ಕವಿ ಸಂಗಾತಿ
ತಿಂಗಳ ಕವಿ-
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಕವಿಪರಿಚಯ

ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ
ಸಂಸ್ಥಾಪಕರು ವಚನ ಅಧ್ಯಯನ ವೇದಿಕೆ ,ಅಕ್ಕನ ಅರಿವು, ಬಸವಾದಿ ಶರಣರ ಚಿಂತನ ಕೂಟ
ಡಾ ಶಶಿಕಾಂತ ಪಟ್ಟಣ ಅವರು ಔಷಧೀಯ ವಿಜ್ಞಾನದ ಒಬ್ಬ ಶ್ರೇಷ್ಠ ವಿಜ್ಞಾನಿ ಸಂಶೋಧಕ ವೈಚಾರಿಕ ಚಿಂತಕ , ಕವಿ ವಿಮರ್ಶಕ ಪ್ರಗತಿಪರ ಸಾಹಿತಿಗಳು. ಬುದ್ಧ ಬಸವ ಅಂಬೇಡಕರ ಲೋಹಿಯಾ ಜಯಪ್ರಕಾಶನಾರಾಯಣ ಅವರ ತತ್ವಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಪರಿವರ್ತನೆಯ ಕನಸು ಕಾಣುವ ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗದ ಸ್ವಾತಂತ್ರ ಹೋರಾಟದ ಮನೆತನದಲ್ಲಿ ಜನಿಸಿದವರು,
ಪ್ರಾಥಮಿಕ ಶಿಕ್ಷಣವನ್ನು ರಾಮದುರ್ಗ ಮತ್ತೆ ಮುಂದೆ ಸೈನಿಕ ಶಾಲೆ ವಿಜಯಪುರ ,ಪಿಯು ಸಿ ಕರ್ನಾಟಕ ಕಾಲೇಜು ಧಾರವಾಡ ಹೀಗೆ ಅಧ್ಯಯನಕ್ಕಾಗಿ ಬೇರೆ ಬೇರೆ ಊರುಗಳನ್ನು ಅಲೆಯುತ್ತ
ಮುಂದೆ ಬೆಳಗಾವಿಯ ಜೆ ಎನ್ ಮೆಡಿಕಲ್ ಕಾಲೇಜಿನಲ್ಲಿ ಔಷಧೀಯ ವಿಜ್ಞಾನ ಮಹಾವಿದ್ಯಾಲಯದಿಂದ ತಮ್ಮ ಬಿ ಫಾರ್ಮ ಮತ್ತು ಎಂ ಫಾರ್ಮ ಮುಗಿಸಿ ಅಲ್ಲಿಯೇ ಅಧ್ಯಾಪಕರಾಗಿ ಸೇವೆ ಆರಂಭಿಸಿದರು.
ಔಷಧ ವಿಜ್ಞಾನದ ಮೇಲೆ ತಮ್ಮ ಪಿ ಎಚ್ ಡಿ ಪದವಿಯನ್ನು ಬೆಂಗಳೂರಿನ ರಾಜೀವ ಗಾಂಧೀ ಆರೋಗ್ಯ ವಿಶ್ವ ವಿದ್ಯಾಲಯದಿಂದ ಪಡೆದರು . ಕೆ ಎಲ್ ಈ ಸಂಸ್ಥೆಯಲ್ಲಿ ಸುಮಾರು ಇಪ್ಪತ್ತು ವರುಷಗಳ ವರೆಗೆ ಕಾರ್ಯ ನಿರ್ವಹಿಸಿ ಮುಂದೆ ಮಹಾರಾಷ್ಟ್ರದ ಪುಣೆಯ ಫಾರ್ಮಸಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸುಮಾರು ಹನ್ನೆರಡು ವರುಷಗಳಿಂದ ಸೇವೆ ಸಲ್ಲಿಸುತ್ತಾ ಜೊತೆಗೆ ಕನ್ನಡ ಸಾಹಿತ್ಯ ಸೇವೆಯನ್ನು ಅಪಾರ ಪ್ರಾಮಾಣದಲ್ಲಿ ಮಾಡಿದ್ದು ಶ್ಲಾಘನೀಯವಾದ ಸಂಗತಿ.ಗಡಿನಾಡು ಬೆಳಗಾವಿಯಿಂದ ಮಹಾರಾಷ್ಟ್ರದ ಸಂಸ್ಕೃತಿ ನಗರ ಪುಣೆಯಲ್ಲಿ ತಮ್ಮ ವೃತ್ತಿ ಮತ್ತು ಪ್ರವೃತ್ತಿಗಳನ್ನು ಸಮತೋಲನಗೊಳಿಸಿ ಜನಾನುರಾಗಿ ಸಾಹಿತಿ ಎನಿಸಿದ್ದಾರೆ .
