ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಯಾವುದು ನನ್ನದಲ್ಲ

ತಾಯಿ ಕೊಟ್ಟ ಉಸಿರು
ತಂದೆ ಕೊಟ್ಟ ಹೆಸರು
ನಾ ಹುಟ್ಟಿ ಬೆಳೆದ ತವರು
ಯಾವುದು ನನ್ನದಲ್ಲ ನನ್ನದಲ್ಲ…
ತಾಯಿ ನೀಡಿದ ತುತ್ತು
ನನ್ನವಳು ನೀಡಿದ ಮುತ್ತು
ನಾ ಗಳಿಸಿದ ಸ್ವತ್ತು
ಯಾವುದು ನನ್ನದಲ್ಲ ನನ್ನದಲ್ಲ….
ಅಮ್ಮನ ಮಡಿಲು
ಅಪ್ಪನ ಆಸರೆ
ನನ್ನವಳ ಒಡಲು
ಯಾವುದು ನನ್ನದಲ್ಲ ನನ್ನದಲ್ಲ….
ಆಸರೆ ಕೊಟ್ಟ ನೆಲ
ಜೀವ ಉಳಿಸುವ ಜೀವ ಜಲ
ನಾ ಮಾಡಿದ ಹೊಲ
ಯಾವುದು ನನ್ನದಲ್ಲ ನನ್ನದಲ್ಲ…
ಸೂರ್ಯ ನೀಡುವ ಬೆಳಕು
ಬೀಸುವ ತಂಗಾಳಿ
ಪ್ರಕೃತಿ ನೀಡುವ ಆಹಾರ
ಯಾವುದು ನನ್ನದಲ್ಲ ನನ್ನದಲ್ಲ…
ಆಡಿದ ಮಾತು
ಕಳೆದು ಹೋದ ಹೊತ್ತು
ಗಳಿಸಿಟ್ಟ ಸಂಪತ್ತು
ಯಾವುದು ನನ್ನದಲ್ಲ ನನ್ನದಲ್ಲ…
ಇಲ್ಲೇ ಬಿಟ್ಟು ಸಾಗಬೇಕು
ಹೊತ್ತೊಯ್ಯಲು ನಾ ಬಯಸಿದಾಗ
ಉಡಿದಾರನು ಬಿಚ್ಚಿಸುವರು
ಯಾವುದು ನನ್ನದಲ್ಲ ನನ್ನದಲ್ಲ…..
ಗುರು ಕೊಟ್ಟ ವಿದ್ಯೆ
ನಾ ಗಳಿಸಿದ ಜ್ಞಾನ
ಗುರು ಹಿರಿಯರು ಕಲಿಸಿದ ಸಂಸ್ಕಾರ
ಯಾವುದು ನನ್ನದಲ್ಲ ನನ್ನದಲ್ಲ….
ನಾ ಉಡುವ ಬಟ್ಟೆ
ನಾನಿರುವ ಗೂಡು
ನನ್ನ ದೇಹ
ಯಾವುದು ನನ್ನದಲ್ಲ ನನ್ನದಲ್ಲ…
ನಾನೆಂಬುದು ನಾನತ್ವ
ನನ್ನದೆಂಬುದು ಮೋಹ ದಾಹ
ಮನದಲ್ಲಿ ಹುಟ್ಟಿದ ದ್ವೇಷ
ಯಾವುದು ನನ್ನದಲ್ಲ ನನ್ನದಲ್ಲ…..
ಹುಟ್ಟುವಾಗ ಬೆತ್ತಲೆ
ಹೊತ್ತೊಯ್ಯುವಾಗ ಬೆತ್ತಲೆ
ಆಗ ಬದುಕೇ ಕತ್ತಲೆ
ಯಾವುದು ನನ್ನದಲ್ಲ ನನ್ನದಲ್ಲ….
ಚಿನ್ನಸ್ವಾಮಿ ಎಸ್ ಹೆಚ್
