ವ್ಯಕ್ತಿ ಸಂಗಾತಿ
ಡಾ. ಭಾರತಿ ಮೂಲಿಮನಿ
“ದಾರ್ಶನಿಕ ಬೀಚಿ”
ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನ


ಮನುಷ್ಯನು ಅಜ್ಞಾನದಿಂದ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ, ಆ ಮೂಲಕ ಅದನ್ನು ತಿದ್ದುವ ಕೆಲಸವನ್ನು ಹಾಸ್ಯ ಸಾಹಿತ್ಯ ಮಾಡುತ್ತದೆ. ಹಾಸ್ಯದ ತೀವ್ರತೆ ಹೆಚ್ಚಾದಂತೆ ಅದರ ವಿಡಂಬನೆಯ ತೀವ್ರತೆಯು ಹೆಚ್ಚಾಗುತ್ತ ಹೋಗುತ್ತದೆ. ವಿಡಂಬನೆಯ ಮೊನಚು ಹೆಚ್ಚುವುದು ಅಸಹನೀಯವಾದ ಕೃತ್ಯಗಳು ನಡೆದಾಗ. “ಒಂದು ವಿಷಯವನ್ನು ಒಬ್ಬ ವ್ಯಕ್ತಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಹೇಳುವ, ಆ ಮೂಲಕ ಅಜ್ಞಾನದಿಂದ ನಡೆಯುವ ತಪ್ಪನ್ನು ತಿದ್ದುವ, ತಡೆಯುವ ಪರಿಣಾಮಕಾರಿ ಸಾಧನ ವಿಡಂಬನೆ” ಹಿಂದೆ ಜಾನಪದರು ಹಬ್ಬದ ದಿನಗಳಲ್ಲಿ ತಮ್ಮ ಬಂಧುಗಳೊಂದಿಗೆ ಸಂತೋಷದಿಂದ ಕಾಲ ಕಳೆಯಲು ಒಬ್ಬರನ್ನೊಬ್ಬರು ಹಾಸ್ಯ, ಮೊನಚಾದ ವಿಡಂಬನೆಯಿಂದ ನಿಂದಿಸಿಕೊಳ್ಳುತ್ತಿದ್ದರು. ಹೀಗೆ ಬೇರೆಯವರನ್ನು ವಿಡಂಬನೆ ಮಾಡಿದರೆ ಅದು ಅತಿರೇಕದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು.. ಆದರೆ ಮೊನಚಾದ ಹಾಸ್ಯದ ಮೂಲಕ ವಿಡಂನೆಯ ಗಾಂಭೀರ್ಯವನ್ನು ತಮ್ಮ ಮಾನಸ ಪುತ್ರ ತಿಂಮನ ಕೈಗೆ ಲೇಖನಿ ಕೊಟ್ಟವರು ಬೀಚಿ.ತಿಂಮ ಒಮ್ಮೊಮ್ಮೆ ಗುರುವು ಮೀರಿಸಿದ್ದು ಉಂಟೆಂದು ಅವರೇ ಹೇಳುತ್ತಾರೆ
ಬೀಚಿಯವರು ಒಂದೂ ಶಬ್ಧವನ್ನೂ ನಿರರ್ಥಕವಾಗಿ ಬಳಸಿಕೊಂಡಿಲ್ಲ. ಯಾವದನ್ನೂ ಸುಮ್ಮನ್ನೇ ಎಳೆದು ತರುವುದಿಲ್ಲ. ಎನ್ನುವ ವಿಮರ್ಶಕರ ಮಾತಿನಲ್ಲಿ ಸತ್ಯವಿದೆ. ೬೩ಕೃತಿಗಳಲ್ಲಿ ಯಾವುದನ್ನು ಕೈಗೆತ್ತಿಕೊಂಡರೆ ಆ ಕಾಲದ,ಈ ಹೊತ್ತಿಗೂ ಹಸಿ ಹಸಿಯಾದ ಸಮಸ್ಯೆಗಳನ್ನು ಅದಕ್ಕೆ ಸುಡು ಸುಡು ಉದಾಹರಣೆ ಸಮೇತ ಓದುಗರ ಮುಂದೆ ತೆರೆದಿಡುವ, ಆ ಮೂಲಕ ಸಮಾಜದ ಶ್ರೇಣಿಯಲ್ಲಿ ಮೇಲಿಂದ ತುತ್ತ ತುದಿಯಲ್ಲಿ ಬದುಕುವ ಪ್ರತಿಯೊಬ್ಬರಿಗೂ ಅನ್ವಯಿಸುವ ತಾತ್ವಿಕತೆಯನ್ನು ಹೊತ್ತ ಮಹತ್ವದ ಹೊತ್ತಿಗೆಗಳೇ ಆಗಿವೆ. ಮುಂದೆ ಅಧ್ಯಯನ ಮಾಡಿದ ಕೃತಿಗಳಲ್ಲಿನ ಅವರ ತಾತ್ವಿಕತೆಯ ತುಣುಕುಗಳನ್ನು ಕಾಣಿಸಿದ್ದೇನೆ. ಇದು ನಾನು ಸಂಶಿಧನಾ ವಿದ್ಯಾರ್ಥಿಯಾಗಿ ಅವರನ್ನು ಕಂಡ ಬಗೆ . ಆ ಮೂಲಕ ಬೀಚಿ ಗುರುವಿಗೆ ನನ್ನ ನುಡಿ ನಮನ
ಧರ್ಮ ಎನ್ನುವುದು ಬದುಕುವ ರೀತಿ. ಅದು ನೈತಿಕ ತಳಹದಿಯ ಮೇಲೆ ರಚನೆಯಾಗಿರಬೇಕಾದ ಅಗತ್ಯವಾಗಿದೆ. ನೈತಿಕತೆ ಎನ್ನುವುದು ಆಯಾ ಕಾಲ ಸಮಾಜ ನಂಬಿರುವ ಮತ್ತು ಒಪ್ಪಿರುವ ನಿಯಮಗಳೇ ಆಗಿವೆ, ಧರ್ಮ ಎನ್ನುವುದು ಬಲ ಹೀನನನ್ನು ಬಲಿಷ್ಟನು ಕಾಪಾಡುವುದೇ ಆಗಿದೆ. ಅದು ಎಲ್ಲಾ ಪ್ರಾಣಿ ಸಮೂಹಕ್ಕೂ ಅನ್ವಹಿಸುತ್ತದೆ. ಮನುಷ್ಯ ಮನುಷ್ಯನನ್ನು ನಂಬಿ ಆಶ್ರಯಕ್ಕೆ ಬಂದರೆ ನಂಬಿಕೆಗೆ ದ್ರೋಹ ಎಸಗುವುದು ಧರ್ಮ ಎನಿಸಲಾರದು.
ಆಶ್ರಯ ಅದಕಿಲ್ಲ ಬಂಧುಗಳು ಯಾರಿಲ್ಲ!
ಆಸೆ ಬದುಕಲು ಅದಕೆ ಪಾಪ ಪಾಪ!!
ಆಶ್ರಮಕೆ ಬಂದಳು ಸ್ವಾಮಿ ಪಾದವ ನಂಬಿ!
ಪ್ರಸವ ವೇದನೆ ಮಾತ್ರ ತಪ್ಪಲಿಲ್ಲವೋ ತಿಂಮ!!
