನು, ಬೆಲ್ಲದ ಅಚ್ಚು ಸಕ್ಕರೆಯ ಅಚ್ಚು ಕುಸುರೆಳ್ಳು ಕೊಬ್ಬರಿಯ ಬಾಗಿನವನ್ನು ಚಿಕ್ಕ ಮಕ್ಕಳು ಮನೆ ಮನೆಗೆ ಹೋಗಿ ಕೊಟ್ಟು ಬರುತ್ತಾರೆ. ಇನ್ನು ಕೆಲವು ಕಡೆ ಚಿಕ್ಕ ಮಕ್ಕಳನ್ನು ಮನೆಯ ಮುಖ್ಯ ಹೊಸ್ತಿಲಿನ ಮೇಲೆ ಕೂಡಿಸಿ ಚಿನ್ನದ ಸರ ಉಂಗುರ ಹವಳ ಮುತ್ತು ಹುಳಿ ಕಡಲೆಕಾಯಿ, ಮಂಡಕ್ಕಿ ಬೆಂಡು ಬೆತ್ತಾಸಗಳ ಮತ್ತಿತರ ವಿವಿಧ ಬಗೆಯ ಹಣ್ಣುಗಳನ್ನು ಒಂದು ಸೇರಿನಲ್ಲಿ ತುಂಬಿ ಮಗುವಿನ ತಲೆಯ ಮೇಲೆ ಸುರಿದು ಆರತಿ ಮಾಡುತ್ತಾರೆ. ಇದನ್ನು ಹಣ್ಣೆರೆಯುವುದು ಎಂದು ಕರೆಯುತ್ತಾರೆ. ಇದು ಮಕ್ಕಳ ವಿಶೇಷ ಆರೋಗ್ಯ, ಆಯುಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಮಾಡುವ ಹಬ್ಬ.ಇಂಗ್ಲಿಷ್ ಕ್ಯಾಲೆಂಡರ್ ತಿಂಗಳ ಮೊದಲ ಹಬ್ಬಸಂಕ್ರಾಂತಿಯ ಶುಭಾಶಯಗಳು…..ಬನ್ನಿ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೆ ಮಾತನಾಡೋಣ. ವೀಣಾ ಹೇಮಂತ್ ಗೌಡ ಪಾಟೀಲ್ 

“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ.

