ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಹೇಗಾದರೂ ಬಂದು ನಿಂದು ಕತ್ತಲಾದ ಎದೆ ಬಾಂದಳಕೆ ಬೆಳಕಾಗು  ಗೆಳೆಯಾ
ಒಮ್ಮೆಯಾದರೂ ನೆನಪಿಸಿಕೊಂಡು ಅಳುವ ಮಂದಾರಕೆ ನಗುವಾಗು ಗೆಳೆಯಾ

ಮಾತಾಡದಿರಲಾರೆ ನೋಡದೆ ಬದುಕಲಾರೆ ಎನುವುದ ತಿಳಿಯಲಾರೆಯಾ
ಬೀಸೊ ಗಾಳಿಯಲಿ ಗಂಧವಾಗಿ ಬಂದು ಭಾವಯಾನಕೆ ಮಾತಾಗು ಗೆಳೆಯಾ

ಅರಗಳಿಗೆ ಬಿಟ್ಟು ಇರಲಾರೆ ಅಗಲಿಕೆಯನೆಂದೂ ಸಹಿಲಾರೆನೋ ಕೇಳಿಬಿಡು
ಓಡೋ ಮೋಡದ ಜೊತೆಗೂಡಿ ಬಾಳ ಪಯಣಕೆ ಜೊತೆಯಾಗು ಗೆಳೆಯಾ

ಯಾರ ನೋಡಿದರೂ ನೀ ಕಂಡಂತೆ ಭಾಸವಾಗಿ ಕಂಗಾಲಾಗಿರುವೆ ನಾನಿಂದು
ಉದಯರವಿ ಕಿರಣಗಳ ಜೀವಕುಸುಮದಂತೆ ತೃಷೆ ನೀಗಿಸೋ ಉಷೆಯಾಗು ಗೆಳೆಯಾ

ಅನುಳ ಹೃದಯ ಬಡಿತ ನಾಡಿಮಿಡಿತದ ಹಿಡಿತವೆಲ್ಲ ನಿನ್ನ ಹೆಸರನ್ನೇ ನುಡಿಯುತಿಹುದು
ಹೂದೋಟದಲರಳಿ ಮಧುತುಂಬಿ ನಿಂತ ಮಕರಂದಕೆ ದುಂಬಿಯಾಗು ಗೆಳೆಯಾ


Leave a Reply

Back To Top