ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಹೋರಾಟದ ಹಾದಿಯಲ್ಲೂ ಸಾಹಿತ್ಯದ ಬೆಳಕನ್ನು ಬೆಳಗಿಸಿದ ಜಯದೇವಿತಾಯಿಯವರ ಬದುಕು  ಸಂಬಲ ಮಹಿಳೆಯರ ಜೀವನಗಾಥೆ,. ಬದುಕನ್ನೇ ಸಮರ್ಪಿಸಿಕೊಂಡ ಮಹಾನ ಚೇತನದ ಸಾಹಸಗಾಥೆ. .
ನಾಡಿನ ಏಕೀಕರಣದ ಹೋರಾಟದ ಕಣದಲ್ಲಿದ್ದರೂ ಅವರ ಲೇಖನಿ ಎಂದಿಗೂ ವಿಶ್ರಾಂತಿ ಪಡೆಯಲಿಲ್ಲ. ಹೋರಾಟದ ಕಿಚ್ಚು ಅವರ ಎದೆಯಲ್ಲಿ ಉರಿಯುತ್ತಿದ್ದರೆ, ಸಾಹಿತ್ಯದ ಜ್ಯೋತಿ ಅವರ ಅಂತರಂಗದಲ್ಲಿ ನಿರಂತರವಾಗಿ ಬೆಳಗುತ್ತಿತ್ತು.
 ಸಮಾಜದ ನೋವುಗಳಿಗೆ ಸ್ಪಂದಿಸುವ, ಮಹಿಳೆಯರ ಬದುಕಿಗೆ ಧ್ವನಿಯಾಗುವ, ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಅವರ ಸಾಹಿತ್ಯ ರಚನೆ ನಿರಂತರವಾಗಿ ಸಾಗುತ್ತಿತ್ತು.

ಬನ್ನಿ ತಾಯಿಯವರು ರಚಿಸಿದ ಸಾಹಿತ್ಯಿಕ ಕ್ರತಿ ಮೊಟ್ಟಮೊದಲಿಗೆ ಅವರು ಪ್ರಕಟಿಸಿದ ಕೃತಿ *ಜಯಗೀತಾ* (ಜೂನ್ ೧೯೫೨)
‘ಜಯಗೀತ’ ನು ಜಯದೇವಿ ತಾಯಿಯವರ ಅಂತರಂಗದ ಭಾವನೆಗಳ ಅಕ್ಷರ ರೂಪದಲ್ಲಿ ಮೂಡಿ ಬಂದಿದೆ.
ಜಯದೇವಿತಾಯಿಯವರ ಸಾಹಿತ್ಯ ಪಯಣದಲ್ಲಿ ಮೊದಲ ಕವನ ಸಂಕಲನವಾದ ‘ಜಯಗೀತ’ ಒಂದು ವಿಶಿಷ್ಟ ಭಾವಲೋಕವನ್ನೇ ತೆರೆದಿಡುತ್ತದೆ. ೪೦ ಕವಿತೆಗಳನ್ನು ಒಳಗೊಂಡ ಈ ಕವನ ಸಂಕಲನದ ಪ್ರತಿಯೊಂದು ಕವಿತೆಯೂ ಅವರ ಹೃದಯದ ಆಳದಿಂದ ಸಹಜವಾಗಿ ಚಿಮ್ಮಿದ ಅನುಭವದ ಭಾವ ಕುಸುಮದಂತಿದೆ.
ಜೀವನದ ನೋವು, ಅನುಭವದ ಸಂಕಟ, ಬದುಕಿನ ಏರಿಳಿತಗಳು, ಆಧ್ಯಾತ್ಮಿಕ ಚಿಂತನೆ, ಆತ್ಮಸಾಧನೆಯ ಹಂಬಲ ಹಾಗೂ ಜೀವವು ಪರಮಾತ್ಮನಲ್ಲಿ ಒಂದಾಗಿ ಲೀನವಾಗಬೇಕೆಂಬ ಆಂತರಿಕ ಅಭಿಲಾಷೆ ಇಲ್ಲಿ ಕಾವ್ಯರೂಪದಲ್ಲಿ ಅಭಿವ್ಯಕ್ತಗೊಂಡಿವೆ. ಅವರ ಕವಿತೆಗಳಲ್ಲಿ ಬದುಕಿನ ನೋವಿನ ನಿಟ್ಟುಸಿರಿನ ಜೊತೆಗೆ ಆತ್ಮದ ಅರಿವಿನ ಬೆಳಕೂ ಇದೆ. ಲೌಕಿಕ ಬದುಕಿನ ಅನುಭವಗಳಿಂದ ಆಧ್ಯಾತ್ಮಿಕ ಅನುಭೂತಿಯೆಡೆಗೆ ಸಾಗುವ ಮನಸ್ಸಿನ ಪಯಣ ಇಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

‘ಜಯಗೀತ’  ಜಯದೇವಿತಾಯಿಯವರ ಹೃದಯದ ಮಿಡಿತ, ಅಂತರಂಗದ ಆತ್ಮಸಂವಾದ ಮತ್ತು ಬದುಕಿನ ಅನುಭವಗಳು ಅಕ್ಷರಗಳಾಗಿ ಅರಳಿದ ಭಾವಸೌರಭ.