ಬೀಚಿಯವರು ಹೇಳುವುದು ಅದನ್ನೇ ಇಲ್ಲಿ ಎಲ್ಲವನ್ನು, ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾಗಿರುವ ಹೆಣ್ಣು ಆಶ್ರಯ ಬೇಡಿ ಬಂದರೆ ಆಕೆಯ ಶೀಲವನ್ನೇ ದೋಚುವುದು, ಅದು ಒಂದು ಆಶ್ರಮದ ಸ್ವಾಮಿಯಿಂದ ಇಂಥಹ ಕುಕೃತ್ಯ ನಡೆಪದರೆ ಯಾರನ್ನು ನಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಪ್ರಶ್ನೆ ಖಂಡಿತ ಕಾಡುತ್ತದೆ. ನಂಬಿಕೊಂಡು ಬಂದ ಹೆಣ್ಣಿನ ಮೇಲೆ ಪುರುಷ ಸಮಾಜದಿಂದ ಆಗುವ ದೌರ್ಜನ್ಯವನ್ನು ಹೇಳುತ್ತಾ ಹೆಣ್ಣಿನ ಬದುಕಿಗೆ ಪುರುಷ ಸಮಾಜದಿಂದ ಆಗುವ ತೊಂದರೆಯನ್ನು, ಅದರಿಂದ ಅವಳಿಗಾಗುವ ಮಾನಸಿಕ, ದೈಹಿಕ ಹಿಂಸೆಯ ಒಟ್ಟು ನಷ್ಟವನ್ನು ಹೇಳುತ್ತಾರೆ. ಸ್ತ್ರೀಯನ್ನು ಸ್ವಾತಂತ್ರ್ಯಳಾಗಿ ಬದುಕಲು ಬಿಡದ ಮತ್ತು ನಂಬಿ ಆಶ್ರಯಕ್ಕೆ ಬಂದವಳನ್ನು ವಂಚಿಸುವ ಧರ್ಮಾಧಿಕಾರಿಯು ಒಂದು ಆಶ್ರಮವನ್ನು ನಡೆಸುವಂತಹದ್ದು, ಮತ್ತು ನಂಬಿದವಳನ್ನು ವಂಚಿಸುವಂತಹದ್ದು ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಯಾಗಿದೆ. ಮತ್ತು ಧರ್ಮಕ್ಕೆ ಮಸಿ ಬಳಿಯುವ ಮೂರ್ಖತನ ಅದು. ಇದು ಇಂದು ನೆನ್ನೆಯದ್ದಲ್ಲ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿದೆ.
ಸಮಾಜದ ಸಾಮನ್ಯ ಜನರ ಮೇಲಿಲ್ಲದ ನಂಬಿಕೆ ಆಶ್ರಮಗಳು ಮತ್ತು ಮಠಗಳ ಮೇಲಿರುವುದು. ಅಲ್ಲಿಯೂ ಹೆಣ್ಣಿಗೆ ರಕ್ಷಣೆ ಇಲ್ಲ ಎನ್ನುವುದು ಇಲ್ಲಿ ಸಾಭಿತಾಗುತ್ತದೆ. ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು ಜನರ ಬದುಕನ್ನು ಅದರಲ್ಲೂ ದಿಕ್ಕಿಲ್ಲದ ಅನಾಥ ಮಕ್ಕಳ, ಸ್ತ್ರೀಯರ ಬದುಕನ್ನು ರಕ್ಷಿಸುತ್ತವೆ ಎನ್ನುವ ಬಲವಾದ ನಂಬಿಕೆ ಸುಳ್ಳಾಗುತ್ತದೆ. ಯಾವ ದೈವದ ಮೇಲೆ ನಂಬಿಕೆ ಇಟ್ಟು ದೈರ್ಯದಿಂದ ಆಶ್ರಯವನ್ನು ಬೇಡಿ ಬಂದ ಹೆಣ್ಣಿಗೆ ನಂಬಿಕೆ ದ್ರೋಹ, ಅವಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಆಗುವ ವಿಫಲತೆ ಮತ್ತು ಮಠ ಮಂದಿರಗಳ ಮೇಲಿನ ನಂಬಿಕೆ ಸುಳ್ಳಾಗುತ್ತದೆ. ಹೆಣ್ಣಿನ ರಕ್ಷಣೆ ಮಾಡಬೇಕಾದುದು ಕುಟುಂಬ. ಅಂಥಹ ಕುಟುಂಬವನ್ನು ಕಳೆದುಕೊಂಡ ಹೆಣ್ಣು ಸಮಾಜದಲ್ಲಿ ಬದುಕುವುದು ಇಷ್ಟೊಂದು ಕಠಿಣ ಎನ್ನುವುದು ಈ ಮಾತಿನಲ್ಲಿ ಅಡಕವಾಗದೆ. ಒಂದು ಹೆಣ್ಣು ಯಾರ ಸಹಾಯವಿಲ್ಲದೇ ಬದುಕು ರೂಪಿಸಿಕೊಳ್ಳಲು ಆದದಂತಹ ಸ್ಥಿತಿ. ಆದರೂ ಆಶ್ರಮಕ್ಕೆ ಬಂದ ಹೆಣ್ಣಿಗೆ ಅಲ್ಲಿಯೂ ಕಾಮುಕರ ಕಾಟ ತಪ್ಪುವುದಿಲ್ಲ ಆಶ್ರಮ ಎಂದರೆ ಕುಟುಂಬಕ್ಕಿಂತಲೂ ಹೆಚ್ಚು ಭದ್ರತೆ ಒದಗಿಸುವ ತಾಣ, ಅಂತಹ ಆಶ್ರಮ ನಡೆಸುವ ಮಹನೀಯರು ಆಶ್ರಯ ಕೊಡುವ ನೆಪದಲ್ಲಿ ಹೆಣ್ಣಿನ ಶೀಲ ದೋಚುವ ಅವಳ ಬದುಕನ್ನು ಕಿತ್ತುಕೊಳ್ಳುವ ತಾಣಗಳಾಗಿ ಮಾರ್ಪಟ್ಟಿರುವುದು ಶೊಚನೀಯ ಸಂಗತಿಯಾಗಿದೆ.