ಕಾವ್ಯ ಸಂಗಾತಿ ಜಯಲಕ್ಷ್ಮಿ ಕೆ. “ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!” ”  ಕ್ಯೂಗೆ ನುಗ್ಗಿ ಬಂದು ಸೇರಿಕೊಳ್ಳುತ್ತಾರಲ್ಲಯ್ಯ..? ನೀನು ನೋಡಿಕೊಂಡು ಸುಮ್ಮನಿದ್ದರೆ ಹೇಗೆ? “” ಅಲ್ಲ ಸರ್… “” ಏನು ಅಲ್ಲ ? ಯೂನಿಫಾರಂ ಬ್ಯಾಡ್ಜ್ ಎಲ್ಲಾ ಹಾಕ್ಕೊಂಡು, ಕೋಲು ಹಿಡ್ಕೊಂಡು, ಏನ್ ಕತ್ತೆ ಕಾಯೋದಕ್ಕಾ ನಿಂತಿದ್ದೀ? ಕ್ಯೂ ಮೈನ್ಟೈನ್ ಮಾಡಕ್ಕಾಗಲ್ವಾ ?  “” ಹೌದು ನಿಮ್ಮಂಥ ಕತ್ತೆ ಕಾಯೋಕೆ ನಾನು ನಿಂತಿರೋದು ಏನೀಗ? “” ದೇವಸ್ಥಾನದಲ್ಲಿ ಜನರನ್ನ ಕಾಯೋದಕ್ಕೆ ನಿಂತವನಿಗೂ ಏನ್ ಪೊಗರು? “” ಸರ್ .. ಪೊಗರು  – ಗಿಗರು ಅಂತೆಲ್ಲ ಮಾತಾಡ್ಬೇಡಿ. ವರ್ಷಕ್ಕೆ ಒಂದೆರಡು ಸಲ ಬಂದು ಇಲ್ಲಿ ಕ್ಯೂ ನಿಲ್ಲುವ ನಿಮಗೇ ಇಷ್ಟು ಕಷ್ಟ ಆಗುತ್ತೆ… ಇನ್ನು ನಾವು…. ವರ್ಷಪೂರ್ತಿ ಈ ಕೆಲಸ ಮಾಡ್ಬೇಕು,  ನಿಮ್ಮಂಥವರಿಂದ ಉಗುಸ್ಕೊಬೇಕು.. ನಮ್ಮ ಕಷ್ಟ ಎಷ್ಟಿರಬೇಡ?  ಅಷ್ಟಕ್ಕೂ  ಅವ್ರು ನನ್ನ ಪರ್ಮಿಷನ್ ಕೇಳಿ ಕ್ಯೂ ನಿಂದ ಆಚೆ ಹೋಗಿ ತಿರುಗಿ ಬಂದವರು “” ಎಷ್ಟು ಮಾತಾಡ್ತೀಯಾ? ಬಾಯಿ ಮುಚ್ಚು “” ನೀವೇ ಆ ಕೆಲಸ ಮಾಡಿ ನಿಮ್ಮಂಥವರನ್ನು ಪ್ರತಿದಿನ ಸಾಕಷ್ಟು ನೋಡ್ತಾ ಇರ್ತೇನೆ “  ದೇವರ ದರ್ಶನಕ್ಕೆಂದು ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಮತ್ತು ಭಕ್ತಾದಿಗಳನ್ನು ಸಾಲಾಗಿ ದೇವರ ದರ್ಶನಕ್ಕೆ ಕಳುಹಿಸುತ್ತಿದ್ದವನ ನಡುವೆ ನಡೆದ ಮಾತಿನ ಚಕಮಕಿ ಇದು! ನಾಲ್ಕೈದು ಸಾಲುಗಳಲ್ಲಿ ಇದ್ದ ಅಷ್ಟೂ ಭಕ್ತಾದಿಗಳಿಗೆ  ಕಿರಿಕಿರಿ ಉಂಟುಮಾಡಿದ ಪ್ರಸಂಗವದು. ಯಾರ ಸಮಾಧಾನದ ಮಾತುಗಳಿಗೂ ಅವರ ಜಗಳ ಜಗ್ಗಲಿಲ್ಲ. ಕೊನೆಗೆ  ದೇವರ ದರ್ಶನಕ್ಕೆಂದು ಬಂದಿದ್ದ ಆ ವ್ಯಕ್ತಿ ತನ್ನ ಮನೆ ಮಂದಿಯನ್ನು ಎಳೆದುಕೊಂಡು ಬ್ಯಾರಿಕೇಡರ್ ಹತ್ತಿ ಇಳಿದು ದರ್ಶನಕ್ಕೆ ಹೋಗುವ ಕ್ಯೂನಿಂದ ಆಚೆ ಹೋಗಿಯೇ ಬಿಟ್ಟರು. ಒಂದು ರೀತಿಯಲ್ಲಿ ಅವರು ಅಲ್ಲಿಂದ ಹೋಗಿದ್ದೇ ಒಳ್ಳೆಯದಾಯಿತು. ಏಕೆಂದರೆ ಕೋಪದಿಂದ ಕುದಿಯುತ್ತಿದ್ದ ಆ ವ್ಯಕ್ತಿ ದೇವರ ಎದುರು ನಿಂತರೂ ಯಾವ ಮನಸ್ಥಿತಿಯಿಂದ ಪ್ರಾರ್ಥನೆ ಮಾಡಬಹುದು?  ಕೋಪ ಶಮನ ಮಾಡಿಕೊಂಡು ದರ್ಶನ ಪಡೆಯುವುದೇ ಒಳಿತು ಎಂದು ಅತ್ತ ಹೋದರೋ  ಏನೋ!!  ಒಟ್ಟಿನಲ್ಲಿ ಅವರು ಅತ್ತ ಹೋದ ಮೇಲೆ ವಾತಾವರಣ ಶಾಂತವಾಯಿತು.  ಕ್ರಿಸ್ಮಸ್ ರಜೆಯಲ್ಲಿ  ಕರ್ನಾಟಕದ ಒಂದು ಪ್ರಸಿದ್ದ ಧಾರ್ಮಿಕ ಕ್ಷೇತ್ರಕ್ಕ ಹೋಗಿದ್ದಾಗ   ದೇವರ ದರ್ಶನಕ್ಕೆಂದು ನಿಂತಿದ್ದ ಸಂದರ್ಭದಲ್ಲಿ  ನನ್ನನ್ನೂ ಒಳಗೊಂಡಂತೆ  ಸರದಿಯಲ್ಲಿ ನಿಂತಿದ್ದ  ಭಕ್ತಾದಿಗಳ  ಗಮನ ಸೆಳೆದ ಜಗಳವದು. ದೇವರ ದರ್ಶನಕ್ಕೆಂದು ಯಾವ ಯಾವುದೋ ಊರಿನಿಂದ ಎಷ್ಟೋ ದೂರ ಪಯಣ ಬೆಳೆಸಿ ಹೋಗುತ್ತೇವೆ. ಅಲ್ಲಿ ಚಿಕ್ಕಪುಟ್ಟ ವಿಷಯಕ್ಕೆ ಸಹನೆ  ಸಂಯಮ ಕಳೆದುಕೊಂಡು ರೇಗಾಡಿ ದೇವಾಲಯದ ಸಾತ್ವಿಕ ವಾತಾವರಣವನ್ನು ಹದಗೆಡಿಸುತ್ತೇವೆ. ಅಲ್ಲಿ ಕ್ಯೂನಲ್ಲಿ ನಿಂತಿದ್ದ  ನಾರಿ  ಆಚೆ ಹೋಗಿ ಪುನಹ ಬರುವ ಅವಶ್ಯಕತೆ ಇರಲಿಲ್ಲ. ಅಥವಾ ನಿಂತಿದ್ದ ವ್ಯಕ್ತಿ ಅಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡುವ ಅಗತ್ಯ ಇರಲಿಲ್ಲ. ಕೆಲವೊಂದು ದೇವಸ್ಥಾನಗಳಲ್ಲಿ ಒಮ್ಮೆ ಲೈನ್ನಿಂದ ಆಚೆ ಹೋದರೆ ಮತ್ತೆ ಒಳಗೆ ಸೇರಿಸುವುದಿಲ್ಲ ಎಂದೇ ಹೇಳಿಬಿಡುತ್ತಾರೆ.  ಇಂತಹ ಜಗಳಗಳು ಆಗದಿರಲು ಅಂಥ ಕಟ್ಟು ನಿಟ್ಟಿನ  ಕ್ರಮವೇ ಸರಿ ಅನಿಸುತ್ತದೆ. ಇಂಥ ಸಂದರ್ಭಗಳಲ್ಲಿ  ಸರಿ ಯಾವುದು,ತಪ್ಪುಯಾವುದು ಎನ್ನುವ ಯೋಚನೆಗಳಿಗಿಂತಲೂ ಮುಖ್ಯವಾಗುವುದು  ನಾವು ಎಲ್ಲಿ ನಿಂತಿದ್ದೇವೆ? ನಿಂತಿರುವ ಉದ್ದೇಶ ಏನು? ಎಂಬುದು. ನಮ್ಮ ಜೊತೆ ಜೊತೆಯಲ್ಲಿ ಸಾಗುವವರಿಗೆ  ನಮ್ಮಿಂದ ಕಿರಿಕಿರಿ ಆಗಬಾರದು ಎಂಬ ಸಾಮಾನ್ಯ ಜ್ಞಾನ . ಆ ಸಂಯಮ ಇಲ್ಲದೇ ಹೋದರೆ ” ಇಲ್ಲಿಂದಲೇ ಕೈಮುಗಿವೆ ಅಲ್ಲಿಂದಲೇ ಹರಸು” ಎನ್ನುತ್ತಾ ಮನೆಯಲ್ಲೇ ಪ್ರಾರ್ಥನೆ ಮಾಡಬಹುದಲ್ಲವೇ ? ದೇವಸ್ಥಾನ ಎಂದ ಮೇಲೆ ಭಕ್ತರು ಪಾಲಿಸಲೇಬೇಕಾದ ಕೆಲವು ನಿಯಮಗಳಿರುತ್ತವೆ. ಆ ವಾತಾವರಣದ ಧನಾತ್ಮಕ ಅಂಶಗಳನ್ನು ಕಾಯ್ದುಕೊಳ್ಳಬೇಕಾದ ಜವಾಬ್ದಾರಿ ಭಕ್ತಾದಿಗಳಿಗಿದೆ. ಚಿತ್ತವನ್ನು ದೇವರತ್ತ ನೆಲೆಗೊಳಿಸಲು ಪ್ರಶಾಂತ ವಾತಾವರಣ ಬೇಕಲ್ಲವೇ? ದೇಗುಲದ ಪಾವಿತ್ರಕ್ಕೆ ಅಡ್ಡಿ ಬರುವಂತಹ  ಅಲ್ಲಿನ ಶಾಂತ ವಾತಾವರಣವನ್ನು ಅಶಾಂತ ಗೊಳಿಸುವ ಯಾವ ಕೆಲಸಗಳನ್ನು ನಾವು ಮಾಡಿದರೂ ನಮಗೆ ದೇವರ ಕೃಪಾಶೀರ್ವಾದ ದೊರೆಯದು. ” ಇಲ್ಲಿ ಭಾವಚಿತ್ರಗಳನ್ನು ತೆಗೆಯಕೂಡದು ” ಎಂಬ ನಾಮ ಫಲಕವಿದ್ದರೂ  ಕೆಲವರು ಅಲ್ಲಿನ ಮೇಲುಸ್ತುವಾರಿ ಮಾಡುವವರ ಜೊತೆ ಕಿತ್ತಾಟ ನಡೆಸಿ ಅಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ‘ ಮೌನ  ವಹಿಸಿ ‘ ಎಂಬ ಬರಹದ ಬಳಿಯೇ ನಿಂತು ಜೋರಾಗಿ ತಿರುಚಾಡುತ್ತಾರೆ. ” ತೀರ್ಥ ಸ್ವೀಕಾರ ಮಾಡಲು ಸಾಲಿನಲ್ಲಿ ಶಿಸ್ತುಬದ್ಧವಾಗಿ ನಿಲ್ಲುವುದನ್ನು ಬಿಟ್ಟು ಎಲ್ಲರೂ  ಅರ್ಚಕರ ಮುಂದೆ ಒಟ್ರಾಸಿ ಕೈ ಚಾಚುವುದು,  ತಮ್ಮ ಕೈಗೆ ತೀರ್ಥ ಸಿಗುವುದು ಸ್ವಲ್ಪ ವಿಳಂಬ ಆದರೆ ಸಾಕು, ” ಇಲ್ಲಿ ಹಾಕಿ ” ಎಂದು ಜೋರಾಗಿ ಹೇಳುವುದು, ದೇವರ ಪ್ರಸಾದಕ್ಕೆ ಸಾಲಾಗಿ ಬನ್ನಿ”  ಎಂದರೆ  ಅಲ್ಲಿಯೂ ನೂಕುನುಗ್ಗ ಲು.. ದೇವಾಲಯದ ಆವರಣದ ಮೂರ್ತಿಗಳನ್ನು ಮುಟ್ಟಕೂಡದು ಎಂದರೆ  ಆ ಮೂರ್ತಿಗಳಿಗೆಲ್ಲ ಅರಿಶಿನ ಕುಂಕುಮ ಹಚ್ಚುವುದು. ಗಂಧ ಅಂಟಿಸಿ  ಇಡುವುದು.. ದೇವಸ್ಥಾನದ ಮೆಟ್ಟಿಲುಗಳ ಮೇಲೆಲ್ಲಾ ದೀಪ   ಹಚ್ಚಿ ಇಡುವುದು, ದೇವಸ್ಥಾನದ ಸರಳುಗಳಿಗೆ  ದಾರ ಕಟ್ಟಿ ಇಡುವುದು ಇತ್ಯಾದಿ ಅವಿಧೇಯ ವರ್ತನೆಗಳನ್ನು  ಮಾಡುವುದರಿಂದ , ಆಶಿಸ್ತಿನ ನಡವಳಿಕೆಗಳನ್ನು ತೋರುವುದರಿಂದ  ತಾನೇ ಅಲ್ಲಿ ಕೆಲಸ ಕಾರ್ಯನಿರ್ವಹಿಸುವವರು ಕೂಡ ನಮ್ಮ ಮೇಲೆ ರೇಗುವುದು? ಅವರಾದರೂ  ಎಷ್ಟು ಅಂತ ಸಹಿಸಿಯಾರು? ಯಾವ ಸ್ಥಳವೇ ಆಗಲಿ  ಅಲ್ಲಿನ ನೀತಿ ನಿಯಮಗಳನ್ನು  ಪಾಲಿಸುವುದರಲ್ಲಿಯೇ ನಮ್ಮ ವ್ಯಕಿತ್ವದ ಹಿರಿಮೆ ಇದೆ. ಶಿಸ್ತು ಪಾಲನೆ ಮತ್ತು ಸಂಯಮದ ವರ್ತನೆ  ನಮ್ಮದಾದಾಗ   ನಮ್ಮೊಳಗೂ  ಹೊರಗೂ ಶಾಂತಿ ನೆಲೆಸಲು ಸಾಧ್ಯ.ಆ ಪ್ರಬುದ್ಧತೆ ನಮ್ಮಲ್ಲಿರಲಿ. ಜಯಲಕ್ಚ್ಮಿ ಕೆ.