*ಕನ್ನಡಿಗರ ಹಂಪಿ ಕೊಂಪಿಯಾಗಿಹುದಿಗಾ
ಅಲೆ ಅಲೆದು ನೋಡುವಷ್ಟು ಅಳಿದುಳಿದ ಹಂಪೆ*..

ಹಂಪಿಯ ಅವಶೇಷಗಳು ಜಯದೇವಿತಾಯಿಯವರ ಕಾವ್ಯಭಾವ ಈ ಕವಿತೆಯಲ್ಲಿ ಕನ್ನಡಿಗರ ಗತವೈಭವ ಮತ್ತು ವರ್ತಮಾನದ ದಯನೀಯ ಸ್ಥಿತಿಯ ನಡುವಿನ ಅಂತರವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಚಿತ್ರಿಸಿದ್ದಾರೆ. ಒಂದು ಕಾಲದಲ್ಲಿ ಕನ್ನಡ ನಾಡಿನ ಸಾಮ್ರಾಜ್ಯ ವೈಭವ, ಕಲೆ, ಸಂಸ್ಕೃತಿ, ಶೌರ್ಯ ಮತ್ತು ಸಂಪತ್ತಿನ ಪ್ರತೀಕವಾಗಿದ್ದ ಹಂಪಿ ಇಂದು ಅವಶೇಷಗಳಾಗಿ ಉಳಿದಿರುವುದನ್ನು ಕಂಡು ಕವಯಿತ್ರಿಯ ಮನಸ್ಸು ಮಮ್ಮಲ ಮರುಗುತ್ತದೆ.

ಕನ್ನಡಿಗರೇ, ನಿಮ್ಮ ಗತವೈಭವದ ಸಾಕ್ಷಿಯಾಗಿದ್ದ ಹಂಪಿಯನ್ನು ನೋಡಲು ಇಂದು ಅಲೆದಾಡುತ್ತಾ ಬರುವಂತಹ ಸ್ಥಿತಿ ಏಕೆ ನಿರ್ಮಾಣವಾಯಿತು? ಒಮ್ಮೆ ಅರಮನೆಗಳ ವೈಭವದಿಂದ, ದೇವಾಲಯಗಳ ಘಂಟಾನಾದದಿಂದ, ಕಲೆಯ ಸೊಬಗಿನಿಂದ ಕಂಗೊಳಿಸುತ್ತಿದ್ದ ಹಂಪಿ ಇಂದು ಕಣ್ಣಿಗೆ ಕಾಣುವಷ್ಟು ಅಳಿದುಳಿದ ಅವಶೇಷಗಳಾಗಿ ಉಳಿದಿದೆಯಲ್ಲ ಎಂಬ ನೋವು ಅವರ ಕಾವ್ಯದಲ್ಲಿ ಅನುರಣಿಸುತ್ತದೆ.

