ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೭

ನಿಗಮದಲ್ಲಿ ಹಿಂದಿ

ಭಾರತೀಯ ಜೀವವಿಮಾ ನಿಗಮ (LIC) ಒಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಭಾರತ ಸರ್ಕಾರದ ರಾಜಭಾಷಾ ನೀತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದೆ. ಎಲ್‌ಐಸಿ ಕಚೇರಿಗಳಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
​1. ಹಿಂದಿ ಪಕ್ಷಾಚರಣೆ (Hindi Pakhwada/Fortnight)
​ಪ್ರತಿ ವರ್ಷ ಸೆಪ್ಟೆಂಬರ್ 14ರ (ಹಿಂದಿ ದಿವಸ್) ಅಂಗವಾಗಿ ಎರಡು ವಾರಗಳ ಕಾಲ ‘ಹಿಂದಿ ಪಖವಾಡ’ವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ನೌಕರರಿಗೆ ವಿವಿಧ ವಿಷಯಗಳ ಮೇಲೆ ಹಿಂದಿಯಲ್ಲಿ ಬರೆಯಲು ಮತ್ತು ಮಾತನಾಡಲು ಅವಕಾಶ ನೀಡಲಾಗುತ್ತದೆ.
​ರಸಪ್ರಶ್ನೆ (Quiz): ಹಿಂದಿ ಭಾಷೆ ಮತ್ತು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆಗಳು.
​2. ಹಿಂದಿ ಕಾರ್ಯಾಗಾರಗಳು (Hindi Workshops)
​ಸಿಬ್ಬಂದಿಗೆ ದೈನಂದಿನ ಕಚೇರಿ ಕೆಲಸಗಳಲ್ಲಿ ಹಿಂದಿಯನ್ನು ಸುಲಭವಾಗಿ ಬಳಸಲು ತರಬೇತಿ ನೀಡಲಾಗುತ್ತದೆ.
​ಕೈಪಿಡಿಗಳ ಬಳಕೆ: ಕಚೇರಿ ಪತ್ರವ್ಯವಹಾರ ಮತ್ತು ಟಿಪ್ಪಣಿಗಳನ್ನು (Noting and Drafting) ಹಿಂದಿಯಲ್ಲಿ ಹೇಗೆ ಬರೆಯಬೇಕೆಂದು ಕಲಿಸಲಾಗುತ್ತದೆ.
​ತಾಂತ್ರಿಕ ತರಬೇತಿ: ಕಂಪ್ಯೂಟರ್‌ಗಳಲ್ಲಿ ಹಿಂದಿ ಟೈಪಿಂಗ್ ಮತ್ತು ಸಾಫ್ಟ್‌ವೇರ್ ಬಳಕೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ.
​3. ಉತ್ತೇಜಕ ಯೋಜನೆಗಳು ಮತ್ತು ಪ್ರಶಸ್ತಿಗಳು
​ಹಿಂದಿ ಬಳಕೆಯನ್ನು ಪ್ರೋತ್ಸಾಹಿಸಲು ಎಲ್‌ಐಸಿ ಹಲವಾರು ಬಹುಮಾನ ಯೋಜನೆಗಳನ್ನು ಹೊಂದಿದೆ:
​ನಗದು ಪ್ರಶಸ್ತಿ: ವರ್ಷ ಪೂರ್ತಿ ತಮ್ಮ ಕೆಲಸದಲ್ಲಿ ನಿಗದಿತ ಪ್ರಮಾಣದಷ್ಟು ಹಿಂದಿ ಬಳಸುವ ನೌಕರರಿಗೆ ನಗದು ಬಹುಮಾನ ನೀಡಲಾಗುತ್ತದೆ.
​ಚಲಿಸುವ ಪಾರಿತೋಷಕ (Rolling Trophy): ಅತಿ ಹೆಚ್ಚು ಹಿಂದಿ ಕೆಲಸ ಮಾಡುವ ವಿಭಾಗಗಳಿಗೆ ಅಥವಾ ಕಚೇರಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
​4. ಪ್ರಕಟಣೆಗಳು ಮತ್ತು ಮ್ಯಾಗಜೀನ್
​ಎಲ್‌ಐಸಿ ತನ್ನದೇ ಆದ ‘ಯೋಗಕ್ಷೇಮ’ ಮ್ಯಾಗಜೀನ್ ಸೇರಿದಂತೆ ಹಲವಾರು ಗೃಹ ಪತ್ರಿಕೆಗಳನ್ನು ಹಿಂದಿಯಲ್ಲಿ ಹೊರತರುತ್ತದೆ. ಇದರಲ್ಲಿ ನೌಕರರು ಬರೆದ ಲೇಖನಗಳು ಮತ್ತು ಕವಿತೆಗಳನ್ನು ಪ್ರಕಟಿಸಲಾಗುತ್ತದೆ.
​5. ರಾಜಭಾಷಾ ಅನುಷ್ಠಾನ ಸಮಿತಿ (OLIC)
​ಪ್ರತಿ ಕಚೇರಿಯಲ್ಲೂ ರಾಜಭಾಷಾ ಅನುಷ್ಠಾನ ಸಮಿತಿಯ ಸಭೆಗಳು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತವೆ. ಇದರಲ್ಲಿ ಹಿಂದಿ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ.ಎಲ್‌ಐಸಿ ಈ ಕಾರ್ಯಕ್ರಮಗಳನ್ನು ನಡೆಸುವಾಗ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳಿಗೂ (ಉದಾಹರಣೆಗೆ ಕನ್ನಡ) ಗೌರವ ನೀಡುತ್ತಾ, ದ್ವಿಭಾಷಾ ಅಥವಾ ತ್ರಿಭಾಷಾ ಸೂತ್ರವನ್ನು ಪಾಲಿಸುತ್ತದೆ.

