ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಮಣಿಪುರವನ್ನು ನಾವು ಸೇರಿದ ವೇಳೆಗೆ ಮಳೆಯ ಮಣಿಗಳು ಗಗನಮುಖದಿಂದ ಧರಣಿವದನದೆಡೆಗೆ ಬೀಳುತ್ತಿದ್ದವು. ವರ್ಷ ಕಾಲ ಆರಂಭವಾಗಿತ್ತು. ಮಳೆಯ ನೀರಿಗಾಗಿಯೇ ಕಾದುಕುಳಿತಿದ್ದ ಚಾತಕ ಪಕ್ಷಿಗಳು ಹನಿಹನಿಗಳನ್ನು ಕುಡಿಯುತ್ತಿದ್ದ ಪರಿಯನ್ನು ಕಂಡು ಅಸೂಯೆಯನ್ನು ತಾಳದಾದವು ಹಂಸಗಳು. ತಮಗೆ ಸಲ್ಲಬೇಕಾದ ವರ್ಷಧಾರೆಯನ್ನು ಭೂಮಿ ಸೇರುವುದಕ್ಕೂ ಮೊದಲೇ ಕುಡಿದು ಮುಗಿಸುತ್ತಿವೆ ಚಾತಕ ಪಕ್ಷಿಗಳು ಎಂಬ ಮತ್ಸರ ಹಂಸಗಳಲ್ಲಿ. ಭರದಿಂದ ಓಡುತ್ತಿದ್ದವು ಆಚೆಗೆ.
ಮಣಿಪುರದ ಸಮೃದ್ಧತೆಯನ್ನೇ ಕಾಣುತ್ತಾ ಬರುತ್ತಿದ್ದೆ ನಾನು. ಚಿನ್ನ ಬೆಳ್ಳಿಗಳ ಕೋಟೆಗಳಿದ್ದವು. ಮಾಣಿಕ್ಯ ವಜ್ರವೈಢೂರ್ಯಗಳಿಂದ ಮಾಡಲ್ಪಟ್ಟ ಕೊತ್ತಳಗಳ ಸಾಲುಗಳಿದ್ದವು. ಕೆಂಪು ಹವಳದ ತೋರಣಗಳಿದ್ದವು. ಮುತ್ತು ರತ್ನಗಳಿಂದ ನಿರ್ಮಿಸಲಾದ ಗೋಪುರಗಳಿದ್ದವು. ಚಿತ್ರಚಿತ್ತಾರಗಳಿಂದ ಶೋಭಿಸುತ್ತಿದ್ದವು ಅಲ್ಲಿಯ ದ್ವಾರಗಳು. ಹಗಲಿಗೆ ಹೆದರಿ ಚದುರಿಹೋಗಿದ್ದ ಬೆಳದಿಂಗಳು ಮಣಿಪುರವನ್ನು ಹೊಕ್ಕು, ಮುತ್ತಿಗೆ ಹಾಕಿ, ಯುದ್ಧಕ್ಕಾಗಿ ಕಾದು ಕುಳಿತಿರಲು ಅದರ ಜೊತೆಗಿನ ಯುದ್ಧಕ್ಕಾಗಿ ಇಲ್ಲಿಗೆ ಬಂದು ಇಡಿಯ ನಗರವನ್ನು ವಶಪಡಿಸಿಕೊಂಡಿದೆ ಎಳೆಬಿಸಿಲು ಎಂಬAತೆ ತೋರುತ್ತಿತ್ತು ಮಣಿಪುರದಲ್ಲಿದ್ದ ಸೌಧಗಳು, ಕೋಟೆಗಳು. ಬೆಳದಿಂಗಳ ಕಾಂತಿಯನ್ನು ಎತ್ತರೆತ್ತರದ ಸೌಧಗಳಲ್ಲಿ ಕಾಣಬಹುದಾಗಿತ್ತು. ಹೊಚ್ಚಹೊಸತಾದ ಚಿನ್ನದ ಕೋಟೆಗಳ ಹೊಳಪದು ಎಳೆಬಿಸಿಲಿನ ನೆನಪನ್ನು ಮೂಡಿಸುವಂತಿತ್ತು.
