ರೇಷ್ಮಾ ಕಂದಕೂರ ಅವರ ಕವಿತೆ-ಬಿಡದಿರಿ ನಮ್ಮತನ

ತನ್ನತನವ ಬಿಟ್ಟು
ತನ್ನದಲ್ಲದಕೆ ಹರಿ ಬಿಟ್ಟು
ಕನ್ನಿಕೆಯ ಹಿಂದೋಡಿ
ಕುನ್ನಿಯಂತಾಗಬೇಕೆ ಮೋಡಿ.

ನಮ್ಮೊಳಗಿನದ ಸರಿಸಿ
ಪರರದಕೆ ಮೋಹಿಸಿ
ದಾಹ ತೀರಿದ ಮೇಲೆ
ಎಡ ಬಿಡಂಗಿಯಾಗಬೇಕೆ.

ಹರಸುವರು ಮೊದಲು
ಮತ್ತಿನ ರಂಗು ತೋರಿಸಿ
ರಂಗಿನಾಟ ಆಡುವರು
ಕುಣಿಸುತಿಹರು ಮನ ಬಂದಂತೆ
ದಂಗಾಗದಿರು ಹಂಗು ತೊರೆದು.

ನೆಪ ಒಡ್ಡಿ ಕರೆವರು
ಕೊರಳ ಕೊಯ್ಯುವರು
ಪರ ಮೋಹ ತರವಲ್ಲ
ಓರೆ ಕೊರೆಗಳು ಸಹಜ ತಿದ್ದಿ ಮುಂದೆ ನಡೆ.


Leave a Reply

Back To Top