ಹೂ ಮಾರುವ ಹುಡುಗಿ

ಬಸ್ಟ್ಯಾಂಡು,ಸರ್ಕಲ್ಲು,ಊರಲ್ಲಿನ
ಗಲ್ಲಿ ಗಲ್ಲಿಯಲ್ಲಿ ಹೂಗಳದ್ದೇ ಘಮ,
ಹಬ್ಬ ಹರಿದಿನಗಳಲಿ ಮನೆ ಮನೆಗೆ
ತಿರುಗಿ ಹೂ ಮಾರುವಳು ಹುಡುಗಿ

ಹೂವಂತೆಯೇ ಅವಳು ಕೋಮಲ
ಬೆರ(ಡ)ಗು ಹೊತ್ತಿರುವ ಸೊಬಗಿ,
ಬಗೆ ಬಗೆ ಹೂವುಗಳ ಬುಟ್ಟಿ ಹೊತ್ತು
ಸುತ್ತಿ ಮಾರಿದರಷ್ಟೇ ಒಪ್ಪತ್ತಿನೂಟ

ಪೂಜೆಗೋ,ಪ್ರಸ್ತಕೋ,ಮುಡಿಗೋ
ಅಡಿಗೋ ಸಲ್ಲುವವು ಹೂವುಗಳು,
ಕಾರಣಗಳು ಇವಳಿಗಿಲ್ಲಿ ಅಪ್ರಸ್ತುತ
ಹೂ ಮಾರಿದರಷ್ಟೇ ಮೊಗದಿ ಹಿಗ್ಗು

ಹೂವಂತೆ ಅವಳ ಮೈಗೂ ಚೌಕಾಸಿ
ಮಾಡಿ ಛೀ ಎನಿಸಿಕೊಂಡವರುಂಟು,
ಅವಳ ಹೂ ಮನ ಘಾಸಿಯಾದರೂ
ಎಂದಿನಂತೆ ಹೂವ ಹೊತ್ತು ಹಾಜರು

ಬೆಲೆಯನು ಏರಿಸಿದವಳಲ್ಲ ಕಪಟದಿ
ಲೋಭದಿ ಲಾಭವ ಗಳಿಸಿದವಳಲ್ಲ,
ಖಾಯಂ ಕೊಳ್ಳುವವರ ಜೊತೆಗಷ್ಟು
ತುಸು ನಂಟಷ್ಟೇ,ಅದೂ ಅಷ್ಟಕ್ಕಷ್ಟೇ

ಹೂ ಮಾರುವವಳ ಮುಡಿಗೊಂದಷ್ಟು
ಹೂ ಮುಡಿಸುವುದೊಂದೇ ಬಯಕೆ,
ಮೊದಲ ರಾತ್ರಿಗೀಗ ಅವಳೇ ಮಲ್ಲಿಗೆ
ನಾನವಳ ಸುತ್ತ ಭ್ರಮಿಸುವ ಭ್ರಮರ


Leave a Reply

Back To Top