ನಮ್ಮಲ್ಲಿ ವಿಮಾ ಸಪ್ತಾಹವನ್ನು ಸೆಪ್ಟೆಂಬರ್ ಒಂದರಿಂದ ಏಳನೆಯ ತಾರೀಖಿನ ತನಕ ಆಚರಿಸುವುದರಿಂದ ಹಿಂದಿ ದಿನದ ಆಚರಣೆಗಳು ಎಂಟನೆಯ ತಾರೀಖಿನಿಂದ ಆರಂಭವಾಗುತ್ತಿತ್ತು. ಹಿಂದಿ ಅಶುಭಾಷಣ ಸ್ಪರ್ಧೆ ಹಿಂದಿ ಚಿತ್ರಗೀತೆಗಳ ಸ್ಪರ್ಧೆ ಹಾಗೂ ಅಂತ್ಯಾಕ್ಷರಿ ನಮ್ಮ ಕಚೇರಿಯಲ್ಲಿ ಸಾಮಾನ್ಯ ನಡೆಯುತ್ತಿದ್ದ ಸ್ಪರ್ಧೆಗಳು ನನಗೆ ಹಾಡಲು ಬರದೆ ಇದ್ದುದರಿಂದ ಅಶುಭಾಷಣ ಹಾಗೂ ಅಂತ್ಯಾಕ್ಷರಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಸಾಮಾನ್ಯ ಅಶುಭಾಷಣ ಸ್ಪರ್ಧೆಯಲ್ಲಿ ಬಹುಮಾನ ಬಂದೇ ಬರುತ್ತಿತ್ತು .ಅಂತ್ಯಾಕ್ಷರಿಯಲ್ಲಿ ಬಹುಮಾನ ಬರಲಿ ಬರದೇ ಇರಲಿ ಭಾಗವಹಿಸುವುದೇ ಒಂದು ಖುಷಿಯ ವಿಷಯವಾಗಿತ್ತು . ಆಗ ಲೆಕ್ಕಪತ್ರ ವಿಭಾಗದಲ್ಲಿದ್ದ ಮಂಜುನಾಥ್ ಅವರು ಅಂತ್ಯಾಕ್ಷರಿ ಸ್ಪರ್ಧೆಯನ್ನು ನಡೆಸಿಕೊಡುತ್ತಿದ್ದರು.

ನಂತರ ನಾನು ಸಕಲೇಶಪುರಕ್ಕೆ ಹೋದಾಗ ಅಲ್ಲಿ ಶಾಖಾ ಕಚೇರಿಯಲ್ಲಿ ಈ ರೀತಿಯ ಸ್ಪರ್ಧೆಗಳನ್ನು ನಾನು ಮತ್ತು ಸುಲೋಚನ ಆಯೋಜನೆ ಮಾಡಲು ಮುಂದಾಳತ್ವ ವಹಿಸಿಕೊಳ್ಳುತ್ತಿದ್ದೆವು. ಅದು ತುಂಬಾ ಖುಷಿಯ ವಿಷಯವಾಗಿತ್ತು.