ಶ್ರೇಷ್ಠವಾದ ಗಿರಿಶಿಖರಗಳನ್ನು ಮೀರಿಸುವಂತಿದ್ದ ಅಲ್ಲಿಯ ಚಿನ್ನದ ಗೋಪುರಗಳು ಹೆಣ್ಣಿನ ದಪ್ಪ ಮೊಲೆಯಂತೆ ತೋರಿದವು, ನನ್ನ ಕಣ್ಣಿಗೆ. ಲಾವಣ್ಯವತಿಯ ಬಾಹುಬಳ್ಳಿಯಂತೆ ಕಾಣುತ್ತಿತ್ತು ಅಲ್ಲಿಯ ರಾಜಮಾರ್ಗ. ಕಮಲಮುಖಿಯ ಸುಂದರ ವದನದಂತಿತ್ತು ಅರಮನೆ. ಮೇಲೆ ಹಾರಾಡುತ್ತಿದ್ದ ಧ್ವಜಗಳು ಮುಗುದೆಯ ಮುಂಗುರುಳನ್ನು ಜ್ಞಾಪಿಸುವಂತಿದ್ದವು. ಮದನಾರಿಯ ಮಣಿಹಾರವಾಗಿತ್ತು ಕಟ್ಟಿದ್ದ ತೋರಣಗಳು. ಕೋಟೆಗಳವು ಹೆಣ್ಣಿನ ಮೈಯ್ಯಲ್ಲಿ ಶೋಭಿಸುವ ಉಡುಗೆಯಿದ್ದ ಹಾಗೆ. ನಗರದ ಗಡಿಯದು ಸುಂದರಿಯ ಸೊಂಟವನ್ನಲAಕರಿಸುವ ಡಾಬು. ಅಲ್ಲಿನ ಶ್ವೇತವರ್ಣದ ಗೃಹಗಳು ಹೆಣ್ಣಿನ ದಂತಗಳು. ಮಣಿಪುರ ನಗರವದು ಚೆಲುವ ನಾರಿಯಂದದಿ ಗೋಚರವಾಯಿತು ನನ್ನ ದೃಷ್ಟಿಗೆ.
ಅತೀವ ಜನಸಮೂಹವಿತ್ತು ನಗರದೊಳಗೆ. ಗುಂಪುಗುAಪಾಗಿ ನಗರವನ್ನು ಪ್ರವೇಶಿಸುವವರಿದ್ದರು. ಅಲ್ಲಿಂದ ತಂಡೋಪತAಡವಾಗಿ ಹೊರಹೋಗುವವರಿದ್ದರು. ಆನೆಗಳು, ಕುದುರೆಗಳು ಎಲ್ಲೆಡೆಯೂ ಕಾಣಸಿಗುತ್ತಿದ್ದವು. ಪುರಜನರು ತೋರುತ್ತಿದ್ದರು ದೆಸೆದೆಸೆಯಲ್ಲಿ. ಮಣಿಪುರದ ಅರಸನಾಗಿದ್ದವ ಬಭ್ರುವಾಹನ. ಇವನಿಗೆ ಅನುದಿನವೂ ಸಾವಿರ ಬಂಡಿಗಳಷ್ಟು ಧನಕನಕಗಳು ಸಲ್ಲುತ್ತಿದ್ದವು ರಾಜರ ಕಡೆಯಿಂದ. ನನ್ನ ಜೊತೆಯಲ್ಲಿದ್ದ ಹಂಸಧ್ವಜ ಅರಸನೂ ಸಹ ಬಭ್ರುವಾಹನನಿಗೆ ತಪ್ಪದೆಯೇ ಕಪ್ಪಕಾಣಿಕೆಗಳನ್ನು ಸಲ್ಲಿಸುವವನಾಗಿದ್ದ.
