ʼನಡೆದಷ್ಟೂ ದಾರಿ : ಪಡೆದಷ್ಟೂ ಭಾಗ್ಯʼಜಯಲಕ್ಷ್ಮಿ ಕೆ. ಅವರ ಲೇಖನ

ಬೆಟ್ಟ -ಗುಡ್ಡಗಳಲ್ಲಿ ಅದೆಷ್ಟೋ ಗಿಡ -ಮರಗಳನ್ನು ನೋಡುತ್ತೇವೆ. ಒಂದರಂತೆ ಇನ್ನೊಂದಿರುವುದಿಲ್ಲ. ಕೆಲವು ಸದೃಢವಾದ ಬೇರುಗಳಿಂದ ನೆಲೆಯೂರಿ ಸಾಕಷ್ಟು ಕೊಂಬೆ ರೆಂಬೆಗಳನ್ನು ಚಾಚಿಕೊಂಡು ಸೊಂಪಾಗಿ ಬೆಳೆದಿದ್ದರೆ ಇನ್ನು ಕೆಲವು ಸಣಕಲು ಸಣಕಲಾಗಿ, ಎಲೆಗಳೂ ವಿರಳವಾಗಿ ಅರ್ಧ ಒಣಗಿದ ಸ್ಥಿತಿಯಲ್ಲಿರುತ್ತವೆ. ಅಲ್ಲಿರುವ ಎಲ್ಲಾ ಗಿಡ -ಮರಗಳಿಗೆ ದೊರೆಯುವ ಸೂರ್ಯನ ಶಾಖ, ಬೆಳಕು ಮಣ್ಣಿನ ಫಲವತ್ತತೆ ಒಂದೇ ತೆರನಾಗಿದ್ದರೂ ಅಲ್ಲಿನ ಗಿಡ -ಮರಗಳು ಏಕ ಪ್ರಕಾರವಾಗಿ ಬೆಳೆಯಲಾರವು. ಹಾಗೆಯೇ ಸಮಾನ ಸೌಲಭ್ಯಗಳನ್ನು ಹೊಂದಿದ, ಬೋಧನೆಯನ್ನು ಕೇಳಿದ ಎಲ್ಲಾ ಮಕ್ಕಳು ಸಮಾನ ಅಂಕಗಳನ್ನು ಗಳಿಸುವುದಾಗಲೀ, ಏಕ ರೀತಿಯಲ್ಲಿ ಜ್ಞಾನವನ್ನು ಹೊಂದುವುದಾಗಲೀ ಸಾಧ್ಯವಿಲ್ಲ. ಏಕೆಂದರೆ ಆಸಕ್ತಿ ಮತ್ತು ಬುದ್ಧಿಶಕ್ತಿ ಎಲ್ಲ ಮಕ್ಕಳಲ್ಲೂ ಏಕಪ್ರಕಾರವಾಗಿ ಇರುವುದಿಲ್ಲ.