ಆಂಗ್ಲ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಮುಂದೆ ತಾಂತ್ರಿಕ ವೈದ್ಯಕೀಯ ಶಿಕ್ಷಣ ಇವುಗಳ ಜೊತೆ ಜೊತೆಗೆ ಕನ್ನಡ ಸಾಹಿತ್ಯದ ಮೇಲೆ ಅಪಾರವಾದ ಪಾಂಡಿತ್ಯವನ್ನು ಹೊಂದಿರುವ
ಡಾ ಶಶಿಕಾಂತ ಪಟ್ಟಣ ಅವರು ವಚನ ಸಾಹಿತ್ಯ ಸೃಜನ ಶೀಲ ಕನ್ನಡ ಕಾವ್ಯ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡು ಉತ್ತಮ ಸಾಹಿತ್ಯ ಕೃಷಿ ಮಾಡುತ್ತಿರುವುದು ನಮ್ಮೆಲ್ಲರ ಮಧ್ಯ ಒಬ್ಬ ದಿಟ್ಟ ಸಂಶೋಧಕ ಸಾಹಿತಿ ಕವಿಯಲ್ಲದೆ ನಮ್ಮನ್ನು ಪ್ರೋತ್ಸಾಹಿಸುವ ಸ್ನೇಹ ಜೀವಿ. ಅಕ್ಕನ ಅರಿವು ಬಸವಾದಿ ಶರಣರ ವಿಚಾರವೇದಿಕೆ ಮತ್ತು ವಚನ ಅಧ್ಯಯನಗಳ ಮೂಲಕ ಬಸವ ತತ್ವವನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರಚಾರ ಮತ್ತು ಪ್ರಸಾರ ಮಾಡುವ ಅವರ ಸಂಘಟನಾ ಕೌಶಲ್ಯ ಅಪ್ರತಿಮ ಮತ್ತು ಆದರಣೀಯವಾಗಿದೆ.
ಆತ್ಮೀಯ ಸ್ನೇಹಿತರು ಪ್ರಗತಿಪರ ಚಿಂತಕ ಸಾಹಿತಿ ಔಷಧ ವಿಜ್ಞಾನಿ ಡಾ ಶಶಿಕಾಂತ ಪಟ್ಟಣ ಇವರ ವಚನ ಚಿಂತನೆ ಅರ್ಥೈಸುವ ರೀತಿ ಮನೋಜ್ಞವಾಗಿದೆ. ಕನ್ನಡ ಭಾಷೆಯ ಮೇಲೆ ಪ್ರಭುತ್ವ ವಚನಗಳನ್ನು ಸಾಂದರ್ಭಿಕವಾಗಿ ವಿಶ್ಲೇಷಿಸುವ ಕೌಶಲ್ಯತೆಯನ್ನು ಮೆಚ್ಚುವಂತದ್ದು.