“ಸಾತ್ವಿಕ ವಾತಾವರಣದಲ್ಲಿ ಸದ್ದು ಗದ್ದಲ!!!”ಲೇಖನ ಜಯಲಕ್ಷ್ಮಿ ಕೆ. Read Post »

ಇತರೆ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ

ರಾಷ್ಟ್ರೀಯ ಸಂಗಾತಿ ನಾಗರತ್ನ ಎಚ್ ಗಂಗಾವತಿ “ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” *ಏಳಿ ಎದ್ದೇಳಿ ಎಚ್ಚರಾಗಿ* ಎನ್ನುವ ಸಂದೇಶವನ್ನು ನೀಡಿದಂತಹ ಸ್ವಾಮಿ ವಿವೇಕಾನಂದರು ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳಿ ಎನ್ನುವ ಮಂತ್ರದೊಂದಿಗೆ ವ್ಯಕ್ತಿತ್ವ ಪ್ರಭಾವ ಪೂರ್ವ ಮತ್ತು ಉತ್ತಮ  ಬರಹಗಳ ಮೂಲಕ ಉತ್ತಮ ಸಂದೇಶ ನೀಡಿದರು  ಸ್ವಾಮೀ ವಿವೇಕಾನಂದರು. ತಮ್ಮ ವಿಚಾರಗಳಿಗೆ ಅನುಗುಣವಾಗಿ ಭಾರತೀಯ ಸಮಾಜವನ್ನು ಬದಲಾವಣೆ ಮಾಡಲು ಬಯಸಿದರು ಹಾಗೂ ವೈಜ್ಞಾನಿಕ ಪ್ರಜಾಪ್ರಭುತ್ವ ಕಲ್ಪನೆಯಲ್ಲಿ ಜಾತಿ ಪದ್ಧತಿಯನ್ನು ಮುಕ್ತವಾದ ನವ ಭಾರತ ನಿರ್ಮಾಣದ ಕನಸನ್ನು ಕಂಡಿದ್ದರು. ಸ್ವಾಮಿ ವಿವೇಕಾನಂದರು ಭಾರತೀಯ ದೇಶಭಕ್ತ ಸುಧಾರಕ ಹಾಗೂ ಸಂಘಟಕರು ಮಾತ್ರವಲ್ಲ ರಾಷ್ಟ್ರೀಯ ಪುನರಸ್ಥಾನದ ಶಕ್ತಿಗಳನ್ನು ಹೊಡೆದ ಆಂಗ್ಲ ಆಡಳಿತದ ಹೊಡೆತಕ್ಕೆ ತತ್ತರಿಸಿ ದಾಸ್ಯದಲ್ಲಿ ಮುಳುಗಿದ್ದ ನಮ್ಮ ನಾಡಿನ ರಾಷ್ಟ್ರೀಯ ಪುನರಸ್ಥಾನದ ಹಾದಿ ಯನ್ನು ಸುಗಮಗೊಳಿಸಿದ ಅಗ್ರಗಣ್ಯರು ಎನ್ನಬಹುದು.  ಭಾರತದ ಬಡ ಜನರ ಪರವಾಗಿ ಅಷ್ಟೊಂದು ತೀವ್ರ ಮರುಕರಿಂದ ತಡೆಯಲಾರದ ನೋವಿನಿಂದ ಮಾತಾಡಿ ಅವರ ಪರವಾಗಿ ಹೋರಾಡಿದರು. ಹಾಗೂ ಆಧ್ಯಾತ್ಮಿಕ ವ್ಯಕ್ತಿ ದೇಶ ಕಂಡರಿಯದ ಅಪ್ರತಿಮ ಚಿಂತಕರು ಸ್ವಾಮಿ ವಿವೇಕಾನಂದರು ರಾಷ್ಟ್ರೀಯತೆಯ  ಪ್ರತೀಕವಾದರು. ಬಡವರನ್ನ ಹಿಂಸಿಸಿ ಸುಖ-ಸೌಕರ್ಯಗಳಲ್ಲಿ ತೇಲಾಡುವವರನು ವಿರೋಧಿಸಿದ್ದಾರೆ. ಅಷ್ಟೇ ಅಲ್ಲದೆ ಅಂತವರನ್ನು ದೇಶದ್ರೋಹಿ ಅಥವಾ ವಂಚಕರೆಂದು ಕರೆಯುತ್ತಾರೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಸ್ವಾಮಿ ವಿವೇಕಾನಂದರು ಜನವರಿ 12 1863ನೇ ಜನಿಸಿದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು ನಿರ್ಭಯತೆ ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿಸಿದ್ದಾರೆ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12ರಂದು *ರಾಷ್ಟ್ರೀಯ ಯುವ ದಿನವೆಂದು* ಆಚರಿಸಲಾಗುತ್ತದೆ. ಇವರ ಜನ್ಮನಾಮ ನರೇಂದ್ರನಾಥ ದತ್ತಇವರ ತಾಯಿ ಭುವನೇಶ್ವರಿ ದೇವಿ ತಂದೆ ವಿಶ್ವನಾಥನತ್ತ.ಉತ್ತಮ ವೇದಾಂತತ್ವಗಳನ್ನು ಅನುಸರಿಸಿದಂತ ಬಿಟ್ಟ ವ್ಯಕ್ತಿ ಹಾಗೂ ಇವರ ಗುರುಗಳು ರಾಮಕೃಷ್ಣ ಪರಮಹಂಸರು ಅಷ್ಟೇ ಇಲ್ಲದೆ ಹಲವಾರು ಪ್ರಮುಖ ಕೃತಿಗಳನ್ನು ಕೂಡ ರಚನೆ ಮಾಡಿದ್ದಾರೆ ಅವುಗಳೆಂದರೆ ರಾಜಯೋಗ ಕರ್ಮ ಯೋಗ ಭಕ್ತಿ ಯೋಗ ಮತ್ತು ಜ್ಞಾನ ಯೋಗ ವಿಶೇಷವಾಗಿ ರಚನೆ ಮಾಡಿದ್ದಾರೆ ಅಷ್ಟೇ ಅಲ್ಲದೆ. ನರೇಂದ್ರರು 5 ವರ್ಷಗಳ ಕಾಲ ಭಾರತವನ್ನು ಸಂಚರಿಸಿದರು. ಹಾಗೂ ಭಾರತದ ಪರ್ಯಟನೆಗೆ 1888 ರಲ್ಲಿ  ಹೊರಟರು ಅವರು ಹೋಗುವಾಗ ಅವರ ಜೊತೆಯಲ್ಲಿ ಕಮಂಡಲು ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆಯನ್ನು ಒಯ್ಯುತ್ತಿದ್ದರು. ವಿವೇಕಾನಂದರು ಭಾರತದ ತತ್ವ ಜ್ಞಾನ ಯೋಗ ವೇದಾಂತ ಇವೆಲ್ಲವನ್ನ ಪಾಶ್ಚಿಮಾತ್ಯ ದೇಶಗಳಲ್ಲಿ  ಪ್ರಚಾರ ಮಾಡಿದರು ಹಾಗೂ ತಮ್ಮ ಗುರುಗಳ ಒಳ್ಳೆಯ ಮನೋಭಾವದ ಕಡೆಗೆ ವಾಲಿದರು.  ನಂತರ ಚಿಕಾಗೋ ಪ್ರವಾಸ ಕೈಗೊಂಡರು 1893ರಲ್ಲಿ ಹಾಗೂ ಸಮ್ಮೇಳನದಲ್ಲಿ ಭಾರತೀಯರ ಧಾರ್ಮಿಕತೆಯನ್ನು ಎತ್ತಿ ಹಿಡಿದರು.  ದೇಶದ ಬಡ ಜನರಿಗಾಗಿ ಕೆಲಸ ಮಾಡಲು ಕರೆ ನೀಡಿದರು ಅಷ್ಟೇ ಅಲ್ಲದೆ ಹಿಂದೂ ಧರ್ಮದ ಮೂಲ ತತ್ವಗಳಾದ ವೇದಾಂತ ಮತ್ತು ಯೋಗವನ್ನು ಪಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು. ಹಾಗೂ ಮಾನವರಲ್ಲಿ ದೈವತ್ವವನ್ನು ಕಂಡರು ಮತ್ತು ಆತ್ಮವಿಶ್ವಾಸ ಧೈರ್ಯ, ಶುದ್ಧತೆ, ತಾಳ್ಮೆ ಮತ್ತು ಏಕಾಗ್ರತೆಗಳ ಮೂಲಕ  ಶ್ರೇಷ್ಠತೆಯನ್ನು ಸಾಧಿಸಬಹುದು ಎಂದು ತಿಳಿಸಿದರು. ಅವರ ಮುಖ್ಯ ಸಂದೇಶವೆಂದರೆ ಆತ್ಮವಿಶ್ವಾಸ *ನಿನ್ನನ್ನು ನೀನು ನಂಬು ನೀನು ಅಸಾಧ್ಯವಾದನ್ನು ಸಾಧಿಸಬಲ್ಲೆ*ಹಾಗೂ ಮಾನವನ ಕಲ್ಯಾಣ ಮತ್ತು ಆಧ್ಯಾತ್ಮಿಕತೆಯನ್ನು ಮುಖ್ಯ ಗುರಿಯಾಗಿಟ್ಟುಕೊಂಡು ರಾಮಕೃಷ್ಣ ಮಿಷನ್ 1897ರಲ್ಲಿ ಸ್ಥಾಪಿಸಿದರು.ಹಾಗೂ ವೇದಗಳ ಸಾರವನ್ನು ಆಧುನಿಕ ಸಾರ್ವತ್ರಿಕ ರೂಪದಲ್ಲಿ ಪ್ರಸ್ತುತಪಡಿಸಿದರು.ಎಲ್ಲಾ ಜೀವಗಳಲ್ಲಿ ದೇವರನ್ನು ಕಂಡು ಮಾನವ ಸೇವೆಯ ಮೂಲಕ ದೇವರನ್ನು ಪೂಜಿಸಬೇಕು ಎಂದು ಬೋಧಿಸಿದರು. ಶಿಕ್ಷಣವೆಂದರೆ ಕೇವಲ ಮಾಹಿತಿ ತುಂಬುವುದಲ್ಲ ಅದು ವ್ಯಕ್ತಿತ್ವ ವಿಕಾಸನ ಮತ್ತು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.ಇಂದಿಗೂ ಕೂಡ ಸ್ವಾಮಿ ವಿವೇಕಾನಂದ ಅವರ ಚಿಂತನೆಗಳು ಹಾಗೂ ಆದರ್ಶಗಳು ಜನರಿಗೆ ಉತ್ತಮ ಸ್ಪೂರ್ತಿದಾಯಕ ಸಂದೇಶಗಳಾಗಿವೆ. ನಾಗರತ್ನ ಎಚ್ ಗಂಗಾವತಿ

“ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸಿದ ಸ್ವಾಮಿ ವಿವೇಕಾನಂದರು” ನಾಗರತ್ನ ಎಚ್ ಗಂಗಾವತಿ Read Post »

ಇತರೆ, ಜೀವನ

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳನ್ನುಉಳಿಸಿಕೊಳ್ಳಿ” ಈಗ ಆಗಿರತಕ್ಕಂತ ಪ್ರಕೃತಿ ವಿಪತ್ತನ್ನು ನೋಡಿದರೆ ಈ ಜಗತ್ತು ಬೇಗ ನಾಶವಾಗುವುದರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲ ಆದರೂ ನಮ್ಮ ಜನಗಳಿಗೆ ಬುದ್ಧಿ ಬರುತ್ತಿಲ್ಲ. ಉದಾಹರಣೆ ಯಾರನ್ನು ಯಾರೂ ಮಾತನಾಡಿಸುತ್ತಿಲ್ಲಾ, ಯಾರ ಬಗ್ಗೆಯೂ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ ,ಸಂಬಂಧಗಳಿಗೆ ಬೆಲೆ ಇಲ್ಲ, ನಾವೇ ಮೊದಲು ಮಾತನಾಡಿಸಿದರೆ ಅವರ ಮುಂದೆ ನಾವು ಸಣ್ಣವರಾಗಿ ಬಿಡುತ್ತೇವೆನು ಅನ್ನುವ ಅಹಂ,ಮತ್ತು ಈ ಮೊಬೈಲ್ಗಳ ಹಾವಳಿ ಮೊಬೈಲ್ ಗಳನ್ನು ಹಿಡಿದು ಮನೆಯಲ್ಲಿರುವ ನಾಲ್ಕು ಜನ ನಾಲ್ಕು ಮೂಲೆಯಲ್ಲಿ ಕುಳಿತು ವೀಕ್ಷಣೆ ಮಾಡುತ್ತಿರುತ್ತಾರೆ. ಮನೆಯಲ್ಲಿಯೇ ಇದ್ದರೂ ಮನೆಯ ಒಳಗೆ ಏನಾದರೂ ಗೊತ್ತಾಗದೆ ಇರುವಂತಹ ಪರಿಸ್ಥಿತಿ. ಎಲ್ಲಿಗೆ ಹೋಗ್ತಾ ಇದೆ ನಮ್ಮ ಕುಟುಂಬಗಳು ಏನಾಗ್ತಾ ಇದೆ ಸಮಾಜದಲ್ಲಿ ಇದನ್ನೆಲ್ಲ ನೋಡಿದ್ರೆ ಈಗಾಗಿರುವಂತಹ ಪ್ರಕೃತಿ ವಿಕೋಪ ಜಗತ್ತನ್ನ ನಾಶ ಮಾಡಿ ಹೊಸದಾಗಿ ಜಗತ್ತು ಸೃಷ್ಟಿಯಾಗಬಹುದೇನೋ? ನಿಜಕ್ಕೂ ಮನುಷ್ಯರಲ್ಲಿ ಯಾವ ಭಾವನೆಗಳು ಇಲ್ಲದಂತಾಗುತ್ತದೆ .ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ ಒಬ್ಬರು ಮುಂದೆ ಬಂದರೆ ಅವರನ್ನು ಹೇಗೆ ಹಿಂದಕ್ಕೆ ಎಳೆಯಬೇಕೆಂಬುವ ಯೋಚನೆಯಲ್ಲಿಯೇ ಇರುತ್ತಾರೆ.. ಇಂದು ಸಮಾಜದಲ್ಲಿ ನಡೆಯುತ್ತಿರುವ ಕೊಲೆ ದರೋಡೆ ಅತ್ಯಾಚಾರಗಳು ಇವೆಲ್ಲವೂ ಅಂಗೈಯಲ್ಲಿರುವ ಪ್ರಪಂಚದ ಎಲ್ಲಾ ಆಗುಹೋಗುಗಳಲ್ಲದೆ ಕೆಟ್ಟ ಸಂದೇಶಗಳನ್ನು ಹಾಗೂ ಚಿತ್ರಣಗಳನ್ನು ತೋರಿಸುತ್ತಿರುವ ಮೊಬೈಲ್ ಬಳಕೆಯಿಂದ ಆಗುತ್ತಿದೆ ಎಂದರೇ ತಪ್ಪಾಗಲಾರದು. ಮೊಬೈಲ್ ಬಳಕೆ ಮಕ್ಕಳಿಂದ ದೊಡ್ಡವರವರೆಗೂ ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಜಾಸ್ತಿ ಬಳಕೆಯಾಗುತ್ತಿದೆ. ಕಾರಣ ಈ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ದೇವರೇ ಕಾಪಾಡಬೇಕು. ಜನರು ಇನ್ನು ಮುಂದೆಯಾದರೂ ತಾವು ಬದುಕಿರುವ ತನಕ ತಮ್ಮವರು ಸಂಬಂಧಿಕರು ಎಂದು ವಿಚಾರಿಸುವುದು, ಮಾತನಾಡಿಸುವುದು, ಹೋಗಿ ಬಂದು ಅವರ ಆರೋಗ್ಯವನ್ನು ವಿಚಾರಿಸುವುದು ಮಾಡುವ ಮನಸ್ಸು ಮಾಡಬೇಕಾಗಿದೆ .ಯಾರ ಮನೆಯಲ್ಲಿಯೇ ಆಗಲಿ ಒಂದು ಮದುವೆ ಗೃಹಪ್ರವೇಶ ಇದ್ದರೆ ವಾಟ್ಸಪ್ ನಲ್ಲಿ ಪತ್ರಿಕೆ ಕಳಿಸಿದರೆ ಸಾಕು ಮನೆಯಲ್ಲಿರುವ ಎಲ್ಲರೂ ಕಾರ್ಯಕ್ರಮಕ್ಕೆ ಹೋಗುತ್ತೇವೆ ಆದರೆ ಯಾರ ಮನೆಯಲ್ಲಿ ಕಷ್ಟ ನೋವು ಸಾವು ಬಂತು  ಎಂದರೆ ಏಕೆ ಬರುವುದಿಲ್ಲ ?ಅದರಲ್ಲೂ ಯಾರಾದರೂ ಸತ್ತರೆಂದು ಸುದ್ದಿ ಬಂದರೆ ಸಾಕು ಯಾರಾದರೂ ಒಬ್ಬರು ಹೋಗಿ ಹಾರ ಹಾಕಿ ಬನ್ನಿ ಎಲ್ಲರೂ ಹೋಗುವುದೇಕೆ ಎಂದು ಹೇಳುವ ಜನಕ್ಕೆ ಸತ್ತ ವ್ಯಕ್ತಿಯ ಮುಖ ಮತ್ತೆ ನೋಡಲಾಗುವುದಿಲ್ಲ ಎನ್ನುವ ಸತ್ಯ ಗೊತ್ತಾಗುವುದಿಲ್ಲ. ನಿಜಕ್ಕೂ ಜಮೀನನ್ನು ಕೊಳ್ಳಬಹುದು ಮನೆಯನ್ನು ಕಟ್ಟಿಸಬಹುದು ಆದರೆ ತಂದೆ ತಾಯಿ ರಕ್ತ ಸಂಬಂಧಗಳನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ. ನಿಜಕ್ಕೂ ಇದನ್ನು ಬರೆಯುವಾಗ ಇತ್ತೀಚೆಗೆ ಆಗುತ್ತಿರುವ ಅನಾಹುತವನ್ನು ನೋಡಿ ಅನಾಹುತಗಳಲ್ಲಿ ಕುಟುಂಬದ ಎಲ್ಲರನ್ನೂ ಕಳೆದುಕೊಂಡಿರುವ ಒಬ್ಬೊಬ್ಬರೇ ಉಳಿದುಕೊಂಡಿರುವ ಅವರನ್ನು ನೋಡಿದರೆ ನಾವು ಬಟ್ಟೆ ಆಹಾರ ಹಣ ಏನಾದರು ಕೊಡಬಹುದು ಕುಟುಂಬದವರನ್ನು ಕೊಡಲು ಸಾಧ್ಯವೇ ಎಂದು ಯೋಚಿಸುತ್ತಾ ಬರೆದಿರುವೆ. ವನಜ ಮಹಾಲಿಂಗಯ್ಯ ಮಾದಾಪುರ                        