ದೀಪು ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿ. ಯಾವಾಗಲೂ ತರಗತಿಯಲ್ಲಿ ಮಂಕಾಗಿಯೇ ಕುಳಿತುಕೊಂಡಿರುವ ಬಾಲಕ. ಪರೀಕ್ಷೆಗಳನ್ನು ನಡೆಸಿದರೆ ಐಚ್ಛಿಕ ವಿಷಯಗಳಷ್ಟೇ ಅಲ್ಲ, ಭಾಷಾ ವಿಷಯಗಳಲ್ಲೂ ಅನುತ್ತೀರ್ಣನಾಗುತ್ತಾನೆ. ಆತನಿಗೆ ಓದಿನಲ್ಲಿ ಆಸಕ್ತಿಯೇ ಇಲ್ಲ. ಆಟೋಟಗಳಲ್ಲಿಯೂ ಆತ ಭಾಗವಹಿಸುವುದಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳಂತೂ ಅವನಿಗೆ ಬೇಡವೇ ಬೇಡ… ಎಲ್ಲದರಲ್ಲೂ ನಿರಾಸಕ್ತಿ. ಚೊಕ್ಕವಾಗಿ ಸಮವಸ್ತ್ರ ಧರಿಸಿ ತಪ್ಪದೇ ಕಾಲೇಜಿಗೆ ಬರುತ್ತಾನೆ, ತರಗತಿಯಲ್ಲಿ ಕೂರುತ್ತಾನೆ. ಉತ್ಸಾಹ -ಲವಲವಿಕೆ ಎಲ್ಲವೂ ಶೂನ್ಯ.  ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದವರ ಪಟ್ಟಿಯಲ್ಲಿ ಇವನಿಗೆ ಅಗ್ರಸ್ಥಾನ! ಹತ್ತನೇ ತರಗತಿಯನ್ನು ಉನ್ನತ ಶ್ರೇಣಿಯೊಂದಿಗೆ ಪಾಸು ಮಾಡಿದ ಈ ವಿದ್ಯಾರ್ಥಿ ಕಾಲೇಜು ಮೆಟ್ಟಿಲೇರಿದ ಮೇಲೆ ಏಕೆ ಹೀಗಾದ? ಅವನ ಈ ಬದಲಾವಣೆಗೆ ಕಾರಣ ಅವನ ಅಪ್ಪ ಅಮ್ಮ. ವಿಜ್ಞಾನ ವಿಭಾಗದಲ್ಲಿಯೇ ಮಗ ಓದಬೇಕು ಎನ್ನುವ ಅವರ ಉತ್ಕಟವಾದ ಹಂಬಲ.. ತಮ್ಮ ಮನೆತನದವರೆಲ್ಲ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆಮಾಡಿಕೊಂಡ  ಹಾಗೆಯೇ ತಮ್ಮ ಮಗ ಕೂಡಾ ವೈದ್ಯನೇ ಆಗಬೇಕು ಎನ್ನುವ ಅವರ ಹಠ.. ಆ ಮಕ್ಕಳನ್ನು ಸೇರಿಸಿದಂತೆ ತಮ್ಮ ಮಗನನ್ನೂ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಟ್ಟರೆ ಸಾಕು ಇವನೂ ಸಾಧಿಸಿಯೇ ಬಿಡುತ್ತಾನೆ ಎನ್ನುವ ತರ್ಕಹೀನ ಚಿಂತನೆ… ಇವೆಲ್ಲವುಗಳ ಒಟ್ಟು ಪರಿಣಾಮವೇ ಮಂಕಾಗಿ ಹೋದ ದೀಪುವಿನ ಸ್ಥಿತಿ. ಹತ್ತನೇ ತರಗತಿಯ ವರೆಗೆ ಅವನಿಗೆ ಪಠ್ಯ ವಿಷಯಗಳ ಆಯ್ಕೆಗೆ ಅವಕಾಶ ಇರಲಿಲ್ಲ. ಅಲ್ಲಿ ಆತ ಎಲ್ಲ ಮಕ್ಕಳಂತೆ ಪಠ್ಯ -ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಅಲ್ಲಿ ಆತ ಗಳಿಸುತ್ತಿದ್ದ ಒಟ್ಟು ಅಂಕಗಳು ಉತ್ತಮವಾಗಿದ್ದರೂ ವಿಜ್ಞಾನ, ಗಣಿತ, ಇವೆರಡರಲ್ಲಿ ಅವನ ಸಾಧನೆ ಅಷ್ಟಕ್ಕಷ್ಟೇ. ಉಳಿದ ನಾಲ್ಕು ವಿಷಯಗಳನ್ನು ಸಂತೋಷವಾಗಿ ಕಲಿಯುತ್ತಿದ್ದನಾದ್ದರಿಂದ ಈ ಎರಡು ವಿಷಯಗಳು ಅವನನ್ನು ಅಷ್ಟಾಗಿ ಕಾಡುತ್ತಿರಲಿಲ್ಲ. ಈಗ ಹಾಗಲ್ಲ. ಅವನಿಗೆ ಕ್ಲಿಷ್ಟಕರವಾದ ಆ ಲೆಕ್ಕ -ವಿಜ್ಞಾನ ವಿಷಯಗಳನ್ನೇ ಆತ ಕಡ್ಡಾಯವಾಗಿ ಕಲಿಯಬೇಕು. ಅದಕ್ಕೇ ಆತನ ಕಲಿಕಾ ಉತ್ಸಾಹವೇ ಬತ್ತಿಹೋಗಿದೆ. ದಿನ ಬೆಳಗಾದರೆ ತನ್ನ ಬುದ್ಧಿಶಕ್ತಿಗೆ ನಿಲುಕದ ಪಾಠಗಳು, ಆಗಾಗ ನಡೆಸುತ್ತಿದ್ದ ಪರೀಕ್ಷೆಗಳು, ಗಳಿಸುತ್ತಿದ್ದ ಕಡಿಮೆ ಅಂಕಗಳು ಇವೆಲ್ಲವುಗಳಿಂದ ಆತನಿಗೆ ಶಿಕ್ಷಣದ ಬಗ್ಗೆಯೇ ಅನಾದರ ಮೂಡಿತ್ತು.

