ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಸಮಯೋಚಿತ.!

ಸಿಡಿತಲೆಗಳ ನಡುವಿಂದೊಮ್ಮೆ
ಜಾರಿಕೊಂಡರೆ ಸಾಕು ಆಚೆಗೆ
ತಪ್ಪೀತು ಧಗಧಗಿಸುವ ಬಗೆ
ನಿಂತೀತು ಹರಡುವ ಅಗ್ನಿಧಗೆ.!

ಉರಿವವರ ಉರಿಸುವವರ ಮಧ್ಯೆ
ಉರಿದು ಬಿಡುತ್ತೇವೆ ಅರಿವಿಲ್ಲದೆ
ಸುತ್ತಲ ಬೆಂಕಿ ಹತ್ತಿಸಿಕೊಂಡು
ಉರುವಲಾಗುತ್ತೇವೆ ಪರಿವಿಲ್ಲದೆ,!

ದಹನದೆದುರು ದೂರಸರಿಯದೆ
ದಹನಶೀಲವಾಗಿ ನಿಂತರೆ ವಿನಾಶ
ದಹಿಸಿಕೊಂಡರೊ ತೀರದು ರೋಶ
ಅಳಿಯುತ ಜಗವಳಿಸುವ ಆವೇಶ.!

ಮದ್ದುಗಳ ಜೊತೆ ಮದ್ದಾಗದೆ
ಬೆಂಕಿ ಪಸರಿಸದಿರುವುದೆ ಜಾಗೃತಿ
ಕಿಚ್ಚುಗಳ ಮಧ್ಯೆ ರೊಚ್ಚಿಗೇಳದೆ
ತಲೆಸಿಡಿಯದಂತೆ ಕಾವುದೇ ಸನ್ಮತಿ.!

ಇದ್ದರೆ ಅಲ್ಪ ಸ್ವಲ್ಪ ಸಮಾಧಾನ
ವಹಿಸಿದರೆ ಕೊಂಚ ವ್ಯವಧಾನ
ತಡೆಯಬಹುದು ಅಗ್ನಿ ಸಂವಹನ
ತಡೆಗಟ್ಟಿ ಸರಣಿ ಸಿಡಿತ ಸಂವರ್ತನ.!

ದಳ್ಳುರಿ ಸಮಯದಿ ಸಣ್ಣದೊಂದು
ಹಾರಿಕೆ ಜಾರಿಕೆ ನಡೆಸಾಕು ಗೆಳೆಯ
ಹರಡುತಿಹ ಕಾಳ್ಗಿಚ್ಚನೂ ತಡೆದು
ಉಳಿಸಬಹುದು ಸುತ್ತಲಿನ ಇಳೆಯ.!

ಕೆಲವು ಬಾಳಿನ ಸಮಸ್ಯೆಗಳೆ ಹೀಗೆ
ಆ ಜಾಗದಿ ಸರಿದರೇ ಸಾಕು ನಾವು
ಸಿಕ್ಕೀತು ಕ್ಷಿಪ್ರ ಪರಿಹಾರಗಳ ತಾವು
ತಪ್ಪಿಸುತ ಸಮಸ್ತ ನರಳಿಕೆ ನೋವು.!


Leave a Reply

Back To Top