“ಸಂಬಂಧಗಳನ್ನುಉಳಿಸಿಕೊಳ್ಳಿ” ವಿಶೇಷ ಬರಹ ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ

ವೈವಾಹಿಕ ಸಂಗಾತಿ ವನಜ ಮಹಾಲಿಂಗಯ್ಯ “ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ” “ರಹಸ್ಯ ಪ್ರೀತಿ, ಮದುವೆ ಒಳ್ಳೆಯದಲ್ಲ.”ದುಶ್ಯಂತ ಶಾಕುಂತಳೆಯನ್ನು ಮದುವೆಯಾಗಿರುವುದನ್ನೆ  ಮರೆತುಬಿಟ್ಟಿದ್ದಾನೆ. ಅಲ್ಲಿ ಶಕುಂತಳೆ ಗರ್ಭವತಿಯಾಗಿದ್ದಾಳೆ. ಅವಳನ್ನು ದುಷ್ಯಂತನ ಬಳಿಗೆ ಬಿಟ್ಟುಬರಲು ಕಣ್ವಮಹರ್ಷಿಗಳು ಶಿಷ್ಯ ನೊಂದಿಗೆ ಶಕುಂತಲೆಯನ್ನು ಅರಮನೆಗೆ ಕಳುಹಿಸುತ್ತಾರೆ.ಅಲ್ಲಿ ದುಷ್ಯಂತ ಹಾಗು ಶಿಷ್ಯ ಶಾಂಘ್ರವನಿಗೂ ಮಾತು ಕತೆ ನಡೆಯುತ್ತದೆ. ಶಂಕುತಳೆ ನಿನ್ನ ಹೆಂಡತಿಯೆಂದು ಕಣ್ವರ ಶಿಷ್ಯ ಎಷ್ಟು ಹೇಳಿದರೂ ದುಷ್ಯಂತ ಒಪ್ಪುವುದಿಲ್ಲ. ಆಗ ಶಾಂಘ್ರವನಿಗೆ ಶಕುಂತಳೆಯ ಮೇಲೆ  ಕೋಪ ಬರುತ್ತದೆ.ಕಾರಣ  ಇವಳ ಒಂದು ಕ್ಷಣದ ಅವಿವೇಕದಿಂದ ಎಂತಹ ಅಪಹಾಸ್ಯಕ್ಕೆ ಗುರಿಯಾದಳೆಂದು. ಆಗ ಒಂದು ಮಾತನ್ನು ಹೇಳುತ್ತಾನೆ.ಯಾರಿಗೂ ಗೊತ್ತಿಲ್ಲದಂತೆ ಪ್ರೀತಿಸುವಾಗ ಅಥವಾ ರಹಸ್ಯವಾಗಿ ಮದುವೆಯಾಗುವಾಗ  ಆ ವ್ಯಕ್ತಿಯ ಬಗ್ಗೆ ಚನ್ನಾಗಿಪರೀಕ್ಷೆ ಮಾಡಿರಬೇಕು. ಅವರ ಸ್ವಭಾವ ಸರಿಯಾಗಿ ತಿಳಿಯದಿದ್ದರೆ ಪ್ರೀತಿಯೂ ಸಹ ದ್ವೇಷವಾಗಿ ಮಾರ್ಪಾಡಾಗಲು ತುಂಬಾ ಸಮಯವಾಗುವುದಿಲ್ಲ.ದುಷ್ಯಂತ ಹಾಗು ಶಂಕುತಳೆ ಗುಟ್ಟಾಗಿ ಸೇರಿದವರು. ಅವರಿಬ್ಬರ ಸಂಬಂಧಕ್ಕೆ  ಯಾವ ಸಾಕ್ಷಿಯೂ ಇರಲಿಲ್ಲ. ಇದ್ದ ಒಂದು ಉಂಗುರವೂ ಕಳೆದುಹೋಗಿದೆ. ಅವರಿಬ್ಬರ ಮದುವೆಯಾಗಿದ್ದು ಹಿರಿಯರಿಗೆ ಗೊತ್ತಿದ್ದರೆ ಶಕುಂತಳೆಯನ್ನು ಹೆಂಡತಿಯೆಂದು ದುಷ್ಯಂತ ಒಪ್ಪಿಕೊಳ್ಳಬೇಕಿತ್ತು. ರಹಸ್ಯವಾಗಿ ಮದುವೆಯಾಗಿದ್ದರಿಂದ ಶಕುಂತಳೆಯ ಪೋಷಕರು ಅಸಹಾಯಕರು.   ಅಂದು ಕಾಳಿದಾಸ ಈ ನಾಟಕ ಬರೆದ ಸಮಯ ಈಗಿನ ಸಮಯಕ್ಕೂ ತುಂಬಾ ಅಂತರ ವಿದ್ದರೂ ಪರಿಸ್ಥಿತಿ ಮಾತ್ರವೇ ಬದಲಾಗಿಲ್ಲ. ಇಂದಿನ ಮಕ್ಕಳು ಗುಟ್ಟಾಗಿ ಪ್ರೀತಿಸಿ ಓಡಿಹೋಗಿ ಮದುವೆಯಾಗಿ ಮುಂದಿನ ದಿನಗಳಲ್ಲಿ ಎಡವಟ್ಟಾಗಿ ತುಂಬಾ ನೋವು ಅನುಭವಿಸುತ್ತಾರೆ. ಪಾಲಕರಿಗೂ ಕಷ್ಟ ಕೊಡುತ್ತಾರೆ.ಅದರಲ್ಲೂ ಹೆಚ್ಚು ಕಷ್ಟಕ್ಕೆ ಗುರಿಯಾಗುವವರು ಅಪ್ಪ ಅಮ್ಮ.ಪ್ರಾಯದ ಬಿಸಿಯಲ್ಲಿ  ಪ್ರೀತಿಯ ಗುಂಡಿಗೆ ಬೀಳಲು ಒಂದು ಕ್ಷಣ ಸಾಕು. ಆದರೆ ಒಬ್ಬರನ್ನು ಒಬ್ಬರು ಅರಿತುಕೊಳ್ಳದೇ ಆಕರ್ಷಣೆಗೆಪ್ರೀತಿಸಿದರೆ ಅದು ಹೆಚ್ಚುಕಾಲ ಉಳಿಯವುದು ಅಕ್ಷರಶಃ ಸುಳ್ಳು.  ಯಾವ ವ್ಯಕ್ತಿಯ ಗುಣ ಸರಿಯಾಗಿ ಗೊತ್ತಿರುವುದಿಲ್ಲವೋ ಅಂತಹ ವ್ಯಕ್ತಿಯು ವೈರಿಯಾಗುತ್ತಾನೆ. ಅಂದಾಗಲಿ ಇಂದಾಗಲಿ ಸಂಬಂಧಗಳೇ ಸಾಕ್ಷಿಯನ್ನು ಹೇಳುತ್ತವೆ.  ನಾವಿಬ್ಬರೂ ಮದುವೆಯಾಗಿದ್ದೇವೆ ಎಂದರೆ  ಸಾಕ್ಷಿ ತೋರಿಸಲು ಕೋರ್ಟು ಕೇಳುತ್ತದೆ. ಅಂದು ದುಷ್ಯಂತನು  ಶಕುಂತಳೆಗು ಅದನ್ನೆ ಕೇಳಿದ್ದು.  ಅದಕ್ಕೆ ಗುಟ್ಟಾಗಿ ಮದುವೆ ಮಾಡಿಕೊಂಡು ಹೆತ್ತವರಿಗೂ ಸಂಬಂಧಿಕರಿಗೂ ಅವಮಾನ ಮಾಡಬೇಡಿ. ಜೀವ ಚಿಕ್ಕದು, ಜೀವನ ದೊಡ್ಡದು.  ಎಲ್ಲರ ಒಪ್ಪಿಗೆಯಿಂದ ನಡೆದ ಮದುವೆಗಳಲ್ಲಿ ಏನಾದರೂ ತೊಂದರೆಯಾದರೆ ಹೇಳಲು  ನಿಮ್ಮವರು ಎಲ್ಲರೂ ಇರುತ್ತಾರೆ.ಗುಟ್ಟಾಗಿ ಮದುವೆಯಾಗಿ ಆತ್ಮಹತ್ಯಗೆ ಶರಣಾಗಿ ಹೆತ್ತವರ ಮನಸ್ಸು ನೋಯಿಸಬೇಡಿ. ಅಂದು ದುಷ್ಯಂತ ಶಕುಂತಳೆಯ ಮದುವೆ ಸಾಕ್ಷಿಯಾಗಿದ್ದುದು ಒಂದು ಉಂಗುರ, ಹಾಗು ಕಣ್ವಾಶ್ರಮದಲ್ಲಿದ್ದ ಒಂದು ಜಿಂಕೆ ಮಾತ್ರವೆ.  ಆದರೆ ಉಂಗುರ ಕಳೆದಿತ್ತು .  ಪಾಪ ಜಿಂಕೆ ಸಾಕ್ಷ್ಯ ಯಾರು ಕೇಳುತ್ತಾರೆ?    ಇತ್ತಿಚೆಗೆ ನಡೆಯುತ್ತಿರುವ ಘಟನೆಗಳು ಮೈ ಜುಮ್ಮೆನಿಸುತ್ತದೆ. ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ಹುಡುಗಿಯ  ಕತೆ. ಬೇಡ ಮಕ್ಕಳೆ ಯಾರೂ ಅಂತಹ ತಪ್ಪು ಮಾಡಿ  ಜೀವಕಳೆದುಕೊಳ್ಳಬೇಡಿ. ಮದುವೆಯ ವಿಷಯದಲ್ಲಿ ದುಡುಕಬೇಡಿ.  ಗುಟ್ಟು ಮಾಡಬೇಡಿ. ಹೆತ್ತವರಿಗೆ ಅವರ ಜವಾಬ್ದಾರಿ ಗೊತ್ತಿರುತ್ತದೆ. ವನಜ ಮಹಾಲಿಂಗಯ್ಯಅಧ್ಕಕ್ಷರುವಿಶ್ವವಿನೂತನ ಮಹಿಳಾ ಸಮಾಜ ದಾವಣಗೆರೆ