ಇತ್ತೀಚಿನ ದಿನಗಳಲ್ಲಿ ಯುವ ಜನಾಂಗದಲ್ಲಿ ಕಲಿಕಾ ಆಸಕ್ತಿ ಕುಗ್ಗಲು ಮೊಬೈಲ್ ಬಳಕೆಯೇ ಕಾರಣ ಎನ್ನುವ ಮಾತು ಧಾರಾಳವಾಗಿ ಕೇಳಿ ಬರುತ್ತಿದೆ. ಕೆಲವೊಂದು ಸಂದರ್ಭಗಳಲ್ಲಿ ಈ ಗ್ರಹಿಕೆ ತಪ್ಪು ಎನಿಸುತ್ತದೆ. ವಿದ್ಯಾಭ್ಯಾಸದಲ್ಲಿ ಒಂದು ಹಂತದ ಬಳಿಕ ಮಕ್ಕಳಿಗೆ ಅವರ ಇಚ್ಛಾನುಸಾರ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ. ಆದರೆ ಕೆಲವೊಂದು ಪೋಷಕರು ಅದಕ್ಕೆ ಆಸ್ಪದ ನೀಡದೆ ಮಕ್ಕಳ ಭವಿಷ್ಯದ ಗುರಿಯನ್ನು ತಾವೇ ನಿರ್ಧರಿಸಿ, ತಮ್ಮ ನಿರ್ಣಯದಂತೆ  ಅವರಿಗೆ ಸೂಕ್ತ ಎನಿಸಿದ ವಿಭಾಗಕ್ಕೆ ಮಕ್ಕಳನ್ನು ಒತ್ತಾಯವಾಗಿ ಸೇರಿಸುತ್ತಾರೆ. ಕಾಲೇಜಿ ಸೇರುವ ಸಂದರ್ಭ ವಿದ್ಯಾರ್ಥಿಗೆ ಸೂಕ್ತವೆನಿಸುವ ವಿಭಾಗ ಆಯ್ಕೆಗೆ ಅವಕಾಶವಿದ್ದರೂ, ಮಕ್ಕಳ ಬೌದ್ಧಿಕ ಮಟ್ಟ ಪರೀಕ್ಷಿಸಿದ ಉಪನ್ಯಾಸಕ ವೃಂದ ಈ ಬಗ್ಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರೂ ಅದನ್ನು ಸ್ವೀಕರಿಸಲು ಪೋಷಕರು ಸಿದ್ಧರಿರುವುದಿಲ್ಲ. ಇದರ ಪರಿಣಾಮ ಮಕ್ಕಳು ಒತ್ತಡದಲ್ಲಿಯೇ ಮನಸಿಲ್ಲದೆಯೇ ವಿದ್ಯಾಭ್ಯಾಸ ಮಾಡಬೇಕಾಗುತ್ತದೆ.

ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಉದ್ಯೋಗಾವಕಾಶಗಳು ಇರುತ್ತವೆ. ನಮ್ಮ ಮಕ್ಕಳು ಯಾವ ವಿಭಾಗದಲ್ಲಿ ಕಲಿಯುತ್ತಾರೆ ಎಂಬುದು ಮುಖ್ಯ ಅಲ್ಲ, ಆರಿಸಿಕೊಂಡ ವಿಷಯಗಳಲ್ಲಿ ಹೇಗೆ ಸಾಧನೆ ಮಾಡುತ್ತಾರೆ ಎಂಬುದೇ ಮುಖ್ಯ. ವಿಜ್ಞಾನವೋ, ವಾಣಿಜ್ಯವೋ, ಕಲಾ ವಿಭಾಗವೋ.. ಬೇರೊಂದೋ.. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದಲಿ. ವಿಜ್ಞಾನ ವಿಭಾಗದಲ್ಲಿ ಓದುವ ಮಕ್ಕಳಿಗೆ ವಿಶ್ಲೇಷಣಾತ್ಮಕ ಚಿಂತನೆ, ತರ್ಕಬದ್ಧವಾದ ಆಲೋಚನೆ ಮಾಡುವಂತಹ ಕಲೆ ಇರಬೇಕು. ಯಾವುದೇ ವಿಷಯದ ಕಲಿಕೆಗೂ ಪರಿಶ್ರಮ ಮುಖ್ಯ, ಆದರೆ ಮಕ್ಕಳ ಅಭಿರುಚಿ ಮತ್ತು ಬೌದ್ಧಿಕ ಮಟ್ಟವನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಹತ್ತನೇ ತರಗತಿಯ ಬಳಿಕ ಯಾವ ವಿಭಾಗ ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ತೀರ್ಮಾನ ಬಹಳ ಮುಖ್ಯ ಎನಿಸುತ್ತದೆ.