ಇಂದು ಕನ್ನಡಿಗರ ಸ್ವಾಭಿಮಾನ, ಅಭಿಮಾನದ ದುಸ್ಥಿತಿಯ ಬಗೆಗಿನ ಕಳಕಳಿಯೂ ಹೌದು. ತಮ್ಮ ನಾಡಿನ ಗತವೈಭವವನ್ನು ನೆನೆದು, ವರ್ತಮಾನದ ಸ್ಥಿತಿಯನ್ನು ಕಂಡು ಕಂಬನಿ ಮಿಡಿಯುವ ಕವಯಿತ್ರಿ, ತಮ್ಮ ಅಂತರಂಗದ ನೋವನ್ನು ಹಂಪಿಯ ವಿರೂಪಾಕ್ಷನ ಸನ್ನಿಧಿಯಲ್ಲಿ ತೋಡಿಕೊಳ್ಳುತ್ತಾರೆ.
ವಿರೂಪಾಕ್ಷನನ್ನೇ ಸಾಕ್ಷಿಯಾಗಿಸಿಕೊಂಡು ಕನ್ನಡಿಗರ ಸ್ಥಿತಿಗತಿಯನ್ನು ನೆನೆದು ಕಣ್ಣೀರಿಡುವ ಅವರ ಕಾವ್ಯಭಾವ ಓದುಗರ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ.
ಇಲ್ಲಿ ಹಂಪಿ ಕೇವಲ ಐತಿಹಾಸಿಕ ಸ್ಥಳವಾದರೆ ಅದು ಕನ್ನಡಿಗರ ಗತವೈಭವದ ನೆನಪು, ಕಳೆದುಹೋದ ಘನತೆಯ ಸಂಕೇತ ಮತ್ತು ಮತ್ತೆ ಎಚ್ಚೆತ್ತುಕೊಳ್ಳಬೇಕಾದ ನಾಡಿನ ಆತ್ಮಗೌರವದ ಪ್ರತೀಕವಾಗಿ ಮೂಡಿಬರುತ್ತದೆ.
ಹಂಪಿಯ ಕಲ್ಲುಗಳು ಮೌನವಾಗಿರಬಹುದು….ಆದರೆ ಅವುಗಳ ಅವಶೇಷಗಳಲ್ಲಿ ಕನ್ನಡಿಗರ ಗತವೈಭವದ ಕಥೆಯಿದೆ. ಆ ಕಲ್ಲುಗಳ ಮೌನದಲ್ಲಿಯೇ ಕನ್ನಡಿಗರ ನೋವನ್ನು ಆಲಿಸಿ, ವಿರೂಪಾಕ್ಷನ ಮುಂದೆ ಕಂಬನಿ ಮಿಡಿಯುವ ಜಯದೇವಿತಾಯಿಯವರ ಹೃದಯದ ಆರ್ದ್ರತೆ ಈ ಕವಿತೆಯ ಜೀವಾಳವಾಗಿದೆ.

*ನಮ್ಮವರು ಇನ್ನೂರು ಅವರವರು ಮೂನ್ನೂರು ಒಂದು ಪ್ರಹರ ಕಾಳಗದಿ ಮಡಿದ ವಾರ್ತೆಯನು
ಓದಿ ಕರುಳು ಕೊರಗುತಿದೆಯಲ್ಲ ಹಾ !
ಕೇಡು ಐನೂರು ಜನಗಳು *ಎಂದು

  ರಜಾಕಾರರ ಹಾವಳಿಯಿಂದ ನಾಡಿನ ಜನರು ಅನುಭವಿಸಿದ ಭೀಕರ ನೋವು, ಸಾಮೂಹಿಕ ಹತ್ಯೆ ಮತ್ತು ಅಮಾಯಕ ಜೀವಗಳ ದಾರುಣ ಅಂತ್ಯವನ್ನು ಕಂಡ ಒಬ್ಬ ತಾಯಿಯ ಹೃದಯದ ಆಕ್ರಂದನ ಕೇಳಿಸುತ್ತದೆ.
ರಜಾಕಾರರ ಕ್ರೌರ್ಯಕ್ಕೆ ಬಲಿಯಾದವರ ಲೆಕ್ಕವೇ ಇಲ್ಲ. ಜನರು ಹೆಣವಾಗಿ ಬಿದ್ದರೆಂಬ ಸುದ್ದಿ ಕಿವಿಗೆ ಬಿದ್ದಾಗ ಆ ತಾಯಿಯ ಕರುಳು ಕಿತ್ತುಬಂದಂತಾಗುತ್ತದೆ. ಯಾರು ಯಾರನ್ನು ಕೊಂದರು ಎಂಬ ಲೆಕ್ಕಕ್ಕಿಂತಲೂ, ಮಣ್ಣಿನ ಮಕ್ಕಳು ಮಣ್ಣಿನ ಮೇಲೆಯೇ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯವೇ ಅವಳನ್ನು ಕಂಗೆಡಿಸುತ್ತದೆ.
 ಐನೂರು ಕುಟುಂಬಗಳ ಕನಸುಗಳು, ನೂರಾರು ತಾಯಂದಿರ ಮಡಿಲುಗಳು, ಹೆಂಡತಿಯರ ಬಾಳುಗಳು, ಮಕ್ಕಳ ಭವಿಷ್ಯಗಳು, ಯಾರೋ ಮಗನನ್ನು ಕಳೆದುಕೊಂಡಿದ್ದಾರೆ, ಯಾರೋ ಗಂಡನನ್ನು, ಇನ್ನು ಯಾರೋ ತಮ್ಮ ಮನೆಯ ಆಧಾರವನ್ನೇ ಕಳೆದುಕೊಂಡಿದ್ದಾರೆ.

