ಕಾವ್ಯ ಸಂಗಾತಿ
ಎಸ್ಕೆ ಕೊನೆಸಾಗರ ಹುನಗುಂದ
ಬಸವಣ್ಣ ಮತ್ತು ಬಾಪು ಮಾತುಕತೆ


ಶರಣು ಬಾಪೂಜಿ ಕ್ಷೇಮವೆ
ಸೌಖ್ಯವೆಂದು ತಿಳಿವೆ.
ನಾನು ನಡೆದ ಹಾದಿಯಲ್ಲಿ
ನೀನೂ ಸಾಗಿದೆಯಂತೆ
ಅದು ಸರಳವಿರಲಾರದು
ಅಲ್ಲವೆ; ಅದು ನನಗೆ ಗೊತ್ತು
ಇದೇನು ಬಸವಣ್ಣ
ಯಾವಾಗ ಬಂದಿರಿ?
ಕೈಲಾಸ ಹೇಗಿದೆ? ಸೌಖ್ಯವೆ
ನೀವು ಕೇಳಿದಿರಲ್ಲಾ ಹೂಂ
ನಿಮ್ಮ ಹಾದಿಯಲ್ಲಿ ನಡೆದೆ
ನಿಜ, ಫಲ ಶೂನ್ಯ
ಸಂಪ್ರದಾಯನಿಷ್ಠ ಜನರ
ಮಧ್ಯ ಕಲ್ಯಾಣದ ಕನಸು ಕಂಡೆ
ರಾಜರಾದಿಯಾಗಿ ಜನರೆಲ್ಲ
ತಿರುಗಿಬಿದ್ದರು, ಏನೆಲ್ಲಾ
ಕಾರಸ್ಥಾನ ಮಾಡಿ ಕೃಷ್ಣಾರ್ಪಣ
ಮಾಡಿದರು, ಕೊನೆ ತಂದರು
ಅಯ್ಯೋ, ಬಿಡಿ ಬಸವಣ್ಣ
ನೀವಾದರೂ ಕೃಷ್ಣೆ ಕೂಡಿದಿರಿ
ನಿಮ್ಮಷ್ಟು ತೀವ್ರ ಪರಿವರ್ತನೆ
ಹಾದಿ ಹಿಡಿಯದ ನನ್ನನ್ನು
ಕೋಮುಗಲಭೆಯ ನೆಪದಿ
ಗುಂಡಿಟ್ಟು ಕೊಂದು ಹಾಕಬೇಕೆ!
ಹೌದೌದು, ಸತ್ಯ, ಶಾಂತಿ
ಸಹಬಾಳ್ವೆ ಬೇಡದ ಈ ಲೋಕ
ಏಸುವಿನ ತೆರದಿ
ನದಿಗೆ ಹಾರಿಸುತ್ತಾರೆ, ಗುಂಡಿಟ್ಟು ಕೊಲ್ಲುತ್ತಾರೆ
ಇಲ್ಲಾ, ಮೊಳೆ ಹೊಡೆದು
ಸಿಲುಬೆಗೇರಿಸುತ್ತಾರೆ
ಬರುವೆ ಬಾಪು, ಹಾಂ ಬನ್ನಿ
ಮತ್ತೆ ಸಿಗೋಣ.
ಕಲ್ಯಾಣದ ಕನಸು ನನಸಾದ ದಿನ
ಆ ದಿನ ಮಾತಾಡೋಣ!
ಎಸ್ಕೆ ಕೊನೆಸಾಗರ ಹುನಗುಂದ

Excellent Poem Sir
ಭಾಳ ಛಂದ ಬಂದೈತಿ ಅಣ್ಣಾ