“ಅಧಿಕ ಸೊಗಸಿನಿಂದ ಕಂಗೊಳಿಸುತ್ತಿದೆ ಈ ನಗರ. ಇದನ್ನಾಳುತ್ತಿರುವ ಅರಸ ಯಾರು? ಅವನು ಕುದುರೆಯನ್ನು ಕಟ್ಟಿ, ನಮ್ಮೊಡನೆ ಯುದ್ಧ ಹೂಡುವ ಮನಸ್ಸು ಮಾಡಿಯಾನೇ?” ಎಂದು ಪ್ರಶ್ನಿಸಿದೆ ಹಂಸಧ್ವಜನಲ್ಲಿ.
ಮಣಿಪುರದರಸನ ಸಾಮರ್ಥ್ಯವನ್ನು ಬಣ್ಣಿಸತೊಡಗಿದ ಚಂಪಕಾ ನಗರಿಯ ದೊರೆ. “ಮಣಿಪುರವೆಂಬ ಈ ನಗರವನ್ನು ಪಾಲಿಸುತ್ತಿರುವವನು ಬಭ್ರುವಾಹನ ಎಂಬ ರಾಜ. ಸಮರ್ಥ ದೊರೆ ಎಂಬ ಪ್ರಸಿದ್ಧಿ ಪಡೆದವನವನು. ದೊರೆಗಳಲ್ಲಿ ಶ್ರೇಷ್ಠನೆನಿಸಿಕೊಂಡವನು. ಇವನ ಸಾಮರ್ಥ್ಯ ಸಾಧನೆಗಳನ್ನು ಒಪ್ಪಿಕೊಂಡ ಅರಸರು ಪ್ರತೀದಿನವೂ ತಪ್ಪದೆ ಸಾವಿರ ಬಂಡಿ ಕನಕವನ್ನು ತಂದೊಪ್ಪಿಸುತ್ತಾರೆ ಇವನಿಗೆ. ಒಂದುವೇಳೆ ಲೋಪವಾದರೆ ಶಿಕ್ಷೆಯಿತ್ತಾನು ಎಂಬ ಭೀತಿ ಎಲ್ಲರಲ್ಲಿಯೂ ಇದೆ” ಎಂದ ಹಂಸಧ್ವಜ, ಬಭ್ರುವಾಹನನ ಸಚಿವನ ಬಗೆಗೆ ಹೇಳತೊಡಗಿದ.
“ಸುಬುದ್ಧಿಯೆಂಬ ಸಚಿವನಿದ್ದಾನೆ ಇವನಿಗೆ. ಈ ನಗರವನ್ನು ನಿಜಾರ್ಥದಲ್ಲಿ ಪಾಲಿಸುತ್ತಿರುವವನು ಅವನೇ. ಧರ್ಮಕ್ಕೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿದ್ದಾನೆ. ಪ್ರಜೆಗಳ ಬಗೆಗೆ ಅನುರಾಗವನ್ನು ಇಟ್ಟುಕೊಂಡಿದ್ದಾನೆ. ಪುರದ ಜನರಿಗೆ ಸೌಖ್ಯ ನೀಡುವವರಾಗಿ ಗುರುತಿಸಿಕೊಂಡಿದ್ದಾರೆ ಈ ರಾಜ ಸಚಿವರು” ಎಂದ ಹಂಸಧ್ವಜನಿಗೆ ಬಭ್ರುವಾಹನನ ಸೇನೆಯ ಸಾಮರ್ಥ್ಯ ತಿಳಿದಿತ್ತು.
ಒಂದೇ ಕಿವಿಯಿರುವ ಕಪ್ಪನೆಯ ಕುದುರೆಗಳು, ಶುದ್ಧ ಶ್ವೇತವರ್ಣದ ಆನೆಗಳು, ಚಿನ್ನದ ರಥಗಳು ಅಗಣಿತ ಸಂಖ್ಯೆಯಲ್ಲಿದ್ದವು ಮಣಿಪುರದಲ್ಲಿ. ಅವುಗಳ ಸಂಖ್ಯೆ ಅದೆಷ್ಟು ಎನ್ನುವುದು ಬಭ್ರುವಾಹನನ ಕರಣಿಕರಿಗೇ ತಿಳಿದಿರಲಿಲ್ಲ. ಉಳಿದ ಸಾಮಾನ್ಯ ಕುದುರೆ, ಆನೆ, ರಥಗಳ ಲೆಕ್ಕಾಚಾರವದು ಸುಲಭವಾಗಿ ಸಿಗುವಂತಿರಲಿಲ್ಲ. ಪರಾಕ್ರಮಶಾಲಿಯಾದ ಅರಸನಿವನು ಎನ್ನುವುದು ನನಗೆ ದೃಢವಾಯಿತು.