 ಇತಿಹಾಸದ ರಕ್ತಸಿಕ್ತ ಪುಟಗಳೇ ಮಾತನಾಡುತ್ತವೆ. ಆ ಸಾಲುಗಳಲ್ಲಿ ಅಡಗಿರುವುದು  ಸಾವಿನ ಹಿಂದೆ ಉಳಿದ ಸಾವಿರಾರು ಜೀವಗಳ ಅಳಿಸಲಾಗದ ನೋವು. ರಜಾಕಾರರ ದೌರ್ಜನ್ಯಕ್ಕೆ ನಲುಗಿದ ಜನರ ಬದುಕಿನ ಕರಾಳ ಅಧ್ಯಾಯವಿದು. ಈ ತಾಯಿಯ ಕಣ್ಣೀರು ಕಾಲದ ಪ್ರವಾಹದಲ್ಲಿ ಕೊಚ್ಚಿಹೋಗುವ ಮುಂದಿನ ಪೀಳಿಗೆಗೆ ಅನ್ಯಾಯದ ವಿರುದ್ಧ ಎಚ್ಚರಿಕೆಯಾಗಿ ಉಳಿಯುವ ಇತಿಹಾಸದ ಸಾಕ್ಷಿ.

*ಜಗದ ಮಬ್ಬಿನ ಮೇಲೆ
ಮಠ ಮಾನ್ಯಗಳ ಕಟ್ಟಿ,
 ಪಂಥಗಳ ಹೂಡಿ ಭಾವಿಕರ
ಭ್ರಮೆಯಲ್ಲಿ ಆಚಾರ ಗುಡಿಗಟ್ಟಿ
ಕರ್ಮಠದ ಕಳಸಿತ್ತು ಕುಳಿತಿಹರು
ಕಣ್ಬಡುತ ಪಾಪಿ ಮಹಾ ಪಾಪಿಗಳು.*….

ಧರ್ಮದ ಹೆಸರಿನಲ್ಲಿ ಬೆಳೆದ ಕರ್ಮಠತೆ  ಕವಿಯ ಅಂತರಂಗದ ಆಕ್ರೋಶ ಕವಿಯ ಹೃದಯದಲ್ಲಿ ಮಡುಗಟ್ಟಿರುವ ನೋವು, ಅಸಹನೆ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧದ ಪ್ರಬಲ ಆಕ್ರೋಶ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ.

 ಧರ್ಮವೆಂಬುದು ಮನುಷ್ಯನ ಬದುಕಿಗೆ ದಾರಿ ದೀಪ
ವಾಗಬೇಕು, ಮಠಮಾನ್ಯಗಳು ಮನುಷ್ಯನಿಗೆ ಮಾರ್ಗದರ್ಶನ ನೀಡಬೇಕು, ಪಂಥಗಳು ಮಾನವೀಯತೆಯನ್ನು ಬೆಸೆಯಬೇಕು. ಆದರೆ ಧರ್ಮದ ನಿಜವಾದ ಆಶಯವನ್ನೇ ಮರೆತು, ಮಠಮಾನ್ಯಗಳನ್ನು ಕಟ್ಟಿ, ಪಂಥಗಳ ಹೆಸರಿನಲ್ಲಿ ಜನರನ್ನು ವಿಭಜಿಸಿ, ಭಾವಿಕರ ಮುಗ್ಧ ಭಕ್ತಿಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವವರನ್ನು ಕಂಡು ಕವಿಯತ್ರಿಯ ಮನಸ್ಸು ಕುದಿಯುತ್ತದೆ.
ಜಗತ್ತಿನ ಮೇಲೆ ಅಜ್ಞಾನದ ಮಬ್ಬು ಕವಿದಿರುವಾಗ ಅದನ್ನು ಸರಿಸಿ ಜ್ಞಾನದ ಬೆಳಕು ಚೆಲ್ಲಬೇಕಾದವರು ಧರ್ಮದ ಹೊಣೆ ಹೊತ್ತವರೇ ಅಲ್ಲವೇ….ಆದರೆ ಅವರೇ ಆಚಾರ-ವಿಚಾರಗಳ ಹೆಸರಿನಲ್ಲಿ ಜನರ ಮನಸ್ಸಿಗೆ ಭ್ರಮೆಯ ಪರದೆ ಎಳೆದು, ಕರ್ಮಠತೆಯನ್ನೇ ಧರ್ಮದ ಕಳಶವನ್ನಾಗಿ ಧರಿಸಿ ಕುಳಿತಿರುವುದು ಕವಿಯತ್ರಿಗೆ ಸಹಿಸಲಾಗದ ಸಂಗತಿಯಾಗಿದೆ.

