
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಗಿನ್ನಿಸ್ ದಾಖಲೆಯ ಹೊಟ್ಟೆ
ಮಾನವನದಂತೂ ಅಲ್ಲ.

ಮುಂಜಾನೆಯಿಂದ ಸಂಜೆಯವರೆಗೂ ಒಂದಿಲ್ಲೊಂದು ಆಹಾರ ಪದಾರ್ಥವನ್ನು ಅರೆಯುತ್ತಲೇ ಇರುವವರನ್ನು ಹೊಟ್ಟೆಬಾಕ ಅಥವಾ ಕೂಳಬಾಕರೆಂದು ಕರೆಯುತ್ತೇವೆ.
ಆದರೆ, ಅದೇ ಸ್ಪರ್ಧೆಯಲ್ಲಿ ಮೂವತ್ತು – ನಲವತ್ತು ಇಡ್ಲಿಗಳನ್ನು ಕುಳಿತ ಪಟ್ಟುವಿನಲ್ಲೇ ತಿಂದು ಇಡ್ಲಿ ವೀರರೆಂದು ನಾವೇ ಪಟ್ಟ ಕಟ್ಟಿಕೊಳ್ಳುವುದು ಅದು ಬೇರೆ ಮಾತು.
ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ಉತ್ತರ ಕರ್ನಾಟಕದ ಜನಪದೋತ್ಸವದಲ್ಲಿ ನಿಗದಿತ ವೇಳೆಯಲ್ಲಿ ಅತ್ಯಧಿಕ ರೊಟ್ಟಿ ತಿಂದವನಿಗೆ “ರೊಟ್ಟಿವೀರ” ಎಂದು ಬಿರುದು ಕೊಟ್ಟಂತೆ…
ಒಟ್ಟಿನಲ್ಲಿ ಕಂಡಾಗೊಮ್ಮೆ ಕೂಳು ಮುಕ್ಕುತ್ತಲೇ ಇರುವವರನ್ನು ನಾವು ತಿನಿಸುಬಾಕರೆಂದು ಕರೆಯುವುದು ಒಂದು ರೂಢಿ.
ಈ ವಿಷಯದಲ್ಲಿ ಸರ್ವಭಕ್ಷಕನಾದ ವರಾಹ ಇಲ್ಲಿ ನೆನಪಿಗೆ ಬಂದರೆ ಅದು ಸಹಜವೇ.
ಹೀಗೆ ಹೇಳುತ್ತ ಮನುಷ್ಯ ಪ್ರಾಣಿಗಳನ್ನು ಮಾತ್ರ ಕುಂಭಕರ್ಣ ಕುಲಕ್ಕೆ ಸೇರಿಸಿದರೆ ಹಕ್ಕಿಗಳು ಸಿಟ್ಟಾದಾವು.
“ ರೆನ್ “ ನಂತಹ ಪಕ್ಷಿಗಳು ಸಹ ಈ ವಿಚಾರದಲ್ಲಿ ನಾವು ಕಮ್ಮಿಯೇನಲ್ಲವೆಂದುಕೊಳ್ಳುತ್ತವೆ. ಹೊಟ್ಟೆ ಬಿರಿಯ ತಿನ್ನುವ ಅವುಗಳ ಅಭ್ಯಾಸ ಕಂಡು ಪಕ್ಷಿವಿಜ್ಞಾನಿಗಳಂತೂ
ಹೌಹಾರಿದ್ದಾರೆ .
ಅಹಲ್ಲಾದಕರ ಸಿಹಿಯುಳ್ಳ ಬಿಸ್ಕೆಟ್ ಒಂದನ್ನು ತಿಂದು ನೀರು ಕುಡಿಯುವಷ್ಟರಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುವ ನಮಗಿಂತ ಈ “ರೆನ್” ಹಕ್ಕಿಗಳದೇ ಉತ್ತಮ ದಾಖಲೆಗಳಿವೆ.