ಮಣಿಪುರದಲ್ಲಿದ್ದ ಜನರೆಲ್ಲರೂ ಹರಿಭಕ್ತರಾಗಿದ್ದರು. ವೇದ ಶಾಸ್ತçಗಳನ್ನು ತಿಳಿದವರಾಗಿದ್ದರು. ಸತ್ಯವನ್ನೇ ನುಡಿಯುವ ವ್ರತವನ್ನು ಪಾಲಿಸುತ್ತಿದ್ದರು. ಕೋಪವನ್ನು ತೊರೆದವರಾಗಿದ್ದರು. ಅಹಿಂಸೆಯೆಡೆಗೆ ಮನಸ್ಸು ಮಾಡಿದ್ದರು. ತಮ್ಮನ್ನು ತಾವು ಚೆನ್ನಾಗಿ ಅರ್ಥಮಾಡಿಕೊಂಡವರಾಗಿದ್ದರು. ಕದನ ಸಮರ್ಥರಾಗಿದ್ದರು. ದಾನದ ಗುಣವಿತ್ತು. ಅಸೂಯೆ ಇದ್ದವರಲ್ಲ. ಅಲ್ಲಿಯ ಸಕಲ ನಾರಿಯರು ಪತಿವ್ರತೆಯರೆನಿಸಿಕೊಂಡಿದ್ದರು. ಹೀಗೆ ಸರ್ವ ಸಜ್ಜನರನ್ನೇ ಒಳಗೊಂಡ ಈ ನಗರವನ್ನು ಶ್ರೀಮನ್ನಾರಾಯಣ ಎರಡನೇ ವೈಕುಂಠವಿದು ತನ್ನ ಪಾಲಿಗೆ ಎಂಬ ಮಮಕಾರದಿಂದ ಪೊರೆಯುತ್ತಿದ್ದ.
“ಬಭ್ರುವಾಹನನೆಂಬ ಈ ಬಲುವೀರ ಕಟ್ಟದಿರುತ್ತಾನೆಯೇ ಯಜ್ಞಾಶ್ವವನ್ನು!” ಎಂದ ಹಂಸಧ್ವಜ. ಹೀಗೆ ಅವನು ನುಡಿದ ಕ್ಷಣದಲ್ಲಿಯೇ ಹದ್ದೊಂದು ಹಾರಿಬಂದು ನನ್ನ ಕಿರೀಟದ ತುದಿಯಲ್ಲಿ ಕಾಲೂರಿ ಕುಳಿತಿತು. ನನ್ನ ಗಮನಕ್ಕಿದು ಬಂದಿರಲಿಲ್ಲ. ನನ್ನ ಜೊತೆಗಿದ್ದ ವೀರರು ವಿವರಿಸಿದರು ಇದನ್ನು. ಸೋಲಿನ ಸೂಚನೆಯಿದು ಎಂದು ನುಡಿದರವರು ಆತಂಕದಿAದ.
ಹೀಗೆ ಚಿಂತೆಯ ಕಾರ್ಮೋಡವೊಂದು ನಮ್ಮನ್ನು ಕವಿದ ಕ್ಷಣದಲ್ಲಿಯೇ ಬಭ್ರುವಾಹನ ಅವನ ಸೇವಕರನ್ನು ಅಟ್ಟಿ, ನಮ್ಮ ಕುದುರೆಯನ್ನು ಕೊಂಡೊಯ್ದು, ಕಟ್ಟಿಸಿಯೇಬಿಟ್ಟ.


About The Author

Leave a Reply

You cannot copy content of this page

Scroll to Top