2,000 ಇಸವಿಯ ನಂತರ ಈ ರೀತಿ ಶಾಖೆಗಳಲ್ಲಿ ಕಾರ್ಯಕ್ರಮ ನಡೆಸುವ ಪದ್ಧತಿ ಬಿಟ್ಟು ವಿಭಾಗ ಮಟ್ಟದಲ್ಲಿ ಹಾಗೂ ನಿಗಮದ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಹಾಗೂ ಆಫೀಸ್ ನೋಟ್ ಗಳನ್ನು ಬರೆಯುವ ಸ್ಪರ್ಧೆಗಳನ್ನು ಆರಂಭಿಸಿದ್ದರು .ಪ್ರಬಂಧ ಸ್ಪರ್ಧೆಗೆ ವಿಷಯಗಳನ್ನು ಸ್ಪರ್ಧೆ ಆರಂಭವಾಗುವ ಮುಂಚೆ ಕೊಡುತ್ತಿದ್ದರು ಶಾಖೆಗಳಲ್ಲಿಯೇ ಇದನ್ನು ಬರೆದು ಕಳುಹಿಸಿಕೊಡಬೇಕಿತ್ತು ಆಫೀಸ್ ನೋಟ್ ನಲ್ಲಿಯೂ ಅಷ್ಟೇ ವಿವಿಧ ರೀತಿಯ ನೋಟ್ ಗಳನ್ನು ಹಿಂದಿಯಲ್ಲಿ ತಯಾರಿಸಬೇಕಿತ್ತು. ಕೆಲವೊಂದು ಇಂಗ್ಲಿಷ್ ನಿಗಮಕ್ಕೆ ಸಂಬಂಧಿಸಿದ ತಾಂತ್ರಿಕ ವಿಷಯಗಳನ್ನು ಹಿಂದಿಗೆ ತರ್ಜುಮೆ ಮಾಡಬೇಕಿತ್ತು ತುಂಬಾ ಆಸಕ್ತಿದಾಯಕವಾದ ಸ್ಪರ್ಧೆ. ಒಂದೆರಡು ವರ್ಷ ಬಿಟ್ಟು ಮಿಕ್ಕ ವರ್ಷಗಳಲ್ಲೆಲ್ಲಾ ಈ ಎರಡು ಸ್ಪರ್ಧೆಗಳಲ್ಲೂ ಭಾಗವಹಿಸಿದ್ದೆ .ಹಾಗೂ ಪ್ರತಿ ವರ್ಷವೂ ಯಾವುದಾದರೂ ಒಂದರಲ್ಲಿ ಬಹುಮಾನ ಬಂದೇ ಬರುತ್ತಿತ್ತು ಎನ್ನುವುದು ಖುಷಿಯ ವಿಷಯ. ನಗದು ಬಹುಮಾನ ಮೊದಲ ಬಹುಮಾನ ೧೫00 ಎರಡನೆಯ ಬಹುಮಾನ ೧೨೦೦ ಮೂರನೆಯ ಬಹುಮಾನ ೧೦೦೦ ರೂ ಆಗಿನಿಂದ ಇಂದಿನವರೆಗೂ ಅಷ್ಟೇ ಇದೆ.

ಮೊದಲೇ ಪ್ರಸ್ತಾಪಿಸಿದಂತೆ ಆಫೀಸಿನಲ್ಲಿ ಹಿಂದಿ ಗೃಹ ಶೋಭಾ ಪತ್ರಿಕೆಯನ್ನು ತರಿಸುತ್ತಿದ್ದರು. ನಾನಂತೂ ಅದರ ಖಾಯಂ ಓದುಗಳು.  ಈ ಮಧ್ಯೆ ಪೋಸ್ಟಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಒಂದು ಅಲ್ಪಕಾಲೀನ ಅನುವಾದ ತರಬೇತಿ ಕಾರ್ಯಕ್ರಮ ಇತ್ತು .ವಿಭಾಗೀಯ ಕಚೇರಿಯಿಂದ ನಾನು ಮತ್ತು ಗೆಳತಿ ನಾಗಮಣಿ ಇವರನ್ನು ಅದಕ್ಕೆ ನಿಯೋಜಿಸಿ ಕಳಿಸಿದ್ದರು .ಒಂದು ವಾರದ ಕಾರ್ಯಕ್ರಮ.೦೪.೦೯.೧೯೯೫ ರಿಂದ ೦೮.೦೯.೨೦೨೫ ರ ವರೆಗೆ. ಭಾರತೀಯ ಭಾಷಾ ಕೇಂದ್ರದ ಪ್ರಾಧ್ಯಾಪಕರಾದ ಶ್ರೀ ಲಕ್ಷ್ಮೀನಾರಾಯಣ ಅರೋರ ಎನ್ನುವರು ಅಲ್ಲಿ ನಮಗೆ ತರಬೇತಿ ಕೊಟ್ಟಿದ್ದು .ಐದು ದಿನಗಳ ಕಾಲ ಬೆಳಗ್ಗಿನಿಂದ ಸಂಜೆಯ ತನಕ ಅವರೊಬ್ಬರದೇ ತರಗತಿಗಳು ಇದ್ದರೂ ಒಂದು ಸ್ವಲ್ಪವೂ ಬೇಸರವಾಗದೆ ಇದ್ದ ಹಾಗೆ ಬೋಧಿಸಿದವರು. ಅವರು ಆಗ ನಾನೇನು ಸಾಹಿತ್ಯದ ಬರವಣಿಗೆಯಲ್ಲಿ ತೊಡಗಿರಲಿಲ್ಲ .ಆದರೂ ಕೆಲವೊಂದು ಹಿಂದಿ ಕವಿತೆಗಳನ್ನು ಅನುವಾದ ಮಾಡಿದೆ ನಂತರದಲ್ಲಿ. ಅದಕ್ಕೆ ಆ ತರಬೇತಿಯಲ್ಲಿ ಕಲಿತದ್ದೂ ಕಾರಣ ಇರಬಹುದು.