ಇನ್ನೊಂದು ಕಡೆ ಭಾವಪರವಶರಾಗಿ ಸಿದ್ಧರಾಮನನ್ನು ಹಂಬಲಿಸುವ ಕವನ ಮೂಡಿ ಬರ್ತದೆ


*ನಿನ್ನ ಬಜಿಸಲೆಂದು
ಉಲಿಯುವೆ ಜಯಗೀತ
 ಒಂದೊಂದು ನನ್ನ ಜೀಯಾ
ನಿನ್ನ ಬರುವಿಕೆಯ ಬಯಕೆ-.
ಮನದಿ ನೆನೆ ನೆನೆದು ಅಳ-
ಹೋಗಿ ಹಾಡಿ ಬಿಡುವೆ!!*

ಸಿದ್ಧರಾಮನ ಬರುವಿಕೆಯ ಹಂಬಲ  ಭಕ್ತಿಯ ಪರವಶತೆಯಲ್ಲಿ ಮಿಡಿದ ಕವಿಹೃದಯ
ಹಿಂದಿನ ಕವಿತೆಯಲ್ಲಿ ಕರ್ಮಠ ಧರ್ಮದ ಹೆಸರಿನಲ್ಲಿ ಸಮಾಜವನ್ನು ಕತ್ತಲೆಗೆ ತಳ್ಳುವವರ ವಿರುದ್ಧ ಕಿಡಿಕಾರಿದ ಕವಿಯೇ, ಇಲ್ಲಿ ಸಂಪೂರ್ಣ ಭಿನ್ನವಾದ ಭಾವಲೋಕದಲ್ಲಿ ಕಾಣಿಸಿಕೊಳ್ಳುತ್ತಾರೆ. ಧರ್ಮದ ಹೆಸರಿನ ಆಡಂಬರ, ಮೌಢ್ಯ ಮತ್ತು ಕಂದಾಚಾರಗಳನ್ನು ವಿರೋಧಿಸಿದ ಅದೇ ಹೃದಯ, ಈಗ ನಿಜವಾದ ಶರಣನಾದ ಸಿದ್ಧರಾಮನನ್ನು ಕಾಣಲು ಹಂಬಲಿಸುತ್ತಿದೆ. ಇದು ಕವಿಯತ್ರಿಯ ವ್ಯಕ್ತಿತ್ವದ ಮತ್ತೊಂದು ಸುಂದರ ಮುಖ.
  ಸಿದ್ಧರಾಮನನ್ನು ಸ್ತುತಿಸುವುದಕ್ಕಾಗಿ  ಮನಸ್ಸು ಉತ್ಸುಕವಾಗಿದೆ. ಆತನ ಮಹಿಮೆ, ಸಮಾಜಸೇವೆ, ಕಾಯಕನಿಷ್ಠೆ, ದಾಸೋಹ ಭಾವನೆ ಮತ್ತು ಜನಪರ ಕಾಳಜಿಗಳನ್ನು ಸ್ಮರಿಸುತ್ತಾ ಜಯಗೀತೆಯನ್ನು ಹಾಡಲು ಕವಿಯತ್ರಿಯ ಅಂತರಂಗ ಕಾತರಿಸುತ್ತಿದೆ. ಇದು ಒಬ್ಬ ಶರಣನನ್ನು ಹೊಗಳುತ ಶರಣತತ್ವದ ಮೂಲಕ ಮಾನವೀಯತೆಯನ್ನು ಕಾಣುವ ಭಾವವಾಗಿದೆ.
ಭಕ್ತಿಯ ಪರಾಕಾಷ್ಠೆ ವ್ಯಕ್ತವಾಗುತ್ತದೆ. ಸಿದ್ಧರಾಮನು ಮತ್ತೆ ಈ ನಾಡಿಗೆ ಬರಬಾರದೇ? ಆತನ ಕಾಯಕದ ಕಿರಣಗಳು ಮತ್ತೆ ಸಮಾಜದಲ್ಲಿ ಬೆಳಗಬಾರದೇ? ಆತನ ಕರುಣೆ, ಸಮಾನತೆಯ ಸಂದೇಶ, ಜನಸೇವೆಯ ಆದರ್ಶಗಳು ಮತ್ತೆ ಮನುಷ್ಯರ ಬದುಕಿನಲ್ಲಿ ಜೀವಂತವಾಗಬಾರದೇ? ಎಂಬ ಹಂಬಲ ಕವಿಯತ್ರಿಯ ಪ್ರತಿಯೊಂದು ಉಸಿರಿನಲ್ಲೂ ಬೆರೆತಿದೆ.

