ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ಯುದ್ದಕ್ಕಿದು ಸಮಯವಲ್ಲ !


ನಮ್ಮೊಳಗೀಗ ಯುದ್ದಮಾಡಲು
ಸಮಯವೇ ಉಳಿದಿಲ್ಲ
ಕಾಲವೇ ಸಂಧಾನದ ದಾರಿ ತೋರಿಸಿದೆ
ಅದೆಷ್ಟು ವರುಷ
ಆಯುಧಗಳು ಮಸೆದಾವು?
ಅವಕ್ಕೂ ವಯಸ್ಸಾದಂತಿದೆ
ಮಾತಿಗೊನ್ಮೆ ವ್ಯಂಗ್ಯ
ಈಟಿಯ ತಿವಿತ ಬರ್ತ್ಸನೆಗಳೆಲ್ಲ
ಮೌನದ ದಾರಿ ಅಪ್ಪಿವೆ.
ಇದು ಸಂಧಾನವೊ
ಹೊಸ ಯುದ್ದಕ್ಕೆ ತಯಾರಿಯೊ
ತಿಳಿಯದೆ ಒಮ್ಮೊಮ್ಮೆ
ಅಯೊಮಯಗೊಳ್ಳುತ್ತೇವೆ
ಉಳಿದ ಕಾಲವೆ
ಕಡಿಮೆಯಿರುವಾಗ
ಹೊಂದಾಣಿಕೆಯೆ
ಇರಬೇಕೆಂಬ ನಂಬಿಕೆಯೆ
ಬಲವಾಗಿ
ಹೊಸದೊಂದು ಆಸೆ
ಮಿನುಗುತ್ತದೆ
ಮತ್ತೆ ಅಲ್ಲೆಲ್ಲೊ ದುಂಬಿಗಳ ಗುಂಜಾರವ
ಅರಳಿನಿಂತ ಹೂವಿನ ಸುತ್ತಲೇ ಅಂತೆ
ಮರೆತ ಮಳೆರಾಯ
ಮತ್ತೆ ಹನಿದನಂತೆ
ಹೀಗೆ ತೇಲಿ ಬಂದ ಸುದ್ದಿಗಳ ಕೇಳಿದ ನಾವು
ಹೊಸ ದಿನಕ್ಕೆ ಸಜ್ಜಾಗಿ ಎದ್ದು
ಕುಳಿತುಕೊಳ್ಖುತ್ತೇವೆ
ಸೂರ್ಯ ಹಳೆದಿನದ ಬೇಸರವ ಮರೆತು
ಹೊಸದಿನವೆಂಬ ಸಂಗಾತಿಯೊಡನೆ
ಮಜಾಕು ಮಾಡುತ್ತಾನೆ
ವೈ.ಎಂ.ಯಾಕೊಳ್ಳಿ