ನಾನು ವಿಭಾಗೀಯ ಕಚೇರಿಯಲ್ಲಿ ಇದ್ದ ಸಮಯದಲ್ಲಿ ನನ್ನ ಕಡೆಯ ನಾದಿನಿ ಸುಮಳ ವಿವಾಹ ಆಗಿದ್ದು ನನ್ನ ತಂಗಿ ವೈಶಾಲಿ ವಿವಾಹವು ಇದೇ ಸಮಯದಲ್ಲಿ ಆಗಿದ್ದು. ನನ್ನ ಮೈದುನ ದಿನೇಶ ಅವರ ಮದುವೆಯು ಸಹ ಇದೇ ಸಮಯದಲ್ಲಿ. ಹೀಗಾಗಿ ಮೂರು ಮದುವೆಗಳಿಗೆ ಸುಮಾರಾಗಿ ರಜಾ ಹಾಕಿದ್ದೆ. ನನ್ನ ರಜದ ಪರಿಸ್ಥಿತಿ ಮಾತ್ರ ತುಂಬಾ ಶೋಚನೀಯವಾಗಿತ್ತು.

ಮುಂದಿನ ವರುಷ ಆಡಳಿತ ಅಧಿಕಾರಿಗಳ ಪದೋನ್ನತಿ ಸಂದರ್ಭದಲ್ಲಿ ನನ್ನ ತಂಗಿ ಛಾಯಾಗೆ ಪದೋನ್ನತಿ ಆಯಿತು. ಮೊದಲ ಪೋಸ್ಟಿಂಗ್ ಅನ್ನು ಬಿಜಾಪುರಕ್ಕೆ ಕೊಟ್ಟಿದ್ದರು ಅದಕ್ಕೆ ಅಷ್ಟು ದೂರ ಹೋಗಲು ಸಾಧ್ಯವಾಗದೆ ನಿರಾಕರಿಸಿದಾಗ ನಂತರದ ಕಂಟಿನ್ಜನ್ಸಿ ಪಟ್ಟಿಯಲ್ಲಿ ಮದ್ದೂರಿಗೆ ಕೊಟ್ಟರು ದಿನವೂ ಅಲ್ಲಿಗೆ ಓಡಾಡಲು ಅನುಕೂಲವಿದ್ದುದರಿಂದ ಅಂಗೀಕರಿಸಿ ಅಲ್ಲಿಗೆ ಹೋದಳು.