“ಗಂಡ ಹೆಂಡತಿ ಜಗಳ ಬೀದಿಗೆ ಬಂತೊಮ್ಮೆ|
ಕಂಡು ನಿಂತರು ಎಲ್ಲ, ಜಾಣೊಬ್ಬ ನುಡಿದ||
ಗಂಡ ಹೆಂಡತಿ ಜಗಳ ಉಂಡು ಮಲಗುವತನಕ
ಉಂಡರೆ ಮುಗಿದೀತು, ಊಟಕಿಲ್ಲದಕೆ ಜಗಳವೋ ತಿಂಮ|”
ಈ ಚೌಪದಿಯಲ್ಲಿ ಬೀಚಿಯವರು ಸಮಾಜದಲ್ಲಿ ನಡೆಯುವ ಘಟನೆಗಳಿಗೆ ತುಂಬಾ ಸೂಕ್ಷ್ಮವಾಗಿ ಸಂವೇದಿಸುತ್ತಾರೆ. ಬಡತನಲ್ಲಿ ಹುಟ್ಟಿ ಬೆಳೆದ ಅವರಿಗೆ ಅದು ಹೊಸದಲ್ಲ. ಅದರಲ್ಲೇ ಸಂತೋಷದಿಂದ ಬಾಳಿ ಬದುಕಿದವರು. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವುದು ಸಾಮಾನ್ಯವಾದ ಗಾದೆ. ಆದರೂ ಅದು ಬಾಗಶಃ ಸತ್ಯ. ಅಂದರೆ ಒಂದು ಕುಟುಂಬವು ನೆಮ್ಮದಿಯಿಂದ ಬಾಳಲು ಕೌಟುಂಬಿಕ ಹಿನ್ನಲೆಯೂ ಕಾರಣವಾಗಿರುತ್ತದೆ. ಹಸಿವು ಮನುಷ್ಯನನ್ನು ಎಂಥ ಹೀನ ಕೆಲಸÀಕ್ಕೂ ತೊಡಗಿಸುತ್ತದೆ. ಕೌಟುಂಬಿಕ ಸುಖ ಎನ್ನುವುದು ಬದುಕಿನ ಮೂಲಭೂತ ಅಗತ್ಯವನ್ನು ಮೀರಿದ್ದು. ಇಲ್ಲಿ ಅವರು ಹೇಳುತ್ತಿರುವುದು ಜೀವಿಸಲು ಅತೀ ಮುಖ್ಯವಾಗಿ ಬೇಕಾದುದು ಆಹಾರ ಅದೇ ಅವರಿಗೆ ಇಲ್ಲದಿದ್ದಾಗ ಅದಕ್ಕಾಗಿಯೇ ಮನೆಯಲ್ಲಿ ಕಲಹ ಹಸಿವನ್ನು ಮೀರಿದ್ದು ಇನ್ನೊಂದಿಲ್ಲ. ಆ ಅಗತ್ಯ ತೀರಿದರೆ ಮುಂದಿನ ಬೇಡಿಕೆ. ನೆಮ್ಮದಿಯಿಂದ ಹೊಟ್ಟೆ ತುಂಬಿದರೆ ತೃಪ್ತ ಮನಸ್ಸು ನಿದ್ದೆಗೆ ಜಾರುತ್ತದೆ. ಅಲ್ಲಿ ಜಗಳ ಇಲ್ಲದೇ ನೆಮ್ಮದಿಯಿಂದ ಬದುಕು ಸಾಗುತ್ತದೆ ಆದರೆ, ತಿನ್ನಲು ಅನ್ನವೇ ಇಲ್ಲದಿದ್ದಾಗ ಊಟಕ್ಕಾಗಿಯೇ ಜಗಳ ಆಗುವುದು ವಿಪರ್ಯಾಸ ಸತ್ಯ. ಉಂಡು ಮಲಗುವತನಕ ಜಗಳ ಎಂದರೆ ಉಂಡರೆ ಮಲಗುವ ಅವಸರ ಉಣ್ಣಲು ಅನ್ನ ಬೇಡವೇ? ಲೇಖಕರು ಇಲ್ಲಿ ಬಡತನವನ್ನು ಒತ್ತಿ ಹೇಳುತ್ತಾ…ದಾಂಪತ್ಯ ಪಾಡು ಮತ್ತು ಬಡತನವನ್ನು ಮುಖಾ ಮಖಿಯಾಗಿಸುತ್ತಾರೆ. ಉಂಡು ಮಲಗುವುದಾದರೆ ಜಗಳ ನಿಂತೀತು, ಅದಕ್ಕಾಗಿ ಉಣ್ಣಬೇಕು, ಆ ಉಣ್ಣಲು ಇಲ್ಲದಿರುವುದಕ್ಕೆ ಈ ಜಗಳಿನ್ನು ಅದು ಮುಗಿಯುವುದೆಂತು ಮುಗಿಯಲು ಉಣ್ಣಬೇಕು. ಒಂದಕ್ಕೊಂದು ಬೆಸೆದುಕೊಂಡಿವೆ. ಊಟ ಮಾಡಲು ಆಹಾರವೇ ಇಲ್ಲದಿರೆ ಜಗಳ ನಿಲ್ಲುವುದಿಲ್ಲ, ಜಗಳ ನಿಲ್ಲಲು ಊಟ ಬೇಕು. ಬಡತನದ ಬದುಕು, ಬಡವ ಅನುಭವಿಸುವ ನೋವು ಹಸಿವಿನ ಸಂಕಟ, ಏನೆಲ್ಲಾ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಊಟ ಇಲ್ಲದ್ದಕ್ಕೆ ಜಗಳ ನಡೆಯುತ್ತಿದೆ, ಜಗಳವು ಜಗಜ್ಜಾಹಿರಾಗುತ್ತಿದೆ. ಕುಟುಂದ ಕಲಹ ಬೀದಿಗೆ ಬರಬಾರದು ಎನ್ನುವುದು ಸೂಕ್ಷö್ಮ ಆದರೆ ಅದು ಬೀದಿಯಲ್ಲೇ ಬದುಕುವ ಜನರಿಗೆ ಜಗಳಕ್ಕಾಗಿಯೇ ಮನೆ ಎಲ್ಲಿಂದ ತರುವುದು. ತಮ್ಮ ಮನೆಯಲ್ಲಿ ಕತ್ತೆ ಸತ್ತರೂ ಪಕ್ಕದವರ ತಟ್ಟೆಯ ನೊಣ ತೆಗೆಯುವ ಬುದ್ಧಿ ಮಾತ್ರ ಹೋಗುವುದಿಲ್ಲ ಜನರಿಗೆ. ಅದನ್ನು ಹೇಳುವುದು ಸಹ ಬೀಚಿಯವರ ಉದ್ಧೇಶವಾಗಿದೆ. ಇದರಿಂದ ತಿಳಿಯಬೇಕಾದುದಿಷ್ಟೆ ಸಂಸಾರ ಎಂದ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಇಂಥ ಸಣ್ಣ ಪುಟ್ಟ ಕಲಹಗಳು ಇದ್ದೇ ಇರುತ್ತವೆ. ಎಂದು ತಿಳಿದು ಜನ ಸುಮ್ಮನಿರದೇ ತಾವು ಅಲ್ಲಿ ಇಣುಕುವುದ ಸರಿಯಲ್ಲ. ಎಲ್ಲರ ಮನೆ ದೋಸೆ ತೂತೇ ಎನ್ನುವ ಮಾತು ಅವರಿಗೆ ಗೊತ್ತಿರಬೇಕು.
“ಹಿಂದೊಂದು ಕಾಲದಿ ನಮಿಸುತ್ತ ಹೊರಟೆ|
ಬಂದವರೆಲ್ಲರೂ ತಲೆಗೆ ಕಾಲಿಟ್ಟರು||
ಅಂದು ಕಾಲೆತ್ತಿದೆ ಬಾಗಿದವು ತಲೆಗಳು|
\ಒಂದು ತಿಳಿ, ದುಂಡು ಜಗತ್ತಿಗೆ ರುಂಡವಿಲ್ಲವೂ ತಿಂಮ|”
ಜಗತ್ತು ಎಂದರೆ ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ ಅದರ ಇರುವಿಕೆ. ನಮ್ಮನ್ನು ನಾವು ಹೇಗೆ ಪರಿಚಯಿಸಿಕೊಂಡಿರುತ್ತೇವೆ ಎನ್ನವುದರ ಮೇಲೆ ನಮ್ಮನ್ನು ಅದು ಉಪಚರಿಸುತ್ತದೆ, ನಾವು ಹೆದರಿ ವಿಧೇಯತೆ ತೋರಿದರೆ ತನ್ನ ಹಿಡಿತಲ್ಲಿಟ್ಟುಲೊಳ್ಳುತ್ತದೆ, ನಮ್ಮ ಬದುಕನ್ನು ತನ್ನ ಕಾಲ ಬುಡದಲ್ಲಿರಿಸಿಕೊಳ್ಳುತ್ತದೆ, ಹಾಗೆ ನಾವು ಬಲಿಷ್ಟರಾಗಿದ್ದರೆ ನಮ್ಮ ಹಿಡಿತದಲ್ಲಿ ತಾನು ಇರುತ್ತದೆ, ನಮ್ಮ ಕಾಲ ಬುಡದಲ್ಲಿದ್ದು ವಿಧೇಯತೆಯನ್ನು ತೋರುತ್ತದೆ. ಜಗತ್ತಿಗೆ ಹೀಗೆ ಇರಬೇಕೆನ್ನುವುದು ನಿಯಮವಲ್ಲ ಅದು ಅಲ್ಲಿನ ಜನತೆಯ ಬದುಕಿನ ಶೈಲಿಯ ಮೇಲೆ ಅವಲಂಬಿಸಿದೆ. ಇದೊಂದು ವಿಷವರ್ತುಲ ಎಂದೂ ನಿಲ್ಲುವುದಿಲ್ಲ ಒಬ್ಬನನ್ನು ತುಳಿಯಲು ಮತ್ತೊಬ್ಬ, ಅವನನ್ನು ತುಳಿಯಲು ಇನ್ನೊಬ್ಬ ಹೀಗೆ ಸಾಗುತ್ತಾ ಯಾವುದೂ ಸ್ಥಿರವಲ್ಲದ ಸ್ಥಿತಿಗೆ ತಲುಪುತ್ತದೆ ಎನ್ನುವ ಸಂದೇಶವನ್ನು ಬೀಚಿಯವರು ಕೊಡುತ್ತಾರೆ.