ವೃತ್ತಿ ಪ್ರವೃತ್ತಿ ಬೇರೆ ಬೇರೆಯಾದರು ಶರಣರ ಚಿಂತನೆಗಳನ್ನು ಆಶಯಗಳನ್ನು ವೈಚಾರಿಕವಾಗಿ
ಸದರಪಡಿಸುವಲ್ಲಿ ಅವರ ಸಿದ್ಧ ಮತ್ತು ಶುದ್ಧ ಹಸ್ತರೆಂದೇ ಹೇಳಬಹುದು. ಇವರು ಈಗಾಗಲೇ ಹತ್ತು ಕವನ ಸಂಕಲನಗಳನ್ನು ಪ್ರಕಟಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಉತ್ತಮ ಮೆಚ್ಚುಗೆಯ ಬೆಳವಣಿಗೆ . ಇವರ ನೇರ ದಿಟ್ಟ ನಿರಂತರ ಬಂಡಾಯ ಧೋರಣೆಯ ಜೊತೆಗೆ ಮಾನವ ಮೌಲ್ಯಗಳ ಮನುಷ್ಯ ಸಂಬಂಧ ಹಕ್ಕುಗಳು ಸ್ನೇಹ ಪ್ರೀತಿ ಇವುಗಳ ಬಗ್ಗೆ ತಮ್ಮ
ತಮ್ಮ ಕವನಗಳಲ್ಲಿ ವ್ಯಕ್ತ ಪಡಿಸಿದ್ದಾರೆ. ಇವರ ಕವನಗಳಲ್ಲಿ ಗಾಂಧಿ ಬುದ್ಧ ಬಸವ ಇವರ ಪ್ರಭಾವ ದಟ್ಟವಾಗಿ ಕಂಡು ಬರುತ್ತದೆ.ಸ್ನೇಹ ಪ್ರೀತಿ ಪ್ರೇಮ ಬಂಡಾಯದ ವಿಷಯಗಲ್ಲಿ ಇವರ ಮೊನಚಾದ ಟಿಕೆ ವಿಡಂಬನೆಯೂ ಏಳರನ್ನು ಆಕರ್ಷಿಸುವ ಅತಿ ವಿರಳ ಗುಣ. ಇವರಿಂದ ಇನ್ನೂ ಹತ್ತಾರು ಕವನ ಸಂಕಲನಗಳು ಪ್ರಕಟಗೊಳ್ಳಲಿ ಎಂಬ ಹರಕೆಗಳೊಂದಿಗೆ ಅವರಿಗೆ ಶುಭ ಕೋರುತ್ತೇನೆ.






ಡಾ ಶಶಿಕಾಂತ .ಪಟ್ಟಣ ಅವರ ಪ್ರಕಟಿತ ಕೃತಿಗಳು
1 ) ದೇವಲೋಕದ ಬಟ್ಟೆ -(ಶರಣ ವಿಚಾರ ಚಿಂತನಗಳು ) -2014
2 ) ಶರಣರ ದಾಂಪತ್ಯ ಧರ್ಮ ( ಸಂಪಾದನೆ ) 2017
3 ) ಭೂಮಿ ಉಳಿಸಿ ಇತರ ಲೇಖನಗಳು -2018
4 ) ಬಯಲ ರೂಪ ಮಾಡಿ ಬಯಲಾದ ಬಸವಣ್ಣ -2018
5 ) ಕಾಣಬಾರದ ಲಿಂಗ -2019
6) ವಚನ ಸಿರಿ ಭಾಗ 1 -( ಸಂಪಾದನೆ ) -2019
7 ) ಕನಸುಗಳೇ ಹೀಗೆ (ಕವನ ಸಂಕಲನ)2019
8 ನೀನು ಮೌನವಾಗುವ ಮುನ್ನ (ಕವನ ಸಂಕಲನ)2019
