ʼವೈರಾಗ್ಯನಿಧಿ ಅಕ್ಕಮಹಾದೇವಿʼವಿಶೇಷ ಬರಹ-ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ.

ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಯಲ್ಲಿ ವಚನ ಸಾಹಿತ್ಯವೆಂಬದು ಮೇರು ಪರ್ವತವಿದ್ದಂತೆ, ಅದರಲ್ಲೂ 12ನೇ ಶತಮಾನದ ವಚನಕಾರರಲ್ಲಿ ಅತ್ಯಂತ ಕಿರಿಯ ವಚನಗಾರ್ತಿಯಾಗಿ ಕನ್ನಡದ ಪ್ರಪ್ರಥಮ ಕವಯತ್ರಿ ಯಾಗಿ, ಅಕ್ಕರೆಯ ಅಕ್ಕನಾಗಿ ಸುಮಾರು 434 ಕ್ಕೂ ಹೆಚ್ಚು ವಚನಗಳನ್ನು ರಚಿಸಿ “ಯೋಗಾಂಗ ತ್ರಿವಿಧಿ” ಕೃತಿಯ ಕರ್ತೃವಾಗಿ ಅಜರಾಮರಳಾಗಿರುವ ಮಹಾದೇವಿ ಅಕ್ಕ ಇಂದಿಗೂ ಮುಂದಿಗೂ ಎಂದೆಂದಿಗೂ ಪ್ರಸ್ತುತ.

ಕರ್ನಾಟಕದ ಮೀರಾಬಾಯಿ ಎನಿಸಿಕೊಂಡ ಅಕ್ಕಮಹಾದೇವಿಯ ಜೀವನಗಾಥೆಯೇ ಅಸಾಮಾನ್ಯ,ಅಸಾಧಾರಣ ,  ವೈಶಿಷ್ಟ್ಯ, ವಿಚಾರ ಪೂರ್ಣ ಕಥನ,  ಐತಿಹ್ಯವೇ ಒಂದು ವಿಸ್ಮಯ.

ನಿರ್ಮಲ ಶೆಟ್ಟಿ /ಓಂಕಾರ ಶೆಟ್ಟಿ, ಸುಮತಿ/ ಲಿಂಗಮ್ಮ ಇವರ ಸುಪುತ್ರಿಯಾಗಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುತಡಿ ಎಂಬ ಗ್ರಾಮದಲ್ಲಿ ಸಾಮಾನ್ಯ ವರ್ಗದಲ್ಲಿ ಜನಿಸಿದ ಮಹಾದೇವಿ ಅತ್ಯಂತ ಸಂಸ್ಕಾರವಂತಳಾಗಿ ಶಿವಭಕ್ತೆಯಾಗಿ ತನ್ನ ಬಾಲ್ಯವನ್ನು ಕಳೆಯುತ್ತಾಳೆ. ತನ್ನ ಯೌವನಾವಸ್ಥೆಯಲ್ಲಿ ಕೌಶಿಕ ಮಹಾರಾಜನ ಕಣ್ಣಿಗೆ ಬಿದ್ದ ಈಕೆ  ದೊಡ್ಡವರ ಒತ್ತಾಯಕ್ಕೆ ಮಣಿದು, ಮನಸ್ಸಿಲ್ಲದ ಮನಸ್ಸಿನಿಂದ ಮೂರು ಷರತ್ತುಗಳ ಮುಂದಿಟ್ಟು ಕೌಶಿಕನನ್ನು ವಿವಾಹವಾಗುತ್ತಾಳೆ.ಸ್ವಾಭಿಮಾನದ ಪ್ರತೀಕವಾದ ಅಕ್ಕ ತನ್ನ ಶರತ್ತುಗಳಿಗೆ ಲೋಪವಾದಾಗ ಲೌಕಿಕ ಗಂಡನನ್ನು ತ್ಯಜಿಸಿ ಆಧ್ಯಾತ್ಮಿಕ ಗಂಡನಾದ ಚೆನ್ನಮಲ್ಲಿಕಾರ್ಜುನನ್ನು ಅರಸಿ , ಚಿಕ್ಕ ವಯಸ್ಸಿನಲ್ಲಿಯೇ ಸರ್ವ ಸುಖಗಳನ್ನೂ ಪರಿತ್ಯಜಿಸಿ, ಸಕಲ ಪರೀಕ್ಷೆಗಳನ್ನು ಎದುರಿಸಿ, ಕೇಶಾಂಬರಿಯಾಗಿ ಅರಮನೆಯಿಂದ ಗುರು ಮನೆಯನ್ನರಸಿ ಹೊರಡುತ್ತಾಳೆ.