ದಾಸಕೂಟದ ರಂಗನಾಥರಾಯರು ತಮ್ಮ ಬಂಗಲೆಗೆ “ಆನಂದವಿಲ್ಲ” ಎಂದು ಹೆಸರಿಸಿದ್ದು ಸೂಕ್ತವಾಗಿದೆ. ಸರಿಯಾಗಿ ಆ ಸಮಯಕ್ಕಾಗಲೇ ತಮ್ಮ ಆ ಸ್ವಾಮಿನಿಷ್ಠೆಯ ದಾಸ್ಯದಲ್ಲಿಯ ಆನಂದಕ್ಕೆ ಕೊನೆ ಅಲ್ಲಿಗೆ ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ಹೇಗಾದರೂ ಅವರನ್ನು ಇಲ್ಲಿಂದ ಓಡಿಸುವ ಮತ್ತು ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಹೋರಾಟ ದೇಶಾದ್ಯಂತ ನಡೆಯುತ್ತಿದೆ. ಎಲ್ಲೆಡೆ ಗಾಂಧೀಜಿಯವರ ಮುಂದಾಳತ್ವದಲ್ಲಿ ಅವರ ತತ್ವಗಳನ್ನು ಆಧರಿಸಿ ಚಳುವಳಿ ಉಗ್ರ ರೂಪ ತಾಳಿದೆ. ಆಂಗ್ಲರ ಆಳ್ವಿಕೆ ಯಾವಾಗ ಕೊನೆಯಾಗುತ್ತದೆ ಗೊತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಾವು ಹಿಂದೆ ೧೨ ರೂಪಾಯಿ ವೇತನ ಪಡೆದರೂ ಸುಖ ಜೀವನ ನಡೆಸುತ್ತಿದ್ದರು. ಅಮಾಯಕ ಜನಗಳ ಬದುಕನ್ನು ಛಿದ್ರಗೊಳಿಸಿ ಸತ್ತ ದನಗಳನ್ನು ಬಿಡದೆ ಲೀಲಾವೂ ಮಾಡಿಸಿ ರಾಜ ಸತ್ತೆಯ ಖಜಾನೆಗೆ ತುಂಬುತ್ತಿದ್ದ ಕಾಲ ಇನ್ನೂ ಮರೆಯಾಗುತ್ತಿದೆ. ಆನಂದ ಖಂಡಿತ ಇಲ್ಲದಾಗುತ್ತದೆ. ತಮ್ಮ ಬಂಗಲೆಗೆ ಕೊಟ್ಟ ಹೆಸರು ಎಷ್ಟೊಂದು ಹಾಸ್ಯಾಸ್ಪದವಾಗಿದೆ.
“ಅವಶ್ಯಕತೆ ಇದ್ದರಷ್ಟೇ ಆಯಾ ವಸ್ತುವಿಗೆ ಬೆಲೆ ಇಲ್ಲದಾಗ ಅದೊಂದು ಕಸ. ಸಾಮಾನ್ಯವಾಗಿ ಅನೇಕರಿಗೆ ದೇವರು ಕೂಡ ಇಂಥದ್ದೊಂದು ಕೊಡೆ” ದೇವರು ಇದ್ದಾನೆ ಎನ್ನುವ ಆಸ್ತಿಕರ ಮುಂದೆ ದೇವರೇ ಇಲ್ಲ ಎನ್ನುವ ನಾಸ್ತಿಕನೊಬ್ಬನಿಗೆ ಪಾಠ ಕಲಿಸಬೇಕಾದರೆ ಅವನಿಗೆ ಪರಿಸ್ಥಿತಿಯನ್ನು ಅರ್ಥೈಸಬೇಕು ಅದು ಅವನ ಲೈಂಗಿಕ ಬಯಕೆಯನ್ನು ಅದರೊಂದಿಗೆ ಬೆಸೆದು .ಅದಕ್ಕೆ ಪೂರಕವಾಗಿ ಅದನ್ನು ಸಾಧಿಸಿ ತೋರಿ.ಸಿ. ನೋಡು, ಇದೇ ದೇವರು ನಿನ್ನ ಮನೋ ಕಾಮನೆಗಳನ್ನು ಈಡೇರಿಸಿದವನು ಎಂದು ದೇವಸ್ಥಾನದಲ್ಲಿ ನಿಂತು ಲೈಂಗಿಕ ಅತೃಪ್ತನೊಬ್ಬನಿಗೆ ದೇವರಿದ್ದಾನೆ ಎಂದು ತೋರಿಸುವುದು ವಿಡಂಬನಾತ್ಮಕವಾಗಿದೆ. ಲೇಖಕರದು ಇಧೆ ವಾದ “ಅವರನ್ನು ಯಾರಾದರೂ ವೇವರಿದ್ದಾನೆಯೇ ಎಂದರೆ ಇದ್ದಾನೆ, ಇಲ್ಲವೇ ಎಂದರೆ ಇಲ್ಲ” ಎನ್ನುತ್ತಾರೆ. ಅಂದರೆ ದೇವರ ಬಗೆಗೆ ತಮಗಿರುವ ಕಲ್ಪನೆಯೂ ಕೊಡೆಯಂತೆಯೆ ಅಗತ್ಯವಿದ್ದಾಗ ಅದನ್ನು ಬಳಸಿಕೊಂಡು ಅಗತ್ಯವಿಲ್ಲದಿದ್ದಾಗ ಮೂಲೆ ಸೇರಿಸುವುದು. ದೇವರು ಅಷ್ಟೇ! ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಾನೆ ಅಗತ್ಯ ಇಲ್ಲದಾಗ ಮೂಲೆ ಸೇರುತ್ತಾನೆ.
“ನಮಗೆ ಬೇಡವಾದುದನ್ನೆಲ್ಲ ಕರ್ಮದ ತಲೆಗೆ ಕಟ್ಟುವುದು ಸುಲಭ”ತಂದೆ ತಾಯಿಗಳು ಆಸ್ತಿಕರಾಗಿದ್ದರೂ, ಮಹಾನ್ ದೈವ ಭಕ್ತರಾಗಿದ್ದಾಗಲೂ ಮಗ ನಾಸ್ತಿಕನಾದರೆ ಅದು ಅವನ ಪೂರ್ವಾರ್ಜಿತ ಕರ್ಮ ಎಂದು ಅಂದುಕೊಂಡು ತಂದೆ ತಾಯಿ ಅವನನ್ನು ಅವನ ಪಾಡಿಗೆ ಬಿಟ್ಟು ತಾವು ಅವನ್ನು ಕರ್ಮ ಫಲ ಎಂದು ಹೇಳುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಯಾವುದು ಮನುಷ್ಯನ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವುದಿಲ್ಲ. ಅದು ಅವನು ರೂಢಿಸಿಕೊಂಡದ್ದಾಗಿರುತ್ತದೆ. ಸಾಧ್ಯವಾದರೆ ಹಿರಿಯರು ಅವನ ಮನೋಭಾವಗಳನ್ನು ಬದಲಾಯಿಸಬಹುದು. ಅವನನ್ನು ತಿದ್ದಲಾಗದೆ ಅವನ ಇಚ್ಛೆಯಂತೆ ಅವನನ್ನು ಬೆಳೆಯಲು ಬಿಟ್ಟು ಬಿಡುವುದು ತಮ್ಮ ಬೇಜವಾದ್ಬಾರಿ ಆಗಿದೆ.