“ರಹಸ್ಯ ಪ್ರೇಮ ವಿವಾಹ ಒಳ್ಳೆಯದಲ್ಲ”ವಿಶೇಷ ಲೇಖನ ವನಜ ಮಹಾಲಿಂಗಯ್ಯ Read Post »

ಇತರೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು ಸಂಗಾತಿಗೆ ಹೆಚ್ಚು ಬರೆಯದೇ ಹೋದರು ತಮ್ಮ ಬರಹಗಳಬಗ್ಗೆತಮ್ಮ ಪುಸ್ತಕಗಳ ಬಗ್ಗೆ ಜೊತೆಗೆ ತಮಗಿಷ್ಟವಾದ ಸಾಹಿತ್ಯ ಚಟುವಟಿಕೆಗಳ ಬ ಗ್ಗೆ ನಮ್ಮೊಂದಿಗೆ ಸದಾ ಮಾಹಿತಿ ಹಂಚಿಕೊಳ್ಳುತ್ತಿದ್ಷದರುಈಗವರು ನಮ್ಮೊಂದಿಗಿಲ್ಲ ಎನ್ನುವುದನ್ನು ನಮಗೆ ನಂಬಲಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿದೊರೆಯಲೆಂದು ಸಂಗಾತಿ ಪತ್ರಿಕೆ ಪ್ರಾರ್ಥಿಸುತ್ತದೆ ಸಂಪಾದಕೀಯ ಮಂಡಳಿ,ಸಂಗಾತಿ ಸಾಹಿತ್ಯ ಪತ್ರಿಕೆ

ನಮ್ಮನ್ನು ಅಗಲಿದ ಲೇಖಕಿ ಆಶಾ ರಘು ಅವರಿಗೆ ಸಂಗಾತಿಯ ಶ್ರದ್ದಾಂಜಲಿಗಳು Read Post »

