ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್

ರೆಂಬೆ ಕೊಂಬೆಗಳಲಿ ಚಿಗುರಿ ಹಸಿರುಕ್ಕಿಸಿ ನಗುತಿದೆ ಯುಗಾದಿ
ಹೊಂಗೆ ಬೇವು ಮಾವಿನ ಹೂಗಳಲಿ ಘಮಘಮಿಸಿ ಬೀಗುತಿದೆ ಯುಗಾದಿ
ಹಳೆಯದೆಲ್ಲ ಕಳಚಿ ಹೊಸತನ ತುಂಬುತ ಬಂದನೇ ವಸಂತ
ಮರೆಸುತ ಕಹಿ ನೆನಪುಗಳ ಹೊಸ ಕನಸುಗಳ ತರುತಿದೆ ಯುಗಾದಿ
ಮುದಗೊಂಡಿವೆ ಹಕ್ಕಿಗಳು ಹಾರುತ ನೀಲ ನಭದ ಅಂಗಳದಿ
ಪಂಚಮದಿ ಕೋಗಿಲೆಯ ಕೊರಳ ದನಿಯಾಗಿ ಹಾಡುತಿದೆ ಯುಗಾದಿ
ಪಚ್ಚೆ ದುಕೂಲ ಹೊದ್ದಿಹಳು ವಸುಂಧರೆ ನಾಚುತ ಮದುವಣಗಿತ್ತಿಯಂತೆ
ಮರಿದುಂಬಿಗಳ ಝೇಂಕಾರದಲಿ ಮಧುರ ಗಾನವ ಗುನುಗುತಿದೆ ಯುಗಾದಿ
ತೊಳೆದು ಮನದ ದ್ವೇಷ ರಾಗವ ಸಾಗು ಮುಂದೆ ಬೇಗಂ
ನವ ಸಂವತ್ಸರದ ಹರುಷ ದುಂದುಭಿಯ ಮೊಳಗುತಿದೆ ಯುಗಾದಿ
ಹಮೀದಾ ಬೇಗಂ ದೇಸಾಯಿ

ಯುಗಾದಿ ರಸದೌತಣದ ಸುಂದರ ಗಜಲ್ ….