ಚಳುವಳಿಯನ್ನು ಮುನ್ನಡೆಸುವ ನೇತಾರನ ಅನುಪಸ್ಥಿತಿಯಲ್ಲಿ ಎಂತಹ ನಿರ್ಧಾರಗಳನ್ನು ಬೇಕಾದರೂ ತೆಗೆದುಕೊಳ್ಳಬಹುದು. ಅಂತೆಯೇ ೧೯೪೨ ಆಗಸ್ಟ್ ೮ರಂದು ಗಾಂಧೀಜಿಯವರನ್ನು ಬಂಧಿಸುವ ಮೂಲಕ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪಾಪದ ಕೊಡ ತುಂಬಿತ್ತು. ಹಾಗೆ ತುಂಬುವುದಕ್ಕೆ ಮೂರು ಶತಮಾನಗಳು ಬೇಕಾದವು ೪೨ ರಲ್ಲಿ ಪೂರ್ತಿ ತುಂಬಿ ತುಳುಕಿ ಹೊರ ಚೆಲ್ಲಿತ್ತು ಎನ್ನುವುದು ಪರಿಸ್ಥಿತಿಯನ್ನು ಹೇಳುತ್ತದೆ. ಯಾವಾಗ ಗಾಂಧೀಜಿಯವರನ್ನು ಬ್ರಿಟಿಷ್ ಸರ್ಕಾರ ಬಂಧಿಸುತ್ತೋ ಅಂದಿನಿಂದ ಬ್ರಟೀಷ್ ಸಾಮ್ರಾಜ್ಯ ವಿನಾಶದ ಹಾದಿಯನ್ನು ಹಿಡಿಯಿತು.
ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅರಿತು ಅರಿಯದೆಯೋ ಅವರಿಗೆ ಬೆಂಬಲ ನೀಡುತ್ತಾ, ನಮ್ಮೆಲ್ಲ ಗುಪ್ತ ಚಟುವಟಿಕೆಗಳನ್ನು ಅವರಿಗೆ ತಿಳಿಸುತ್ತಾ ಅಮಾಯಕರ ಕತ್ತು ಕೊಯ್ಯುವವರು ಇವರು. ಪೊಲೀಸ್ ಇಲಾಖೆಯಲ್ಲಿದ್ದ ಭಾರತೀಯರು ಇಲ್ಲಿನ ಆಸ್ತಿ ನಾಶ ಮಾಡುವುದರ ಜೊತೆಗೆ ಹೆಣ್ಣು ಮಕ್ಕಳ ಸೆರಗಿಗೆ ಕೈ ಹಾಕಿ ಹೆಣ್ಣು ಮಕ್ಕಳಿಂದಲೇ ಬಂಧನಕ್ಕೆ ಒಳಗಾದವರೂ ಇದ್ದಾರೆ. ಅವರು ಹಾಕುವ ಎಂಜಲಿಗೆ ಕೈಯೊಡ್ಡಿ ಮನೆ ಹೆಣ್ಣು ಮಕ್ಕಳ ಗೌರವವನ್ನು ಕಾಪಾಡಬೇಕಾದವರು ತಾವೇ ಸ್ವತಃ ಅವರನ್ನು ಹಾಳು ಮಾಡುತ್ತೇನೆ ಎನ್ನುವ ಅತಿ ಕಾಮುಕಥನವನ್ನು ಬಗ್ಗು ಬಡಿಯದವರು ಇದ್ದಾರೆ.
ಆಟೋ ಒಂದು ಸಾಮಾಜಿಕ ಕಾದಂಬರಿ. ಇದು ಗಂಡಿನ ದಿಲ್ದಾರ್ತನವನ್ನು, ಹೆಣ್ಣಿನ ಅಸಹಾಯಕತೆಯನ್ನು ಬಳಸಿಕೊಳ್ಳುವ ಪ್ರತಿಷ್ಠಿತ ವರ್ಗದ ಗಂಡಿನ ದರ್ಪವನ್ನು, ಜಾತಿ, ಧರ್ಮ, ಅಂತಸ್ತುಗಳ ಹಂಗಿಲ್ಲದೆ ಚಲಿಸುವ ಆಟೋ ನಮ್ಮನ್ನು ಕುಳ್ಳಿರಿಸಿಕೊಂಡು ಎಲ್ಲವನ್ನು ಪರಿಚಯಿಸುತ್ತಿದೆ. ಮಗು ಮಲಗಿದ್ದ ತೊಟ್ಟಿಲ ಕಡೆ ಕಣ್ಣು ಹೊರಳಿಸಿ, ಕಡೆಯ ಬಾರಿ ಕಣ್ಣು ಮುಚ್ಚಿದ ನಂಜಯ್ಯ ಅಂದೇ ಸಿದ್ದಮ್ಮ ಗಾಡಿ ಗೌಸ್ ಮೀಯಾನ ಮಗಳಾದಳು (ಪುಟ ಮೂರು ಆಟೋ)ಒಂದು ಹೆಣ್ಣು ತಾನು ಹೆಣ್ಣು ಹೆತ್ತೇ ಎನ್ನುವ ಕಾರಣಕ್ಕಾಗಿಯೇ ಅಳಲಾರಳು ಹೆಣ್ಣು ಹೆತ್ತರೆ ತನ್ನ ಹೆತ್ತಮ್ಮನೆ ತನ್ನ ಹೊಟ್ಟೆಯಲ್ಲಿ ಮಗಳಾಗಿ ಹುಟ್ಟಿ ಬಂದಿರುವಳೆಂದು ಸಂಭ್ರಮಿಸುವವಳು ಅವಳು ಆ ಕ್ಷಣದ ಸಂತಸವನ್ನು ನೋಡಲು ಭೂಮಿಯ ಮೇಲೆ ತಾಯಿ ಇರಬೇಕಿತ್ತು ಎನ್ನುವ ಸಂಕಟ ಅವಳನ್ನು ಭಾದಿಸುತ್ತದೆ. ತನ್ನೆಲ್ಲ ಸುಖ ಸಂತಸಗಳಿಗೆ ಕಾರಣಳಾದ ತಾಯಿ ತನ್ನೊಂದಿಗಿಲ್ಲ ಎನ್ನುವ ನೋವು ಪ್ರತಿ ಸಂತಸದ ಗಳಿಗೆಯಲ್ಲಿ ಹೆಣ್ಣನ್ನು ಕಾಡುತ್ತದೆ.