9 ಗಾಂಧಿಗೊಂದು ಪತ್ರ (ಕವನ ಸಂಕಲನ)-2021
10 ಸಿಹಿಯಾಯಿತು ಕಡಲು (ಕವನ ಸಂಕಲನ)-2021
11 ಮಾತಿನಿಂದ ಮೌನಕ್ಕೆ (ಕವನ ಸಂಕಲನ)-2021
12ಕಾಡಬೇಡ ಕರೋನಾ -2021
1 ಮತ್ತೆ ಮರಳಿ ಬನ್ನಿ (ಕವನ ಸಂಕಲನ)-2022
14 ಭ್ರೂಣ ಬರೆದ ಕವಿತೆ (ಕವನ ಸಂಕಲನ)-2022
15 ಸೂರ್ಯನೇಕೆ ಮುಳುಗಿದ ? (ಕವನ ಸಂಕಲನ)-2022
16 ಎತ್ತ ಹೋದರು ಶರಣರು -2021
17 ಮಾಟಕೂಟವೆಂಬ ತೆಪ್ಪವ ಮಾಡಿ -2022
18 ವಿಳಾಸವದನು ಬಸವಣ್ಣ -2022
19 ವಚನ ಸಿರಿ ಭಾಗ 1-2022
20 ವಚನ ಸಿರಿ ಭಾಗ 2-2022
21 ಬಸವ ಧರ್ಮ ಹೇಗೆ ಹೊಸ ಧರ್ಮ -2022
22 ಲಿಂಗಾಯತ ಮಾನವ ಹಕ್ಕುಗಳ ಚಳುವಳಿ -2022
23 ಬೇಲಿ ಮೇಲಿನ ಹೂಗಳು ಕವನ ಸಂಕಲನ -2022
24 ಪ್ರೇಮಪಾರಿವಾಳ ಕವನ ಸಂಕಲನ -2022
25 ಅರಿವಿನ ದೀವಿಗೆ ಅಲ್ಲಮ -2022
26 ಭಕ್ತಿ ಎಂಬ ಪೃಥ್ವಿಯ ಮೇಲೆ -2022
27 ಕನ್ನಡವ ಕಟ್ಟಿದರು ಕಲ್ಯಾಣ ಶರಣರು -2022
28 ಅಪ್ಪನ ಹೆಗಲು ಕವನ ಸಂಕಲನ 2023
29 ಸದ್ದಿಲ್ಲದೇ ಎದ್ದು ಹೋದೆ ಕವನ ಸಂಕಲನ 2023
30 ಅನುಭವ ಕಲಶ ಅಮೃತವರುಷ (ಸಂಪಾದನೆ) 2023
31 ಅನುಭವ ಸಿರಿ (ಸಂಪಾದನೆ…
******
ಶಶಿಕಾಂತ್ ಅವರ ಮೂರು ಕವಿತೆಗಳು
ನನ್ನ ಧ್ವನಿ ಕೇಳದು
ಗೆಳೆಯರೇ
ನಾನು ಒದರುತ್ತಿದ್ದೆನೆ
ಚೀರುತ್ತಿದ್ದೆನೆ ಕೂಗುತ್ತಿದ್ದೆನೆ
ನಿಮಗೇಕೆ ಕೇಳಲೊಲ್ಲದು
ನೀವು ಸದ್ದು ಗದ್ದಲದ
ಸಂತೆಯಲ್ಲಿರಬಹುದು
ನನ್ನ ಧ್ವನಿ ಕೇಳದು
ನೀವು ಗಾಢ ನಿದ್ರೆಯಲ್ಲಿ
ಗೊರಕೆ ಹೊಡೆಯುತ್ತಿರಬಹುದು