ವಲಯ ಕಚೇರಿಯಲ್ಲಿ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದರು. ಎಲ್‌ಐಸಿ ಸಂಸ್ಥೆಯು ತನ್ನ ಸಿಬ್ಬಂದಿ ಮತ್ತು ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಭಾರತದಾದ್ಯಂತ ಎಂಟು ವಲಯ ತರಬೇತಿ ಕೇಂದ್ರಗಳನ್ನು ಹೊಂದಿದೆ. ಅದರಲ್ಲಿ ಹೈದರಾಬಾದ್‌ನ ಕೇಂದ್ರವೂ ಒಂದು. ​ZTC ನಲ್ಲಿ ವಿವಿಧ ಹಂತದ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ:
​ಅಸಿಸ್ಟೆಂಟ್‌ಗಳು (Assistants): ಹೊಸದಾಗಿ ಸೇರಿದವರಿಗೆ ಕೆಲಸದ ವಿಧಾನ ಮತ್ತು ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಮಾಹಿತಿ.
​ಅಭಿವೃದ್ಧಿ ಅಧಿಕಾರಿಗಳು (Development Officers): ಏಜೆಂಟ್‌ಗಳನ್ನು ನೇಮಿಸಿಕೊಳ್ಳುವುದು ಮತ್ತು ಮಾರಾಟದ ಗುರಿ ತಲುಪುವ ಬಗ್ಗೆ ತರಬೇತಿ.
​ಆಡಳಿತ ಅಧಿಕಾರಿಗಳು (Administrative Officers): ನಿರ್ವಹಣೆ ಮತ್ತು ಕಚೇರಿ ಆಡಳಿತದ ಬಗ್ಗೆ ತರಬೇತಿ.
​ಏಜೆಂಟ್‌ಗಳು: ಹಿರಿಯ ಮತ್ತು ಸಾಧಕ ಏಜೆಂಟ್‌ಗಳಿಗೆ ವಿಶೇಷ ತರಬೇತಿ ಶಿಬಿರಗಳು.
​ತರಬೇತಿಯ ಮುಖ್ಯ ಉದ್ದೇಶಗಳು
​ಕೌಶಲ್ಯ ಅಭಿವೃದ್ಧಿ: ವಿಮಾ ಪಾಲಿಸಿಗಳ ನಿಯಮಗಳು, ಕಾನೂನುಗಳು ಮತ್ತು ಹೊಸ ಸಾಫ್ಟ್‌ವೇರ್‌ಗಳ ಬಗ್ಗೆ ತಿಳಿಸಿಕೊಡುವುದು.
​ಗ್ರಾಹಕ ಸೇವೆ: ಪಾಲಿಸಿದಾರರ ಸಮಸ್ಯೆಗಳನ್ನು ಬೇಗನೆ ಮತ್ತು ಸಮರ್ಪಕವಾಗಿ ಪರಿಹರಿಸುವ ಕಲೆ ಕಲಿಸುವುದು.
​ಮಾನಸಿಕ ವಿಕಸನ: ಸಿಬ್ಬಂದಿಯಲ್ಲಿ ನಾಯಕತ್ವ ಗುಣ ಮತ್ತು ಸಂವಹನ ಕೌಶಲ್ಯವನ್ನು (Communication Skills) ಹೆಚ್ಚಿಸುವುದು.