ಇತರೆ, ಜೀವನ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ

ಬದುಕಿನ ಸಂಗಾತಿ ಜಯಶ್ರೀ.ಜೆ.ಅಬ್ಬಿಗೇರಿ “ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಸುತ್ತು ಬಳಸಿ ಮತ್ತೆ ಮತ್ತೆ ಸಮಸ್ಯೆಗಳೆಲ್ಲ ನನ್ನ ಪಾಲಿಗೆ ಏಕೆ ಬರುತ್ತಿವೆ? ಉಳಿದವರೆಲ್ಲ ಹಾಯಾಗಿದ್ದಾರೆ ನನಗೆ ಮಾತ್ರ ಹೀಗಾಗುತ್ತಿದೆ. ಎಂದು ಬಹಳಷ್ಟು ಸಲ ಅಂದುಕೊಳ್ಳುತ್ತೇವೆ.. ಪ್ರೀತಿ ಪಾತ್ರರು ಮರಣಿಸಿದಾಗ, ಬಹಳಷ್ಟು ಇಷ್ಟ ಪಟ್ಟದ್ದು ಸಿಗದೇ ಇದ್ದಾಗ, ಅಂದುಕೊoಡದ್ದು ಅಂದುಕೊoಡoತೆ ಆಗದೇ ಇದ್ದಾಗ ನನ್ನ ಬದುಕಿನಲ್ಲಿ ದುರಂತಗಳ ಸರಮಾಲೆ ಬೆನ್ನು ಬಿಡದ ಬೇತಾಳನಂತೆ ಬೆನ್ನು ಹತ್ತಿವೆ. ನನಗೇ ಏಕೆ ಹೀಗೆ ಆಗುತ್ತೆ? ಎನ್ನುವ ಪ್ರಶ್ನೆ ತಲೆ ಹೊಕ್ಕು ಕಟ್ಟಿಗೆ ಹುಳು ಕೊರೆಯುವಂತೆ ಕೊರೆಯುತ್ತದೆ. ಪದೇ ಪದೇ ತೊಂದರೆ ಕೊಡುವ, ನಮ್ಮನ್ನು ಏಳ್ಗೆ ಆಗದಂತೆ ತಡೆಯುವ ಈ ಪ್ರಶ್ನೆಯಿಂದ ಬಚಾವಾಗುವುದು ಹೇಗೆ? ಎಂದು ಯೋಚಿಸುತ್ತೇವೆ. ಅಲ್ಲವೇ? ಈ ಕಾಡುವ ಯೋಚನೆಗೆ ಪೂರ್ಣ ವಿರಾಮ ಹಾಕಲು ಸಹಕಾರಿಯಾಗುವ ಅಂಶಗಳತ್ತ ಒಮ್ಮೆ ಗಮನ ಹರಿಸಿ.ಸುತ್ತ ಕಣ್ಣು ಹರಿಸಿ ದುರಂತಗಳು ಸಂಭವಿಸಿದಾಗ, ವಿಷಮ ಗಳಿಗೆಯಲ್ಲಿ ಭವಿಷ್ಯದ ದಾರಿಯೇ ಕಾಣದೇ ಕತ್ತಲೆಯಲ್ಲಿ ಕುಳಿತಾಗ ನನಗೇಕೆ ಹೀಗೆ? ಎನ್ನುವ ಮನಸ್ಥಿತಿಯಿಂದ ಹೊರಬಂದು ನಿಮ್ಮಸುತ್ತ ಮುತ್ತಲಜನ-ಜೀವನದೆಡೆಗೆ ಕಣ್ಣು ಹರಿಸಿ ಇತರರು ನಿಮ್ಮಂತೆ ಸಮಸ್ಯೆಯಲ್ಲಿದ್ದರೂ ಅದನ್ನು ದೊಡ್ಡದಾಗಿಸಿದೇ ನಗುವ ಮೊಗವ ಹೊತ್ತು ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತಾರೆ. ಆದ ನೋವಿನ ಕಡೆ ಹೆಚ್ಚು ಗಮನ ಕೊಡದೇ ನೋವುಂಡರೂ ನಗುವ ಪ್ರಯತ್ನ ಮಾಡುತ್ತಾರೆ. ಇತರರ ದುಃಖಕ್ಕೆ ಕಿವಿಗೊಡುವದರಲ್ಲಿ ಸಂತೃಪ್ತಿ ಕಾಣುತ್ತಾರೆ. ‘ನಾನು ಬರಿಗಾಲಲ್ಲಿ ನಡೆಯಬೇಕಿದೆ ನನ್ನ ಬಳಿ ಪಾದರಕ್ಷೆಗಳಿಲ್ಲ ಎಂದು ಕಣ್ಣೀರಿಡುತ್ತಿರುವಾಗ ಕಾಲಿಲ್ಲದವನನ್ನು ಕಂಡೆ ನನ್ನ ನೋವು ನೋವೇ ಅಲ್ಲ ಅನಿಸಿತು. ದೇವರಿಗೆ ಕೃತಜ್ಞನಾಗಿರಬೇಕು ನಾನು.’ ಎಂದೊಮ್ಮೆ ವಿಲಿಯಮ್ ಶೇಕ್ಸ್ಪಿಯರ್ ಹೇಳಿದ ಮಾತು ಎಷ್ಟೊಂದು ಮಾರ್ಮಿಕವಾಗಿದೆ. ದುರಂತವೆoದರೆ ನಾವು ನಮ್ಮ ಸುತ್ತ ರೇಷ್ಮೆ ಹುಳುವಿನಂತೆ  ಗೂಡು ಕಟ್ಟಿಕೊಂಡು ಯಾರೋ ನಮ್ಮನ್ನು ಮೇಲೇಳದಂತೆ ತಡೆಯುತ್ತಿದ್ದಾರೆ ಎಂದು ಗೋಳಿಡುವುದುಕಣ್ಣು ಹೊರನೋಟಗಳನ್ನು ನೋಡಲಿ.  ಅಂತರಗಣ್ಣಿನಿoದ ಪರಾಮರ್ಶಿಸಲಿ. ಆಗ ನಿಮಗೆ ಬಂದ ಸಂಕಟ ಏನೂ ಅಲ್ಲವೇ ಅಲ್ಲ ನನಗಿಂತ ಕಷ್ಟದಲ್ಲಿರುವವರು ತುಂಬಾ ಜನರಿದ್ದಾರೆ. ನನಗೆ ದೇವರು  ಅಂಥ ದುಸ್ಥಿತಿ ಬರದಂತೆ ಕಾಪಾಡಿದ್ದಾನೆ ಎಂದೆನಿಸುವುದು.ದುಃಖದಿoದ ಹೊರಬಂದು ಅದೇ ಅನುಭವ ಪಡೆದ ಇತರರ ಬಗ್ಗೆ ಯೋಚಿಸಿ. ಅವರೊಂದಿಗೆ ಮಾತನಾಡಿ ಆಗ ಅವರ ಬಗೆಗೆ ನಿಮಗೆ ಅನುಕಂಪ ತಾದ್ಯಾತ್ಮತೆ ಮೂಡುತ್ತದೆ.ನೀವಿನ್ನೂ ಅನುಕೂಲಕರ ಪರಿಸ್ಥಿತಿಯಲ್ಲಿರುವಿರಿ ಎಂದೆನ್ನಿಸುವುದು.   ದುರ್ಘಟನೆ ಆಹ್ವಾನಿಸದಿರಿ ಎಲ್ಲ ದುರಂತಗಳು  ಒಮ್ಮಿಂದೊಮ್ಮೆಲೇ ಧುತ್ತನೇ ಘಟಿಸುವುದಿಲ್ಲ. ಕೆಲವೊಂದು ನಮ್ಮ ಸ್ವಯಂ ಕೃತ ತಪ್ಪುಗಳಿಂದ ಉದಾಸೀನತೆಯಿಂದ ಘಟಿಸುತ್ತವೆ. ಅವುಗಳನ್ನು ನಾವೇ ಕೈ ಹಿಡಿದು ತಂದು ನಮ್ಮ ಬಾಳಲ್ಲಿ ಮಣೆ ಹಾಕಿ ಕೂಡ್ರಿಸಿ ಕೊಳ್ಳುತ್ತೇವೆ.ನಮಗರಿವಿಲ್ಲದಂತೆ ಗೆದ್ದಲು ಹುಳುವಿನಂತೆ ನಮ್ಮ ಅಸ್ತಿತ್ವವನ್ನು ಇಲ್ಲದಂತೆ ಮಾಡಲು ದಿನವೂ ಕಾರ್ಯನಿರತಆಗಿರುತ್ತವೆ ತುರ್ತು ಜರೂರು ಮಹತ್ವದ ವಿಷಯಗಳನ್ನು ಪರಿಗಣಿಸಿ ಕ್ರಿಯಾಶೀಲರಾದರೆ, ನಡೆಯುವ ದುರ್ಘಟನೆಗಳ ಅವಕಾಶದ ಬಾಗಿಲು ಮುಚ್ಚಿದರೆ ಸದಾ ಕಾಲಕ್ಕೂ ಮುಚ್ಚಿ ಹೋಗುತ್ತವೆ. ಇನ್ನು ನಿಮ್ಮ ನಿಯಂತ್ರಣದಾಚೆಗೆ ನಡೆವ ದುರಂತಗಳಿಗೆ ಪ್ರತಿಯಾಗಿ  ಸಹನ ಶಕ್ತಿಯಿಂದ ದಿಟ್ಟತನದಿಂದ ಪ್ರತಿಕ್ರಿಯಿಸಿದರೆ ಸಮಸ್ಯೆ ಉಲ್ಬಣಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.ಏಳು ಬಾರಿ ಟೂರ್ ಡೇ ಫ್ರಾನ್ಸ್ ಗೆದ್ದ  ಲ್ಯಾನ್ಸ್ ಆರ್ಮಸ್ಟಾ ಹೀಗೆ ಹೇಳುತ್ತಾರೆ.‘ಬಹಳಷ್ಟು ಜನರು ಕೊನೆಗೆ ಇಟ್ಟುಕೊಳ್ಳುವ ಶೇಕಡಾ ಒಂದು ಮೀಸಲು ಶಕ್ತಿಯು ಕ್ರೀಡಾಪಟು ಬಳಸಲು ದಿಟ್ಟತನ ತೋರುವ ಹೆಚ್ಚುವರಿ ಶಕ್ತಿಯಾಗಿದೆ.’