ನನ್ನ ಧ್ವನಿ ಕೇಳದು
ನೀವು ಜಾತ್ರೆಯ ಕುಣಿತದಲ್ಲಿ
ಸೋಗು ವೇಷವ ಹಾಕಿದ್ದೀರಿ
ನನ್ನ ಧ್ವನಿ ಕೇಳದು
ಕಳೆದು ಹೋಗಿರುವಿರಿ
ಜೀವನ ಸಮಸ್ಯೆಗಳಲ್ಲಿ
ನನ್ನ ಧ್ವನಿ ಕೇಳದು
ನೀವು ಸತ್ತಿರ ಬಹುದು
ಮಸಣದ ಗೋರಿಯಲ್ಲಿ
ನನ್ನ ಧ್ವನಿ ಕೇಳದು
ನೀವು ಕಿವುಡರಿರಬುದು
ಕಿಟಕಿಯಾಚಿನ ಶಬ್ದ
ನನ್ನ ಧ್ವನಿ ಕೇಳದು
ಎಷ್ಟೋ ವರುಷವಾಯಿತು
ನಾನು ಕೂಗುತ್ತಿದ್ದೆನೆ ನಿರಂತರ
ನನ್ನ ಧ್ವನಿ ಕೇಳದು
ಇಂಕಿಲಾಬ್ ಜಿಂದಾಬಾದ
ವಿಶ್ವಪಥಕೆ ಹೆಜ್ಜೆ ಹಾಕಿ
ನನ್ನ ಧ್ವನಿ ಕೇಳದು
ನನ್ನ ಗಟ್ಟಿ ಧ್ವನಿಗೆ
ನಿಮ್ಮ ಧ್ವನಿ ಕೂಡಬೇಕು
ಬುದ್ಧ ಬಸವರ ಕ್ರಾಂತಿ ನೆನೆಯಬೇಕು
****
ಮನುಜನಾಗಿ ಬದುಕುವಾಸೆ
ನವಿಲಿನಂತೆ ರೆಕ್ಕೆ ಬಿಚ್ಚಿ
ನೆಲದ ಮೇಲೆ ಕುಣಿಯುವಾಸೆ
ಗುಬ್ಬಿಯಂತೆ ಗೂಡು ಬಿಟ್ಟು
ಆಗಸದಿ ಹಾರೋವಾಸೆ
ರಾಗದಲ್ಲಿ ಹಾಡೋ ಇಚ್ಛೆ
ಕಳ ಕಂಠದ ಕೋಗಿಲೆ
ತಂಪು ಕೊಳದಲಿ ಮಿಂದು
ಹ೦ಸೆಯಾಗಿ ನಲಿಯುವಾಸೆ
ಮಂಗನಂತೆ ಕೊಂಬೆ ಕೊಂಬೆ
ಜಿಗಿಯುವಾಸೆ
ಇಣಚಿಯಂತೆ ಅತ್ತ ಇತ್ತ
ಇಣುಕುವಾಸೆ
ಚಿಟ್ಟೆಯಂತೆ ಕನಸು ಹೊತ್ತು
ಹೂವು ಮರವ ಮುಟ್ಟುವಾಸೆ
ಮೀನಿನಂತೆ ಕಡಲಾಳದಿ
ನೀರಿನಲ್ಲಿ ಈಜುವಾಸೆ
ಆನೆಯಂತೆ ಅಡವಿಯಲ್ಲಿ
ರಾಜನಾಗಿ ಮೆರೆಯುವಾಸೆ
ಕುದುರೆಯಾಗಿ ದಶ ದಿಕ್ಕಿಗೆ
ಗಾಳಿಯಂತೆ ಓಡುವಾಸೆ
ಇಂದ್ರಲೋಕ ಚಂದ್ರಲೋಕ
ಗಗನದಲ್ಲಿ ಸುತ್ತುವಾಸೆ
ಮನುಷ್ಯನಾಗಿ ಭೂಮಿ ಮೇಲೆ
ಮನುಜನಾಗಿ ಬದುಕುವಾಸೆ
****
ಬಸವನೆಂಬುದೇ ಮಂತ್ರ
ದಿನ ದಲಿತರ ಅಪ್ಪಿಕೊಂಡನು
ನ್ಯಾಯ ನಿಷ್ಟುರಿ ಬಸವನು .
