ಕವಿ-ಕಾವ್ಯ ಸಂಗಾತಿ
ಬಿ. ಸತ್ಯವತಿ ಭಟ್ ಕೊಳಚಪ್ಪು

ಕಾಸರಗೋಡು ಜಿಲ್ಲೆಯ ಕೊಳಚಪ್ಪು ಊರಿನವರಾದ ಲೇಖಕಿ ಎಳವೆಯಲ್ಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದರೂ, ಸಂಸಾರ ಜವಾಬ್ದಾರಿಗಳಿಂದ ಸಂಪೂರ್ಣ ನಿವೃತ್ತಿ ಹೊಂದಿದ ನಂತರ ಕಳೆದ ಹತ್ತು ವರ್ಷಗಳಿಂದ ಸಾಹಿತ್ಯ ಸೇವೆಯಲ್ಲಿ ಪರಿಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ
ಹಲವಾರು ಪ್ರಬುದ್ಧ ಸಾಹಿತಿಗಳ ಒಡನಾಟದಿಂದ, ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕವನ , ಶಿಶುಗೀತೆ, ಮಕ್ಕಳ ಕವನ, ಗಝಲ್, ಷಟ್ಪದಿ, ವೃತ್ತಗಳು, ಸಾಂಗತ್ಯ, ಅಕ್ಕರಿಕೆ ಹೀಗೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಹಲವಾರು ಲೇಖನ, ಕಥೆ, ಕವನಗಳು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿರುತ್ತವೆ.
ಮುಪ್ಪು-ಯಾರ ತಪ್ಪು

ಮುಪ್ಪಡರಿತೇ ಇಂದು ಎಂಭತ್ತು ದಾಟಿಹುದು
ಒಪ್ಪಿಕೊಳ್ಳುವ ವಯಸು ತೆಪ್ಪಗಿದ್ದು!
ಬೇಡವೆಂದರು ಬರುವ ದೂಡಿದರು ನಿಲುವ
ಕಾಲಗತಿ ಕಣ್ಣೆದುರು ಎದ್ದು ಬಂದು!೧!
ಮಂಜು ಮುಸುಕಿದ ಕಣ್ಣು ಮುಂಜಾವ ಹೊಳಪಿಲ್ಲ
ಮುಸ್ಸಂಜೆ ಮುಂದಾಗಿ ಮಬ್ಬು ಕಾಲ!
ಸುಕ್ಕು ಸುಕ್ಕಿನ ತ್ವಚೆಗೆ ನಿರಿಗೆ ನೀಡುವ ಮೊಗವು
ಕಾಡುತಿಹ ಮರೆವು ಗೊಂದಲದ ಜಾಲ!೨!
ಮಿಂಚುತಿಹ ಮುಂದಲೆಗೆ ಬೆಳ್ಳಿ ಕೂದಲ ಪದಕ
ಹೆಜ್ಜೆಗೆಲ್ಲಿದೆ ಸ್ಥಿರತೆ ಕೈ ಕಾಲು ನಡುಕ!
ಅದುರುತಿಹ ಅಧರದೊಳು ಏನೊ ಹೇಳುವ ತವಕ
ಗಂಟಲಲೆ ಗಂಟಾಗಿ ಮೌನ ಲೋಕ!೩!
ಹಳೆಯ ಹಾಡಿನ ಹಾಳೆ ಒಮ್ಮೊಮ್ಮೆ ಪುಟ ತೆರೆದು
ಮಯಮಯದ ಲೋಕದಲಿ ತೇಲುತಿದೆ ಚಿತ್ರ!
ಮಧುರಾತಿ ಮಧುರವದು ಬಾಲ್ಯ ಯೌವ್ವನ ಚಂದ
ಮಸುಕು ಮಸುಕಾಗಿ ನೆನಪೊಂದು ಮಾತ್ರ!೪!
ನಿಡಿದಾದ ನಿಟ್ಟುಸಿರು ಹೇಳುತಿದೆ ಹಲವು ಬಗೆ
ಶೂನ್ಯವನು ದಿಟ್ಟಿಸುತ ಆಕಾಶದೆಡೆಗೆ!