ಭಾವನೆಗಳು ಕಟ್ಟೆಯೊಡೆದು ಹರಿಯುತ್ತವೆ. ಸಿದ್ಧರಾಮನ ನೆನಪು ಕವಿಯನ್ನು ಎಷ್ಟು ಆವರಿಸಿದೆ ಎಂದರೆ, ಆತನ ಬರುವಿಕೆಯ ನಿರೀಕ್ಷೆಯಲ್ಲಿ ಮನಸ್ಸು ಕರಗುತ್ತದೆ. ನೆನಪಿನಲ್ಲೇ ಕಣ್ಣೀರು ಸುರಿಯುತ್ತದೆ…ಆ ಕಣ್ಣೀರೇ ಹಾಡಾಗಿ ಹೊರಹೊಮ್ಮುತ್ತದೆ. ಇಲ್ಲಿ ಭಕ್ತಿಮ ಪೂಜೆ ಹೃದಯದ ಆರ್ತನಾದ, ಆತ್ಮದ ಹಂಬಲ, ಆದರ್ಶದ ಅನ್ವೇಷಣೆ.
ವಿಶೇಷವೆಂದರೆ….ಸಿದ್ಧರಾಮನನ್ನು ಹಂಬಲಿಸುವ ಮೂಲಕ ನಿಜವಾದ ಧರ್ಮ ಹೇಗಿರಬೇಕು ಎಂಬುದನ್ನು ಪರೋಕ್ಷವಾಗಿ ತೋರಿಸುತ್ತಾರೆ. ಅಂದರೆ, ಕವಿಗೆ ಬೇಕಾಗಿರುವದು… ಕಾಯಕ, ದಾಸೋಹ, ಕರುಣೆ, ಸಮಾನತೆ ಮತ್ತು ಮಾನವ ಕಲ್ಯಾಣದ ಧರ್ಮ.

ಒಟ್ಟಿನಲ್ಲಿ, ಈ ಕವಿತೆಯಲ್ಲಿ ಸಿದ್ಧರಾಮನಿಗಾಗಿ ಕವಿಯ ಹಂಬಲವೆಂದರೆ ಗತಕಾಲದ ಒಬ್ಬ ಶರಣನನ್ನು ಮರಳಿ ಕರೆಸಿಕೊಳ್ಳುವ ಆಸೆಯಷ್ಟೇ …ಸಿದ್ಧರಾಮನಂತಹ ಮಾನವೀಯ ಮೌಲ್ಯಗಳ ಪುನರಾಗಮನಕ್ಕಾಗಿ ಹಂಬಲಿಸುವ ಹೃದಯದ ಪ್ರಾರ್ಥನೆಯಾಗಿದೆ.
ಸಿದ್ಧರಾಮನು ಮತ್ತೆ ಬರಲಿ ಎಂಬುದು ಕವಿಯತ್ರಿಯ ಬಯಕೆ….ಸಿದ್ಧರಾಮನ ತತ್ವಗಳು ಪ್ರತಿಯೊಬ್ಬರ ಹೃದಯದಲ್ಲಿ ಮತ್ತೆ ಹುಟ್ಟಲಿ ಎಂಬುದೇ ಕವಿತೆಯ ಅಂತರಾಳದ ಆಶಯ.

*ಏಳಿ ಜಾಗೃತಗೊಳ್ಳಿ ಜಗದ ಮಕ್ಕಳೇ ಏಳಿ
ಉಕ್ಕುತಿಹ ಉಪಟಳವ ಕಿತ್ತೊಗೆಯಲೇಳಿ ದೊರೆತನವು ತಾವೊಂದು, ಹಿರಿತನವು ಮತ್ತೊಂದು ಮರುವೇ ಎಂದೊಂದು ಭೂತಗಳ ಬಡಿದು….*

ಈ ಕವಿತೆಯಲ್ಲಿ ಕವಿಯತ್ರಿಯು … ಇಡೀ ಜಗತ್ತಿನ ಜನಸಮುದಾಯವನ್ನೇ ಎಚ್ಚರಿಸುತ್ತಾರೆ. ಅವರ ಧ್ವನಿಯಲ್ಲಿ ಹೋರಾಟದ ಕಿಚ್ಚಿದೆ, ಮಾತುಗಳಲ್ಲಿ ಬದಲಾವಣೆಯ ಹಂಬಲವಿದೆ, ಅಂತರಂಗದಲ್ಲಿ ಸಮಾನತೆಯ ಸಮಾಜದ ಕನಸಿದೆ.
ಈ ಕವಿತೆಯ ಆಶಯವನ್ನು ಒಂದೇ ಮಾತಿನಲ್ಲಿ ಹೇಳುವುದಾದರೆ……
ಮೌನವಾಗಿರುವುದು ಶೋಷಣೆಗೆ ಶಕ್ತಿ ತುಂಬಿದಂತೆ, ಎಚ್ಚರಗೊಳ್ಳುವುದು ಬದಲಾವಣೆಗೆ ದಾರಿ ಮಾಡಿದಂತೆ. ಅಧಿಕಾರದ ಅಹಂಕಾರಕ್ಕಿಂತ ಮಾನವೀಯತೆಯ ಹಿರಿತನ ದೊಡ್ಡದು. ಅನ್ಯಾಯದ ವಿರುದ್ಧ ಜನರು ಎದ್ದು ನಿಂತಾಗಲೇ ನಿಜವಾದ ಸಮಾನತೆಯ ಸಮಾಜ ನಿರ್ಮಾಣವಾಗಲು ಸಾಧ್ಯ.
ಇಲ್ಲಿ ಜನಮನದಲ್ಲಿ ಹೋರಾಟದ ಕಿಡಿ ಹೊತ್ತಿಸುತ್ತಾರೆ. ಅವರ ಲೇಖನಿ ಒಂದು ಜಾಗೃತಿಯ ಜ್ಯೋತಿಯಾಗಿ, ಅವರ ಕವಿತೆ ಒಂದು ಕ್ರಾಂತಿಯ ಕರೆಯಾಗಿ ಮೊಳಗುತ್ತದೆ.