ಆ ಒಬ್ಬ ವಿದ್ಯಾರ್ಥಿನಿ ವಿಜ್ಞಾನ ವಿಭಾಗಕ್ಕೆ ದಾಖಲಾತಿ ಪಡೆದು ಪ್ರಥಮ ವರ್ಷದಲ್ಲೇ ಅನುತ್ತೀರ್ಣಳಾಗಿಬಿಟ್ಟಳು. ಮತ್ತೆ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡು ದ್ವಿತೀಯ ಪಿ ಯು ಸಿ ಯಲ್ಲಿ ಜಿಲ್ಲೆಗೇ ಮೊದಲ ಸ್ಥಾನ ಗಳಿಸಿದಳು! ಮೊದಲೇ ಆಕೆಯನ್ನು ಕಲಾ ವಿಭಾಗಕ್ಕೆ ಸೇರಿಸಿದ್ದಿದ್ದರೆ ಆ ಮಗುವಿನ ಮನಸಿಗೆ ಆಗಿದ್ದ ಕಿರಿಕಿರಿ ತಪ್ಪುತ್ತಿತ್ತಲ್ಲವೇ? ಇನ್ನೊಬ್ಬ ವಿದ್ಯಾರ್ಥಿ ಹತ್ತನೇ ತರಗತಿಯಲ್ಲಿ ವಿಜ್ಞಾನ ವಿಷಯದಲ್ಲಿ ಅನುತ್ತುರ್ಣನಾಗಿ  ಮರು ಪರೀಕ್ಷೆಯಲ್ಲಿ ಪಾಸಾದ. ಪಿ ಯು ಸಿ ಯಲ್ಲಿ ವಾಣಿಜ್ಯ ವಿಭಾಗದಲ್ಲಿ ತರಗತಿಗೇ ಮೊದಲಿಗನಾಗಿ ಹೊರ ಹೊಮ್ಮಿದ.ಈ ಎಲ್ಲ ನಿದರ್ಶನ ಗಳು  ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆ ಮಾಡಬಲ್ಲರು ಎನ್ನುವುದಕ್ಕೆ ಸಾಕ್ಷಿ, ಅಷ್ಟೇ.ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದೆವು…. ತುಂಬಾ ಹಣ ಖರ್ಚು ಮಾಡಿದೆವು… ಟ್ಯೂಷನ್ ಕೊಡಿಸಿದೆವು.. ಆದರೂ ಮಕ್ಕಳು ತಮ್ಮ ನಿರೀಕ್ಷೆಯ ಮಟ್ಟ ತಲುಪಲಿಲ್ಲ ಎಂದು ಕೊರಗುವ ಬದಲಾಗಿ ಅವರ ಬೌದ್ಧಿಕ ಮಟ್ಟವನ್ನು ನೋಡಿಕೊಂಡು ಅವರ ಆಯ್ಕೆಗೂ ಒಂದಿಷ್ಟು ಮನ್ನಣೆ ನೀಡಿದಾಗ ಅವರಿಗೆ ಕಲಿಕೆಯಲ್ಲಿ ಮುಂದೆ ಸಾಗಲು ಅನುವು ಮಾಡಿದಂತಾಗುತ್ತದೆ. ಆದ್ದರಿಂದ ಹತ್ತನೇ ತರಗತಿಯ ನಂತರದ ಶಿಕ್ಷಣದ ಆಯ್ಕೆ ಪೋಷಕರ ಪ್ರತಿಷ್ಠೆಯ ಪ್ರಶ್ನೆಯಾಗಿರದೆ ಮಕ್ಕಳ ಪ್ರಗತಿಗೆ ಪೂರಕವಾಗಿರಲಿ. ಯಾವ ವಿಭಾಗವೂ ಮೇಲಲ್ಲ, ಯಾವ ವಿಭಾಗವೂ ಕೀಳಲ್ಲ, ಕಲಿಕೆಯ ಆಸಕ್ತಿಯೇ ಮೇಲು, ಅದೇ ಮೊದಲು. ಯಾವ ವಿಷಯ ಓದಿದರೂ ಜ್ಞಾನದ ಗಳಿಕೆಯೇ ಶಿಕ್ಷಣದ ಮುಖ್ಯ ಉದ್ದೇಶ. ಅದೇ ನಮ್ಮೆಲ್ಲರ ಗುರಿಯಾಗಿರಲಿ. ಯಾವ ವಿಭಾಗದಲ್ಲಿ ಓದಿದರೂ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ನಡೆದಷ್ಟೂ ದಾರಿಯಿದೆ… ಪಡೆದಷ್ಟೂ ಭಾಗ್ಯವಿದೆ.


Leave a Reply

Back To Top