ಕಾವ್ಯ ಸಂಗಾತಿ
ಡಾ.ಬಸಮ್ಮ. ಎಸ್. ಗಂಗನಳ್ಳಿ
ʼಗುಬ್ಬಿ ಹುಡುಕುವ ಗೂಡುʼ

ಅಲ್ಲಿ ಇಲ್ಲಿ ,ಅಲೆದು ಅಲೆದು
ಸುತ್ತಿ ಸುತ್ತಿ ಬಂದ ಗುಬ್ಬಿಯು
ಹಸಿರು ಮರವ ಕಂಡಿತು
ಕೈಯ ಮುಗಿದು ಬೇಡಿತು..
ಬಿಸಿಲ ಬೇಗೆ ತಾಳಲಾರೆ
ನೀಡು ನನಗೆ ನೀನು ಆಸರೆ
ಅನಿತು ಕಾಲದಲಿ ಮಳೆಯು
ಬರುವುದು ಎಲ್ಲಿ ನಿಲ್ಲಲಿ?..
ಕಣ್ಣು ತೆರೆಯದ ಮರಿಗಳು
ಹದ್ದು ಹಾವು ಬಂದರೆ
ನುಂಗಿ ತಿಂದು ಬಿಡುವವು
ಗೂಡಿಗೆಂದು ಬೇಡಿ ಬಂದೆನು..
ಸಣ್ಣ ಮುಖವು,ಕಣ್ಣ ನೀರು
ದೈನ್ಯ ಭಾವ ಗುಬ್ಬಿ ಕಂಡು
ಮರವು ಅತೀ ಪ್ರೀತಿಯಿಂದ
ತಬ್ಬಿಕೊಂಡು ಹೇಳಿತು..
ಎಷ್ಟು ಕಾಲವಾದರೂ ನೀನು
ಚಿಂತೆ ಮರೆತು ಸುಖವಾಗಿರು
ನಿನ್ನಿಷ್ಟದ ಮನೆಯನೊಂದು
ನನ್ನ ಕೊಂಬೆಗೆ ಕಟ್ಟಿಕೊಂಡಿರು..
ಎಂಥ! ದಯಾಮಯಿ ಮರವೇ
ಪ್ರಕೃತಿ ಮಾತೆ ವರವು ನೀನು
ನಿನ್ನ ಋಣ ಹೇಗೆ ತೀರಿಸಲಿ?
ದಿನನಿತ್ಯ ಹಾಡಿ ಹೊಗಳುವೆ..
ಮನುಜನಿಂದು ತಾನು ಕಟ್ಟಿದ
ಒಂದು ಇರುವೆಯೂ ಕೂಡ
ಹೋಗದಂತ ಮನೆಯು
ಗುಬ್ಬಿಗೂಡಿಗೆಲ್ಲಿ ಜಾಗವು?..
ಸ್ವಾರ್ಥ ಅತಿಯಾಸೆ ಇರದ
ಮರವ ಹುಡುಕಿ ಬಂದೆನು
ಸಕಲ ಜೀವಿ,ಬಳ್ಳಿಗೂ ಆಸರೆ
ಬೇಧ- ಭಾವ ಇರದ ಸಂತಸ..
ಬದುಕಿದರೆ ಮರದಂತೆ
ಬದುಕಬೇಕು, ಎಲ್ಲರನು
ಸಲಹುವ ಸಹನೆಯು
ಇದುವೇ ಸಾರ್ಥಕತೆ..
ಡಾ.ಬಸಮ್ಮ. ಎಸ್. ಗಂಗನಳ್ಳಿ