ಹೀಗಾಗಿ 1997 ಮಾರ್ಚ್ ಕೊನೆ ಏಪ್ರಿಲ್ ಮೊದಲ ವಾರದಲ್ಲಿ ನನಗೂ ತರಬೇತಿ ಹೋಗುವ ಅವಕಾಶ ದೊರೆಯಿತು. ನನ್ನೊಂದಿಗೆ ನಮ್ಮ ವಿಭಾಗೀಯ ಕಚೇರಿಯ ಕಚೇರಿ ವಹಿವಾಟುಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನನ್ನ ಆತ್ಮೀಯ ಗೆಳತಿಯರಲ್ಲಿ ಒಬ್ಬಳಾದ‌ಬಿ ಕೆ‌ ಸುಮಾ ನನ್ನ ಸಂಗಾತಿ. ಆಗೆಲ್ಲ ತರಬೇತಿಯ ಅವಧಿ ಒಂದು ವಾರ. ಸೋಮವಾರದಿಂದ ಶನಿವಾರದ ತನಕ ತರಬೇತಿ ಇರುತ್ತಿತ್ತು. ಕಚೇರಿಯಿಂದಲೇ ರೈಲು ಟಿಕೆಟ್ ಗಳನ್ನು ಮುಂಗಡ ಕಾಯ್ದಿರಿ ಸಿದ್ದರು. ಅದರಂತೆ ನಾವು  ೨೯ ಮಾರ್ಚ್ ಶನಿವಾರದಂದು ಹೊರಟು ೩೦ನೆಯ ತಾರೀಕು ಬೆಳಗಿನ ಜಾವ ಹೈದರಾಬಾದ್ ತಲುಪಿದೆವು. ಒಂದನೆಯ ತಾರೀಕು ಏಪ್ರಿಲ್ ನಲ್ಲಿ ಆರಂಭವಾಗಿ ೫ನೆಯ ತಾರೀಖಿನ ತನಕ ತರಬೇತಿ. ಆರನೆಯ ತಾರೀಕು ರಾತ್ರಿ ಅಲ್ಲಿಂದ ಹೊರಟು ಏಳನೆಯ ತಾರೀಕು ಮೈಸೂರು ತಲುಪುವುದು ಅಂದು ಹೋಗುವುದೋ ಬೇಡವೋ ಎಂದು ಸ್ವಲ್ಪ ಅನುಮಾನ ಇತ್ತು ಆದರೂ ಹಬ್ಬದ ದಿನ ಬಂದು ತಲುಪುತ್ತೇವಲ್ಲಾ ಎಂದು ನಿರ್ಧರಿಸಿ ಒಪ್ಪಿಗೆ ಕೊಟ್ಟುಬಿಟ್ಟೆವು.  ಆಗ ಮೈಸೂರಿನಿಂದ ಹೈದರಾಬಾದಿಗೆ ನೇರ ರೈಲು ಇರಲಿಲ್ಲ ಬೆಂಗಳೂರಿಗೆ ಹೋಗಿ ನಂತರ ಅಲ್ಲಿಂದ ಕೋಜಿಗೋಡ ಎಕ್ಸ್ಪ್ರೆಸ್ ಹತ್ತಬೇಕಿತ್ತು. ಆ ರೈಲು ಇದ್ದದ್ದು ಮೂರು ಗಂಟೆಗೆ. ನಾವು 11 ಗಂಟೆಯ ಬಸ್ ಹತ್ತಿ ಬೆಂಗಳೂರಿಗೆ ಹೋದೆವು. ಹೈದರಾಬಾದ್ ರೈಲಿನಲ್ಲಿಯೇ ನಮಗೆ ಬೆಂಗಳೂರು ವಿಭಾಗದಿಂದ ಹೊರಟ ಅಂಬುಜ ಹಾಗೂ ಜಯಶ್ರೀ ಅವರು ಪರಿಚಯವಾದರೂ ನಾವು ನಾಲ್ವರು ಮಾತನಾಡುತ್ತಿದ್ದದನ್ನು ಕೇಳಿಸಿಕೊಂಡು  ಉಡುಪಿ ವಿಭಾಗದಿಂದ ಬಂದಿದ್ದ ಸುರೇಶ್ ಮತ್ತು ಸುಬ್ರಹ್ಮಣ್ಯ ಇವರು ಸಹ ನಮ್ಮ ಜೊತೆ ಸೇರಿದರು ನಾವು ಕುಟುಂಬದವರನ್ನು ಬಿಟ್ಟು ಇದೇ ಮೊದಲ ಬಾರಿ ಹೊರಗಡೆ ಹೋಗುತ್ತಿದ್ದದ್ದು. ಸ್ವಲ್ಪ ಪುಕ್ಕಲುತನ ಜಾಸ್ತಿ ಇತ್ತು .ಇದ್ದುದರಲ್ಲಿ ಅಂಬುಜ ಸ್ವಲ್ಪ ಧೈರ್ಯಸ್ತೆ .ಜೊತೆಗೆ ಈಗ ಈ ಹುಡುಗರು ಸೇರಿಕೊಂಡು ನಮ್ಮ ತಂಡ ಒಂದು ರೀತಿ ಬಲಿಷ್ಠವಾಯಿತು ಎಂದು ಹೇಳಬಹುದು.  