ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
“ಬೆಳಕಾಗುವುದೆಂದರೆ”


ಮನೆಯ ಅಂಗಳದಲ್ಲಿ ದೀಪ ಹಚ್ಚುವ ಮುನ್ನ
ಮನದ ಅಂಗಳದಲ್ಲಿ
ಮಸುಕಾದ ಮುಖಗಳನ್ನೊಮ್ಮೆ ನೋಡಿ!
ಎಣ್ಣೆ ಬತ್ತಿಯ ಜ್ವಾಲೆಗಿಂತ
ಒಂದು ಸಾಂತ್ವನದ ಮಾತು ದುಃಖಿತ ಮನಗಳಿಗೆ
ಹೆಚ್ಚು ಬೆಳಕಾಗಬಹುದು!
ದೇವರ ಮುಂದೆ ಹೂವಿನ ಹಾರ ಇಡುವ ಮುನ್ನ
ನೊಂದ ಹೃದಯಕ್ಕೊಂದು ಕ್ಷಮೆಯ ಹೂವಿಡಿ!
ದೇವರ ಮೂರ್ತಿಗೆ ಸುಗಂಧ ಅರ್ಪಿಸುವುದಕ್ಕಿಂತ
ನೋವಿನಲ್ಲಿರುವವರಿಗೆ ನೆಮ್ಮದಿ ನೀಡುವುದು
ಪ್ರಾಯಶ್ಚಿತ್ತಪೂರ್ಣ ಪುಣ್ಯವಾಗಬಹುದು!
ಆಕಾಶಕ್ಕೆ ಬಣ್ಣದ ಚಿತ್ತಾರ ಬಿಡಿಸುವ ಮುನ್ನ
ಬಣ್ಣ ಕಳೆದುಕೊಂಡ ಬದುಕುಗಳನ್ನೊಮ್ಮೆ ಗಮನಿಸಿ!
ಮೋಡಗಳ ಮೇಲೆ ಬೆಳಕಿನ ರಂಗೋಲಿ
ಮೂಡಿಸುವುದಕ್ಕಿಂತ;
ಆಶ್ರಿತ ಬದುಕುಗಳ ಕನಸುಗಳಿಗೆ ಬಣ್ಣ ತುಂಬುವುದು
ಸುಂದರವಾಗಬಹುದು!
ಹೊಸ ಬಟ್ಟೆಯ ಸಂಭ್ರಮದಲ್ಲಿ ಮೈಮರೆಯುವ ಮುನ್ನ
ಹಳೆಯ ಬಟ್ಟೆಯಲ್ಲೇ ಬದುಕು ಸವೆಸುವವರ ನೆನಪಿರಲಿ!
ದೇಹಕ್ಕೆ ರೇಷ್ಮೆ ಉಡಿಸುವುದಕ್ಕಿಂತ
ಬೇರೊಬ್ಬರ ಬದುಕಿಗೆ ಗೌರವದ ಹೊದಿಕೆ ಹೊದಿಸುವುದು
ಹಿರಿದಾದ ಗೌರವಯುತ ಕಾರ್ಯವಾಗಬಹುದು!
ಸಾವಿರ ಮೆಟ್ಟಿಲುಗಳ ದೇವಸ್ಥಾನ ಹತ್ತುವ ಮುನ್ನ
ನಿಮ್ಮ ನೆರವಿಗಾಗಿ ಕಾಯುತ್ತಿರುವವರ ಬಳಿಗೆ ಇಳಿದುಬನ್ನಿ!
ದೇವರನ್ನು ಹುಡುಕುತ್ತಾ ದೂರ ಸಾಗುವುದಕ್ಕಿಂತ
ದೇವರಿದ್ದಾನೆಂದು ನಂಬಿರುವ ಮನುಷ್ಯರಿಗೆ
ಸಾಂತ್ವನವಾಗುವುದು ಶ್ರೇಷ್ಠವಾಗಬಹುದು!
ನದಿಗೆ ಹಾಲೆರೆಯುವ ಮುನ್ನ
ಬಾಯಾರಿದ ಜೀವಗಳ ದಾಹವನ್ನೊಮ್ಮೆ ನೆನಪಿಸಿಕೊಳ್ಳಿ!
ಕಲ್ಲಿನ ದೇವರಿಗೆ ಅಭಿಷೇಕ ಮಾಡುವುದಕ್ಕಿಂತ
ಬಾಯಾರಿದವರಿಗೆ ಒಂದು ಗುಟುಕು ನೀರು ನೀಡುವುದು
ಪುಣ್ಯ ತೀರ್ಥವಾಗಬಹುದು!