ಜಾತಿ ಭೇದ ತೊಡೆದು ಹಾಕಿ
ಶಾಂತಿ ಸಮತೆ ಕೊಟ್ಟನು .
ವರ್ಗ ವರ್ಣ ಕಿತ್ತು ಹಾಕಿ
ಲಿಂಗ ಭೇದವ ತೊರೆದನು
ಗುಡಿ ಗೋಪುರ ಜಡ ಜಗಕೆ
ಕೊನೆ ಹೇಳಿದ ಧೀರ ಬಸವನು .
ಕಾವಿ ಮಠವ ಬೇಡವೆಂದ
ದುಡಿಮೆ ದೇವರೆಂದ ಬಸವ
ಶ್ರಮವೇ ತಪವು ಜಪವೆಂದನು
ಕಾಯವೇ ಕೈಲಾಶವೆಂದನು .
ವಚನ ಶಾಸ್ತ್ರ, ಪ್ರಬಲ ಅಸ್ತ್ರ
ಗಣಾಚಾರವೇ ಮಾರ್ಗವು .
ಸತ್ಯ ದರ್ಶನ ಷಟಸ್ಥಲವು
ಬಸವ ಬಯಲು ಮೋಕ್ಷವು
ಬಸವನೆಂಬುದೇ ಮಂತ್ರ ವಿಭೂತಿ
ಬಸವ ಪಾವನ ರುದ್ರಾಕ್ಷಿಯು
ಬಸವ ಗುರು ಲಿಂಗ ಜಂಗಮ
ಬಸವ ಪಾದೋದಕ ಪ್ರಸಾದವು .
ಬಸವ ಸ್ಮರಣೆ ಪುಣ್ಯ ಕಾಯವು
ಬಸವ ಅವಿರಳ ಮುಕ್ತಿಯು .
ಡಾ.ಶಶಿಕಾಂತ.ಪಟ್ಟಣ ಪುಣೆ

Excellent Article Sir
ಶ್ರೇಷ್ಠ ಕನ್ನಡ ಸಾಹಿತ್ಯ ಸೇವೆ
ಉತ್ತಮ ಪರಿಚಯ ಸರ್
ವೃತ್ತಿ ಹಾಗೂ ಪ್ರವೃತ್ತಿಗಳನ್ನು ಸದಾಚಾರದದ ಬುನಾದಿಯ ಮೇಲೆ ನಿಲ್ಲಿಸಿ,ಜೀವನ ಸಮನ್ವಯಗೊಳಿಸಿ ಕೊಂಡವರು. ಕಲೆ,ಸಂಸ್ಕೃತಿ,ಕನ್ನಡ ಸಾಹಿತ್ಯದ ಉಪಾಸಕರು, ಡಾ.ಶಶಿಕಾಂತ್.ಪಟ್ಟಣ ಸರ್.ಮಹಾರಾಷ್ಟ್ರ ದಲ್ಲಿದ್ದು,ಕನ್ನಡ ಸಾಹಿತ್ಯ, ಶರಣ ಚಿಂತನೆಯ ಜೀವಂತಿಕೆಯನ್ನು ನಾಡಿನುದ್ದಕ್ಕೂ ಪರಿಚಯಿಸಿತಕ್ಕಂಥ ವಿದ್ವಾಂಸರು,ಅಪ್ಪಟ ಬಸವ ತತ್ವ ಪರಿಪಾಲಕರು. ಸರ್ ಅವರ ಬಹುಶ್ರುತ ಪಾಂಡಿತ್ಯ ಹಾಗೂ ಅದನ್ನು