ತರಬೇತಿ ಕಾರ್ಯಕ್ರಮ ಮೊದಲನೇ ಬಾರಿ ಆದ್ದರಿಂದ ನಮಗೆ ತುಂಬಾ ಆಸಕ್ತಿದಾಯಕವಾಗಿಯೇ ಇತ್ತು ಜೀವವಿಮೆ ಹಾಗೂ ನಿಗಮದ ಬಗ್ಗೆ ಅನೇಕ ವಿಷಯಗಳು ಕಡೆಯ ದಿನ ಟೆಸ್ಟ್ ಬೇರೆ ಕೊಡುತ್ತಾರೆ ಎಂದು ಹೇಳಿದ್ದರಿಂದ ಪ್ರಾಮಾಣಿಕ ವಿದ್ಯಾರ್ಥಿಗಳಾಗಿ ಅದರ ಬಗ್ಗೆ ನೋಟ್ಸ್ ಗಳನ್ನು ಸಹ ಬರೆದುಕೊಂಡಿದ್ದೆವು. ಕಡೆಯ ದಿನ ಮಾಡಿದ ಟೆಸ್ಟ್ ನಲ್ಲಿ ನನಗೆ ಅತ್ಯಂತ ಅಧಿಕ ಅಂಕಗಳು ದೊರೆತು ಒಂದು ಬಹುಮಾನ ಸಹ ಕೊಟ್ಟಿದ್ದರು.
ಈಗ ನಮ್ಮ ಜೆಟ್ ಟಿಸಿ ಯದೇ ಸ್ವಂತ ಕಟ್ಟಡ ಇದೆ. ಅಲ್ಲಿ ತರಬೇತಿಗೂ ಹಾಗೂ ಅಭ್ಯರ್ಥಿಗಳು ಉಳಿದುಕೊಳ್ಳುವುದಕ್ಕೂ ವ್ಯವಸ್ಥೆ ಇದೆ .ಆಗ ಈ ತರಬೇತಿಯನ್ನು ಹೋಟೆಲ್ಗಳಲ್ಲಿ ಮಾಡುತ್ತಿದ್ದರು ನಾವು ಹೋದಾಗ ಡೆಕ್ಕನ್ ಕಾಂಟಿನೆಂಟಲ್ ಎಂಬ ಮೂರು ನಕ್ಷತ್ರದ ಹೋಟೆಲ್, ನಾವಂತೂ ಅಷ್ಟು ದೊಡ್ಡ ಹೋಟೆಲ್ ಕಂಡದ್ದು ಅದೇ ಮೊದಲು ಅಲ್ಲಿನ ಲಿಫ್ಟ್ ಗಳು ಜಗಮಗ ಲೈಟ್ಗಳು ದೊಡ್ಡ ದೊಡ್ಡ ಹೋಟೆಲ್ ರೂಮ್ಗಳು ನಮ್ಮನ್ನು ಬೆರಗುಗಣ್ಣರನ್ನಾಗಿಸಿದ್ದವು. ಅಲ್ಲಿ ಹೋದ ಮೇಲೆ ರಾಯಚೂರು ವಿಭಾಗದಿಂದ ಬಂದಿದ್ದ ವಿಜಯ ಮತ್ತು ಇನ್ನೊಬ್ಬರು ಸಹ ಪರಿಚಯವಾದರು. ಎಲ್ಲರೂ ತುಂಬಾ ಆತ್ಮೀಯರಾದೆವು. ಆದರೆ ಆಗ ಮೊಬೈಲ್ ಗಳು ಇಲ್ಲದ್ದರಿಂದ ನಾಲ್ಕು ಐದು ಪತ್ರ ವಿನಿಮಯ ನಡೆಯಿತು ಆಮೇಲೆ ನಿಂತೆ ಹೋಯಿತು.
ಆಗಲೂ ಈಗಲೂ ಹೈದರಾಬಾದಿಗೆ ಹೋಗುವ ಉದ್ದೇಶ ತರಬೇತಿಯ ಜೊತೆ ಜೊತೆಗೆ ಅಲ್ಲಿ ಸುತ್ತಾಡುವ ಹಾಗೂ ಅಲ್ಲಿನ ವೈಶಿಷ್ಟ್ಯಗಳನ್ನು ಕೊಂಡುಕೊಳ್ಳುವ ಹುಚ್ಚು.
ಭಾನುವಾರ ಬೆಳಿಗ್ಗೆ ತಲುಪಿದ ತಕ್ಷಣ ಸ್ನಾನಾದಿಗಳನ್ನು ಮುಗಿಸಿ ತಿಂಡಿ ತಿಂದು ಹೊರಟೆವು .ಮೊದಲು ಮ್ಯೂಸಿಯಂ ನೋಡಿ ನಂತರ ಅಲ್ಲೇ ಹೋಟೆಲ್ನಲ್ಲಿ ಊಟ ಮಾಡಿ ಒಂದಷ್ಟು  ಪೇಟೆ ಬೀದಿಗಳಲ್ಲಿ ತಿರುಗಿ ರಾತ್ರಿಗೆ ಹಿಂದಿರುಗಿದ್ದು. ನಂತರ ದಿನಾಲೂ ಸಂಜೆ 5:30ಗೆ ಕ್ಲಾಸ್ ಗಳು ಮುಗಿದ ನಂತರ ಒಂದೊಂದು ದಿನ ಒಂದೊಂದು ಕಡೆಗೆ ಮೊದಲಿಗೆ ಬಿರ್ಲಾ ಮಂದಿರ ನಂತರ ಚಾರ್ಮಿನಾರ್ ನಂತರ ಬೇಗಂ ಪೇಟ್ ಹೀಗೆ ಎಲ್ಲಾ ಕಡೆ ಸುತ್ತಾಡಿದೆವು ಅಲ್ಲಿ ಜಗದಾಂಬ ಪರ್ಲ್ಸ್ ತುಂಬಾ ಸುಪ್ರಸಿದ್ಧ ಅಲ್ಲಿ ಜೀವ ವಿಮಾ ನಿಗಮದವರು ಎಂದು ಹೇಳಿದರೆ 10 ಪ್ರತಿಶತ ಡಿಸ್ಕೌಂಟ್ ಕೊಡುತ್ತಿದ್ದರು. ಅಲ್ಲಿಯೂ ಲಗ್ಗೆ ಇಟ್ಟು ಆಗಿತ್ತು .