ಅವು “ಸಾರ್ಲೆಟ್ ಟಾಂಜರ್ “ ಎನ್ನುವ ಹೆಸರಿನ ಪತಂಗಗಳನ್ನು ಮತ್ತು ಸಸ್ಯ ಉಪದ್ರವಿ ಕಂಬಳಿ ಹುಳುಗಳನ್ನು ನಿಮಿಷವೊಂದಕ್ಕೆ
ಮೂವತ್ತೈದಕ್ಕಿಂತ ಹೆಚ್ಚಿನ ಸಂಖ್ಯೆಯ ಜಂತುಗಳನ್ನು ಅವು ನುಂಗಿ ಬಿಡುತ್ತವೆ!!
ಯುರೋಪಿನ ಹಾಡು ಹಕ್ಕಿ ಈ “ ರೆನ್” ತನ್ನ ಮರಿಗಳಿಗೆ ಗಂಟೆ ಒಂದಕ್ಕೆ ಸರಾಸರಿ ಮೂವತ್ತೇಳು ಸಲ ಆಹಾರ ಒದಗಿಸುತ್ತದೆ . ದಾಖಲೆ ಬರೆಯುವ ಈ ಹಕ್ಕಿ* ಹದಿನೈದು ಗಂಟೆ ನಲವತ್ತೈದು ನಿಮಿಷಗಳಲ್ಲಿ ಒಂದು ಸಾವಿರದ ಎರಡು ನೂರಾ ಹದಿನೇಳು ಬಾರಿ ಆಹಾರದ ಗುಟುಕುಗಳನ್ನ ಮರಿ ಹಕ್ಕಿಯ ಬಾಯಿಗೆ ತಂದು ಹಾಕುತ್ತದೆ !!
ಕಾಳುಗಳನ್ನು ತಿಂದು ಹಾಕಿದ ಇದರ ಹೊಟ್ಟೆ ಬಗೆದು ನೋಡಲಾಗಿ ಜಠರದ ಚೀಲದಲ್ಲಿ ಇನ್ನೂ ಕರಗದೆ ಇದ್ದ ಐದು ಸಾವಿರ ಕಾಳುಗಳನ್ನು ವಿಜ್ಞಾನಿಗಳು ಬಿಟ್ಟ ಗಣ್ಣಿನಿಂದ ದಿಟ್ಟಿಸಿದ್ದರಂತೆ. ಸರಾಸರಿಯಲ್ಲಿ ಇದಕ್ಕಿಂತ ದೊಡ್ಡ ಹೊಟ್ಟೆ ಯಾವ ದೊಡ್ಡಪ್ಪರದು ಇರಲಿಕ್ಕಿಲ್ಲವೆಂದೆನ್ನಿಸುತ್ತದೆ.
ರಾತ್ರಿ ಹೊತ್ತು ಕಿಸಿದ ಕಣ್ಣಿನಿಂದ ಕಿರುಚುತ್ತಾ ಬಂದೆರಗಿ ಬೇಟೆ ಹೆಕ್ಕುವ ಬಿಳಿ ಗೂಬೆಗಳೂ ವರ್ಷವೊಂದಕ್ಕೆ ಸರಾಸರಿ ಸಾವಿರ ಇಲಿಗಳನ್ನು ಸಾಯಿಸುವುದು ಇನ್ನೊಂದೆಡೆಯ ದಾಖಲೆ.!!
ಒಂದಿಷ್ಟು ಕಾಳನ್ನು ಪಕಪಕನೆ ನುಂಗಿ ಒಂದೆಡೆ ನಿದ್ರೆ ಹೋಗಿಬಿಡುವ ಮನೆ ಮುಂದಿನ ಕೋಳಿ ನೋಡಿಯೇ ತಲೆದೂಗುವ ನಾವುಗಳು ಈ ದಾಖಲೆವೀರ “ರೆನ್” ಸುದ್ದಿಯ ಕೇಳಿ ಬೆರಗಾಗಿ ಬಾಯ್ ತೆರೆಯಬೇಕಷ್ಟೇ.
̲——————————————————————————————–

ಶಿವಾನಂದ ಕಲ್ಯಾಣಿ