ಕಾವ್ಯ ಸಂಗಾತಿ
ಗೀತಾಮಂಜು ಬೆಣ್ಣೆಹಳ್ಳಿ
ಭಾವಗಳ ಸಂಜೆ


ಸಿಹಿನಿದ್ದೆಯ ಮಂಪರು
ತೆಕ್ಕೆಯಿಂದ ಬಿಡುತ್ತಿಲ್ಲ
ಹಗಲು ಇರುಳು
ಅಚ್ಚಡದಲ್ಲಿ
ಬೆಚ್ಚಗೆ ಬಂದಿಯಾಗಿವೆ
ಮುಲಾಜಿನ ಮಂಕರಿಯಲ್ಲಿ
ಹೀಗಿದ್ದರೂ
ಮಣಭಾರ
ಮಂಕರಿ ಹೊತ್ತು ಸಾಗುವ
ಹಕಿಕತ್ತಾದರೂ ಬೇಕಿತ್ತೇ..?
ಬಂಜೆ ಭಾವಗಳ
ಸಂಜೆ ಬೆಸೆಯಲು
ಹುಡುಕಿ ತಂದ
ಜಾಲಿ ಅಂಟು
ಕೆಲಸ ಮಾಡುತ್ತಲೇ ಇಲ್ಲ
ಈಗ ಅದೆಂತದೊ
ಫೆವಿಕಲ್ ಬಂದಿದೆಯಂತೆ
ಕೊಂಡು ಅಂಟಿಸುವ ಯತ್ನಕ್ಕೆ
ಮನಸು ಒಡೆದ ಕನ್ನಡಿ
ಬೆಳದಿಂಗಳ ರಾತ್ರಿಯಿಲ್ಲ
ಅಲೆಗಳಿಲ್ಲ
ಪ್ರೇಮಿಗಳಂತೂ ಇಲ್ಲವೇ ಇಲ್ಲಾ
ಬಲೆ ಹಾಕಿದ
ಕಡಲತಡಿ
ಹೊಡೆದ ಮಡಿಕೆಯ ಸಾಲು
ಎಲ್ಲವನ್ನು ಇಲ್ಲವಾಗಿಸುತ್ತಿದೆ
ಹೀಗಾದರೆ ಹೇಗೆ..?
ಎಂಬ ಪ್ರಶ್ನೆಗೆ
ಮೌನ ಮುರಿದ ಉತ್ತರ
ಮತ್ಸ್ಯ ಮಳೆಯಂತೆ
ರಾಶಿ ರಾಶಿ
ಕೊಟ್ಟು ಕೊಂಡವರ
ಸೌಟಿನ ಬಾಯಲ್ಲಿ ರುಚಿ.
ಗೀತಾಮಂಜು ಬೆಣ್ಣೆಹಳ್ಳಿ
ತುಂಬಾ ಸೊಗಸಾಗಿದೆ ಮೇಡಂ…
ಹೊನ್ನಪ್ಪ ಕರೆಕನ್ನಮ್ಮನವರ