ಹರನೇ ತನ್ನ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡ ಸೀಮೆಯಿಲ್ಲದ ನೀಸ್ಸಿಮ ಚೆಲುವನಿಗೆ ಮಾತ್ರ ಒಲಿದೆ ನೋಡ, ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ,ಶರಣಸತಿ ಲಿಂಗಪತಿ ಎಂಬ  ಭಕ್ತಿ ಭಾವದಿಂದ ಚೆನ್ನಮಲ್ಲಿಕಾರ್ಜುನನನ್ನು ಅರಸಿ ಹೊರಟ ವೀರ ವಿರಾಗಿಣಿಗೆ  ಹೆಜ್ಜೆ ಹೆಜ್ಜೆಗೂ ಸತ್ವ ಪರೀಕ್ಷೆಗಳು, ಅನುಭವ ಮಂಟಪದ ಮೊದಲ ಪ್ರವೇಶದಲ್ಲಿ  ಅಲ್ಲಮ ಪ್ರಭುಗಳಿಂದ ಅಘಾದ ಪ್ರಶ್ನೆಗಳ ಸರಮಾಲೆಗೆ ಒಳಗಾದ ಈಕೆ ಅಗ್ನಿಯಲ್ಲಿ ಮಿಂದೆದ್ದ ಪರಿಶುದ್ಧ ಚಿನ್ನದಂತೆ, ಅನುಭವ ಮಂಟಪದ ಅಧ್ಯಕ್ಷರಾದ ಅಲ್ಲಮ ಪ್ರಭುಗಳಿಂದ ಸೈ ಅನ್ನಿಸಿಕೊಂಡು ,ವೈರಾಗ್ಯನಿಧಿ ಎಂಬ ಬಿರುದು ಪಡೆದಾಕೆ.
 ತುಂಬು ಯೌವ್ವನದ ಸತಿ ನೀನು ಇತ್ತಲೇಕೆ ಬಂದೆಯವ್ವ  …ನಿನ್ನ ಪತಿ ಯಾರು ಹೇಳ ಎಂಬ ಅಲ್ಲಮರ ಮಾತಿಗೆ ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ಸಾವಕೆಡುವ ಗಂಡನನ್ನು ಬಯಸಿದವಳಲ್ಲ ಎಂದು ದಿಟ್ಟವಾಗಿ ಉತ್ತರಿಸುವ ಮಹಾದೇವಿಗೆ ನಿನ್ನ ದೇಹದ ಮೋಹ ಸೌಂದರ್ಯದ ಮೋಹ ನಿನಗೆ ಇನ್ನೂ ಉಳಿದಿದೆಯಲ್ಲವೇ ಅದಕ್ಕೆಂದೆ ಕೇಶಾಂಬರಿಯಾಗಿ ನಿನ್ನ ದೇಹವನ್ನು ಮುಚ್ಚಿಟ್ಟುಕೊಂಡಿರುವೆ ಎಂಬ ಮಾತಿಗೆ ‘ಕಾಮ’ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇಯಿಲ್ಲ,ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ,ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ,ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ, ಜೌವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮವ ಸುಟ್ಟುರಿಯುವ ಭಸ್ಮವ ನೋಡಯ್ಯ, ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆಬರಹವ ತೊಡೆದೆನು, ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿ ಕೊಟ್ಟಿಲ್ಲ. ಫಲಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡೆದು ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು ಆ ಭಾವದಿಂದ ಕೇಶಾಂಬರಿಯಾಗಿರುವೆ ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ ಎಂಬ ಅಕ್ಕನ ಧೀರನುಡಿಯನ್ನು ಕೇಳಿ ಅಲ್ಲಮಪ್ರಭುಗಳು ಪರಿಪರಿಯಾಗಿ ಪ್ರಶ್ನಿಸಿ, ಅರಿಷಡ್ವಗ೯ಗಳನ್ನು ಗೆದ್ದ ಅಕ್ಕನನ್ನು ವಿಶ್ವ ಸ್ತ್ರೀ ಕುಲದ ಜ್ಯೋತಿ ನೀನು,ನಿನ್ನ ನಿಲುವನ್ನು ಜಗತ್ತಿಗೆ ಪರಿಚಯಿಸಲಷ್ಟೇ ನಾನಿಷ್ಟು ನಿಷ್ಟುರ ಕಠೋರನಾದೆ,ಜ್ಞಾನದ ಘನ ಮಹಿಮಳು ನೀನು, ಸದ್ವಿನಯ ಸದಾಚಾರ ವಿಶ್ವಾಸಗಳ ರತ್ನದಗಣಿ ನೀನು, ದಿಟ್ಟ ಹೆಜ್ಜೆಯ ಮೆಟ್ಟಿ ಬಂದಿರುವ ಮಹಾತಾಯಿ, ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದು ಕೈ ಮುಗಿಯುವರು.ಪ್ರಭುಗಳ ಮಾತನ್ನು ಪುರಸ್ಕರಿಸಿದ ಬಸವಣ್ಣನವರು ನಮಗೆಲ್ಲರಿಗೂ ಗುರುವಾಗ ಬಲ್ಲವಳು ತಾಯಿ, ಈ ಜಗಕೆ ಅಕ್ಕ…. ಮಹದೇವಿ ಅಕ್ಕ ಎಂದು ಕೈ ಮುಗಿಯವರು.