*ಸಿರಿತನರ ಕುವರಿ ಸಿರಿವಂತರ ಸತಿಯಾಗಿ
ಸಿರಿತನದ ಶೃಂಗಾರವೆಲ್ಲವನು ಮುಗಿಸಿದೆ
ಸಿರಿತನ, ದೊರೆತನ ಹಿರಿಯತನ
ಎನ್ನನಾವರಿಸಿದೆ ಶ್ರೀಲೋಲನಾದರ್ಶನವು ಒಮ್ಮೆಯೂ ಇಲ್ಲ  ಓ…ಸಿಧ್ಧರಾಮ ಓಂ ನನ್ನ ಸಿದ್ಧರಾಮ ಅಂತ ಪರಿತಪಿಸುತ…
“ಓ… ಸಿದ್ಧರಾಮ, ಓಂ ನನ್ನ ಸಿದ್ಧರಾಮ”* ಎಂಬ ಆರ್ತ ಉದ್ಗಾರದಲ್ಲಿ ಭಕ್ತಿಯ ಪರಾಕಾಷ್ಠೆ ವ್ಯಕ್ತವಾಗುತ್ತದೆ.

ಇಲ್ಲಿ ಸಿದ್ಧರಾಮರು ಒಬ್ಬ ಶರಣನಾಗಿ ಕವಿಯತ್ರಿ ಯ ಮನಸ್ಸು ಅರಸುತ್ತಿರುವ ಆದರ್ಶ, ಆತ್ಮಶಾಂತಿಯ ಸಂಕೇತ, ಮಾನವೀಯತೆಯ ಬೆಳಕು. ಆತನನ್ನು ಕಾಣುವ ಹಂಬಲದಲ್ಲಿ ಕವಿಯ ಹೃದಯ ಪರಿತಪಿಸುತ್ತದೆ. ಸಂಪತ್ತಿನ ಸೌಂದರ್ಯಕ್ಕಿಂತ ಶರಣನ ಸಾನ್ನಿಧ್ಯವೇ ದೊಡ್ಡದು ಎಂಬ ಭಾವನೆ ಮನಸ್ಸನ್ನು ಆವರಿಸುತ್ತದೆ.
ಈ ಕವಿತೆಯ ಅಂತರಂಗದ ಸೌಂದರ್ಯವೇನೆಂದರೆ, ಸಿರಿತನದ ಬದುಕನ್ನು ಅನುಭವಿಸಿದ ಮನಸ್ಸು ಕೊನೆಗೆ ಶರಣತತ್ವದ ಸಿರಿತನವನ್ನು ಅರಸುತ್ತದೆ. ಹೊರಗಿನ ಶ್ರೀಮಂತಿಕೆಗಿಂತ ಒಳಗಿನ ಶ್ರೀಮಂತಿಕೆ ಶ್ರೇಷ್ಠ ಎಂಬ ಜೀವನದ ಮಹಾಸತ್ಯವನ್ನು ಕವಿ ಇಲ್ಲಿ ಮನಮುಟ್ಟುವಂತೆ ಅಭಿವ್ಯಕ್ತಿಸಿದ್ದಾರೆ.
ಅರಮನೆಯ ವೈಭವಕ್ಕಿಂತ ಶರಣನ ಪಾದದ ಧೂಳಿ ದೊಡ್ಡದು,ಬಂಗಾರದ ಆಭರಣಕ್ಕಿಂತ ಭಕ್ತಿಯ ಭಾವವೇ ಅಮೂಲ್ಯ,ದೊರೆತನದ ಹಿರಿಮೆಗಿಂತ ಆತ್ಮದ ಪರಿಶುದ್ಧತೆಯೇ ಶ್ರೇಷ್ಠ ಎಂಬ ಸಂದೇಶ ಈ ಸಾಲುಗಳಲ್ಲಿ ಅನುರಣಿಸುತ್ತದೆ.
ಸಿರಿತನ ಬದುಕನ್ನು ಅಲಂಕರಿಸಬಹುದು,ಆದರೆ ಶರಣನ ನೆನಪು ಮಾತ್ರ ಆತ್ಮವನ್ನು ಬೆಳಗಿಸಬಲ್ಲದು. ಇದೇ ಈ ಕವಿತೆಯ ಭಾವಸೌಂದರ್ಯ ಮತ್ತು ತಾತ್ವಿಕ ಗಾಂಭೀರ್ಯ.

