ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ʼಬಾರೆ ಶ್ಯಾಮಲೆʼ

ಬಾರೆ ಶ್ಯಾಮಲೆ ಬಾರೆ ಕೋಮಲೆ
ಒಲವ ಕೊಳದಲಿ ಮೀಯುವ
ನನಗೆ ನೀನು ನಿನಗೆ ನಾನು
ಎಂದು ನಲಿದು ಹಾಡುವ
ಕಾಂತೆ ನೋಡೆ ಒಲವ ಕಮಲ
ಅರಳಿ ಗಂಧವ ಚೆಲ್ಲಿದೆ
ನಿನ್ನ ಕಾಂತಿಯ ತಾನು ಬಯಸಿ
ತಪವ ಗೈದು ನಿಂತಿದೆ
ಯಾವ ಜನ್ಮದ ಪುಣ್ಯ ನನ್ನದು
ನಿನ್ನ ಪ್ರೀತಿ ದಕ್ಕಿದೆ
ನೂರು ಜನ್ಮಕು ನಿನ್ನ ಹೆಸರಿಗೆ
ಹೃದಯ ಮೀಸಲು ಆಗಿದೆ
ನೋವು ನಲಿವು ಏನೆ ಬರಲಿ
ನಿನ್ನ ಸನಿಹ ಸ್ವರ್ಗವು
ನಾನು ನೀನು ಹಾಲು ಜೇನು
ಅರಿತು ಬೆರೆತ ಭಾವವು
ನಿನ್ನ ಕಣ್ಣ ರೆಪ್ಪೆ ನಾನು
ಕ್ಷಣವೂ ಇರುವೆ ಜೊತೆಯಲಿ
ಹೊಳೆವ ತಾರೆಯ ತಂಗಿ ನೀನು
ಸೋತೆ ನಾನು ಕ್ಷಣದಲಿ
ಇರಲಿ ಹೀಗೆ ಒಲವ ಬಂಧವು
ಬರುವ ನೂರು ಜನುಮಕೂ
ಪ್ರೇಮಸುಮದ ಗಂಧ ಚಲ್ಲಲಿ
ಬಾಳ ಹಾದಿಯ ಉದ್ದಕೂ
ಮಧುಮಾಲತಿ ರುದ್ರೇಶ್

ತುಂಬು ಧನ್ಯವಾದಗಳು ತಮಗೆ