ಮನೆಯ ಗೋಡೆಗಳಿಗೆ ಬಣ್ಣ ಬಳಿಯುವ ಮುನ್ನ
ಸಂಬಂಧಗಳ ನಡುವೆ ಬಿದ್ದ ಬಿರುಕುಗಳನ್ನೊಮ್ಮೆ ಗಮನಿಸಿ!
ಗೋಡೆಗಳ ಸೌಂದರ್ಯಕ್ಕಿಂತ
ಮನಸ್ಸುಗಳ ನಡುವೆ ಸೇತುವೆ ಕಟ್ಟುವುದು
ಮುಖ್ಯವಾಗಬಹುದು!
ಜಗತ್ತನ್ನೇ ಗೆದ್ದೆವೆಂದು ಸಂಭ್ರಮಿಸುವ ಮುನ್ನ
ನಿಮ್ಮೊಳಗಿನ ಅಹಂಕಾರವನ್ನೊಮ್ಮೆ ಸೋಲಿಸಿರಿ!
ಸಾಮ್ರಾಜ್ಯ ಕಟ್ಟಿದವರೆಲ್ಲ ಚಕ್ರವರ್ತಿಗಳಾಗಲಾರರು!
ಮನಸ್ಸುಗಳ ಗೆದ್ದವರೆ ನಿಜವಾದ ವಿಜಯಿಯಾಗಬಹುದು!
ಹಣದ ಲೆಕ್ಕದಲ್ಲಿ ಸಂಪತ್ತನ್ನು ಅಳೆಯುವ ಮುನ್ನ
ನಿಮ್ಮಿಂದ ಸಂತೈಸಲ್ಪಟ್ಟ ವ್ಯಕ್ತಿಗಳ ಲೆಕ್ಕವಿಡಿ!
ಬ್ಯಾಂಕಿನ ಖಾತೆಯಲ್ಲಿ ಹೆಚ್ಚಾದ ಅಂಕಿಗಳಿಗಿಂತ
ಬೇರೊಬ್ಬರ ನೆನಪಿನಲ್ಲಿ ಉಳಿಯುವ ಒಳ್ಳೆಯತನವೇ
ನಿಜವಾದ ಆಸ್ತಿಯಾಗಬಹುದು!
ದೀಪಕ್ಕೆ ಕತ್ತಲೆಯನ್ನು ದೂರ ಮಾಡುವ ಶಕ್ತಿಯಿದೆ!
ಆದರೆ ಮನುಷ್ಯನಿಗೆ ಮತ್ತೊಂದು ಮನುಷ್ಯನ ಬದುಕನ್ನೇ ಬದಲಿಸುವ ಶಕ್ತಿಯಿದೆ!
ಹೂವಿಗೆ ಸುಗಂಧ ಬೀರುವ ಗುಣವಿದೆ!
ಆದರೆ ಮನುಷ್ಯನಿಗೆ ತನ್ನ ಅಸ್ತಿತ್ವವನ್ನೇ ಪರಿಮಳವಾಗಿಸುವ ಅವಕಾಶವಿದೆ!
ಮಳೆಗೆ ಭೂಮಿ ದಾಹ ತಣಿಸುವ ಸತ್ವವಿದೆ!
ಆದರೆ ಮನುಷ್ಯನ ಪ್ರೀತಿಗೆ ಅಂತರಂಗದ ಬರವನ್ನೇ ನೀಗಿಸುವ ಸತ್ವವಿದೆ!
ಸೂರ್ಯ ಪ್ರತಿದಿನ ಜಗತ್ತಿಗೆ ಬೆಳಕಾಗುತ್ತಾನೆ!
ಆದರೆ ಯಾರದೋ ಬದುಕಿಗೆ ಬೆಳಕಾದ ದಿನವೆ
ನಿಜಾರ್ಥದಲ್ಲಿ ಬೆಳಕು ಉದಯಿಸಿದ ದಿನವಾಗಬಹುದು!
ದೀಪ ಹಚ್ಚಿದವರೆಲ್ಲ ಬೆಳಕಾಗುವುದಿಲ್ಲ!
ಹೂವು ಮುಡಿದವರೆಲ್ಲ ಪರಿಮಳವಾಗುವುದಿಲ್ಲ!
ದಾನ ಮಾಡಿದವರೆಲ್ಲ ಮಹಾಬಲಿ ಹರಿಶ್ಚಂದ್ರರಾಗುವುದಿಲ್ಲ!
ತಮ್ಮ ಜೀವನ ಕೆಲಸಗಳಿಂದ ಬೇರೊಬ್ಬರ ಬದುಕಿನಲ್ಲಿ
ಉತ್ತಮ ಬದಲಾವಣೆ ತಂದವರೇ
ಈ ಭೂಮಿಯ ಮೇಲೆ ಆರದಂತಹ ಬೆಳಕಾಗುತ್ತಾರೆ!
————–
ಟಿ.ಪಿ.ಉಮೇಶ್




