ಕಾವ್ಯ ಸಂಗಾತಿ
ಹೊನ್ನಪ್ಪ ಕರೆಕನ್ನಮ್ಮನವರ
ಅವ್ವ

ನಿನ್ನ ಉಸಿರು ಕದ್ದ
ಗಳಿಗೆಯೊಂದಿಗೆ
ನಿತ್ಯ ಹೂಡುವ
ಕದನಗಳೆಲ್ಲವೂ
ವ್ಯರ್ಥವಾಗಿ ವಿಚಿತ್ರ
ಶೂನ್ಯವೊಂದು
ಆವರಿಸಿ ಎದೆ ಬಡಿತ
ಹೆಚ್ಚಾಗುವಾಗ ಯಾವುದೋ
ದಿಕ್ಕಿನಿಂದ ನಿನ್ನ ಕಾಣದ
ಕೈಗಳು ನೆತ್ತಿ ಸವರಿ
ಹೋಗುತ್ತವೆ..!
ನಾನಾಗ ನಿನ್ನ ವಿಳಾಸ
ಕೊಡಲು ಧೈರ್ಯವಿಲ್ಲದ
ಯಾವ ದೇವನೊಂದಿಗೂ
ಚೌಕಾಸಿಗಿಳಿಯುವುದಿಲ್ಲ
ಆದರೀಗ ನನ್ನೊಳಗಿನ
ಪ್ರಾರ್ಥನೆಯೊಂದೇ ತಾಯಿ..
ಈ ಕಣ್ಣ ಪರದೆಯ
ಮೇಲೆ ಆಗಾಗ
ಇಳೆ ಬೀಳುವ
ಇರುಳ ಸೆರಗನ್ನು
ಸರಿಸುತ್ತಲೇ ಇರು
ನೀನಿಲ್ಲದ ಈ ಲೋಕವನ್ನು
ಎದುರುಗೊಂಡು,
ಈ ದಿಕ್ಕೇಡಿ ಬದುಕನ್ನು
ನಿನ್ನ ನೆನಪಿನ ಚೌಕಟ್ಟಿನಲ್ಲಿಯೇ
ಹಿಡಿದಿಟ್ಟು ನಡೆಯಬೇಕಿದೆ
ನಿನ್ನಂತೆ ಒಂದಿಷ್ಟು
ಬೆಳಕಿನ ಚೂರುಗಗಳನ್ನು
ಇಲ್ಲಿ ಆಯ್ದುಕೊಳ್ಳಲು..!!
—————-
ಹೊನ್ನಪ್ಪ ಕರೆಕನ್ನಮ್ಮನವರ

ಅವ್ವನೇ ಒಂದು ಕಾವ್ಯ…ಅವಳಿಂದಲೇ ಬದುಕು ಭವ್ಯ….. ಸೊಗಸಾಗಿದೆ ಸರ್ ಕವನ…
ಧನ್ಯವಾದಗಳು