ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್


ಅನುದಿನ ಕೈ ಕೈ ಹಿಡಿದು ಓಡಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ಆಗಸಕೂ ಕೇಳಿಸುವಂತೆ ಕೂಗಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ನೀಳವಾದ ಬಾಹುಗಳಲಿ ಬಂಧಿಸು ನನ್ನೆದೆಯ ಬಡಿತ ಕೇಳಿಸುವುದು ನಿನಗೆ
ಹಗಲಿರುಳೂ ಆಲಂಗಿಸಿ ಮುದ್ದಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ಪ್ರೀತಿಯ ಮತ್ತು ಹೃದಯವನು ಆವರಿಸಿದೆ ಏಳೇಳು ಜನುಮಕೂ ಇಳಿಯದು
ಅನುರಾಗದ ಅಮಲಿನಲಿ ತೇಲಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ಜೀವ ನನ್ನದಾದರೂ ಉಸಿರಾಡಲು ನಿನ್ನ ಪರವಾನಿಗಿ ಬೇಡುತಿದೆ ಚಂದ್ರಮುಖಿ
ಒಲುಮೆಗೆ ಮಾದರಿಯಾಗಿ ಹಾರಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ಮಲ್ಲಿಗೆಯ ಸುಮವು ನಿನ್ನ ಮುಡಿಯಲಿರಲು ನೋಡುವುದೇ ಬಲು ಸೊಗಸು
ಪ್ರಣಯದ ರಸಮಂಚದಲಿ ನೀರಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
———–
ರತ್ನರಾಯಮಲ್ಲ