ಬದುಕಿಗೆ ಮೇಳೈಸಿರುವ ಜೀವನ ಪ್ರೀತಿ,ಅವರ ಅನೇಕ ಬರಹಗಳಲ್ಲಿ ಕಂಡು ಬರುತ್ತವೆ. ಅವರ ವಿದ್ವತ್ಪೂರ್ಣ ಉಪನ್ಯಾಸ,ಬರಹಗಳು,ಜೀವನದ ಅಂತರಂಗ, ಹಾಗೂ ಬಹಿರಂಗಗಳನ್ನು ಸಮರ್ಥವಾಗಿ ಅನಾವರಣ ಗೊಳಿಸುತ್ತವೆ.ಹಾಗೂ ಸಹೃದಯ ಓದುಗರ ಜ್ಞಾನದಾಹ ವನ್ನು ತಣಿಸುವಲ್ಲಿ ಶ್ರಮಿಸುತ್ತವೆ. ನೀವೂ ದಿಟ್ಟ ಸಂಶೋಧಕರು,ಪ್ರಗತಿಪರ ಚಿಂತಕರು,ಬುದ್ಧ,ಬಸವ,ಅಂಬೇಡ್ಕರ್,ಲೋಹಿಯಾ ಅವರ ತತ್ವ ಆದರ್ಶ ಗಳೊಂದಿಗೆ ಬದುಕುತ್ತ,ತಮ್ಮೊಂದಿಗೆ ಇತರರನ್ನು ಸಾಹಿತಿಕವಾಗಿ ಬೆಳೆಯಲು ಪ್ರೇರೇಪಿಸುವ ಕವಿಗಳು.ನಿಮ್ಮ ಕವನಗಳಲ್ಲಿ ಮಾನವೀಯ ಮೌಲ್ಯಗಳು,ಪ್ರಕೃತಿ ಪ್ರೇಮ,ವಚನ ಸಾಹಿತ್ಯ ಚಿಂತನೆ ಹಲವು ಮೌಲಿಕ ವಿಚಾರಗಳನ್ನು ತುಂಬಾ ಸೊಗಸಾಗಿ ಅನಾವರಣಗೊಂಡಿರುತ್ತವೆ. ಹೊಸ ವರ್ಷದ ಜಿಗುರಿನ ಹೊಳಪಂತೆ..ನೀವು ರಚಿಸಿರುವ ನವೋಲ್ಲಾಸದ ಕಾವ್ಯ ಕುಸುಮಗಳ ಸೌಗಂಧದ ಮಕರಂದ ಓದುಗರು ಹೀರಿ ಹರ್ಷ ವ್ಯಕ್ತ ಪಡಿಸುವುದರಲ್ಲಿ ಸಂದೇಹವಿಲ್ಲ. ಜೊತೆಗೆ,ನಿಮ್ಮ ಪುಸ್ತಕಗಳು ಉತ್ತಮ ಆಕರ ಗ್ರಂಥಗಳಾಗಿವೆ. ಕನ್ನಡ ಸಾರಸ್ವತ ಲೋಕಕ್ಕೆ ಇವೆಲ್ಲ ಮೌಲಿಕ ಸೇರ್ಪಡೆ. ಹೀಗೆ ಇನ್ನೂ ಹಲವು ತಮ್ಮ ಕೃತಿಗಳು,ಕವನ ಸಂಕಲನಗಳು ಪ್ರಕಟ ಗೊಳ್ಳಲಿ ಎಂದು ಆಶಿಸುತ್ತೇನೆ. ಶುಭ ಹಾರೈಕೆಗಳೊಂದಿಗೆ. .
