ಕಾವ್ಯ ಸಂಗಾತಿ
ವರದೇಂದ್ರ ಕೆ ಮಸ್ಕಿ
ʼಪ್ರೇಮ ಪಂಚಾಮೃತʼ

ಆಡಿದ ಮಾತು, ನೀಡಿದ ಭಾಷೆ,
ಬೆರೆತ ಮನಗಳ ಮರೆತು
ಪರಕಾಯದಿ ಪರಾಗ ಮಾಡಲ್ಹೊರಟ ಹೂವೇ
ಅನ್ಯ ಮಾರ್ಗ ಅನಿವಾರ್ಯವಿರಲಿಲ್ಲ
ಹಸಿಯಾಗಿಯೇ ಇತ್ತು ಹೃದಯ
ಹಸಿರಿಗೆ ಕಾಯದೆ, ಹುಸಿ ನೆಪ ಹೂಡಿ
ಹೊಸದಕ್ಕೆ ಹಸೆ ಹಾಕಿ ಆಮಂತ್ರಿಸಿದ ಚೆಲುವೆ
ನಿನ್ನದು, ಇದು ನಿಜ ಒಲವಲ್ಲ
ಪ್ರೇಮಕ್ಕೆ ಪರ ಅರ್ಥವಿಲ್ಲ
ಕೊಟ್ಟಿದ್ದೆಲ್ಲವೂ ಅನ್ವರ್ಥವೇ
ಅಗಣಿತ ಭಾವದ ಹೃದಯಕಿಲ್ಲ ಮರೆವು
ತೆರವುಗಳಿಸಲು ಇದು ಪ್ರಯಾಣದ ಸರಕಲ್ಲ
ಮುದ್ದು, ಬಂಗಾರ, ಚಿನ್ನ ರೂಢಿಯಲ್ಲ
ಗುಂಪಾದ ಒಲವಿನ ರಾಶಿ, ಭಿನ್ನ ಬೇಡ
ಕಾಳಜಿ ತುಸು ಗರಿಷ್ಠವಾಯಿತು, ಆದೀತು
ನೀ ಕಳೆದುಕೊಂಡಾದ್ದಾರೂ ಏನು?
ಈ ಹುಂಬ ಬಿಗುಮಾನದ ಮೌನ ತರವಲ್ಲ
ತಂದುಕೊಳ್ಳುವುದಲ್ಲ ಪ್ರೇಮ
ಮೂಡುವುದು, ಎಲ್ಲರಲ್ಲಲ್ಲ
ಜಾರಿಸಿಕೊಂಡರೆ ಮುತ್ತು ನಿನ್ನ ಪಾಲಿಗಿಲ್ಲ
ಸ್ಥಾಪಿಸಿಕೊಂಡರೆ ಧನ್ಯ ನಾ,
ಈ ಹೊತ್ತು ನೋವಿಲ್ಲ, ಪ್ರಯತ್ನಿಸಿ ನೋಡು
ಪ್ರೇಮ ಪಂಚಾಮೃತ ಸವಿಯಲು
ಪಂಚನಾಮೆ ಬೇಕಿಲ್ಲ
ವರದೇಂದ್ರ ಕೆ ಮಸ್ಕಿ

Nice sir