ಲೋಕದ ರೀತಿಯೇ ಹೀಗೆ ಕಾಲಿನಿಂದ ಒದೆಯುವವನನ್ನು ಕಂಡು ಕೈ ಮುಗಿಯುತ್ತದೆ ಕೈ ಮುಗಿಯುವನ ತಲೆಯ ಮೇಲೆ ಕಾಲಿಡುತ್ತಾ ನಡೆಯುತ್ತದೆ ಹೌದು ಮನುಷ್ಯ ಯಾವುದರಿಂದಲಾದರೂ ಅವನು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾನೆ ಎಂದರೆ ಅದು ಅಧಿಕಾರದಿಂದ ಎಂದರAತೂ ಮುಗಿಯಿತು ಅಧಿಕಾರದ ಗರ್ಭದಿಂದ ತನಗಿಂತ ಕೆಳಗಿನವರನ್ನು ಕಾಲಡಿಯಲ್ಲಿ ಹಾಕಿ ತುಳಿದೆ ಬಿಡುವಂತೆ ನಡೆದುಕೊಳ್ಳುತ್ತಾನೆ ಸಾಮಾಜಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಯಾವುದರಿಂದಲಾದರೂ ಹಿಂದುಳಿದವರು ಮೇಲಿನವರ ಕೃಪೆಗೆ ಪಾತ್ರರಾಗಲು ಕೈ ಕಾಲು ಹಿಡಿಯುವುದನ್ನು ಕಾಣುತ್ತೇವೆ ಮೇಲಿನವನು ತಮ್ಮ ಮೇಲೆ ದಯೆ ತೋರಲಿ ಎಂದು ನಿರೀಕ್ಷೆ ಮಾಡುತ್ತಾರೆ ಯಾವಾಗ ಕೈ ಮುಗಿದು ತಲೆ ಬಾಗುತ್ತಾರೆ ಆಗ ಅವರನ್ನು ತಮ್ಮ ಅಧಿಕಾರದ ಅಳತೆಯಲ್ಲಿ ಶೋಷಿಸುತ್ತ ನಡೆಯುತ್ತಾರೆ
ಬಾಲ್ಯ ವಿವಾಹ ಒಂದು ಕಡೆ ಹೆಣ್ಣು ಮಕ್ಕಳು ಬೇಗ ವೈಧವ್ಯಕ್ಕೆ ಬರಲು ನೇರ ಕಾರಣ ಈ ಬಾಲ್ಯ ವಿವಾಹವೇ ಆಗಿದೆ.. ಬಾಲ್ಯ ವಿವಾಹ ವಿಧವಾ ಸಮಸ್ಯೆಗೆ ನೇರ ಕಾರಣವಾಗಿದೆ. ಹೆಣ್ಣು ಮಕ್ಕಳಿಗೆ ಅಪ್ರಾಪ್ತ ವಯಸ್ಸಿಗೆ ಮದುವೆ ಮಾಡುವುದು, ಹೆಣ್ಣು ಮಗುವಾಗಿದ್ದಾಲೇ ಅಂದರೆ ಅವ:ಇಗೆ ಕೇವಲ ೮/೧೦ ವಯಸ್ಸಿಗೆ ೪೦/೫೦ ವಯಸ್ಸನ ಗಂಡಸಿನೊಡನೆ ಮುವೆ ಮಾಡಿದರೆ ಅವಳು ಪ್ರಾಪ್ತ ವಯಸ್ಸಿಗೆ ಬರುವ ಹೊತ್ತಿಗಾಗಲೇ ಗಂಡ ವಯೋವೃದ್ಧನಾಗುತ್ತಾನೆ ಅಥವಾ ಮರಣಿಸುವ ಸಾಧ್ಯತೆಗಳು ಇವೆ. ಆಗ ಅವಳು ಬಾಲ ವಿಧವೆ ಆಗುತ್ತಾಳೆ ಅಥವಾ ವಯಸ್ಕಳು ಆಗಬಹುದು.ಇಂಥಹ ಸಂದರ್ಭದಲ್ಲಿ ಅವಳ ಬದುಕು ನಿಜಕ್ಕೂ ದಾರುಣ. ವಿಧವೆಯಾದಳೆಂದರೆ ಸಾಂಪ್ರದಾಯಿಕ ಕುಟುಂಬಗಳಲ್ಲಿ ಎಲ್ಲವೂ ಮುಗಿದಂತೆ ಹಿಂದೆ ಚರ್ಚಿಸಿದಂತೆ ಅವಳು ಕತ್ತಲೆ ಕೋಣೆಗೆ ಸೀಮಿತ.ಇದು ಹೆಣ್ಣಿಗೆ ಸಮಾಜ ಯಾವ ಕಾಲಕ್ಕೂ ವಿಧಿಸುವ ಶಿಕ್ಷೆಯೇ ಸರಿ.
ಇದು ಕೆಳ ವರ್ಗದ ಹೆಣ್ಣು ಮಕ್ಕಳಲ್ಲಿ ಕಾಣದಿರುವುದಕ್ಕೆ ಹಲವು ಕಾರಣಗಳಿರಬಹುದು. ಆರ್ಥಿಕ ಸಾಮಾಜಿಕ, ಕೌಟುಂಬಿಕ ಹೀಗೆ, ಆರ್ಥಿಕತೆ ಅವಳು ಈ ಸಂಪ್ರದಾಯಕ್ಕೆ ಒಳಗಾಗಿ ದುಡಿಯದೇ ಮೂಲೆ ಹಿಡಿದು ಕುಳಿತುಕೊಳ್ಳುವ ಯಾವ ಸಂಪ್ರದಾಯ, ನಿಯಮ ಯಾವುದು ಇಲ್ಲ. ಕಾರಣ ಇಷ್ಟೆ ಕುಟುಂಬದ ಜವಾಬ್ಧಾರಿ ಹೊತ್ತ ಹೆಣ್ಣು ಬಿಳಿಸೀರೆ ಉಟ್ಟು, ಲತೆ ಬೋಳಿಸಿಕೊಂಡು ಕುಳಿತರೆ ಅವಳಿಗೆ ಜೀವನ ನಡೆಸಲು ಏಕಾದ ಹಣಕಾಸಿನ ಸಹಾಯ ಮಾಡುವವರಿಲ್ಲ. ಅವಳು ತನ್ನ ದುಡಿಮೆಯನ್ನು ನಂಬಿ ಬದುಕುವವಳು. ದುಡಿಯದೇ ಅವಳಿಗೆ ಬೇರೆ ಅವಕಾಶಗಳಿಲ್ಲ..ಆದ್ದರಿಂದ ಇದು ಆರ್ಥಿಕವಾಗಿ ಮೇಲ್ಮಟ್ಟದ ಬದುಕನ್ನು ಕಟ್ಟಿಕೊಂಡ ವೈದಿಕರಲ್ಲಿ ಹೆಚ್ಚಾಗಿದೆ. ವೈದಿಕ ಸಮುದಾಯದಿಂದ ಬಂದ ಕಾದಂರಿಯ ನಾಯಕ ಉಮೇಶನಿಗೆ ಹೆಣ್ಣಿನನ ಈ ಎಲ್ಲಾ ಭವಣೆಗಳು ತೀರಾ ಪರಿಚಿತ ಆದ್ದರಿಂದ ಅವನಿಗೆ ವಿಧವೆಯರನ್ನು ಆ ಸಂಕಷ್ಟದಿಂದ ಪಾರು ಮಾಡಲು ಅವರಿಗೆ ಪುನಃ ವಿವಾಹ ಮಾಡಿಸಿ ಅವರು ಸಮಾಜದಲ್ಲಿ ಇತರರಂತೆ ಬದುಕಲಿ ಎನ್ನುವುದು ಅವರಿಗೂ ಸಾಮಾಜಿಕ ಸ್ಥಾನ ಮಾನ ಸಿಗಲಿ ಎನ್ನುವುದು ಅವನ ಮನೋ ನಿಲುವು.