ಕವಿಯ ಮನದ ಸೂಕ್ಷ್ಮತೆಗಳು… ಪ್ರಕೃತಿಯ ಆರಾಧನೆ… ಜಗವ ಪ್ರೀತಿಸುವ ರೀತಿ… ಎಲ್ಲದಕ್ಕೂ ತಕ್ಷಣವೇ ಸ್ಪಂದಿಸುವ ಮನೋಭಾವನೆ…ಸುತ್ತಲಿನ ಅಳಲು ಕಂಡು
ಮರುಗುವ ಜೀವ… ಸಾಮಾಜಿಕ ಶೋಷಣೆಗಳನ್ನು ಧಿಕ್ಕರಿಸುವ ದಿಟ್ಟ ನಡವಳಿಕೆ…ಬಸವ – ಬುದ್ಧ – ಅಂಬೇಡ್ಕರ್ ಆರಾಧಕರು… ಎಲ್ಲರನ್ನೂ ನಮ್ಮವರೆಂದು ಅಪ್ಪಿಕೊಳ್ಳುವ ಪರಿ… ಇನ್ನೂ ಲೆಕ್ಕವಿಲ್ಲದಷ್ಟು
ಸಕಾರಾತ್ಮಕ ಗುಣಗಳಿರುವ ಡಾ. ಶಶಿಕಾಂತ ಪಟ್ಟಣ ಸರ್ ಅವರು ” ತಿಂಗಳ ಕವಿ ” ಶೀರ್ಷಿಕೆ ಯನ್ನು ಮೀರಿದ ಘನ ವ್ಯಕ್ತಿತ್ವದವರು ಎಂದು
ನನ್ನ ಅನಿಸಿಕೆ. ಒಂದಕ್ಕಿಂತ ಒಂದು ಸುಂದರವಾದ ಪದ ಲಾಲಿತ್ಯಗಳೊಂದಿಗೆ ಮೂಡಿ ಬರುವ ಅವರ ಕವನಗಳು ಎಲ್ಲರ ಹೃದಯವನ್ನು ಮುಟ್ಟುವಲ್ಲಿ ಎರಡು ಮಾತಿಲ್ಲ.
ಮತ್ತೆ ಮತ್ತೆ ಗುನುಗುನಿಸುವಂತೆ… ಪ್ರೀತಿ -ವಿಶ್ವಾಸ ಮೂಡಿಸುವಂತೆ…ನಮ್ಮ ಜೀವನದಲ್ಲಿ ಏನಾದರೂ ತತ್ವವನ್ನು ಅಳವಡಿಸಿಕೊಳ್ಳುವಂತೆ ಅವು ನಮ್ಮನ್ನೆಲ್ಲರನ್ನೂ ಆವರಿಸಿಕೊಂಡುಬಿಡುತ್ತವೆ. ಕವನಗಳೆಂದರೆ ನಮ್ಮನ್ನು ಅವು ಅನವರತ ಕಾಡಬೇಕು..
ಪ್ರಶ್ನೆ ಹುಟ್ಟುಹಾಕಬೇಕು… ಒಮ್ಮೊಮ್ಮೆ ಉತ್ತರವೂ ಸಿಗಬೇಕು…ಮನಸ್ಸಿಗೆ ಸಮಾಧಾನ ಆಗುವಂತಿರಬೇಕು… ಖುಷಿಯ ಲಹರಿಯಲ್ಲಿ ತೇಲುವಂತಿರಬೇಕು…ಸಾಮಾಜಿಕ ನ್ಯಾಯ ಒದಗಿಸುವಂತಿರಬೇಕು…ಗೆಳೆತನದ ಸ್ಪರ್ಶವಿರಬೇಕು…. ದೇಶಾಭಿಮಾನದ ಹೊಳಹು ತುಂಬಿರಬೇಕು… ರಾಜಕಾರಣದ ವಿಡಂಬನೆ ಇರಬೇಕು.. ಹೀಗೆ ಎಲ್ಲವನ್ನೂ ಒಳಗೊಂಡ ಪಟ್ಟಣ ಸರ್ ಕವನಗಳು ಮೃಧು ಮಧುರ… ಆದರೆ ಒಮ್ಮೊಮ್ಮೆ ಪಾಠ ಕಲಿಸುವ ಮಾಧ್ಯಮವಾಗಿಯೂ ತಮ್ಮ ಕಾರ್ಯವನ್ನು
ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತವೆ..
ತಮಗೆ ಹಾರ್ಧಿಕ ಅಭಿನಂದನೆಗಳು ಸರ್
ಸುಧಾ ಪಾಟೀಲ
ಬೆಳಗಾವಿ