ಅಕ್ಕನ ಪ್ರತಿಯೊಂದು ವಚನಗಳು ಅರ್ಥಗರ್ಭಿತ, ಈಕೆ ತನ್ನ ಒಂದು ವಚನದಲ್ಲಿ,

ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗೆ ಅಂಜಿ ದೊಡೆಯಂತಯ್ಯ, ಸಮುದ್ರದ ತಟದಲ್ಲೊಂದು ಮನೆಯ ಮಾಡಿ ನೊರೆತೆರೆಗಳಿಗಂಜಿದೊಡೆ ಎಂತಯ್ಯ
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಯಂತಯ್ಯ
ಚನ್ನಮ್ಮಲ್ಲಿಕಾರ್ಜುನ ದೇವಾ ಕೇಳಯ್ಯಾ

ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲಿ ಕೋಪವ ತಾಳದೆ ಸಮಾಧಾನಿ ಯಾಗಿರಬೇಕು ಎಂಬ ತತ್ವವನ್ನು ಅರುಹುತ್ತ  ಜಗತ್ತಿನಲ್ಲಿ ಮನುಜರು ಹೇಗೆ ಬದುಕಬೇಕೆಂಬ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ


2 thoughts on “ʼವೈರಾಗ್ಯನಿಧಿ ಅಕ್ಕಮಹಾದೇವಿʼವಿಶೇಷ ಬರಹ-ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ.

  1. ನಾನು ಮೆಚ್ಚುವ ಅತ್ಯಂತ ಪ್ರಭಾವಶಾಲಿ ವ್ಯಕ್ತಿತ್ವ. ನಿಮ್ಮ ಬರಹದಲ್ಲಿ ಸುಂದರವಾಗಿ ಚಿತ್ರೀತವಾಗಿದೆ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು.

  2. ನನ್ನ ಅತ್ಯಂತ ಪ್ರೀತಿ ಪಾತ್ರ ನಾಯಕಿ ಎಂದರೆ ಅಕ್ಕಮಹಾದೇವಿ ಸರ್ ಧನ್ಯವಾದಗಳು ನಿಮ್ಮ ಅಭಿಮಾನದ ಓದಿಗಾಗಿ ಮತ್ತು ಪ್ರತಿಕ್ರಿಯೆಗಾಗಿ

Leave a Reply

Back To Top