ಸಮಾಜ ವೈವಾಹಿಕ ಸಂಬಂಧವನ್ನು ಒಪ್ಪಿಕೊಳ್ಳುತ್ತದೆ ಆದರೆ ಅದರಿಂದಾಗುವ ಅನಾಹುತ ಎಂತಹದ್ದು ಎಂಬುದರ ಅರಿವಿರುವುದಿಲ್ಲ. ದಾಸಕೂಟದ ರಾಯರು ಮದುವೆಯಾದದ್ದು ತಮ್ಮ ಇಳಿ ವಯಸ್ಸಿನಲ್ಲಿ. ಕೇವಲ ದೇಹದ ವಾಂಛೆÀಗಾಗಿ ಅದು ಎಷ್ಟು ದಿವಸ ಇರಲು ಸಾಧ್ಯ. ಆದರೆ ಅಲ್ಲಿ ಬಲಿಯಾಗುತ್ತಿರುವುದು ಚಿಕ್ಕ ಮಗು. ಕೇವಲ ಹತ್ತು ವರ್ಷದ ಹಸುಳೆ, ಕಾವೇರಿಯನ್ನು. ಅವಳಿಗೆ ಬಾಲ್ಯದ ಮುಗ್ಧತೆಯ ಹೊರತಾಗಿ ಬೇರೇನು ತಿಳಿಯದು ಬದುಕಿನ ಅರಿವಿಲ್ಲ. ಭವಿಷ್ಯದ ಕಲ್ಪನೆ ಇಲ್ಲ. ಮದುವೆ ಎನ್ನುವುದು ಆಟ ಎಂದು ತಿಳಿಯುವ ವಯಸ್ಸಿನ ಹೆಣ್ಣು ಮಗುವಿನ ಬದುಕನ್ನು ವೈಧವ್ಯಕ್ಕೆ ತಳ್ಳುವ ಸಮಾರಂಭದAತೆ ಮದುವೆಯ ಚಪ್ಪರ ಬಾಸವಾಗುತ್ತದೆ. ಕಾವೇರಿ ಇನ್ನೂ ಮಗು ಅವಳಿಗೆ ಸಂಸಾರ ಎಂದರೆ ಏನು ಎನ್ನುವ ಅರಿವಿಲ್ಲ ರಂಗರಾಯರದ್ದು ವಿಲಾಸಿ ಬದುಕು. ಕೈ ತುಂಬಾ ಹಣವಿರುವಾಗ ಸುಲಭವಾಗಿ ಎಲ್ಲವೂ ಸಿಗುವಾಗ ಅನುಭವಿಸದೇ ಇರಲು ಸಧ್ಯವಾಗದು..
ಲೈಂಗಿಕ ಕಾಮನೆಗಳು ತುಂಬಾ ಕಟ್ಟು ಪಾಡಿಗೆ ಒಳಗಾದಾಗ ಅದನ್ನು ಮೀರಲು ಒಂದು ಸಣ್ಣ ಅವಕಾಶ ಏನೆಲ್ಲಾ ವಿಕಾರಗಳನ್ನು ತಾಳುತ್ತದೆ. ಸಂಪನ್ನರಿದ್ದಾರೆ ಎಚ್ಚರಿಕೆ ಎನ್ನುವ ಕೃತಿಯು ಇಂತಹ ಹಲವು ವಿಕಾರಗಳನ್ನು ಕಾಣಿಸುವ ಕೃತಿಯಾಗಿದೆ. ಸಂಪನ್ನರು ಎಲ್ಲಿಯವರೆಗೆ ಎಂದರೆ ಒಂದು ಚೌಕಟ್ಟಿನಲ್ಲಿ ಬದುಕು ಸಾಗುತ್ತಿದ್ದಾಗ ಅದು ಕುಟುಂಬ ಎನ್ನುವ ಚೌಕಟ್ಟು ಆದರೆ ಕುಟುಂಬದ ಕಟ್ಟುಪಾಡುಗಳಿಗೆ ನಿಬಂಧಗಳಿಗೆ ಅನುಗುಣವಾದ ಬದುಕು ನಡೆಯುತ್ತಿರುತ್ತದೆ ಮನೆಯಲ್ಲಿ ಪಾಲಿಸಿಕೊಂಡ ಬಂದ ಸಾಂಪ್ರದಾಯಗಳ ಅಡಿಯಲ್ಲಿ ಸಾಗುವ ವ್ಯಕ್ತಿ ತನ್ನೆಲ್ಲ ಆಸೆ ಬಯಕೆಗಳನ್ನು ಆ ಕುಟುಂಬದ ಎಲ್ಲಿಗೆ ಸೀಮಿತಗೊಳಿಸಿಕೊಂಡಿರುತ್ತಾನೆ. ಅದನ್ನು ಮೀರಲಾರ ಆದರೆ ಮೀರುವ ಅವಕಾಶ ತಾನಾಗಿ ಒದಗಿ ಬಂದರೆ ತಾನು ಅದುವರೆಗೂ ಹಿಡಿದಿಟ್ಟುಕೊಂಡಿರುವ ದೈಹಿಕ ಲೈಂಗಿಕ ಕಾಮನೆಗಳು ತನಗೆ ಅರಿವಿಲ್ಲದಂತೆ ಹರಿಯುತ್ತವೆ. ಮಗ ತಂದೆಯ ಕಟ್ಟುಪಾಡುಗಳು ಅಥವಾ ಕುಟುಂಬದಲ್ಲಿ ಅವರು ಪಾಲಿಸುವ ನಿಯಮಗಳಲ್ಲಿ ಬದುಕುವುದೇ ಹೆಚ್ಚು. ಯಾವಾಗ ತಂದೆ ಆ ನಿಯಮಗಳನ್ನು ತನ್ನ ದೈಹಿಕ ಕಾಮನೆಗಳಿಗಾಗಿ ಕುಟುಂಬದ ನಿಯಮಗಳನ್ನು ಮೀರಿದ್ದಾನೆ ಎಂದು ಗೊತ್ತಾದರೆ ಮಗ ಆ ಕ್ಷಣಕ್ಕೆ ಆಶ್ಚರ್ಯ ಚಿಕಿತನಾದರೂ ಅಪ್ಪನ ದಾರಿಯಲ್ಲಿ ನಡೆಯುವ ಸಾಧ್ಯವಾದರೆ ಅಪ್ಪನನ್ನು ಮೀರಿಸುವ ಮಕ್ಕಳು ಇದ್ದಾರೆ.