ಈ ಹೇಳಿಕೆಯಂತೆ  ನಮ್ಮ ದಿಟ್ಟತನದಿಂದ ತೋರುವ ಹೆಚ್ಚುವರಿ ಶಕ್ತಿಯ ಸದುಪಯೋಗಪಡಿಸಿಕೊಳ್ಳಿ. ಸಹಜವಾಗಿರಿ ಸದಾ ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಕೈ ಬಿಡಬೇಕು. ಈ ಹೋಲಿಕೆ ಇತರರಿಗಿಂತ ಕೆಳ ಮಟ್ಟದಲ್ಲಿದ್ದೇನೆ ಎಂದು ನಿತ್ರಾಣಗೊಳಿಸುವ ಕೀಳರಿಮೆ ಇಲ್ಲವೇ ಮೇಲರಿಮೆಯ ಅಹಂಕಾರವನ್ನು ಹುಟ್ಟು ಹಾಕುತ್ತದೆ. ನಿಮ್ಮ ನಿಜ ಸ್ವರೂಪ ನೀಡದ ಕಲ್ಪಿತ ಭ್ರಮಾಲೋಕವು ಇಲ್ಲದ ತೊಂದರೆಗಳನ್ನು ತಂದು ನಿಮ್ಮ ಬದುಕಿನ ಮಡಿಲಲ್ಲಿ ಚೆಲ್ಲುತ್ತದೆ. ನಿಜದಲ್ಲಿ ತಾನು ತಾನಾಗದ ಹುಸಿ ಲೋಕದಲ್ಲಿ ಸಮಸ್ಯೆಗಳ ಜಾಲವನ್ನು ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುತ್ತದೆ. ಕೆಲವೊಮ್ಮೆ ನುಡಿಯಲ್ಲಿ ಎಚ್ಚೆತ್ತುಕೊಳ್ಳುತ್ತೇವೆ. ನಡೆಯಲ್ಲಿ ತಪ್ಪುತ್ತೇವೆ. ಜ್ಞಾನ ಕ್ರಿಯೆಗಳು ಸಮನಾಗಿರಿಸಿ ನಡೆಯುವುದು ಹಗ್ಗದ ಮೇಲಿನ ನಡಿಗೆ ಇದ್ದಂತೆ. ಹೂದೋಟದಲ್ಲಿ ಮೈ ಅರಳಿಸಿ ನಿಂತ ಹೂಗಳು ತನಗಿಂತ ದೊಡ್ಡ ಇಲ್ಲ ಚಿಕ್ಕ ಹೂಗಳನ್ನು ನೋಡಿ ಕಣ್ಣ ಹನಿ ಸುರಿಸುವುದಿಲ್ಲ. ತನ್ನಷ್ಟಕ್ಕೆ ತಾನೆ ಬಿಮ್ಮನೇ ಅರಳಿ ಗಾಳಿ ಬೀಸಿದಲ್ಲೆಲ್ಲ ತನ್ನ ಕಂಪು ಸೂಸುವವು. ಬಿರಿದ ಕುಸುಮಗಳಂತೆ ಸಹಜವಾಗಿರಿ. ಛಲ ಬಲ ತುಂಬಿಕೊಳ್ಳಿ ಅಮಾನುಷ, ಭೀಕರ, ಹೃದಯ ವಿದ್ರಾವಕ, ಘೋರ ಹತ್ಯಾಕಾಂಡಗಳಲ್ಲಿ ಸಾವಿನ ಬಾಗಿಲು ತಟ್ಟಿ ಬಂದವರು ಸಮರ್ಥವಾಗಿ ಬದುಕಿ ತೋರಿದವರು  ಸಾಧನೆಯ ಉತ್ತುಂಗಕ್ಕೆ ಏರಿದವರು ಹಸಿರಾದ ಪ್ರೀತಿಯನ್ನು ಇತರರ ಬಾಳಲ್ಲಿ ತಂದವರ ಪಟ್ಟಿಯೇ ಇದೆ. ಇತಿಹಾಸ ಪುಟಗಳಲ್ಲಿ ದಾಖಲಾಗಿರುವ ಇಂಥ ವೀರ ಮಹನೀಯರ ಜೀವನ ಚರಿತ್ರೆಯನ್ನೊಮ್ಮೆ ಓದಿ. ನಿಮ್ಮಲ್ಲೂ ಛಲ ಬಲ ತುಂಬಿಕೊoಡರೆ  ಶೌರ್ಯದ ಖಣಿ ನೀವಾಗುವಿರಿ.   ಕವಿ ಕೆ ಎಸ್ ನಿಸ್ಸಾರ ಅಹ್ಮದ್ ರವರು  ‘ಹುದ್ದೆ ಮುದ್ದೆ ನಿದ್ದೆ ಈ ಬದುಕು ಇಷ್ಟೇ ಪೆದ್ದೆ?ಎಂಬ ಲೇಖನದಲ್ಲಿ ‘ದಿನವಹಿಯ ಊಟ ಬಟ್ಟೆಗಳ ಅಗತ್ಯಗಳನ್ನು ದಾಟದ, ಉಸಿರಾಡಿ ಅಸ್ತಿತ್ವವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯ ಪುನರಾವರ್ತಿತ ಯಾಂತ್ರಿಕ ಚಟುವಟಿಕೆಯೇ ಅನೇಕಾನೇಕರ ಪಾಲಿಗೆ ಬಾಳ್ವೆ ಎನ್ನಿಸುತ್ತಿದೆ.’ಎಂದು ವಿಷಾದದಿಂದ ಬರೆದಿದ್ದಾರೆ.ಜೀವನದ ಪ್ರತಿ ಸಂಕುಚಿತ ದೃಷ್ಟಿಕೋನ ತೊರೆಯಿರಿ ಎಂಬ ಸಂದೇಶ ನೀಡದ್ದಾರೆ. ಪರಿಹಾರದತ್ತ ಗಮನ ಹರಿಸಿಬಂದ ಸಂಕಟದತ್ತ ನೋಡುತ್ತ ಕುಳಿತರೆ ಅದು ದಿನೇ ದಿನೇ ದೊಡ್ಡದೆನಿಸತೊಡುತ್ತದೆ. ಬೃಹದಾಕಾರವಾಗಿ ಬೆಳೆದು ನಮ್ಮನ್ನೇ ನುಂಗಿ ಬಿಡುವುದೇನೋ ಎಂಬ ಚಿಂತೆ ಆವರಿಸಿಕೊಳ್ಳುತ್ತದೆ. ಸಮಸ್ಯೆಯನ್ನು ಎಲ್ಲರ ಮುಂದೆ ಹೇಳುತ್ತ ತಿರುಗ ಬೇಡಿ. ಏಕೆಂದರೆ ಇಲ್ಲಿ ನಿಮ್ಮ ದುಃಖಗಳ ಪ್ರಚಾರಕ್ಕೆ ಜಾಗವಿಲ್ಲ. ಅದಲ್ಲದೇ ಸಮಸ್ಯೆಗಳಿಲ್ಲದವರು ಯಾರೂ ಇಲ್ಲ. ಸಮಸ್ಯೆಯ ಮೂಲ ಹುಡುಕಿದರೆ ಪರಿಹಾರ ತನ್ನಿಂದ ತಾನೇ ಹೊಳೆಯುತ್ತದೆ.ಒಮ್ಮೊಮ್ಮೆ ಅಚಾತುರ್ಯದಿಂದ ಅಲಕ್ಷö್ಯದಿಂದ ಸಮಸ್ಯೆ ಬೆಳೆದು ನಿಲ್ಲುತ್ತದೆ ಆಗ ಅನುಭವಿಕರನ್ನು ಜ್ಞಾನಿಗಳನ್ನು ಸಂಪರ್ಕಿಸಿದರೆ ಅಡ್ಡಗೋಡೆಯಾಗಿ ನಿಂತಿದ್ದ ನೋವು ತಾನೇ ಮಂಜಿನoತೆ ಕರಗುವುದು.ಕೆಲವೊಂದು ತೊಂದರೆಗಳಿಗೆ ಕಾಲವೇ ಉತ್ತರಿಸುವುದು ಕಾಲಕ್ಕಿಂತ ಉತ್ತಮ ಆರೈಕೆ ಮತ್ತೊಂದಿಲ್ಲ. ದೊಡ್ಡ ದೊಡ್ಡ ಅವಘಡಗಳಲ್ಲಿ ಕುಟುಂಬ ಸದಸ್ಯರನ್ನು  ಕಳೆದುಕೊಂಡವರು ಬೆಳಕಿನ ಆಶಾ ಕಿರಣ ಕಾಣದವರು ಜೀವನವೇ ಬೇಡ ಅಂದುಕೊoಡವರು ಬದುಕು ದುಸ್ತರ ಎಂದುಕೊoಡವರು  ಕಾಲ ಉರುಳಿದಂತೆ ಜೀವನ ಪ್ರೀತಿಗೆ ಸಿಲುಕಿ ಸಂತಸದ ಜೀವನ ಸಾಗಿಸುವುದನ್ನು ಆದರ್ಶವಾಗಿಸಿಕೊಳ್ಳಿ.  ದುಃಖ ದುಮ್ಮಾನ ಅವಮಾನಗಳ ಸರಣಿಯನ್ನೇ ಸವಾಲಾಗಿ ಸ್ವೀಕರಿಸಿ ಬದುಕಿನ ಹೋರಾಟವನ್ನು ಹೇಗೆ ಜಯಸಬೇಕೆಂಬುದನ್ನು ತೋರಿದ ಅಂಬೇಡ್ಕರ್ ಅಬ್ರಾಹಾಂ ಲಿಂಕನ್‌ರoಥವರ ದೊಡ್ಡ ಕೀರ್ತಿಗೆ ಪಾತ್ರರಾದ ಅದರ್ಶಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಿ ನಿಮ್ಮ ವಿಚಾರ ವೈಖರಿಯನ್ನು ಬದಲಿಸಿದರೆ ಎಂದೆoದಿಗೂ ವ್ಯಥೆಯಾಗಿ ಉಳಿಯುವ ದುರಂತವೂ ಪ್ರಬಲರನ್ನಾಗಿಸುವ ಅಚ್ಚರಿ ಬದಲಾವಣೆಯನ್ನು ನೀವೇ ಗಮನಿಸಬಹುದು. ಕೊನೆ ಹನಿಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ ಮನೋಬಲವನ್ನು ಬಾನಿಗೆ ಹಾರಿಸೋಣ. ಬದುಕನ್ನು ಶ್ರೇಷ್ಠ ಪಥಕ್ಕೆ ಹೊರಳಿಸೋಣ.   ಜಯಶ್ರೀ.ಜೆ.ಅಬ್ಬಿಗೇರಿ

“ಮನೋಬಲ ಮುಗಿಲೆತ್ತರಕ್ಕೇರಿಸಿದರೆ ದುರಂತದ ನೋವೂ ನಗಣ್ಯ!!” ಜಯಶ್ರೀ.ಜೆ.ಅಬ್ಬಿಗೇರಿ Read Post »

You cannot copy content of this page

Scroll to Top