ಅಲ್ಲಿನ ಪ್ರಸಿದ್ಧ ಮುತ್ತುಗಳನ್ನು ಕೊಂಡುಕೊಂಡೆವು ಚಾರ್ಮಿನರಾಲ್ಲಿ ಬಳೆಗಳು ಸಣ್ಣಪುಟ್ಟ ಕೃತಕ ಒಡವೆಗಳನ್ನು ತೆಗೆದುಕೊಂಡಿದ್ದಾಯಿತು ಇದಕ್ಕೆಲ್ಲ ಹಿಂದೆ ಹೋಗಿ ಬಂದವರು ಕೊಟ್ಟ ಸಲಹೆಗಳು ಪಾಲಿಸಲ್ಪಡುತ್ತಿದ್ದವು. ಆಗ ಕೋಯಲ್ ಕಾಟನ್ ಎಂಬ ಕಾಟನ್ ಸೀರೆಗಳು ತುಂಬಾ ಪ್ರಸಿದ್ಧ. ಅದು ಹತ್ತಿಯ ಸೀರೆಗಳಾದರು ಗಂಜಿ ಬೇಡುತ್ತಿರಲಿಲ್ಲ ಐರನ್ ಬೇಕಿರುತ್ತಿರಲಿಲ್ಲ .ಹಾಗಾಗಿ ಉಡಲು ಸುಲಭ ಅಂತಹ ಸೀರೆಗಳು ಹೈದರಾಬಾದಿನ ಬೇಗಂಪೇಟೆಯಲ್ಲಿ ತುಂಬಾ ಕಡಿಮೆ ದರದಲ್ಲಿ ಸಿಗುತ್ತಿದ್ದವು. ಆಗ ಅವುಗಳ ದರ ನೂರು ರೂಪಾಯಿಯ ಆಸು ಪಾಸು. ಹೋಗಿ ಕೊಳ್ಳದೆ ಇದ್ದರೆ ನಮ್ಮ ಮನಸ್ಸು ತಡೆಯುವುದೇ? ಅವುಗಳ ಖರೀದಿಯೂ ನಡೆಯಿತು .ಅಂತೂ ಹೋಗುವಾಗ ಇದ್ದ ಒಂದು ಬ್ಯಾಗ್ ಬರುವಾಗ ಎರಡು ಬ್ಯಾಗ್ ಆಗಿದ್ದಂತೂ ಹೌದು.
ಕಡೆಯಲ್ಲಿ ಶನಿವಾರದ ದಿನ ಅರ್ಧ ದಿನದ ತರಬೇತಿ ಮುಗಿದ ನಂತರ ಊಟ ಮುಗಿಸಿ ಗೋಲ್ಕೊಂಡ ಕೋಟೆಯನ್ನು ನೋಡಲು ಹೋದೆವು .ಅಲ್ಲೆಲ್ಲ ಸುತ್ತಾಡಿ ಕತ್ತಲಾದ ನಂತರ ಲೇಸರ್ ಷೋ ನೋಡಿದೆವು. ಆನಂತರ ನಾಲ್ಕು ಐದು ಬಾರಿ ಹೈದರಾಬಾದಿಗೆ ಹೋಗಿದ್ದರು ಗೋಲ್ಕಂಡ ಕೋಟೆ ಹಾಗೂ ಮ್ಯೂಸಿಯಂ ಗಳಿಗೆ ಭೇಟಿ ಕೊಡಲು ಆಗಿಯೇ ಇಲ್ಲ.
ಹಾಗೆಯೇ ಹೈದರಾಬಾದಿ ನಲ್ಲಿ ಕರಾಚಿ ಬಿಸ್ಕತ್ತುಗಳು ಮತ್ತು ಪುಲ್ಲ ರೆಡ್ಡಿ ಸಿಹಿ ತಿನಿಸುಗಳು ತುಂಬಾ ಪ್ರಸಿದ್ಧ. ಈಗ ಎಲ್ಲಾ ಕಡೆ ಕರಾಚಿ ಬಿಸ್ಕತ್ತುಗಳು ಸಿಗುತ್ತವೆ. ಆದರೆ ಆಗ ಹೈದರಾಬಾದಿನಲ್ಲಿ ಮಾತ್ರ ದೊರಕುತ್ತಿದ್ದು. ಹಾಗಾಗಿ ಅವುಗಳ ಖರೀದಿ ಕಡ್ಡಾಯ. ಬರುವ ಮುಂಚಿನ ದಿನದ ಭೇಟಿ ಈ ಕರಾಚಿ ಬಿಸ್ಕತ್ತಿನ ಅಂಗಡಿ. ಇಷ್ಟುದ್ದದ ಕ್ಯೂನಲ್ಲಿ ನಿಂತು ಅವುಗಳನ್ನು ಕೊಂಡಾಗ ಒಂದು ರೀತಿಯ ಸಾರ್ಥಕ ಭಾವನೆ.


About The Author

1 thought on “”

  1. ತುಂಬಾ ಅಚ್ಚುಕಟ್ಟಾಗಿ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಾದ ಕು ಸ ಮಧುಸೂದನ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

Leave a Reply

You cannot copy content of this page

Scroll to Top