ಭಾರತೀಯ ಸಮಾಜದಲ್ಲಿ ಹೆಣ್ಣಿನ ಸ್ಥಿತಿಗತಿಯನ್ನು ಅವಲೋಕಿಸಿದರೆ ಅವಳು ಹುಟ್ಟಿದಂದಿನಿಂದ ಹಿಡಿದು ಅವಳ ಪ್ರತಿ ಹಂತದ ಬದುಕು ಅವಳನ್ನು ಭಿನ್ನವಾಗಿ ರೂಪಿಸುತ್ತದೆ. ಮುಖ್ಯವಾಗಿ ಮದುವೆ ಎನ್ನುವ ಘಟ್ಟ. ಅದು ಆಕೆಯನ್ನು ಸಂಪೂರ್ಣ ಬದಲಿಸಿ ಬಿಡುತ್ತದೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎನ್ನುವಂತೆ ಮದುವೆಯಾದ ನಂತರ ಹೆಣ್ಣು ಮಕ್ಕಳು ತವರನ್ನು ತೊರೆದು ಗಂಡನ ಮನೆ ಸೇರಲೇಬೇಕಾದ ಅನಿವಾರ್ಯತೆ ಇದೆ (ಇವತ್ತಿಗೆ ಇದು ಬದಲಾಗಿದೆ). ಹಾಗೆ ತವರಿನಿಂದ ಹೊರಟ ಹೆಣ್ಣುಮಗಳು ಗಂಡನ ಮನೆಯ ಪರಿಸರಕ್ಕೆ ಹೊಂದಿಕೊಳ್ಳಲೇಬೇಕು. ತವರಿನಲ್ಲಿ ಅನುಭವಿಸಿದ ಎಲ್ಲಾ ಸುಖವನ್ನು ಮರೆತು ಬದುಕಲೇಬೇಕು; ಗಂಡನ ಮನೆಯು ಆಕೆಯ ಬದುಕಿನ ಕಾರ್ಯ ಸ್ಥಾನ ಅಲ್ಲಿನ ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕು. ಮುದ್ದಿನಿಂದ ಬೆಳೆದ ತವರನ್ನು ಮರೆತು ಗಾಣದೆತ್ತಿನಂತೆ ಇಡೀ ದಿನ ದುಡಿಯುತ್ತಿರುವುದೇ, ಆದರೆ ಅದೆಲ್ಲದರ ನಡುವೆ ಅವಳದೊಂದು ನಿರೀಕ್ಷೆ ತಾನು ಯಾರಿಗಾಗಿ ಆ ಮನೆಯನ್ನು ಸೇರಿರುವಳು ಅವರ ಒಂದು ಪ್ರೀತಿಗಾಗಿ ಹಾತೊರೆಯುವುದು, ಅದನ್ನೇ ತನ್ನ ಬದುಕಿಗೆ ನೆಮ್ಮದಿಗೆ ಬೆಳಕು ಎಂದುಕೊAಡು ಬದುಕಿ ಬಿಡುತ್ತಾಳೆ. ಆದರೆ ತುಂಬಾ ಕುಟುಂಬಗಳಲ್ಲಿ ಈ ತರಹದ ಸನ್ನಿವೇಶ ಇರುವುದೇ ಇಲ್ಲ. ಬಂದ ಸೊಸೆಯನ್ನು ತಮ್ಮ ಮನೆಯ ದಾಸಿಯಂತೆ ಕಾಣುವ ಕಾಲವೊಂದು ಇತ್ತು. ಮನೆಯ ಮಂದಿಯ ಆಗುಹೋಗುಗಳನ್ನು ಗಮನಿಸಿಕೊಂಡು ಹೊಸ್ತಿಲ ಒಳಗೆ ಬದುಕುವುದು ಹೆಣ್ಣಿನ ಜೀವನವಾಗಿತ್ತು ಇಂದಿಗೂ ಇದು ಅಲ್ಲಲ್ಲಿ ಕಂಡುಬರುವ ದೃಶ್ಯವೇ ಆಗಿದೆ. ಇಲ್ಲಿ ಕಾವೇರಿ ಬಾಲ್ಯದಲ್ಲಿಯೇ ಮುದುಕನನ್ನು ಮದುವೆಯಾಗಿ ಬಂದವಳು, ತಂದೆ ಕುಲಕರ್ಣಿ ದುಡ್ಡಿನ ಆಸೆಗಾಗಿ ತನಗಿಂತಲೂ ಹಿರಿ ವಯಸ್ಸಿನ ರಂಗರಾಯರಿಗೆ ಮದುವೆ ಮಾಡಿಕೊಟ್ಟು ಕೈ ತೊಳೆದುಕೊಂಡಿದ್ದಾನೆ. ಇತ್ತ ವೃದ್ಧನ ಕೈಹಿಡಿದ ಬಾಲೆ ಯೌವ್ವನಕ್ಕೆ ಬರುವ ವಯಸ್ಸಿಗೆ, ವಯಸ್ಸಿಗೆ ಮೀರಿದ ವೃದ್ಯಾಪ್ಯಕ್ಕೆ ಕಾಲಿಡುತ್ತಿದ್ದಾಳೆ.
ಸ್ವಾತಂತ್ರö್ಯ ಚಳವಳಿಯಲ್ಲಿ ದೇಶ ಭಕ್ತರು, ರಾಜ ನಿಷ್ಟರು ಎನ್ನುವ ಎರಡು ರೀತಿಯ ಪಂಗಡಗಳು ಇದ್ದುದನ್ನು ಕಾಣುತ್ತೇವೆ. ಚಳವಳಿಯಲ್ಲಿ ಭಾಷಣಗಳನ್ನು ಮಾಡಿಕೊಂಡು, ಕೂಗಾಡಿಕೊಂಡು, ಧ್ವನಿ ವರ್ಧಕಗಳ ಜೈಕಾರಗಳು ಹೂವಿನ ಹಾರಗಳು, ಭಾಷಣಗಳಲ್ಲಿ ವಿದ್ಯಾರ್ಥಿನಿಯರ ಕರ ತಾಡನವನ್ನು ಕಂಡಿದ್ದ ಉಮೇಶನಂತಹ ಯುವಕರು ಜೈಲಿನಲ್ಲಿ ಅದಾವುದರ ಗಲಾಟೆ ಇಲ್ಲದೇ ಸತ್ಯಾಗ್ರಹಿಗಳಿಗೆ ಸಪ್ಪೆ ಎನಿಸಿತು. “ನಿಜವಾದ ಸತ್ಯಾಗ್ರಹ, ಹೋರಾಟ, ಚಳವಳಿ ಎಂದರೆ ಇದೆ ಎನ್ನುವುದು ಅರಿವಾಗುತ್ತಿದೆ. ವಯಸ್ಸಿನಲ್ಲಿ ಕಾಲೇಜು ದಿನಗಳಲ್ಲಿನ ಹೋರಾಟ ಎಲ್ಲವೂ ಹೆಮ್ಮೆಯ ಹುಚ್ಚು ಬಾಳು” ತ್ಯಾಗವಿರುವುದು ಇಲ್ಲಿಯೇ ಎಂದು ಕುಳಿತಲ್ಲಿಯೇ ಆದರ್ಶದ ಒಳಿತಿಗಾಗಿ ಹುಡುಕಾಡುತ್ತಾರೆ ಯುವಕರು
ತಾವು ಮಾಡುವ ಭಾವಾವೇಷದ ಭಾಷಣಗಳು, ಧ್ವನಿವರ್ಧಕಗಳ ಕೂಗಾಟ ಇವೇ ದೇಶಪ್ರೇಮ ಎಂದುಕೊAಡಿರದ್ದ ಯುವ ಜನಾಂಗಕ್ಕೆ ನಿಜವಾದ ದೇಶಪ್ರೇಮ ಎನ್ನುವುದು ತ್ಯಾಗದಲ್ಲಿದೆ ಎನ್ನುವುದು ತಿಳಿಯಬೇಕಾದರೆ ನಿಜವಾದ ಹೋರಾಟಕ್ಕೆ ಇಳಿಯಬೇಕು, ಗಾಂಧೀಜಿಯವರಂತೆ ಸತ್ಯಾಗ್ರಹ ಮಾಡಬೇಕು ಎನ್ನುವುದು ಅವರಿಗೆ ಅರಿವಾಗುತ್ತದೆ. ನಾವು ಚಳವಳಿ ಮಾಡುತ್ತೇವೆ ಎನ್ನುವವರಿಗೆ ಗಾಂಧಿಜೀಯವರ ಸತ್ಯಾಗ್ರಹ ಮಾದರಿಯಾಗಿ, ಗಾಂಧಿ ತತ್ವಗಳು ಅವರ ಧ್ಯೇಯಗಳು, ಯುವ ಜನಾಂಗದ ನಿಜವಾದ ಧ್ಯೇಯಗಳಾಗಿವೆ. ಗಾಂಧಿಜಿಯವರ ಹೆಸರು ಎಲ್ಲಿಯೂ ಬಾರದೇ ಇದ್ದರು ಅವರ ತತ್ವಗಳು ಇಲ್ಲಿ ಎಲ್ಲರಲ್ಲೂ ಜಾಗೃತವಾಗಿವೆ. ಭಾರತದಲ್ಲೆ ಬದುಕುತ್ತಾ ಬ್ರಿಟೀಷರ ಪರ ಧೋರಣೆಗಳನ್ನು ರೂಪಿಸಿಕೊಂಡವನಿಗೆ ಗಾಂಧಿಜೀಯವರ ತತ್ವಗಳು, ಅವರ ಧ್ಯೇಯಗಳು ಅವರು ಧರಿಸುತ್ತಿದ್ದ ಟೊಪ್ಪಿಗೆ, ಕೊನೆಗೆ “ಗಾಂಧಿ” ಎನ್ನುವ ಹೆಸರು ವಿಡಂಬನೆಗೆ ಗುರಿಯಾಗುತ್ತದೆ.
ಡಾ. ಭಾರತಿ ಮೂಲಿಮನಿ