ಜೀವನದಿ ಒಲವಿಲ್ಲ ಜೀವಿಸಲು ಮನಸಿಲ್ಲ
ಲೌಕಿಕದ ಬದುಕಿಂದ ಮುಕ್ತಿ ಕಡೆಗೆ!೫!
ಬಂಧುಗಳು ಇದ್ದಂತೆ ಒಂಟಿಯಾಗಿಹ ಭಾವ
ಎದೆಯಲ್ಲೆ ಒತ್ತಿಟ್ಟು ಸಂಕಟದ ನೋವ!
ಹೇಳಲಾರದ ಸ್ಥಿತಿಯು ನುಂಗಲಾರದ ಗತಿಯು
ಹನಿ ಪ್ರೀತಿಯರಸುತಿದೆ ಕಣ್ಣ ಹನಿಯು!೬!
ಬಿ.ಸತ್ಯವತಿ.ಎಸ್.ಭಟ್.ಕೊಳಚಪ್ಪು
ಈಗಾಗಲೆ ಒಟ್ಟು ಹತ್ತು ಕವನ ಸಂಕಲನಗಳು ಲೋಕಾರ್ಪಣೆಗೊಂಡಿವೆ .
೧.. ಗೊಂಚಲು – ಕವನ ಸಂಗ್ರಹ (2004).
೨..ಅಂಬಾ ಅಂಬಾ -ಮಕ್ಕಳ ಕವನಕೃತಿ.(2004).
೩.. ಕಾಮನಬಿಲ್ಲು.-ಮಕ್ಕಳ ಕವನಕೃತಿ.(2019). ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರಿಂದ ೨೦೧೯-೨೦ ನೇ ಸಾಲಿನ ದತ್ತಿ ಪ್ರಶಸ್ತಿ ಮತ್ತು ಶಿವಮೊಗ್ಗ ಕರ್ನಾಟಕ ಸಂಘದವರಿಂದ ಪ್ರತಿಷ್ಠಿತ ನಾ.ಡಿಸೋಜ ಮತ್ತು ರಾಜರತ್ನಂ ದತ್ತಿ ಪ್ರಶಸ್ತಿ ಲಭಿಸಿರುತ್ತದೆ.
೪.. ನವಿಲಗರಿ -ಮಕ್ಕಳ ಕವನಕೃತಿ.(2021). ಇದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇದರಿಂದ ೨೦೨೦-೨೧ ನೇ ಸಾಲಿನ ದತ್ತಿ ಪ್ರಶಸ್ತಿಯು ಲಭಿಸಿದೆ.
೫.. ಮುತ್ತು ಅಮ್ಮನ ಕೈತುತ್ತು -ಮಕ್ಕಳ ಕವನಕೃತಿ.(2022)
೬.. ಸ್ವಾತಿ ಮುತ್ತು – ಮುಕ್ತಕ ಸಂಕಲನ.(2023). ಈ ಸಂಕಲನಕ್ಕೆ ಮಂಡ್ಯದ ಅಡ್ವೈಸರ್ ಮಾಸ ಪತ್ರಿಕೆಯ ವತಿಯಿಂದ 2023 ನೇ ಸಾಲಿನ ರಾಜ್ಯಮಟ್ಟದ ಅಡ್ವೈಸರ್ ಸಾಹಿತ್ಯ ಪ್ರಶಸ್ತಿ ಲಭಿಸಿರುತ್ತದೆ.
೭… ದಿಗಂತದಾಚೆಗಿನ ನೋಟಗಳು.(ಗಝಲ್ ಸಂಕಲನ -2024).
೮… ಮತ್ತೆ ನಕ್ಕಳು ಪ್ರಕೃತಿ.
(ಕವನ ಸಂಕಲನ -2024)
೯…ಕುಂದಣದ ಹರಳುಗಳು.
(ಷಟ್ಪದಿ ಸಂಕಲನ -2024)
೧೦… ಹೆಜ್ಜೆಗಳ ಹೆಗ್ಗುರುತು.
(ಕಥಾ ಸಂಕಲನ-2025)
ಗೌರವಾನ್ವಿತ ಹಿರಿಯ ವೈದೇಹಿ ಪುರಸ್ಕಾರ ಪ್ರಶಸ್ತಿ , ಹಿರಿಯ ಸಾಹಿತಿ ಎಂಬ ನೆಲೆಯಲ್ಲಿ ದೊರಕಿರುತ್ತದೆ .
ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದಕ್ಕಿರುತ್ತದೆ.
ಇತ್ತೀಚೆಗೆ ( 2024 ರಲ್ಲಿ) ಕಾಸರಗೋಡಿನ ಕನ್ನಡ ಭವನದಲ್ಲಿ ಪ್ರತಿಷ್ಠಿತ ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಪ್ರಶಸ್ತಿಯು ಹಿರಿಯ ಸಾಹಿತಿಯ ಸಾಹಿತ್ಯ ಸಾಧನೆಯ ನೆಲೆಯಲ್ಲಿ ಲಭಿಸಿರುತ್ತದೆ.
ಪ್ರಖ್ಯಾತ ಸಾಹಿತಿ, ಕಾದಂಬರಿಗಾರ್ತಿ ಅನುಪಮಾ ನಿರಂಜನ ಇವರ ಜನುಮದಿನದ ಪ್ರಯುಕ್ತ 2024 ರಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ.
ನವಿಲಗರಿ ಸಂಕಲನದಿಂದ ಆಯ್ದ ಶಿಶುಗೀತೆಯೊಂದು ಕೇರಳದ ಮೂರನೇ ತರಗತಿಯ ಅಚ್ಚಿ ಪುಸ್ತಕದಲ್ಲಿ ಮಕ್ಕಳ ಹೆಚ್ಚಿನ ಓದುವಿಕೆಗಾಗಿ ಆಯ್ಕೆಯಾಗಿರುತ್ತದೆ.
ಅನೇಕ ಸಾಹಿತ್ಯ ಗೋಷ್ಠಿಗಳಲ್ಲಿ ಅಧ್ಯಕ್ಷ ಸ್ಥಾನವನ್ನೂ, ಮುಖ್ಯ ಅತಿಥಿ ಸ್ಥಾನವನ್ನೂ ಅಲಂಕರಿಸಿದ್ದು, ಸಾಹಿತ್ಯ ಸನ್ಮಾನಗಳನ್ನು ಪಡೆದಿದ್ದು, ಸಾಹಿತ್ಯ ಚಟುವಟಿಕೆಗಳಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ
ಇತ್ತೀಚೆಗೆ ನವೆಂಬರ್ ತಿಂಗಳಿನಲ್ಲಿ (2024) ಸೌದಿ ಅರೇಬಿಯಾದ ಅಲ್ಕೋಬಾರ್ ನಲ್ಲಿ ಕನ್ನಡ ಭಾಷೆಯ ಕುರಿತು ಜನ ಜಾಗೃತಿ ಮೂಡಿಸಿ, ಕನ್ನಡ ಸಂಘದ ವತಿಯಿಂದ ಗೌರವದ ಅಭಿನಂದನೆಯನ್ನು ಸ್ವೀಕರಿಸಿದ್ದಾರೆ
.
ಪ್ರಸ್ತುತ ಮಂಗಳೂರಿನಲ್ಲಿ ಮಗನೊಂದಿಗೆ ವಾಸ್ತವ್ಯ ಹೊಂದಿದ್ದು, ಸಾಹಿತ್ಯದ ವಿವಿಧ ಪ್ರಕಾರಗಳಾದ ಗಝಲ್, ಛಂದಸ್ಸು, ಷಟ್ಪದಿ, ವೃತ್ತಗಳನ್ನು ಸುಲಲಿತವಾಗಿ ಬರೆಯುವ ಸಾಮರ್ಥ್ಯ ಗಳಿಸಲು ಸಾಧ್ಯವಾದುದು ತಾಯಿ ಸರಸ್ವತಿಯ ಅನುಗ್ರಹವೆಂದು ಭಾವಿಸಿದ್ದಾರೆ
ಬಿ ಸತ್ಯವತಿ ಭಟ್ ಕೊಳಚಪ್ಪು
ಮಂಗಳೂರು.
ಜಂಗಮವಾಣಿ ಸಂಖ್ಯೆ: 9480530420.
ವೃದ್ದಾಪ್ಯದ ನೋವು ಸಂಕಟವನ್ನು ಬಹಳ ಮಾರ್ಮಿಕವಾಗಿ ಬಿಂಬಿಸಿದ ಕವಿತೆ, ಹೃದಯ ತಟ್ಟಿತು.