ಕವಿಯತ್ರಿಯ ಬರವಣಿಗೆಯಲ್ಲಿ ಭಾವತೀವ್ರತೆ ಇದೆ, ವಿಚಾರದ ಗಾಂಭೀರ್ಯವಿದೆ, ಭಾಷೆಯ ಲಾಲಿತ್ಯವಿದೆ, ಅಭಿವ್ಯಕ್ತಿಯ ಪ್ರಾಮಾಣಿಕತೆಯಿದೆ. ನೋವನ್ನು ಹೇಳುವಾಗ ಕರುಳಿನ ಮಿಡಿತವಾಗುತ್ತಾರೆ.. ಅನ್ಯಾಯವನ್ನು ಖಂಡಿಸುವಾಗ ಅಗ್ನಿಯ ಜ್ವಾಲೆಯಾಗುತ್ತಾರೆ.. ಭಕ್ತಿಯನ್ನು ಅಭಿವ್ಯಕ್ತಿಸುವಾಗ ಪರವಶತೆಯ ಭಾವ ಗಂಗೆಯಾಗುತ್ತಾರೆ.

ಒಂದು ಮಾತಿನಲ್ಲಿ ಹೇಳುವುದಾದರೆ, ‘ಜಯಗೀತ’ ಕವನ ಸಂಕಲನ ಓದುಗನನ್ನು ಓದಿಸಿಕೊಂಡು ಹೋಗುವುದು….. ಓದಿದ ನಂತರವೂ ಅವುಗಳನ್ನು ತನ್ನೊಳಗೆ ಜಗಿಯುವಂತೆ ಮಾಡುತ್ತದೆ.

 ಕೆಲವು ಕವನಗಳು ಕಣ್ಣೀರು ತರಿಸುತ್ತವೆ, ಕೆಲವು ಕೋಪವನ್ನು ಕೆರಳಿಸುತ್ತವೆ, ಕೆಲವು ಭಕ್ತಿಯಲ್ಲಿ ಮಿಂದೇಳಿಸುತ್ತವೆ, ಮತ್ತೆ ಕೆಲವು ಬದುಕಿನ ಅರ್ಥವನ್ನೇ ಮರುಚಿಂತಿಸುವಂತೆ ಮಾಡುತ್ತವೆ. ಇದೇ ಒಬ್ಬ ಕವಿಯ ಬರವಣಿಗೆಯ ಸಾರ್ಥಕತೆ, ಇದೇ ‘ಜಯಗೀತ’ದ ಸಾಹಿತ್ಯಿಕ ಸೊಗಸು.

‘ಜಯಗೀತ’ದ ನಿಜವಾದ ಶಕ್ತಿ ಇರುವುದು ಅದರ ವೈವಿಧ್ಯಮಯ ಭಾವಸ್ಪಂದನದಲ್ಲಿ. ಕವಿತೆಗಳು ಒಂದರ ನಂತರ ಒಂದರಂತೆ ಓದುಗನನ್ನು ಆಕರ್ಷಿಸುತ್ತಾ, ಭಾವದಿಂದ ವಿಚಾರಕ್ಕೆ, ವಿಚಾರದಿಂದ ಅನುಭವಕ್ಕೆ, ಅನುಭವದಿಂದ ಆತ್ಮಾವಲೋಕನಕ್ಕೆ ಕರೆದೊಯ್ಯುತ್ತವೆ. ಓದುತ್ತಾ ಹೋದಂತೆ ಸಮಯದ ಅರಿವೇ ಇಲ್ಲದಂತೆ ಮಾಡುವ ಓಘ, ಓದಿದ ನಂತರವೂ ಮನಸ್ಸಿನಲ್ಲಿ ಬಹುಕಾಲ ಪ್ರತಿಧ್ವನಿಸುವ ಸಾಲುಗಳು ಈ ಸಂಕಲನದ ಹೆಗ್ಗಳಿಕೆ.

 ಸಂವೇದನಾಶೀಲ ಮನಸ್ಸು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಬಂಡಾಯದ ಮನೋಭಾವ, ಶರಣರ ಆದರ್ಶಗಳಿಗೆ ಮಾರುಹೋಗುವ ಭಕ್ತಹೃದಯ ಹಾಗೂ ಬದುಕಿನ ಸತ್ಯಗಳನ್ನು ಶೋಧಿಸುವ ವೈಚಾರಿಕ ಪ್ರಜ್ಞೆ…ಇವೆಲ್ಲವೂ ಇಲ್ಲಿ ಸುಂದರವಾಗಿ ಮೇಳೈಸಿವೆ.


About The Author

Leave a Reply

You cannot copy content of this page

Scroll to Top